Tag: ಹರ್ಷ ಮೊಯ್ಲಿ

  • ಹರ್ಷ ಮೊಯ್ಲಿ ವಿರುದ್ಧ ಕೈ ನಾಯಕ ಕಿಡಿ

    ಹರ್ಷ ಮೊಯ್ಲಿ ವಿರುದ್ಧ ಕೈ ನಾಯಕ ಕಿಡಿ

    ಉಡುಪಿ: ಮಾಜಿ ಸಚಿವ ಪ್ರಮೋದ್ ಜೆಡಿಎಸ್ ನಲ್ಲೇ ಇದ್ದಾರೋ ಕಾಂಗ್ರೆಸ್‍ಗೆ ಬಂದಿದ್ದಾರೋ ಎಂದು ಕರಾವಳಿಯಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಇದೇ ವಿಚಾರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರನ ಜೊತೆ ಕಾಂಗ್ರೆಸ್ ನಾಯಕನ ಫೋನ್ ಸಂಭಾಷಣೆ ವೈರಲಾಗಿದೆ.

    ಶನಿವಾರ ವೀರಪ್ಪ ಮೊಯ್ಲಿ ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಪತ್ರಕರ್ತರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಯಾವಾಗ ಕಾಂಗ್ರೆಸ್ ಗೆ ಮರಳ್ತಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಮೊಯ್ಲಿ, ಪ್ರಮೋದ್ ಜೆಡಿಎಸ್ ನಲ್ಲಿದ್ದಾರೆ. ಅರ್ಜಿ ಹಾಕಿದರೆ ಮತ್ತೆ ಕಾಂಗ್ರೆಸ್ಸಿಗೆ ಬರಬಹುದು ಅಂದಿದ್ದರು.

    ಈ ವಿಚಾರ ಸ್ಥಳೀಯ ಕಾರ್ಯಕರ್ತರನ್ನು ಕೆರಳಿಸಿದೆ. ಸುದ್ದಿಗೋಷ್ಠಿಯ ನಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಅಮೀನ್ ಅವರು ಹರ್ಷ ಮೊಯ್ಲಿಗೆ ಕರೆ ಮಾಡಿ ಪ್ರಮೋದ್ ಮಧ್ವರಾಜ್ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಹರ್ಷ ಮೊಯ್ಲಿ, ಪ್ರಮೋದ್ ಜೆಡಿಎಸ್ ನಲ್ಲೇ ಇದ್ದಾನೆ ಎಂದು ಹೇಳುವ ಮೂಲಕ ಏಕವಚನ ಬಳಕೆ ಮಾಡಿದ್ದಾರೆ. ಇದರಿಂದ ಕುಪಿತರಾದ ಸದಾಶಿವ್, ಪದಾಧಿಕಾರಿ ಅಲ್ಲದೆ ಇದ್ದರೂ ನೀವ್ಯಾಕೆ ಕಾಂಗ್ರೆಸ್ ಸಭೆಯಲ್ಲಿ, ಸುದ್ದಿಗೋಷ್ಠಿಯಲ್ಲಿ ಕೂತಿದ್ದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರಮೋದ್ ಗೆ ಗೌರವ ಕೊಟ್ಟು ಮಾತಾಡಿ ಎಂದು ಕಿಡಿಕಾರಿದ್ದಾರೆ. ತುಳು ಭಾಷೆಯ ಈ ಸಂಭಾಷಣೆ ವೈರಲ್ ಆಗಿದೆ.

    ತಾನು ಕಾಂಗ್ರೆಸ್ ತೊರೆದೇ ಇಲ್ಲ. ನಾನು ಮೈತ್ರಿ ಅಭ್ಯರ್ಥಿಯಾಗಿದ್ದೆ ಎಂದು ಪ್ರಮೋದ್ ಮಧ್ವರಾಜ್ ತಟಸ್ಥವಾಗಿ ಕೂತಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಮೋದ್ ಅರ್ಜಿ ಹಾಕಿ ಕಾಂಗ್ರೆಸ್ ಗೆ ಮರಳಲಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಮೌನವಹಿಸಿದೆ. ಇದು ಕೆಲ ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರ್ಷ ಮೊಯಿಲಿ ಕಾರ್ಕಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗ ಹರ್ಷ ಬಗ್ಗೆ ಕಾರ್ಯಕರ್ತರ ವಿರೋಧಿಸಿದ್ದರು.

  • ರಾಜಕಾರಣಿಯ ಗೆಟಪ್‍ನಲ್ಲಿ ಹರ್ಷ ಮೊಯ್ಲಿ ಎಂಟ್ರಿ- ಪಾರ್ಟಿ ಹೇಳಿದ್ರೆ ಸ್ಪರ್ಧೆಗೆ ಸಿದ್ಧ ಅಂದ್ರು

    ರಾಜಕಾರಣಿಯ ಗೆಟಪ್‍ನಲ್ಲಿ ಹರ್ಷ ಮೊಯ್ಲಿ ಎಂಟ್ರಿ- ಪಾರ್ಟಿ ಹೇಳಿದ್ರೆ ಸ್ಪರ್ಧೆಗೆ ಸಿದ್ಧ ಅಂದ್ರು

    ಉಡುಪಿ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ರಾಜಕಾರಣಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸೋದು ನಿಶ್ಚಿತ ಎಂಬ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    ಚುನಾವಣೆಗಿನ್ನು ಎರಡು ತಿಂಗಳು ಬಾಕಿ ಇರುವಂತೆ ಕಣ ರಂಗೇರುತ್ತಿದೆ. ಉಡುಪಿ ಜಿಲ್ಲೆಯಲ್ಲೇ ಕಾಂಗ್ರೆಸ್‍ಗೆ ಕಗ್ಗಂಟಾಗಿರೋದು ಕಾರ್ಕಳ ವಿಧಾನಸಭಾ ಕ್ಷೇತ್ರ. ಮೂರು ಮಂದಿ ಪ್ರಬಲ ಆಕಾಂಕ್ಷಿಗಳು ಕಾಂಗ್ರೆಸ್‍ಗೆ ನುಂಗಲಾರದ- ಉಗುಳಲೂ ಸಾಧ್ಯವಾಗದೆ ಬಿಸಿ ತುಪ್ಪದಂತಾಗಿದ್ದಾರೆ. ಈ ನಡುವೆ ವೀರಪ್ಪ ಮೊಯ್ಲಿ ಪುತ್ರ, ಕ್ಷೇತ್ರದ ಓರ್ವ ಪ್ರಬಲ ಟಿಕೆಟ್ ಆಕಾಂಕ್ಷಿ ಹರ್ಷ ಮೊಯ್ಲಿ ಸಾರ್ವಜನಿಕವಾಗಿ ಉಡುಪಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

    ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜನೆಯ ಹಿಂದುಳಿದವರ ಸಮಾವೇಶಕ್ಕೆ ಹರ್ಷ ಮೊಯ್ಲಿ ರಾಜಕಾರಣಿಯ ಗೆಟಪ್‍ನಲ್ಲಿ ಬಂದಿಳಿದಿದ್ದಾರೆ. ಹರ್ಷ ಮೊಯ್ಲಿ ಆಗಮನ, ನಾಯಕರ ಜೊತೆ ಮಾತುಕತೆಗಳನ್ನು ನೋಡಿದ್ರೆ ಟಿಕೆಟ್ ಮೊಯ್ಲಿ ಪುತ್ರನಿಗೆ ಪಕ್ಕಾ ಆದಂತಿದೆ. ಮೊಯ್ಲಿ ಪುತ್ರನಿಗೆ ಕಾರ್ಕಳದಲ್ಲಿ ಟಿಕೆಟ್ ಕೊಟ್ಟರೆ ಪಕ್ಷದೊಳಗೆ ಭಿನ್ನಮತ ಆಗೋದ್ರಲ್ಲಿ ಸಂಶಯವೇ ಇಲ್ಲ.

    ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಈ ಬಾರಿ ಕೈ ಪಕ್ಷದ ಪ್ರಬಲ ಆಕಾಂಕ್ಷಿ. ಕಳೆದ ಎರಡು ವರ್ಷದಿಂದ ಉದಯ ಕುಮಾರ್ ಶೆಟ್ಟಿ ಕ್ಷೇತ್ರದಲ್ಲಿ ಎಲ್ಲಾ ತರದ ಸಿದ್ಧತೆ ನಡೆಸಿದ್ದಾರೆ. 25 ವರ್ಷದಿಂದ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಮತದಾರರ ಬೆಂಬಲ ಇದೆ, ಮಲಗಿದ್ದ ಕಾಂಗ್ರೆಸ್ಸನ್ನು ಬಡಿದೆಬ್ಬಿಸಿದ್ದೇನೆ ಎಂದು ಹೇಳಿರುವ ಉದಯ ಕುಮಾರ್ ಶೆಟ್ಟಿ, ಕೊನೆಯ ಹಂತದಲ್ಲಿ ಟಿಕೆಟ್ ಕೈತಪ್ಪಿದರೆ ಅಸಮಾಧಾನಗೊಳ್ಳೋದು ಗ್ಯಾರೆಂಟಿಯಾಗಿದೆ.

    ಕಾರ್ಕಳದಲ್ಲಿ ಎರಡು ಬಾರಿ ಗೆದ್ದು, ಎರಡು ಬಾರಿ ಸೋತ ನಾನು ಶುದ್ಧ ಹಸ್ತ. 45 ವರ್ಷದಿಂದ ಪಕ್ಷದ ಶಿಸ್ತಿನ ಸಿಪಾಯಿಯಂತೆ ದುಡಿದಿದ್ದೇನೆ. ನನಗೆ ಅವಕಾಶ ಕೊಟ್ಟರೆ ಮತ್ತೆ ಕಾರ್ಕಳದಲ್ಲಿ ತುಷ್ಠೀಕರಣದ ರಾಜಕಾರಣಕ್ಕೆ ಮುಕ್ತಿ ಕೊಡುತ್ತೇನೆ ಎಂದು ಮಾಜಿ ಶಾಸಕ ಗೋಪಾಲ ಭಂಡಾರಿ ಹೇಳುತ್ತಿದ್ದಾರೆ. ವೀರಪ್ಪ ಮೊಯ್ಲಿಯೇ ಮುಂದೆ ನಿಂತು ಈ ಬಾರಿ ಟಿಕೆಟ್ ನನ್ನ ಮಗನಿಗೆ ಅಂತ ಹೇಳಿದ್ರೆ ಮೊಯ್ಲಿ ಶಿಷ್ಯ ಭಂಡಾರಿ ಸೈಲೆಂಟಾಗ್ತಾರೆ.

    ಕಾರ್ಕಳಕ್ಕೆ ಒಬ್ಬ ಕಾಂಗ್ರೆಸ್ ನ ಎಂಎಲ್ ಎ ಬೇಕು. ಈಗಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವಧಿಯಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕ ಇದ್ದರೆ ಅಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಕೆಪಿಸಿಸಿ, ಎಐಸಿಸಿ ಸೆಲೆಕ್ಟ್ ಮಾಡೋಡು. ನನಗೆ ಟಿಕೆಟ್ ಫೈನಲ್ ಆಗಿದೆ ಎಂಬೂದು ಸರಿಯಲ್ಲ. ಕಾರ್ಕಳದಲ್ಲಿ ಹಲವಾರು ನಾಯಕರಿದ್ದಾರೆ. ಎಲ್ಲರಿಗೂ ನನಗೆ ಟಿಕೆಟ್ ಸಿಕ್ಕರೆ ಕೆಲಸ ಮಾಡಬಹುದು ಎಂಬ ಆಕಾಂಕ್ಷೆಯಿದೆ. ಅದು ತಪ್ಪೂ ಅಲ್ಲ. ರಾಜಕೀಯದಲ್ಲಿ ಅಕಾಂಕ್ಷೆಗಳು ತಪ್ಪಲ್ಲ. ಕಾಂಗ್ರೆಸ್ ವಿನ್ ಆಗ್ಬೇಕು ಅನ್ನೋದು ಎಲ್ಲರ ಆಕಾಂಕ್ಷೆ. ಒಂದು ವೇಳೆ ಪಾರ್ಟಿ ಹೇಳಿದರೆ ನಾನು ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ ಹರ್ಷ ಮೊಯ್ಲಿ ಹೇಳಿದ್ದಾರೆ.