Tag: ಹಲ್ಲೆ

  • 22 ವರ್ಷದ ಹಿಂದೆಯೇ ಪೊಲೀಸರನ್ನು ಓಡಾಡಿಸಿಕೊಂಡು ಹೊಡೆದಿತ್ತು ದುಬೆ ಫ್ಯಾಮಿಲಿ

    22 ವರ್ಷದ ಹಿಂದೆಯೇ ಪೊಲೀಸರನ್ನು ಓಡಾಡಿಸಿಕೊಂಡು ಹೊಡೆದಿತ್ತು ದುಬೆ ಫ್ಯಾಮಿಲಿ

    – 1998ರಲ್ಲಿ ನಡೆದ ಭಯಾನಕ ಘಟನೆ ತನಿಖೆ ವೇಳೆ ಬಯಲು

    ಲಕ್ನೋ: ಮೃತ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಕುಟುಂಬ 22 ವರ್ಷದ ಹಿಂದೆಯೇ ಪೊಲೀಸರನ್ನು ಅಟ್ಟಾಡಿಸಿಕೊಂಡು ಹೊಡೆದಿತ್ತು ಎಂಬ ಭಯಾನಕ ಸುದ್ದಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಹೌದು ಎಂಟು ಪೊಲೀಸರನ್ನು ನರಬಲಿ ಪಡೆದಿದ್ದ ವಿಕಾಸ್ ದುಬೆ, ಈ ಹಿಂದೆಯೂ ಕೂಡ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಈ ಹಿಂದೆ ಕೂಡ ದುಬೆಯನ್ನು ಅರೆಸ್ಟ್ ಮಾಡಲು ಬಿಕ್ರು ಗ್ರಾಮಕ್ಕೆ ಹೋಗಿದ್ದ ಪೊಲೀಸರನ್ನು ದುಬೆ ಕುಟುಂಬ ಸೇರಿಕೊಂಡು ಹೊಡೆದು ಅಲ್ಲಿಂದ ಓಡಿಸಿತ್ತು. ಅಂದು ಯಾವ ಪೊಲೀಸ್ ಮೃತಪಟ್ಟಿರಲಿಲ್ಲ.

    1998ರಲ್ಲಿ ಕೊಲೆ ಅಪರಾಧದ ಮೇಲೆ ಬೇಕಾಗಿದ್ದ ವಿಕಾಸ್ ದುಬೆ ಮತ್ತು ಆತನ ಸಹೋದರ ದೀಪು ದುಬೆಯನ್ನು ಅರೆಸ್ಟ್ ಮಾಡಲು ಪೊಲೀಸರು ಅವರ ಗ್ರಾಮಕ್ಕೆ ತೆರೆಳಿದ್ದರು. ಈ ವೇಳೆ ಆಯುಧಗಳ ಸಮೇತ ಬಂದು ರಸ್ತೆಯನ್ನು ಬ್ಲಾಕ್ ಮಾಡಿದ್ದ ದುಬೆ ಕುಟುಂಬ, ಪೊಲೀಸರನ್ನು ಅಟ್ಟಾಡಿಸಿಕೊಂಡು ಹೊಡೆದಿತ್ತು. ಅಂದು ಕಡಿಮೆ ಪೊಲೀಸ್ ಸಿಬ್ಬಂದಿ ಇದ್ದ ಕಾರಣ ಪೊಲೀಸರು ತಪ್ಪಿಸಿಕೊಂಡು ಬಂದಿದ್ದರು. ಅಂದು ಕೂಡ ವಿಕಾಸ್ ದುಬೆ ತಪ್ಪಿಸಿಕೊಂಡಿದ್ದ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.

    ದುಬೆ ಎನ್‍ಕೌಂಟರ್:
    ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.

    ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್‍ಗೆ ಬಲಿಯಾಗಿದ್ದ.

  • ಮಾಸ್ಕ್ ಧರಿಸಿ ಎಂದಿದ್ದೇ ತಪ್ಪಾಯ್ತು- ರಾಡ್‍ನಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ ಅಧಿಕಾರಿ

    ಮಾಸ್ಕ್ ಧರಿಸಿ ಎಂದಿದ್ದೇ ತಪ್ಪಾಯ್ತು- ರಾಡ್‍ನಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ ಅಧಿಕಾರಿ

    ಹೈದರಾಬಾದ್: ಮಾಸ್ಕ್ ಧರಿಸಿ ಎಂದು ಹೇಳಿದ ಕಾರಣಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಸರ್ಕಾರಿ ಅಧಿಕಾರಿ ರಾಡ್‍ನಿಂದ ಹಲ್ಲೆ ನಡೆಸಿದ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಪಟ್ಟಣದಲ್ಲಿ ನಡೆದಿದೆ.

    ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಸದ್ಯ ಪೊಲೀಸರು ಅಧಿಕಾರಿ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಆರೋಪಿಯನ್ನು ಸಿ ಭಾಸ್ಕರ್ ಎಂದು ಗುರುತಿಸಲಾಗಿದ್ದು, ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಹೋಟೆಲ್‍ನಲ್ಲಿ ಉಪ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮಾನ ಹಾನಿ), 355, 324 (ಶಸ್ತ್ರಾಸ್ತ್ರ ಬಳಿಸಿ ಗಾಯಗೊಳಿಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.

    ಮಂಗಳವಾರ ಘಟನೆ ನಡೆದಿದ್ದು, ಕೋವಿಡ್-19 ನಿಯಮಗಳ ಪಾಲನೆ ಮಾಡಲು ಅಧಿಕಾರಿಗೆ ಮಾಸ್ಕ್ ಧರಿಸುವಂತೆ ಮಹಿಳೆ ಹೇಳಿದ್ದರು. ಇಷ್ಟಕ್ಕೇ ಆಕ್ರೋಶಗೊಂಡ ಅಧಿಕಾರಿ ನೇರ ಹೋಟೆಲ್ ಒಳಗೆ ತೆರಳಿ ಮಹಿಳೆಯ ಮೇಲೆ ನಡೆಸಿ ನಿಂಧಿಸಿದ್ದಾನೆ. ಅಲ್ಲದೇ ಸ್ಥಳದಲ್ಲೇ ಇದ್ದ ರಾಡ್‍ನಿಂದ ಮಾರಣಾಂತಿಕ ದಾಳಿಯನ್ನು ನಡೆಸಿದ್ದಾನೆ. ಘಟನೆಯ ಪೂರ್ಣ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರು ಅಧಿಕಾರಿಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ಘಟನೆಯಲ್ಲಿ ಗಾಯಗೊಂಡಿರುವ 43 ವರ್ಷದ ಮಹಿಳೆ ಕೂರ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿ ಭಾಸ್ಕರ್ ಮಾಸ್ಕ್ ಧರಿಸದೆ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಮಹಿಳೆ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ.

    ಘಟನೆ ಕುರಿತು ಆಂಧ್ರ ಪ್ರದೇಶ ಡಿಸಿಪಿ ಗೌತಮ್ ಸ್ವಾಂಗ್ ಅವರು ದಿಶಾ ಪೊಲೀಸ್ ಠಾಣಾ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಪ್ರರಕಣ ತನಿಖೆ ನಡೆಸಿ ಒಂದು ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಸೂಚನೆ ನೀಡಿದ್ದಾರೆ. ಮಹಿಳೆಯ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ನೆಲ್ಲೂರು ಘಟನೆಯನ್ನು ಖಂಡಿಸುತ್ತೇವೆ. ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಆರೋಪಿ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

  • ನಿನ್ನದು ಅತಿಯಾಯ್ತು, ದೌರ್ಜನ್ಯ ಮಾಡ್ತಿದ್ದೀಯಾ?- ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ

    ನಿನ್ನದು ಅತಿಯಾಯ್ತು, ದೌರ್ಜನ್ಯ ಮಾಡ್ತಿದ್ದೀಯಾ?- ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ

    ಮಂಡ್ಯ: ಕ್ವಾರಂಟೈನ್ ಮುಗಿಸಿ ಬಂದವರಿಗೆ ಬುದ್ಧಿ ಹೇಳಿದ್ದಕ್ಕೆ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಲಾಗಿದೆ.

    ಆಶಾ ಕಾರ್ಯಕರ್ತೆ ಕೆ.ವೈ ಶೋಭಾ ಅವರ ಮೇಲೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ಹಲ್ಲೆ ನಡೆದಿದೆ. ಅದೇ ಗ್ರಾಮದ ಮಂಜೇಗೌಡ, ರುದ್ರೇಶ, ಪ್ರಿಯಾಂಕಾ, ಗೀತಾ ಮತ್ತು ನಿಖಿಲ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ.

    ಹಲ್ಲೆ ಆರೋಪ ಎದುರಿಸುತ್ತಿರುವ ನಾಲ್ವರು ಕ್ವಾರಂಟೈನ್ ನಲ್ಲಿದ್ದು ಬಿಡುಗಡೆಯಾಗಿ ಕೊಡಗಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಶೋಭಾ ತಿಳುವಳಿಕೆ ನೀಡಲು ಹೋಗಿದ್ದಾರೆ. ಅಷ್ಟಕ್ಕೆ ಕೋಪಗೊಂಡ ನಾಲ್ವರು ನಿನ್ನದು ಅತಿಯಾಯ್ತು. ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದೀಯಾ, ಮಾನಸಿಕ ಹಿಂಸೆ, ಕಿರುಕುಳ ನೀಡ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂಧಿಸಿದಲ್ಲದೇ ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಶೋಭಾಗೆ ಕೆ.ಆರ್ ಪೇಟೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕೆ.ಆರ್ ಪೇಟೆ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಆತ್ಮಹತ್ಯೆ

    ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಆತ್ಮಹತ್ಯೆ

    ಬೆಂಗಳೂರು: ನಗರದ ವಿಶಾಲ್ ಮಾರ್ಟ್ ಬಳಿ ಇಂದು ಬೆಳಗ್ಗೆ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಯುವತಿ ನಿತ್ಯಶ್ರೀ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಗಿರೀಶ್ ತಾವರೆಕೆರೆ ವ್ಯಾಪ್ತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭಿಸಿದೆ. ಮದುವೆ ನಿರಾಕರಿಸಿದ್ದ ಕಾರಣಕ್ಕೆ ಆರೋಪಿ ಗಿರೀಶ್ ಯುವತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಕೂಡಲೇ ಪ್ರಕರಣ ತನಿಖೆ ಮುಂದಾದ ಪೊಲೀಸರಿಗೆ ಆರೋಪಿ ಕೂಡ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಕುರಿತು ಅನುಮಾನ ಮೂಡಿತ್ತು. ಆದ್ದರಿಂದ ಪೊಲೀಸರು ಆರೋಪಿಯ ಪತ್ತೆಗೆ ತ್ವರಿತ ಕಾರ್ಯಾಚರಣೆ ನಡೆಸಿದ್ದರು.

    ತಾವರೆಕರೆ ಬಳಿಯ ತೋಪಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಹಿತಿ ಸ್ಥಳೀಯ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು, ಮೃತ ಯುವಕ ಗಿರೀಶ್ ಎಂದು ಖಚಿತ ಪಡಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಗಿರೀಶ್ ಘಟನೆಯಲ್ಲಿ ಆಕೆ ಸಾವನ್ನಪ್ಪಿರುತ್ತಾಳೆ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು, ಈ ಅನುಮಾನ ಸದ್ಯ ನಿಜವಾಗಿದೆ.

    ಏನಿದು ಘಟನೆ?
    ಗಿರೀಶ್ ಮತ್ತು ನಿತ್ಯಶ್ರೀ ಮಂಡ್ಯದಲ್ಲಿ ಕಾಲೇಜು ವ್ಯಾಸಂಗ ಮಾಡುವ ವೇಳೆ ಪ್ರೀತಿ ಮಾಡುತ್ತಿದ್ದರು. ನಂತರ ಓದು ಮಗಿದ ಮೇಲೆ ನಿತ್ಯಶ್ರೀ ಮಂಡ್ಯದಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು. ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ವಾಸವಿದ್ದ ನಿತ್ಯಶ್ರೀ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಗಿರೀಶ್ ಖಾಸಗಿ ಆಸ್ಪತ್ರೆಯ ಸೆಕ್ಯೂರಿಟಿ ಸೂಪರ್ ವೈಸರ್ ಆಗಿದ್ದು, ಕಳೆದ ಕೆಲವು ತಿಂಗಳಿಂದ ಇಬ್ಬರ ನಡುವೆ ಬಿನ್ನಾಭಿಪ್ರಾಯ ಉಂಟಾಗಿತ್ತು.

    ಈ ಹಿಂದೆ ಇಬ್ಬರ ಪ್ರೀತಿಯ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ರಾಜಿ ಮಾಡಿಕೊಂಡು ಸುಮ್ಮನಾಗಿರುವುದಾಗಿ ಇಬ್ಬರು ಹೇಳಿದ್ದರು. ಆದರೆ ಈ ನಡುವೆ ಮತ್ತೆ ಗಿರೀಶ್ ನಿತ್ಯಶ್ರೀಗೆ ಕಾಟಕೊಡುತ್ತಿದ್ದ. ಈ ಕಾರಣದಿಂದಲೇ ನಿತ್ಯಶ್ರೀಗೆ ಆಕೆಯ ಮನೆಯವರು ಮುಂದಿನ ಜೂನ್ ತಿಂಗಳಲ್ಲಿ ಮದುವೆ ಮಾಡಲು ತಯಾರಿ ನಡೆಸಿದ್ದರು. ಇದನ್ನು ತಿಳಿದ ಗಿರೀಶ್ ಇಂದು ಯುವತಿ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಕೆಲಸಕ್ಕೆ ರಾಜೀನಾಮೆ ನೀಡಲು ತೆರಳಿದ್ದ ವೇಳೆ ಮಂಡ್ಯದಿಂದ ಬಂದು ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿರುವ ನಿತ್ಯಶ್ರೀ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

  • ಹಾಸನದಲ್ಲಿ ಕೊರೊನಾ ಭೀತಿ- ಸಾಮಾಜಿಕ ಅಂತರ ಮರೆತು ಗ್ರಾಮ ಪಂಚಾಯಿತಿಯಲ್ಲಿ ಗಲಾಟೆ

    ಹಾಸನದಲ್ಲಿ ಕೊರೊನಾ ಭೀತಿ- ಸಾಮಾಜಿಕ ಅಂತರ ಮರೆತು ಗ್ರಾಮ ಪಂಚಾಯಿತಿಯಲ್ಲಿ ಗಲಾಟೆ

    ಹಾಸನ: ಹಾಸನದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಚೇರಿಯೊಳಗೆ ಜನಪ್ರತಿಗಳು, ಅಧಿಕಾರಿಗಳ ಜೊತೆ ಸಾರ್ವಜನಿಕರು ವಾಕ್ಸಮರ ನಡೆಸಿ ಪರಸ್ಪರ ಹಲ್ಲೆ ನಡೆಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ, ಕೆಂಬಾಳು ಗ್ರಾಮದಲ್ಲಿ ಘಟನೆ ನಡೆದಿದ್ದು, ಕೆಂಬಾಳು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಿಂದ ಶುಲ್ಕ ವಿಧಿಸುವ ಸಲುವಾಗಿ ತೀರ್ಮಾನ ತೆಗೆದುಕೊಳ್ಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಇದಕ್ಕೆ ಅಪಸ್ವರ ವ್ಯಕ್ತಪಡಿಸಿದ ಅಂಗಡಿ ಮಾಲೀಕರು, ಸ್ಥಳೀಯರು ಪಂಚಾಯಿತಿಯಲ್ಲಿ ಈಗಾಗಲೇ ಅಭಿವೃದ್ಧಿ ಹೆಸರಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ.

    ಈ ವೇಳೆ ಗ್ರಾಮಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷನ ವಿರುದ್ಧ ಸಭೆಯಲ್ಲಿ ಸೇರಿದ್ದವರು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ನಡೆದು ಪರಸ್ಪರ ಹಲ್ಲೆ ಕೂಡ ನಡೆಸಿ, ಕಿತ್ತಾಡಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನುಗ್ಗೇಹಳ್ಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

  • ಕೊಡಗಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನ

    ಕೊಡಗಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಯತ್ನ

    ಮಡಿಕೇರಿ: ಕೊರೊನಾ ವಿರುದ್ಧದ ಸಮರ ಸೈನಿಕರೆಂದು ಹೆಸರಾಗಿರುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲು ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಾಪೋಕ್ಲುವಿನಲ್ಲಿ ನಡೆದಿದೆ.

    ಆಶಾ ಕಾರ್ಯಕರ್ತೆ ಲತಾ ಮತ್ತು ಕಿರಿಯ ಆರೋಗ್ಯ ಸಹಾಯಕಿ ಜಲಜಾಕ್ಷಿ ಅವರು, ಮಾಹಿತಿ ಪಡೆಯಲೆಂದು ನಾಪೋಕ್ಲು ಬಳಿಯ ನಿವೃತ್ತ ಯೋಧ ಬೋಪಯ್ಯ ಮನೆಗೆ ತೆರಳಿದ ಸಂದರ್ಭ ಘಟನೆ ನಡೆದಿದ್ದು, ಆಶಾ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಈ ಸಂಬಂಧ ಆಶಾ ಕಾರ್ಯಕರ್ತರು ಗ್ರಾಮದ ಬೋಪಯ್ಯ ಎಂಬುವವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕೊರೊನಾ ಸಂಬಂಧಿತ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಅವಿರತ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಮುಂದಾದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ನಾಪೋಕ್ಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಮ್ಮ ಪಕ್ಷದ ಎಂಎಲ್‍ಸಿಯನ್ನು ಸಮರ್ಥಿಸಿಕೊಂಡ ಮಾಜಿ ಎಂಪಿ ಶಿವರಾಮೇಗೌಡ

    ತಮ್ಮ ಪಕ್ಷದ ಎಂಎಲ್‍ಸಿಯನ್ನು ಸಮರ್ಥಿಸಿಕೊಂಡ ಮಾಜಿ ಎಂಪಿ ಶಿವರಾಮೇಗೌಡ

    – ವಸತಿ ಪ್ರದೇಶದಲ್ಲಿ ಟೆಸ್ಟ್ ಮಾಡುವುದು ತಪ್ಪು

    ಮಂಡ್ಯ: ವಸತಿ ಪ್ರದೇಶದಲ್ಲಿ ಕೊರೊನಾ ಟೆಸ್ಟ್ ಮಾಡುವುದು ತಪ್ಪು ಎಂದು ಹೇಳುವ ಮೂಲಕ ಮಾಜಿ ಸಂಸದ ಶಿವರಾಮೇಗೌಡ ತಮ್ಮ ಪಕ್ಷದ ಎಂಎಲ್‍ಸಿ ಶಿವರಾಮೇಗೌಡರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಮಂಡ್ಯದಲ್ಲಿ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಪತ್ರಕರ್ತರ ಮೇಲೆ ಮಾಡಿದ ಹಲ್ಲೆಯ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಶಿವರಾಮೇಗೌಡ, ಮಾಧ್ಯಮ ಮಿತ್ರರ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಅದನ್ನು ನಾನು ಖಂಡಿಸುತ್ತೇನೆ. ಆದರೆ ವಸತಿ ಪ್ರದೇಶದ ಮಧ್ಯದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಮಾಡಲು ಅಧಿಕಾರಿಗಳು ಅನುಮತಿ ನೀಡಿದ್ದು ಎಷ್ಟು ಸರಿ? ಅಂತಹ ಅಧಿಕಾರಿಗಳುನ್ನು ಅಮಾನತು ಮಾಡಬೇಕು ಎಂದರು.

    ಕೊರೊನಾ ವಾರಿಯರ್ಸ್‍ಗೆ ಪೊಲೀಸರಿಗೆ ಮತ್ತು ಪತ್ರಕರ್ತರಿಗೆ ಕೊರೊನಾ ಟೆಸ್ಟ್ ಮಾಡಬೇಡಿ ಎಂದು ಹೇಳಿಲ್ಲ. ಅವರ ಆರೋಗ್ಯ ತಪಾಸಣೆಯಾಗಬೇಕು. ಆದರೆ ಅದನ್ನು ವಸತಿ ಪ್ರದೇಶದ ಮಧ್ಯೆ ಇರುವ ಭವನದಲ್ಲಿ ಮಾಡಿದರೆ, ಜನರು ಸಾಮಾನ್ಯವಾಗಿಯೇ ಭಯಪಡುತ್ತಾರೆ. ಜೊತೆಗೆ ಶ್ರೀಕಂಠೇಗೌಡ ಅವರ ಮನೆಯೂ ಅದೇ ಪ್ರದೇಶದಲ್ಲಿ ಇರುವ ಕಾರಣ ಅವರು ಅದನ್ನು ಕೇಳಲು ಬಂದಿದ್ದಾರೆ ಅಷ್ಟೇ ಎಂದು ಶಿವರಾಮೇಗೌಡ ಹೇಳಿದ್ದಾರೆ.

    ನಾನು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇನೆ ಅಲ್ಲಿ ಕೊರೊನಾ ಪರೀಕ್ಷೆ ಮಾಡಲು ಅನುಮತಿ ಕೊಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು. ಈ ಕೊರೊನಾ ಪರೀಕ್ಷೆಯನ್ನು ಊರಿನಿಂದ ಹೊರಗೆ ಹಲವಾರು ಕಟ್ಟಡಗಳು ಇವೆ ಅಲ್ಲಿ ಮಾಡಬೇಕು. ಅದನ್ನು ಬಿಟ್ಟು ಊರ ಒಳಗೆ ಯಾಕೆ ಮಾಡಬೇಕು. ಅಲ್ಲಿನ ಸ್ಥಳೀಯ ನಿವಾಸಿಗಳು ಹೆದರಿಕೊಂಡು ನನಗೆ 50 ಜನ ಕರೆ ಮಾಡಿದ್ದರು. ಕೆಲ ಸ್ಥಳೀಯ ಮಟ್ಟದ ಅಧಿಕಾರಿಗಳ ಮಾತನನ್ನು ಸರ್ಕಾರ ಕೇಳಬಾರದು ಎಂದು ಸಮರ್ಥನೆ ಮಾಡಿಕೊಂಡರು.

    ನಡೆದಿದ್ದೇನು?
    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್-19 ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನಸಭಾ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಖ್ಯಾತೆ ತೆಗೆದಿದ್ದಾರೆ. ಅಲ್ಲದೆ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಜಗಳ ಮಾಡಿದ್ದಾರೆ. ಇದೇ ವೇಳೆ ಕೆಟಿಎಸ್ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ರೂಲ್ಸ್ ಬ್ರೇಕ್ ಮಾಡಿ ಪೊಲೀಸರ ಮೇಲೆ ಪುಂಡರಿಂದ ಹಲ್ಲೆ

    ರೂಲ್ಸ್ ಬ್ರೇಕ್ ಮಾಡಿ ಪೊಲೀಸರ ಮೇಲೆ ಪುಂಡರಿಂದ ಹಲ್ಲೆ

    ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಇದುವರೆಗೂ ಕಾಲಿಡದಿದ್ದರೂ ಗ್ರೀನ್ ಝೋನ್‍ನಲ್ಲಿರುವ ರಾಯಚೂರಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿದೆ.

    ನಗರ, ಪಟ್ಟಣ ಪ್ರದೇಶಗಳಲ್ಲಿ ಬಡಾವಣೆಯಿಂದ ಬಡಾವಣೆಗೆ ತೆರಳದಂತೆ ಸೀಲ್ ಮಾಡಲಾಗಿದೆ. ಇದರಿಂದ ರೋಸಿಹೋದ ಕೆಲ ಪುಂಡರು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿವೆ. ಕೊರೊನಾ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆಗಳು ಹೆಚ್ಚಾಗಿದ್ದು ಸಿಂಧನೂರು ಗ್ರಾಮೀಣ ಠಾಣೆ, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಶೇ.50ರಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದು, ಮದ್ಯದಂಗಡಿ ಹಾಗೂ ಶಾಲೆಗಳ ಕಂಪ್ಯೂಟರ್ ಕಳ್ಳತನ ಇಸ್ಪೇಟ್ ಪ್ರಕರಣ ಹೆಚ್ಚಾಗಿವೆ. 50ಕ್ಕೂ ಹೆಚ್ಚು ತಾಂಡಾಗಳಲ್ಲಿ ಕಳ್ಳಭಟ್ಟಿ ದಂಧೆ ನಡೆದಿದ್ದು 120 ಪ್ರಕರಣ ದಾಖಲಾಗಿವೆ. ಜಿಲ್ಲೆಯಲ್ಲಿ 20 ಸೆಕ್ಟರ್ ಮಾಡಲಾಗಿದ್ದು ಪೊಲೀಸರು ನಿರಂತರ ಲಾಕ್‍ಡೌನ್ ಕರ್ತವ್ಯದಲ್ಲಿದ್ದಾರೆ. ಸದ್ಯ ಲಾಕ್‍ಡೌನ್ ನಲ್ಲಿ ಕೊಂಚ ರಿಲೀಫ್ ನೀಡಲಾಗಿದೆ. ಕಾರ್ಖಾನೆ, ಕೈಗಾರಿಕೆಗೆ ಬೇರೆಡೆಯಿಂದ ಕೆಲಸಗಾರರು ಬರುವುದಕ್ಕೆ ಅನುಮತಿಯಿಲ್ಲ. ಸ್ಥಳೀಯ ಹೆಚ್ಚಿನ ಕಾರ್ಮಿಕರು ಬೇಕಿದ್ದರೆ ಸಾಮಾಜಿಕ ಅಂತರ ಕಾಪಾಡಬೇಕು, ಕಡಿಮೆ ಜನರನ್ನು ವಾಹನಗಳಲ್ಲಿ ಕರೆದುಕೊಂಡು ಬರಬೇಕು ಎಂದು ಎಸ್‍ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

  • ಬುದ್ಧಿ ಹೇಳಿದ್ದಕ್ಕೆ ಪೊಲೀಸರ ಮೇಲೆ ಯೋಧನಿಂದ ಹಲ್ಲೆ

    ಬುದ್ಧಿ ಹೇಳಿದ್ದಕ್ಕೆ ಪೊಲೀಸರ ಮೇಲೆ ಯೋಧನಿಂದ ಹಲ್ಲೆ

    ಚಿಕ್ಕೋಡಿ: ಮಾಸ್ಕ್ ಹಾಕಿಕೊಳ್ಳಿ ಹಾಗೇ ಮನೆ ಬಿಟ್ಟು ಹೊರಗಡೆ ತಿರುಗಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರ ಮೇಲೆ ಸಿ.ಆರ್.ಪಿ.ಎಫ್ ಯೋಧ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

    ಎಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಹೊರಗಡೆ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ತಿರಾಗುಡುತ್ತಿದ್ದ ಸಿ.ಆರ್.ಪಿ.ಎಫ್ ಯೋಧ ಸಚಿನ್ ಸಾವಂತ್ ನಿಗೆ ಪೊಲೀಸರು ಮನೆಯಿಂದ ಹೊರಗೆ ತಿರುಗಾಡಬೇಡಿ. ಮಾಸ್ಕ್ ಧರಿಸಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಈ ವಿಚಾರಕ್ಕೆ ಪೊಲೀಸರು ಹಾಗೂ ಯೋಧ ಸಚಿನ್ ನಡುವೆ ವಾಗ್ವಾದ ನಡೆದಿದೆ.

    ಈ ವೇಳೆ ಮಾತುಕತೆ ಕೈಮೀರಿ ನನಗೆ ಬುದ್ಧಿವಾದ ಹೇಳುತ್ತೀರಾ ಎಂದು ಏಕಾಏಕಿ ಯೋಧ ಸಚಿನ್ ಪೊಲೀಸರ ಬಟ್ಟೆ ಹಿಡಿದು ಎಳೆದಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಪೊಲೀಸರು ಕೂಡ ಲಾಠಿ ರುಚಿ ತೋರಿಸಿ ಯೋಧನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ- ನಾಪತ್ತೆಯಾಗಿದ್ದ ಆರೋಪಿ ಅರೆಸ್ಟ್

    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ- ನಾಪತ್ತೆಯಾಗಿದ್ದ ಆರೋಪಿ ಅರೆಸ್ಟ್

    ಚಿಕ್ಕಮಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ಮೇಲಿನ ಹಲ್ಲೆ ಪ್ರಕರಣ ಹಸಿ ಇರುವಾಗಲೇ ಕಾಫಿನಾಡಲ್ಲೂ ಅಂತಹದ್ದೊಂದು ಪ್ರಕರಣ ನಡೆದಿದೆ. ರಸ್ತೆ ಬದಿಯಲ್ಲಿ ಕಸದ ಆಟೋ ನಿಲ್ಲಿಸಿದ್ದರು ಎಂಬ ಕಾರಣಕ್ಕೆ ಏಕಾಏಕಿ ಮಹಿಳೆ ಹಾಗೂ ಪುರುಷ ಪೌರಕಾರ್ಮಿಕರ ಮೇಲೆ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ನಗರದ ಉಪ್ಪಳ್ಳಿಯ ಮಸೀದಿ ಸಮೀಪದ ತಮೀಮ್ ಬಂಧಿತ. ಆಟೋದಲ್ಲಿದ್ದ ಮಂಜುನಾಥ್, ಯೇಸು ಹಾಗೂ ಮಹಿಳಾ ಕಾರ್ಮಿಕರ ಮೇಲೂ ತಮೀಮ್ ಹಲ್ಲೆಗೈದಿದ್ದು, ಯೇಸು ಅವರ ಶರ್ಟ್ ಹರಿದು ಹಾಕಿದ್ದ.

    ಪೌರ ಕಾರ್ಮಿಕರು ನಗರದ ಉಪ್ಪಳ್ಳಿಯ ಮಸೀದಿ ಬಳಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾಗ, ರಸ್ತೆ ಮಧ್ಯೆ ಆಟೋ ನಿಲ್ಲಿಸಿದ್ದರು. ಈ ವೇಳೆ ತಮೀಮ್ ರಸ್ತೆ ಮಧ್ಯೆ ಆಟೋ ನಿಲ್ಲಿಸ್ತಿರಾ, ನಿಮ್ಮದೆ ನಡೆಯಬೇಕು, ನೀವು ಹೇಳಿದ್ದೆಲ್ಲಾ ಕೇಳಲು ಆಗೋದಿಲ್ಲ ಎಂದು ಹಲ್ಲೆ ಮಾಡಿದ್ದ.

    ನನ್ನನ್ನೂ ದೂಡಿ ಹಲ್ಲೆಗೆ ಯತ್ನಿಸಿದ್ದ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಪೌರ ಕಾರ್ಮಿಕ ಮಂಜುನಾಥ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಯುತ್ತಿದ್ದಂತೆ ಪೌರ ಕಾರ್ಮಿಕರೆಲ್ಲರೂ ಆಟೋ ಸಮೇತ ಬಸವನಹಳ್ಳಿ ಠಾಣೆ ಬಳಿ ಜಮಾಯಿಸಿ, ಆರೋಪಿ ವಿರುದ್ಧ ದೂರು ನೀಡಿದ್ದರು. ಪೌರ ಕಾರ್ಮಿಕರು ದೂರು ನೀಡುತ್ತಿದ್ದಂತೆ ಆರೋಪಿ ತಮೀಮ್ ನಾಪತ್ತೆಯಾಗಿದ್ದ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಸವನಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ತಮೀಮ್‍ಗಾಗಿ ಹುಡುಕಾಟ ನಡೆಸಿ, ಸಂಜೆ ವೇಳೆಗೆ ಬಂಧಿಸಿದ್ದಾರೆ. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್ ಅವರನ್ನು ಸಂಸದೆ ಶೋಭಾ ಕರಂದ್ಲಾಜೆ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.