Tag: ಹಲ್ಲೆ

  • 120 ರೂ. ಸಲುವಾಗಿ ಸ್ನೇಹಿತನನ್ನೇ ಥಳಿಸಿ ಕೊಂದ

    120 ರೂ. ಸಲುವಾಗಿ ಸ್ನೇಹಿತನನ್ನೇ ಥಳಿಸಿ ಕೊಂದ

    ಲಕ್ನೋ: 120 ರೂ. ಸಲುವಾಗಿ ನಡೆದ ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಸ್ನೇಹಿತ 120 ರೂ. ಮರಳಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

    ಸ್ನೇಹಿತ 120 ರೂ.ಗಳನ್ನು ಮರಳಿ ನೀಡಿಲ್ಲ ಎಂದು ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ತನ್ನ ಸ್ನೇಹಿತನಿಗೇ ವ್ಯಕ್ತಿ ಮನಬಂದಂತೆ ಥಳಿಸಿದ್ದು, ಸಾವನ್ನಪ್ಪಿದ್ದಾನೆ. ಮೃತನನ್ನು ರಾಮು ಎಂದು ಗುರುತಿಸಲಾಗಿದೆ. ಆರೋಪಿ ಬಿರ್ಜು ಕುಮಾರ್‍ನನ್ನು ಬಂಧಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರಾಮು ಅವರ ಮಗ ದಿಲೀಪ್ ಈ ಕುರಿತು ಪ್ರತಿಕ್ರಿಯಿಸಿದ್ದು, ಬಿರ್ಜು ಕುಮಾರ್ ರಾಮು ಅವರಿಂದ ಸಾಲ ಪಡೆದಿದ್ದ. ನಂತರ ಹಣ ಮರಳಿ ನೀಡುವಂತೆ ರಾಮು ಕೇಳಿದಾಗ ಬಿರ್ಜು ನಿಂದಿಸಲು ಪ್ರಾರಂಭಿಸಿದನು. ಇದಕ್ಕೆ ರಾಮು ಆಕ್ಷೇಪ ವ್ಯಕ್ತಪಡಿಸಿದಾಗ ಬಿರ್ಜು ಕುಮಾರ್ ರಾಮು ಅವರನ್ನು ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ ಎಂದು ಆರೋಪಿಸಿದ್ದಾರೆ.

    ರಾಮು ತಲೆಗೆ ಗಂಭೀರ ಗಾಯಗಳಾಗಿದ್ದು, ಅವರ ಮಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಚಿಕಿತ್ಸೆ ಫಲಕಾರಿಯಾಗದೇ ರಾಮು ಸಾವನ್ನಪ್ಪಿದ್ದಾರೆ. ದಿಲೀಪ್ ನೀಡಿದ ಹೇಳಿಕೆಯನ್ನಾಧರಿಸಿ ಪೊಲೀಸರು ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಕುರಿತು ಇನ್ಸ್‍ಪೆಕ್ಟರ್ ಅಜಯ್ ಮಿಶ್ರಾ ಮಾತನಾಡಿ, ಆರೋಪಿಯನ್ನು ಬಂಧಿಸಲಾಗಿದ್ದು, ಲಖಿಂಪುರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಎಸ್‍ಡಿಎಂ(ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್) ಸುನಂದು ಸುಧಾಕರನ್ ಈ ಕುರಿತು ಮಹಿತಿ ನೀಡಿ, ಈ ಪ್ರದೇಶದ ಬಹುತೇಕರು ಬಡತನ ರೇಖೆಗಿಂತ ಕೆಳಗಿರುವವರು ಎಂದು ನಾನು ಗಮನಿಸಿದ್ದೇನೆ. ಹೀಗಾಗಿ ಸರ್ಕಾರಿ ಯೋಜನೆಗಳು ಅಗತ್ಯವಿರುವ ಜನರನ್ನು ತಲುಪುತ್ತಿವೆಯೇ ಎಂಬುದನ್ನು ಗುರುತಿಸಲು ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದ್ದೇನೆ. ಗ್ರಾಮ ಸಮಾಜದ ಭೂಮಿ ಸ್ಕ್ವಾಟರ್ ಗಳಿಂದ ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಭಿಯಾನ ನಡೆಸುತ್ತೇವೆ. ಕೃಷಿ ಭೂಮಿ ಇಲ್ಲದ ರೈತರಿಗೆ ಈ ಭೂಮಿಯನ್ನು ನೀಡಿ ಕೆಲಸದಲ್ಲಿ ತೊಡಗುವಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

  • 60 ಸಾವಿರ ರೂ. ಮಾಮೂಲಿ ಕೊಡಲು ತಡವಾಗಿದ್ದಕ್ಕೆ ಪೊಲೀಸರಿಂದ ಹಲ್ಲೆ

    60 ಸಾವಿರ ರೂ. ಮಾಮೂಲಿ ಕೊಡಲು ತಡವಾಗಿದ್ದಕ್ಕೆ ಪೊಲೀಸರಿಂದ ಹಲ್ಲೆ

    ರಾಯಚೂರು: ಜಿಲ್ಲೆಯಲ್ಲಿ ಒಂದೆಡೆ ಅಕ್ರಮ ಮರಳುಗಾರಿಕೆ ಜೋರಾಗಿದ್ದರೆ, ಇನ್ನೊಂದೆಡೆ ಮರಳುಗಾರಿಕೆ ನಡೆಸುವವರಿಂದ ಪೊಲೀಸರ ಮಾಮೂಲಿ ವಸೂಲಿ ದಂಧೆ ಮಿತಿ ಮೀರಿದೆ. ಮಾಮೂಲಿ ಕೊಡಲು ತಡವಾಗಿದ್ದಕ್ಕೆ ರಾಯಚೂರಿನ ಯರಗೇರಾ ಠಾಣಾ ಪೊಲೀಸರು ಟ್ರ್ಯಾಕ್ಟರ್ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ.

    ಪೊಲೀಸ್ ಪೇದೆಗಳಿಂದ ಹಿಡಿದು ಪಿಎಸ್‍ಐ, ಸಿಪಿಐವರೆಗೆ ದುಡ್ಡು ಹಂಚಿಕೊಳ್ಳಲು ವಾರ, ತಿಂಗಳಿಗೆ ಇಷ್ಟು ಎಂದು ಫಿಕ್ಸ್ ಮಾಡಿ ಮಾಮೂಲಿಯನ್ನು ಪೀಕುತ್ತಿದ್ದಾರೆ. ಮರಳು ಸಾಗಿಸುತ್ತಿದ್ದ ಬಾಯಿದೊಡ್ಡಿ ಗ್ರಾಮದ ಭೀಮಾಶಂಕರ ಎಂಬಾತನಿಗೆ 60 ಸಾವಿರ ರೂಪಾಯಿ ಮಾಮೂಲಿ ನೀಡುವಂತೆ ಪೊಲೀಸರು ಕಿರುಕುಳ ನೀಡಿದ್ದಾರೆ. ಆದರೆ ಟ್ರ್ಯಾಕ್ಟರ್ ಮಾಲೀಕ ಇದಕ್ಕೆ ಒಪ್ಪಲಿಲ್ಲ. ಬಳಿಕ ಪೊಲೀಸರು 20 ಅಥವಾ 25 ಸಾವಿರ ರೂ. ಹಣ ನೀಡುವಂತೆ ಕೇಳಿದ್ದಾರೆ. ಭೀಮಾಶಂಕರ್ ಹಣ ನೀಡಲು ತಡ ಮಾಡಿದ್ದಕ್ಕೆ ಪೊಲೀಸರು ಆತನ ಮೇಲೆ ಹಲ್ಲೆ ಮಾಡಿದ್ದಾರೆ.

    ಹಲ್ಲೆಯಿಂದ ಗಾಯಗೊಂಡ ಭೀಮಾಶಂಕರ್ ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಯರಗೇರಾ ಠಾಣೆ ಪೊಲೀಸ್ ಪೇದೆಗಳಾದ ಹನುಮಂತರಾಯ್, ಸಂತೋಷ್ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಪೇದೆ ಹನುಮಂತರಾಯ ಭೀಮಾಶಂಕರ್ ಗೆ ಹಣ ಕೊಡುವಂತೆ ಪದೇ ಪದೇ ಕಿರುಕುಳ ನೀಡಿದ್ದು ಮೊಬೈಲ್ ಆಡಿಯೋದಿಂದ ಬಹಿರಂಗಗೊಂಡಿದೆ.

    ಹಣ ಕೊಡದಿದ್ದರೆ ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ಹೆದರಿಸಿ, ಹಣ ಪೀಕಲು ಮುಂದಾಗಿದ್ದರು, ಹಣ ನೀಡದಿದ್ದಾಗ ಹಲ್ಲೆ ಮಾಡಿದ್ದಾರೆ ಎಂದು ಭೀಮಾಶಂಕರ್ ಆರೋಪ ಮಾಡಿದ್ದಾನೆ.

  • ಲಿವಿಂಗ್ ರಿಲೇಷನ್‍ಶಿಪ್ ಇಟ್ಕೊಂಡು ಕೈಕೊಟ್ಟ – ತಂಗಿಗೆ ಮೋಸ ಮಾಡಿದವನ ಕಾಲು ಮುರಿದ ಅಣ್ಣಂದಿರು

    ಲಿವಿಂಗ್ ರಿಲೇಷನ್‍ಶಿಪ್ ಇಟ್ಕೊಂಡು ಕೈಕೊಟ್ಟ – ತಂಗಿಗೆ ಮೋಸ ಮಾಡಿದವನ ಕಾಲು ಮುರಿದ ಅಣ್ಣಂದಿರು

    ಬೆಂಗಳೂರು: ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದು ತನ್ನ ತಂಗಿಗೆ ಮೋಸ ಮಾಡಿದ್ದಕ್ಕೆ ಸಹೋದರರು ಸೇರಿ ಯುವಕನ ಕಾಲು ಮುರಿದ ಘಟನೆ ಬೆಂಗಳೂರಿನ ಜೆಜೆಆರ್ ನಗರದಲ್ಲಿ ನಡೆದಿದೆ.

    ರಿಜ್ವಾನ್ ಷರೀಫ್(24) ಎರಡೂ ಕಾಲು ಕಳೆದುಕೊಂಡ ಯುವಕ. ರಿಜ್ವಾನ್ ಷರೀಫ್ ಯುವತಿಯೊಬ್ಬಳ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದನು. 15 ದಿನದ ನಂತರ ಯುವತಿ ಜೊತೆ ವಾಪಸ್ ಬಂದು ಈಕೆಯನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದನು.

    ಇದರಿಂದ ಸಿಟ್ಟಿಗೆದ್ದ ಯುವತಿ ಮೋಸ ಮಾಡಿದ ಯುವಕನ ಮೇಲೆ ರೇಪ್ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಳು. ಈ ನಡುವೆ ಯುವತಿಯ ಮನೆಯವರು ಆಕೆಗೆ ಮತ್ತೊಂದು ಮದುವೆ ಮಾಡಿಸಿದ್ದಾರೆ. ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ ರಿಜ್ವಾನ್‍ನನ್ನು ಕರೆದು ಯುವತಿಯ ಸಹೋದರರು ಹಲ್ಲೆ ಮಾಡಿದ್ದಾರೆ.

    ಯುವತಿಯ ಅಣ್ಣಂದಿರು ರಿಜ್ವಾನ್‍ಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಕಾಲು ಮುರಿದಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ರಿಜ್ವಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಜೆಜೆಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆನ್‍ಲೈನ್‍ನಲ್ಲಿ ಹುಡ್ಗೀರನ್ನ ತೋರ್ಸಿ ಸೆಕ್ಸ್ ಬ್ಯುಸಿನೆಸ್

    ಆನ್‍ಲೈನ್‍ನಲ್ಲಿ ಹುಡ್ಗೀರನ್ನ ತೋರ್ಸಿ ಸೆಕ್ಸ್ ಬ್ಯುಸಿನೆಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆನ್‍ಲೈನ್‍ನಲ್ಲಿ ಹುಡುಗಿರನ್ನು ತೋರಿಸಿ ಸೆಕ್ಸ್ ಬ್ಯುಸಿನೆಸ್ ರಾಜರೋಷವಾಗಿ ನಡೆಯುತ್ತಿದೆ. ಈ ಸೆಕ್ಸ್ ದಂಧೆಯ ಕರಾಳ ಮುಖವನ್ನ ರಹಸ್ಯ ಕಾರ್ಯಾಚರಣೆಯಲ್ಲಿ ಪಬ್ಲಿಕ್ ಟಿವಿ ಬಯಲು ಮಾಡಿದೆ.

    ಡೇಟಿಂಗ್, ಚಾಟಿಂಗ್ ಅಂತ ಕಳೆದು ಹೋಗುತ್ತಿರುವ ಹುಡುಗರು ಈಗ ನಿಧಾನವಾಗಿ ಈ ಸೆಕ್ಸ್ ಬ್ಯುಸಿನೆಸ್‍ನ ಖೆಡ್ಡಾದಲ್ಲಿ ಬೀಳುತ್ತಿದ್ದಾರೆ. ಕೆಲವರು ಮಸಾಜ್‍ಗೆ ಅಂತ ಹೋಗಿ ಗೊತ್ತೇ ಆಗದಂತೆ ಈ ಕತ್ತಲೆಯ ಕೂಪದೊಳಗೆ ಬಿದ್ದು ಬಿಡುತ್ತಾರೆ. ಇನ್ನೊಂದು ದುರಂತ ಅಂದರೆ ಖಾಕಿಗಳ ಶ್ರೀರಕ್ಷೆಯಿಂದಲೇ ಬೆಂಗಳೂರಿನಲ್ಲಿ ಸೆಕ್ಸ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

    ಆನ್‍ಲೈನ್ ಮೂಲಕ ರಾಜಧಾನಿಯಲ್ಲಿ ಸೆಕ್ಸ್ ದಂಧೆ ತೆರೆದುಕೊಂಡಿದ್ದು, ಸೆಕ್ಸ್‌ಗೆ ಅಂತಾನೆ ಹಲವಾರು ವೆಬ್‍ಸೈಟ್‍ಗಳಿವೆ. ಅದರಲ್ಲಿ ಲೊಕ್ಯಾಂಟೋ ಆಪನ್ನ ಚೂಸ್ ಮಾಡಿಕೊಂಡು ನಿಮ್ಮ ಪಬ್ಲಿಕ್ ಟಿವಿ ತಂಡ ಪ್ರಾಣದ ಹಂಗು ತೊರೆದು ರಹಸ್ಯ ಕಾರ್ಯಾಚರಣೆಗೆ ಇಳಿದಿತ್ತು.

    ಲೊಕ್ಯಾಂಟೋ ಎಂಬ ಆನ್‍ಲೈನ್ ವೆಬ್‍ಸೈಟ್ ಮೂಲಕ ರಾಜಧಾನಿಯಲ್ಲಿ ರಾಜಾರೋಷವಾಗಿ ಸೆಕ್ಸ್ ದಂಧೆ ನಡೆಯುತ್ತಿದೆ. ಈ ದಂಧೆಯನ್ನ ಡೆಡ್ಲಿ ತಂಡವೊಂದು ಆಪರೇಟ್ ಮಾಡುತ್ತದೆ. ಸೆಕ್ಸ್ ಆಸೆ ತೋರಿಸಿ, ಕೈಯಲ್ಲಿರುವ ಸಾವಿರಾರು ರೂಪಾಯಿ ಹಣವನ್ನ ವಸೂಲಿ ಮಾಡುತ್ತದೆ. ಒಂದು ವೇಳೆ ಕೇಳಿದಷ್ಟು ಹಣ ನೀಡಿಲ್ಲ ಅಂದರೆ ರೂಮಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಕುತ್ತಿಗೆ ಮೇಲೆ ಚಾಕು ಇಟ್ಟು, ಹಣವನ್ನು ಪೀಕುತ್ತಿದೆ.

    ಪಬ್ಲಿಕ್ ಟಿವಿ ತಂಡ ಮೊದಲಿಗೆ ಲೋಕ್ಯಂಟೋ ಆಪ್‍ನಲ್ಲಿ ಹುಡುಗಿಗೆ ಕಾಲ್ ಮಾಡಿತ್ತು. ಆಗ ಕಾಲೇಜ್ ಹುಡುಗಿಯರು ಬನ್ನಿ ಏನು ತೊಂದರೆ ಇಲ್ಲ ಎಂದು ಬಾಣಸವಾಡಿಗೆ ಕರೆಸಿಕೊಂಡಿದ್ದಾರೆ. ಬಾಣಸವಾಡಿಗೆ ತೆರಳಿದ ತಂಡಕ್ಕೆ ಅಪರಿಚಿತ ನಂಬರ್ ಕಾಲ್‍ನಲ್ಲೇ ಲೆಫ್ಟು ರೈಟು ಅಂತೆಲ್ಲಾ ಅಡ್ರೆಸ್ ಹೇಳಿ ಪಿಂಪ್ ಒಬ್ಬ ಕರೆಸಿಕೊಂಡನು.

    ಆನ್‍ಲೈನ್ ಸೆಕ್ಸ್‌ದಂಧೆ
    ಮಧ್ಯವರ್ತಿ : ಫೋನ್ ಪೇ ಮಾಡಣ್ಣ
    ಪ್ರತಿನಿಧಿ : ಫೋನ್ ಪೇ ನಾನು ಲಿಂಕ್ ಮಾಡಿಲ್ಲ
    ಮಧ್ಯವರ್ತಿ : ಈಗ ತಾನೇ ಅಂದೆ ಅಲ್ಲಣ್ಣ. ನಾನು ಹೇಳೋದು ಕೇಳ್ಕೋ. ಈಗ ನಾಟಕ ಆಡ್ತಿದ್ದೀಯಾ? ಗಾಡಿ ಹತ್ರ ಹೋಗಬೇಕು ಅಂತ
    ಮಧ್ಯವರ್ತಿ : ಮೊದ್ಲು ಫೋನ್ ಪೇ ಓಪನ್ ಮಾಡು
    ಪ್ರತಿನಿಧಿ : ಮಾಡ್ತೀನಿ ಇರಿ
    ಮಧ್ಯವರ್ತಿ : ಜಾಸ್ತಿ ಮಾತಾಬೇಡ. ಮೊದ್ಲು ಫೋನ್ ಆಫ್ ಮಾಡು
    ಪ್ರತಿನಿಧಿ : ಮಾಡ್ತೀನಿ.. ಮಾಡ್ತೀನಿ
    ಮಧ್ಯವರ್ತಿ : ಮೊದ್ಲು ಆನ್ ಮಾಡಲೇ.. ಕುತ್ಕೊಳಲೇ..
    ಪ್ರತಿನಿಧಿ : ಅಲ್ಲ.. ಫೋನ್
    ಇನ್ನೊಬ್ಬ ಮಧ್ಯವರ್ತಿ : ಒಳ್ಳೆ ರೀತಿ ಹೇಳಿದ್ರೆ ಅರ್ಥ ಆಗ್ತಿಲ್ವಾ?
    ಪ್ರತಿನಿಧಿ : ಹೇಳೋದು ಕೇಳಿ
    ಮಧ್ಯವರ್ತಿ : ಆನ್ ಮಾಡು. ಸುಮ್ನೆ ಆನ್ ಮಾಡು. ತಲೆ ತಿನ್ಬೇಡ ನಂಗೆ. ಹುಡ್ಗಿರ ತೋರಿಸ್ದೆ.. ರೂಮ್‍ನ ತೋರಿಸ್ದೆ. ಹ್ಞಾ.. ಮಾಡು..
    ಪ್ರತಿನಿಧಿ : ತೋರಿಸಿದ್ದೀರಿ ಇಲ್ಲ ಅಂದಿಲ್ಲ
    ಮಧ್ಯವರ್ತಿ : ಹೇ… ತಡಿ ಭಾಯ್. ಜಾಸ್ತಿ ಬೇಡ. ಫೋನ್ ಪೇ ಮಾಡು ಗುರು
    ಪ್ರತಿನಿಧಿ : ನಂಬರ್ ಹೇಳಿ.
    ಮಧ್ಯವರ್ತಿ : ಆನ್ ಮಾಡು. 84948 28*** ಬಂದಿರೋದು ಉಂಟು ಮಾಡೋಕೆ ಏನು ಪ್ರಾಬ್ಲಂ.
    ಪ್ರತಿನಿಧಿ : ಎಷ್ಟು 2ಕೆ ನಾ. ಕುತ್ಕೋ ಅಣ್ಣ.. ಮಾಡ್ತೀನಿ.
    ಮಧ್ಯವರ್ತಿ : ಪೊಲೀಸ್ ಟ್ರೈನಿಂಗ್ ಮಾಡವ್ನೇ ಅವನು ಅಂತ
    ಇನ್ನೊಬ್ಬ ಮಧ್ಯವರ್ತಿ : ಫೇಲ್‍ಡ್ ಆಗ್ತಿದೆ ಲೇ..
    ಮಧ್ಯವರ್ತಿ : ಪೇಲ್‍ಡ್ ಆದ್ರೆ ಅವನ್ನ ಬಿಡೋರು ಯಾರು. ನಾಟಕ ಆಡಿದ್ರೆ ಬಿಡವ್ರು ಯಾರು..? ಬಂದವ್ನೇ ಮಾಡಿಕೊಂಡು ಹೋಗ್ಬೇಕು ಅಷ್ಟೇ. ಮಾಡಿಕೊಂಡು ಹೋದ್ರೆನೆ ನಾ ನಿನ್ನ ಬಿಡೋದು
    ಪ್ರತಿನಿಧಿ : ಫೇಲಾಗ್ತಿದೆ ಟ್ರಾನ್ಸಾಕ್ಷನ್..
    ಮಧ್ಯವರ್ತಿ : ಫೇಲ್ ಆದ್ರೆ ಮೊಬೈಲ್ ಕೊಡು. 2 ಸಾವಿರ ಕೊಡ್ತೀನಿ. ಮಾಡಿಕೊಂಡು ಹೋಗು


    ಮಧ್ಯವರ್ತಿ : ಕಾರ್ಡ್ ಇದ್ರೆ, ಕಾರ್ಡಲ್ಲಿ ಮಾಡು ಸುಮ್ನೆ
    ಪ್ರತಿನಿಧಿ : ಪರ್ಸ್ ತಂದಿಲ್ಲ
    ಮಧ್ಯವರ್ತಿ : ಏಟು ತಿಂತೀ ಫೋನ್ ಕಿತ್ಕೊಂಡ್ ಕಳಿಸ್ತೀನಿ
    ಮಧ್ಯವರ್ತಿ : ಸಾರ್… ಬಂದಿದಿರಲ್ಲ ನೀವು. ಪೇಮೆಂಟ್ ಕೊಡಿ.. ಮಾಡಿ..
    ಪ್ರತಿನಿಧಿ : ಟ್ರಾನ್ಸಾಕ್ಷನ್ ಆಗ್ತಿಲ್ಲ ಅಷ್ಟೇ..
    ಮಧ್ಯವರ್ತಿ : ಹುಡ್ಗಿ ಏನು ಶೋಕೇಸಾ ನೋಡ್ಕೊಂಡ್ ಹೋಗೋಕೆ. ಪೇಮೆಂಟ್ ಮಾಡಿ. ಸುಮ್ನೆ ಯಾಕೆ ಒದೆ ತಿಂತೀರಾ..? ಅವ್ರಿಗೂ ಮೇಲಿಂದ ಪ್ರೆಷರ್ ಮಾಡ್ತಾರೆ

    ಪ್ರತಿನಿಧಿ : ಟ್ರಾನ್ಸಾಕ್ಷನ್ ಆಗ್ತಿಲ್ಲ
    ಮಧ್ಯವರ್ತಿ : ಓಕೆ ಫ್ರೆಂಡ್ ಹತ್ರ ಹಾಕ್ಸಿ. ನೋ ಪ್ರಾಬ್ಲಂ
    ಮಧ್ಯವರ್ತಿ : ಈಗ ನಾಟಕ ಆಡ್ತವ್ನೆ. ಹೊಡುಸ್ಕೊಂಡು ಬಿಡ್ತಿಯಾ ನೋಡು. ನಿನ್ನಂತವ್ರನ್ನ ಎಷ್ಟು ಜನ್ರನ್ನ ನೋಡಿಲ್ಲ ನಾನು
    ಮಧ್ಯವರ್ತಿ : ದಿನಕ್ಕೆ ಐವತ್ತು ಜನ್ರನ್ನ ನೋಡ್ತಾರೆ. ಎಂತೆಥವರನ್ನ ನೋಡ್ತೇವೆ.
    ಪ್ರತಿನಿಧಿ : ಹಂಗಂತಲ್ಲ
    ಮಧ್ಯವರ್ತಿ : ಹೇ, ಸುಮ್ನೆ ಮಾಡು.. ಓದೆ ತಿನ್ಬೇಡ.
    ಮಧ್ಯವರ್ತಿ : ನೋಡ್ತೀನಿ.. 5 ನಿಮಿಷ ನಿನಗೆ ಟೈಮ್ ಕೊಡ್ತೀನಿ.. ಫೋನ್ ಕಿತ್ಕೊಳ್ತೇನೆ. ಏಟ್ ಹೊಡೀತೀನಿ.
    ಪ್ರತಿನಿಧಿ : ನೀವು ವಾರ್ನ್ ಮಾಡೋದು ಸರಿ ಅನ್ಸಲ್ಲ
    ಮಧ್ಯವರ್ತಿ : ವಾರ್ನ್ ಅಲ್ಲ. ನಿನ್ನ ಕರ್ಕೊಂಡು ಬಂದು ಎಷ್ಟು ಹೊತ್ತಾಯ್ತು

    ಹೀಗೆ ಜೇಬಿನಲ್ಲಿ ಎಷ್ಟು ಹಣ ಇರುತ್ತದೋ ಅಷ್ಟು ಕೊಡಲೇಬೇಕು. ಮಾತ್ರವಲ್ಲ ಪೋನ್ ಪೇ, ಗೂಗಲ್ ಪೇ ನಲ್ಲಿ ಇರುವ ಹಣವನ್ನೂ ಟ್ರಾನ್ಸಕ್ಷನ್ ಮಾಡಲೇಬೇಕು. ಇಲ್ಲವಾದರೆ, ಹಲ್ಲೆ ಮಾಡಿ ಕುತ್ತಿಗೆಯ ಮೇಲೆ ಚಾಕು ಇಡುತ್ತಾರೆ. ಹೀಗೆ ಕೇವಲ ಬಾಣಸವಾಡಿಯಲ್ಲಿ ಮಾತ್ರವಲ್ಲ ನಾಗಸಂದ್ರ, ಹೆಬ್ಬಾಳ, ಮೆಜೆಸ್ಟಿಕ್, ಮತ್ತಿಕೆರೆ ಸೇರಿದಂತೆ ಬೆಂಗಳೂರಿನ ಹಲವಡೆ ನಾಯಿ ಕೊಡೆಗಳಂತೆ ಸೆಕ್ಸ್ ದಂಧೆಗಳು ಶುರುವಾಗಿವೆ.

  • ಟ್ರಿಪ್ ಕ್ಯಾನ್ಸಲ್ ಮಾಡದ್ದಕ್ಕೆ ಊಬರ್ ಚಾಲಕನಿಂದ ಟೆಕ್ಕಿ ಮೇಲೆ ಹಲ್ಲೆ

    ಟ್ರಿಪ್ ಕ್ಯಾನ್ಸಲ್ ಮಾಡದ್ದಕ್ಕೆ ಊಬರ್ ಚಾಲಕನಿಂದ ಟೆಕ್ಕಿ ಮೇಲೆ ಹಲ್ಲೆ

    ಬೆಂಗಳೂರು: ಶುಲ್ಕದ ಬಗ್ಗೆ ವಿವಾದ ನಡೆದು ಊಬರ್ ಚಾಲಕನೋರ್ವ 23 ವರ್ಷದ ಸಾಫ್ಟ್‍ವೇರ್ ಎಂಜಿನಿಯರ್ ಮೇಲೆ ಹಲ್ಲೆ ಮಾಡಿದ ಪ್ರಕರಣ ನಗರದ ಹೊರ ವಲಯದಲ್ಲಿ ನಡೆದಿದೆ.

    ನಗರದ ಟೆಕ್ಕಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಬುಕ್ ಮಾಡಿದ್ದು, ಬುಕ್ ಮಾಡಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ಡ್ರೈವರ್ ಕೇಳಿದ್ದನ್ನು ಪ್ರಶ್ನಿಸಿದ್ದಾರೆ. ಇದೇ ವಿವಾದವಾಗಿ ಬೆಳೆದು ಚಾಲಕನು ಎಂಜಿನಿಯರ್‍ಗೆ ರಕ್ತ ಬರುವಂತೆ ಮೂಗಿಗೆ ಗುದ್ದಿದ್ದಾನೆ. ಈ ಕುರಿತು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 323(ಹಲ್ಲೆ), 341(ಸಂಯಮ ಕಳೆದುಕೊಂಡಿರುವುದು), 504(ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು) ಅಡಿ ಎಫ್‍ಐಆರ್ ದಾಖಲಾಗಿದೆ.

    ಡ್ರೈವರ್ ಟ್ರಿಪ್ ಕ್ಯಾನ್ಸಲ್ ಮಾಡುವಂತೆ ಕೇಳಿಕೊಂಡಿದ್ದು, ಆಗ ಗ್ರಾಹಕ ಎಂಜಿನಿಯರ್ ಕ್ಯಾನ್ಸಲ್ ಮಾಡುವುದಿಲ್ಲ. ನೀವು ಇದಕ್ಕೆ ದಂಡ ಹಾಕುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಗ ವಿವಾದ ಸೃಷ್ಟಿಯಾಗಿದೆ. ನಂತರ ಕಾರ್ ಡ್ರೈವರ್ ಹಿಂದೆ ಹೋಗಿ ಡಿಕ್ಕಿಯಲ್ಲಿದ್ದ ಎಂಜಿನಿಯರ್ ಬ್ಯಾಗ್ ಹಾಗೂ ವಸ್ತುಗಳನ್ನು ನೆಲದ ಮೇಲೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಈ ರೀತಿ ವರ್ತಿಸಿದರೆ ಸ್ಮಾರ್ಟ್‍ಫೋನ್‍ನ ಆ್ಯಪ್‍ನಲ್ಲಿ ಚಾಲಕ ಅಶಿಸ್ತಿನಿಂದ ವರ್ತಿಸಿದ್ದಾನೆ ಎಂದು ದೂರು ನೀಡುತ್ತೇನೆ ಎಂದು ಗ್ರಾಹಕ ಎಚ್ಚರಿಸಿದ್ದಾರೆ. ಇಷ್ಟಕ್ಕೆ ಕೋಪಿತನಾದ ಡ್ರೈವರ್ ಗ್ರಾಹಕನ ಮೂಗಿಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗ್ರಾಹಕನ ಮೂಗಿನ ಮೂಳೆ ಸರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದುರ್ಗಾ ಪೂಜೆಗಾಗಿ ಕೋಲ್ಕತ್ತಾಗೆ ಹೊರಟಿದ್ದಾಗ ಈ ಘಟನೆ ನಡೆದಿದ್ದರಿಂದ ತಡವಾಗಿದೆ. ಕ್ಯಾಬ್ ಡ್ರೈವರ್ ಇಳಿಸಿದ ನಂತರ ಇನ್ನೊಂದು ಕ್ಯಾಬ್ ಬುಕ್ ಮಾಡಿಕೊಂಡು ಹೋದರೂ ಸಹ ವಿಮಾನ ತಪ್ಪಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ಹರೀಶ್.ಕೆ.ಎಸ್. ಎಂದು ಗುರುತಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಚಾಲಕನನ್ನು ಇನ್ನೂ ಪತ್ತೆ ಹಚ್ಚಿಲ್ಲ. ಆದರೆ ದೂರಿನ ಆಧಾರದ ಮೇಲೆ ಆರೋಪಿಯನ್ನು ಆನ್‍ಲೈನ್ ವೇದಿಕೆಯಿಂದ ಅಮಾನತುಗೊಳಿಸಲಾಗಿದೆ. ಈ ಕುರಿತು ಕ್ಯಾಬ್ ಅಗ್ರಿಗೇಟರ್ ಖಚಿತಪಡಿಸಿದ್ದಾರೆ.

    ನಮಗೆ ಸವಾರರ ಸುರಕ್ಷತೆ ಅತ್ಯುನ್ನತವಾದದ್ದು, ಈ ಘಟನೆ ಕುರಿತು ತಿಳಿದ ನಂತರ ಚಾಲಕನನ್ನು ಪಾಲುದಾರಿಕೆಯ ಅಪ್ಲಿಕೇಶನ್‍ನಿಂದ ತೆಗೆದು ಹಾಕಿದ್ದೇವೆ ಎಂದು ಉಬರ್ ವಕ್ತಾರರು ದೃಢಪಡಿಸಿದ್ದಾರೆ.

  • ಸಿಲಿಕಾನ್ ಸಿಟಿ ಜನರೇ ಎಚ್ಚರ -ಮನೆಯಿಂದಾಚೆ ಒಬ್ಬೊಬ್ಬರಾಗಿ ಕಾಲಿಡಬೇಡಿ

    ಸಿಲಿಕಾನ್ ಸಿಟಿ ಜನರೇ ಎಚ್ಚರ -ಮನೆಯಿಂದಾಚೆ ಒಬ್ಬೊಬ್ಬರಾಗಿ ಕಾಲಿಡಬೇಡಿ

    ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ. ಅಪ್ಪಿತಪ್ಪಿಯೂ ಮನೆಯಿಂದಾಚೆ ಒಬ್ಬೊಬ್ಬರಾಗಿ ಕಾಲಿಡಬೇಡಿ. ಯಾಕೆಂದರೆ ರಾಜಧಾನಿಯಲ್ಲಿ ಡೆಂಜರ್ ಡೆಡ್ಲಿಗ್ಯಾಂಗ್ ಹುಟ್ಟಿಕೊಂಡಿದೆ.

    ಬೆಂಗಳೂರಿನ ಈಸ್ಟ್ ಡಿವಿಜನ್‍ನಲ್ಲಿ ಕಿರಾತಕರ ಗ್ಯಾಂಗ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ಗ್ಯಾಂಗ್ ಕ್ಷಣಮಾತ್ರದಲ್ಲೇ ತಮ್ಮ ಕೆಲಸ ಮುಗಿಸಿ ಎಸ್ಕೇಪ್ ಆಗುತ್ತಿದೆ. ಮಾರುವೇಷದಲ್ಲಿ ಬಂದು ಅಟ್ಯಾಕ್ ಮಾಡಿ ಕ್ಷಣಾರ್ಧದಲ್ಲಿಯೇ ಈ ಗ್ಯಾಂಗ್ ಮಾಯವಾಗುತ್ತದೆ.

    ಕಳೆದ ಒಂದು ವಾರದಲ್ಲಿ ಎರಡು-ಮೂರು ಕಡೆ ದಾಳಿ ಮಾಡಿದೆ. ಇಂದಿರಾ ನಗರ, ಬಾಣಸವಾಡಿಯಲ್ಲಿ ಪ್ರತ್ಯೇಕವಾಗಿ ದಾಳಿ ಮಾಡಿದೆ ಎಂದು ಶಂಕಿಸಲಾಗಿದೆ. ಖತರ್ನಾಕ್ ಗ್ಯಾಂಗಿನ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

    ಚಿಕ್ಕ ಬಾಣಸವಾಡಿಯಲ್ಲಿ ಅಂಗಡಿಗೆ ಹೋಗಿ ಬರುತ್ತಿದ್ದ ಅಪ್ಪ-ಮಗನ ಮೇಲೆ ದಾಳಿ ಮಾಡಿದೆ. ಕಪ್ಪು ಬಣ್ಣದ ಪಲ್ಸರ್‌ನಲ್ಲಿ ಬಂದ ದುಷ್ಕರ್ಮಿಗಳು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಖಕ್ಕೆ ಹೆಲ್ಮೆಟ್ ಧರಿಸಿಕೊಂಡು ಬಂದು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಸ್ಥಳೀಯರು ಬರುತ್ತಿದ್ದಂತೆಯೇ ಪರಾರಿಯಾಗಿದ್ದಾರೆ. ಚಿಕ್ಕ ಬಾಣಸವಾಡಿ ಘಟನೆ ಬಳಿಕ ಇಂದಿರಾ ನಗರದಲ್ಲಿ ಕೂಡ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿದ್ದಾರೆ.

    ಈಸ್ಟ್ ಡಿವಿಜನ್‍ನಲ್ಲಿ ಈ ಡೆಡ್ಲಿ ಗ್ಯಾಂಗ್ ಹಾವಳಿಯಿಂದ ಜನರು ಭಯಗೊಂಡಿದ್ದಾರೆ. ಈ ಘಟನೆ ಸಂಬಂಧ ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಬಾಣಸವಾಡಿ ಹಾಗೂ ಇಂದಿರಾ ನಗರದಲ್ಲಿ ಕೇಸ್ ದಾಖಲಾಗಿದೆ. ಆದರೆ ಈ ರೌಡಿಗಳು ಯಾರು, ಯಾಕೆ ಜನರ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎಂಬುದು ಮಾತ್ರ ತಿಳಿದುಬಂದಿಲ್ಲ.

  • ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

    ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

    ಬೆಂಗಳೂರು: ಆಸ್ತಿಗಾಗಿ ಪ್ರೀತಿ ಮಾಡಿದ ವ್ಯಕ್ತಿಯನ್ನೇ ಯುವತಿ ಕೊಲ್ಲಲು ಪ್ರಯತ್ನ ಮಾಡಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.

    ಪವಿತ್ರ ಕೊಲೆ ಮಾಡಲು ಯತ್ನಿಸಿದ ಯುವತಿ. ಪವಿತ್ರ ಆರ್ಕೆಸ್ಟ್ರಾ ಸಿಂಗರ್ ಆಗಿದ್ದು, ಕಳೆದ ಕೆಲ ವರ್ಷಗಳಿಂದ 2015 ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಫರ್ಧಿಸಿದ್ದ ಉದ್ಯಮಿ ಪ್ರಭಾಕರ್ ರೆಡ್ಡಿ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದರು. ಸೆಪ್ಟಂಬರ್ 20ರಂದು ಪವಿತ್ರ ಇದ್ದಕ್ಕಿದ್ದಂತೆ ಪ್ರಭಾಕರ್ ರೆಡ್ಡಿಯನ್ನು ಆರ್ ಆರ್ ನಗರದಲ್ಲಿ ಭೇಟಿ ಮಾಡಿ ಕಾರಲ್ಲಿ ನೈಸ್ ರಸ್ತೆಗೆ ಕರೆದುಕೊಂಡು ಹೋಗಿದ್ದಳು.

    ಕಾರಲ್ಲಿ ಹೋಗುತ್ತಿದ್ದ ವೇಳೆ ಪವಿತ್ರ ಆಸ್ತಿ ಬರೆದುಕೊಡುವಂತೆ ಒತ್ತಾಯಿಸಿ ಗಲಾಟೆ ಮಾಡಿದ್ದಾಳೆ. ಅಲ್ಲದೆ ಕಾರಿನ ಸೀಟ್‍ ಬೆಲ್ಟ್‌ನಿಂದ ಕತ್ತು ಬಿಗಿದು ಪ್ರಭಾಕರ್ ರನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ. ಪ್ರಭಾಕರ್ ರೆಡ್ಡಿ ಈಗಾಗಲೇ ಪವಿತ್ರಗೆ 2 ಕೆಜಿ ಚಿನ್ನ, 5 ಕೋಟಿ ಮೌಲ್ಯದ ಕಟ್ಟಡವನ್ನು ನೀಡಿದ್ದಾರೆ. ಆದರೂ ಎಲ್ಲಾ ಆಸ್ತಿ ಬರೆದುಕೊಡುವಂತೆ ಪವಿತ್ರ, ಪ್ರಭಾಕರ್ ಗೆ ಧಮ್ಕಿ ಹಾಕಿ ಕೊಲೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಪ್ರಭಾಕರ್ ರೆಡ್ಡಿ ಅವರು, ಕುಟುಂಬದಲ್ಲಿ ಗಲಾಟೆ ಅಷ್ಟೇ. ನೈಸ್ ರೋಡಿನಲ್ಲಿ ಬರುತ್ತಿರುವಾಗ ನಮ್ಮಿಬ್ಬರ ನಡುವೆ ಜಗಳವಾಯಿತು. ಈ ವೇಳೆ ಪವಿತ್ರ ಸೀಟ್ ಬೆಲ್ಟಿನಿಂದ ಕೊಲೆ ಮಾಡಲು ಯತ್ನಿಸಿದ್ದಳು. ಅಲ್ಲದೆ ನೀರಿನ ಬಾಟಲಿಯಿಂದ ನನ್ನನ್ನು ಹಲ್ಲೆ ಮಾಡಿದ್ದಳು. ಹಲ್ಲೆಯಿಂದ ನನ್ನ ಕಿವಿಯಲ್ಲಿ ರಕ್ತ ಬರುತ್ತಿದ್ದ ಕಾರಣ ನಾನು ಆಸ್ಪತ್ರೆಗೆ ಹೋಗಿ ಪೊಲೀಸ್ ಠಾಣೆಗೆ ಹೋದೆ. ಪವಿತ್ರ ನನಗೆ ಒಂದೂವರೆ ವರ್ಷದಿಂದ ಪರಿಚಯ. ನಾವಿಬ್ಬರು ಜೊತೆಯಲ್ಲಿಯೇ ಇದ್ದೆವು. ಈ ನಡುವೆ ಕುಟುಂಬದಲ್ಲಿ ಜಗಳವಾಗಿದೆ. ಪವಿತ್ರ ನನ್ನನ್ನು ಇಷ್ಟಪಡುತ್ತಿದ್ದಳು ಎಂದು ತಿಳಿಯಿತು. ಆಗ ಇಬ್ಬರು ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿ ಇದ್ದೆವು. ಆಕೆಗೆ ನಾನು ಮನೆ ಕೊಡಿಸಿದೆ. ನನಗೆ ಕಮಿಟ್ಸ್ ಮೆಂಟ್ ಇದೆ, ನನಗೆ ಏನಾದರೂ ಮಾಡಿಸು ಎಂದು ಬೇಡಿಕೆಯಿಟ್ಟಿದ್ದಳು ಎಂದು ಹೇಳಿದ್ದಾರೆ.

    ಪವಿತ್ರಗೆ ಈಗಾಗಲೇ ಮದುವೆಯಾಗಿ ಡಿವೋರ್ಸ್ ಆಗಿದ್ದು, ಆಕೆಗೆ 5 ವರ್ಷದ ಮಗು ಕೂಡ ಇದೆ. ಮೂಲತಃ ಚನ್ನಪಟಣ್ಣದವಳಾಗಿರುವ ಪವಿತ್ರ ಈಗ ಬೆಂಗಳೂರಿನ ಆರ್‍ಆರ್ ನಗರದಲ್ಲಿ ಇದ್ದಾರೆ. ನಾನು ಪೊಲೀಸರಿಗೆ ಅರೆಸ್ಟ್ ಮಾಡಿ ಎಂದು ಒತ್ತಡ ಹಾಕಲಿಲ್ಲ. ಇದಾದ ಬಳಿಕ ನಾನು ಮಾತನಾಡಲು ಆಕೆಯನ್ನು ಕರೆದೆ. ಆದರೆ ಅವರು ಒಪ್ಪಲಿಲ್ಲ. ಫೈನಾನ್ಸ್ ನಲ್ಲಿ ತೊಂದರೆ ಆದಾಗ ಪವಿತ್ರ ನನಗೆ ಸಹಾಯ ಮಾಡಿದ್ದಳು. ಕಷ್ಟದ ಸಂದರ್ಭದಲ್ಲಿ ನನ್ನ ಪರವಾಗಿ ಯಾರು ಬರದಿದ್ದಾಗ ಆಕೆ ನನ್ನ ಸಹಾಯಕ್ಕೆ ಬಂದಿದ್ದಳು. ಸಹಾಯ ಮಾಡಿದ್ದಾಳೆ ಎಂದು ಮಾನವೀಯತೆ ದೃಷ್ಟಿಯಿಂದ ನಾನು ಅವರಿಗೆ ತುಂಬಾ ಗೌರವ ನೀಡುತ್ತಿದ್ದೆ. ದೌರ್ಜನ್ಯ ಮಾಡಿದ್ದಕ್ಕೆ ನಾನು ದೂರು ನೀಡಿದೆ ಹೊರತು ಬೇರೆ ವಿಷಯಕ್ಕೆ ಅಲ್ಲ ಎಂದು ಪ್ರಭಾಕರ್ ತಿಳಿಸಿದ್ದಾರೆ.

    ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

  • ಮಧ್ಯರಾತ್ರಿ ಗ್ರಾಮಕ್ಕೆ ನುಗ್ಗಿ ಕಾರಿನ ಗಾಜು ಜಖಂ- ಪ್ರಶ್ನಿಸಿದವರ ಮೇಲೆ ಲಾಂಗ್,ಮಚ್ಚುಗಳಿಂದ ಹಲ್ಲೆ

    ಮಧ್ಯರಾತ್ರಿ ಗ್ರಾಮಕ್ಕೆ ನುಗ್ಗಿ ಕಾರಿನ ಗಾಜು ಜಖಂ- ಪ್ರಶ್ನಿಸಿದವರ ಮೇಲೆ ಲಾಂಗ್,ಮಚ್ಚುಗಳಿಂದ ಹಲ್ಲೆ

    ಬೆಂಗಳೂರು: 20 ಜನ ಯುವಕರ ತಂಡವೊಂದು ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಮನೆಯ ಬಳಿ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಕೇಳಲು ಬಂದ ಗ್ರಾಮಸ್ಥರ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

    ಮಧ್ಯರಾತ್ರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀರಾಮ ಎಂಬವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಯುವಕರು ಜಖಂ ಮಾಡುತ್ತಿದ್ದರು. ಈ ವೇಳೆ ಅಕ್ಕಪಕ್ಕದ ಮನೆಯವರು ಹೊರಗೆ ನೋಡುತ್ತಿದ್ದಂತೆ ಅವರ ಮೇಲೆಯೂ ಯುವಕರು ಲಾಂಗು, ಮಚ್ಚು ಹಾಗು ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀರಾಮ ಮನೆಯಲ್ಲಿದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಮೂರಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ದು, ಇದರಿಂದ ಭಯಭೀತರಾದ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ರಾತ್ರಿ 10 ಗಂಟೆಯ ಸಮಯದಲ್ಲಿ ಘಟನೆ ನಡೆದಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.

    ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಹಾಗು ಪೊಲೀಸರ ತಂಡ ಹಲ್ಲೆಗೊಳಗಾಗಿದ್ದ ಪ್ರಕಾಶ್ ಅವರನ್ನು ಆನೇಕಲ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ದಿನಗಳ ಹಿಂದೆ ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಯೊಂದು ನಡೆದಿತ್ತು.

    ಸಭೆಯಲ್ಲಿ ಜಮೀನಿನ ವಿಚಾರಕ್ಕೆ ಶ್ರೀರಾಮ ಹಾಗು ರವಿ ಎಂಬಾತನ ನಡುವೆ ಮಾತಿನ ಚಕಮಕಿ ನಡೆದಿತ್ತು. ಈಗ ಇದೇ ವಿಚಾರಕ್ಕೆ ರಾತ್ರಿ ಯುವಕರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಶ್ರೀರಾಮ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಪ್ರಕಾಶ್ ಗಲಾಟೆ ಯಾಕೆ ಮಾಡುತ್ತಿದೀರಾ ಎಂದು ಕೇಳಲು ಹೋದಾಗ ಮಚ್ಚಿನಿಂದ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.

  • ರೌಡಿಸಂನಲ್ಲಿ ಹೆಸರು ಮಾಡಬೇಕೆಂದು ಮಚ್ಚಿನಿಂದ ಹಲ್ಲೆ ಮಾಡಿದ ಯುವಕ

    ರೌಡಿಸಂನಲ್ಲಿ ಹೆಸರು ಮಾಡಬೇಕೆಂದು ಮಚ್ಚಿನಿಂದ ಹಲ್ಲೆ ಮಾಡಿದ ಯುವಕ

    ಮಂಡ್ಯ: ರೌಡಿಸಂನಲ್ಲಿ ಹೆಸರು ಮಾಡಲು ಯುವಕನೋರ್ವ ಹಾಡಹಾಗಲೇ ಲಾಂಗ್ ಹಿಡಿದು ಬೇಕರಿಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ಮಂಡ್ಯ ನಗರದ ಜೈಲ್ ವೃತ್ತದ ಬೇಕರಿಯಲ್ಲಿ ನಡೆದಿದೆ.

    ಹಲ್ಲೆ ಮಾಡಿದ ಯುವಕನನ್ನು ಕ್ಯಾಂತಗೆರೆಯ ನಿವಾಸಿ ನಾಗೇಶ್ ಎಂದು ಗುರುತಿಸಲಾಗಿದೆ. ಹಾಡಹಗಲೇ ಲಾಂಗ್ ಹಿಡಿದು ಬೇಕರಿಗೆ ನುಗ್ಗಿದ ಯುವಕ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಭಯಗೊಂಡು ಮಾಲೀಕ ಒಳಗೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಈ ಎಲ್ಲಾ ಘಟನೆ ಬೇಕರಿಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.

    ಘಟನೆ ಬಳಿಕ ಬೇಕರಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ನಾನು ರೌಡಿಸಂನಲ್ಲಿ ಹೆಸರು ಮಾಡಬೇಕು ಎಂದು ಈ ರೀತಿ ಮಾಡಿದೆ ಎಂದು ನಾಗೇಶ್ ಹೇಳಿದ್ದಾನೆ. ಆರೋಪಿಯ ಅಸೆ ನೋಡಿ ದಂಗಾದ ಪೊಲೀಸರು ಬಂಧಿಸಿ ಆತನನ್ನು ಜೈಲಿಗಟ್ಟಿದ್ದಾರೆ. ಈ ಸಂಬಂಧ ಮಂಡ್ಯ ಪಶ್ವಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬ್ಯಾಂಕ್ ಅಕೌಂಟ್‍ಗೆ ಜಮಾವಣೆಯಾಗಿದ್ದ ಹಣ ನೀಡದ್ದಕ್ಕೆ ಮಹಿಳೆ ಮೇಲೆ ಹಲ್ಲೆ

    ಬ್ಯಾಂಕ್ ಅಕೌಂಟ್‍ಗೆ ಜಮಾವಣೆಯಾಗಿದ್ದ ಹಣ ನೀಡದ್ದಕ್ಕೆ ಮಹಿಳೆ ಮೇಲೆ ಹಲ್ಲೆ

    ಕೋಲಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ತನ್ನ ಬ್ಯಾಂಕ್ ಅಕೌಂಟ್‍ಗೆ ಜಮಾವಣೆಯಾಗಿದ್ದ ಹಣ ನೀಡದ ಮಹಿಳೆಯನ್ನು ಗ್ರಾಮದ ಮುಖಂಡನ ಕುಟುಂಬ ಮಾರಣಾಂತಿಕವಾಗಿ ಥಳಿಸಿರುವ ಆರೋಪ ಕೇಳಿ ಬಂದಿದೆ.

    ಕೋಲಾರ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಗ್ರಾಮದ ಈರಮ್ಮ ಎಂಬವರನ್ನು ಒಂದೇ ಕುಟುಂಬದ 5 ಜನ ಸದಸ್ಯರು ಹಲ್ಲೆ ನಡೆಸಿದ್ದಾರೆ. ಇದೇ ಗ್ರಾಮದ ಮಲ್ಲಪ್ಪ, ಹೇಮಂತ, ಶ್ರೀರಾಮ್, ಅನಿತಾ ಹಾಗೂ ಸುಜಾತ ಎಂಬವರು ಏಕಾಏಕಿ ಮನೆಗೆ ನುಗ್ಗಿ ಮನಬಂದಂತೆ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಗ್ರಾಮದಲ್ಲಿ ಪ್ರಭಾವಿಳಾಗಿರುವ ಮಲ್ಲಪ್ಪನವರ ಕುಟುಂಬದವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮದ ಒಂದಷ್ಟು ಜನ ಜಾಬ್‍ಕಾರ್ಡ್ ಹೊಂದಿದವರ ದಾಖಲಾತಿಗಳನ್ನು ಪಡೆದು ಹಣವನ್ನು ಅವರವರ ಖಾತೆಗೆ ಜಮಾ ಮಾಡಿದರು. ಆ ಹಣ ಬಂದ ನಂತರ ಒಂದಷ್ಟು ಹಣ ಮಾಡುವ ಒಪ್ಪಂದ ಕೂಡ ನಡೆದಿತ್ತು. ಆದರೆ ಈರಮ್ಮ ಹಣ ನೀಡುವುದು ತಡ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈರಮ್ಮನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಹಣ ಕೊಡುವಂತೆ ಕೇಳಿರುವ ಮಲ್ಲಪ್ಪನಿಗೆ ಸಂಜೆ ಆಗಿದೆ ಬ್ಯಾಂಕ್ ಇರುವುದಿಲ್ಲ ನಾಳೆ ಹಣ ನೀಡುವುದಾಗಿ ಹೇಳಿದ್ದು, ಇದರಿಂದ ಕೋಪಗೊಂಡ ಮಲ್ಲಪ್ಪ ಮತ್ತು ಕುಟುಂಬಸ್ಥರು ಈರಮ್ಮ ಎಂಬವರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ. ಸದ್ಯ ಗಾಯಾಳು ಈರಮ್ಮ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.