Tag: ಹಫೀಜ್ ಸಯೀದ್

  • ಉಗ್ರ ಹಫೀಜ್‌ ಸಯೀದ್‌ ಜೊತೆ ಸಭೆ ನಡೆಸಿದ್ದಕ್ಕೆ ಸಿಂಗ್‌ ನನಗೆ ಥ್ಯಾಂಕ್ಸ್‌ ಹೇಳಿದ್ದರು: ಭಯೋತ್ಪಾದಕ ಯಾಸಿನ್ ಮಲಿಕ್

    ಉಗ್ರ ಹಫೀಜ್‌ ಸಯೀದ್‌ ಜೊತೆ ಸಭೆ ನಡೆಸಿದ್ದಕ್ಕೆ ಸಿಂಗ್‌ ನನಗೆ ಥ್ಯಾಂಕ್ಸ್‌ ಹೇಳಿದ್ದರು: ಭಯೋತ್ಪಾದಕ ಯಾಸಿನ್ ಮಲಿಕ್

    – ಭಾರತದ ಸರ್ಕಾರದ ಕೋರಿಕೆ ಮೇಲೆ ಪಾಕ್‌ನಲ್ಲಿ ಉಗ್ರರ ಜೊತೆ ಸಭೆ
    – ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಲಿಕ್‌ ಉಲ್ಲೇಖ

    ನವದೆಹಲಿ: ಲಷ್ಕರ್-ಎ-ತೈಬಾ ((LeT) ಸಂಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು (Hafiz Saeed) ಭೇಟಿಯಾದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ವೈಯಕ್ತಿಕವಾಗಿ ತನಗೆ ಧನ್ಯವಾದ ಹೇಳಿದ್ದರು ಎಂದು ಭಯೋತ್ಪಾದಕ ಯಾಸಿನ್ ಮಲಿಕ್ (Yasin Malik) ಹೇಳಿದ್ದು ಈಗ ದೇಶದಲ್ಲಿ ಬಿರುಗಾಳಿ ಎಬ್ಬಿಸಿದೆ.

    ಹೌದು. ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸದ್ಯ ತಿಹಾರ್‌ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (JKLF) ಭಯೋತ್ಪಾದಕ ಯಾಸಿನ್ ಮಲಿಕ್ 2006 ರಲ್ಲಿ ಪಾಕಿಸ್ತಾನದಲ್ಲಿ ಹಫೀಜ್ ಸಯೀದ್‌ನನ್ನು ಭೇಟಿಯಾಗಿದ್ದ.

    ಹಫೀಜ್ ಸಯೀದ್‌ ಭೇಟಿಯ ಬಳಿಕ ಮನಮೋಹನ್‌ ಸಿಂಗ್‌ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಹೇಳಿದ್ದರು ಎಂದು ಯಾಸಿನ್ ಮಲಿಕ್ ಆಗಸ್ಟ್ 25 ರಂದು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಈ ಭೇಟಿಯನ್ನು ನಾನು ನಿಗದಿ ಮಾಡಿರಲಿಲ್ಲ. ಬದಲಾಗಿ ಹಿರಿಯ ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ಉಗ್ರರ ಜೊತೆ ಸಭೆ ಮಾಡಿದ್ದೆ ಎಂದು ತಿಳಿಸಿದ್ದಾನೆ.

    ಉಗ್ರ ಯಾಸಿನ್‌ ಮಲಿಕ್‌ ಕೈ ಕುಲುಕುತ್ತಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌
    ಉಗ್ರ ಯಾಸಿನ್‌ ಮಲಿಕ್‌ ಕೈ ಕುಲುಕುತ್ತಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌

    ಅಫಿಡವಿಟ್‌ನಲ್ಲಿ ಹೇಳಿದ್ದೇನು?
    2005 ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ. ಈ ಭೇಟಿಗೂ ಮೊದಲು ಆಗಿನ ಗುಪ್ತಚರ ದಳದ (ಐಬಿ) ವಿಶೇಷ ನಿರ್ದೇಶಕ ವಿ.ಕೆ. ಜೋಶಿ ಅವರು ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಿದ್ದರು.

    ಈ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನ ರಾಜಕೀಯ ನಾಯಕರನ್ನು ಮಾತ್ರವಲ್ಲದೇ ಉಗ್ರ ಸಂಘಟನೆಗಳ ಜೊತೆ ಮಾತನಾಡಿ ಶಾಂತಿಗೆ ಸಹಕಾರ ನೀಡುವಂತೆ ಕೇಳಿಕೊಳ್ಳಬೇಕು ಎಂದು ಅವರು ನನ್ನ ಜೊತೆ ವಿನಂತಿ ಮಾಡಿದ್ದರು. ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಶಾಂತಿ ಪ್ರಯತ್ನದ ಭಾಗವಾಗಿ ಈ ಕೆಲಸ ಮಾಡಬೇಕು ಎಂದು ಕೇಳಿಕೊಂಡಿದ್ದರು. ಇದನ್ನೂ ಓದಿ:  ಭಾರತದ ಸಿಂಧೂರ ದಾಳಿಗೆ ಮಸೂದ್ ಕುಟುಂಬ ಕಳೆದುಕೊಂಡ – ಪಾಕ್ ಉಗ್ರ ಇಲ್ಯಾಸ್ ಸಾಕ್ಷ್ಯ

    ಮಾತುಕತೆಯ ವೇಳೆ ಭಯೋತ್ಪಾದಕ ನಾಯಕರ ಜೊತೆ ಮಾತುಕತೆ ನಡೆಸದ ಹೊರತು ಶಾಂತಿ ಮಾತುಕತೆ ಪೂರ್ಣವಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ಸರ್ಕಾರದ ವಿನಂತಿಯ ಮೇರೆಗೆ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯೀದ್ ಮತ್ತು ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಇತರ ನಾಯಕರನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದೆ.

    ಉಗ್ರರ ಜೊತೆ ಸಭೆ ನಡೆಸಿ ನಾನು ಫೆಬ್ರವರಿ, 2006 ರಲ್ಲಿ ಭಾರತಕ್ಕೆ ಮರಳಿದೆ. ಮರಳಿದ ಬಳಿಕ ಐಬಿ ವಿಶೇಷ ನಿರ್ದೇಶಕ ವಿ ಕೆ ಜೋಶಿ ಅವರು ಮಾತುಕತೆಯ ಭಾಗವಾಗಿ ಹೋಟೆಲ್‌ನಲ್ಲಿ ನನ್ನನ್ನು ಭೇಟಿಯಾಗಿ ಪ್ರಧಾನಿಗೆ ತಕ್ಷಣ ವಿವರಿಸುವಂತೆ ವಿನಂತಿಸಿದರು. ಅಂದು ಸಂಜೆ ನಾನು ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರ ಸಮ್ಮುಖದಲ್ಲಿ ಮನಮೋಹನ್‌ ಸಿಂಗ್‌ ಅವರನ್ನು ಭೇಟಿಯಾದೆ.

    ಈ ಸಭೆಯಲ್ಲಿ ಪಾಕಿಸ್ತಾನದ ಉಗ್ರರ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ನಾನು ತೋರಿಸಿದ ಪ್ರಯತ್ನ, ತಾಳ್ಮೆ ಮತ್ತು ಸಮರ್ಪಣೆಗೆ ಸಿಂಗ್ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸಿದರು. ಮನಮೋಹನ್‌ ಸಿಂಗ್ ನನ್ನ ಕೈ ಕುಲುಕಿ “ಕಾಶ್ಮೀರದಲ್ಲಿ ಅಹಿಂಸಾತ್ಮಕ ಚಳವಳಿಯ ಪಿತಾಮಹ” ಎಂದು ನನ್ನನ್ನು ಕರೆದರು.

    ಮನ ಮೋಹನ್‌ ಸಿಂಗ್‌ ಮಾತ್ರವಲ್ಲ ಮಲಿಕ್ ತನ್ನ ಅಫಿಡವಿಟ್‌ನಲ್ಲಿ, ಅಟಲ್ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿ, ಪಿ ಚಿದಂಬರಂ, ಐಕೆ ಗುಜ್ರಾಲ್ ಮತ್ತು ರಾಜೇಶ್ ಪೈಲಟ್ ಸೇರಿದಂತೆ ಹಲವಾರು ಉನ್ನತ ರಾಜಕೀಯ ನಾಯಕರೊಂದಿಗಿನ ಮಾತುಕತೆಯ ಬಗ್ಗೆ ಉಲ್ಲೇಖಿಸಿದ್ದಾನೆ.

    1990 ರಲ್ಲಿ ನನ್ನ ಬಂಧನದ ನಂತರ, ವಿಪಿ ಸಿಂಗ್, ಚಂದ್ರಶೇಖರ್, ಪಿವಿ ನರಸಿಂಹ ರಾವ್, ಎಚ್‌ಡಿ ದೇವಗೌಡ, ಇಂದರ್ ಕುಮಾರ್ ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗಲೂ ನಾನು ಸರ್ಕಾರದ ಜೊತೆ ಮಾತನಾಡುತ್ತಿದ್ದೆ. ಅಧಿಕಾರದಲ್ಲಿರುವ ಸರ್ಕಾರಗಳಿಂದ ನಾನು ಸಹಾಯ ಪಡೆದುಕೊಂಡಿದ್ದೆ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುತ್ತಿದ್ದೆ ಎಂದಿದ್ದಾನೆ.

    1990 ರ ಜನವರಿಯಲ್ಲಿ ಶ್ರೀನಗರದಲ್ಲಿ ನಾಲ್ವರು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಕೊಂದ ಆರೋಪ ಮಲಿಕ್ ಮೇಲಿದೆ. ಮಾಜಿ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರ ಅಪಹರಣ, 1990 ರಲ್ಲಿ ಕಾಶ್ಮೀರದಲ್ಲಿ ಪಂಡಿತರ ನರಮೇಧ ಮಾಡಿರುವ ಆರೋಪವೂ ಈತನ ಮೇಲಿದೆ.

    ಆಗಸ್ಟ್ 11 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೇಳಿದೆ. ನ್ಯಾಯಾಲಯವು ಯಾಸಿನ್ ಮಲಿಕ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿ ಪ್ರಕರಣವನ್ನು ನವೆಂಬರ್ 10ಕ್ಕೆ ಮುಂದೂಡಿದೆ.

    2022 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಯಾಸಿನ್ ಮಲಿಕ್, ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವಕ್ಕೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  • ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

    ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

    ಇಸ್ಲಾಮಾಬಾದ್‌: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಸಹ-ಸಂಸ್ಥಾಪಕ, ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್ ಆಪ್ತ ಅಮೀರ್ ಹಮ್ಜಾ (Amir Hamza) ಲಾಹೋರ್‌ನಲ್ಲಿರುವ ನಿವಾಸದಲ್ಲೇ ಗಂಭೀರ ಗಾಯಗೊಂಡಿದ್ದಾನೆ.

    ಎಲ್‌ಇಟಿಯ 17 ಸ್ಥಾಪಕ ಸದಸ್ಯರಲ್ಲಿ ಒಬ್ಬನಾದ 66 ವರ್ಷದ ಹಮ್ಜಾಗೆ ಮನೆಯಲ್ಲಿ ಇರುವಾಗಲೇ ಗಾಯವಾಗಿದ್ದು, ಈಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಭದ್ರತೆಯಲ್ಲಿ  ಲಾಹೋರ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಾಕ್ ಮತ್ತೆ ಸವಾಲು ಹಾಕಿದ್ರೆ, ನಾವು ಮಾತಿನಿಂದಲ್ಲ.. ಬೆಂಕಿ, ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ಪ್ರತಿಕ್ರಿಯಿಸ್ತೇವೆ – ಮುದಿತ್ ಮಹಾಜನ್

    ಗಂಭೀರವಾಗಿ ಗಾಯಗೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಮನೆ ಒಳಗಡೆ ಅಪರಿಚಿತ ವ್ಯಕ್ತಿ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

    ಆಸ್ಪತ್ರೆಗೆ ದಾಖಲಾದ ನಂತರ ಹಮ್ಜಾಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಬಿಳಿ ಉಡುಪಿನ ಮೇಲೆ ರಕ್ತದ ಕಲೆಗಳು ಇರುವುದನ್ನು ಗಮನಿಸಬಹುದು. ಇದನ್ನೂ ಓದಿ: ಕೇಂದ್ರ ಗುಪ್ತಚರ ಇಲಾಖೆ ಮುಖ್ಯಸ್ಥರ ಅವಧಿ 1 ವರ್ಷ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

    ಪ್ರಚೋದನಕಾರಿ ಭಾಷಣಕ್ಕೆ ಹೆಸರುವಾಸಿಯಾಗಿರುವ ಅಮೀರ್ ಹಮ್ಜಾ ಎಲ್‌ಇಟಿ ಮುಖವಾಣಿಯ ಸಂಪಾದಕನಾಗಿಯೂ ಕೆಲಸ ಮಾಡಿದ್ದ. ಈತ ಎಲ್‌ಇಟಿಯ ಕೇಂದ್ರ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದ. ಬಂಧಿತ ಉಗ್ರರ ಬಿಡುಗಡೆಗಾಗಿ ನಿಧಿಸಂಗ್ರಹಣೆ, ನೇಮಕಾತಿ ಮತ್ತು ಮಾತುಕತೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾ ಮೂಲದ ಹಮ್ಜಾನನ್ನು ಆಗಸ್ಟ್ 2012 ರಲ್ಲಿ ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ.

    2005ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಲಷ್ಕರ್-ಎ-ತೊಯ್ದಾ ಭಯೋತ್ಪಾದಕ ರಜವುಲ್ಲಾ ನಿಜಾಮಿ ಅಲಿಯಾಸ್ ಅಬು ಸೈಯುಲ್ಲಾನನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಭಾನುವಾರ ಹತ್ಯೆ ಮಾಡಿದ್ದರು.

  • ಪಾಕ್‌ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ ಐಷಾರಾಮಿ ಜೀವನ

    ಪಾಕ್‌ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ ಐಷಾರಾಮಿ ಜೀವನ

    ನವದೆಹಲಿ: ಪಾಕಿಸ್ತಾನದ (Pakistan) ಬಣ್ಣ ಮತ್ತೊಮ್ಮೆ ಬಟಾಬಯಲಾಗಿದೆ. ಭಾರತದ ಮೋಸ್ಟ್ ವಾಟೆಂಡ್ ಉಗ್ರ ಹಫೀಜ್ ಸಯೀದ್ (Hafiz Saeed) ಪಾಕಿಸ್ತಾನದ ಭದ್ರತೆಯಲ್ಲಿರೋದು ಬಯಲಾಗಿದೆ.

    ಪಹಲ್ಗಾಮ್ ಹತ್ಯಾಕಾಂಡದ (Pahalgam Terror Attack) ಕಿಂಗ್ ಪಿನ್ ಮಾಸ್ಟರ್ ಮೈಂಡ್ ರಕ್ಕಸ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಸೇಫ್‌ ಆಗಿದ್ದಾನೆ ಅನ್ನೋದು ವಿಡಿಯೋ ಸಮೇತ ಬಹಿರಂಗವಾಗಿದೆ.

    ಪಾಕಿಸ್ತಾನದ ಲಾಹೋರ್‌ ನಗರದಲ್ಲಿ 24*7 ಟೈಟ್ ಸೆಕ್ಯೂರಿಟಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ. ಜನರ ಮಧ್ಯೆ ಖಾಸಗಿ ಪಾರ್ಕ್, ಮದರಸ ಹೊಂದಿರುವ ದೊಡ್ಡ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದಾನೆ. ಈತ ವಾಸಿಸುತ್ತಿರುವ ಜಾಗದ ಉಪಗ್ರಹ ಇಮೇಜ್‌, ವಿಡಿಯೋ ಈಗ ಲಭ್ಯ ವಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಹೊಸ ಬಾಬ್ರಿ ಮಸೀದಿಗೆ ಪಾಕ್‌ ಸೈನಿಕರು ಮೊದಲ ಇಟ್ಟಿಗೆ ಇಡುವ ಕಾಲ ದೂರವಿಲ್ಲ: ನಾಲಿಗೆ ಹರಿಬಿಟ್ಟ ಪಾಕ್‌ ಸಂಸದೆ

    ಪಾಕಿಸ್ತಾನದ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಪಹಲ್ಗಾಮ್ ದಾಳಿಯ ಕಿಂಗ್ ಪಿನ್ ಆಗಿದ್ದಾನೆ. ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಆಗಿರುವ ಈತನನ್ನು ಹಸ್ತಾಂತರ ಮಾಡುವಂತೆ ಭಾರತ ಸಾಕಷ್ಟು ಬಾರಿ ಬೇಡಿಕೆ ವ್ಯಕ್ತಪಡಿಸಿದರೂ ಪಾಕ್‌ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

  • ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌, ಉಗ್ರ ನಾಯಕ ಹಫೀಜ್‌ನನ್ನ ಭಾರತಕ್ಕೆ ಹಸ್ತಾಂತರಿಸಲ್ಲ: ಪಾಕ್‌ ಪ್ರತಿಕ್ರಿಯೆ

    ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌, ಉಗ್ರ ನಾಯಕ ಹಫೀಜ್‌ನನ್ನ ಭಾರತಕ್ಕೆ ಹಸ್ತಾಂತರಿಸಲ್ಲ: ಪಾಕ್‌ ಪ್ರತಿಕ್ರಿಯೆ

    ಇಸ್ಲಾಮಾಬಾದ್: 2008ರ ನವೆಂಬರ್‌ 26ರಂದು ನಡೆದ ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್‌ ಮೈಂಡ್‌, ಲಷ್ಕರ್-ಎ-ತೈಬಾ ಉಗ್ರ ಸಂಘಟನೆ (Lashkar-e-Taiba) ಸಂಸ್ಥಾಪಕ ಹಫೀಜ್‌ ಸಯೀದ್‌ನನ್ನ (Hafiz Saeed) ಹಸ್ತಾಂತರಿಸಬೇಕು ಎಂದು ಭಾರತ ಕೇಳಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.

    ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರೆ (Foreign Affairs spokesperson) ಮುಮ್ತಾಜ್ ಝಹ್ರಾ ಬಲೂಚ್ (Mumtaz Zahra Baloch) ಅವರು, ಹಫೀಜ್ ಸಯೀದ್ ಹಸ್ತಾಂತರಕ್ಕೆ ಭಾರತದ ಮನವಿ ಬಂದಿದೆ. ಆದರೆ, ಹಸ್ತಾಂತರಿಸಲು ಸಾಧ್ಯವಿಲ್ಲ, ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ ಚುನಾವಣೆ; ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಹಫೀಜ್‌ ಬೆಂಬಲಿತ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಿಂದ ಕಣಕ್ಕೆ

    ಮುಮ್ತಾಜ್ ಝಹ್ರಾ ಬಲೂಚ್ ಅವರು ತಮ್ಮ ಹೇಳಿಕೆಯಲ್ಲಿ, ಹಫೀಜ್ ಸಯೀದ್‌ನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಸ್ತಾಂತರಿಸುವಂತೆ ಪಾಕಿಸ್ತಾನವು ಭಾರತೀಯ ಅಧಿಕಾರಿಗಳಿಂದ ಮನವಿ ಸ್ವೀಕರಿಸಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಯುದ್ಧಪೀಡಿತ ಗಾಜಾದಲ್ಲಿ 5 ಕಿಮೀ ನಡೆದು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಹಫೀಜ್‌ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಮೊದಲಿನಿಂದಲೂ ಕೇಂದ್ರ ಸರ್ಕಾರ ಆಗ್ರಹಿಸುತ್ತಿದೆ. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ 2019ರಲ್ಲಿ ಪಾಕಿಸ್ತಾನದಲ್ಲಿ ಹಫೀಜ್‌ ಸಯೀದ್‌ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ ಇದುವರೆಗೆ ಹಫೀಜ್‌ ಸಯೀದ್‌ಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ಯಾವುದು? ವಿಚಾರಣೆ ಯಾವ ಹಂತಕ್ಕೆ ಬಂದಿದೆ? ಆತ ಎಲ್ಲಿದ್ದಾನೆ ಎಂಬುದರ ಕುರಿತು ಪಾಕಿಸ್ತಾನ ಮಾಹಿತಿ ನೀಡಿಲ್ಲ ಎನ್ನಲಾಗುತ್ತದೆ. ಆದ್ರೆ ಕೆಲ ಮೂಲಗಳ ಪ್ರಕಾರ, ಹಫೀಜ್‌ ಸಯೀದ್‌ ಪಾಕಿಸ್ತಾನದ ಜೈಲಿನಲ್ಲಿಲ್ಲ. ಆತ ಅಡಗುತಾಣದಲ್ಲಿ ಸುರಕ್ಷಿತವಾಗಿದ್ದಾನೆ ಹಾಗೂ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಎನ್ನಲಾಗಿದೆ. 2020ರ ಬಳಿಕ ಉಗ್ರರಿಗೆ ಹಣಕಾಸು ನೆರವು ಸೇರಿ ಐದು ಕೃತ್ಯಗಳಲ್ಲಿ ಅಪರಾಧಿ ಎಂದು ಸಾಬೀತಾದರೂ ಆತನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈಗ ಭಾರತವು ಆತನನ್ನು ಹಸ್ತಾಂತರಿಸಬೇಕು ಎಂದು ಆಗ್ರಹಿಸಿದೆ.

    ಇತ್ತೀಚಿನ ಬೆಳವಣಿಗೆಯಲ್ಲಿ ಹಫೀಜ್ ಸಯೀದ್ ಬೆಂಬಲಿತ ಪಕ್ಷ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಾಗಿ ತಿಳಿದುಬಂದಿದೆ.

  • ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪುತ್ರ ಭಯೋತ್ಪಾದಕ – ಸರ್ಕಾರ ಘೋಷಣೆ

    ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪುತ್ರ ಭಯೋತ್ಪಾದಕ – ಸರ್ಕಾರ ಘೋಷಣೆ

    ನವದೆಹಲಿ: 2008ರಲ್ಲಿ ನಡೆದ ಮುಂಬೈ ಭಯೋತ್ಪಾಧಕರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಎ-ತೈಬಾ(ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಪುತ್ರ ಹಫೀಜ್ ತಲ್ಹಾ ಸಯೀದ್‌ನನ್ನು ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ.

    ಹಫೀಸ್ ತಲ್ಹಾ ಸಯೀದ್ ಭಾರತದಲ್ಲಿ ಲಷ್ಕರ್-ಎ-ತೈಬಾ ಹಾಗೂ ಭಯೋತ್ಪಾದನೆಗೆ ನೇಮಕಾತಿ, ನಿಧಿ ಸಂಗ್ರಹ ಹಾಗೂ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.

    ತಲ್ಹಾ ಸಯೀದ್ ಪಾಕಿಸ್ತಾನದಾದ್ಯಂತ ವಿವಿಧ ಎಲ್‌ಇಟಿ ಕೇಂದ್ರಗಳಿಗೆ ಆಗಾಗ ಭೇಟಿ ನೀಡುತ್ತಿದ್ದು, ಭಾರತ, ಇಸ್ರೇಲ್, ಅಮೇರಿಕಾ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಹಿತಾಸಕ್ತಿಗಳ ವಿರುದ್ಧ ಜಿಹಾದ್ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಎಂದು ಹೇಳಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ತವರಿಗೇ ಲಗ್ಗೆಯಿಟ್ಟ XE ಕೊರೊನಾ ರೂಪಾಂತರಿ

    ಹಫೀಜ್ ಸಯೀದ್ ನೇತೃತ್ವದಲ್ಲಿ 2008ರ ನವೆಂಬರ್ 26 ರಂದು ನಡೆದ ಮುಂಬೈನ ಭೀಕರ ಭಯೋತ್ಪಾದನಾ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ಕೆಲವು ವರ್ಷಗಳ ಹಿಂದೆಯೇ ಆತನನ್ನು ಭಯೋತ್ಪಾದಕ ಎಂದು ಸರ್ಕಾರ ಘೋಷಿಸಿದ್ದು, ಈ ಆರೋಪದ ಮೇಲೆ ಆತ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಇದನ್ನೂ ಓದಿ: ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ

    ಭಾರತ ಸತತವಾಗಿ ಹಫೀಜ್ ಸಯೀದ್‌ನನ್ನು ಕಸ್ಟಡಿಗೆ ಕೋರುತ್ತಿದೆ. ಆದರೆ ಪಾಕಿಸ್ತಾನ ಅದನ್ನು ನಿರಾಕರಿಸಿದೆ.

  • ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

    ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

    ಲಕ್ನೋ: ಮುಂಬೈ ಸ್ಫೋಟದ ರೂವಾರಿ ಹಾಗೂ ಲಷ್ಕರ್ ಎ ತೊಯಿಬಾ ಸಂಘಟನೆಯ ಸಂಸ್ಥಾಪಕ ಮುಖಂಡನಾದ ಹಫೀಜ್ ಸಯೀದ್ ಬಿಡುಗಡೆ ಭಾಗ್ಯ ಸಿಕ್ಕಿದ ಬೆನ್ನಲ್ಲೇ ಉತ್ತರ ಪ್ರದೇಶದ ಯುವಕರ ಗುಂಪೊಂದು ಸಯೀದ್ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಾಚರಣೆ ನಡೆಸಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

    ಉತ್ತರ ಪ್ರದೇಶದ ಲಖೀಂಪುರ್ ಬೇಗಂ ಬಗ್ ಕಾಲೋನಿ ಪ್ರದೇಶದಲ್ಲಿ ನೆಲೆಸಿರುವ ಸಮುದಾಯವೊಂದರ ಯುವಕರ ಗುಂಪು ಸಂಭ್ರಮಾಚರಣೆ ಮಾಡಿದೆ. ಈಗಾಗಲೇ ಈ ಸಮುದಾಯದ ಯುವಕರು ತಮ್ಮ ಮನೆಯನ್ನು ಹಸಿರು ಧ್ವಜಗಳ ಮೂಲಕ ಅಲಂಕಾರ ಮಾಡಿದ್ದು, ಸಂಭ್ರಮಾಚರಣೆ ವೇಳೆ “ಪಾಕಿಸ್ತಾನ್ ಜಿಂದಾಬಾದ್, ಹಫೀಜ್ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಘಟನಾ ಪ್ರದೇಶ ದೌಡಾಯಿಸಿದ್ದಾರೆ.

    ಹಫೀಜ್ ಬಿಡುಗಡೆಯ ಸಂಭ್ರಮಾಚರಣೆ ಸುದ್ದಿ ತಿಳಿದ ನಂತರ ಮತ್ತೊಂದು ಸಮುದಾಯದ ಜನ ಸ್ಥಳದಲ್ಲಿ ಜಮಾವಣೆಯಾಗಲು ಪ್ರಾರಂಭಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಶಾಂತಿ ಕಾಯ್ದಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಆಕಾಶ್ ದೀಪ್ ಪೊಲೀಸರಿಗೆ ಘಟನೆ ಕುರಿತು ತನಿಖೆ ನಡೆಸಲು ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ 20 ರಿಂದ 25 ಜನರ ಯುವರ ಗುಂಪು ಹಫೀಜ್ ಬಿಡುಗಡೆಯ ಕುರಿತು ಸಂಭ್ರಮಾಚರಣೆ ಮಾಡುತ್ತಿರುವ ಕುರಿತು ಕೋಟ್ವಾಲಿ ಪ್ರದೇಶದ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆದರೆ ಪೊಲೀಸರು ಈ ಕುರಿತು ನಿರ್ಲಕ್ಷ್ಯ ವಹಿಸಿದ್ದಾರೆ. ನಂತರ ಘಟನೆ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ತನಿಖೆ ನಡೆಸಲು ಆದೇಶ ನೀಡಿದ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೊತ್ವಾಲಿ ಪೊಲೀಸ್ ಅಧಿಕಾರಿ ಪ್ರದೀಪ್ ಶುಕ್ಲಾ ಘಟನಾ ಸ್ಥಳದಲ್ಲಿನ ಹಸಿರು ಬಣ್ಣದ ಧ್ವಜಗಳನ್ನು ತೆರವುಗೊಳಿಸಿರುದಾಗಿ ಹಾಗೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    ಸಂಭ್ರಮಾಚರಣೆ ನಡೆಸಿರುವ ಕುರಿತು ವಿಡಿಯೋ ದಲ್ಲಿ ಹಸಿರು ಧ್ವಜ ಹಾರಾಟ ನಡೆಸಿ, ಪಾಕ್ ಹಾಗೂ ಉಗ್ರ ಹಫೀಜ್ ಪರ ಘೋಷಣೆ ಮಾಡಿರುವ ದೃಶ್ಯಗಳು ಲಭಿಸಿದೆ ಎಂದು ಲಖೀಂಪುರ್ ಪ್ರದೇಶದ ಬಲಪಂಥೀಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

    ಘಟನೆ ಕುರಿತು ಹೇಳಿಕೆ ನೀಡಿರುವ ಲಖೀಂಪುರ್ ನಿವಾಸಿ ಅಶ್ಫಾಕ್ ಖಾದ್ರಿ, ನನಗೆ ದೇಶ ವಿರೋಧಿ ಘೋಷಣೆಗಳು ಕೂಗಿರುವ ಕುರಿತು ಮಾಹಿತಿ ಇಲ್ಲ. ಇಲ್ಲಿ ಡಿಸೆಂಬರ್ 02 ರಂದು ನಡೆಯುವ ಜುಲೋಸ್ ಎ ಮೊಹಮ್ಮದಿ ಮೆರವಣಿಗೆ ಕುರಿತ ಸಂಭ್ರಮಾಚರಣೆ ನಡೆಯುತ್ತಿತ್ತು. ಪಾಕಿಸ್ತಾನ್ ಹಾಗೂ ಹಫೀಜ್ ಸಯೀದ್ ಬಗ್ಗೆ ಇಲ್ಲಿ ಯಾರು ಘೋಷಣೆ ಕೂಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಜನವರಿಯಿಂದ ಗೃಹಬಂಧನದಲ್ಲಿದ್ದ ಸಯೀದ್ ಬಂಧನದ ಅವಧಿಯನ್ನು ಮತ್ತೆ 3 ತಿಂಗಳು ವಿಸ್ತರಿಸುವಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ ಸರ್ಕಾರದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ನ್ಯಾಯಾಧೀಶರುಗಳನ್ನೊಳಗೊಂಡ ನ್ಯಾಯಾಂಗ ವಿಮರ್ಶಾ ಮಂಡಳಿ ಬುಧವಾರ ತಳ್ಳಿಹಾಕಿತ್ತು. ಯಾವುದೇ ಪ್ರಕರಣದಲ್ಲಿ ಸಯೀದ್ ವಿಚಾರಣೆ ಬಾಕಿ ಇಲ್ಲದೇ ಹೋದಲ್ಲಿ ಆತನನ್ನು ಬಿಡುಗಡೆಗೊಳಿಸುವಂತೆ ಸರಕಾರ ಆದೇಶ ನೀಡಿದೆ ಎಂದು ಮಂಡಳಿ ಹೇಳಿತ್ತು.

    2008ರ ನವೆಂಬರ್ 26ರಂದು ದಕ್ಷಿಣ ಮುಂಬೈ 8 ಸ್ಥಳಗಳ ಮೇಲೆ 9 ಮಂದಿ ಉಗ್ರರು ದಾಳಿ ನಡೆಸಿ 166 ಮಂದಿಯನ್ನು ಹತ್ಯೆ ಮಾಡಿದ್ದರು. ಈ ಘಟನೆಗೆ 9 ವರ್ಷ ತುಂಬುತ್ತಿರುವಾಗ ಹಫೀಸ್ ಬಿಡುಗಡೆಯಾಗಿದ್ದಕ್ಕೆ ಹಲವು ಪ್ರಶ್ನೆ ಎದ್ದಿದ್ದು, ಮುಂಬೈ ದಾಳಿಯ ಸಂಭ್ರಮ ಆಚರಿಸಲು ಆತನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.