Tag: ಹಲ್ಲೆ

  • ಶೀಲದ ಬಗ್ಗೆ ಅಪಪ್ರಚಾರ- ರಸ್ತೆ ಮಧ್ಯೆಯೇ ಧರ್ಮದೇಟು

    ಶೀಲದ ಬಗ್ಗೆ ಅಪಪ್ರಚಾರ- ರಸ್ತೆ ಮಧ್ಯೆಯೇ ಧರ್ಮದೇಟು

    ಚಿಕ್ಕಮಗಳೂರು. ಶೀಲದ ಬಗ್ಗೆ ಎಲ್ಲರ ಬಳಿಯೂ ಅಪಪ್ರಚಾರ ಮಾಡುತ್ತಿದ್ದ ವ್ಯಕ್ತಿಗೆ ಮಹಿಳೆಯೊಬ್ಬಳು ರಸ್ತೆ ಮಧ್ಯೆಯೇ ಹಿಗ್ಗಾಮುಗ್ಗಾ ಧರ್ಮದೇಟು ಕೊಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಜಯಪರದ ಸುಂದರೇಶ್ ಅದೇ ಊರಿನ ಶೋಭಾ(ಹೆಸರು ಬದಲಾಯಿಸಲಾಗಿದೆ) ಎಂಬವರ ಶೀಲದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದನು. ಆಕೆ ಸರಿ ಇಲ್ಲ ಎಂದು ಶೀಲದ ಬಗ್ಗೆ ಶಂಕಿಸಿ ಕರಪತ್ರ ಮಾಡಿಸಿ ಗ್ರಾಮಸ್ಥರ ಮನೆ ಬಾಗಿಲಿಗೂ ಅಂಟಿಸಿದ್ದನು. ಈ ಬಗ್ಗೆ ಶೋಭಾ ಜಯಪುರ ಠಾಣೆಗೆ ದೂರು ನೀಡಿದ್ದಳು.

    ಜಯಪುರ ಪೊಲೀಸರು ಆತನನ್ನ ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಜೈಲಿನಿಂದ ಬೇಲ್ ಮೇಲೆ ಬಂದ ಸುಂದರೇಶ್ ಮತ್ತೆ ಅದೇ ಕೆಲಸ ಮಾಡುತ್ತಿದ್ದನು. ಅಲ್ಲದೇ ದಾರಿ ಮಧ್ಯೆ ಸಿಕ್ಕವರಿಗೆಲ್ಲಾ ಅವಳು ಸರಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದನು. ಈ ರೀತಿ ಮಾಡಬೇಡ ಎಂದು ಶೋಭಾ ಹಲವು ಬಾರಿ ಎಚ್ಚರಿಕೆ ಕೂಡ ನೀಡಿದ್ದಳು. ಆದರೆ ಸಂದರೇಶ್ ಮತ್ತದೇ ಕೆಲಸ ಮಾಡುತ್ತಿದ್ದನು.

    ಇದರಿಂದ ಆಕ್ರೋಶಗೊಂಡ ಶೋಭಾ ದಾರಿ ಮಧ್ಯೆಯೇ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ನನ್ನ ಬಗ್ಗೆ ಏಕೆ ಮಾತನಾಡೋದು, ನಾನು ಸರಿ ಇಲ್ಲ ಅನ್ನೋದನ್ನ ನೀನು ನೋಡಿದ್ದೀಯಾ ಎಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ.

  • ಹೊಸ ವರ್ಷಾಚರಣೆ ವೇಳೆ ಕೋರಮಂಗಲದಲ್ಲಿ ಯುವತಿಗೆ ಲೈಂಗಿಕ ಕಿರುಕುಳ

    ಹೊಸ ವರ್ಷಾಚರಣೆ ವೇಳೆ ಕೋರಮಂಗಲದಲ್ಲಿ ಯುವತಿಗೆ ಲೈಂಗಿಕ ಕಿರುಕುಳ

    – ಮತ್ತೆ ಅಹಿತಕರ ಘಟನೆಗೆ ಸಾಕ್ಷಿಯಾದ ಹೊಸ ವರ್ಷಾಚಾರಣೆ

    ಬೆಂಗಳೂರು: 2020 ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡುತ್ತಿರುವ ಸಂದರ್ಭದಲ್ಲೇ ಕಿಡಿಗೇಡಿಗಳು ಯುವತಿಗೆ ಲೈಂಗಿಕ ಕಿರುಕುಳ ನೀಡುವ ಮೂಲಕ ಮತ್ತೆ ಅಹಿತಕರ ಘಟನೆಗೆ ಸಿಲಿಕಾನ್ ಸಿಟಿಯನ್ನು ಸಾಕ್ಷಿಯನ್ನಾಗಿಸಿದ್ದಾರೆ.

    ಕೋರಮಂಗಲದ 5ನೇ ಬ್ಲಾಕ್‍ನಲ್ಲಿ ಸಂಭ್ರಮಾಚರಣೆ ವೇಳೆ ಯುವತಿಯರ ತಂಡದ ಮೇಲೆ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಬೆದರಿಕೆ ಕೂಡ ಹಾಕಿದ್ದಾರೆ. ಈ ವೇಳೆ ಯುವತಿಯೋರ್ವಳು ಸಮೀಪದಲ್ಲೇ ಕರ್ತವ್ಯ ನಿರತರಾಗಿದ್ದ ಪೊಲೀಸರ ಎದುರು ಕಣ್ಣೀರು ಹಾಕಿ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ತಿಳಿಸಿದ್ದಾಳೆ. ಯುವತಿ ದೂರು ನೀಡುತ್ತಿದ್ದಂತೆ ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಯುವತಿ ಜೊತೆ ಡಿಸಿಪಿ ಇಶಾ ಪಂಥ್ ಮಾತುಕತೆ ನಡೆಸಿದ್ದು, ಪ್ರಸ್ತುತ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕಾಮುಕರ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ಫೂಟೇಜ್‍ಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ಬ್ರಿಗೇಡ್ ರಸ್ತೆಯಲ್ಲಿ ಸಹ ಹೊಸ ವರ್ಷದ ಜೋಶ್‍ನಲ್ಲಿದ್ದ ಯುವತಿಯೊಬ್ಬಳು ಡ್ಯಾನ್ಸ್ ಮಾಡುತ್ತಿರುವಾಗ ಕೆಳಗೆ ಬಿದ್ದಿರೋ ಘಟನೆ ನಡೆದಿದೆ. ಬ್ರಿಗೇಡ್ ರೋಡ್‍ನ ಪಬ್‍ನಲ್ಲಿ ಯುವತಿ ಡ್ಯಾನ್ಸ್ ಮಾಡುತ್ತಿರುವಾಗ ಅಪರಿಚಿತ ವ್ಯಕ್ತಿಯ ಕೈತಾಗಿ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ತಕ್ಷಣ ಯುವತಿ ಬಾಯಿಯಲ್ಲಿ ರಕ್ತ ಬಂದಿದೆ. ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

    ಇತ್ತ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಉತ್ತರ ಭಾರತದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಬಾಯಿ ಹಾಗೂ ಮೂಗಿನಲ್ಲಿ ರಕ್ತ ಬರುವ ಹಾಗೆ ಯುವಕನನ್ನು ಥಳಿಸಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ನೇಹಿತನ ಸಹಾಯದಿಂದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಕುಡುಕರ ಆಟಾಟೋಪ ಕೂಡ ಮಿತಿಮೀರಿತ್ತು. ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಬೆಂಗಳೂರಿನ ಕೆಲವೆಡೆ ಕುಡುಕರು ರಸ್ತೆಯಲ್ಲೇ ಬಿದ್ದಿದ್ದರೆ, ಇನ್ನೂ ಕೆಲವರು ಇಡೀ ರಸ್ತೆಯೇ ತಮ್ಮದೆನ್ನುವ ರೀತಿ ರಾದ್ಧಾಂತ ಮಾಡಿದ್ದಾರೆ. ಇನ್ನೂ ಕೆಲವರು ಬಾರಿನಿಂದ ಹೊರಬರಲು ಕಷ್ಟಪಡುತ್ತಿದ್ದರು.

  • ಜೈಲಿನಿಂದ ಹೊರ ಬಂದವನನ್ನು ಅಟ್ಟಾಡಿಸಿಕೊಂಡು ಹೊಡೆದ ಗ್ಯಾಂಗ್

    ಜೈಲಿನಿಂದ ಹೊರ ಬಂದವನನ್ನು ಅಟ್ಟಾಡಿಸಿಕೊಂಡು ಹೊಡೆದ ಗ್ಯಾಂಗ್

    ದಾವಣಗೆರೆ: ತನ್ನ ಗ್ಯಾಂಗ್‍ನ ಹುಡುಗನನ್ನು ಕೊಲೆ ಮಾಡಿದ್ದಾನೆ ಎಂದು ಹಳೇ ದ್ವೇಷ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾದ ಯುವಕನನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ವಿನಾಯಕ ನಗರದ ನಿವಾಸಿ ಆಶೋಕ್ ಗಂಭೀರವಾಗಿ ಹಲ್ಲೆಗೊಳಗಾದ ಯುವಕ. ನಗರದ ಹೈಟೆಕ್ ಆಸ್ಪತ್ರೆಯಲ್ಲಿ ಸದ್ಯ ಅಶೋಕ್ ಚಿಕಿತ್ಸೆ ಪಡೆಯುತ್ತಿದ್ದಾನೆ. 2 ವರ್ಷಗಳ ಹಿಂದೆ ಪಿಬಿ ರಸ್ತೆಯಲ್ಲಿರುವ ಖಾಲಿ ನಿವೇಶನದಲ್ಲಿ ಬಕ್ಲಾಸ್ ಗೇಮ್ (ಬೆಟ್ಟಿಂಗ್ ಆಟ) ಆಡುವಾಗ ಯುವಕರ ನಡುವೆ ಜಗಳವಾಗಿ ಭರತ್ ಎಂಬಾತನ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ಆಶೋಕ್ ಪ್ರಮುಖ ಆರೋಪಿಯಾಗಿದ್ದು, ಜೈಲಿಗೂ ಕೂಡ ಹೋಗಿ ಕೆಲ ದಿನಗಳ ಹಿಂದೆ ಹೊರ ಬಂದಿದ್ದ.

    ಅಶೋಕ್ ಬಿಡುಗಡೆಯಾಗಿದ್ದನ್ನು ಗಮನಿಸಿದ ಮತ್ತೊಂದು ಗ್ಯಾಂಗ್‍ನ ಯುವಕರು ಆತನನ್ನು ಕೊಲೆ ಮಾಡಲು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅಶೋಕ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಶೋಕ್‍ನಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಹಳೆ ದ್ವೇಷವೇ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದ್ದು, ಬಡಾವಣೆ ಪೊಲೀಸರು ಪ್ರಕರಣ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

  • ಮಹಿಳಾ ಆರೋಪಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ ಎಎಸ್‍ಐ

    ಮಹಿಳಾ ಆರೋಪಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ ಎಎಸ್‍ಐ

    ದಾವಣಗೆರೆ: ಆರೋಪಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಬಾರದೆಂದು ಕಾನೂನೇ ಇದೆ. ಆದರೆ ದಾವಣಗೆರೆಯಲ್ಲಿ ಮಹಿಳಾ ಎಎಸ್‍ಐ ಒಬ್ಬರು ಮಹಿಳಾ ಆರೋಪಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದಾರೆ.

    ದಾವಣಗೆರೆಯ ಆಜಾಧ್ ನಗರ ಪೊಲೀಸ್ ಠಾಣೆಯ ಮಹಿಳಾ ಎಎಸ್‍ಐ ಸಮೀಮ್ ಬಾನು ಥರ್ಡ್ ಡಿಗ್ರಿ ನೀಡಿದ ಎಎಸ್‍ಐ ಆಗಿದ್ದು, ಕಳ್ಳತನದ ಆರೋಪದಲ್ಲಿ ಸಿಕ್ಕಿಬಿದ್ದ ರೇಷ್ಮಾಗೆ ಥಳಿಸಿದ್ದಾರೆ. ಪೊಲೀಸರ ಥಳಿತದಿಂದ ಆಘಾತಕ್ಕೊಳಗಾಗಿ ತೀವ್ರ ಗಾಯಗೊಂಡಿರುವ ರೇಷ್ಮಾ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ.

    ರೇಷ್ಮಾ ಕಳೆದ ಎಂಟು ವರ್ಷಗಳಿಂದ ದಾವಣಗೆರೆಯ ಅಹಮ್ಮದ ನಗರದ ಅಸದುಲ್ಲಾ ಸಾಬ್ ಎಂಬುವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಅಸುದುಲ್ಲಾ ಅವರ ಮನೆಯಲ್ಲಿ ಶುಕ್ರವಾರ ಚಿನ್ನಾಭರಣ ಕಳುವಾಗಿತ್ತು. ಅವರು ಈ ಬಗ್ಗೆ ಅಜಾದ್‍ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಆರಂಭಿಸಿದ್ದ ಎಎಸ್‍ಐ ಸಮೀಮ್ ಬಾನು ವಿಚಾರಣೆಗೆಂದು ಕರೆದುಕೊಂಡು ರೇಷ್ಮಾಳನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಸಮೀಮ್ ಅವರು ರೇಷ್ಮಾಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿದ್ದಾರೆ.

    ಆರೋಪಿ ರೇಷ್ಮಾ ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ, ಟಾರ್ಚರ್ ನೀಡಿದ್ದಾರೆ. ರೇಷ್ಮಾಳ ಕಾಲು, ತೊಡೆ, ದೇಹದ ವಿವಿಧ ಭಾಗಗಳಲ್ಲಿ ಬಾಸುಂಡೆಗಳು ಮೂಡಿವೆ. ಲಾಠಿ ಹೊಡೆತಕ್ಕೆ ರೇಷ್ಮಾಳ ಚರ್ಮ ಹಪ್ಪುಗಟ್ಟಿದಂತಾಗಿದೆ. ಮಹಿಳಾ ಎಎಸ್‍ಐ ಆರೋಪಿ ಮಹಿಳೆಯನ್ನು ಮನಬಂದಂತೆ ಥಳಿಸಿದ್ದು ಅಮಾನವೀಯ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

    ವಿಚಾರಣೆ ಬಳಿಕ ಇಂದು ಹೊರ ಬಂದ ರೇಷ್ಮಾ ಪೊಲೀಸ್ ದೌರ್ಜನ್ಯದಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿಹೋಗಿದ್ದಾಳೆ. ನೋವು ತಡೆಯಲಾರದೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಷ್ಟೇ ಅಲ್ಲದೆ ಈ ವಿಷಯವನ್ನು ಬಹಿರಂಗಪಡಿಸಿದರೆ ಮತ್ತೆ ಹೊಡೆಯುತ್ತೇವೆ ಎಂದು ಪೊಲೀಸು ಬೆದರಿಕೆ ಹಾಕಿದ್ದಾರೆ ಎಂದು ರೇಷ್ಮಾ ಸಂಬಂಧಿ ಆರೋಪಿಸಿದ್ದಾರೆ. ಪೊಲೀಸರ ಈ ದೌರ್ಜನ್ಯದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ರೇಷ್ಮಾ ಸಂಬಂಧಿಕರು ಎಚ್ಚರಿಸಿದ್ದಾರೆ.

  • ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ- ಐಸಿಯೂನಲ್ಲಿ ಪ್ರೇಯಸಿ

    ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ- ಐಸಿಯೂನಲ್ಲಿ ಪ್ರೇಯಸಿ

    – ಮನೆಯವರಿಂದ ಅತ್ಯಾಚಾರ ಆರೋಪ

    ಬಾಗಲಕೋಟೆ: ಪ್ರೀತಿ ವಿಷಯವಾಗಿ ಯುವತಿ ಮತ್ತು ಯುವಕನ ನಡುವೆ ವೈಮನಸ್ಸು ಉಂಟಾಗಿ, ಯುವತಿಯ ಮೇಲೆ ಮಾರಣಾಂತಿಕ ಹಲ್ಲೆಯಾಗಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕನಾಳ ಗ್ರಾಮದಲ್ಲಿ ನಡೆದಿದೆ.

    ರೇಣುಕಾ (24) ಹಲ್ಲೆಗೊಳಗಾದ ಯುವತಿ. ಪ್ರಿಯಕರ ಪ್ರವೀಣ್ ಹಲ್ಲೆ ಮಾಡಿದ್ದಾನೆ. ರೇಣುಕಾ ಹಾಗೂ ಪ್ರವೀಣ್ ಇಬ್ಬರು ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ 6 ತಿಂಗಳಿಂದ ಇಬ್ಬರ ಮಧ್ಯೆ ಬ್ರೇಕಪ್ ಆಗಿತ್ತು. ಈ ವಿಷಯವಾಗಿ ರೇಣುಕಾ ಹಾಗೂ ಪ್ರವೀಣ್ ನಡುವೆ ವೈಮನಸ್ಸು ಉಂಟಾಗಿತ್ತು. ಇಬ್ಬರ ನಡುವೆ ಸಂಬಂಧಗಳು ಹಾಳಾಗಿದ್ದು, ಇಬ್ಬರೂ ದೂರವಾಗಿದ್ದರು.

    ಶನಿವಾರ ರೇಣುಕಾ ಪ್ರೀತಿಯ ವಿಷಯವಾಗಿ ಮಾತನಾಡಲು ಪ್ರಿಯಕರ ಪ್ರವೀಣ್ ಮನೆಗೆ ತೆರಳಿದ್ದಳು. ಅಲ್ಲಿ ಇಬ್ಬರ ಮಧ್ಯೆ ವಾದ-ವಿವಾದ ಉಂಟಾಗಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಹಲ್ಲೆಯಿಂದ ರೇಣುಕಾ ತಲೆ, ಕಿವಿ ಭಾಗದಲ್ಲಿ ರಕ್ತಸ್ರಾವ ಉಂಟಾಗಿ, ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಗಾಬರಿಗೊಂಡ ಪ್ರವೀಣ್ ಹಾಗೂ ಮನೆಯವರು ರಾತ್ರೋರಾತ್ರಿ ರೇಣುಕಾಳನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

    ಹಲ್ಲೆಯಿಂದ ರೇಣುಕಾ ಸ್ಥಿತಿ ಗಂಭೀರವಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ರೇಣುಕಾಳ ಮನೆಯವರಿಗೆ ಗೊತ್ತಾಗಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಆಕೆಯ ಮನೆಯವರು, ಪ್ರವೀಣ್ ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆಕೆ ಒಪ್ಪದಿದ್ದಾಗ ಹಲ್ಲೆ ಮಾಡಿದ್ದಾನೆಂದು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಗೂಡುರು ಔಟ್‍ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುವುದಾಗಿ ರೇಣುಕಾ ಮನೆಯವರು ಹೇಳುತ್ತಿದ್ದಾರೆ. ಆದರೆ ಹಲ್ಲೆ ಮಾಡಿರುವ ಪ್ರವೀಣ್ ಹಾಗೂ ಮನೆಯವರು ಸಂಪರ್ಕಕ್ಕೆ ಸಿಗುತ್ತಿಲ್ಲ.

  • ನಡು ರಸ್ತೆಯಲ್ಲೇ ಯುವಕನಿಂದ ಪ್ರಿಯತಮೆ ಮೇಲೆ ಹಲ್ಲೆ!

    ನಡು ರಸ್ತೆಯಲ್ಲೇ ಯುವಕನಿಂದ ಪ್ರಿಯತಮೆ ಮೇಲೆ ಹಲ್ಲೆ!

    ಬೆಂಗಳೂರು: ನಡು ರಸ್ತೆಯಲ್ಲಿ ಯುವಕನೊಬ್ಬ ಪ್ರಿಯತಮೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.

    ಯುವಕ ಮತ್ತು ಯುವತಿ ಸ್ಕೂಟರಿನಲ್ಲಿ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಯುವತಿಯನ್ನು ಬೈಯುತ್ತಾ ಆಕೆಯ ಮೇಲೆ ಪ್ರಿಯಕರ ಹಲ್ಲೆ ನಡೆಸಿದ್ದಾನೆ. ನಡುರಸ್ತೆಯಲ್ಲೇ ಕೆಲ ಸಮಯ ಮಾತನಾಡುತ್ತಾ ನಿಂತಿದ್ದ ಯುವಕ ಏಕಾಏಕಿ ಮುನ್ನುಗ್ಗಿ ಹಲ್ಲೆ ನಡೆಸಿದ್ದಾನೆ. ಈ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ಸ್ಥಳೀಯರು ಕೂಡ ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಥಳೀಯ ಯುವಕ, ಇಬ್ಬರನ್ನು ಅಡ್ಡಹಾಕಿ ಪ್ರಶ್ನಿಸಿದ್ದಾನೆ. ನಡುರಸ್ತೆಯಲ್ಲಿ ಯುವತಿಯ ಮೇಲೆ ಹೇಗೆ ಹಲ್ಲೆ ನಡೆಸಿದೆ ಎಂದು ಪ್ರಶ್ನೆ ಮಾಡಿದ್ದಾನೆ. ಕೊನೆಗೆ ಯುವತಿಯೇ ಸ್ಥಳೀಯ ಯುವಕನಿಂದ ಪ್ರಿಯಕರನನ್ನ ಬಿಡಿಸಿದ್ದಾಳೆ. ಈ ವೇಳೆ ಕುಟುಂಬ ವಿಚಾರದಲ್ಲಿ ಮನಸ್ತಾಪವಾಗಿ ಹಲ್ಲೆ ನಡೆಸಿದೆ ತಪ್ಪಾಯ್ತು ಬಿಟ್ಟು ಬಿಡಿ ಎಂದು ಪ್ರಿಯಕರ ಕೇಳಿಕೊಂಡಿದ್ದಾನೆ.

    ಇಬ್ಬರ ಗಲಾಟೆಯ ವಿಚಾರವನ್ನು ಸ್ಥಳೀಯ ಯುವಕ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೀಟ್ ಪೊಲೀಸ್ರು ಪ್ರೇಮಿಗಳಿಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಈ ಬಗ್ಗೆ ಯಾರೂ ದೂರು ಕೊಡದ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ. ಅಲ್ಲದೇ ಯುವತಿ ಮೇಲೆ ಹಲ್ಲೆ ಮಾಡಿದ್ದನ್ನು,  ಅದೂ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ ಸ್ಥಳೀಯ ಯುವಕನ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

  • ಕುಡಿದ ಮತ್ತಿನಲ್ಲಿ ವ್ಯಕ್ತಿಗೆ ಥಳಿಸಿದ ಟೀಂ ಇಂಡಿಯಾ ಮಾಜಿ ಆಟಗಾರ

    ಕುಡಿದ ಮತ್ತಿನಲ್ಲಿ ವ್ಯಕ್ತಿಗೆ ಥಳಿಸಿದ ಟೀಂ ಇಂಡಿಯಾ ಮಾಜಿ ಆಟಗಾರ

    – 7 ವರ್ಷದ ಮಗುವಿನ ಮೇಲೂ ಹಲ್ಲೆ

    ಮೀರತ್: ಕುಡಿದ ಮತ್ತಿನಲ್ಲಿ ವ್ಯಕ್ತಿಯನ್ನು ಥಳಿಸಿ, ಅವರ 7 ವರ್ಷದ ಮಗನ ಮೇಲೂ ಹಲ್ಲೆ ಮಾಡಿದ ಆರೋಪವೊಂದು ಟೀಂ ಇಂಡಿಯಾ ಮಾಜಿ ಆಟಗಾರ ಪ್ರವೀಣ್ ಕುಮಾರ್ ವಿರುದ್ಧ ಕೇಳಿ ಬಂದಿದೆ.

    ಉತ್ತರ ಪ್ರದೇಶದ ಮೀರತ್‍ನಲ್ಲಿ ವಾಸಿಸುತ್ತಿರುವ ಪ್ರವೀಣ್ ಕುಮಾರ್ ಅವರ ಮೇಲೆ ನೆರೆಮನೆಯ ನಿವಾಸಿ ದೀಪಕ್ ಶರ್ಮಾ ಗಂಭೀರ ಆರೋಪವನ್ನು ಮಾಡಿದ್ದು, ಕುಡಿದ ಮತ್ತಿನಲ್ಲಿ ಪ್ರವೀಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ಘಟನೆ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದು, ಪ್ರಕರಣ ಕುರಿತು ಸ್ಥಳೀಯ ಎಸ್‍ಪಿ ವಿಚಾರಣೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪೊಲೀಸ್ ಮಾಹಿತಿ ಅನ್ವಯ, ಇಬ್ಬರೂ ನೆರೆಮನೆಯ ನಿವಾಸಿಗಳಾಗಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಪಡೆದ ಹೇಳಿಕೆಯ ಆಧಾರವಾಗಿ ನಾವು ಹೆಚ್ಚಿನ ವಿಚಾರಣೆಯನ್ನು ನಡೆಸಿದ್ದಾಗಿ ಎಸ್‍ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ದೀಪಕ್ ಶರ್ಮಾ ಪೊಲೀಸರ ವಿರುದ್ಧವೂ ಆರೋಪ ಮಾಡಿದ್ದು, ಘಟನೆಯ ಬಗ್ಗೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಪೊಲೀಸರು ನಿರಾಕರಿಸಿದ್ದರು. ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರಾದ ಕಾರಣ ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕ ಮಾಡಲು ಹೇಳಿದ್ದರು ಎಂದು ತಿಳಿಸಿದ್ದಾರೆ.

    ದೀಪಕ್ ಶರ್ಮಾ ಹೇಳಿಕೆ ಪ್ರಕಾರ, ‘ಸಂಜೆ 3 ಗಂಟೆಯ ಸಮಯದಲ್ಲಿ ನನ್ನ ಮಗನನ್ನು ಕರೆದುಕೊಂಡು ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದೆ. ಅಲ್ಲಿಗೆ ಬಂದ ಪ್ರವೀಣ್ ಕುಮಾರ್ ಮೊದಲು ಬಸ್ ಚಾಲಕನನ್ನು ನಿಂದಿಸಿದ್ದರು. ಆ ಬಳಿಕ ನನ್ನನ್ನು ನಿಂದಿಸಿದರು. ಆ ವೇಳೆ ಅವರು ಸ್ಥಿತಿ ಉತ್ತಮವಾಗಿರಲಿಲ್ಲ. ನನ್ನನ್ನು ಥಳಿಸಿ, ಕೈ ಮುರಿದರು. ಅಲ್ಲದೇ ನನ್ನ ಮಗನನ್ನು ಕೂಡ ತಳ್ಳಿದರು. ಇದರಿಂದ ಮಗನ ಬೆನ್ನಿಗೆ ಗಾಯವಾಗಿದೆ. ಆದರೆ ಈಗ ಪೊಲೀಸರು ಪ್ರಕರಣವನ್ನು ರಾಜಿ ಮಾಡಿಕೊಳ್ಳಲು ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ನನಗೆ ಕೊಲೆ ಬೆದರಿಕೆಗಳು ಕೂಡ ಬರುತ್ತಿದೆ ಎಂದಿದ್ದಾರೆ. ಪ್ರಕರಣದ ಬಗ್ಗೆ ಪ್ರವೀಣ್ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

    2007ರಲ್ಲಿ ಪಾಕ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಪ್ರವೀಣ್ ಕುಮಾರ್ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. 2018 ಅಕ್ಟೋಬರ್ ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. 68 ಏಕದಿನ ಪಂದ್ಯಗಳನ್ನು ಆಡಿರುವ ಪ್ರವೀಣ್ 77 ವಿಕೆಟ್ ಪಡೆದಿದ್ದು, 6 ಟೆಸ್ಟ್ ಪಂದ್ಯಗಳಿಂದ 27 ವಿಕೆಟ್ ಹಾಗೂ 10 ಟಿ20 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ.

  • ಕಂಬಕ್ಕೆ ಕಟ್ಟಿ ಥಳಿಸಿ, ನೀರು ಕೇಳಿದ್ದಕ್ಕೆ ಮೂತ್ರ ಕುಡಿಸಿದ್ರು- ವ್ಯಕ್ತಿ ಸಾವು

    ಕಂಬಕ್ಕೆ ಕಟ್ಟಿ ಥಳಿಸಿ, ನೀರು ಕೇಳಿದ್ದಕ್ಕೆ ಮೂತ್ರ ಕುಡಿಸಿದ್ರು- ವ್ಯಕ್ತಿ ಸಾವು

    ಚಂಡೀಗಢ: ತಮ್ಮೊಂದಿಗೆ ಗಲಾಟೆ ಮಾಡಿದ್ದಾನೆ ಎಂದು ಕಿಡಿಗೇಡಿಗಳು ದಲಿತ ವ್ಯಕ್ತಿಯೋರ್ವನನ್ನು ಕಂಬಕ್ಕೆ ಕಟ್ಟಿ ಥಳಿಸಿ, ಕುಡಿಯಲು ನೀರು ಕೇಳಿದಾಗ ಬಲವಂತವಾಗಿ ಮೂತ್ರ ಕುಡಿಸಿದ ಅಮಾನುಷ ಘಟನೆ ಪಂಜಾಬ್‍ನಲ್ಲಿ ನಡೆದಿದೆ. ತೀವ್ರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾನೆ.

    ನವೆಂಬರ್ 7ರಂದು ಪಂಜಾಬ್‍ನ ಸಂಗೂರ್‌ನಲ್ಲಿ ಈ ಘಟನೆ ನಡೆದಿತ್ತು. 37 ವರ್ಷದ ದಲಿತ ವ್ಯಕ್ತಿ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿತ್ತು. ಅಷ್ಟೇ ಅಲ್ಲದೆ ಆತನಿಗೆ ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು. ಗಂಭೀರ ಗಾಯಗೊಂಡಿದ್ದ ಸಂತ್ರಸ್ತನಿಗೆ ಚಂಡೀಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ 9 ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದಲಿತ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಚಂಗಲಿವಾಲಾ ಗ್ರಾಮದ ನಿವಾಸಿಯಾಗಿರುವ ಸಂತ್ರಸ್ತ ಹಾಗೂ ಗ್ರಾಮದ ರಿಂಕು, ಆತನ ಸ್ನೇಹಿತರೊಡನೆ ವಾಗ್ವಾದ ನಡೆದಿತ್ತು. ಈ ಗಲಾಟೆ ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಅಂತ್ಯಗೊಂಡಿತ್ತು. ಆದರೆ ಇದಾದ ಬಳಿಕ ಮಾತುಕತೆಗೆಂದು ರಿಂಕು ಸಂತ್ರಸ್ತನನ್ನು ತನ್ನ ಮನೆಗೆ ಕರೆಸಿಕೊಂಡಿದ್ದನು. ಈ ವೇಳೆ ಸಂತ್ರಸ್ತನ ಮೇಲೆ ನಾಲ್ವರು ಸೇರಿ ಹಲ್ಲೆ ನಡೆಸಿ, ಕಂಬಕ್ಕೆ ಕಟ್ಟಿದ್ದರು. ಆಗ ಬಾಯರಿಕೆಯಿಂದ ಸಂತ್ರಸ್ತ ನೀರು ಕೇಳಿದಾಗ ಬಲವಂತವಾಗಿ ಆತನಿಗೆ ರಿಂಕು ಮತ್ತು ಆತನೊಟ್ಟಿಗೆ ಇದ್ದವರು ಮೂತ್ರ ಕುಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳಾದ ರಿಂಕು, ಅಮರ್‍ಜೀತ್ ಸಿಂಗ್, ಲಕ್ಕಿ, ಬೀಟಾ ತಲೆಮರಿಸಿಕೊಂಡಿದ್ದು, ನಾಲ್ವರ ಮೇಲೂ ಸೆಕ್ಷನ್ 302 (ಕೊಲೆ) ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ರಾಜ್ಯದ ಪರಿಶಿಷ್ಟ ಜಾತಿ ಆಯೋಗ ಕೂಡ ಈ ಕುರಿತು ವಿವರ ಕೇಳಿದೆ ಎನ್ನಲಾಗಿದೆ.

  • ಮಹಿಳಾ ಅಧಿಕಾರಿ ಮೇಲೆ ಕುರ್ಚಿಯಿಂದ ಹಲ್ಲೆಗೈದ ವಿದ್ಯಾರ್ಥಿಗಳು- ವಿಡಿಯೋ

    ಮಹಿಳಾ ಅಧಿಕಾರಿ ಮೇಲೆ ಕುರ್ಚಿಯಿಂದ ಹಲ್ಲೆಗೈದ ವಿದ್ಯಾರ್ಥಿಗಳು- ವಿಡಿಯೋ

    ಲಕ್ನೋ: ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡಿರುತ್ತೇವೆ. ಆದರೆ ವಿದ್ಯಾರ್ಥಿಗಳೇ ಅಧಿಕಾರಿಯ ಮೇಲೆ ಕುರ್ಚಿಯಿಂದ ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿ ಜಿಲ್ಲೆಯ ಚಕ್ ಧೌರಹ್ರಾದ ಗಾಂಧಿ ಸೇವಾ ನಿಕೇತನ್ ಆಶ್ರಮದಲ್ಲಿ ನಡೆದಿದೆ.

    ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಯ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಆಶ್ರಮದ ಆಡಳಿತ ಮಂಡಳಿ ಆದೇಶದ ಮೇರೆಗೆ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ನಿಂದಿಸಿ, ಥಳಿಸಿದೆ ಎಂದು ಆರೋಪಿಸಲಾಗಿದೆ.

    ನಾನು ಗಾಂಧಿ ಸೇವಾ ನಿಕೇತನ್ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಸ್ಥೆಯ ವ್ಯವಸ್ಥಾಪಕರು ನನಗೆ ಹೊಡೆಯುವಂತೆ ಹಾಗೂ ನಿಂದಿಸುವಂತೆ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ. ಮಕ್ಕಳು ನನಗೆ ಕುರ್ಚಿಗಳಿಂದ ಹೊಡೆದು, ಕಪಾಳಮೋಕ್ಷ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ದೂರು ನೀಡುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ಮಮತಾ ದುಬೆ ಆರೋಪಿಸಿದ್ದಾರೆ.

    ಈ ಘಟನೆ ಆಶ್ರಮದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಶ್ರಮದ ಸಿಬ್ಬಂದಿ ಯಾಕೆ ಹೊಡೆಸುವ ಉದ್ದೇಶ ಹೊಂದಿದ್ದರು. ಆಶ್ರಮದ ವ್ಯವಸ್ಥಾಪಕರು ವಿದ್ಯಾರ್ಥಿಗಳನ್ನು ಏಕೆ ಕೆರಳಿಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಆಶ್ರಮದ ಆಡಳಿತ ಮಂಡಳಿ ಯಾಕೆ ಈ ರೀತಿ ಮಾಡುತ್ತಿದೆ ಎಂಬ ಚಿಂತೆ ನನ್ನನ್ನು ಕಾಡುತ್ತಿದೆ. ಎರಡು ದಿನಗಳ ಹಿಂದೆ ವಾಶ್ ರೂಂನ ಬಾಗಿಲು ಲಾಕ್ ಆಗಿತ್ತು. ಇದನ್ನೂ ಸಹ ವಿದ್ಯಾರ್ಥಿಗಳೇ ಮಾಡಿದ್ದರು ಎಂದು ದುಬೆ ಆತಂಕ ವ್ಯಕ್ತಪಡಿಸಿದ್ದಾರೆ.

    ವಾಶ್ ರೂಂನಲ್ಲಿ ಲಾಕ್ ಮಾಡಿದ್ದರ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮಕ್ಕಳು ಏನು ಬೇಕಾದರೂ ಮಾಡಬಹುದು ಎಂದರು. ಇದಾದ ಎರಡು ದಿನಗಳ ನಂತರ ನನ್ನನ್ನು ವಿದ್ಯಾರ್ಥಿಗಳು ಹೊಡೆದಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೂ ದೂರು ನೀಡಿದ್ದೇನೆ ಎಂದು ದುಬೆ ತಿಳಿಸಿದರು.

    ಈ ಹಿಂದೆ ಅನೇಕ ಬಾರಿ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ದುಬೆ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಯಾವುದೇ ಹೇಳಿಕೆ ನೀಡಿಲ್ಲ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಮನೆಯವರ ಮುಂದೆಯೇ ಅವಮಾನ – ಪ್ರೀತಿಸಿದ ಯುವಕ ಆತ್ಮಹತ್ಯೆ, ಯುವತಿ ಗಂಭೀರ

    ಮನೆಯವರ ಮುಂದೆಯೇ ಅವಮಾನ – ಪ್ರೀತಿಸಿದ ಯುವಕ ಆತ್ಮಹತ್ಯೆ, ಯುವತಿ ಗಂಭೀರ

    ತಿರುವನಂತಪುರಂ: ಪ್ರೀತಿ ವಿಚಾರವಾಗಿ ಕುಟುಂಬದ ಮುಂದೆಯೇ ಅವಮಾನ ಮಾಡಿದ್ದಕ್ಕೆ ಕೇರಳದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಂತ್ರಸ್ತನನ್ನು ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಮೂಲದ ಶಾಹೀರ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಮುಂದೆ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಅವಮಾನ ಮಾಡಿದ್ದಾರೆ ಎಂದು ನೊಂದುಕೊಂಡು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಶಾಹೀರ್ ಸ್ಥಳೀಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದು ಹುಡುಗಿಯರ ಸಂಬಂಧಿಕರಿಗೆ ತಿಳಿದಿದೆ. ಆಗ ಹುಡುಗಿಯ ಕಡೆಯವರು ಆತನನ್ನು ಸುತ್ತುವರಿದು ಯುವಕನ ಕುಟುಂಬದವರ ಮುಂದೆಯೇ ಆತನನ್ನು ಥಳಿಸಿದ್ದಾರೆ. ಅಲ್ಲದೆ ನಮ್ಮ ಕುಟುಂಬದ ಹುಡುಗಿಯನ್ನೇ ಪ್ರೀತಿಸಲು ಧೈರ್ಯ ಮಾಡಿದ್ದೀಯಾ ಎಂದು ಆತನ ಹೆತ್ತವರ ಮುಂದೆಯೇ ಹೊಡೆದಿದ್ದಾರೆ.

    ಈ ವೇಳೆ ಶಾಹೀರ್ ಸಹೋದರ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದಾಗ, ಹುಡುಗಿಯ ಸಂಬಂಧಿಕರು ಅವನನ್ನೂ ಹೊಡೆದಿದ್ದಾರೆ. ಶಾಹೀರ್ ಸಹೋದರನಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅವರ ಸಂಬಂಧದ ಕುರಿತು ಬಹಿರಂಗವಾಗಿದ್ದಕ್ಕೆ ಹಾಗೂ ಹಿಂಸಾಚಾರ ನಡೆದಿದ್ದನ್ನು ಸಹಿಸಲಾಗದೆ ಹುಡುಗಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾಳೆ. ಅವಳ ಸ್ಥಿತಿ ಸಹ ಗಂಭೀರವಾಗಿದೆ. ಅತ್ತ ಶಾಹೀರ್ ಸಹ ತನ್ನ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಕ್ಕಾಗಿ ನೋಂದುಕೊಂಡು ಪ್ರಾಣ ಬಿಡುವುದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ ಎಂದು ನಿರ್ಧರಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಅವನ ಸಾವಿನ ನಂತರ ಮಲಪ್ಪುರಂ ಪೊಲೀಸರು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಎಲ್ಲದರ ಮಧ್ಯೆ 22 ವರ್ಷದ ಯುವಕ ಮಾತ್ರ ಮಾಣ ಕಳೆದುಕೊಂಡಿದ್ದಾನೆ. ಐಪಿಸಿ ಸೆಕ್ಷನ್‍ನ ವಿವಿಧ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಪ್ರಸ್ತುತ ಮಾಹಿತಿ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಇವರೇನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.