Tag: ಹನೋನಿ

  • ವಿಯೆಟ್ನಾಂನಲ್ಲಿ 9ನೇ ಶತಮಾನದ ಬೃಹತ್ ಶಿವಲಿಂಗ ಪತ್ತೆ

    ವಿಯೆಟ್ನಾಂನಲ್ಲಿ 9ನೇ ಶತಮಾನದ ಬೃಹತ್ ಶಿವಲಿಂಗ ಪತ್ತೆ

    ಹನೋಯಿ: ಬರೋಬ್ಬರಿ 9ನೇ ಶತಮಾನದ ಶಿವಲಿಂಗವೊಂದು ವಿಯೆಟ್ನಾಂನಲ್ಲಿ ಪತ್ತೆಯಾಗಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ತಿಳಿಸಿದ್ದಾರೆ.

    ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದ ಮೈ ಸನ್‍ನಲ್ಲಿ ಚಾಮ್ ದೇವಾಲಯದಲ್ಲಿ ಪುನರ್ ರಚನೆ ಕಾರ್ಯ ಮಾಡುತ್ತಿದ್ದಾಗ ಭಾರತದ ಪುರಾತತ್ವ ಇಲಾಖೆ (ಎಎಸ್‍ಐ) ಅಧಿಕಾರಿಗಳಿಗೆ ಈ ಶಿವಲಿಂಗ ಸಿಕ್ಕಿದೆ. ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಭಾರತೀಯ ಪುರಾತತ್ವ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    “ವಿಯೆಟ್ನಾಂನ ಮೈ ಸನ್‍ನಲ್ಲಿ ಚಾಮ್ ದೇವಸ್ಥಾನಗಳ ಪುನರ್ ರಚನೆ ಮಾಡುತ್ತಿದ್ದಾಗ ಭಾರತೀಯ ಪುರಾತತ್ವ ಇಲಾಖೆಯ ತಂಡಕ್ಕೆ ಶಿವಲಿಂಗವೊಂದು ಸಿಕ್ಕಿದೆ. ಇದು ಎರಡೂ ದೇಶಗಳ ನಡುವಿನ ನಾಗರಿಕತೆ ನಂಟನ್ನು ಪುನರುಚ್ಚರಿಸುತ್ತಿದೆ” ಎಂದು ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.

    ಖಮೇರ್ ಸಾಮ್ರಾಜ್ಯದ ಆಡಳಿತಗಾರ ರಾಜ ಇಂದ್ರವರ್ಮನ್ ಆಳ್ವಿಕೆಯಲ್ಲಿ ಈ ಚಾಮ್ ದೇವಾಲಯದ ನಿರ್ಮಿಸಲಾಗಿದೆ ಎನ್ನಲಾಗಿದೆ. ಅಲ್ಲದೇ ಈ ದೇವಾಲಯ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ.  ಈ ಭಾಗದಲ್ಲಿ ಅನೇಕ ಶಿವಲಿಂಗಗಳಿದ್ದು, ಇಲ್ಲಿ ಶಿವನನ್ನು ಭದ್ರೇಶ್ವರ ಎಂಬ ಹೆಸರಿನಲ್ಲಿ ಜನರು ಪೂಜೆ ಮಾಡುತ್ತಾರೆ.

    ಭಾರತದ ಪುರಾತತ್ವ ಇಲಾಖೆಯ ತಂಡವು ಪ್ರಸ್ತುತ ಮೈ ಸನ್‍ನಲ್ಲಿ ದೇವಾಲಯ ಪುನರ್ ರಚನೆ  ಮತ್ತು ಸಂರಕ್ಷಣಾ ಕಾರ್ಯಗಳನ್ನು ನಡೆಸುತ್ತಿದೆ. ಒಂದು ತಂಡದಲ್ಲಿ ನಾಲ್ವರು ಸದಸ್ಯರಿದ್ದು, ಈಗಾಗಲೇ ಬೃಹತ್ ಶಿವಲಿಂಗದ ಜೊತೆಗೆ ಇತರ ಆರು ಶಿವಲಿಂಗಗಳು ಸಹ ಕಂಡುಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿದೇಶದಲ್ಲಿ ಸಂಸ್ಕೃತಿ ಮತ್ತು ಪರಂಪರೆ ಮೌಲ್ಯಯುಕ್ತ ವಸ್ತುಗಳನ್ನು ಸಂರಕ್ಷಿಸಲು ಮುಂದಾಗಿದ್ದು, ಇದಕ್ಕಾಗಿ ವಿದೇಶಾಂಗ ಸಚಿವಾಲಯವು ‘ಹೊಸ ಅಭಿವೃದ್ಧಿ ಸಹಭಾಗಿತ್ವ ವಿಭಾಗ’ (DPA-IV) ಎಂಬ ವಿಭಾಗವನ್ನು ಸ್ಥಾಪಿಸಿದೆ.