Tag: ಹಫ್ತಾ

  • ಹಫ್ತಾ ವಸೂಲಿ ಮಾಡಿ ಸಿಕ್ಕಿಬಿದ್ದ ಪತ್ರಿಕೆ ಸಂಪಾದಕ!

    ಹಫ್ತಾ ವಸೂಲಿ ಮಾಡಿ ಸಿಕ್ಕಿಬಿದ್ದ ಪತ್ರಿಕೆ ಸಂಪಾದಕ!

    ಶಿವಮೊಗ್ಗ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒಡೆತನದ ಪತ್ರಿಕೆಯೊಂದರ ಸಂಪಾದಕ ಡಿ.ಸೋಮಸುಂದರಂ ಪೊಲೀಸ್ ಇಲಾಖೆ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡಿ ಸಿಕ್ಕಿಬಿದ್ದಿದ್ದಾರೆ.

    ಶಿವಮೊಗ್ಗ ಜಿಲ್ಲಾ ಕ್ವಾರಿ ಹಾಗೂ ಕ್ರಷರ್ ಮಾಲೀಕರ ಸಂಘದ ಖಚಾಂಜಿಯೂ ಆಗಿರುವ ಸೋಮ ಸುಂದರಂ ಮತ್ತು ಸಂಘದ ಕಾರ್ಯದರ್ಶಿ ಮಂಜುನಾಥ್ ಈ ಬಗ್ಗೆ ವಿನೋಬಾ ನಗರ ಠಾಣೆಯಲ್ಲಿ ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾರೆ.

    ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆಯಲ್ಲಿ ನಗರದಾದ್ಯಂತ ಸಿಸಿ ಕ್ಯಾಮರಾ ಅಳವಡಿಸಲು ಖಾಸಗಿ ಸಂಸ್ಥೆಗೆ ಕ್ವಾರಿ ಹಾಗೂ ಕ್ರಷರ್ ಮಾಲೀಕರ ಸಂಘ ವಂತಿಗೆ ನೀಡಿತ್ತು. ಇದಕ್ಕಾಗಿ ಮೂರು ಲಕ್ಷ ರೂ. ನೀಡಿತ್ತು. ಆದರೆ, ಸೋಮಸುಂದರಂ ಹಾಗೂ ಮಂಜುನಾಥ್ ಪೊಲೀಸ್ ಇಲಾಖೆಗೆ ನೀಡಬೇಕು ಎಂದು ಸಂಘದಿಂದ ಹೆಚ್ಚುವರಿಯಾಗಿ ಇನ್ನೂ ಐದೂವರೆ ಲಕ್ಷ ರೂಪಾಯಿ ವಸೂಲಿ ಮಾಡಿದ್ದರು.

    ಇತ್ತೀಚೆಗೆ ಸ್ವತಃ ಎಸ್ಪಿ ಅಭಿನವ್ ಖರೆ ಅವರ ಮಾರ್ಗದರ್ಶನದಲ್ಲೇ ಅಕ್ರಮ ಕ್ವಾರಿ, ಕ್ರಷರ್, ಮರಳು ದಂಧೆ ವಿರುದ್ಧ ವ್ಯಾಪಕ ರೈಡ್‍ಗಳು ನಡೆದಿದ್ದವು. ಈ ಸಂದರ್ಭದಲ್ಲಿ ಕೆಲ ಕ್ರಷರ್ ಮಾಲೀಕರು ಇಲಾಖೆಗೆ ಹಣ ನೀಡಿದ ಮೇಲೂ ರೈಡ್ ಏಕೆ ಎಂದು ಪ್ರಶ್ನಿಸಿದಾಗ ಸೋಮಸುಂದರಂ ಹಾಗೂ ಮಂಜುನಾಥ್ ಅವರ ಕೃತ್ಯ ಬಯಲಿಗೆ ಬಂದಿದೆ. ಪ್ರಭಾವಿಯಾಗಿರುವ ಕಾರಣ ಇವರ ವಿರುದ್ಧ ದೂರು ನೀಡಲು ಕ್ರಷರ್ ಮಾಲೀಕರು ಹಿಂದೇಟು ಹಾಕಿದ್ದರು ಎಂಬುದಾಗಿ ತಿಳಿದುಬಂದಿದೆ.

  • ಮಂಗ್ಳೂರಲ್ಲಿ ನಗರ ಪಂಚಾಯತ್ ಗುತ್ತಿಗೆದಾರನ ಮನೆಗೆ ಗುಂಡಿನ ದಾಳಿ!

    ಮಂಗ್ಳೂರಲ್ಲಿ ನಗರ ಪಂಚಾಯತ್ ಗುತ್ತಿಗೆದಾರನ ಮನೆಗೆ ಗುಂಡಿನ ದಾಳಿ!

    ಮಂಗಳೂರು: ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಮಂಗಳೂರಿನ ಮುಲ್ಕಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

    ಮುಲ್ಕಿಯ ಪಡು ಪಣಂಬೂರಿನಲ್ಲಿ ಘಟನೆ ನಡೆದಿದ್ದು, ಮುಲ್ಕಿ ನಗರ ಪಂಚಾಯತ್ ಗುತ್ತಿಗೆದಾರ ನಾಗರಾಜ್ ಎಂಬವರ ಮನೆಗೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ಮೂರು ಸುತ್ತು ಗುಂಡು ಹಾರಿಸಿದ್ದಾರೆ.

    ಮನೆ ಬಾಗಿಲು ಮತ್ತು ಕಾರಿಗೆ ಗುಂಡೇಟು ಬಿದ್ದಿದ್ದು ಯಾವುದೇ ಗಾಯಗಳಾಗಿಲ್ಲ. ಹಫ್ತಾಕ್ಕಾಗಿ ಭೂಗತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಬೆದರಿಸುವ ತಂತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಮುಲ್ಕಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಡಿ.8ರಂದು ರಾತ್ರಿ ಮಂಗಳೂರು ನಗರದ ರಥಬೀದಿಯ ಸಂಜೀವ ಶೆಟ್ಟಿ ಬಟ್ಟೆ ಮಳಿಗೆಗೆ ಗುಂಡಿನ ದಾಳಿ ನಡೆದಿತ್ತು. ಇದೀಗ ಅದೇ ಮಾದರಿಯಲ್ಲಿ ಗುತ್ತಿಗೆದಾರನೊಬ್ಬನ ಮನೆಗೆ ದಾಳಿ ನಡೆದಿದ್ದು ಪೊಲೀಸರ ಭಯ ಇಲ್ಲದಂತಾಗಿದೆ.