Tag: ಹರ್ಯಾಣ ವಿಧಾನಸಭಾ ಚುನಾವಣೆ 2019

  • ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಖಟ್ಟರ್

    ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಖಟ್ಟರ್

    -ದುಷ್ಯಂತ್ ಚೌಟಾಲಾ ಡಿಸಿಎಂ

    ಚಂಡೀಗಢ: ಬಿಜೆಪಿ ನಾಯಕ ಮನೋಹರ್ ಲಾಲ್ ಖಟ್ಟರ್ ಮತ್ತು ಜನ್‍ನಾಯಕ್ ಜನತಾ ಪಾರ್ಟಿಯ ಮುಖ್ಯಸ್ಥ ದುಷ್ಯಂತ್ ಚೌಟಾಲಾ ಇಂದು ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

    ಚಂಡೀಗಢನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಖಟ್ಟರ್ ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತ ಮೈತ್ರಿ ಪಕ್ಷ ಜೆಜೆಪಿಯ ನಾಯಕ ದುಷ್ಯಂತ್ ಚೌಟಾಲಾ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗರ್ವನರ್ ಸತ್ಯದೋವೋ ನರೈನ್ ಆರ್ಯ ಇಬ್ಬರು ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.

    ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಜೆಪಿಯ ಕಾರ್ಯನಿರತ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಜೆಜೆಪಿ ಮುಖಂಡರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಕಾಂಗ್ರೆಸ್ ನ ಭೂಪೀಂದ್ರ ಹೂಡಾ ಹಾಗೂ ಅಕಾಲಿದಳ ನಾಯಕ ಪ್ರಕಾಶ್ ಸಿಂಗ್ ಬಾದಲ್, ಪಕ್ಷದ ಮುಖಂಡರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಚುನಾವಣೆಯಲ್ಲಿ ಹರ್ಯಾಣದ ಜನತೆ ಯಾವ ಪಕ್ಷಕ್ಕೂ ಬಹುಮತವನ್ನು ನೀಡಿರಲಿಲ್ಲ. ಹಾಗಾಗಿ ಬಿಜೆಪಿ ತನ್ನ 40 ಶಾಸಕರೊಂದಿಗೆ ಜೆಜೆಪಿಯ 10 ಮತ್ತು ಪಕ್ಷೇತರ 7 ಶಾಸಕರ ಬೆಂಬಲದೊಂದಿಗೆ ಹರ್ಯಾಣದಲ್ಲಿ ಸರ್ಕಾರ ರಚಿಸಿದೆ.

    ಗುರುವಾರ ಪ್ರಕಟವಾದ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವು ಅಂತಂತ್ರ ಸ್ಥಿತಿಯನ್ನು ತಂದೊಡ್ಡಿತ್ತು. ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜನನಾಯಕ್ ಜನತಾ ಪಕ್ಷ 10 ಸೀಟ್‍ಗಳನ್ನು ಗೆದ್ದಿವೆ. ಪಕ್ಷೇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇತರೆ ಪಕ್ಷಗಳು ಎರಡು ಸ್ಥಾನಗಳನ್ನು ಪಡೆದಿವೆ. ಬಿಜೆಪಿ ಸರ್ಕಾರ ರಚಿಸಲು ಕೇವಲ 6 ಸ್ಥಾನಗಳ ಕೊರತೆ ಉಂಟಾಗಿತ್ತು. 31 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಜೆಜೆಪಿ ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಲು ಮುಂದಾಗಿತ್ತು. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ ಉಂಟಾಗಿತ್ತು.

  • ಹರ್ಯಾಣದಲ್ಲಿ ಆಪ್ ಫ್ಲಾಪ್- ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಕೇಜ್ರಿವಾಲ್‍ಗೆ ಮುಖಭಂಗ

    ಹರ್ಯಾಣದಲ್ಲಿ ಆಪ್ ಫ್ಲಾಪ್- ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಕೇಜ್ರಿವಾಲ್‍ಗೆ ಮುಖಭಂಗ

    ಚಂಡೀಗಢ: ದೆಹಲಿ ಬಳಿಕ ಹರ್ಯಾಣದಲ್ಲಿ ಆಪ್ ಪಕ್ಷದ ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಭಾರೀ ಮುಖಭಂಗವಾಗಿದೆ.

    ಬಹುಮತದಿಂದ ದೆಹಲಿಯಲ್ಲಿ ಸರ್ಕಾರ ರಚಿಸಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಬೇರೆ ರಾಜ್ಯಗಳಲ್ಲಿ ಪಕ್ಷದ ಅಸ್ತಿತ್ವ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ದೆಹಲಿಯ ನೆರೆಯ ರಾಜ್ಯವಾದ ಹರ್ಯಾಣದ ಚುನಾವಣೆ ಮೇಲೆ ಹೆಚ್ಚು ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಆಪ್ ಅಭ್ಯರ್ಥಿಗಳು ಬಹುತೇಕ ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದ್ದಾರೆ.

    ಹರ್ಯಾಣದ 90 ಕ್ಷೇತ್ರಗಳಲ್ಲಿ 46ರಲ್ಲಿ ಆಪ್ ಸ್ಪರ್ಧೆ ಮಾಡಿತ್ತು. 46 ಕ್ಷೇತ್ರಗಳಲ್ಲಿ ಆಪ್ ಶೇ.0.48ರಷ್ಟು ಮಾತ್ರ ಮತಗಳನ್ನು ಪಡೆದುಕೊಂಡಿದೆ. ನೋಟಾಗೆ ಶೇ. 0.52 ಮತಗಳು ಬಿದ್ದಿವೆ.

    ಕಾಂಗ್ರೆಸ್, ಬಿಜೆಪಿ ಮತ್ತು ಜನ್‍ನಾಯಕ್ ಜನತಾ ಪಾರ್ಟಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿಗಳು ಸೋಲು ಕಂಡಿದ್ದರು. ದೆಹಲಿಯಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಆಪ್ ಹರ್ಯಾಣದಲ್ಲಿ ಮತ ಕೇಳಿತ್ತು. ಅರವಿಂದ್ ಕೇಜ್ರಿವಾಲ್ ಸಹ ಸೇರಿದಂತೆ ಹೆಚ್ಚು ನಾಯಕರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಕೇವಲ ಸ್ಥಳೀಯ ನಾಯಕರು ಮಾತ್ರ ಚುನಾವಣಾ ಪ್ರಚಾರ ನಡೆಸಿದ್ದರು.

  • ಬಿಜೆಪಿ ಕಡೆಗೆ ಒಲವು ತೋರಿಸಿದ್ರಾ ದುಶ್ಯಂತ್ ಚೌಟಾಲಾ?

    ಬಿಜೆಪಿ ಕಡೆಗೆ ಒಲವು ತೋರಿಸಿದ್ರಾ ದುಶ್ಯಂತ್ ಚೌಟಾಲಾ?

    – ಕಾಂಗ್ರೆಸ್‍ನಿಂದ ಜೆಜೆಪಿಗೆ ಸಿಎಂ ಆಫರ್

    ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜನನಾಯಕ ಜನತಾ ಪಕ್ಷ (ಜೆಜೆಪಿ)ಯು ರಾಷ್ಟ್ರೀಯ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭರ್ಜರಿ ಪೈಪೋಟಿ ಕೊಟ್ಟಿದೆ. ಈ ಬೆನ್ನಲ್ಲೇ ಮೈತ್ರಿ ಸರ್ಕಾರ ರಚನೆಗೆ ಬಿಜೆಪಿ ಆಫರ್ ನೀಡಿದೆ.

    ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ರಚನೆಗೆ ಜೆಜೆಪಿ ಅಗತ್ಯ ಎನ್ನುವಂತಹ ವಾತಾವರಣ ಹರ್ಯಾಣದಲ್ಲಿ ನಿರ್ಮಾಣವಾಗಿದೆ. ಜೆಜೆಪಿ ಪಕ್ಷ ಸ್ಥಾಪನೆಯಾಗಿ ಇನ್ನೂ ಒಂದು ವರ್ಷ ಕೂಡ ಕಳೆದಿಲ್ಲ. ಆದರೂ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಸದ್ದು ಮಾಡಿದೆ.

    ಹರ್ಯಾಣದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ನಿರ್ಧಾರ ಕೈಗೊಳ್ಳುವ ವಿಶೇಷ ಸಾಮಥ್ರ್ಯವನ್ನು ಜೆಜೆಪಿ ಗಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ರಚನೆಗೆ ಬಿಜೆಪಿಯು ಜೆಜೆಪಿ ನಾಯಕ ದುಶ್ಯಂತ್ ಸಿಂಗ್ ಚೌಟಾಲಾ ಅವರ ಪಕ್ಷದ ಬಾಗಿಲು ತಟ್ಟಿದೆ.

    ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ದುಶ್ಯಂತ್ ಸಿಂಗ್ ಚೌಟಾಲಾ ಮುಂದಾಗಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ದುಶ್ಯಂತ್ ಚೌಟಾಲಾ, ಪಕ್ಷದ ಪ್ರತಿಯೊಬ್ಬ ಮುಖಂಡರು, ಆಯ್ಕೆಯಾದ ಅಭ್ಯರ್ಥಿಗಳ ಜೊತೆಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯದ ಅಭಿವೃದ್ಧಿಯೇ ಪಕ್ಷದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

    ಇತ್ತ ಕಾಂಗ್ರೆಸ್ ದುಶ್ಯಂತ್ ಚೌಟಾಲಾ ಅವರಿಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಹರ್ಯಾಣ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಅಶೋಕ್ ಅನ್ವಾರ್, ರಾಜ್ಯದ ಜನರು ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ದುಶ್ಯಂತ್ ಚೌಟಾಲಾ ಅವರೇ ಮುಂದಿನ ಮುಖ್ಯಮಂತ್ರಿ. ಇದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

  • ಬಿಜೆಪಿ ಟಿಕೆಟ್ ಪಡೆದಿದ್ದ ಟಿಕ್ ಟಾಕ್ ಸ್ಟಾರ್ ಸೋನಾಲಿ ಫೋಗಟ್‍ಗೆ ಸೋಲು

    ಬಿಜೆಪಿ ಟಿಕೆಟ್ ಪಡೆದಿದ್ದ ಟಿಕ್ ಟಾಕ್ ಸ್ಟಾರ್ ಸೋನಾಲಿ ಫೋಗಟ್‍ಗೆ ಸೋಲು

    ಚಂಡೀಗಢ: ಈ ಬಾರಿ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕ್‍ಟಾಕ್ ಸ್ಟಾರ್ ಸೋನಾಲಿ ಫೋಗಟ್ ಸೋಲು ಕಂಡಿದ್ದಾರೆ.

    ಕಾಂಗ್ರೆಸ್ ನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋನಾಲಿ ಫೋಗಟ್ ಸೋಲು ಅನುಭವಿಸಿದ್ದಾರೆ. ಆದಂಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, 11 ಬಾರಿ ಬಿಶ್ನೋಯಿ ಕುಟುಂಬದ ಸದಸ್ಯರೇ ಸತತವಾಗಿ ಗೆಲುವಿನ ವಿಜಯಮಾಲೆ ಧರಿಸುತ್ತಾ ಬಂದಿದ್ದಾರೆ.

    ಕುಲದೀಪ್ ಬಿಶ್ನೋಯಿ 55,554 (ಶೇ.52.34) ಮತಗಳನ್ನು ಪಡೆದುಕೊಂಡಿದ್ದಾರೆ. ಸೋನಾಲಿ ಫೋಗಟ್ 28,888 (ಶೇ.27.22) ಮತಗಳನ್ನು ಪಡೆದುಕೊಂಡಿದ್ದಾರೆ.

    ಹರ್ಯಾಣದ ಹಿಸಾರ್ ಜಿಲ್ಲೆಯ ಸಂತ ನಗರದ ನಿವಾಸಿ ಸೋನಾಲಿ ಫೋಗಟ್ (40) ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಚರ್ಚೆಯಲ್ಲಿದ್ದರು. ಹರ್ಯಾಣದ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಸೋನಾಲಿ ಫೋಗಾಟ್ ಆದಂಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಹರಿಯಾಣ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯೆಯಾಗಿದ್ದರಿಂದ ಸೋನಾಲಿ ಫೋಗಟ್ ಟಿಕೆಟ್ ಪಡೆದು ಚುನಾವಣೆ ಕಣಕ್ಕೆ ಇಳಿದಿದ್ದರು.

    ಹರ್ಯಾಣದ ಮಾಜಿ ಮುಖ್ಯಮಂತ್ರಿ ಚೌಧರಿ ಭಜನ್ ಲಾಲ್ ಪುತ್ರ ಕುಲದೀಪ್ ಬಿಶ್ನೋಯಿ ಕ್ಷೇತ್ರ ಉಳಿಸಿಕೊಳ್ಳಲು ಭಾರೀ ಪ್ರಚಾರ ನಡೆಸಿದ್ದರು. ಹರ್ಯಾಣ 12 ವಿಧಾನಸಭಾ ಚುನಾವಣೆಯಲ್ಲಿ 11 ಬಾರಿ ಆದಂಪುರ ಕ್ಷೇತ್ರದಲ್ಲಿ ಬಿಶ್ನೋಯಿ ಕುಟುಂಬಸ್ಥರೇ ಗೆಲ್ಲುತ್ತಾ ಬಂದಿದ್ದಾರೆ. ಜಾಟ್ ಸಮುದಾಯದ ಕುಲದೀಪ್ ಮೂರು ಬಾರಿ ಶಾಸಕರಾಗಿ ಮತ್ತು ಒಂದು ಸಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹರ್ಯಾಣ ಕಾಂಗ್ರೆಸ್‍ನ ಜಾಟ್ ಸಮುದಾಯದ ನಾಯಕರಾಗಿಯೂ ಕುಲದೀಪ್ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಹರ್ಯಾಣದ ಹೆಚ್ಚು ಜಾಟ್ ಸಮುದಾಯದ ಜನರು ವಾಸಿಸುವ ಕ್ಷೇತ್ರಗಳಲ್ಲಿ ಕುಲ್‍ದೀಪ್ ಕೈ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರು.

    ಜನ್‍ನಾಯಕ್ ಜನತಾ ಪಾರ್ಟಿಯ ರಮೇಶ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಆದಂಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.