Tag: ಹಬ್ಬಗಳು

  • ಹಬ್ಬಗಳನ್ನೂ ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿರೋದು ದುರ್ದೈವ: ಪ್ರಿಯಾಂಕ್ ಖರ್ಗೆ ವಿಷಾದ

    ಹಬ್ಬಗಳನ್ನೂ ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿರೋದು ದುರ್ದೈವ: ಪ್ರಿಯಾಂಕ್ ಖರ್ಗೆ ವಿಷಾದ

    ಕಲಬುರಗಿ: ಇಂದಿನ ದಿನಗಳಲ್ಲಿ ಹಬ್ಬಗಳನ್ನೂ (Festivals) ಪೊಲೀಸರ ಬಂದೋಬಸ್ತ್‌ನಲ್ಲಿ ಆಚರಿಸಬೇಕಾದ ಸ್ಥಿತಿ ಬಂದಿರುವುದು ದುರ್ದೈವ. ಕಳೆದ 10 ವರ್ಷಗಳಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿಷಾದ ವ್ಯಕ್ತಪಡಿಸಿದ್ದಾರೆ.

    ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೈ ಶ್ರೀರಾಮ್ (Jai Sri Ram) ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

    ಎಲ್ಲಾ ಧರ್ಮಗಳಲ್ಲೂ ಶಾಂತಿ ಕದಡುವವರು ಕೆಲವರು ಇರ್ತಾರೆ. ಕೆಲವರು ಅವರದ್ದೇ ಧರ್ಮ ಶ್ರೇಷ್ಠ ಅಂತಾ ಭಾವಿಸುತ್ತಾರೆ ಇದು ದುರ್ದೈವ. ನಾನು ಅದಮಾರ ಮಠದ ಶಾಲೆಯಲ್ಲಿ ಓದಿದ್ದೇನೆ. ಆಗ ನಮಗೆ ರಂಜಾನ್, ಗಣೇಶ್ ಹಬ್ಬ, ಕ್ರಿಸ್ಮಸ್, ರಾಮನವಮಿಗೆ ರಜೆ ಸಿಗ್ತಿತ್ತು. ರಂಜಾನ್, ರಾಮನವಮಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು ಎಂದು ಸ್ಮರಿಸಿದ್ದಾರೆ.

    ಈ ಹಿಂದೆ ರಂಜಾನ್ ಬಂದ್ರೆ ನಾವು ಅವರ ಮನೆಗೆ ಹೋಗಿ ಬಿರಿಯಾನಿ ತಿಂದು ಬರ್ತಿದ್ವಿ, ಕ್ರಿಸ್ಮಸ್‌ಗೆ ಹೋಗಿ ಕೇಕ್ ತಿನ್ನುತ್ತಿದ್ವಿ. ಯುಗಾದಿ ಬಂದಾಗ ಅವರು ನಮ್ಮ ಮನೆಗೆ ಬಂದು ಹೋಳಿಗೆ ಊಟ ಮಾಡ್ತಿದ್ದರು. ಆದ್ರೆ ಈಗ ಎಲ್ಲ ಹಬ್ಬಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಣೆ ಮಾಡಬೇಕಿದೆ. 144 ಸೆಕ್ಷನ್ ವಿಧಿಸಿ ಹಬ್ಬ ಆಚರಣೆ ಮಾಡಬೇಕಾದಂತಹ ಪರಿಸ್ಥಿತಿ ಬಂದಿದೆ. ಇದು ಯಾರಿಂದ ಮತ್ತು ಯಾಕೆ ಆಗಿದೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಹಬ್ಬಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿದೆ. ಯಾರೋ ನಾಲ್ಕು ಜನ ಬಂದು ನಮ್ಮ ಧರ್ಮ ಶ್ರೇಷ್ಠ ಅಂತ ಹೇಳುವುದರಿಂದ ಪೊಲೀಸರು ಎಲ್ಲದಕ್ಕೂ ಭದ್ರತೆ ನೀಡಬೇಕಿದೆ. ಇದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 56 ಇಂಚಿನ ಎದೆ ಇರೋ ಮೋದಿ ಮಣಿಪುರದ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಮಾತಾಡಲಿಲ್ಲ: ಹರಿಪ್ರಸಾದ್

  • ಸಾಮುದಾಯಿಕ ಆಚರಣೆಗಳ ಹಿಂದೆ ಆರೋಗ್ಯದ ಗುಟ್ಟು

    ಸಾಮುದಾಯಿಕ ಆಚರಣೆಗಳ ಹಿಂದೆ ಆರೋಗ್ಯದ ಗುಟ್ಟು

    ಬೆಂಗಳೂರು: ವಿವಿಧ ಸಮುದಾಯಗಳು ನಿರ್ದಿಷ್ಟ ಹಬ್ಬ ಅಥವಾ ಋತುಮಾನಕ್ಕೆ ಅನುಗುಣವಾಗಿ ಆಚರಿಸುವ ಪಾರಂಪರಿಕ ಪದ್ಧತಿಗಳ ಹಿಂದೆ ಖಂಡಿತವಾಗಿಯೂ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಿರುತ್ತವೆ ಎಂದು ಯಲಹಂಕದ ಅಂತರ್ ಶಿಸ್ತೀಯ ಆರೋಗ್ಯವಿಜ್ಞಾನಗಳು ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಫುಲ್‍ಬ್ರೈಟ್ ಫೆಲೋ ಆಗಿರುವ ಹಿರಿಯ ವಿಜ್ಞಾನಿ ಡಾ.ಬಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.

    ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘ `ಭಾರತೀಯ ವಿಜ್ಞಾನ ಮತ್ತು ಸಮೃದ್ಧ ಪರಂಪರೆ’ ಕುರಿತು ಸೋಮವಾರ ಜಂಟಿಯಾಗಿ ಆಯೋಜಿಸಿದ್ದ ವೆಬಿನಾರ್ ನಲ್ಲಿ ಅವರು ಮಾತನಾಡಿದರು. ಡಿಸೆಂಬರ್ 22ರಿಂದ ಆರಂಭವಾಗಲಿರುವ `ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮಹೋತ್ಸವ -2020’ಕ್ಕೆ ಪೂರ್ವಭಾವಿಯಾಗಿ ಈ ವೆಬಿನಾರ್ ಆಯೋಜಿಸಲಾಗಿತ್ತು.

    `ರಾಜ್ಯದ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಅನೇಕ ಹಳ್ಳಿಗಳಲ್ಲಿ ನಿರ್ದಿಷ್ಟ ಋತುಗಳಲ್ಲಿ ಅನುಸರಿಸುವ ಧಾರ್ಮಿಕ ಆಚರಣೆ ಅಥವಾ ಅಡುಗೆ ವಿಧಾನಗಳ ಹಿಂದೆ ಆರೋಗ್ಯ ಕಾಪಾಡಿಕೊಳ್ಳುವಂತಹ ರಹಸ್ಯ ಅಡಗಿದೆ. ಕರಾವಳಿಯ ತುಳು ಜನಾಂಗದವರು ಆಷಾಢ ಅಮಾವಾಸ್ಯೆಯ ದಿನ ಮದ್ದಾಲೆ ಮರದ ಎಲೆಯ ಕಷಾಯವನ್ನು ಆಟಿ ಕಷಾಯ ಎಂದು ಸೇವಿಸುತ್ತಾರೆ. ಅತಿಹೆಚ್ಚು ಮಳೆ ಬೀಳುವ ಆ ಪ್ರದೇಶದಲ್ಲಿ ಆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಲೇರಿಯಾ ಜ್ವರಕ್ಕೆ ಅದನ್ನು ಔಷಧವಾಗಿ ಬಳಸಲಾಗುತ್ತಿತ್ತು. ಮಲೇರಿಯಾಕ್ಕೆ ನೀಡಲಾಗುವ ಅಲೋಪತಿ ಔಷಧದಲ್ಲಿ ಇರುವ ರಾಸಾಯನಿಕ ಅಂಶಗಳು ಆ ಎಲೆಯಲ್ಲಿಯೂ ಇವೆ. ಅದನ್ನು ಹೇಗೋ ಕಂಡುಕೊಂಡ ಆ ಪ್ರದೇಶದ ಹಿರಿಯರು ಅದನ್ನು ಹಬ್ಬದ ಆಚರಣೆಯ ರೀತಿಯಲ್ಲಿ ಅನುಸರಿಸಿದರು.

    ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ತಿಮ್ಮಪ್ಪನ ದೇವಾಲಯದಲ್ಲಿ ಪ್ರತಿವರ್ಷ ತಾವರೆ ಎಲೆಯಲ್ಲಿ ಪ್ರಸಾದ ಬಡಿಸಲಾಗುತ್ತಿದ್ದು, ನೂರಾರು ಜನ ಅಲ್ಲಿ ತಾವರೆ ಎಲೆಯಲ್ಲಿ ಪ್ರಸಾದ ಸೇವಿಸುತ್ತಾರೆ. ಸುಮಾರು ನೂರು ವರ್ಷಗಳ ಹಿಂದೆ ಆ ಹಳ್ಳಿಯಲ್ಲಿ ಕಾಲರಾ ಕಾಣಿಸಿಕೊಂಡಿತ್ತು ಅದಕ್ಕೆ ಮದ್ದಾಗಿ ಇದನ್ನು ಬಳಕೆಗೆ ತರಲಾಯಿತು. ಕಾಲರಾ ಇಲ್ಲದಿದ್ದರೂ ಪ್ರತಿವರ್ಷ ಅದನ್ನು ಪಾರಂಪರಿಕವಾಗಿ ಆಚರಿಸಲಾಗುತ್ತಿದೆ. ಏಕಾದಶಿ ಉಪವಾಸದ ಮಾರನೇ ದಿನ ಅಗಸೆ ಸೊಪ್ಪನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಉಪವಾಸದಿಂದ ದೇಹದಲ್ಲಿ ಉತ್ಪತ್ತಿಯಾದ ಅತಿಯಾದ ಪಿತ್ತವನ್ನು ಅದು ಕಡಿಮೆ ಮಾಡುತ್ತದೆ’ ಎಂದು ಸೋಮಶೇಖರ್ ಅವರು ವಿವರಿಸಿದರು.

    ಭಾರತದ ಪ್ರಸಿದ್ಧ ಗಣಿತಜ್ಞ `ಶ್ರೀನಿವಾಸ್ ರಾಮಾನುಜಮ್’ ಕುರಿತು ಮಾತನಾಡಿದ ಹಿರಿಯ ಡೇಟಾ ವಿಜ್ಞಾನಿ ಡಾ.ಉದಯ್ ಶಂಕರ್ ಪುರಾಣಿಕ್, ಈಗ ನಾವು ನಿತ್ಯ ಬಳಸುವ ಸ್ಕ್ಯಾನರ್, ಪ್ರಿಂಟರ್ ಹಾಗೂ ವೈದ್ಯಕೀಯ ಉಪಕರಣಗಳಲ್ಲಿ ಶ್ರೀನಿವಾಸ್ ರಾಮಾನುಜಮ್ ಕಳೆದ ಶತಮಾನದಲ್ಲೇ ಮಂಡಿಸಿದ್ದ ಗಣಿತ ಸೂತ್ರಗಳು ಬಳಕೆಯಾಗುತ್ತಿವೆ. ಮುಂದೊಂದು ದಿನ ಜಗತ್ತು ತಾಂತ್ರಿಕವಾಗಿ ಇಷ್ಟೊಂದು ಮುಂದುವರಿಯಲಿದೆ ಎಂಬ ಕಲ್ಪನೆ ರಾಮಾನುಜಮ್ ಅವರಿಗೆ ಇರಲಿಕ್ಕಿಲ್ಲ. ಆದರೆ ಅವರು ಮಂಡಿಸಿದ ಸೂತ್ರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. ಡಿಸೆಂಬರ್ 22 ಶ್ರೀನಿವಾಸ್ ರಾಮಾನುಜಮ್ ಹುಟ್ಟುಹಬ್ಬವಾಗಿರುವುದು ಒಂದು ವಿಶೇಷ.

    `ವಿಜ್ಞಾನದ ತಾತ್ವಿಕತೆ’ ಕುರಿತು ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ವಿಶ್ವೇಶ ಗುತ್ತಲ್, ವೈಜ್ಞಾನಿಕ ಸೂತ್ರವೊಂದನ್ನು ಅಂತಿಮವಾಗಿ ಮಂಡಿಸುವ ಮುನ್ನ ಹೇಗೆ ನಿಷ್ಕರ್ಷೆ ಮಾಡಲಾಗುತ್ತದೆ ಎಂದು ವಿವರಿಸಿದರು. ಪ್ರಯೋಗ ಹಾಗೂ ಸತತ ವೀಕ್ಷಣೆಯ ಮೂಲಕ ಒಪ್ಪಿಕೊಳ್ಳಲು ಸಾಧ್ಯವಾದರೆ ಮಾತ್ರ ಅಂತಹ ಸೂತ್ರವನ್ನು ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳು ಅಂಗೀಕರಿಸುತ್ತವೆ ಎಂದು ಗುತ್ತಲ್ ತಿಳಿಸಿದರು.

    ಹಿರಿಯ ಪತ್ರಕರ್ತೆಯರಾದ ಎಂ.ಪಿ.ಸುಶೀಲ, ಕೆ.ಎಚ್.ಸಾವಿತ್ರಿ, ಆಕಾಶವಾಣಿ ನಿರ್ದೇಶಕಿ ನಿರ್ಮಲಾ ಯಲಿಗಾರ್ ಸಂವಾದದಲ್ಲಿ ಭಾಗಿಯಾದರು. ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಅಧಿಕಾರಿ ಕೆ.ವೈ.ಜಯಂತಿ, ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಕಾರ್ಯದರ್ಶಿ ಮಾಲತಿ ಭಟ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ರೂಪಾ ಚಿಂತಾಮಣಿ, ಪತ್ರಕರ್ತೆಯರಾದ ಉಷಾ ಕಟ್ಟೆಮನೆ, ವಾಣಿಶ್ರೀ ಪತ್ರಿ, ಚಿತ್ರಾ ಫಾಲ್ಗುಣಿ, ಅಕ್ಷರಾ ಕುಮಾರ್ ಹಾಗೂ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು.

  • ಹಬ್ಬಗಳ ಸೀಸನ್ ಬೆಂಗ್ಳೂರಿಗೆ ಟೆನ್ಶನ್- ಕೊರೊನಾ ಟೈಂನಲ್ಲಿ ಹೊಸ ಸವಾಲು

    ಹಬ್ಬಗಳ ಸೀಸನ್ ಬೆಂಗ್ಳೂರಿಗೆ ಟೆನ್ಶನ್- ಕೊರೊನಾ ಟೈಂನಲ್ಲಿ ಹೊಸ ಸವಾಲು

    ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಒಂದು ವಾರಗಳ ಕಾಲ ಘೋಷಣೆ ಮಾಡಿದ್ದ ಲಾಕ್‍ಡೌನ್ ಇಂದು ಮುಗಿಯಲಿದೆ. ಇದೀಗ ಸಿಲಿಕಾನ್ ಸಿಟಿಗೆ ಕೊರೊನಾ ಸಂದರ್ಭದಲ್ಲಿ ಹೊಸ ಸವಾಲು ಎದುರಾಗಲಿದೆ.

    ಶ್ರಾವಣ ಮಾಸ ಆರಂಭದ ಬೆನ್ನಲ್ಲೆ ಹಬ್ಬಗಳ ಸೀಸನ್ ಆರಂಭವಾಗಲಿದೆ. ಈ ಹಬ್ಬಗಳ ಸೀಸನ್ ಬೆಂಗಳೂರಿಗೆ ಟೆನ್ಶನ್ ಆಗಿದೆ. ಈ ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಸಾಲಾಗಿ ಹಬ್ಬಗಳು ಶುರುವಾಗುತ್ತವೆ. ಇದರಿಂದ ಜನರ ವಲಸೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಮೂಲಕ ಒಂದು ವಾರದ ಲಾಕ್‍ಡೌನ್ ತೆರವಿನ ಬಳಿಕ ಹೊಸ ಚಾಲೆಂಜ್ ಎದುರಾಗಲಿದೆ.

    ಹಬ್ಬಗಳ ಸಮಯದಲ್ಲಿ ಬೆಂಗಳೂರಿನಿಂದ ಅನೇಕರು ತಮ್ಮ ತಮ್ಮ ಊರಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಳವಾಗುತ್ತೆ. ಹೀಗಾಗಿ ಬೆಂಗಳೂರಿನಿಂದ ವೈರಸ್ ಹಳ್ಳಿಗಳ ಭಾಗಕ್ಕೆ ಶಿಫ್ಟ್ ಆಗುವ ಸಾಧ್ಯತೆಯ ಬಗ್ಗೆ ಆತಂಕ ಶುರುವಾಗಿದೆ.

    ಏಕಾಏಕಿ ಲಾಕ್‍ಡೌನ್ ತೆರವು ಇನ್ನೊಂದಿಷ್ಟು ಅವಾಂತರಕ್ಕೆ ಕಾರಣವಾಗಲಿದೆ. ಹಾಗಾಗಿ ಹಬ್ಬಗಳ ಸಮಯದಲ್ಲಿ ಆದಷ್ಟು ಬಿಗಿ ಕ್ರಮ ಅಗತ್ಯತೆಯ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳು, ತಜ್ಞರು ಈಗಾಗಲೇ ಸಲಹೆ ನೀಡಿದ್ದಾರೆ.

    ಈಗಾಗಲೇ ಅಂತರ್ ಜಿಲ್ಲೆ ಓಡಾಟದಿಂದ ದೊಡ್ಡ ಕಂಟಕ ಎದುರಾಗಿದೆ. ಹಾಗಾಗಿ ಮುಂದಿನ ಹೆಜ್ಜೆ ಇಡೋವಾಗ ಎಚ್ವರಿಕೆಯಿಂದ ಇಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಲಾಗುತ್ತದೆ. ಜೊತೆಗೆ ಬೆಂಗಳೂರಿನಿಂದ ನಿರ್ಗಮನ/ ಆಗಮನದ ಬಗ್ಗೆ ನಿಗಾ ವಹಿಸಲು ಸೂಚನೆ ನೀಡುವ ಸಾಧ್ಯತೆ ಇದೆ.

  • ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

    ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

    ಚಿಕ್ಕಮಗಳೂರು: ನಗರದ ಎಸ್‍ಟಿಜೆ ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಸೋಮವಾರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕೃಷ್ಣ ಜನ್ಮಾಷ್ಟಮಿ, ಹುತ್ತರಿ ಹಬ್ಬಗಳ ಸಂಭ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

    ವೀರಗಾಸೆ, ಜನಪದ ಕಲಾ ತಂಡಗಳ ನೇತೃತ್ವದಲ್ಲಿ ನವದುರ್ಗಿಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಚೂಢ, ಕುಷ್ಮಾಂದ, ಸ್ಕಂದಮಾತ, ಕಾತ್ಯಾಯಿನಿ, ಸರಸ್ವತಿ, ದುರ್ಗಾಮಾತೆ, ಸಿದ್ಧಿಧತ್ರಿ ದೇವಿಗಳ ಮೆರವಣಿಗೆ ಮಾಡಿದ ವಿದ್ಯಾರ್ಥಿನಿಯರು ಖುಷಿಯ ಅಲೆಯಲ್ಲಿ ತೇಲಿದರು. ನಂತರ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ದಸರಾ ಹಬ್ಬಕ್ಕೆ ಮುನ್ನುಡಿ ಬರೆದ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಿ ಗಮನ ಸೆಳೆದರು. ಆವರಣದಲ್ಲಿ ವಿಶೇಷವಾಗಿ ರಚಿಸಿದ್ದ ಹೂವಿನ ಅಲಂಕಾರವುಳ್ಳ ರಂಗೋಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

    ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ಶ್ರೀಕೃಷ್ಣನ ಹತ್ತು ಅವತಾರ ಬಿಂಬಿಸುವ ವೇಷದೊಂದಿಗೆ ನರ್ತಿಸಿ ಕೃಷ್ಣಾಷ್ಟಮಿ ನೆನಪಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರು ಕೊಡಗಿನ ಹುತ್ತರಿ ಹಬ್ಬ, ಕಾವೇರಮ್ಮ ಮತ್ತು ಈಶ್ವರನ ಪೂಜೆ, ಭತ್ತದ ಗದ್ದೆಯಲ್ಲಿ ಸುಗ್ಗಿಯೊಂದಿಗೆ ಕೊಡವರ ಸಾಂಪ್ರದಾಯಿಕ ಕುಣಿತವನ್ನ ಪ್ರದರ್ಶಿಸಿದ್ರು. ಅಂತಿಮ ಬಿ.ಕಾಂ ತಂಡ ಕುಡ್ಲದ ಪರ್ಬಕೋಲ ಪೂಜೆಯೊಂದಿಗೆ ಕೋಲ ಕಟ್ಟಿ ಕುಣಿದರು.

    ಗಾಯಕಿ ರೇಖಾ ಪ್ರೇಮ್‍ಕುಮಾರ್ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯೆ ಪ್ರೊ.ಜೆ.ಕೆ.ಭಾರತಿ, ಕಾಲೇಜು ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಶೇಖರ್, ವಿದ್ಯಾರ್ಥಿನಿ ಪ್ರತಿನಿಧಿಗಳಾದ ಗೀತಾ, ಸುಷ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.