Tag: ಹನುಮ ಜಯಂತಿ

  • ಹನುಮ ಜಯಂತಿಗೆ ಶೂ ಧರಿಸಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ

    ಹನುಮ ಜಯಂತಿಗೆ ಶೂ ಧರಿಸಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ

    ಬಳ್ಳಾರಿ: ಹನುಮ ಜಯಂತಿ ಆಚರಣೆಗೆ ಅವಕಾಶ ನೀಡಲಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ಧ ಸಿಟ್ಟಾಗಿದ್ದರೆ, ಜಿಲ್ಲೆಯ ಮಾಜಿ ಶಾಸಕರೊಬ್ಬರು ಶೂ ಧರಿಸಿ ಹನುಮ ಜಯಂತಿಯ ಪಾದಯಾತ್ರೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

    ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹನುಮ ಜಯಂತಿಯಂದು ಮಾಲೆ ಧರಿಸಿ ಶೂ ಹಾಕಿಕೊಂಡು ಪಾದಯಾತ್ರೆ ಮಾಡಿದ್ದಾರೆ. ಹನುಮಂತನ ಭಕ್ತರಾದ ಮಾಜಿ ಶಾಸಕ ರೆಡ್ಡಿ ಪ್ರತಿ ವರ್ಷ ತಪ್ಪದೇ ಮಾಲೆ ಧರಿಸಿ ಹನುಮ ಜಯಂತಿ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಬಾರಿ ಬಳ್ಳಾರಿಯಿಂದ ಆಂಧ್ರದ ಗಡಿ ಭಾಗದಲ್ಲಿರುವ ಕಸಾಪುರ ಆಂಜನೇಯನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ವೇಳೆ ಶೂ ಧರಿಸಿ ಯಾತ್ರೆ ಆರಂಭಿಸಿದ್ದಾರೆ.

    ಶೂ ಧರಿಸಿ ಪಾದಯಾತ್ರೆ ಮಾಡಿದರೆ ಹನುಮ ಜಯಂತಿಗೆ ಅಗೌರವ ಮಾಡಿದಂತೆ. ಇದರಿಂದ ಪ್ರಯೋಜನ ಏನು ಬಂತು ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ.

    ಈ ಕುರಿತು ರೆಡ್ಡಿ ಆಪ್ತರನ್ನು ಪ್ರಶ್ನೆ ಮಾಡಿದ್ರೆ, ಸಾಹೇಬರು 65 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡಬೇಕಾದ ಹಿನ್ನೆಲೆಯಲ್ಲಿ ನಾವೇ ಒತ್ತಾಯ ಮಾಡಿ ಶೂ ಹಾಕಿಕೊಳ್ಳುವಂತೆ ಸೂಚಿಸಿದೆವು. ಹೀಗಾಗಿ ಶೂ ಹಾಕಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

     

     

  • ನಾನು ಕಾನೂನು ಉಲ್ಲಂಘಿಸಿಲ್ಲ, ಜಿಲ್ಲಾಡಳಿತ, ಪೊಲೀಸರಿಂದಲೇ ತಪ್ಪಾಗಿದೆ: ಪ್ರತಾಪ್ ಸಿಂಹ

    ನಾನು ಕಾನೂನು ಉಲ್ಲಂಘಿಸಿಲ್ಲ, ಜಿಲ್ಲಾಡಳಿತ, ಪೊಲೀಸರಿಂದಲೇ ತಪ್ಪಾಗಿದೆ: ಪ್ರತಾಪ್ ಸಿಂಹ

    ಮೈಸೂರು: ನಾನು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸರು ಆರಂಭದಲ್ಲಿ ಒಪ್ಪಿ ನಂತರ ಮಾತಿಗೆ ತಪ್ಪಿದ್ದರಿಂದ ಈ ಬೆಳವಣಿಗೆಯಾಗಿದೆ ಹೊರತು ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ಹನುಮ ಜಯಂತಿ ಮೆರವಣಿಗೆ ಸಂಬಂಧ ಯಾವೆಲ್ಲ ಪ್ರಯತ್ನ ನಡೆದಿತ್ತು? ಅದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸ್ಪಂದನೆ ಹೇಗಿತ್ತು? ನಾನು ಯಾಕೆ ಬ್ಯಾರಿಕೇಡ್ ಕಿತ್ತು ಹಾಕಿ ಕಾರನ್ನು ಓಡಿಸಿದೆ ಎನ್ನುವುದರ ಬಗ್ಗೆ ಪ್ರತಾಪ್ ಸಿಂಹ ಪಬ್ಲಿಕ್ ಟಿವಿಗೆ ವಿವರವಾಗಿ ವಿವರಿಸಿದ್ದಾರೆ.

    ಕಳೆದ 25 ವರ್ಷದಿಂದ ಹುಣಸೂರಿನಲ್ಲಿ ಹನುಮ ಜಯಂತಿ ನಡೆಯುತ್ತಿದೆ. ಕಳೆದ ವರ್ಷ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಮೆರವಣಿಗೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಎಸ್‍ಪಿ ಹೇಳಿದ್ದರು. ಅವರ ಮಾತಿಗೆ ಒಪ್ಪಿ ನಾವು ಕಳೆದ ವರ್ಷ ಅವರು ಹೇಳಿದಂತೆ ನಡೆದುಕೊಂಡಿದ್ದೆವು. ಈ ಬಾರಿ ನಾವು ಸಂಪ್ರದಾಯದ ಪ್ರಕಾರ ರಂಗನಾಥ ಬಡಾವಣೆಯಿಂದಲೇ ಮೆರವಣಿಗೆ ಮಾಡುತ್ತೇವೆ ಎಂದು ಒಂದು ತಿಂಗಳ ಹಿಂದೆಯೇ ಪ್ರೆಸ್ ಮೀಟ್ ಮಾಡಿ ಹೇಳಿದ್ದೆ. ಆದರೆ ಈ ಮಧ್ಯೆ ನವೆಂಬರ್ 27 ರಂದು ಜಿಎಲ್‍ಬಿ ರಸ್ತೆ, ಕಾರ್ಖಾನೆ ರಸ್ತೆ, ರಂಗನಾಥ ಬಡಾವಣೆಯಲ್ಲಿ ಮೆರವಣಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನವೆಂಬರ್ 5ರಂದೇ ಈ ಆದೇಶ ಪ್ರಕಟವಾಗಿದ್ದರೂ ಯಾರಿಗೂ ಈ ವಿಚಾರ ತಿಳಿಸಲೇ ಇಲ್ಲ. ಅಷ್ಟೇ ಅಲ್ಲದೇ ಯಾವುದಾದರೂ ಮಾಧ್ಯಮಗಳಲ್ಲಿ ನಿರ್ಬಂಧ ವಿಧಿಸಿರುವ ವಿಚಾರವನ್ನು ತಿಳಿಸಿರಲಿಲ್ಲ.

    ಈ ವಿಚಾರ ತಿಳಿದು ನಾನು ಎಸ್‍ಪಿ ಅವರ ಜೊತೆ ಮಾತನಾಡಿ ರಂಗನಾಥ ಸ್ವಾಮಿ ಬಡಾವಣೆಯಿಂದ ನಾವು ಮೆರವಣಿಗೆ ಹೋಗುತ್ತೇವೆ ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದೆ. ಇದಾದ ಬಳಿ ಜಿಲ್ಲಾಡಳಿತ ಪೊಲೀಸರ ಇದಕ್ಕೆ ನಾವು ಪರಿಹಾರ ಹುಡುಕುತ್ತೇವೆ ಎಂದು ಹೇಳಿ ಮನವಿಯನ್ನು ಗೃಹ ಕಾರ್ಯದರ್ಶಿಗೆ ತಿಳಿಸುತ್ತೇವೆ ಎಂದು ಹೇಳಿದರು. ಈ ನಡುವೆ ಗೃಹ ಕಾರ್ಯದರ್ಶಿ ನಾನು ಸೋಮವಾರದವರೆಗೆ ಸಿಗುವುದಿಲ್ಲ ಎಂದು ಹೇಳಿದರು. ನಾವು ಅನುಮತಿ ಸಿಕ್ಕರೆ ಮೆರವಣಿಗೆಯನ್ನು ಮುಂದೂಡುತ್ತೇವೆ ಎಂದು ಹೇಳಿದರು. ಈ ನಡುವೆ ಎಸಿಎಸ್ ಅವರು ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಡಿಸಿ ಹೇಳಿದರು. ಅದಕ್ಕೆ ನಾವು ಮೆರವಣಿಗೆ ಮುಂದೂಡುತ್ತೇವೆ ಎಂದಾಗ ಹನುಮ ಜಯಂತಿ ಮುಕ್ತಾಯವಾಗುವವರೆಗೂ ಈ ನಿರ್ಬಂಧ ಮುಂದುವರಿಯುತ್ತದೆ ಎಂದು ಹೇಳಿದರು. ಒಂದು ವೇಳೆ ನವೆಂಬರ್ 5ರಂದು ನಿರ್ಬಂಧ ವಿಧಿಸಿರುವುದು ಗೊತ್ತಾಗಿದ್ದರೆ ನಾವು ನ್ಯಾಯಾಂಗ ಹೋರಾಟ ಮಾಡುತ್ತಿದ್ದೆವು. ಆ ವಿಚಾರವನ್ನು ಮುಚ್ಚಿಟ್ಟು ನವೆಂಬರ್ 27ಕ್ಕೆ ತಿಳಿಸಿದ್ದು ಯಾಕೆ? ಅಷ್ಟೇ ಅಲ್ಲದೇ ಕಳೆದ ವರ್ಷ ಅನುಮತಿ ನೀಡುತ್ತೇವೆ ಎಂದು ಹೇಳಿ ಈ ವರ್ಷ ಅನುಮತಿ ನೀಡದ್ದು ಯಾಕೆ? ಹೀಗಾಗಿ ಪ್ರಕರಣದಲ್ಲಿ ತಪ್ಪು ಯಾರದ್ದು ಎನ್ನುವುದನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎದೆ ತಟ್ಟಿ ಹೇಳಲಿ ನೋಡಲಿ ಎಂದು ಅವರು ಸವಾಲು ಹಾಕಿದರು. (ಇದನ್ನೂ ಓದಿ: ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಟಾಂಗ್)

    ಈ ವಿಚಾರ ತಿಳಿದ ಬಳಿಕ ನಾವು ಮೆರವಣಿಗೆ ಹೋಗುವುದು ಸಿದ್ಧ ಎಂದಾಗ ಎಸ್‍ಪಿ ಅವರು ನಿಮ್ಮನ್ನು ನಾವು ಬಂಧಿಸಬೇಕಾಗುತ್ತದೆ ಎಂದು ಫೋನಿನಲ್ಲಿ ಹೇಳಿದ್ದರು. ಅದಕ್ಕೆ ನಾನು ನನ್ನನ್ನು ಬಂಧಿಸಿ ಎಂದು ತಿಳಿಸಿದ್ದೆ. ಆದರೆ ಮೈಸೂರಿನಲ್ಲಿ ನನ್ನನ್ನು ಬಂಧಿಸದೇ ಬಿಳಿಕೆರೆಯಲ್ಲಿ ಬಂಧಿಸಿದ್ದಾರೆ ಎಂದು ತಿಳಿಸಿದರು.

    ತಪ್ಪು ಮಾಡಿಲ್ಲ: ಹುಣಸೂರಿನಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದ ಜನರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಗೊತ್ತಾಗಿ ಅಲ್ಲಿ ನಾನು ತೆರಳಲು ಹೋಗುತ್ತಿದ್ದಾಗ ಬಿಳಿಕೆರೆ ಬಳಿ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆ ಪ್ರದೇಶದಲ್ಲಿ ಯಾವುದೇ ನಿರ್ಬಂಧ ವಿಧಿಸಲಾಗಲಿಲ್ಲ. ಅಷ್ಟೇ ಅಲ್ಲದೇ ಬ್ಯಾರಿಕೇಡ್ ಹಾಕಿರಲಿಲ್ಲ. ಈ ವಿಚಾರ ತಿಳಿದು ಯಾಕೆ ವಾಹನಗಳನ್ನು ತಡೆಯುತ್ತಿದ್ದೀರಿ ಎಂದು ನಾನು ಕಾರು ನಿಲ್ಲಿಸಿ ಪೊಲೀಸರನ್ನು ಪ್ರಶ್ನಿಸಲು ಮುಂದಾಗುತ್ತಿದ್ದಾಗ ನಾನು ಮುಂದೆ ಹೋಗಬಾರದು ಎನ್ನುವುದಕ್ಕೆ ಬ್ಯಾರಿಕೇಡ್ ಹಾಕಿದ್ದಾರೆ. ಹೀಗಾಗಿ ನಾನು ಕಾರನ್ನು ಚಲಾಯಿಸಿದ್ದೇನೆ. ಕಾರಿನ ಮುಂಭಾಗಕ್ಕೆ ಬ್ಯಾರಿಕೇಡ್ ತಾಗಿದೆ ಬೇರೆ ಏನೂ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಜಿಲ್ಲಾಡಳಿತ, ಎಸ್‍ಪಿಗೆ ಸವಾಲ್: ಈ ಘಟನೆಯಲ್ಲಿ ತಪ್ಪು ಯಾರದ್ದು ಎನ್ನುವುದು ಎಲ್ಲರಿಗೂ ತಿಳಿಯಬೇಕು. ಹೀಗಾಗಿ ನಾನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಜೊತೆ ಕೇಳಿಕೊಳ್ಳುತ್ತೇನೆ. ಎಲ್ಲ ಮಾಧ್ಯಮಗಳ ಮುಂದೆ ಅವರು ಮಾತನಾಡಲಿ. ನಾನು ಮಾತನಾಡುತ್ತೇನೆ. ಎಲ್ಲರೂ ಬನ್ನಿ ಮಾಧ್ಯಮದ ಮುಂದೆ ಮಾತನಾಡೋಣ. ಇದು ಯಾಕೆ ಆಯ್ತು ಅಂತ ಕೇಳೋಣ. ಪೊಲೀಸ್ ಇಲಾಖೆಯಲ್ಲಿ ಕೆಲವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಿಂತಲೂ ಪ್ರತಿಷ್ಟೆ ಅಹಂ ದೊಡ್ಡದಾಗಿದೆ. ನನ್ನ ಮೇಲೆ ನೂರು ಕೇಸ್ ಹಾಕಬಹುದು. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಈದ್ ಮಿಲಾದ್, ಟಿಪ್ಪು ಸುಲ್ತಾನ್ ಜಯಂತಿಯ ಮೆರವಣಿಗೆ ಅವಕಾಶ ನೀಡಲಾಗುತ್ತದೆ. ಆದರೆ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಯಾಕೆ? ಯಾವುದೇ ಧರ್ಮದ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ತೀರ್ಪು ನೀಡಿದೆ. ಆದರೆ ಸರ್ಕಾರ 25 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಕ್ಕೆ ಅನುಮತಿ ನೀಡದ್ದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

    ಕಲ್ಲಪ್ಪ ಹಂಡಿಭಾಗ್, ಬಂಡೆ ಶೂಟೌಟ್ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದವರು ಯಾರು ಎನ್ನುವುದು ಗೊತ್ತಿದೆ. ನಾನು ಇದೂವರೆಗೂ ಪೊಲೀಸರಿಗೆ ಏಕವಚನದಲ್ಲಿ ಬೈದಿಲ್ಲ. ಕೊಪ್ಪಳದಲ್ಲಿ ಸಿಎಂ ಬೈದಿದ್ದು ಗೊತ್ತಿದೆ. ಅಧಿಕಾರಿಗಳ ಹತ್ಯೆಯಲ್ಲಿ ಭಾಗಿಯಾದವರನ್ನು ಸಂಪುಟದಲ್ಲಿ ಇಟ್ಟುಕೊಂಡು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

    ಮಾಧ್ಯಮಗಳ ಮೇಲೆ ಪ್ರಶ್ನೆ: ಭಾನುವಾರ ನಾನು ಮಾಡಿದ್ದು ತಪ್ಪು ಎಂದು ನೀವು ಸುದ್ದಿ ಪ್ರಸಾರ ಮಾಡುತ್ತಿದ್ದೀರಿ. ಆದರೆ ಶಾಂತಯುತವಾಗಿ ಭಾಗಿಯಾದವರ ಮೇಲೆ ಲಾಠಿಚಾರ್ಜ್ ಮಾಡಿದ್ದು ಎಷ್ಟು ಸರಿ ಎನ್ನುವುದನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ? ಟಿಪ್ಪು ಜಯಂತಿ ಮತ್ತು ಈದ್ ಮಿಲಾದ್ ಮೆರವಣಿಗೆ ನಡೆಸಲು ಅನುಮತಿ ನೀಡಿ ನಮಗೆ ನಿರ್ಬಂಧ ವಿಧಿಸಿದ್ದನ್ನು ಯಾಕೆ ನೀವು ಪ್ರಶ್ನಿಸಲ್ಲ ಎಂದು ಕೇಳಿದರು. ಇದನ್ನು ಓದಿ:  ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದು ಯಾಕೆ: ಎಸ್‍ಪಿ ರವಿ ಚನ್ನಣ್ಣವರ್ ಹೇಳ್ತಾರೆ ಓದಿ

  • ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರ- ಸಿಎಂ ಗೆ ಎಚ್ಚರಿಕೆ ನೀಡಿದ ಈಶ್ವರಪ್ಪ

    ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರ- ಸಿಎಂ ಗೆ ಎಚ್ಚರಿಕೆ ನೀಡಿದ ಈಶ್ವರಪ್ಪ

    ಬಾಗಲಕೋಟೆ: ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುವ ಸ್ಥಿತಿಗೆ ಬಂದಿದೆ. ಇದೇ ರೀತಿ ಹಿಂದೂ-ಮುಸ್ಲಿಮರಿಗೆ ಧೋರಣೆ ಮುಂದುವರಿಸಿ, ಜಾತಿ-ಜಾತಿಗಳ ಮಧ್ಯೆ ಬೆಂಕಿ ಹಚ್ಚಿದ್ರೆ, ಉತ್ತರ ಪ್ರದೇಶದ ಪರಿಸ್ಥಿತಿಯನ್ನು ರಾಜ್ಯದ ಸಿಎಂ ಸಿದ್ದು ಕಾಣಲಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

    ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ನೀತಿ ಅನುಸರಿಸುತ್ತಿರೋ ಸಿಎಂ ಮುಸ್ಲಿಮರ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿ, ಹಿಂದೂಗಳ ಹನುಮ ಹಾಗೂ ದತ್ತ ಜಯಂತಿಗೆ ಅಡ್ಡಿ ಮಾಡ್ತಿರೋದ್ಯಾಕೆ ಎಂದು ಪ್ರಶ್ನೆ ಮಾಡಿದ್ರು. ಸಿಎಂ ಕಾನೂನನ್ನು ಮುರಿಸುವ ಪ್ರಯತ್ನ ಮಾಡ್ತಿದ್ದಾರೆಂದು ಆರೋಪಿಸಿದ್ರು.

    ವೀರಶೈವ ಹಾಗೂ ಲಿಂಗಾಯತರನ್ನು ಬೇರ್ಪಡಿಸಿ, ಸಾಧು ಸಂತರನ್ನ ಬೇರೆ ಮಾಡಿ, ಈ ಸಾಧು ಯಾವ ಜಾತಿ ಎಂದು ಮುಖ ನೋಡಿ ಸ್ವಾಮೀಜಿಗಳಿಗೆ ನಮಸ್ಕಾರ ಮಾಡುವ ಸ್ಥಿತಿಗೆ ಸಿಎಂ ತಂದಿದ್ದಾರೆ. ಮುಖ್ಯಮಂತ್ರಿಯವರು ನಾಡಿನ ಹಿಂದೂಗಳ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ರು.

    ಇನ್ನು ಯೋಗೀಶ್‍ಗೌಡ ಹತ್ಯೆ ಪ್ರಕರಣದ ತನಿಖೆ ಅನುಮಾನಾಸ್ಪದ ರೀತಿಯಲ್ಲಿ ನಡೆಯುತ್ತಿದೆ. ಕೊಲೆಗಡುಕರನ್ನ ಸಿಎಂ ರಕ್ಷಣೆ ಮಾಡ್ತಿರೋದ್ಯಾಕೆ? ರಾಜ್ಯದ ಜನರ ಮುಂದೆ ಸಿಎಂ ಸತ್ಯ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ರು. ಗೌರಿ ಲಂಕೇಶ್ ಹತ್ಯೆ ಮಾಡಿರುವವರ ಸುಳಿವಿದ್ದರೂ ಗೃಹ ಸಚಿವರು ಪ್ರಕಟ ಮಾಡ್ತಿಲ್ಲ ಅಂತ ಅವರು ಹೇಳಿದ್ರು.

    ಬಿಜೆಪಿ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಸಣ್ಣ ಪುಟ್ಟ ಗೊಂದಲಗಳಾಗಿರೋದು ನಿಜ. ಪಕ್ಷ ಬೆಳೆಯುತ್ತಿರೋದ್ರಿಂದ ಅಲ್ಲಲ್ಲಿ ಅಶಿಸ್ತು ಗೊಂದಲಗಳಾಗಿವೆ. ಅವುಗಳನ್ನೆಲ್ಲ ಬಗೆಹರಿಸಿಕೊಂಡು ಮುನ್ನಡೆಯುತ್ತೇವೆ. ಇದು ಪಕ್ಷ ಅಧಿಕಾರಕ್ಕೆ ಬರೋ ಮುನ್ಸೂಚನೆ ಎಂದು ಹೇಳಿದ್ರು.

    ಬಿಎಸ್‍ವೈ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿಸುತ್ತೇವೆ. ಚುನಾವಣೆ ವೇಳೆ ಯಾತ್ರೆ ಮಾಡೋದು ಸಹಜ. ಜೆಡಿಎಸ್ ಹಾಗೂ ಕಾಂಗ್ರೆಸ್‍ನವರೂ ಯಾತ್ರೆ ಮಾಡಲಿ. ಆದ್ರೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಉಡಾಫೆ ಉತ್ತರ ನೀಡ್ತಿದ್ದಾರೆ ಎಂದು ಟೀಕಿಸಿದ್ರು.

    https://www.youtube.com/watch?v=f0lk2O1Ndno

     

  • ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಟಾಂಗ್

    ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಸಂಸದ ಪ್ರತಾಪ್ ಸಿಂಹ ಪರೋಕ್ಷ ಟಾಂಗ್

    ಮೈಸೂರು: ಹುಣಸೂರು ಹನುಮ ಜಯಂತಿ ಮೆರವಣಿಗೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಎಸ್‍ಪಿ ರವಿ ಚೆನ್ನಣ್ಣನವರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸಾರ್ ಅಂತ ಟ್ವಿಟರ್‍ನಲ್ಲಿ ಎಸ್‍ಪಿ ಗೆ ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ. ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಅಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿದ ಎಸ್.ಪಿ ಅಣ್ಣಾಮಲೈ, ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪಾ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ. ಭಾಷಣ ನಿಲ್ಲಿಸಿ ಅಂತ ಟ್ವೀಟ್ ಮಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ, ಸಂಪ್ರದಾಯ ರಕ್ಷಣೆ ನನಗೆ ಮುಖ್ಯ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

    12 ಗಂಟೆ ಬಳಿಕ ರಿಲೀಸ್: ಭಾನುವಾರ ಕಾರಿನಲ್ಲಿ ಬ್ಯಾರಿಕೇಡ್ ಗೆ ಗುದ್ದಿ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಉದ್ಧಟತನ ಪ್ರದರ್ಶನ ಮಾಡಿದ್ದಕ್ಕೆ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಹುಣಸೂರು, ಹೆಚ್.ಡಿ.ಕೋಟೆ, ಕೆ.ಆರ್.ನಗರ, ಮೈಸೂರು, ನರಸೀಪುರ ಸೇರಿದಂತೆ ಮೊದಲಾದ ಕಡೆ ಸುಮಾರು 8 ಗಂಟೆ ಕಾಲ ರೌಂಡ್ ಹೊಡೆಸಿದ ನಂತರ ರಾತ್ರಿ 11 ಗಂಟೆ ಹೊತ್ತಿಗೆ ಟೀ ನರಸೀಪುರ ಪಟ್ಟಣ ಠಾಣೆಗೆ ಕರೆತಂದಿದ್ದರು. ಅಲ್ಲಿ ಪ್ರತಾಪ್ ಸಿಂಹ ಸ್ಟೇಷನ್ ಬೇಲ್ ಪಡೆದು ರಿಲೀಸ್ ಆಗಿದ್ದಾರೆ.

    ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಿಮಗೆ ನಿಮ್ಮ ಅಹಂ ದೊಡ್ಡದಾಗಿತ್ತು. ಆದರೆ ಅದು ನಿಮ್ಮ ಮನಸ್ಥಿತಿಯಲ್ಲಿರುವ ಲೋಪ. ಅದನ್ನು ಅಡ್ಡ ತಂದು ನಮ್ಮ ಮೇಲೆ ಗಧಾಪ್ರಹಾರ ಮಾಡಬೇಡಿ. 2015ರಲ್ಲಿ ನೀವು ಬ್ಯಾನ್ ಮಾಡಿದ 3 ರಸ್ತೆಯಲ್ಲಿ ಸುಸೂತ್ರವಾಗಿ ಹನುಮ ಜಯಂತಿ ನಡೆದಿತ್ತು. ಆದರೆ ಇದೀಗ ಅವಕಾಶವೇ ಕೊಡುತ್ತಿಲ್ಲ. ನಾನೊಬ್ಬ ಸಂಸದನಾಗಿ ಹುಣಸೂರಿಗೆ ಹೋಗಿ ಕಾನೂನು ಉಲ್ಲಂಘನೆ ಮಾಡುತ್ತೀನಿ ಎಂದು ನಿಮಗೆ ಕನಸು ಬಿದ್ದಿತ್ತಾ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದ್ರು.

  • ಬಿಜೆಪಿಯಿಂದ ಇಂದು ಹುಣಸೂರು ಬಂದ್ ಗೆ ಕರೆ- ರಸ್ತೆಗಿಳಿಯದ ಬಸ್‍ಗಳು, ಅಂಗಡಿ ಮುಂಗಟ್ಟುಗಳು ಬಂದ್

    ಬಿಜೆಪಿಯಿಂದ ಇಂದು ಹುಣಸೂರು ಬಂದ್ ಗೆ ಕರೆ- ರಸ್ತೆಗಿಳಿಯದ ಬಸ್‍ಗಳು, ಅಂಗಡಿ ಮುಂಗಟ್ಟುಗಳು ಬಂದ್

    ಮೈಸೂರು: ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾನುವಾತರದಂದು ಕಲ್ಲು ತೂರಾಟ ನಡೆದಿದ್ದ ಹುಣಸೂರು ಪಟ್ಟಣದಲ್ಲಿ ಇಂದು ಬಂದ್ ಆಚರಿಸಲಾಗ್ತಿದೆ.

    ಹುಣಸೂರು ಬಂದ್‍ಗೆ ಬಿಜೆಪಿ ನಾಯಕರು ಕರೆ ನೀಡಿದ್ದು, ಕೆಲವೇ ಕ್ಷಣಗಳಲ್ಲಿ ಕೇಸರಿ ಪಡೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲಿದೆ. ರಾತ್ರಿ ಬೇಲ್ ಮೇಲೆ ರಿಲೀಸ್ ಆದ ಸಂಸದ ಪ್ರತಾಪ ಸಿಂಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

    ಹುಣಸೂರು ಪಟ್ಟಣ ಬೆಳಗ್ಗೆಯಿಂದಲೇ ಬಿಕೋ ಎನ್ನುತ್ತಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಸರ್ಕಾರಿ ಬಸ್‍ಗಳು ಕೂಡ ರಸ್ತೆಗೆ ಇಳಿದಿಲ್ಲ. ಮುಂಜಾಗ್ರತಾ ಕ್ರಮವಾಗಿ ಹುಣಸೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮೈಸೂರು ಜಿಲ್ಲಾಡಳಿತ ಹುಣಸೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

    ಹುಣಸೂರಿನಲ್ಲಿ ಶಾಲಾ ಕಾಲೇಜುಗಳಿಗೆ ನಿನ್ನೆಯೇ ರಜೆ ಘೋಷಣೆ ಮಾಡಲಾಗಿದೆ.

  • ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದು ಯಾಕೆ: ಎಸ್‍ಪಿ ರವಿ ಚನ್ನಣ್ಣವರ್ ಹೇಳ್ತಾರೆ ಓದಿ

    ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದು ಯಾಕೆ: ಎಸ್‍ಪಿ ರವಿ ಚನ್ನಣ್ಣವರ್ ಹೇಳ್ತಾರೆ ಓದಿ

    ಮೈಸೂರು: ಹನುಮ ಮಾಲಾಧಾರಿಗಳ ಮೆರವಣಿಗೆ ವೇಳೆ ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ. ಚನ್ನಣ್ಣವರ್ ಹೇಳಿದ್ದಾರೆ.

    ಗುಂಪು ಚದುರಿಸುವ ವೇಳೆ ಕೆಲವು ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಸುಮಾರು 50 ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ.ರವಿ ಚನ್ನಣ್ಣವರ್ ಸ್ಪಷ್ಟನೆ ನೀಡಿದ್ದಾರೆ.

    ಹನುಮ ಮಾಲಾಧಾರಿಗಳು ನಗರದಲ್ಲಿ ಮೆರವಣಿಗೆ ನಡೆಸಲು ಪ್ರತ್ಯೇಕ ಮಾರ್ಗವನ್ನು ನಿಗದಿ ಮಾಡಲಾಗಿತ್ತು. ಆದರೆ ಕೆಲವರು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದರು. ಆದರೆ ಜಿಲ್ಲಾಧಿಕಾರಿಗಳಿಂದ ಈ ಪತ್ರಕ್ಕೆ ಅನುಮತಿ ಸಿಗದ ಕಾರಣ ಮೆರವಣಿಗೆ ವೇಳೆ ಶಾಂತಿ ಕಾಪಾಡಲು ಭದ್ರತೆ ಕ್ರಮವನ್ನು ತೆಗೆದುಕೊಂಡಿದ್ದೆವು. ಈ ವೇಳೆ ಕೆಲ ಮಂದಿ ಅನುಮತಿ ರಹಿತ ಮಾರ್ಗವಾಗಿ ಮೆರವಣಿಗೆ ನಡೆಸಲು ಹೊರಟಿದ್ದರು. ಅವರನ್ನು ನಾವು ತಡೆದಿದ್ದೆವೆ. ಶಾಂತಿ ವ್ಯವಸ್ಥೆಗೆ ಧಕ್ಕೆ ತರುವ ಇಂತಹ ಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಬಿಳಕೆರೆ ಬಳಿ ಸಂಸದರನ್ನು ತಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ವಾಹನ ತಡೆಯಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ದೂಡಿ ಕಾರನ್ನು ಚಲಾಯಿಸಿದ್ದಕ್ಕೆ ಸಂಸದ ಪ್ರತಾಪ್‍ಸಿಂಹ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ವಿಡಿಯೋ ಲಭ್ಯವಾಗಿದ್ದು, ಸ್ಥಳದಲ್ಲಿರುವ ಅಧಿಕಾರಿಗಳನ್ನು ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸದ್ಯ ಸಂಸದ ಪ್ರತಾಪ್ ಸಿಂಹ ಅವರು ನಮ್ಮ ಜತೆಯಲ್ಲೇ ಇದ್ದಾರೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜನರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ವಿನಂತಿ ಮಾಡಿದರು.

     

     

  • ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಿಟ್ಟು: ಮೈಸೂರು ಪೊಲೀಸರ ಮೇಲೆ ‘ಪ್ರತಾಪ’

    ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಿಟ್ಟು: ಮೈಸೂರು ಪೊಲೀಸರ ಮೇಲೆ ‘ಪ್ರತಾಪ’

    ಮೈಸೂರು: ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶಗೊಂಡು ಬ್ಯಾರಿಕೇಡ್ ಕಿತ್ತು ಹಾಕಿ ಕಾನೂನು ಉಲ್ಲಂಘಿಸಿ  ಪ್ರತಿಭಟಿಸಿದ್ದಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

    ಹನುಮ ಮಾಲೆ ಧರಿಸಿದ್ದ ಸಂಸದ ಪ್ರತಾಪ್ ಸಿಂಹ ಮತ್ತು ನೂರಾರು ಜನ ಮೈಸೂರಿನ ಹುಣಸೂರು ರಸ್ತೆಯಲ್ಲಿ ಮೆರವಣಿಗೆ ಹೊರಟಿದ್ದರು. ಆದರೆ ಯಾವುದೇ ಗಲಾಟೆ ಆಗಬಾರದು. ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ಪೊಲೀಸರು ಬ್ಯಾರಿಕೇಡ್ ಹಾಕಿ ಮೆರವಣಿಗೆ ತಡೆಯುವ ಪ್ರಯತ್ನ ಮಾಡಿದ್ದರು.

    ಬಿಳಕೆರೆ ಬಳಿ ಸಂಸದರನ್ನು ತಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ಪೊಲೀಸರು ವಾಹನ ತಡೆಗಾಗಿ ಹಾಕಿದ್ದ ಬ್ಯಾರಿಕೇಡ್ ಭೇದಿಸಿ ಡ್ರೈವರ್ ಇಳಿಸಿ ಪ್ರತಾಪ್‍ಸಿಂಹ ಕಾರನ್ನು ಚಲಾಯಿಸಿದ್ದರು. ಈ ವೇಳೆ ಸ್ವಲ್ಪದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಸದರ ಅತಿವೇಗ ಕಂಡು ಮಹಿಳಾ ಅಧಿಕಾರಿ ದೂರ ಸರಿದಿದ್ದಾರೆ.

    ನಂತರ ಹುಣಸೂರು ಪ್ರವೇಶಕ್ಕೂ ಮುನ್ನವೇ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಸಂಸದರು ಇರುವ ಜಾಗಕ್ಕೇ ಮೈಸೂರು ಎಸ್‍ಪಿ ರವಿ ಚನ್ನಣ್ಣವರ್ ಆಗಮಿಸಿದರು. ಈ ವೇಳೆ ಪ್ರತಾಪ್ ಸಿಂಹ ಪೊಲೀಸರ ನಡೆಯನ್ನು ಪ್ರಶ್ನಿಸಿದರು. ಕೊನೆಗೆ ಎಸ್‍ಪಿ ರವಿ ಚನ್ನಣ್ಣವರ್ ಪ್ರತಾಪ್ ಸಿಂಹ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಮಾತನ್ನು ಕೇಳದೇ ಇದ್ದಾಗ ಸಂಸದರ ಜೊತೆ ಹನುಮ ಮಾಲಾಧಾರಿಗಳನ್ನು ಪೊಲೀಸರು ಬಂಧಿಸಿದರು.

    ಬಂಧನದ ವಿಚಾರ ತಿಳಿದ ಮೇಲೆ ಹುಣಸೂರಿನ ಬಿಳಿಕೆರೆಯಲ್ಲಿ ಸಂಸದರನ್ನು ಬಿಡುಗಡೆ ಮಾಡಿ ಅಂತ ಕಲ್ಲು ತೂರಾಟ ನಡೆಯಿತು. ಪೊಲೀಸರು ವಿಧಿಯಿಲ್ಲದೇ ಲಾಠಿಚಾರ್ಜ್ ಮಾಡಿ ಹಲವರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಸಂಸದ ಪ್ರತಾಪ್ ಸಿಂಹ ಮೇಲೆ ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು. ಐಪಿಸಿ 353(ಪೊಲೀಸರ ಕರ್ತವ್ಯಕ್ಕೆ ಅಡ್ಡಿ) ಐಪಿಸಿ 332(ಕರ್ತವ್ಯಕ್ಕೆ ಅಡ್ಡಿ) ಐಪಿಸಿ 279(ಅಜಾಗರೂಕತೆಯಿಂದ ವಾಹನ ಚಲಾಯಿಸಿ ಜೀವಕ್ಕೆ ಕುತ್ತು) ಕಾಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

     

     

    https://youtu.be/f0lk2O1Ndno

  • ವಿಜೃಂಭಣೆಯಿಂದ ನಡೆದ ಹನುಮ ಮಾಲಾ ಜಯಂತಿ- ಅಂಜನಾದ್ರಿ ಬೆಟ್ಟವೇರಿದ ಸಾವಿರಾರು ಭಕ್ತರು

    ವಿಜೃಂಭಣೆಯಿಂದ ನಡೆದ ಹನುಮ ಮಾಲಾ ಜಯಂತಿ- ಅಂಜನಾದ್ರಿ ಬೆಟ್ಟವೇರಿದ ಸಾವಿರಾರು ಭಕ್ತರು

    ಕೊಪ್ಪಳ: ಹನುಮ ಜನಿಸಿದ ನಾಡು ಕೊಪ್ಪಳದಲ್ಲಿ ಪ್ರತಿ ವರ್ಷದಂತೆ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ.

    ಪ್ರತಿ ವರ್ಷ ಹನುಮ ಜಯಂತಿಯಂದು ಭಕ್ತರು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸ್ತಾರೆ. ವ್ರತ ಕೈಗೊಂಡ ಭಕ್ತರು ಇಲ್ಲಿಗೆ ಬಂದು ಹನುಮ ಮಾಲೆಯನ್ನು ವಿಸರ್ಜನೆ ಮಾಡ್ತಾರೆ. ಅಂಜನಾದ್ರಿ ಬೆಟ್ಟದಲ್ಲಿ ಬೆಳಗ್ಗೆ ಎರಡು ಗಂಟೆಯಿಂದಲೇ ನಿರ್ಮಲ ಸೇವೆ, ಅಲಂಕಾರ, ಸಹಸ್ರನಾಮಾವಳಿ ಪಠಣ, ಹನುಮಸ್ತೋತ್ರ ಪಠಣದಂತ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ.

    ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಪೈಕಿ ಕೆಲವರು ರಾತ್ರಿಯೇ ಬೆಟ್ಟಕ್ಕೆ ಆಗಮಿಸಿದ್ದರು. ಮತ್ತಷ್ಟು ಭಕ್ತರು ಬೆಳಗ್ಗೆ ಎರಡು ಗಂಟೆಯಿಂದಲೇ ಗಂಗಾವತಿ ನಗರದಿಂದ ಪಾದಯಾತ್ರೆ ನಡೆಸಿ ಬೆಟ್ಟವೇರಿದರು. ರಾಜ್ಯದ ಜಿಲ್ಲೆಗಳಾದ ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಳ್ಳಾರಿ, ರಾಯಚೂರು, ಬೀದರ್, ಗುಲ್ಬರ್ಗ, ಯಾದಗಿರಿ, ಬಾಗಲಕೋಟೆ, ವಿಜಯಪುರದಿಂದ ಅಂದಾಜು 25 ಸಾವಿರಕ್ಕೂ ಹೆಚ್ಚು ಭಕ್ತರು 575 ಮೆಟ್ಟಿಲು ಹೊಂದಿರುವ ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆದರು.

    ಕಳೆದ ಬಾರಿ ಇದೇ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ನಡುವೆ ಗಲಭೆಯಾಗಿ ಗಂಗಾವತಿಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿತ್ತು. ಸತತ 1 ವಾರಗಳ ಕಾಲ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇದರಿಂದ ಮುನ್ನೆಚ್ಚರಿಕೆಯಾಗಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿತ್ತು. ಇದರಿಂದ ಈ ಬಾರಿ ಹನುಮ ಮಾಲಾಧಾರಿಗಳು ಮೆರವಣಿಗೆ ಮಾಡುವ ಸಂಭ್ರಮಕ್ಕೆ ಪೊಲೀಸರು ಕೊಕ್ಕೆ ಹಾಕಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.

    ಈದ್ ಮಿಲಾದ್ ಹಬ್ಬವು ಇದೇ ಸಮಯದಲ್ಲಿ ಇರುವುದರಿಂದ ಯಾವುದೇ ರೀತಿ ಕೋಮು ಗಲಭೆ ಆಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ ಕಳೆದ 3 ದಿನದಿಂದ ಗಂಗಾವತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. 733 ಪೊಲೀಸರನ್ನು ಗಂಗಾವತಿ ನಗರದಾದ್ಯಂತ ಬಂದೋಬಸ್ಟ್ ಗಾಗಿ ನಿಯೋಜನೆ ಮಾಡಲಾಗಿತ್ತು.

    ಇನ್ನು ಗಂಗಾವತಿ ನಗರದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣು ಇರಿಸಲು ಡ್ರೋಣ್ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಎರಡು ಹಬ್ಬಗಳು ಶಾಂತಿಯುತವಾಗಿ ನಡೆದವು.

    ಈ ವೇಳೆ ಗಂಗಾವತಿ ನಗರವನ್ನ ಪ್ರವೇಶಿಸದಂತೆ ವಾಹನಗಳಿಗೆ ರೂಟ್ ಮ್ಯಾಪ್ ಮಾಡಲಾಗಿತ್ತು. ಇದರಿಂದ ನಗರ ಪ್ರವೇಶ ಮಾಡುವ ವಾಹನಗಳನ್ನ ತೀವ್ರ ತಪಾಸಣೆ ಮಾಡಲಾಗ್ತಿತ್ತು. ಹನುಮ ಮಾಲಾಧಾರಿಗಳ ವಾಹನದಾರರು ನಾವೇನು ಪಾಕಿಸ್ತಾನ ದಿಂದ ಬಂದಿದ್ದೇವಾ ಅಂತ ಆಕ್ರೋಶ ವ್ಯಕ್ತಪಡಿಸಿದರು.

    ಗಂಗಾವತಿ ಯಲ್ಲಿ ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ವಹಿಸಿದ್ದ ಬಿಗಿ ಪೊಲೀಸ್ ವ್ಯವಸ್ಥೆಯಿಂದ ಹನುಮ ಜಯಂತಿ ಶಾಂತಿಯುತವಾಗಿ ನಡೆದಿದೆ. ಎಸ್‍ಪಿ ಮುಂಜಾಗ್ರತಾ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಮೆರವಣಿಗೆಗೆ ಅವಕಾಶ ಕೊಡಬೇಕಿತ್ತು ಎಂದು ಅಪಸ್ವರ ಎತ್ತಿದ್ದಾರೆ. ಗಂಗಾವತಿಯಲ್ಲಿ ಈ ಬಾರಿ ಈದ್ ಮಿಲಾದ್ ಹಾಗೂ ಹನುಮಮಾಲಾ ಜಯಂತಿ ಶಾಂತಿಯುವಾಗಿ ನಡೆದಿರೋದು ಮಾತ್ರ ಎಲ್ಲರಲ್ಲಿ ಹರ್ಷ ತಂದಿದೆ.