Tag: ಹರ್ಮನ್ ಪ್ರೀತ್ ಕೌರ್

  • ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

    ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

    – ಏಕದಿನ ಸರಣಿಯಲ್ಲಿ ಭಾರತ – ಬಾಂಗ್ಲಾದೇಶ ಸಮಬಲ

    ಢಾಕಾ: ಇತ್ತೀಚೆಗೆ ಕ್ರಿಕೆಟ್‌ನಲ್ಲಿ (Cricket) ವಿವಾದಗಳು ಸಾಮಾನ್ಯವಾಗಿಬಿಟ್ಟಿದ್ದು, ಅಂಪೈರ್‌ಗಳು (Umpir) ನೀಡುವ ತೀರ್ಪುಗಳೇ ಇದಕ್ಕೆ ಕಾರಣವಾಗುತ್ತಿವೆ. ವಿವಾದಿತ ತೀರ್ಪುಗಳಿಂದಾಗಿ ಆಟಗಾರರ ನಡುವೆ ವಿವಾದ ಸೃಷ್ಟಿಯಾಗುತ್ತಿವೆ.‌ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ (India Womens) ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ವಿವಾದ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಬಾಂಗ್ಲಾದೇಶ ಪ್ರವಾಸದಲ್ಲಿ ಆತಿಥೇಯರ ಎದುರು ಏಕದಿನ ಕ್ರಿಕೆಟ್‌ ಸರಣಿ ಗೆಲುವಿಗೆ ಅಡ್ಡಗಾಲಾದ ಅಂಪೈರ್‌ಗಳ ವಿರುದ್ಧ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಹರಿಹಾಯ್ದಿದ್ದಾರೆ. ಶೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಏಕದಿನ ಕ್ರಿಕೆಟ್‌ ಸರಣಿಯ 3ನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ರೋಚಕ ಟೈ ಫಲಿತಾಂಶದಲ್ಲಿ ಅಂತ್ಯಗೊಂಡಿತು. ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. ಆದ್ರೆ ಅಂಪೈರ್‌ ತೀರ್ಪಿನಿಂದ ಗೆಲುವು ಲಭ್ಯವಾಗದೇಹೋದ ಬಗ್ಗೆ ಹರ್ಮನ್‌ಪ್ರೀತ್‌ ಕೌರ್‌ ಆಕ್ರೋಶ ಹೊರಹಾಕಿದ್ದಾರೆ. ಇನ್ನು 3 ಪಂದ್ಯಗಳ ಒಡಿಐ ಸರಣಿ 1-1 ಅಂತರದಲ್ಲಿ ಸಮಬಲದೊಂದಿಗೆ ಅಂತ್ಯಗೊಂಡಿತು.

    ಒತ್ತಡದ ಪಂದ್ಯದಲ್ಲಿ ಗೆಲುವಿಗೆ 226 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಅನುಭವಿ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ (59 ರನ್‌,85 ಎಸೆತ) ಜವಾಬ್ದಾರಿಯುತ ಆಟವಾಡಿ 3ನೇ ವಿಕೆಟ್‌ಗೆ ಹರ್ಲೀನ್‌ ಡಿಯೋಲ್‌ (77 ರನ್,85 ಎಸೆತ) ಜೊತೆಗೂಡಿ 107 ರನ್‌ ಒಗ್ಗೂಡಿಸಿದರು. ಈ ಜೊತೆಯಾಟದೊಂದಿಗೆ ಭಾರತ ತಂಡ ಸುಲಭವಾಗಿ ಜಯದ ಕಡೆಗೆ ದಾಪುಗಾಲಿಟ್ಟಿತ್ತು. ಮಂಧಾನಾ ವಿಕೆಟ್‌ ಪತನವಾದಾಗ ಭಾರತ ತಂಡಕ್ಕೆ ಇನ್ನು 87 ರನ್‌ಗಳ ಅಗತ್ಯವಿತ್ತು.

    ಬಾಂಗ್ಲಾ ಕಳಪೆ ಅಂಪೈರಿಂಗ್‌:
    5ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, 21 ಎಸೆತಗಳಲ್ಲಿ 2 ಫೋರ್‌ಗಳೊಂದಿಗೆ 14 ರನ್‌ ಗಳಿಸಿ ಎಚ್ಚರಿಕೆಯಿಂದ ತಂಡವನ್ನು ಜಯದ ದಡ ಮುಟ್ಟಿಸುವ ಪ್ರಯತ್ನದಲ್ಲಿದ್ದರು. ಆದರೆ, ಅಂಪೈರ್‌ ನೀಡಿದ ಕಳಪೆ ಎಲ್‌ಬಿಡಬ್ಲ್ಯು ನಿರ್ಧಾರ ಕಾರಣ ಪೆವಿಲಿಯನ್ ಸೇರುವಂತ್ತಾಯಿತು.

    ಅಂಪೈರ್‌ಗಳ ಎಡವಟ್ಟು – ಹರ್ಮನ್‌ ಸಿಟ್ಟು:
    ಇನಿಂಗ್ಸ್‌ನ 34ನೇ ಓವರ್‌ನಲ್ಲಿ ಸ್ಪಿನ್ನರ್ ನಹೀದಾ ಅಖ್ತರ್‌ ಎದುರು ಸ್ವೀಪ್ ಶಾಟ್‌ಗೆ ಪ್ರಯತ್ನಿಸಿದಾಗ ಬಾಲ್‌ ಪ್ಯಾಡ್‌ಗೆ ಬಡಿಯಿತು. ಹಾಗಾಗಿ ಆನ್‌ಫೀಲ್ಡ್‌ ಅಂಪೈರ್‌ ಎಲ್‌ಬಿಡಬ್ಲ್ಯೂ ಅಂತಾ ಔಟ್‌ ತೀರ್ಪು ನೀಡಿದರು. ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ತೋರಿಸಿದ ಹರ್ಮನ್‌ಪ್ರೀತ್‌ ಬ್ಯಾಟ್‌ನಿಂದ ಸ್ಟಂಪ್ಸ್‌ಗೆ ಹೊಡೆದು ಅಸಮಾಧಾನ ಹೊರಹಾಕಿದ್ದರು. ಅಂದಹಾಗೆ ಚೆಂಡು ಬ್ಯಾಟ್‌ಗೆ ತಾಗಿದ್ದರೆ ಸ್ಲಿಪ್‌ ಫೀಲ್ಡರ್‌ ಕ್ಯಾಚ್‌ ತೆಗೆದುಕೊಂಡಿದ್ದ ಕಾರಣ ಆಗಲೂ ಹರ್ಮನ್‌ ಔಟ್‌ ಆಗುತ್ತಿದ್ದರು. ಆದ್ರೆ ಅಂಪೈರ್‌ ಅದನ್ನ ಎಲ್‌ಬಿಡಬ್ಲ್ಯು ಎಂದು ಘೋಷಿಸಿದ್ದು 34 ವರ್ಷದ ಬಲಗೈ ಬ್ಯಾಟರ್‌ ಹರ್ಮನ್ ಕೋಪಕ್ಕೆ ಕಾರಣವಾಯಿತು.

    ಹರ್ಮನ್‌ಪ್ರೀತ್‌ ಕೌರ್ ವಿಕೆಟ್‌ ಪತನದ ಬಳಿಕ ಭಾರತ ತಂಡ ಸಾಲು ಸಾಲು ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಮಿಮಾ ರೊಡ್ರಿಗಸ್‌ 45 ಎಸೆತಗಳಲ್ಲಿ 33 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರೂ, ಅವರಿಗೆ ಉತ್ತಮ ಸಾಥ್‌ ಸಿಗಲಿಲ್ಲ. ಕೊನೇ ಬ್ಯಾಟರ್‌ ಮೇಘನಾ ಸಿಂಗ್‌ (6) ಜೊತೆಗೂಡಿದ್ದ ಜೆಮಿಮಾ ಭಾರತಕ್ಕೆ ಇನ್ನೇನು ಜಯ ತಂದೇಬಿಟ್ಟರು ಎಂಬಂತ್ತಿತ್ತು. ಆದರೆ, ಚೆಂಡು ಮೇಘನಾ ಬ್ಯಾಟ್‌ಗೆ ತಾಗದೇ ಇದ್ದರೂ ಆನ್‌ಫೀಲ್ಡ್‌ ಅಂಪೈರ್‌ ಕಾಟ್‌ ಬಿಹೈಂಡ್‌ ಔಟ್‌ ತೀರ್ಪು ನೀಡಿದ್ದರು. ಇದು ಭಾರತ ತಂಡದ ಕ್ಯಾಪ್ಟನ್‌ ಹರ್ಮನ್‌ಪ್ರೀತ್‌ ಕೌರ್‌ ಅವರ ಕೋಪವನ್ನು ದುಪ್ಪಟ್ಟಾಗಿಸಿ, ಪಂದ್ಯದ ಬಳಿಕ ನಡೆದ ಗೋಷ್ಠಿಯಲ್ಲಿ ಸ್ಪೋಟಗೊಂಡಿತು.

    ಆಟದಲ್ಲಿ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಕ್ರಿಕೆಟ್‌ಗಿಂತಲೂ ಇಲ್ಲಿ ನಡೆದ ಅಂಪೈರಿಂಗ್ ಕಂಡು ನಮಗೆ ಆಶ್ಚರ್ಯವಾಗಿದೆ. ಮುಂದಿನ ಬಾರಿ ನಾವು ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ ಮೊದಲೇ ಈ ರೀತಿಯ ಕಳಪೆ ಅಂಪೈರಿಂಗ್ ವಿರುದ್ಧವೂ ಆಡಬೇಕಾಗುತ್ತದೆ ಎಂದು ತಯಾರಿ ನಡೆಸಿ ಬರುತ್ತೇವೆ ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಹರ್ಮನ್‌ ಸಿಟ್ಟು ಹೊರಹಾಕಿದರು. ಈ ನಡುವೆ ಹರ್ಮನ್‌ ಪ್ರೀತ್‌ ಪರ ಸ್ಮೃತಿ ಮಂಧಾನ ಸಹ ಬ್ಯಾಟ್‌ ಬ್ಯಾಟಿಂಗ್‌ ಮಾಡಿದರು.

    ಕೌರ್‌ ವಿರುದ್ಧ ಬಾಂಗ್ಲಾ ಕ್ರಿಕೆಟಿಗರು ಕಿಡಿ:
    ಮ್ಯಾಚ್‌ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾದೇಶ ತಂಡದ ನಾಯಕಿ ನಿಗರ್ ಸುಲ್ತಾನಾ, ಹರ್ಮನ್‌ ಪ್ರೀತ್‌ಕೌರ್‌ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದು ಸಂಪೂರ್ಣವಾಗಿ ಅವರದ್ದೇ ಸಮಸ್ಯೆ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಹರ್ಮನ್‌ ಓರ್ವ ಆಟಗಾರ್ತಿಯಾಗಿ ಉತ್ತಮ ನಡವಳಿಕೆ ತೋರಿಸಬೇಹುದಿತ್ತು. ಆದ್ರೆ ಅವರ ವರ್ತನೆ ನನಗೆ ಸರಿ ಎನ್ನಿಸಲಿಲ್ಲ ಎಂದು ಹೇಳಿದರಲ್ಲದೇ, ನಾವು ಪುರುಷರ ಕ್ರಿಕೆಟ್‌ ಟೀಂನ ಉತ್ತಮ ಅಂಪೈರ್‌ಗಳನ್ನೇ ಆಯ್ಕೆ ಮಾಡಿದ್ದೆವು. ಅವರ ನಿರ್ಧಾರವನ್ನ ನಾವು ಗೌರವಿಸುತ್ತೇವೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

    WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

    – ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಅಭಿಮಾನಿಗಳು ಕೆಂಡ

    ಮುಂಬೈ: ಪುರುಷರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಆವೃತ್ತಿಯಲ್ಲಿ ಆಗಾಗ್ಗೆ ವಿವಾದಗಳು ನಡೆಯುತ್ತಿರುತ್ತವೆ. ಆದರೆ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲೂ (WPL 2023) ಈಗ ನೋಬಾಲ್‌ ವಿವಾದ ಹುಟ್ಟಿಕೊಂಡಿದೆ.

    ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವಿನ ಫೈನಲ್‌ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಟೂರ್ನಿಯ ಬಲಿಷ್ಠ ತಂಡವಾಗಿ ಗುರುತಿಸಿಕೊಂಡ ಉಭಯ ತಂಡಗಳ ನಡುವಿನ ಹೋರಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಇದನ್ನೂ ಓದಿ: ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ಮುಂಬೈ ಇಂಡಿಯನ್ಸ್‌ ತಂಡವು ತನ್ನ ಶಿಸ್ತಿನ ಬೌಲಿಂಗ್‌ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 131 ರನ್‌ಗಳಿಗೆ ಕಟ್ಟಿಹಾಕಿತ್ತು. ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಮುಂಬೈ ಇಂಡಿಯನ್ಸ್ 19.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 134 ರನ್‌ ಗಳಿಸಿ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಚೊಚ್ಚಲ ಆವೃತ್ತಿಯ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇದನ್ನೂ ಓದಿ: WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ಗಳ ಜಯ – ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    ಮುಂಬೈ ಇಂಡಿಯನ್ಸ್‌ ಟ್ರೋಫಿ ಗೆದ್ದ ಬಳಿಕ ವಿವಾದವೊಂದು ಹುಟ್ಟಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಪರ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಶಫಾಲಿ ವರ್ಮಾ (Shafali Verma) ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್‌ ಬೌಲರ್‌ ಇಸ್ಸಿ ವಾಂಗ್‌ 2ನೇ ಓವರ್‌ನಲ್ಲಿ ಎಸೆದ 3ನೇ ಎಸೆತವು ಹೈ-ಫುಲ್‌ಟಾಸ್ ಆಗಿತ್ತು. ಸೊಂಟದ ಮೇಲ್ಭಾಗದಲ್ಲಿದ್ದರೂ ಶಫಾಲಿ ವರ್ಮಾಗೆ ಔಟ್ ತೀರ್ಪು ನೀಡಲಾಯಿತು. ಮೊದಲ ಓವರ್‌ನಲ್ಲೇ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿದ್ದ ಶಫಾಲಿ ವರ್ಮಾ ಔಟ್‌ ಅನ್ನು ಕ್ಯಾಪ್ಟನ್‌ ಮೆಗ್‌ ಲ್ಯಾನಿಂಗ್‌ (Meg Lanning) ಪ್ರಶ್ನಿಸಿದರು. ಇದರ ಹೊರತಾಗಿಯೂ ಔಟ್‌ ನೀಡಲಾಯಿತು. ಇದರಿಂದ ಡೆಲ್ಲಿ ತಂಡವು ಬೃಹತ್ ಮೊತ್ತ ಸಿಡಿಸುವಲ್ಲಿ ವಿಫಲವಾಯಿತು ಎನ್ನಲಾಗುತ್ತಿದೆ.

    ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನದ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಮುಂಬೈ ಇಂಡಿಯನ್ಸ್ ಎಲಿಮಿನೇಟರ್ ಪಂದ್ಯದ ಮೂಲಕ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿತು. ಕೊನೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಶಫಾಲಿ ವರ್ಮಾ ಔಟ್‌ ತಂಡಕ್ಕೆ ಭಾರೀ ಆಘಾತ ನೀಡಿತು. ಅಂತಿಮವಾಗಿ ಮುಂಬೈ ಚಾಂಪಿಯನ್‌ ಪಟ್ಟಕೇರಿತು.

    Rishabh-Pant-1 ipl

    2022ರ ಪುರುಷರ ಐಪಿಎಲ್‌ ಪಂದ್ಯದ ವೇಳೆ ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಜಸ್ತಾನ್‌ ರಾಯಲ್ಸ್‌ ನಡುವೆ ಇದೇ ರೀತಿ ನೋಬಾಲ್‌ ವಿವಾದ ಉಂಟಾಗಿತ್ತು. ಇದನ್ನೂ ಓದಿ: ಅಂಪೈರ್ ವಿರುದ್ಧ ಸಿಟ್ಟಾಗಿ ಬ್ಯಾಟರ್‌ಗಳನ್ನು ಕರೆದ ಪಂತ್ – ನಿಜಕ್ಕೂ ನಡೆದಿದ್ದು ಏನು?

  • ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (WPL 2023) ಚೊಚ್ಚಲ ಆವೃತ್ತಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ರೋಚಕ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿದೆ.

    ರೋಚಕ ಫೈನಲ್‌ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಶಿಸ್ತಿನ ಬೌಲಿಂಗ್‌ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕೊನೆಯ 12 ಎಸೆತಗಳಲ್ಲಿ ಮುಂಬೈಗೆ 21 ರನ್‌ಗಳ ಅಗತ್ಯವಿತ್ತು. ಈ ವೇಳೆ ಅಮೇಲಿಯ ಕೇರ್‌ 19ನೇ ಓವರ್‌ನಲ್ಲಿ ಭರ್ಜರಿ 3 ಬೌಂಡರಿ ಬಾರಿಸಿ ಗೆಲುವಿನ ಹಾದಿ ಸುಗಮವಾಗಿಸಿದರು. ಕೊನೆಯ ಓವರ್‌ನ 3ನೇ ಎಸೆತದಲ್ಲೇ ಬ್ರಂಟ್‌ ಬೌಂಡರಿ ಸಿಡಿಸುವ ಮೂಲಕ ಜಯ ತಂದುಕೊಟ್ಟರು. ಇದನ್ನೂ ಓದಿ: WPL 2023: ಮುಂಬೈ ಫೈನಲ್‌ಗೆ – ಯುಪಿ ವಾರಿಯರ್ಸ್‌ ಮನೆಗೆ

         

    ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು. 132 ರನ್‌ ಗುರಿ ಬೆನ್ನತ್ತಿದ ಮುಂಬೈ 19.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಮುಂಬೈ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಆರಂಭಿಕರಾದ ಹೇಲಿ ಮ್ಯಾಥಿವ್ಸ್‌ 13 ರನ್‌, ಯಸ್ತಿಕಾ ಭಾಟಿಯಾ 4 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. 3ನೇ ವಿಕೆಟ್‌ನಲ್ಲಿ ಒಂದಾದ ನಾಟ್‌ ಸ್ಕಿವರ್‌ ಬ್ರಂಟ್‌, ಹರ್ಮನ್‌ ಪ್ರೀತ್‌ ಕೌರ್‌ ತಾಳ್ಮೆಯ‌ ಆಟವಾಡಿದರು. 74 ಎಸೆತಗಳಲ್ಲಿ ಈ ಜೋಡಿ 72 ರನ್‌ ಗಳಿಸಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತು. ಅಷ್ಟರಲ್ಲಿ 37 ರನ್‌ (39 ಎಸೆತ 5 ಬೌಂಡರಿ) ಗಳಿಸಿ ಆಟವಾಡುತ್ತಿದ್ದ ಹರ್ಮನ್‌ಪ್ರೀತ್‌ ಕೌರ್‌ ರನೌಟ್‌ಗೆ ತುತ್ತಾಗಿ ಆಘಾತ ನೀಡಿದರು. ಇದನ್ನೂ ಓದಿ: ಐಪಿಎಲ್- ಆರ್‌ಸಿಬಿ ಕೆಲವು ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಅನುಮಾನ

    ನಂತರ ತನ್ನ ಜವಾಬ್ದಾರಿಯುತ ಬ್ಯಾಟಿಂಗ್‌ ಮುಂದುವರಿಸಿದ ಸ್ಕಿವರ್‌ ಬ್ರಂಟ್‌ ಅರ್ಧಶತಕ ಗಳಿಸುವ ಜೊತೆಗೆ ಕೊನೆಯವರೆಗೂ ಹೋರಾಡಿ ತಂಡವನ್ನು ಗೆಲುವಿನ ಹಾದಿಗೆ ತಂದರು. ಬ್ರಂಟ್‌ 55 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 60 ರನ್‌ ಸಿಡಿಸಿ ಮಿಂಚಿದರೆ, ಕೊನೆಯಲ್ಲಿ ಅಮೇಲಿ ಕೇರ್‌ 8 ಎಸೆತಗಳಲ್ಲಿ 14 ರನ್‌ ಚಚ್ಚಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್‌ 19.3 ಓವರ್‌ಗಳಲ್ಲಿ 134 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಒತ್ತಡಕ್ಕೆ ಸಿಲುಕಿತು. ಉತ್ತಮ ಫಾರ್ಮ್‌ನಲ್ಲಿದ್ದ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಮೊದಲ ಓವರ್‌ನಲ್ಲೇ ವಿಕೆಟ್‌ ಒಪ್ಪಿಸಿ ಹೊರನಡೆದರು.

    ಶಫಾಲಿ ವರ್ಮಾ 4 ಎಸೆತಗಳಲ್ಲಿ 11 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಅಲಿಸ್ಸಾ ಕ್ಯಾಪ್ಸಿ ಕೂಡ ಮೊದಲ ಎಸೆತದಲ್ಲೇ ಇಸ್ಸಿ ವಾಂಗ್‌ಗೆ ವಿಕೆಟ್ ಒಪ್ಪಿಸಿದರು. ಜೆಮಿಮಾ ರೊಡ್ರಿಗಸ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ, 8 ಎಸೆತಗಳಲ್ಲಿ 9 ರನ್ ಗಳಿಸಿ ಕ್ಯಾಚ್‌ ನೀಡಿದರು. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

    ಮೆಗ್ ಲ್ಯಾನಿಂಗ್ ಮತ್ತು ಮಾರಿಜಾನ್ನೆ ಕಪ್ 21 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. 29 ಎಸೆತಗಳಲ್ಲಿ 35 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕಿ ಮೆಗ್‌ ಲ್ಯಾನಿಂಗ್‌ ಬೇಡದ ರನ್‌ ಕದಿಯಲು ಹೋಗಿ ರನೌಟ್‌ಗೆ ಬಲಿಯಾದರು. ಜೆಸ್ ಜೊನಾಸ್ಸೆನ್ 11 ಎಸೆತಗಳಲ್ಲಿ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಅರುಂಧತಿ ರಾಯ್ ಶೂನ್ಯಕ್ಕೆ ಔಟಾದರು.

    ಒಂದು ಹಂತದಲ್ಲಿ 100 ರನ್‌ಗಳ ಗಡಿ ದಾಟುವುದೇ ಕಷ್ಟ ಎನ್ನುವಂತಿದ್ದಾಗ ಕೊನೆಯಲ್ಲಿ ಶಿಖಾ ಪಾಂಡೆ ಮತ್ತು ರಾಧಾ ಯಾದವ್ ಭರ್ಜರಿ ಸಿಕ್ಸರ್‌, ಬೌಂಡರಿಗಳ ಆಟವಾಡಿ ತಂಡಕ್ಕೆ ಆಸರೆಯಾದರು. ಮುರಿಯದ ಕೊನೆಯ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 24 ಎಸೆತಗಳಲ್ಲಿ 52 ರನ್‌ ಚಚ್ಚಿತ್ತು. ರಾಧಾಯಾದವ್ 12 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದರೆ, ಶಿಖಾ ಪಾಂಡೆ 17 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದರು.

    ಬಿಗಿ ಬೌಲಿಂಗ್‌ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಇಸ್ಸಿ ವಾಂಗ್ 4 ಓವರ್ ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದರು. ಹೇಲಿ ಮ್ಯಾಥ್ಯೂಸ್ 4 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರು. ಅಮೆಲಿ ಕೆರ್ 4 ಎಸೆತಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.

  • WPL 2023: ಮುಂಬೈ ಫೈನಲ್‌ಗೆ – ಯುಪಿ ವಾರಿಯರ್ಸ್‌ ಮನೆಗೆ

    WPL 2023: ಮುಂಬೈ ಫೈನಲ್‌ಗೆ – ಯುಪಿ ವಾರಿಯರ್ಸ್‌ ಮನೆಗೆ

    ಮುಂಬೈ: ನಾಟ್‌ ಸ್ಕಿವರ್‌ ಬ್ರಂಟ್‌ (Nat Sciver-Brunt) ಸ್ಫೋಟಕ ಅರ್ಧ ಶತಕ, ಇಸ್ಸಿ ವಾಂಗ್‌ ಮಿಂಚಿನ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians), ಯುಪಿ ವಾರಿಯರ್ಸ್‌ (UP Warriorz) ವಿರುದ್ಧ ಭರ್ಜರಿ ಜಯ ಸಾಧಿಸಿದ್ದು WPL ಫೈನಲ್‌ ಪ್ರವೇಶಿಸಿದೆ.

    ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿಂದು ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ನ (WPL 2023) ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಭರ್ಜರಿ ಜಯದೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿತ್ತು. 183 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಯುಪಿ ವಾರಿಯರ್ಸ್‌ ಬ್ಯಾಟಿಂಗ್‌ ವೈಫಲ್ಯದಿಂದ 17.4 ಓವರ್‌ಗಳಲ್ಲಿ 110 ರನ್‌ಗಳಿಗೆ ಸರ್ವಪತನ ಕಂಡಿತು. ಪರಿಣಾಮ 72 ರನ್‌ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತು.

    ಚೇಸಿಂಗ್‌ ಆರಂಭಿಸಿದ ಯುಪಿ ತಂಡವು ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಬಂದ ಕಿರನ್‌ ನವಗಿರೆ ಸ್ಫೋಟಕ 43 ರನ್‌ (4 ಬೌಂಡರಿ, 3 ಸಿಕ್ಸರ್‌), ಗ್ರೇಸ್‌ ಹ್ಯಾರಿಸ್‌ 14 ರನ್‌, ದೀಪ್ತಿ ಶರ್ಮಾ 16 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರೂ ಹೆಚ್ಚಿನ ರನ್‌ ಗಳಿಸದ ಕಾರಣ ಯುಪಿ ವಾರಿಯರ್ಸ್‌ ತಂಡ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: 3 ಪಂದ್ಯ, ಫಸ್ಟ್ ಬಾಲಿಗೆ ಔಟ್ – ಕೆಟ್ಟ ದಾಖಲೆ ಬರೆದ ಸೂರ್ಯ

    ಮುಂಬೈ ಇಂಡಿಯನ್ಸ್‌ ಪರ ಇಸ್ಸಿ ವಾಂಗ್‌ 4 ಓವರ್‌ಗಳಲ್ಲಿ ಕೇವಲ 15 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಸೈಕಾ ಇಶಾಕ್‌ 2 ವಿಕೆಟ್‌, ಬ್ರಂಟ್, ಹೇಲಿ ಮ್ಯಾಥಿವ್ಸ್‌, ಜಿಂತಿಮಣಿ ಕಲಿತಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ಬೃಹತ್ ಮೊತ್ತ ಕಲೆಹಾಕಿತು. ನ್ಯಾಟ್ ಸಿವರ್ ಬ್ರಂಟ್ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭಿಕರಾಗಿ ಕಣಕ್ಕಿಳಿದ ಯಸ್ತಿಕಾ ಭಾಟಿಯಾ 18 ಎಸೆತಗಳಲ್ಲಿ 21 ರನ್ ಗಳಿಸಿದರೆ, ಹೇಳಿ ಮ್ಯಾಥ್ಯೂಸ್ 26 ಎಸೆತಗಳಲ್ಲಿ 26 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

    ನಂತರ ಬಂದ ಆಲ್‌ರೌಂಡರ್ ನಾಟ್‌ ಸ್ಕಿವರ್‌ ಬ್ರಂಟ್ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಾ ವಾರಿಯರ್ಸ್‌ ಬೌಲರ್‌ಗಳನ್ನು ಬೆಂಡೆತ್ತಿದರು. ಬ್ರಂಟ್‌ 38 ಎಸೆತಗಳಲ್ಲಿ ಸಹಿತ ಅಜೇಯ 72 ರನ್ (9 ಬೌಂಡರಿ 2 ಸಿಕ್ಸರ್) ಗಳಿಸಿದರು. ಆದ್ರೆ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 14 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಅಮೆಲಿ ಕೆರ್ 29 ರನ್ ಗಳಿಸಿದರೆ, ಪೂಜಾ ವಸ್ತ್ರಾಕರ್ 4 ಎಸೆತಗಳಲ್ಲಿ ಅಜೇಯ 11 ರನ್ ಬಾರಿಸಿದರು.

    ಯುಪಿ ವಾರಿಯರ್ಸ್ ಪರವಾಗಿ ಸೋಫಿ ಎಕ್ಲಿಸ್ಟೋನ್‌ 2 ವಿಕೆಟ್ ಪಡೆದರೆ, ಪಾರ್ಶವಿ ಚೋಪ್ರಾ ಮತ್ತು ಅಂಜಲಿ ಸರ್ವಾಣಿ ತಲಾ 1 ವಿಕೆಟ್ ಪಡೆದರು.

  • WPL 2023: ಮುಂಬೈಗೆ ಜಯ – RCB ಸೋಲಿನ ವಿದಾಯ

    WPL 2023: ಮುಂಬೈಗೆ ಜಯ – RCB ಸೋಲಿನ ವಿದಾಯ

    ಮುಂಬೈ: ಸಂಘಟಿತ ಬೌಲಿಂಗ್, ಬ್ಯಾಟಿಂಗ್ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ.

    ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನ ಕೊನೆಯ ಪಂದ್ಯವಾಡಿದ ಆರ್‌ಸಿಬಿ ಸೋಲಿನೊಂದಿಗೆ ವಿದಾಯ ಹೇಳಿದೆ. ಇದನ್ನೂ ಓದಿ: WPL 2023: ಮುಂಬೈ ಇಂಡಿಯನ್ಸ್‌ಗೆ ಹೀನಾಯ ಸೋಲು – ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ (Smriti Mandhana) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. 126 ರನ್‌ಗಳ ಗುರಿ ಪಡೆದ ಎದುರಾಳಿ ಮುಂಬೈ ತಂಡವು 16.3 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 129 ರನ್ ಚಚ್ಚಿ ಮತ್ತೆ ಅಗ್ರಸ್ಥಾನಕ್ಕೇರಿತು.  ಇದನ್ನೂ ಓದಿ: WPL 2023: ರೋಚಕ ಜಯದೊಂದಿಗೆ ಯುಪಿ ವಾರಿಯರ್ಸ್‌ ಪ್ಲೆ ಆಫ್‌ಗೆ – RCB ಮನೆಗೆ

    ಆರಂಭಿಕರಾಗಿ ಕಣಕ್ಕಿಳಿದ ಹೇಲಿ ಮ್ಯಾಥಿವ್ಸ್ 17 ಎಸೆತಗಳಲ್ಲಿ 24 ರನ್ ಗಳಿಸಿದರೆ, ಯಸ್ತಿಕಾ ಭಾಟಿಯಾ 26 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಮಧ್ಯಂತರದಲ್ಲಿ ನಾಟ್ ಸ್ಕಿವರ್ ಬ್ರಂಟ್ (13 ರನ್), ನಾಯಕಿ ಹರ್ಮನ್ ಪ್ರೀತ್‌ಕೌರ್ (2 ರನ್) (Harmanpreet Kaur) ವಿಕೆಟ್ ಕಳೆದುಕೊಂಡು ಮತ್ತೆ ಸಂಕಷ್ಟಕ್ಕೀಡಾಯಿತು. ನಂತರ ಕ್ರೀಸ್‌ಗಿಳಿದ ಅಮೇಲಿ ಕೇರ್ 27 ಎಸತೆಗಳಲ್ಲಿ 4 ಬೌಂಡರಿಯೊಂದಿಗೆ ಅಜೇಯ 31 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. ಕೊನೆಯಲ್ಲಿ ಪೂಜಾ ವಸ್ತ್ರಾಕರ್ 19 ರನ್ ಗಳಿಸಿ ತಂಡಕ್ಕೆ ನೆರವಾದರು.

    ಆರ್‌ಸಿಬಿ ಪರ ಮೇಗನ್ ಶುಟ್, ಶ್ರೇಯಾಂಕ ಪಾಟೀಲ್, ಎಲ್ಲಿಸ್ ಪರ‍್ರಿ, ಸೋಭಾನಾ ಆಶಾ ತಲಾ ಒಂದೊಂದು ವಿಕೆಟ್ ಪಡೆದರೆ, ಕನಿಕಾ ಅಹುಜಾ 2 ವಿಕೆಟ್ ಕಿತ್ತರು.

    ಇದಕ್ಕೂ ಮುನ್ನ ಆರ್‌ಸಿಬಿ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂದಾನ, ಸೋಫಿ ಡಿವೈನ್ ಕೊನೆಯ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರಿಸಿದರು. ಮೊದಲ ಓವರ್‌ನ 3ನೇ ಎಸೆತದಲ್ಲಿ ರನ್ ಕದಿಯಲು ಯತ್ನಿಸಿ ಸೋಫಿ ಡಿವೈನ್ ರನೌಟ್‌ಗೆ ತುತ್ತಾದರು. ನಂತರ ಬಂದ ಎಲ್ಲಿಸ್ ಪರ‍್ರಿ 38 ಎಸೆತಗಳಲ್ಲಿ 29 ರನ್ ಗಳಿಸಿದರೆ, ನಾಯಕಿ ಸ್ಮೃತಿ ಮಂದಾನ 25 ಎಸೆತಗಳಲ್ಲಿ 24 ರನ್ ಬಾರಿಸಿ ಔಟಾದರು. ಹೀದರ್ ನೈಟ್ 12 ರನ್, ಕನಿಕಾ ಅಹುಜಾ 12 ರನ್ ಮತ್ತು ಕೊನೆಯಲ್ಲಿ ರಿಚಾ ಘೋಷ್ 13 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಸಾಧ್ಯವಾಯಿತು.

    ಮುಂಬೈ ಪರ ಬೌಲಿಂಗ್‌ನಲ್ಲಿ ಅಮೆಲಿಯಾ ಕೆರ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರೆ, ನಾಟ್ ಸೀವರ್-ಬ್ರಂಟ್, ಇಸ್ಸಿ ವಾಂಗ್ ತಲಾ 2 ವಿಕೆಟ್ ಹಾಗೂ ಸೈಕ್ ಇಶಾಕ್ 1 ವಿಕೆಟ್ ಪಡೆದು ಮಿಂಚಿದರು.

    ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ:
    ಮಹಿಳಾ ಪ್ರೀಮಿಯರ್ ಲೀಗ್‌ನ ಆರಂಭಿಕ 5 ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ ಆರ್‌ಸಿಬಿ 6, 7ನೇ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಫ್ ಕನಸು ಜೀವಂತವಾಗಿಸಿಕೊಂಡಿತ್ತು. ಆದರೆ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಯುಪಿ ವಾರಿಯರ್ಸ್ ತಂಡ 7ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ದಾಖಲಿಸಿದ ನಂತರ ಆರ್‌ಸಿಬಿ ಪ್ಲೆ ಆಫ್ ಕನಸು ಭಗ್ನಗೊಂಡಿತು. ಕೊನೆಯ ಪಂದ್ಯದಲ್ಲೂ ಹೀನಾಯವಾಗಿ ಸೋತು ಅಭಿಮಾನಿಗಳಿಗೆ ಭಾರೀ ನಿರಾಸೆ ತರಿಸಿತು.

  • WPL 2023: ಮುಂಬೈ ಇಂಡಿಯನ್ಸ್‌ಗೆ ಹೀನಾಯ ಸೋಲು – ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

    WPL 2023: ಮುಂಬೈ ಇಂಡಿಯನ್ಸ್‌ಗೆ ಹೀನಾಯ ಸೋಲು – ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

    ಮುಂಬೈ: ಅಲಿಸ್‌ ಕ್ಯಾಪ್ಸಿ, ಶಫಾಲಿ ವರ್ಮಾ (Shafali Verma) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ (Mumbai Indians) 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದು, ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿತು. 110 ರನ್‌ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ನಿರಾಯಾಸವಾಗಿ 9 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟಕ್ಕೆ 110 ಸಿಡಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: WPL 2023: ರೋಚಕ ಜಯದೊಂದಿಗೆ ಯುಪಿ ವಾರಿಯರ್ಸ್‌ ಪ್ಲೆ ಆಫ್‌ಗೆ – RCB ಮನೆಗೆ

    ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್‌ ಲ್ಯಾನಿಂಗ್‌, ಶಫಾಲಿ ವರ್ಮಾ ಹಾಗೂ 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅಲಿಸ್‌ ಕ್ಯಾಪ್ಸಿ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ಮುಂಬೈ ಬೌಲರ್‌ಗಳಿಗೆ ನಿರುಣಿಸಿದರು.

    ಮೆಗ್‌ ಲ್ಯಾನಿಂಗ್‌ 22 ಎಸೆತಗಳಲ್ಲಿ 32 ರನ್‌ (4 ಬೌಂಡರಿ, 1 ಸಿಕ್ಸರ್‌), ಶಫಾಲಿ ವರ್ಮಾ 15 ಎಸೆತಗಳಲ್ಲಿ 33 ರನ್‌ (6 ಬೌಂಡರಿ, 1 ಸಿಕ್ಸರ್‌) ಸಿಡಿಸಿದ್ರೆ, ಕ್ಯಾಪ್ಸಿ 17 ಎಸೆತಗಳಲ್ಲಿ ಸ್ಫೋಟಕ 38 ರನ್‌ (5 ಸಿಕ್ಸರ್‌, 1 ಬೌಂಡರಿ) ಚಚ್ಚಿ ಗೆಲುವು ಸಾಧಿಸಿದರು‌. ಮೂಲಕ ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

    ಡೆಲ್ಲಿ, ಮುಂಬೈ ತಂಡಕ್ಕೆ ಇನ್ನೂ ಒಂದೊಂದು ಪಂದ್ಯಗಳು ಬಾಕಿಯಿದ್ದು, ಈ ಪಂದ್ಯದಲ್ಲಿ ಸೋತವರು ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸ‌ಲಿದ್ದಾರೆ. ಗೆದ್ದ ತಂಡ ಅಗ್ರಸ್ಥಾನದೊಂದಿಗೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಇದನ್ನೂ ಓದಿ: ಅಭಿಮಾನಿಯನ್ನ ಮದುವೆಯಾಗ್ತೀರಾ ಅಂತಾ ಕೇಳಿದ ರೋಹಿತ್ ಶರ್ಮಾ

    ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿತು. 2.1 ಓವರ್ ನಲ್ಲಿ ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ ಕಳೆದುಕೊಂಡಿತು. ಯಸ್ತಿಕ ಭಾಟಿಯಾ 6 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು, ಈ ಬೆನ್ನಲ್ಲೇ ನಾಟ್ ಸ್ಕಿವರ್‌ ಬ್ರಂಟ್ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ವಾಪಸಾದರು. ಮಾರಿಜಾನ್ನೆ ಕಪ್ ಒಂದೇ ಓವರ್ ನಲ್ಲಿ ಈ 2 ವಿಕೆಟ್ ಪಡೆಯುವ ಮೂಲಕ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಆಘಾತ ನೀಡಿದರು. ಈ ಬೆನ್ನಲ್ಲೇ ಮುಂಬೈ ತಂಡದ ಒಂದೊಂದೆ ವಿಕೆಟ್‌ ಪತನಗೊಂಡಿತು.

    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 23 ರನ್, ಪೂಜಾ ವಸ್ತ್ರಾಕರ್ 26 ರನ್, ಇಸ್ಸಿ ವಾಂಗ್ 23 ರನ್ ಹಾಗೂ ಅಮನ್‌ಜೋತ್ ಕೌರ್ 19 ರನ್ ಗಳಿಸಿದರೂ ತಂಡ ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.

    ಡೆಲ್ಲಿ ಪರ ಮಾರಿಜಾನ್ನೆ ಕಪ್, ಶಿಖಾ ಪಾಂಡೆ ಮತ್ತು ಜೆಸ್ ಜೊನಾಸೆನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಅರುಂಧತಿ ರೆಡ್ಡಿ ಒಂದು ವಿಕೆಟ್ ಪಡೆದರು. ಮುಂಬೈ ಪರ ಹೇಲಿ ಮ್ಯಾಥಿವ್ಸ್‌ 1 ವಿಕೆಟ್‌ ಪಡೆದರು.

  • ಡೆಲ್ಲಿಗೆ ಡಿಚ್ಚಿ – ಬೌಲರ್‌ಗಳ ಆಟದಲ್ಲಿ ಮುಂಬೈಗೆ 8 ವಿಕೆಟ್‌ಗಳ ಸುಲಭ ಜಯ

    ಡೆಲ್ಲಿಗೆ ಡಿಚ್ಚಿ – ಬೌಲರ್‌ಗಳ ಆಟದಲ್ಲಿ ಮುಂಬೈಗೆ 8 ವಿಕೆಟ್‌ಗಳ ಸುಲಭ ಜಯ

    ಮುಂಬೈ: ಸಾಂಘಿಕ ಬೌಲಿಂಗ್‌ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ 18 ಓವರ್‌ಗಳಲ್ಲಿ 105 ರನ್‌ಗಳಿಗೆ ಸರ್ವಪತನ ಕಂಡಿತು. 106 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ 15 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿ ಸುಲಭ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿ ಅಗ್ರ ಸ್ಥಾನಕ್ಕೇರಿತು.

    ಆರಂಭಿಕರಾಗಿ ಕಣಕ್ಕಿಳಿದ ಹೇಲಿ ಮ್ಯಾಥ್ಯೂಸ್‌ (Hayley Matthews), ಯಸ್ತಿಕಾ ಭಾಟಿಯಾ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದರೂ ಉತ್ತಮ ರನ್‌ ಕಲೆಹಾಕುವಲ್ಲಿ ಯಶಸ್ವಿಯಾದರು. ಮುಂಬೈ ಮೊದಲ ವಿಕೆಟ್‌ ಪತನಕ್ಕೆ 8.5 ಓವರ್‌ಗಳಲ್ಲಿ 65 ರನ್‌ ಕಲೆಹಾಕಿತು. ಈ ವೇಳೆ ಯಸ್ತಿಕಾ ಭಾಟಿಯಾ 32 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 41 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಹೇಲಿ ಮ್ಯಾಥ್ಯೂಸ್‌ ಸಹ 31 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 32 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಜೊತೆಗೂಡಿದ ನ್ಯಾಟ್ ಸ್ಕಿವರ್-ಬ್ರಂಟ್ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು. ಸ್ಕಿವರ್‌ 19 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್‌ ಚಚ್ಚಿದರೆ, ಕೌರ್‌ 11 ರನ್‌ ಗಳಿಸಿದರು. ಇತರೇ ರೂಪದಲ್ಲಿ 2 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಮುಂಬೈ ಬೌಲರ್‌ಗಳ ದಾಳಿಗೆ ತತ್ತರಿಸಿತು. ಶಫಾರ್ಲಿ ವರ್ಮಾ (Shafali Verma) ಕೇವಲ 2 ರನ್‌ಗಳಿಸಿ ಔಟಾಗುವ ಮೂಲಕ ಡೆಲ್ಲಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಬಳಿಕ ಏಕಾಂಗಿ ಹೋರಾಟ ನಡೆಸಿದ ನಾಯಕಿ ಮೆಗ್‌ ಲ್ಯಾನಿಂಗ್‌ 41 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 43 ರನ್‌ ಗಳಿಸಿದರು. ಇದರೊಂದಿಗೆ ಜೆಮಿಮಾ ರೊಡ್ರಿಗಸ್‌ 25 ರನ್‌ (18 ಎಸೆತ, 3 ಬೌಂಡರಿ) ಗಳಿಸಿ ಸಾತ್‌ ನೀಡಿದರು. ಕೊನೆಯಲ್ಲಿ ಕ್ರೀಸ್‌ಗಿಳಿದ ರಾಧಾ ಯಾದವ್‌ 10 ರನ್‌ ಗಳಿಸಿದ್ರೆ, ಉಳಿದ ಎಲ್ಲ ಬ್ಯಾಟರ್‌ಗಳು ಒಂದಂಕಿ ರನ್‌ಗಳಿಸಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

    ಪರಿಣಾಮ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ರನ್‌ ಕಲೆಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 105 ಗಳಿಸಿ ಮುಂಬೈಗೆ ಸುಲಭ ತುತ್ತಾಯಿತು.

    ಬೌಲರ್‌ಗಳ ಕಮಾಲ್‌: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸಾಂಘಿಕ ಪ್ರದರ್ಶನ ನೀಡಿದ ಬೌಲರ್‌ಗಳು ಅತ್ಯಲ್ಪ ಮೊತ್ತಕ್ಕೆ ಡೆಲ್ಲಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸೈಕಾ ಇಶಾಕ್, ಇಸೀ ವಾಂಗ್ ಹಾಗೂ ಹೇಲಿ ಮ್ಯಾಥ್ಯೂಸ್ ತಲಾ 3 ವಿಕೆಟ್ ಕಬಳಿಸಿದರೆ, ಪೂಜಾ ವಸ್ತ್ರಾಕರ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • WPL 2023: ಕೌರ್‌ ಭರ್ಜರಿ ಫಿಫ್ಟಿ – ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್‌ಗೆ 143 ರನ್‌ಗಳ ಭರ್ಜರಿ ಜಯ

    WPL 2023: ಕೌರ್‌ ಭರ್ಜರಿ ಫಿಫ್ಟಿ – ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್‌ಗೆ 143 ರನ್‌ಗಳ ಭರ್ಜರಿ ಜಯ

    ಮುಂಬೈ: ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ಮಹಿಳಾ ತಂಡವು ಉದ್ಘಾಟನಾ ಪಂದ್ಯದಲ್ಲೇ ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 143 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಉದ್ಘಾಟನಾ ಪಂದ್ಯ ಉತ್ತಮ ಆರಂಭ ಪಡೆದುಕೊಂಡಿದ್ದು, ಮೊದಲ ದಿನವೇ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಿತು. ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಮುಂಬೈ ಇಂಡಿಯನ್ಸ್‌ ಪರ 31 ಬೌಂಡರಿ, 6 ಸಿಕ್ಸರ್‌ ದಾಖಲಾಯಿತು. ಇದನ್ನೂ ಓದಿ: CCL 2023 ಬೆಂಗಳೂರಿನಲ್ಲಿ : ಕಿಚ್ಚನ ಟೀಮ್ ಜೊತೆ ತೆಲುಗು ವಾರಿಯರ್ಸ್ ರೋಚಕ ಪಂದ್ಯ

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 207 ರನ್‌ ಬಾರಿಸಿತು. 208 ರನ್‌ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಗುಜರಾತ್‌ ಜೈಂಟ್ಸ್‌ 64 ರನ್‌ಗಳಿಗೆ ಸರ್ವಪತನ ಕಂಡಿತು.

    ಮುಂಬೈ ತಂಡದ ಆರಂಭಿಕರಾದ ಯಸ್ತಿಕಾ ಭಾಟಿಯಾ ವಿಕೆಟ್‌ ಪತನದ ನಂತರ ಹೇಲಿ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸ್ಕಿವರ್-ಬ್ರಂಟ್ ಜೋಡಿ 2ನೇ ವಿಕೆಟ್‌ ಜೊತೆಯಾಟಕ್ಕೆ 69 ರನ್‌ ಕಲೆಹಾಕಿತು. ಮ್ಯಾಥ್ಯೂಸ್ 31 ಎಸೆತಗಳಲ್ಲಿ 47 ರನ್‌ (3 ಬೌಂಡರಿ, 4 ಸಿಕ್ಸರ್)‌ ಚಚ್ಚಿದರೆ, ಬ್ರಂಟ್‌ 23 ರನ್‌ (18 ಎಸೆತ, 5 ಬೌಂಡರಿ) ಗಳಿಸಿ ಪೆವಿಲಿಯನ್‌ ಸೇರಿದ್ರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ 216.67 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ನಡೆಸಿ ಗುಜರಾತ್‌ ಬೌಲರ್‌ಗಳನ್ನು ಬೆಂಡೆತ್ತಿದರು. ಭರ್ಜರಿ 65 ರನ್‌ (30 ಎಸೆತ, 14 ಬೌಂಡರಿ) ಸಿಡಿಸಿ ಉದ್ಘಾಟನಾ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ದಾಖಲೆ ಬರೆದರು. ಈ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು.

    ನಂತರ ಅಮೆಲಿ ಕೆರ್ ಕೂಡ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿ 24 ಎಸೆತಗಳಲ್ಲಿ 45 ರನ್‌ ಚಚ್ಚಿದರು. ಅಂತಿಮವಾಗಿ ಮುಂಬೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್‌ ಪೇರಿಸಿತ್ತು. ಇದನ್ನೂ ಓದಿ: ಇಂದಿನಿಂದ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಧಮಾಕ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಇನ್ನು ಗುಜರಾತ್ ಜೈಂಟ್ಸ್ ತಂಡದ ಪರವಾಗಿ ಸ್ನೇಹ ರಾಣಾ ಎರಡು ವಿಕೆಟ್ ಪಡೆದರಾದರೂ 4 ಓವರ್‌ಗಳಲ್ಲಿ 43 ರನ್ ನೀಡುವ ಮೂಲಕ ದುಬಾರಿಯಾದರು. ಆಸ್ಟ್ರೇಲಿಯಾ ಆಲ್‌ರೌಂಡರ್‌ ಆಶ್ಲೆ ಗಾರ್ಡ್ನರ್, ತನುಜಾ ಕನ್ವರ್, ಝಾರ್ಜಿಯಾ ವರೆಹಮ್ ತಲಾ ಒಂದೊಂದು ವಿಕೆಟ್ ಪಡೆದರು.

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್‌ ಮಹಿಳಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ನಾಯಕಿ ಬೆತ್‌ ಮೂನಿ ಮೂರನೇ ಎಸೆತದಲ್ಲೇ ಗಾಯದ ಸಮಸ್ಯೆಯಿಂದ ಹೊರನಡೆದರು. ನಂತರ ಮುಂಬೈ ಬೌಲರ್‌ಗಳ ದಾಳಿಗೆ ಸುಲಭ ತುತ್ತಾದ ಗುಜರಾತ್‌ ಮಹಿಳಾ ಸೈನ್ಯ ಒಂದೊಂದೆ ವಿಕೆಟ್‌ ಕಳೆದುಕೊಂಡಿತು. ದಯಾಳನ್ ಹೇಮಲತಾ 29 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರೂ ಸ್ಥಿರವಾಗಿ ನಿಲ್ಲದೇ ಗುಜರಾತ್‌ ಮೊದಲ ಪಂದ್ಯದಲ್ಲೇ ಸೋಲಿನ ರುಚಿ ಕಂಡಿತು.

    ಮುಂಬೈ ಪರ ಸ್ಪಿನ್‌ ದಾಳಿ ನಡೆಸಿದ ಸೈಕಾ ಇಶಾಕ್ 3.1 ಓವರ್‌ಗಳಲ್ಲಿ 11 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ನ್ಯಾಟ್ ಸ್ಕಿವರ್ ಬ್ರಂಟ್ ಮತ್ತು ಅಮೆಲಿ ಕೆರ್ ತಲಾ 2 ವಿಕೆಟ್‌ ಪಡೆದರು, ಇಸ್ಸಿ ವಾಂಗ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ರೋಚಕ ಜಯದೊಂದಿಗೆ ಸೆಮಿಫೈನಲ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಭಾರತ

    ರೋಚಕ ಜಯದೊಂದಿಗೆ ಸೆಮಿಫೈನಲ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಭಾರತ

    ಕೇಪ್‌ಟೌನ್‌: ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ (ICC Womens WorldCup) ನಾಲ್ಕನೇ ಪಂದ್ಯವನ್ನಾಡಿದ ಭಾರತ (India) ತಂಡವು ಐರ್ಲೆಂಡ್‌ (Ireland) ವಿರುದ್ಧ ರೋಚಕ ಜಯ ಸಾಧಿಸಿ ಸೆಮಿ ಫೈನಲ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

    ಮಳೆಗೆ ಆಹುತಿಯಾದ ಈ ಪಂದ್ಯದ ಫಲಿತಾಂಶವನ್ನು ಡಕ್​ವರ್ಥ್ ಲೂಯಿಸ್ ನಿಯಮ (DLS Method) ಪ್ರಕಾರ ನಿರ್ಧರಿಸಲಾಗಿದ್ದು, ಅದರಂತೆ ಟೀಂ ಇಂಡಿಯಾ (Team India Womens) 5 ರನ್​ಗಳ ರೋಚಕ ಜಯ ಸಾಧಿಸಿದೆ. ಇದನ್ನೂ ಓದಿ: ದೀಪ್ತಿ ಶರ್ಮಾ ದಾಖಲೆ- ಭಾರತಕ್ಕೆ 6 ವಿಕೆಟ್‌ಗಳ ಸುಲಭ ಜಯ

    ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ತಂಡವು ಸ್ಮೃತಿ ಮಂದಾನ (Smriti Mandhana) ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 155 ರನ್ ಕಲೆ ಹಾಕಿ, ಎದುರಾಳಿ ತಂಡಕ್ಕೆ 156 ರನ್‌ಗಳ ಗುರಿ ನೀಡಿತು. ಇದನ್ನೂ ಓದಿ: WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?

    ಆರಂಭಿಕರಾದ ಉಪನಾಯಕಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 62 ರನ್ ಜೊತೆಯಾಟವಾಡಿದರು. ಇದೇ ವೇಳೆ 24 ರನ್ ಗಳಿಸಿದ್ದ ಶಫಾಲಿ ವರ್ಮಾ ವಿಕೆಟ್ ಒಪ್ಪಿಸಿದರು. ಅನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ 20 ಎಸೆತ ಎದುರಿಸಿ 13 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಜೆಮಿಮಾ ರೋಡ್ರಿಗಸ್ 12 ಎಸೆತಗಳಲ್ಲಿ 19 ರ‌ನ್‌ ಬಾರಿಸಿ ಸ್ಕೋರ್ ಹೆಚ್ಚಿಸಲು ಶ್ರಮಿಸಿದರು.

    ಏಕಾಂಗಿ ಹೋರಾಟ ನಡೆಸಿದ ಸ್ಮೃತಿ ಮಂದಾನ 56 ಎಸೆತಗಳಲ್ಲಿ 9 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 87 ರನ್ ಚಚ್ಚಿದರು. ಅಂತಿಮವಾಗಿ ಭಾರತ 155 ರನ್‌ ಕಲೆಹಾಕಿತು.

    156 ರನ್​ಗಳ ಕಠಿಣ ಗುರಿ ಪಡೆದ ಐರ್ಲೆಂಡ್ ತಂಡವು 8.2 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್​ ಬಾರಿಸಿತ್ತು. ಈ ವೇಳೆ ಮಳೆ ಅಡ್ಡಿಯಾದ್ದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ನಿರಂತರ ಮಳೆಯಾಗಿದ್ದರಿಂದ ಪಂದ್ಯ ನಡೆಸುವುದು ಅಸಾಧ್ಯ ಎಂದು ರೆಫರಿ ನಿರ್ಧರಿಸಿದರು. ನಂತರ ಪಂದ್ಯದ ಫಲಿತಾಂಶ ನಿರ್ಧರಿಸಲು ಡಕ್​ ವರ್ಥ್ ಲೂಯಿಸ್ ನಿಯಮದ ಮೊರೆ ಹೋದಾಗ ಐರ್ಲೆಂಡ್ ಮೊತ್ತವು ಟೀಂ ಇಂಡಿಯಾಗಿಂತ 5 ರನ್​ ಕಡಿಮೆಯಿತ್ತು.

     ಡಕ್‌ವರ್ತ್‌ ನಿಯಮದ ಅನ್ವಯ  8.2 ಓವರ್​ಗಳಲ್ಲಿ ಐರ್ಲೆಂಡ್‌ 59 ರನ್​ ಬಾರಿಸಬೇಕಿತ್ತು. ಆದರೆ ಐರ್ಲೆಂಡ್‌ 5 ರನ್‌ ಹಿಂದಿದ್ದ ಕಾರಣ ಭಾರತ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್​ಗೆ ಪ್ರವೇಶಿಸಿತು. ಇದೀಗ ವಿಶ್ವಕಪ್‌ ಎ-ತಂಡದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ ಇದ್ದರೆ, ಬಿ ತಂಡದಲ್ಲಿ ಭಾರತ-ಇಂಗ್ಲೆಂಡ್‌ ತಂಡಗಳು ಸೆಮಿಸ್‌ಗೆ ತಲುಪಿವೆ.

    ಐರ್ಲೆಂಡ್ ಪರ ಬೌಲಿಂಗ್‌ನಲ್ಲಿ ನಾಯಕಿ ಲಾರಾ ಡೆಲಾನಿ 33 ರನ್‌ಗಳಿಗೆ 3 ವಿಕೆಟ್ ಪಡೆದರೆ, ಪ್ರೆಂಡರ್‌ಗಾಸ್ಟ್ ಎರಡು ವಿಕೆಟ್ ಮತ್ತು ಅರ್ಲೀನ್ ಕೆಲ್ಲಿ ಒಂದು ವಿಕೆಟ್ ಪಡೆದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • WPL Auction 2023 ಹರಾಜು ನಡೆಸಿಕೊಟ್ಟ ಮಲ್ಲಿಕಾಗೆ ಬೇಷ್ ಎಂದ ಡಿಕೆ

    WPL Auction 2023 ಹರಾಜು ನಡೆಸಿಕೊಟ್ಟ ಮಲ್ಲಿಕಾಗೆ ಬೇಷ್ ಎಂದ ಡಿಕೆ

    ಮುಂಬೈ: 2023 ಮಹಿಳಾ ಪ್ರೀಮಿಯರ್ ಲೀಗ್ ಹರಾಜು (WPL Auction 2023) ಪ್ರಕ್ರಿಯೆ ನಡೆಸಿ ಕೊಡಲು ನಿರೂಪಕಿಯಾಗಿ ಬಿಸಿಸಿಐ ಮಲ್ಲಿಕಾ ಸಾಗರ್ (Mallika Sagar) ಅವರನ್ನ ಆಯ್ಕೆಮಾಡಿತ್ತು.

    ಸೋಮವಾರ ನಡೆದ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಮಹಿಳಾ ತಂಡದ ಆಟಗಾರರು ದುಬಾರಿ ಬೆಲೆಗೆ ಬಿಕರಿಯಾದರು. ಭಾರತದ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ (Smriti Mandhana) 3.4 ಕೋಟಿ ರೂ. ದುಬಾರಿ ಬೆಲೆ ಆರ್‌ಸಿಬಿ (RCB) ತಂಡದ ಪಾಲಾದರು. ಇನ್ನು ಹರ್ಮನ್‌ಪ್ರೀತ್ ಕೌರ್ (Harmanpreet Kaur) 1.8 ಕೋಟಿ ರೂ., ಶಫಾಲಿ ವರ್ಮಾ 1.90 ಕೋಟಿ ರೂ., ದೀಪ್ತಿ ಶರ್ಮಾ 2.60 ಕೋಟಿ ರೂ., ಜೆಮಿಮಾ ರೊಡ್ರಿಗಸ್ 2.20 ಕೋಟಿ ರೂ.ಗಳಿಗೆ ಬಿಡ್ ಆದರು.

    ಮಹಿಳಾ ಪ್ರೀಮಿಯರ್ ಲೀಗ್ ಹರಾಜು (WPL Auction 2023) ಪ್ರಕ್ರಿಯೆ ಸೋಮವಾರ ಯಶಸ್ವಿಯಾಗಿ ಮುಕ್ತಾಗೊಂಡಿತು. ಈ ಪ್ರಕ್ರಿಯೆಯನ್ನು ನಡೆಸಿಕೊಟ್ಟ ನಿರೂಪಕಿ ಮಲ್ಲಿಕಾ ಸಾಗರ್ ಅವರಿಗೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?

    ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಸಹ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾ ಸಾಗರ್ ಅವರು ಅದ್ಭುತ ಹರಾಜುದಾರರಾಗಿದ್ದಾರೆ. ಅವರ ಆತ್ಮವಿಶ್ವಾಸ, ಸ್ಪಷ್ಟತೆ ತುಂಬಾ ಸಮಂಜಸವಾಗಿತ್ತು. ಡಬ್ಲ್ಯೂಪಿಎಲ್‌ನಲ್ಲಿ ನೇರವಾಗಿ ಸರಿಯಾದ ಆಯ್ಕೆಗಳು ನಡೆದಿವೆ, ವೆಲ್ ಡನ್ ಬಿಸಿಸಿಐ’ ಎಂದು ಶ್ಲಾಘಿಸಿದ್ದಾರೆ.

    ಮಲ್ಲಿಕಾ ಸಾಗರ್ ಯಾರು?
    ಮಲ್ಲಿಕಾ ಸಾಗರ್ ಅವರು ಮುಂಬೈ ಮೂಲದ ಆರ್ಟ್ ಕಲೆಕ್ಟರ್ ಸಲಹೆಗಾರರಾಗಿದ್ದಾರೆ. ಭಾರತೀಯ ಕಲಾ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಈ ಹಿಂದೆ 2021ರಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಹರಾಜು ಪ್ರಕ್ರಿಯೆಯನ್ನೂ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಈ ಮೂಲಕ ಈ ವೃತ್ತಿಯಲ್ಲಿ ಅವರು ಅನುಭವ ಹೊಂದಿದ್ದರು. ಇದನ್ನೂ ಓದಿ: ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಮಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    2001ರಲ್ಲಿ ಬ್ರಿಟಿಷ್ ಹರಾಜು ಮನೆಯಾದ ಕ್ರಿಸ್ಟೀಸ್‌ನಲ್ಲಿ ಮೊದಲ ಬಾರಿಗೆ ಹರಾಜನ್ನು ನಿಭಾಯಿಸಿದ್ದರು. ಈ ಮೂಲಕ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಭಾರತದ ಮೊದಲ ಮಹಿಳೆ ಎಂದೂ ಗುರುತಿಸಿಕೊಂಡಿದ್ದರು. ಹಿಂದಿನ ಐಪಿಎಲ್ ಹರಾಜಿನ ಹಳೆಯ ವೀಡಿಯೋಗಳನ್ನು ನೋಡುವ ಮೂಲಕ ಮಲ್ಲಿಕಾ ಡಬ್ಲ್ಯುಪಿಎಲ್ ಹರಾಜಿಗೆ ತಯಾರಿ ನಡೆಸಿದ್ದರು ಎಂದು ಹೇಳಲಾಗಿದೆ.

    ಹರಾಜು ಪ್ರಕ್ರಿಯೆಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಮಲ್ಲಿಕಾ, `ಹರಾಜು ಪ್ರಕ್ರಿಯೆ ನಡೆಸಿಕೊಡಲು ನನಗೆ ಜವಾಬ್ದಾರಿ ನೀಡಿರುವುದಕ್ಕೆ ತುಂಬಾ ಖುಷಿಯಾಗಿದೆ. ಇದಕ್ಕೆ ನಾನು ಹೆಮ್ಮೆಪಡುತ್ತೇನೆ’ ಎಂದಿದ್ದಾರೆ.

    ಭಾರತೀಯ ಮಹಿಳೆಯರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಅರ್ಹತೆ ಪಡೆಯುತ್ತಾರೆ. ಉನ್ನತ ಮಟ್ಟದಲ್ಲಿ ಆಡುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ; ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k