Tag: ಹರ್ಯಾಣ ವಿಧಾನಸಭಾ ಚುನಾವಣೆ

  • ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

    ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

    – ಬಿಜೆಪಿ, ಜೆಜೆಪಿ ಮೈತ್ರಿಯನ್ನ ಟೀಕಿಸಿದ ಶಿವಸೇನೆ

    ಮುಂಬೈ: ಶಿವಸೇನೆಯಲ್ಲಿ ಯಾರು ದುಷ್ಯಂತ್ ಚೌಟಾಲ ಇಲ್ಲ. ಅವರ ತಂದೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನಮ್ಮದು ಧರ್ಮ ಮತ್ತು ಸತ್ಯದ ರಾಜಕೀಯ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹರ್ಯಾಣ ಮೈತ್ರಿಯನ್ನ ಟೀಕಿಸಿದ್ದಾರೆ.

    ಬಿಜೆಪಿ, ಎನ್‍ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿದೆ ಎಂಬ ಲೆಕ್ಕಾಚಾರಗಳು ಮಹಾರಾಷ್ಟ್ರದ ರಾಜಕೀಯ ಅಂಗಳಲ್ಲಿ ಕೇಳಿ ಬರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಜತ್ ರಾವತ್, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಬಂಡಾಯ ಬಂದು ಪಕ್ಷ ರಚನೆ ಮಾಡಿದ್ದಾರೆ. ನನ್ನ ಪ್ರಕಾರ ಶರದ್ ಪವಾರ ಬಿಜೆಪಿ ಜೊತೆ ಹೋಗಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

    ಶಿವಸೇನೆ ಬೇರೆ ವಿಚಾರಗಳು ಮತ್ತು ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿಲ್ಲ. ಶಿವಸೇನೆ ಮುಂದೆ ಹಲವು ಅವಕಾಶಗಳಿದ್ದು, ಆದ್ರೆ ನಾವು ಅದರತ್ತ ಹೋಗಿ ಪಾಪ ಮಾಡಲ್ಲ. ಶಿವಸೇನೆ ಯಾವಾಗಲೂ ಸತ್ಯದ ರಾಜಕಾರಣ ಮಾಡಿಕೊಂಡು ಬಂದಿದೆ. ನಾವು ಅಧಿಕಾರಕ್ಕಾಗಿ ಹಸಿದು ಕುಳಿತಿಲ್ಲ ಎಂದು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದರು.

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ಐದು ದಿನ ಕಳೆದರೂ ಇದೂವರೆಗೂ ಸರ್ಕಾರ ರಚನೆಯಾಗಿಲ್ಲ. ಬಿಜೆಪಿ ಮತ್ತು ಶಿವಸೇನೆ ಮೈತ್ರಿಗೆ ಸ್ಪಷ್ಟ ಬಹುಮತ ಹೊಂದಿದ್ದರೂ, ಎರಡು ಪಕ್ಷಗಳ ನಡುವೆ ಸಿಎಂ ಪದವಿಗಾಗಿ ಶೀತಲ ಸಮರ ಏರ್ಪಟ್ಟಿದೆ. ಶಿವಸೇನೆಯ 50:50 ಫಾರ್ಮುಲಾ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಅಕ್ಟೋಬರ್ 24ರಂದು ಫಲಿತಾಂಶ ಹರ್ಯಾಣದಲ್ಲಿ ಜೆಜೆಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಮನೋಹರ್ ಲಾಲ್ ಖಟ್ಟರ್ ಎರಡನೇ ಬಾರಿ ಸಿಎಂ ಆದ್ರೆ, ಜೆಜೆಪಿಯ ದುಷ್ಯಂತ್ ಚೌಟಾಲಾ ಡಿಸಿಎಂ ಆಗಿದ್ದಾರೆ.

    2014ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಶಿವಸೇನೆ 63 ಮತ್ತು ಬಿಜೆಪಿ 122 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ನಂತರ ಎರಡೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗಿತ್ತು.

    2019ರಲ್ಲಿ ಬಿಜೆಪಿ ಚುನಾವಣೆ ಪೂರ್ವದಲ್ಲಿಯೇ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಇತ್ತ ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ರಚನೆ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. ಬಿಜೆಪಿ 105, ಶಿವಸೇನೆ, 56, ಎನ್‍ಸಿಪಿ 54, ಕಾಂಗ್ರೆಸ್ 44 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

    ಚೌಟಾಲಾ ತಂದೆಗೆ ಪೆರೋಲ್:
    ದುಷ್ಯಂತ್ ಚೌಟಾಲಾ ತಂದೆ ಅಜಯ್ ಚೌಟಾಲಾ ಜೂನಿಯರ್ ಬೇಸಿಕ್ ಟ್ರೆಂಡ್ (ಜೆಬಿಟಿ) ಶಿಕ್ಷಕರ ಹುದ್ದೆ ಭರ್ತಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ತಿಹಾರ್ ಜೈಲು ಸೇರಿದ್ದಾರೆ. ಅಜಯ್ ಚೌಟಾಲಾಗೆ ಸಿಬಿಐ ವಿಶೇಷ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸಿದೆ. ಸದ್ಯ ಎರಡು ವಾರಗಳ ಪೆರೋಲ್ ಪಡೆದುಕೊಂಡು ಹೊರ ಬಂದಿದ್ದಾರೆ. ತಿಹಾರ್ ಜೈಲಿನಲ್ಲಿರುವ ಅಜಯ್ ಚೌಟಾಲಾರ ಬಳಿ ಮೊಬೈಲ್ ಪತ್ತೆಯಾಗಿತ್ತು. ಅಧಿಕಾರಿಗಳು ಜೂನ್ ನಲ್ಲಿ ಅಜಯ್ ಚೌಟಾಲಾರನ್ನು ಪರಿಶೀಲನೆಗೆ ಒಳಪಡಿಸಿದಾಗ ಮೊಬೈಲ್ ಪತ್ತೆಯಾಗಿತ್ತು. ತಿಹಾರ್ ಜೈಲಿನಲ್ಲಿ ಅಜಯ್ ಚೌಟಾಲಾರಿಗೆ ಫೋನ್ ನೀಡಿದ್ದು ಯಾರು ಎಂಬುದರ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು.

  • ಬಿಜೆಪಿಯಿಂದ ಚುನಾವಣೆಗಿಳಿದಿದ್ದ ಬಬಿತಾ ಫೋಗಟ್, ಯೋಗೇಶ್ವರ್ ಗೆ ಸೋಲು

    ಬಿಜೆಪಿಯಿಂದ ಚುನಾವಣೆಗಿಳಿದಿದ್ದ ಬಬಿತಾ ಫೋಗಟ್, ಯೋಗೇಶ್ವರ್ ಗೆ ಸೋಲು

    -ಗೆದ್ದ ಹಾಕಿ ಆಟಗಾರ ಸಂದೀಪ್ ಸಿಂಗ್

    ಚಂಡೀಗಢ: ಈ ಬಾರಿ ಬಿಜೆಪಿ ಹರ್ಯಾಣದಲ್ಲಿ ಮೂರು ಕ್ರೀಡಾಪಟುಗಳಿಗೆ ಬಿ ಫಾರಂ ನೀಡಿತ್ತು. ಕುಸ್ತಿಪಟುಗಳಾದ ಬಬಿತಾ ಪೋಗಾಟ್, ಯೋಗೇಶ್ವರ್ ದತ್ ಮತ್ತು ಹಾಕಿ ಆಟಗಾರ ಸಂದೀಪ್ ಸಿಂಗ್ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಬಬಿತಾ ಮತ್ತು ಯೋಗೇಶ್ವರ್ ಮೊದಲ ಚುನಾವಣೆಯಲ್ಲಿ ಸೋಲಿನ ರುಚಿ ನೀಡಿದರು. ಇತ್ತ ಸಂದೀಪ್ ಸಿಂಗ್ ಗೆದ್ದು ಜಯದ ನಗೆ ಬೀರಿದ್ದಾರೆ.

    ಬದೌಡಾ ವಿಧಾನಸಭಾ ಕ್ಷೇತ್ರದಲ್ಲಿ ಯೋಗೇಶ್ವರ್ ದತ್ ಕಣದಲ್ಲಿದ್ದು, ಕಾಂಗ್ರೆಸ್‍ನ ಶ್ರೀಕೃಷ್ಣ ಹೂಡಾಗೆ ನೇರ ಪೈಪೋಟಿ ನೀಡಿದ್ದರು. ಆರಂಭದಿಂದಲೂ ಮುನ್ನಡೆ ಸಾಧಿಸುತ್ತ ಬಂದ ಶ್ರೀಕೃಷ್ಣ ಗೆಲುವಿನ ಕೇಕೆ ಹಾಕಿದರು. 2014ರ ಚುನಾವಣೆಯಲ್ಲಿಯೂ ಶ್ರೀಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದರು.

    ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಬಿಜೆಪಿಯಿಂದ ಪೆಹೊವಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆರಂಭದಿಂದಲೂ ಕಾಂಗ್ರೆಸ್ ನ ಮನ್ದೀಪ್ ಸಿಂಗ್ ಗೆ ಟಕ್ಕರ್ ನೀಡುತ್ತಾ ಬಂದಿದ್ದರು.

    ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಬಬಿತಾ ಫೋಗಾಟ್ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿ ಸೋಮ್‍ವೀರ್ ಸಂಗ್ವಾನ್ ವಿರುದ್ಧ ಬಬಿತಾ ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸೋಮ್ ವೀರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಮಲ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.

  • ಮತಗಟ್ಟೆ ಸಮೀಕ್ಷೆಗಳಲ್ಲೂ ಬಿಜೆಪಿಗೆ ಬಹುಮತ – ಮಹಾರಾಷ್ಟ್ರ, ಹರ್ಯಾಣದಲ್ಲಿ ಮತ್ತೆ ಗದ್ದುಗೆ

    ಮತಗಟ್ಟೆ ಸಮೀಕ್ಷೆಗಳಲ್ಲೂ ಬಿಜೆಪಿಗೆ ಬಹುಮತ – ಮಹಾರಾಷ್ಟ್ರ, ಹರ್ಯಾಣದಲ್ಲಿ ಮತ್ತೆ ಗದ್ದುಗೆ

    ನವದೆಹಲಿ: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಅಂತ್ಯವಾಗಿದ್ದು, ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಗುಟ್ಟು ಇವಿಯಂ ಯಂತ್ರದಲ್ಲಿ ಲಾಕ್ ಆಗಿದೆ. ಅಕ್ಟೋಬರ್ 24ರಂದು ಎರಡು ರಾಜ್ಯಗಳ ಚುಣಾವಣೆ ಫಲಿತಾಂಶ ಹೊರ ಬೀಳಲಿದೆ. ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದಿದ್ದು, ಎರಡು ರಾಜ್ಯಗಳಲ್ಲಿ ಮತ್ತೊಮ್ಮೆ ಕೇಸರಿ ರಣ ಕಹಳೆ ಮೊಳಗಲಿದೆ ಎಂದು ಸಮೀಕ್ಷೆಗಳು ಸ್ಪಷ್ಟವಾಗಿ ಹೇಳುತ್ತಿವೆ.

    ಲೋಕಸಭಾ ಚುನಾವಣೆ ಬಳಿಕ ಮೊದಲ ವಿಧಾನಸಭಾ ಚುನಾವಣೆ ಇದಾಗಿದ್ದು, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪ್ರತಿಷ್ಠೆಯ ಕಣವಾಗಿತ್ತು. ಇತ್ತ ಕಾಂಗ್ರೆಸ್ ಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಶ್ನೆ ಎದುರಾಗಿತ್ತು. ಎರಡು ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಿದ್ದವು. ಸಮೀಕ್ಷೆಗಳು ಮಾತ್ರ ಮತ್ತೊಮ್ಮೆ ಮೋದಿ- ಅಮಿತಾ ಶಾ ಜೋಡಿಯೇ ಮೇಲುಗೈ ಸಾಧಿಸಲಿವೆ ವಿಚಾರವನ್ನು ಸಮೀಕ್ಷೆಗಳ ಅಂಕಿಗಳು ಸ್ಪಷ್ಟಪಡಿಸುತ್ತಿವೆ.

    ಇಂಡಿಯಾ ಟುಡೇ:
    ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಧಿಕಾರ ಹಿಡಿಯಲಿದೆ. ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 109-124, ಶಿವಸೇನೆ 57-40, ಕಾಂಗ್ರೆಸ್ 32-40, ಎನ್‍ಸಿಪಿ 40-50, ವಿಬಿಎ 0-2 ಮತ್ತು ಇತರರು 22-32 ಕ್ಷೇತ್ರಗಳಲ್ಲಿ ಗೆಲುವನ್ನು ದಾಖಲಿಸಬಹುದು ಇಂಡಿಯಾ ಟುಡೇ ಸಮೀಕ್ಷೆ ಹೇಳಿದೆ. ಇಂಡಿಯಾ ಟುಡೇ ಪ್ರಕಾರ ಹರ್ಯಾಣದಲ್ಲಿ ಬಿಜೆಪಿ 77, ಕಾಂಗ್ರೆಸ್ 11 ಮತ್ತು ಇತರರು 1 ಕ್ಷೇತ್ರದಲ್ಲಿ ಗೆಲುವು ದಾಖಲಿಸುವ ಸಾಧ್ಯತೆಗಳಿವೆ.

    2014ರಲ್ಲಿ ನಡೆದ ಚುನಾವಣೆ ವೇಳೆ ಬಿಜೆಪಿ ಮತ್ತು ಶಿವಸೇನೆ 185 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಸರ್ಕಾರ ರಚನೆ ಮಾಡಿದ್ದವು. ಕಾಂಗ್ರೆಸ್ 83 ಮತ್ತು ಪಕ್ಷೇತರ ಅಭ್ಯರ್ಥಿಗಳು 20 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರು. ಹರ್ಯಾಣದಲ್ಲಿ ನಡೆದ 2014ರ ಚುನಾವಣೆಯಲ್ಲಿ ಬಿಜೆಪಿ 47, ಕಾಂಗ್ರೆಸ್ 15 ಮತ್ತು ಇತರರು 28 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

    ಇಂದು ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ.55.31 ಮತ್ತು ಹರ್ಯಾಣದಲ್ಲಿ ಶೇ.61.62ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದ 288, ಹರ್ಯಾಣದ 90 ಮತ್ತು ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಬಹುತೇಕ ಎಲ್ಲ ಕಡೆಯೂ ಶಾಂತಿಯುತ ಮತದಾನವಾಗಿದೆ ಎಂದು ವರದಿಯಾಗಿದೆ.

    ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಸಂಜೆ ಆರು ಗಂಟೆಗೆ ಒಟ್ಟು ಶೇ.55.31 ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿ ಮತ್ತು ಕಾಂಗ್ರೆಸ್,ಎನ್‍ಸಿಪಿ ಮೈತ್ರಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಭದ್ರವಾಗಿದೆ.

    ದೇಶದ ವಿವಿಧ ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂದು ಉಪ ಚುನಾವಣೆ ನಡೆದಿದೆ. ಗುಜರಾತ-6, ಅಸ್ಸಾಂ-4, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ ಎರಡು, ಉತ್ತರ ಪ್ರದೇಶದ 11 ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆದಿದೆ. ಪಂಜಾಬ್-4, ಕೇರಳ-5, ಸಿಕ್ಕಿಂ-3, ರಾಜಸ್ಥಾನ-2, ಮಧ್ಯ ಪ್ರದೇಶ, ಓಡಿಸ್ಸಾ, ಛತ್ತೀಸಗಢ, ಪುದುಚೇರಿ, ಮೇಘಾಲಯ ಮತ್ತು ತೆಲಂಗಾಣದಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ.

    ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಚುನಾವಣೆ ನಡೆದಿದ್ದು, ಸಂಜೆ 6ಗಂಟೆವರೆಗೆ ಶೇ.61.62ರಷ್ಟು ಮತದಾನವಾಗಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯನ್ ನ್ಯಾಶನಲ್ ಲೋಕ್ ದಳದಿಂದ ಬೇರೆಯಾಗಿರುವ ಜೆಜೆಪಿ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡಲಿದ್ದಾರೆ. ಒಂದು ಹರ್ಯಾಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.