Tag: ಹರಿಯಾಣ ಚುನಾವಣಾ ಫಲಿತಾಂಶ

  • ಇವಿಎಂ ಹ್ಯಾಕ್‌ ಮಾಡಲಾಗಿದೆ: ಹರಿಯಾಣ ಸೋಲಿನ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು

    ಇವಿಎಂ ಹ್ಯಾಕ್‌ ಮಾಡಲಾಗಿದೆ: ಹರಿಯಾಣ ಸೋಲಿನ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು

    ನವದೆಹಲಿ: ಹರಿಯಾಣದಲ್ಲಿ (Haryana Election Results) ಪಕ್ಷಕ್ಕೆ ಭಾರೀ ಹಿನ್ನಡೆಯಾದ ನಂತರ ಕಾಂಗ್ರೆಸ್ (Congress) ನಾಯಕರು ಬುಧವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿ, ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

    ಪಕ್ಷದ ವಕ್ತಾರ ಪವನ್ ಖೇರಾ ಅವರು, 20 ಸ್ಥಾನಗಳಲ್ಲಿ ಹ್ಯಾಕಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. ಏಳು ಸ್ಥಾನಗಳಿಗೆ ಸಂಬಂಧಿಸಿದಂತೆ ಅವರು ಸಾಕ್ಷ್ಯಚಿತ್ರ ಸಾಕ್ಷ್ಯವನ್ನು ಸಲ್ಲಿಸಿದ್ದಾರೆ. ಇನ್ನುಳಿದ 13 ಕ್ಷೇತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು 48 ಗಂಟೆಯೊಳಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈಜಾಗ್ ಸ್ಟೀಲ್ ಪುನಶ್ಚೇತನ ವಿಚಾರ – ನಿರ್ಮಲಾ ಸೀತಾರಾಮನ್, ನಾಯ್ಡು ಜೊತೆಗೆ ಹೆಚ್‌ಡಿಕೆ ಚರ್ಚೆ

    ಕರ್ನಾಲ್, ದಬ್ವಾಲಿ, ರೇವಾರಿ, ಪಾಣಿಪತ್ ಸಿಟಿ, ಹೊಡಾಲ್, ಕಲ್ಕಾ ಮತ್ತು ನರ್ನಾಲ್‌ನಲ್ಲಿ ಹ್ಯಾಕಿಂಗ್ ನಡೆದಿರುವ ಬಗ್ಗೆ ಪಕ್ಷವು ಪುರಾವೆಗಳನ್ನು ಸಲ್ಲಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಎಲ್ಲಾ ಮತಯಂತ್ರಗಳನ್ನು ಸೀಲ್ ಮಾಡಿ ಮತ್ತು ಸುರಕ್ಷಿತವಾಗಿರಿಸುವಂತೆ ನಾವು ವಿನಂತಿಸಿದ್ದೇವೆ ಎಂದು ಖೇರಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇದೊಂದು ಆಘಾತಕಾರಿ ಫಲಿತಾಂಶ. ಎಲ್ಲರೂ ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದರು ಎಂದು ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ. ಇದನ್ನೂ ಓದಿ: ಮತ ಎಣಿಕೆಯಲ್ಲಿ ಅಕ್ರಮ, ಆಯೋಗಕ್ಕೆ ದೂರು ನೀಡುತ್ತೇವೆ: ರಾಹುಲ್‌ ಗಾಂಧಿ

    ಅಂಚೆ ಮತಪತ್ರಗಳನ್ನು ತೆರೆದಾಗ ಕಾಂಗ್ರೆಸ್ ಯಾವಾಗಲೂ ಗೆಲ್ಲುತ್ತದೆ. ಆದರೆ ವಿದ್ಯುನ್ಮಾನ ಮತಯಂತ್ರಗಳು ಅಥವಾ ಇವಿಎಂಗಳಿಂದ ಮತಗಳ ಎಣಿಕೆ ಪ್ರಾರಂಭವಾದ ನಂತರ ಸ್ಲೈಡಿಂಗ್ ಪ್ರಾರಂಭಿಸುತ್ತದೆ ಎಂದು ಹೂಡಾ ಆರೋಪಿಸಿದ್ದಾರೆ.

    ಹರಿಯಾಣದ 90 ಸ್ಥಾನಗಳ ಪೈಕಿ ಬಿಜೆಪಿ 48 ಹಾಗೂ ಕಾಂಗ್ರೆಸ್‌ 37 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ರಾಜ್ಯದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ.

  • ಬಿಜೆಪಿಗೆ ಸತತ 3ನೇ ಬಾರಿಗೆ ಅಧಿಕಾರ ನೀಡಿ ಹರಿಯಾಣ ಇತಿಹಾಸ ಬರೆದಿದೆ: ಮೋದಿ ಸೆಲ್ಯೂಟ್‌

    ಬಿಜೆಪಿಗೆ ಸತತ 3ನೇ ಬಾರಿಗೆ ಅಧಿಕಾರ ನೀಡಿ ಹರಿಯಾಣ ಇತಿಹಾಸ ಬರೆದಿದೆ: ಮೋದಿ ಸೆಲ್ಯೂಟ್‌

    – ಕಾಂಗ್ರೆಸ್‌ ಸರ್ಕಾರ ಎಲ್ಲೂ ವಾಪಸ್‌ ಬರ್ತಿಲ್ಲ
    – ಕಾಂಗ್ರೆಸ್‌ ‘ಪರಾವಲಂಬಿ ಪಕ್ಷ’ ಎಂದು ಪ್ರಧಾನಿ ವ್ಯಂಗ್ಯ

    ನವದೆಹಲಿ: ಬಿಜೆಪಿಗೆ ಸತತ ಮೂರನೇ ಬಾರಿಗೆ ಅಧಿಕಾರ ನೀಡಿ ಹರಿಯಾಣ ರಾಜ್ಯ ಇತಿಹಾಸ ಬರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ದೆಹಲಿಯಲ್ಲಿ ಬಿಜೆಪಿ (BJP) ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವದ ವೇಳೆ ಮಾತನಾಡಿದ ಮೋದಿ, ಹರಿಯಾಣದ (Haryana Election Results) ಜನರು ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ಕಮಲ್ ಕಮಲ್ ಮಾಡಿದ್ದಾರೆ. ಇಂದು ನವರಾತ್ರಿಯ ನಾಲ್ಕನೇ ದಿನ. ತಾಯಿ ಕಾತ್ಯಾಯಿನಿ ಆರಾಧ್ಯನೆಯ ದಿನ. ಕ್ಯಾತಯಿನಿ ದೇವಿ ಕೈಯಲ್ಲಿ ಕಮಲದ ಹೂವಿದೆ. ಇಂತಹ ಪಾವನ ದಿನದಂದು ಹರಿಯಾಣದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಪಕ್ಷ ಬಂದಿದೆ. ಗೀತಾದ ನೆಲದಲ್ಲಿ ವಿಕಾಸ‌ದ ಗೆಲವು ಬಂದಿದೆ. ಎಲ್ಲ ಜಾತಿ ವರ್ಗದ ಜನರು ನಮಗೆ ಮತ ನೀಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಇದು ಭಾರತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: Haryana Assembly Elections: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ಗೆ ಗೆಲುವು

    ಜಮ್ಮು ಕಾಶ್ಮೀರ ಜನರು ಎನ್‌ಸಿ ಒಕ್ಕೂಟಕ್ಕೆ ಹೆಚ್ಚು ಸ್ಥಾನ ನೀಡಿದ್ದಾರೆ. ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎಷ್ಟು ಪಕ್ಷಗಳು ಚುನಾವಣಾ ಅಖಾಡದಲ್ಲಿದ್ದವು, ಅದರಲ್ಲಿ ಬಿಜೆಪಿ ಹೆಚ್ಚು ಮತ ಪಡೆದಿದೆ. ಅಲ್ಲಿ ಗೆಲವು ಸಾಧಿಸಿದ ಜನರಿಗೆ ಅಭಿನಂದನೆ ಹೇಳುತ್ತೇನೆ. ಎರಡು ರಾಜ್ಯದ ನಮ್ಮ ಕಾರ್ಯಕರ್ತರಿಗೆ ಧನ್ಯವಾದ ಹೇಳ್ತೀವಿ. ಇದು ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ನಡ್ಡಾ ಅವರ ತಂಡದ ಗೆಲುವಾಗಿದೆ. ನಮ್ಮ ಸಿಎಂ ಕರ್ತವ್ಯದ ಜಯವಾಗಿದೆ ಎಂದು ಹೊಗಳಿದ್ದಾರೆ.

    ಸುಳ್ಳಿನ ರಾಶಿಯ ಮೇಲೆ ಅಭಿವೃದ್ಧಿ ಗ್ಯಾರಂಟಿ ಹೊರೆಯಾಯಿತು. ಹರಿಯಾಣ ಜನರು ಹೊಸ ಇತಿಹಾಸ ರಚಿಸಿದ್ದಾರೆ. 1966 ರಿಂದ ಸತತ ಮೂರನೇ ಬಾರಿಗೆ ಯಾವ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ದೊಡ್ಡ ದೊಡ್ಡ ಪಕ್ಷಗಳು ಆಡಳಿತ ನಡೆಸಿವೆ. ಇದು ಯಾರಿಗೂ ಸಾಧ್ಯವಾಗಲಿಲ್ಲ. ಹರಿಯಾಣದ ಜನರು ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಾರೆ. ಈ ಬಾರಿ ಹರಿಯಾಣದ ಜನರು ಮಾಡಿರುವುದು ಅಭೂತಪೂರ್ವವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: Jammu Kashmir Results | ಚುನಾವಣೆಯಲ್ಲಿ ಸೋತರೂ ಮತಗಳಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

    ಕೇವಲ ಮೂರನೇ ಬಾರಿಗೆ ಸರ್ಕಾರ ಬಂದಿಲ್ಲ. ಮತ ಪ್ರಮಾಣವು ಅಧಿಕವಾಗಿದೆ. ಈ ಜನಾದೇಶ ಸಂದೇಶ ದೂರ ದೂರದವರೆಗೂ ಹೋಗಲಿದೆ. ಬಿಜೆಪಿ ಪ್ರಂಪಚ ದೊಡ್ಡ ಪಕ್ಷ ಮಾತ್ರವಲ್ಲ, ಬಿಜೆಪಿ ಪ್ರಂಪಚದಲ್ಲೇ ಅತಿ ಹೆಚ್ಚು ಜನರ ಹೃದಯದಲ್ಲಿದೆ. ಜನರು ನಮ್ಮ ಅಭಿವೃದ್ಧಿ ಕೆಲಸಕ್ಕೆ ಹ್ಯಾಟ್ರಿಕ್ ಅವಕಾಶ ನೀಡಿದ್ದಾರೆ. ಗುಜರಾತ್ ಮಧ್ಯಪ್ರದೇಶ ಜನರು ಎರಡು ದಶಕದಿಂದ ಆಶೀರ್ವಾದ ಮಾಡಿದ್ದಾರೆ. ಯುಪಿ ಬಿಹಾರದಲ್ಲಿ ಕಾನೂನು ಸ್ಥಾಪಿಸುವ ಎನ್‌ಡಿಎ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ. ಎಲ್ಲೆಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆಯೋ ಅಲ್ಲಿ ದೀರ್ಘಾವಧಿಗೆ ಬೆಂಬಲ ನೀಡುತ್ತಾರೆ. ಮತ್ತೊಂದು ಕಡೆ ಕಾಂಗ್ರೆಸ್ ಸರ್ಕಾರ ಎಲ್ಲೂ ವಾಪಸ್ ಬರ್ತಿಲ್ಲ. 13 ವರ್ಷ ಮುಂಚೆ ಅಸ್ಸಾಂ ಸರ್ಕಾರ ವಾಪಸ್ ಬಂದಿತ್ತು. ಆ ಬಳಿಕ ನಡೆದ ಚುನಾವಣೆಗಳಲ್ಲಿ ಎರಡನೇ ಅವಕಾಶ ಕಾಂಗ್ರೆಸ್‌ಗೆ ನೀಡಿಲ್ಲ. ದೇಶದ ರಾಜ್ಯಗಳಲ್ಲಿ ಒಮ್ಮೆ ತೆಗೆದು ಹಾಕಿದ್ದಾರೆ. ಮತ್ತೆ ವಾಪಸ್ ಬರಲು ಕಾಂಗ್ರೆಸ್‌ಗೆ ಅವಕಾಶ ನೀಡಿಲ್ಲ ಎಂದು ಕುಟುಕಿದ್ದಾರೆ.

    ಮೊದಲು ಕಾಂಗ್ರೆಸ್ ಕೆಲಸ ಮಾಡದರೂ, ಮಾಡಿದಿದ್ದರೂ ಜನರು ಮತ ಕೊಡ್ತಾರೆ ಅನ್ನುವ ಮನಸ್ಥಿತಿ ಇತ್ತು. ಸರ್ಕಾರ ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸುತ್ತಿತ್ತು. ಅಧಿಕಾರ ಇಲ್ಲದೇ ನೀರಿನಿಂದ ಹೊರ ಬಿದ್ದ ಮೀನಿನಂತೆ ಕಾಂಗ್ರೆಸ್ ಆಗಿದೆ. ಈಗ ಅವರ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ ಹೇಗೆ ವಿಷ ಬೀಜ ಬಿತ್ತಿದೆ ಎಂದು ಇಡೀ ದೇಶವೇ ನೋಡಿದೆ. ಹಲವು ತಲೆಮಾರುಗಳನ್ನು ಜಾತಿ ಹೆಸರಿನಲ್ಲಿ ಹೊಡೆದಾಡಲು ಬಿಟ್ಟಿದೆ. ಹಿಂದುಳಿದ ವರ್ಗ, ದಲಿತರ ಮೇಲೆ ಹೆಚ್ಚು ಶೋಷಣೆ ಮಾಡಿದೆ. ಅಧಿಕಾರ ಸಿಕ್ಕಾಗ ಎಂದು ದಲಿತ ಹಿಂದುಳಿದ ವರ್ಗದವರಿಗೆ ಅಧಿಕಾರ ನೀಡಲಿಲ್ಲ. ಕಾಂಗ್ರೆಸ್ ಪರಿವಾರ ದಲಿತ ಹಿಂದುಳಿದ ಆದಿವಾಸಿಗಳನ್ನು ದ್ವೇಷ ಮಾಡುತ್ತದೆ. ಈ ಎಲ್ಲ ವರ್ಗದ ಜನರು ಉನ್ನತ ಸ್ಥಾನಕ್ಕೆ ಹೋಗ್ತಿದ್ದರೆ ಇವರ ಹೊಟ್ಟೆಯಲ್ಲಿ ಇಲಿ ಓಡಾಡುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • Haryana Assembly Elections: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ಗೆ ಗೆಲುವು

    Haryana Assembly Elections: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ಗೆ ಗೆಲುವು

    ನವದೆಹಲಿ: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ (Savitri Jindal) ಅವರು ಹರಿಯಾಣ (Haryana Election Results) ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ.

    ಹಿಸಾರ್‌ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾವಿತ್ರಿ ಅವರು ಬಿಜೆಪಿಯ ಕಮಲ್‌ ಗುಪ್ತಾ ವಿರುದ್ಧ 18,941 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ರಾಮ್ ನಿವಾಸ್ ರಾರಾ ಸ್ಪರ್ಧಿಸಿದ್ದರು. ಇದನ್ನೂ ಓದಿ: ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್‌

    ಹಿಸಾರ್‌ನ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿರುವ ಸಾವಿತ್ರಿ ಜಿಂದಾಲ್ ಅವರು, ಹಿಸಾರ್ ಕುಟುಂಬಕ್ಕೆ ಕೃತಜ್ಞತೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಿಂದಾಲ್ ಕುಟುಂಬದ 74 ವರ್ಷದ ಸಾವಿತ್ರಿ ಅವರು ಈಗ ಮೂರನೇ ಬಾರಿಗೆ ಹಿಸಾರ್‌ನಲ್ಲಿ ಗೆದ್ದಿದ್ದಾರೆ. ಈ ಹಿಂದೆ 2005 ಮತ್ತು 2009 ರಲ್ಲಿ ಕಾಂಗ್ರೆಸ್ ಶಾಸಕರಾಗಿ ಗೆದ್ದಿದ್ದರು.

    ಸಾವಿತ್ರಿ ಜಿಂದಾಲ್ ಅವರು 2005 ರಲ್ಲಿ ತಮ್ಮ ಪತಿ ಒ.ಪಿ.ಜಿಂದಾಲ್ ಅವರ ಮರಣದ ನಂತರ ವ್ಯಾಪಾರ ಮತ್ತು ರಾಜಕೀಯ ಜಗತ್ತಿಗೆ ಕಾಲಿಟ್ಟರು. ಜಿಂದಾಲ್ ಗ್ರೂಪ್‌ನ ಮುಖ್ಯಸ್ಥರಾಗಿ ಅವರು ಉಕ್ಕು, ವಿದ್ಯುತ್, ಗಣಿಗಾರಿಕೆ ಮತ್ತು ಮೂಲಸೌಕರ್ಯದಲ್ಲಿ ತೊಡಗಿರುವ ಸಂಘಟಿತ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ನಾಯಕತ್ವವು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸೇರಿದಂತೆ ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದೆ. ಇದನ್ನೂ ಓದಿ: Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ

    ಸಾವಿತ್ರಿ ಜಿಂದಾಲ್ 2005 ರಲ್ಲಿ ಮೊದಲ ಬಾರಿಗೆ ಹರಿಯಾಣ ಅಸೆಂಬ್ಲಿಯಲ್ಲಿ ಹಿಸಾರ್ ಅನ್ನು ಕಾಂಗ್ರೆಸ್ ಸದಸ್ಯೆಯಾಗಿ ಪ್ರತಿನಿಧಿಸಿದ್ದರು. 2009 ರಲ್ಲಿ ಎರಡನೇ ಬಾರಿಗೆ ಗೆದ್ದಿದ್ದರು. 2013 ರಲ್ಲಿ ಹರಿಯಾಣ ಸರ್ಕಾರದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ ಅವರು ಅಂತಿಮವಾಗಿ ಮಾರ್ಚ್‌ನಲ್ಲಿ ಕಾಂಗ್ರೆಸ್‌ನಿಂದ ಹೊರನಡೆದಿದ್ದರು.

    ಸಾವಿತ್ರಿ ಜಿಂದಾಲ್ ಅವರ ವೈಯಕ್ತಿಕ ಸಂಪತ್ತು 3.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಹೀಗಾಗಿ ಅವರು ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (ಸೆಪ್ಟೆಂಬರ್ 28, 2024) ಪ್ರಕಾರ ಅವರು ದೇಶದ ಐದನೇ-ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಹೊಂದಿದ್ದಾರೆ. ವರದಿ ಪ್ರಕಾರ, ನಿವ್ವಳ ಮೌಲ್ಯ 36.3 ಬಿಲಿಯನ್ ಡಾಲರ್‌. ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ – ಖಾತೆ ತೆರೆದ ಎಎಪಿ; ಬಿಜೆಪಿ ಅಭ್ಯರ್ಥಿ ವಿರುದ್ಧ ಮಲಿಕ್‌ ಜಯಭೇರಿ

  • ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್‌

    ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್‌

    ನವದೆಹಲಿ: ಹರಿಯಾಣದಲ್ಲಿನ (Haryana Election Results) ಚುನಾವಣಾ ಫಲಿತಾಂಶಗಳು ಅನಿರೀಕ್ಷಿತ ಮತ್ತು ಆಘಾತಕಾರಿ, ಕಾಂಗ್ರೆಸ್ (Congress) ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪಕ್ಷವು ತಿಳಿಸಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ (Jairam Ramesh), ಹರಿಯಾಣದ ಫಲಿತಾಂಶಗಳು ಸಂಪೂರ್ಣವಾಗಿ ಅನಿರೀಕ್ಷಿತ, ಆಶ್ಚರ್ಯಕರವಾಗಿದೆ. ಇದು ವಾಸ್ತವಕ್ಕೆ ವಿರುದ್ಧವಾಗಿದೆ. ಇದು ಹರಿಯಾಣದ ಜನರು ಬದಲಾವಣೆ ಮತ್ತು ಪರಿವರ್ತನೆಗಾಗಿ ಮನಸ್ಸು ಮಾಡಿದ್ದಕ್ಕೆ ವಿರುದ್ಧವಾಗಿದೆ. ಹೀಗಿರುವಾಗ ಇಂದು ಪ್ರಕಟವಾಗಿರುವ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹರಿಯಾಣದಲ್ಲಿ ನಾವು ಇಂದು ನೋಡಿರುವುದು ಕುಶಲತೆಯ ಗೆಲುವು, ಜನರ ಇಚ್ಛೆಯನ್ನು ಬುಡಮೇಲು ಮಾಡಿದ ವಿಜಯವಾಗಿದೆ. ಇದು ಪಾರದರ್ಶಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಸೋಲು. ಹರಿಯಾಣದ ಅಧ್ಯಾಯ ಪೂರ್ಣವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: Jammu Kashmir Results | ಚುನಾವಣೆಯಲ್ಲಿ ಸೋತರೂ ಮತಗಳಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

    ಮಧ್ಯಾಹ್ನದವರೆಗೆ ನಾನು ಚುನಾವಣಾ ಆಯೋಗದೊಂದಿಗೆ ಸಂಪರ್ಕದಲ್ಲಿದ್ದೆ. ನನ್ನ ದೂರುಗಳಿಗೆ ಅವರು ಉತ್ತರಿಸಿದ್ದಾರೆ. ಅವರ ಉತ್ತರಕ್ಕೆ ನಾನು ಪ್ರತಿಕ್ರಿಯಿಸಿದ್ದೇನೆ. ಹರಿಯಾಣದ ಕನಿಷ್ಠ ಮೂರು ಜಿಲ್ಲೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಎಣಿಕೆಯ ಪ್ರಕ್ರಿಯೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ನಾವು ಗಂಭೀರ ದೂರುಗಳನ್ನು ಸ್ವೀಕರಿಸಿದ್ದೇವೆ. ಇನ್ನೂ ಹೆಚ್ಚಿನವುಗಳು ಬರುತ್ತಿವೆ. ಈ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ಇಂದು ಅಥವಾ ಮರುದಿನ ಚುನಾವಣಾ ಆಯೋಗಕ್ಕೆ ಪ್ರಸ್ತುತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

    ಈಗ ಬಹುಮುಖ್ಯ ವಿಷಯವೆಂದರೆ ನಮ್ಮ ಗೆಲುವು ಕಿತ್ತುಕೊಳ್ಳಲಾಗಿದೆ. ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಹರಿಯಾಣದಲ್ಲಿ ಕನಿಷ್ಠ 12-14 ಸ್ಥಾನಗಳಲ್ಲಿ ಅಭ್ಯರ್ಥಿಗಳು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಎಣಿಕೆ ಪ್ರಕ್ರಿಯೆಯ ಸಮಗ್ರತೆ ಮತ್ತು ಇವಿಎಂಗಳ ಕಾರ್ಯನಿರ್ವಹಣೆಯನ್ನು ಪ್ರಶ್ನಿಸುತ್ತದೆ ಎಂದು ಜೈರಾಮ್‌ ರಮೇಶ್‌ ದೂರಿದ್ದಾರೆ. ಇದನ್ನೂ ಓದಿ: Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ

    ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿ 48 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಹ್ಯಾಟ್ರಿಕ್‌ ಜಯದ ಹೊಸ್ತಿಲಲ್ಲಿದೆ. ದಶಕಗಳ ಬಳಿಕ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ನಿರಾಸೆಯಾಗಿದ್ದು, 37 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಐಎನ್‌ಎಲ್‌ಡಿ 2 ರಲ್ಲಿ ಮುಂದಿದೆ.