Tag: ಹನುಮಂತಪ್ಪ ಕೊಪ್ಪದ್

  • ಯಶ್, ಪುನೀತ್ ಅಲ್ಲ, ಸೈನಿಕರು ನಿಜವಾದ ಹೀರೋಗಳು: ಹನುಮಂತಪ್ಪ ಕೊಪ್ಪದ್ ಪತ್ನಿ

    ಯಶ್, ಪುನೀತ್ ಅಲ್ಲ, ಸೈನಿಕರು ನಿಜವಾದ ಹೀರೋಗಳು: ಹನುಮಂತಪ್ಪ ಕೊಪ್ಪದ್ ಪತ್ನಿ

    ಚಿಕ್ಕಮಗಳೂರು: ಸಿನಿಮಾಗಳಲ್ಲಿ ಮೂರು ಗಂಟೆ ನಟನೆ ಮಾಡುವ ಯಶ್, ಪುನೀತ್ ನಿಜವಾದ ಹೀರೋಗಳಲ್ಲ. ದೇಶಕ್ಕಾಗಿ ಹೋರಾಡುವ ಸೈನಿಕರು ಹಾಗೂ ದೇಶಕ್ಕಾಗಿ ಬೆವರು ಹರಿಸಿ ದುಡಿಯೋ ರೈತರು ನಿಜವಾದ ಹೀರೋಗಳು ಎಂದು ಮೃತ ಯೋಧ ಹನುಂತಪ್ಪ ಕೊಪ್ಪದ್ ಪತ್ನಿ ಹೇಳಿದ್ದಾರೆ.

    ನಗರದ ವಂದೇ ಮಾತರಂ ಟ್ರಸ್ಟ್ ಆಯೋಜಿಸಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಇಂದಿನ ಯುವಕರಿಗೆ ಸಿನಿಮಾ ನಟರೇ ಹಿರೋಗಳು. ಆದರೆ, ಸೈನಿಕರು ತನಗಾಗಿ ದುಡಿಯೋದಿಲ್ಲ. ಮನೆಗಾಗಿ ದುಡಿಯೋದಿಲ್ಲ. ಬಂಧುಗಳಿಗಾಗಿ ದುಡಿಯೋದಿಲ್ಲ. ಬದಲಾಗಿ ಅವರು ದೇಶಕ್ಕಾಗಿ ದುಡಿಯುತ್ತಾರೆ, ದೇಶಕ್ಕಾಗಿ ಪ್ರಾಣ ಕೊಡುತ್ತಾರೆ. ಹೀಗಾಗಿ ಅವರು ನಿಜವಾದ ಹೀರೋಗಳು ಎಂದರು.

    ಸಿನಿಮಾ ನಟರು ಕೇವಲ ನಟರಷ್ಟೆ ಹೀರೋಗಳಲ್ಲ. ಈಗ ಇಲ್ಲಿಗೆ ಸಿನಿಮಾ ನಟ-ನಟಿಯರು ಬಂದಿದ್ದರೆ ನಿಮ್ಮ ಕೇಕೆ, ಶಿಳ್ಳೆಯನ್ನ ಕೇಳೋದಕ್ಕೆ ಆಗುತ್ತಿರಲಿಲ್ಲ. ಅದೇ ಓರ್ವ ಯೋಧ ಬಂದು ನಿಂತು ಮಾತನಾಡಿದರೆ ಅಷ್ಟು ಕೇಕೆ, ಶಿಳ್ಳೆ ಬರೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲೂ ನೋಡಿದ್ದೇನೆ. ಅಲ್ಲಿ ಹುಡುಗ-ಹುಡುಗಿಯರು ಬರೀ ಯಶ್, ಪುನೀತ್ ಅಂತಾರೆ. ಅವರು ನಿಜವಾದ ಹೀರೋಗಳಲ್ಲ. ನಿಜವಾದ ಹೀರೋಗಳು ಸೈನಿಕರು, ರೈತರು ಎಂದು ಮತ್ತೊಮ್ಮೆ ಉಚ್ಛರಿಸಿದರು.

    2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಅವರು ವೀರ ಮರಣ ಹೊಂದಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

  • ಸಿಯಾಚಿನ್ ವೀರಯೋಧ ಹನುಮಂತಪ್ಪ ಕೊಪ್ಪದ್ ಪತ್ನಿಗೆ ಉದ್ಯೋಗಾವಕಾಶ ನೀಡಿದ ಸ್ಮೃತಿ ಇರಾನಿ

    ಸಿಯಾಚಿನ್ ವೀರಯೋಧ ಹನುಮಂತಪ್ಪ ಕೊಪ್ಪದ್ ಪತ್ನಿಗೆ ಉದ್ಯೋಗಾವಕಾಶ ನೀಡಿದ ಸ್ಮೃತಿ ಇರಾನಿ

    ನವದೆಹಲಿ: ಸಿಯಾಚಿನ್ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಕೊಪ್ಪದ್ ಅವರಿಗೆ ಕೇಂದ್ರ ಜವಳಿ ಸಚಿವೆ ಸ್ಮೃತಿ  ಇರಾನಿ ಕೇಂದ್ರ ರೇಷ್ಮೆ ಬೋರ್ಡ್‍ನಲ್ಲಿ ಉದ್ಯೋಗಾವಕಾಶ ನೀಡಿದ್ದಾರೆ.

    ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರು ಸಿಯಾಚಿನ್‍ನಲ್ಲಿ ಹಿಮಪಾತದಲ್ಲಿ ಸಿಲುಕಿ 6 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಅವರು 2016ರ ಫೆಬ್ರವರಿಯಲ್ಲಿ ಮೃತಪಟ್ಟಿದ್ದರು.

    ಬಳಿಕ ರಾಜ್ಯ ಸರ್ಕಾರ ಕೊಪ್ಪದ್ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, 4 ಎಕರೆ ಜಮೀನು ನೀಡಿತ್ತು. ಕೊಪ್ಪದ್ ಅವರ ಪತ್ನಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದ್ರೆ ವರ್ಷವಾದ್ರೂ ರಾಜ್ಯ ಸರ್ಕಾರ ಈ ಬಗ್ಗೆ ಮಾತನಾಡಿಲ್ಲ. ಈ ಮಧ್ಯೆ ಕೇಂದ್ರ ಸಚಿವೆ ಇರಾನಿ ಮಹಾದೇವಿ ಕೊಪ್ಪದ್ ಅವರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದು ಜಾಬ್ ಆಫರ್ ಲೆಟರ್ ಕಳಿಸಿದ್ದಾರೆ.

    ಕೊಪ್ಪದ್ ತಮ್ಮ ಹೆಂಡತಿ, 3 ವರ್ಷದ ಮಗು ನೇತ್ರಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದರು. ಇದೇ ವರ್ಷ ಹನುಮಂತಪ್ಪ ಕೊಪ್ಪದ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.