ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರ ಮೇಲೆ ದಾಳಿಯಾದ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‍ಯುಗೆ ಭೇಟಿ ನೀಡಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಛಪಾಕ್ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದ ದೀಪಿಕಾ ಪಡುಕೋಣೆಯವರು, ಇಂದು ಸಂಜೆ ಸುಮಾರು 7.45 ಕ್ಕೆ ಜೆಎನ್‍ಯು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದರು. 10 ನಿಮಿಷಗಳ ಕಾಲ ಯೂನಿವರ್ಸಿಟಿಯಲ್ಲಿ ಇದ್ದ ದೀಪಿಕಾ, ಬಳಿಕ ಏನೂ ಪ್ರತಿಕ್ರಿಯೇ ನೀಡದೆ ವಾಪಸ್ ಆಗಿದ್ದಾರೆ.
https://twitter.com/filmesthete/status/1214556983786786817
ಕಳೆದ ಬಾನುವಾರ ಜೆಎನ್‍ಯು ವಿಶ್ವವಿದ್ಯಾಲಯದ ಕ್ಯಾಂಪಸ್‍ಗೆ ನುಗಿದ್ದ ಮುಸುಕು ದಾರಿಗಳು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶಿ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಾಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಘಟನೆಯಾದ ಬಳಿಕ ಬಹಳಷ್ಟು ಮಂದಿ ಬಾಲಿವುಡ್ ನಟ ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಹಲ್ಲೆಯನ್ನು ಖಂಡಿಸಿ, ವಿದ್ಯಾರ್ಥಿಗಳ ಪರ ನಿಂತಿದ್ದರು. ಈಗ ಛಪಾಕ್ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದ ದೀಪಿಕಾ, ವಿದ್ಯಾರ್ಥಿಗಳ ಒಗ್ಗಟ್ಟಿನ ಸಂಕೇತವಾದ ಕಪ್ಪು ಬಣ್ಣದ ಬಟ್ಟೆತೊಟ್ಟು ಯುನಿವರ್ಸಿಟಿಗೆ ಭೇಟಿ ನೀಡಿದ್ದಾರೆ. ತಮ್ಮ ಬೆಂಬಲಿಕ್ಕೆ ಬಂದ ಪದ್ಮಾವತಿಯನ್ನು ವಿದ್ಯಾರ್ಥಿಗಳು ಅಜಾದಿ ಎಂಬ ಘೋಷಣೆ ಕೂಗುವ ಮೂಲಕ ಬರಮಾಡಿಕೊಂಡಿದ್ದಾರೆ. ಜೆಎನ್‍ಯು ಗೆ ದೀಪಿಕಾ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಜೆಎನ್‍ಯುನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಖಂಡಿಸಿ ಸೋಮವಾರ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಾಲಿವುಡ್ ತಾರೆಗಳಾದ ತಾಪ್ಸಿ ಪನ್ನು, ಅನುರಾಗ್ ಕಶ್ಯಪ್, ಜೋಯಾ ಅಖ್ತರ್, ವಿಶಾಲ್ ಭರದ್ವಾಜ್, ಅನುಭವ್ ಸಿನ್ಹಾ, ರಿಚಾ ಚಾಧಾ ಮತ್ತು ಅಲಿ ಫಜಲ್ ಸೇರಿದಂತೆ ಬಾಲಿವುಡ್ ಗಣ್ಯರು ಭಾಗವಹಿಸಿದ್ದರು.
ಹಲ್ಲೆಗೊಳಗಾದ ಐಶಿ ಘೋಷ್ ಅವರು ಘಟನೆಯ ಬಗ್ಗೆ ಮಾತನಾಡಿ, ಮಾಸ್ಕ್ ಧರಿಸಿಕೊಂಡ ಬಂದಿದ್ದ ಗುಂಪು ನಮ್ಮ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದರು. ಫೀ ಹೆಚ್ಚಳ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಾದಿ ತಪ್ಪಿಸಲು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಪ್ರಯತ್ನಿಸುತ್ತಿದ್ದು, ಘಟನೆ ಹಿಂದೆ ಎಬಿವಿಪಿ ಕೈವಾಡವಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಇದಕ್ಕೆ ಪ್ರತ್ಯಾರೋಪ ಮಾಡಿದ್ದ ಎಬಿವಿಪಿ, ಘಟನೆಯಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ದಾಳಿ ಆಗಿದ್ದು, 25 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. 11 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಘಟನೆ ಹಿಂದೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕೈವಾಡ ಇದೆ ಎಂದು ಟ್ವೀಟ್ ಮಾಡಿತ್ತು.
ಆದರೆ ಇಂದು ಬೆಳಗ್ಗೆ ಜೆಎನ್‍ಯು ಕ್ಯಾಂಪಸ್ ನಲ್ಲಿ ನಡೆದ ಹಿಂಸಾಚಾರದ ಜವಾಬ್ದಾರಿಯನ್ನು `ಹಿಂದೂ ರಕ್ಷಾ ದಳ’ ಸಂಘಟನೆ ಹೊತ್ತುಕೊಂಡಿದೆ. ಸಂಘಟನೆಯ ಅಧ್ಯಕ್ಷ ಪಿಂಕಿ ಚೌಧರಿ ಸ್ವತಃ ಘಟನೆಯು ಜವಾಬ್ದಾರಿ ಹೊತ್ತುಕೊಂಡಿದ್ದು ಕ್ಯಾಂಪಸ್ ನಲ್ಲಿ ರಾಷ್ಟ್ರ ವಿರೋಧಿ ಚಟುವಟಿಗಳು ನಡೆಯುತ್ತಿದ್ದು ಅದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ.
ಸೋಮವಾರ ರಾತ್ರಿ ಘಟನೆಯ ಸಂಬಂಧ ಸೋಷಿಯಲ್ ಮಿಡಿಯಾಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಮಾತನಾಡಿರುವ ಪಿಂಕಿ ಚೌಧರಿ ಕ್ಯಾಂಪಸ್‍ನಲ್ಲಿ ನಡೆದ ಹಿಂಸಾಚಾರದ ಹಿಂದೆ ನಮ್ಮ ಸಂಘಟನೆಯ ಪಾತ್ರವಿದೆ. ನಮ್ಮ ಸಂಘಟನೆಯ ಸದಸ್ಯರು ಈ ಘಟನೆಯಲ್ಲಿ ಭಾಗಿಯಾಗಿದ್ದು ನಾವು ಈ ದಾಳಿಯನ್ನು ಒಪ್ಪಿಕೊಳುತ್ತೇವೆ ಎಂದು ಹೇಳಿದ್ದಾರೆ.