Tag: ಹಲ್ಲೆ

  • ಅಪ್ರಾಪ್ತೆ ಮೇಲೆ ಹಲ್ಲೆ – ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್

    ಅಪ್ರಾಪ್ತೆ ಮೇಲೆ ಹಲ್ಲೆ – ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್

    ಮಂಗಳೂರು: ಅಪ್ರಾಪ್ತೆಯ ಮೇಲೆ ಹಲ್ಲೆ ನಡೆಸಿದ್ದ ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾದ ಘಟನೆ ಮಂಗಳೂರಿನ ಬಜ್ಪೆಯಲ್ಲಿ ನಡೆದಿದೆ.

    ಮಂಗಳೂರಿನ ಹೊರವಲಯದ ಗಂಜಿಮಠದ ಅಪ್ರಾಪ್ತೆ, ಮೂಡಬಿದಿರೆಯ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಪ್ರತಿದಿನ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಹೆತ್ತವರೊಂದಿಗೆ ಬಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದಳು. ಆದರೆ ಬಜ್ಪೆ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಳ್ಳದೆ, ದೂರು ನೀಡಲು ಬಂದಿದ್ದ ಆಕೆಯನ್ನು ವಿಚಾರಣೆ ನಡೆಸುವ ನೆಪದಲ್ಲಿ ಲಾಠಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಮೂವರು ಮಹಿಳಾ ಪೊಲೀಸರು ಕೈ, ಸೊಂಟ ಹಾಗೂ ಕಾಲಿನ ಅಡಿಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ರಕ್ತ ಹೆಪ್ಪುಗಟ್ಟಿದ್ದು ಅಪ್ರಾಪ್ತೆ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಲ್ಲೆ ನಡೆಸಿದ ಬಜ್ಪೆ ಠಾಣೆಯ ಮೂವರು ಮಹಿಳಾ ಪೊಲೀಸರ ವಿರುದ್ಧ ಮಂಗಳೂರಿನ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

    ಜಿಲ್ಲಾ ಕಾಂಗ್ರೆಸ್ ನಿಯೋಗ ಹುಡುಗಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ತನಿಖೆ ನಡೆಸುತ್ತಾರೆ. ವಿಚಾರಣೆ ನಡೆಸಿ ಪೊಲೀಸರ ತಪ್ಪಿದ್ದರೆ ಆಡಳಿತಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

  • ಕ್ವಾರಂಟೈನ್ ಆಗಿ ಎಂದಿದ್ದೆ ತಪಾಯ್ತು, ನರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ

    ಕ್ವಾರಂಟೈನ್ ಆಗಿ ಎಂದಿದ್ದೆ ತಪಾಯ್ತು, ನರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ

    – ಗಾಯಗೊಂಡ ಕೊರೊನಾ ವಾರಿಯರ್ ಆಸ್ಪತ್ರೆಯಲ್ಲಿ ನರಳಾಟ

    ಬಾಗಲಕೋಟೆ: ಕ್ವಾರಂಟೈನ್ ಆಗಿ ಎಂದು ಹೇಳಿದ್ದ ಕೊರೊನಾ ವಾರಿಯರ್ ನರ್ಸ್ ಒಬ್ಬರ ಮೇಲೆ ಕುಟುಂಬಸ್ಥರು ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸಕೋಟೆ ನಡೆದಿದೆ.

    ಹಲ್ಲೆಗೊಳಗಾದ ನರ್ಸ್ ಅವರನ್ನು ರಾಜೇಶ್ವರಿ ಮ್ಯಾಗಿನಮನಿ (47) ಎಂದು ಗುರುತಿಸಲಾಗಿದೆ. ಇಂದ್ರವ್ವ ಅರಹುಣಶಿ, ಪರಶುರಾಮ ನಾಯ್ಕರ್, ದೇವಕೆವ್ವ ನಾಯ್ಕರ್, ಗೋಪಾಲ ನಾಯ್ಕರ್ ಎಂಬವರು ಹಲ್ಲೆ ಮಾಡಿದ್ದಾರೆ. ಕೊರೊನಾ ಲಕ್ಷಣಗಳಿವೆ ಕ್ವಾರಂಟೈನ್ ಆಗಿರಿ ಮನೆ ಬಿಟ್ಟು ಬರಬೇಡಿ ಎಂದು ಸೂಚಿಸಿದ್ದಕ್ಕೆ, ನಮಗೆ ಊರಲ್ಲಿ ಅವಮಾನ ಮಾಡಿದೆ ಎಂದು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಲಾಗಿದೆ.

    ಕೆರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯಾಗಿ ರಾಜೇಶ್ವರಿಯವರು ಕೆಲಸ ಮಾಡುತ್ತಿದ್ದಾರೆ. ಇವರು ಇಂದ್ರವ್ವ ಅರಹುಣಶಿವರಗೆ ಕೊರೊನಾ ಲಕ್ಷಣ ಇರುವ ಕಾರಣ ಕ್ವಾರಂಟೈನ್ ಆಗಿದ್ದು, ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದರು. ಆದರೆ ತಪಾಸಣೆ ವೇಳೆ ವರದಿ ನೆಗೆಟಿವ್ ಬಂದಿತ್ತು. ಈ ಕಾರಣದಿಂದ ಸುಮ್ಮನೆ ನಮ್ಮ ಮರ್ಯಾದೆ ಹಾಳು ಮಾಡಿದೆ ಎಂದು ಅವರ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.

    ಸದ್ಯ ಗಾಯಗೊಂಡ ಕೊರೊನಾ ವಾರಿಯರ್ ರಾಜೇಶ್ವರಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಹಲ್ಲೆ ಮಾಡಿದವರ ವಿರುದ್ಧ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

  • ವೃದ್ಧನ ಮೇಲೆ ಹಲ್ಲೆಗೈದು, ಬಲವಂತವಾಗಿ ಮೂತ್ರ ಕುಡಿಸಿದ ಪಾಪಿ

    ವೃದ್ಧನ ಮೇಲೆ ಹಲ್ಲೆಗೈದು, ಬಲವಂತವಾಗಿ ಮೂತ್ರ ಕುಡಿಸಿದ ಪಾಪಿ

    – ಮಗನ ಮೇಲೆಯೂ ಕೊಡಲಿಯಿಂದ ಹಲ್ಲೆ

    ಲಕ್ನೋ: ಪೊಲೀಸರಿಗೆ ದೂರು ನೀಡಿದ್ದಕ್ಕೆ 65 ವರ್ಷದ ದಲಿತ ವೃದ್ಧನ ಮೇಲೆ ಹಲ್ಲೆಗೈದು, ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದ ಘಟನೆ ಉತ್ತರಪ್ರದೇಶದ ಲಲಿತಪುರ ಗ್ರಾಮದ ರೊಡಾ ಎಂಬಲ್ಲಿ ನಡೆದಿದೆ.

    ಆರೋಪಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಈತ ಕೆಲ ದಿನಗಳ ಹಿಂದೆ ವೃದ್ಧನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದನು. ಹೀಗಾಗಿ ತಂದೆ- ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೋನು ವಿರುದ್ಧ ದೂರು ದಾಖಲಿಸಿದ್ದರು.

    ಇತ್ತ ತನ್ನ ಮೇಲೆ ದೂರು ದಾಖಲಾಗುತ್ತಿದ್ದಂತೆಯೇ ಸೋನು, ಇದನ್ನು ಇಲ್ಲಿಯೇ ನಿಲ್ಲಿಸುವಂತೆ ಹೇಳಿದ್ದಾನೆ. ಅಲ್ಲದೆ ಕೇಸ್ ಹಿಂಪಡೆದುಕೊಳ್ಳುವಂತೆ ಪೀಡಿಸಲು ಆರಂಭಿಸಿದ್ದಾನೆ. ವೃದ್ಧ ಅಮರ್ ಹಾಗೂ ಮಗನನ್ನು ಮಂಗಳವಾರ ಮೂತ್ರ ಕುಡಿಯುವಂತೆ ಸೋನು ಒತ್ತಾಯಿಸಿದ್ದಾನೆ.

    ಸೋನು ಮೂತ್ರ ಕುಡಿಯುವಂತೆ ಒತ್ತಾಯಿಸಿದಾಗ ನಾನು ನಿರಾಕರಿಸಿದೆ. ಈ ವೇಳೆ ಆತ ನನ್ನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ನನ್ನ ಮಗನ ಮೇಲೆಯೂ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಸೋನು ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಈ ಹಿನ್ನೆಲೆಯಲ್ಲಿ ಆತ ನಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸಿರುವುದಾಗಿ ಅಮರ್ ತಿಳಿಸಿದ್ದಾರೆ.

    ಈ ಸಂಬಂಧ ಲಲಿತಪುರ ಎಸ್‍ಪಿ ಮಿರ್ಜಾ ಮನ್ಸಾರ್ ಬೇಗ್ ಮಾತನಾಡಿ, ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ರೋಡಾ ಗ್ರಾಮದಲ್ಲಿ ಇಬ್ಬರು ಗ್ರಾಮಸ್ಥರ ಮೇಲೆ ಪ್ರಭಾವಿಗಳು ಹಲ್ಲೆ ಮಾಡಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಪ್ರಮುಖ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಸಂಬಂಧ ಯಾರ ಬೆದರಿಕೆಗೂ ಜಗ್ಗಲ್ಲ ಎಂದು ಎಸ್‍ಪಿ ತಿಳಿಸಿದ್ದಾರೆ.

  • ಅತ್ತೆಯ ಜುಟ್ಟು ಹಿಡಿದು ಮನೆಯಿಂದ ಹೊರಗೆ ಎಳ್ಕೊಂಡು ಬಂದು ಥಳಿಸಿದ ಸೊಸೆ!

    ಅತ್ತೆಯ ಜುಟ್ಟು ಹಿಡಿದು ಮನೆಯಿಂದ ಹೊರಗೆ ಎಳ್ಕೊಂಡು ಬಂದು ಥಳಿಸಿದ ಸೊಸೆ!

    – ಸಾಮಾಜಿಕ ಜಾಲತಾಣದಲ್ಲಿ ಕ್ರೂರತೆಯ ವೀಡಿಯೋ ವೈರಲ್

    ಹೈದಾರಾಬಾದ್: ಸೊಸೆಯೊಬ್ಬಳು ತನ್ನ 55 ವರ್ಷದ ಅತ್ತೆಯ ಜುಟ್ಟು ಹಿಡಿದು ಮನೆಯಿಂದ ಹೊರಗಡೆ ಎಳೆದಾಡಿಕೊಂಡು ಬಂದು ಹಿಗ್ಗಾಮುಗ್ಗ ಥಳಿಸಿದ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಪಾಪಿ ಸೊಸೆ ಉಜ್ಮಾ ಬೇಗಂ, ಅತ್ತೆ ತಶಾನಿಮಾ ಸುಲ್ತಾನಾ ಅವರ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಘಟನೆ ಹುಮಾಯೂನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಿರೋಜ್ ಗಾಂಧಿ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಸೊಸೆ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸೊಸೆ ತನ್ನ ಅತ್ತೆ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ತಶಾನಿಮಾ ಸುಲ್ತಾನಾ ಮತ್ತು ಅಹ್ಮದ್ ಸಯೀದ್ ಖಾನ್ ಅವರ ಪುತ್ರ ಉಬೈದ್ ಅಲಿ ಖಾನ್ ಕಳೆದ ಒಂದು ದಶಕದಿಂದ ಸೌದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಉಬೈದ್ ಅವರಿಗೆ 2019ರಲ್ಲಿ ಉಜ್ಮಾ ಬೇಗಂ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾರೆ. ಎರಡನೇ ವಿವಾಹದ ಒಂದು ತಿಂಗಳ ಬಳಿಕ ಉಬೈದ್ ಸೌದಿಗೆ ತೆರಳಿದ್ದಾರೆ.

    ಇತ್ತ ಎರಡನೇ ಪತ್ನಿ ಉಜ್ಮಾ ಬೇಗಂ, ಉಬೈದ್ ವೃದ್ಧ ತಾಯಿ ತಶಾನಿಮಾ ಸುಲ್ತಾನಾಗೆ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಹುಮಾಯೂನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಅಕ್ಟೋಬರ್ 8ರಂದು ಹೈದರಾಬಾದ್ ನ ಮಲ್ಲೆಪಲ್ಲಿಯಲ್ಲಿ ನಡೆದಿದ್ದಾಗಿದೆ. ಉಜ್ಮಾ ಬೇಗಂ ಹಾಗೂ ತಶಾನಿಮಾ ಮಧ್ಯೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದ್ದು, ಈ ವೇಳೆ ಉಜ್ಮಾ ಸಿಟ್ಟಿನಿಂದ ತನ್ನ ಅತ್ತೆಯ ತಲೆಗೂದಲು ಹಿಡಿದು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದಿದ್ದಾಳೆ. ಅಲ್ಲದೆ ಕೂದಲು ಹಿಡಿದುಕೊಂಡು ಹಿಗಾಮುಗ್ಗ ಹಲ್ಲೆ ಮಾಡಿದ್ದಾಳೆ. ಈ ವೇಳೆ ಉಜ್ಮಾನಿಗೆ ಆಕೆಯ ತಾಯಿ ಕೂಡ ಸಾಥ್ ನೀಡಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇನ್ನೊಂದು ವಿಚಾರ ಎಂದರೆ, ಉಜ್ಮಾ ಹಲ್ಲೆ ಮಾಡುತ್ತಿರುವುದನ್ನು ಬಾಲಕನೊಬ್ಬ ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡುವುದನ್ನು ಕೂಡ ನಾವು ಕಾಣಬಹುದಾಗಿದೆ. ಉಜ್ಮಾ ತನ್ನ ಅತ್ತೆ ಮೇಲೆ ರೌದ್ರ ನರ್ತನ ತೋರುತ್ತಿದ್ದಂತೆಯೇ ಇನ್ನೊಬ್ಬ ಮಹಿಳೆ ಅಂದರೆ ಉಜ್ಮಾ ತಾಯಿ ಕೂಡ ಮಗಳ ಜೊತೆ ಸೇರಿಕೊಂಡು ವೃದ್ಧೆಗೆ ಥಳಿಸಿತ್ತಿರುವಾಗ ಬಾಲಕ ವೀಡಿಯೋ ಮಾಡಿರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಹೈದರಾಬಾದ್ ಪೊಲೀಸರು ಹೊಸದಾಗಿ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಬೈಕ್ ಕಳ್ಳತನಕ್ಕೆ ಬಂದು ಮಹಿಳೆಯರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    ಬೈಕ್ ಕಳ್ಳತನಕ್ಕೆ ಬಂದು ಮಹಿಳೆಯರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

    – ಗೃಹ ಸಚಿವರ ತವರಲ್ಲೇ ಘಟನೆ

    ಹುಬ್ಬಳ್ಳಿ: ಗೃಹ ಸಚಿವರ ತವರಿನಲ್ಲಿಯೇ ಕ್ರೈಂಗಳಿಗೆ ಕಡಿವಾಣ ಇಲ್ಲದಂತಾಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಮುಸ್ಸಂಜೆ ಹೊತ್ತಿನಲ್ಲಿ ಮನೆಯಲ್ಲಿ ಇರಲು ಕೂಡ ಆತಂಕಪಡುವ ಸ್ಥಿತಿ ಎದುರಾಗಿದೆ.

    ಮನೆಯೊಂದಕ್ಕೆ 10 ಮಂದಿ ಪುಂಡರ ತಂಡ ದಾಳಿ ನಡೆಸಿ ಬೈಕಿಗೆ ಬೆಂಕಿ ಹಚ್ಚಿದೆ. ಅಲ್ಲದೆ ಮನೆಯಲ್ಲಿನ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸಿದ ಘಟನೆ ಹುಬ್ಬಳ್ಳಿ ಗೋಕುಲ ರಸ್ತೆಯ ಗಿರಿ ನಗರದಲ್ಲಿ ನಡೆದಿದೆ.

    ವಿನಯ ದೇಸಾಯಿ ಅವರಿಗೆ ಸೇರಿದ ಮನೆಯಾಗಿದ್ದು, ಮೋಟಾರ್ ಕಳ್ಳತನಕ್ಕೆ ಬಂದವರಿಂದ ದಾಂಧಲೆ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಕಳವು ಮಾಡುತ್ತಿರುವ ಶಬ್ದ ಕೇಳಿ ಹೊರಬಂದ ವಿನಯ್ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಮನೆಯ ಹೆಣ್ಣು ಮಕ್ಕಳ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ.

    ಪುಂಡರ ಹಾವಳಿಯಿಂದ ವಿನಯ ಹಾಗೂ ಅವರ ಅಕ್ಕನಿಗೆ ಗಂಭೀರ ಗಾಯವಾಗಿದ್ದು,ವಿನಯ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾದಿಂದ ಗುಣಮುಖರಾದ ಮಹಿಳೆ ಮೇಲೆ ಸೆಕ್ಯೂರಿಟಿ ಗಾರ್ಡ್‍ನಿಂದ ಹಲ್ಲೆ

    ಕೊರೊನಾದಿಂದ ಗುಣಮುಖರಾದ ಮಹಿಳೆ ಮೇಲೆ ಸೆಕ್ಯೂರಿಟಿ ಗಾರ್ಡ್‍ನಿಂದ ಹಲ್ಲೆ

    ಹಾಸನ: ಕೋವಿಡ್ ರೋಗಿಯ ಮೇಲೆ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಹಲ್ಲೆ ನಡೆಸಿರುವ ಘಟನೆ ಹಾಸನ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.

    14 ದಿನದ ಐಸೊಲೇಷನ್ ಚಿಕಿತ್ಸೆ ಮುಗಿಸಿ ಮನೆಗೆ ಹೋಗಬೇಕಿದ್ದ ಕೋವಿಡ್ ರೋಗಿಯೊಬ್ಬರ ಮೇಲೆ ಸೆಕ್ಯೂರಿಟಿ ಗಾರ್ಡ್ ರಘು ಎಂಬಾತ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಕೊರೊನಾ ಗುಣಮುಖರಾಗಿ ಮನೆಗೆ ಹೋಗಬೇಕಿದ್ದ ಮಹಿಳೆ ಮತ್ತೆ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

    ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಹಿಮ್ಸ್ ಅಧೀಕ್ಷಕ ಕೃಷ್ಣಮೂರ್ತಿ ಮಹಿಳೆಗೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಿಬ್ಬಂದಿಗೆ ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ವೇಳೆ ಹಲ್ಲೆ ಮಾಡಿಲ್ಲ ಎಂದು ಸಬೂಬು ಹೇಳಿದ ಸೆಕ್ಯೂರಿಟಿ ಗಾರ್ಡ್ ವಿರುದ್ಧ ಆಕ್ರೋಶ ಹೊರಹಾಕಿದ ಅವರು ಆತನ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

  • ಆಲೂಗಡ್ಡೆ ಕರಿ ತಿನ್ನಲ್ಲ ಎಂದ ಪತಿಗೆ ಹಿಗ್ಗಾಮುಗ್ಗ ಥಳಿಸಿದ ಪತ್ನಿ!

    ಆಲೂಗಡ್ಡೆ ಕರಿ ತಿನ್ನಲ್ಲ ಎಂದ ಪತಿಗೆ ಹಿಗ್ಗಾಮುಗ್ಗ ಥಳಿಸಿದ ಪತ್ನಿ!

    – ಬಲ ಭುಜಕ್ಕೆ ಗಂಭೀರ ಗಾಯ

    ಅಹಮದಾಬಾದ್: ರಾತ್ರಿ ಊಟಕ್ಕೆ ಮಾಡಿದ್ದ ಆಲೂಗಡ್ಡೆ ಕರಿ ತಿನ್ನಲ್ಲ ಎಂದ ಪತಿಗೆ ಪತ್ನಿ ಹಿಗ್ಗಾಮುಗ್ಗ ಥಳಿಸಿದ ಪ್ರಸಂಗವೊಂದು ಅಹಮದಾಬಾದಿನ ವಸ್ನಾ ಪ್ರದೇಶದಲ್ಲಿ ನಡೆದಿದೆ.

    40 ವರ್ಷದ ಹರ್ಷದ್ ಗೊಹೆಲ್ ತನ್ನ ಪತ್ನಿ ತಾರಾ ಗೊಹೆಲ್ ನಿಂದ ಹಲ್ಲೆಗೊಳಗಾಗಿದ್ದಾನೆ. ಹರ್ಷದ್ ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾನೆ. ಇದೀಗ ಪತ್ನಿಯ ರೌದ್ರವತಾರಕ್ಕೆ ಗಾಯಗೊಂಡಿರುವ ಪತಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ನಡೆದಿದ್ದೇನು?:
    ಶುಕ್ರವಾರ ರಾತ್ರಿ ಹರ್ಷದ್ ತನ್ನ ಪತ್ನಿಯ ಬಳಿ ಊಟಕ್ಕೆ ಏನು ಮಾಡಿದ್ದಿ ಎಂದು ಕೇಳಿದ್ದಾನೆ. ಈ ವೇಳೆ ಪತ್ನಿ ಆಲೂಗಡ್ಡೆ ಕರಿ ಹಾಗೂ ಚಪಾತಿ ಮಾಡಿರುವುದಾಗಿ ತಿಳಿಸಿದ್ದಾಳೆ.

    ಹರ್ಷದ್ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಆಲೂಗಡ್ಡೆ ಸೇವಿಸಬೇಡಿ ಎಂದು ವೈದ್ಯರು ಸಲಹೆ ನೀಡಿದ್ದರು. ಇತ್ತ ಪತ್ನಿ ಆಲೂಗಡ್ಡೆ ಪಲ್ಯ ಅಂದಾಗ ಹರ್ಷದ್ ವೈದ್ಯರ ಮಾತನ್ನು ಹೇಳುತ್ತಾ ನನಗೆ ಬೇಡ ಎಂದಿದ್ದಾನೆ. ಅಲ್ಲದೆ ಆರೋಗ್ಯಕ್ಕೆ ಒಳ್ಳೆಯದಲ್ಲ, ನಾನು ತಿನ್ನಲ್ಲ ಎಂದು ಗೊತ್ತಿದ್ದರೂ ಯಾಕೆ ಆಲೂಗಡ್ಡೆ ಪಲ್ಯ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾನೆ. ಇಷ್ಟಕ್ಕೆ ಸಿಟ್ಟಿಗೆದ್ದ ಪತ್ನಿ ತಾರಾ, ಪತಿಯನ್ನು ನಿಂದಿಸಲು ಆರಂಭಿಸಿದ್ದಾಳೆ ಎಂದು ಹರ್ಷದ್ ಎಫ್‍ಐಆರ್ ನಲ್ಲಿ ದಾಖಲಿಸಿದ್ದಾನೆ.

    ತನ್ನನ್ನು ನಿಂದಿಸುತ್ತಿದ್ದ ಪತ್ನಿಯನ್ನು ಹರ್ಷದ್ ತಡೆದಿದ್ದಾನೆ. ಇದರಿಂದ ಮತ್ತೆ ರೊಚ್ಚಿಗೆದ್ದ ತಾರಾ, ನೇರವಾಗಿ ಬಾತ್‍ರೂಮಿಗೆ ತೆರಳಿ ವಾಷಿಂಗ್ ಬ್ಯಾಟ್ ಹಿಡಿದುಕೊಂಡು ಬಂದು ಚೆನ್ನಾಗಿ ಥಳಿಸಿದ್ದಾಳೆ. ಪತ್ನಿ ಥಳಿಸುತಿದ್ದಂತೆಯೇ ಹರ್ಷದ್ ಚೀರಾಡುತ್ತಾ ಸಹಾಯಕ್ಕಾಗಿ ಕುಟುಂಬಸ್ಥರನ್ನು ಕರೆದಿದ್ದಾನೆ. ಕೂಡಲೇ ಎಲ್ಲರೂ ಸ್ಥಳಕ್ಕೆ ದೌಡಾಯಿಸಿ ತಾರಾಳನ್ನು ತಡೆದಿದ್ದಾರೆ.

    ಘಟನೆಯಿಂದ ಹರ್ಷದ್ ಬಲ ಭುಜಕ್ಕೆ ಎಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಘಟನೆ ಸಂಬಂಧ ತಾರಾ ವಿರುದ್ಧ ಪತಿ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಗೋಧಿ ಕದ್ದನೆಂದು ಮಗನ ಬಟ್ಟೆ ಬಿಚ್ಚಿ, ಕೈ-ಕಾಲು ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ತಂದೆ!

    ಗೋಧಿ ಕದ್ದನೆಂದು ಮಗನ ಬಟ್ಟೆ ಬಿಚ್ಚಿ, ಕೈ-ಕಾಲು ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ತಂದೆ!

    – ತಿಂಡಿ ತೆಗೆದುಕೊಳ್ಳಲೆಂದು ಮನೆಯಿಂದ ಗೋಧಿ ಕದ್ದ ಬಾಲಕ

    ಲಕ್ನೋ: ಗೋಧಿ ಕದ್ದನೆಂದು ಸಿಟ್ಟಿಗೆದ್ದ ತಂದೆಯೊಬ್ಬ ತನ್ನ 11 ವರ್ಷದ ಮಗನ ಬಟ್ಟೆಬಿಚ್ಚಿ, ಕೈ-ಕಾಲು ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಆರೋಪಿ ತಂದೆಯನ್ನು(45) ವರ್ಷದ ಗುದ್ದು ಖಾನ್ ಎಂದು ಗುರುತಿಸಲಾಗಿದೆ. ತಿಂಡಿ ತೆಗೆದುಕೊಳ್ಳಲು ಬಾಲಕನ ಕೈಯಲ್ಲಿ ಹಣವಿರಲಿಲ್ಲ. ಹೀಗಾಗಿ ಆತ ತನ್ನ ಮನೆಯಲ್ಲಿದ್ದ ಗೋಧಿಯನ್ನು ಅಂಗಡಿಯವನಿಗೆ ಕೊಟ್ಟು ತಿಂಡಿ ಖರೀದಿಸಿದ್ದಾನೆ. ಈ ವಿಚಾರ ತಿಳಿದ ತಂದೆ ರೊಚ್ಚಿಗೆದ್ದು, ಮಗನ ಬಟ್ಟೆ ಬಿಚ್ಚಿ, ಕೈ-ಕಾಲು ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಮಗನಿಗೆ ತಂದೆ ಹೊಡೆಯುತ್ತಿರುವುದನ್ನು ಕಂಡರೂ ನೆರೆಮನೆಯವರು ಬಾಲಕನ ಸಹಾಯಕ್ಕೆ ಬಂದಿಲ್ಲ. ಬದಲಾಗಿ ನಿಂತು ನೋಡುತ್ತಿದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.

    ಅಂತೆಯೇ ಮಿವಾಲಿ ಗ್ರಾಮದಿಂದ ಆರೋಪಿ ತಂದೆಯನ್ನು ಪೊಲಿಸರು ಬಂಧಿಸಿದ್ದಾರೆ. ಇತ್ತ ಗಾಯಾಳು ಬಾಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಘಟನೆಯ ಸಂಬಂಧಿಸಿದಂತೆ ಬಾಲಕನ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ರವಿ ಕುಮಾರ್ ತಿಳಿಸಿದ್ದಾರೆ.

    ಘಟನೆಯ ಬಗ್ಗೆ ವಿವರಿಸಿದ ಸ್ಥಳೀಯ ನಿವಾಸಿಗಳು, ಸ್ವಲ್ಪ ಗೋಧಿ ಕದ್ದ ಎಂದು ತಂದೆ ತನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಬಾಲಕನ ಮೇಲೆ ಬಿಸಿ ನೀರು ಎರಚಿ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಗನ ಮೇಲೆ ಹಲ್ಲೆ ನಡೆಸಿದಾಗ ಆರೋಪಿ ಕುಡಿದಿರಲಿಲ್ಲ. ಮೂರು ದಿನಗಳ ಹಿಂದೆಯಷ್ಟೇ ಜಗಳವಾಡಿ ಆರೋಪಿ ಪತ್ನಿ ಆಕೆಯ ಸಹೋದರಿ ಮನೆಗೆ ತೆರಳಿದ್ದರು. ನನ್ನ ಮಗನ ನಡೆ ನನಗೆ ಇಷ್ಟವಾಗಲಿಲ್ಲ. ಹೀಗಾಗಿ ಕೋಪದಿಂದ ಆತನಿಗೆ ಹೊಡೆದೆ ಎಂದು ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಜೈ ಶ್ರೀರಾಮ್, ಮೋದಿ ಜಿಂದಾಬಾದ್ ಹೇಳಲು ನಿರಾಕರಿಸಿದ ಆಟೋ ಚಾಲಕನ ಮೇಲೆ ಹಲ್ಲೆ

    ಜೈ ಶ್ರೀರಾಮ್, ಮೋದಿ ಜಿಂದಾಬಾದ್ ಹೇಳಲು ನಿರಾಕರಿಸಿದ ಆಟೋ ಚಾಲಕನ ಮೇಲೆ ಹಲ್ಲೆ

    – ಇಬ್ಬರ ಬಂಧನ

    ಜೈಪುರ: ಜೈ ಶ್ರೀರಾಮ್ ಹಾಗೂ ಮೋದಿ ಜಿಂದಾಬಾದ್ ಎಂದು ಹೇಳದ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ಪೊಲಿಸರು ಬಂಧಿಸಿದ್ದಾರೆ.

    ಈ ಘಟನೆ ಶನಿವಾರ ರಾಜಸ್ಥಾನದ ಸಿಕರ್ ಎಂಬಲ್ಲಿ ನಡೆದಿದೆ. ಗಫರ್ ಅಹ್ಮದ್ ಕಚ್ಛಾವಾ(52) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಬಂಧಿತರನ್ನು ಶಂಭು ದಯಾಳ್(35) ಹಾಗೂ ರಾಜೇಂದ್ರ(30) ಎಂದು ಗುರುತಿಸಲಾಗಿದೆ.

    ಇಬ್ಬರು ನನ್ನ ಗಡ್ಡ ಹಿಡಿದುಕೊಂಡು ತಳ್ಳಿ ಹಲ್ಲೆಗೈದಿದ್ದಾರೆ. ಅಲ್ಲದೆ ಪಾಕಿಸ್ತಾನಕ್ಕೆ ಹೋಗು ಎಂದು ಗದರಿಸಿರುವುದಾಗಿ ಆಟೋ ಚಾಲಕ ಗಫರ್ ಪೊಲೀಸರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಗಫರ್ ದೂರು ನೀಡಿದ ಬಳಿಕ ಕೇಲವ 6 ಗಂಟೆಯಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

    ಗಫರ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ಆರೋಪಿಗಳು ನನ್ನ ಕೈಯಿಂದ ವಾಚ್ ಹಾಗೂ ಹಣವನ್ನು ಕಸಿದುಕೊಂಡರು. ನಂತರ ನನ್ನ ಕೆನ್ನೆಗೆ ಹೊಡೆದು ಹಲ್ಲು ಮುರಿದಿದ್ದಾರೆ. ಕಣ್ಣು, ಮುಖ ನೋಡದೆ ಹಿಗ್ಗಾಮುಗ್ಗ ಥಳಿಸಿದ್ದು, ಪರಿಣಾಮ ಕಣ್ಣು ಊದುಕೊಂಡಿದೆ ಎಂದು ತಿಳಿಸಿದ್ದಾರೆ.

    ಗಫರ್ ಶುಕ್ರವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಪ್ರಯಾಣಿಕರೊಬ್ಬರನ್ನು ಅವರ ಗ್ರಾಮಕ್ಕೆ ಬಿಟ್ಟು ವಾಪಸ್ ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಇಬ್ಬರು ಗಫರ್ ಅವರನ್ನು ತಡೆದಿದ್ದಾರೆ. ಅಲ್ಲದೆ ಗಫರ್ ಬಳಿ ತಂಬಾಕು ಕೊಡುವಂತೆ ಕೇಳಿದ್ದಾರೆ. ತಂಬಾಕು ಕೇಳಿದ ತಕ್ಷಣ ಗಫರ್ ಅವರಿಗೆ ನೀಡಿದ್ದರೂ, ಅದನ್ನು ತೆಗೆದುಕೊಳ್ಳಲು ಆರೋಪಿಗಳು ನಿರಾಕರಿಸಿದ್ದಾರೆ. ಅಲ್ಲದೆ ಮೋದಿ ಜಿಂದಾಬಾದ್ ಹಾಗೂ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ. ನನ್ನ ಆಟೋವನ್ನು ನೆಲಕ್ಕೆ ತಳ್ಳಿ ನನ್ನ ಮೇಲೆ ಹಿಗ್ಗಾಮುಗ್ಗವಾಗಿ ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಗಫರ್ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಗಫರ್ ನೀಡಿದ ದೂರಿನಂತೆ ಘಟನೆಯ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಪಾನಮತ್ತ ಸ್ಥಿತಿಯಲ್ಲಿ ಸಂತ್ರಸ್ತನೊಂದಿಗೆ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ ಅಂತ ಸಿಕರ್ ನ ಹಿರಿಯ ಪೊಲೀಸ್ ಅಧಿಕಾರಿ ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.

  • ಎಂಎಲ್‍ಎಗಾಗಿ ಠಾಣೆಯಲ್ಲೇ ದಲಿತ ಯುವಕನ ತಲೆ ಬೋಳಿಸಿ ಹಲ್ಲೆ ಮಾಡಿದ ಪೊಲೀಸರು

    ಎಂಎಲ್‍ಎಗಾಗಿ ಠಾಣೆಯಲ್ಲೇ ದಲಿತ ಯುವಕನ ತಲೆ ಬೋಳಿಸಿ ಹಲ್ಲೆ ಮಾಡಿದ ಪೊಲೀಸರು

    – ತಾಯಿಯ ಮುಂದೆ ಮಗನನ್ನು ಮಾರಣಾಂತಿಕವಾಗಿ ಥಳಿಸಿದ ಪೊಲೀಸ್ರು

    ಹೈದರಾಬಾದ್: ಶಾಸಕರೊಬ್ಬರ ಆದೇಶವನ್ನು ಪಾಲಿಸಿದ ಇಬ್ಬರು ಪೊಲೀಸರು ಠಾಣೆಯಲ್ಲೇ ದಲಿತ ಯುವಕನ ತಲೆ ಬೋಳಿಸಿ ಅವನ ಮೇಲೆ ಹಲ್ಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಅಂಧ್ರ ಪ್ರದೇಶದ ಆಡಳಿತದಲ್ಲಿರುವ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರ ಸೂಚನೆಯಂತೆ ಪೊಲೀಸರು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆ ಸೋಮವಾರ ಹೈದರಾಬಾದ್‍ನಿಂದ 271 ಕಿ.ಮೀ ದೂರದಲ್ಲಿರುವ ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸ್ ಠಾಣೆ ಒಳಗೆ ನಡೆದಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಬ್ ಇನ್ಸ್‌ಪೆಕ್ಟರ್‌ ಮತ್ತು ಇಬ್ಬರು ಪೇದೆಗಳನ್ನು ಅರೆಸ್ಟ್ ಮಾಡಲಾಗಿದೆ.

    ಶೋಷಣೆಗೆ ಒಳಗಾದ ದಲಿತ ಯುವಕನನ್ನು ವೇದುಲ್ಲಪಲ್ಲಿ ಗ್ರಾಮದ ವರಪ್ರಸಾದ್ ಎಂದು ಗುರುತಿಸಲಾಗಿದೆ. ಆತ ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ನಡೆದಾಗ ವರಪ್ರಸಾದ್ ತಾಯಿ ಕೂಡ ಠಾಣೆಯಲ್ಲೇ ಇದ್ದರು ಎಂದು ಹೇಳಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌತಮ್ ಸಾವಂಗ್ ಈ ಘಟನೆಯನ್ನು ಖಂಡಿಸಿ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಭಾಗಿಯಾದ ಮೂವರು ಪೊಲೀಸರನ್ನು ಅಮಾನತು ಮಾಡಿ ಅರೆಸ್ಟ್ ಮಾಡಲಾಗಿದೆ.

    ವರಪ್ರಸಾದ್ ಹೇಳುವ ಪ್ರಕಾರ, ಸ್ಥಳೀಯರೊಬ್ಬರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅಲ್ಲಿ ಹೋಗುತ್ತಿದ್ದ ಮರಳಿನ ಟ್ರಕ್‍ಗಳನ್ನು ಪ್ರಸಾದ್ ಮತ್ತು ಆತನ ಇನ್ನಿಬ್ಬರು ತಡೆದು ನಿಲ್ಲಿಸಿದ್ದಾರೆ. ಇದರಿಂದ ಕೋಪಗೊಂಡ ಎಂಎಲ್‍ಎ ವರಪ್ರಸಾದ್‍ಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಶಾಸಕರಿಗೂ ಮತ್ತು ವರಪ್ರಸಾದ್ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ಶಾಸಕ ಪೊಲೀಸರನ್ನು ಕರೆಸಿ ಆತನಿಗೆ ಸರಿಯಾಗಿ ಬುದ್ಧಿ ಕಲಿಸಿ ಎಂದು ಸೂಚಿಸಿದ್ದಾರೆ. ಆಗ ಪೊಲೀಸರು ವರಪ್ರಸಾದ್‍ನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಶಾಸಕರ ಜೊತೆ ಗಲಾಟೆಯಾದ ಮರುದಿನ ಪ್ರಸಾದ್ ಮನೆಗೆ ಬಂದ ಪೊಲೀಸ್ ಅಧಿಕಾರಿಗಳು, ನಿನ್ನನ್ನು ವಿಚಾರಣೆ ಮಾಡಬೇಕು ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ನಂತರ ಠಾಣೆಯ ಒಳಗೆ ಇನ್ಸ್‌ ಪೆಕ್ಟರ್‌ ಆತನಿಗೆ ಮನಬದಂತೆ ಥಳಿಸಿದ್ದಾನೆ. ಬೆಲ್ಟ್ ಮತ್ತು ಶೂನಲ್ಲಿ ಹಲ್ಲೆ ಮಾಡಿದ್ದಾರೆ. ನಂತರ ಠಾಣೆಗೆ ಕ್ಷೌರಿಕನನ್ನು ಕರೆಸಿ, ವರಪ್ರಸಾದ್‍ನ ತಲೆ ಮತ್ತು ಮೀಸೆಯನ್ನು ಬೋಳಿಸಿದ್ದಾರೆ. ಜೊತೆಗೆ ಮತ್ತೆ ಹಲ್ಲೇ ಮಾಡಿ, ನಂತರ ಆತನನ್ನು ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದಾರೆ.

    ಎಸ್‍ಸಿ/ಎಸ್‍ಟಿ ದೌರ್ಜನ್ಯ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಸಬ್‍ಇನ್ಸ್‌ಪೆಕ್ಟರ್‌ ಮತ್ತು ಇಬ್ಬರು ಪೇದೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೀತಾನಗರಂ ಪೊಲೀಸರು ಯುವಕನನ್ನು ಅವಮಾನಿಸಿದ ಘಟನೆಗೆ ನಾವು ವಿಷಾದಿಸುತ್ತೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಮತ್ತು ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಪೊಲೀಸ್ ಮುಖ್ಯ ಅಧಿಕಾರಿ ಕೆ.ವಿ.ಮೋಹನ್ ರಾವ್ ಹೇಳಿದ್ದಾರೆ.

    https://twitter.com/ncbn/status/1285549093830291456

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು, ಜಂಗಲ್ ರಾಜ್ ಆಂಧ್ರಪ್ರದೇಶಕ್ಕೆ ವಾಪಸ್ ಬಂದಿದೆ. ವೈಎಸ್‍ಆರ್ ಪಕ್ಷದ ಶಾಸಕರೊಬ್ಬ ವರಪ್ರಸಾದ್ ತಲೆಯನ್ನು ಬೋಳಿಸಿರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.