Tag: ಹತ್ರಾಸ್ ಪ್ರಕರಣ

  • ಟ್ರಂಪ್‍ಗೆ ಮಿಡಿದ ಹೃದಯ ಹತ್ರಾಸ್ ಬಾಲಕಿಗೇಕೆ ಮಿಡಿಯುತ್ತಿಲ್ಲ: ಮೋದಿಗೆ ಗುಂಡೂರಾವ್ ಪ್ರಶ್ನೆ

    ಟ್ರಂಪ್‍ಗೆ ಮಿಡಿದ ಹೃದಯ ಹತ್ರಾಸ್ ಬಾಲಕಿಗೇಕೆ ಮಿಡಿಯುತ್ತಿಲ್ಲ: ಮೋದಿಗೆ ಗುಂಡೂರಾವ್ ಪ್ರಶ್ನೆ

    ಬೆಂಗಳೂರು: ದೂರದ ಟ್ರಂಪ್‍ಗಾಗಿ ಮಿಡಿಯುವ ಪ್ರಧಾನಿ ಮೋದಿ ಅವರ ಹೃದಯ ಹತ್ತಿರದ ಹತ್ರಾಸ್ ಬಾಲಕಿಗಾಗಿ ಏಕೆ ಮಿಡಿಯುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಪ್ರಶ್ನೆ ಮಾಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಹತ್ರಾಸ್ ಬಾಲಿಕೆ ಮೇಲೆ ನಡೆದಿರುವ ಗ್ಯಾಂಗ್‍ರೇಪ್ ವಿಚಾರ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸ್ಥಳಕ್ಕೆ ಹೋಗಿ ಬಂದಿದ್ದಾರೆ. ಇಷ್ಟದರೂ ಕೂಡ ನರೇಂದ್ರ ಮೋದಿಯವರು ಈ ವಿಚಾರದ ಬಗ್ಗೆ ಮೌನ ಮುರಿದಿಲ್ಲ. ಇದನ್ನೇ ಇಟ್ಟುಕೊಂಡು ವಿಕ್ಷದ ನಾಯಕರು ಮೋದಿ ಮೇಲೆ ಮುಗಿ ಬೀಳುತ್ತಿದ್ದಾರೆ.

    ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಸನ್ಮಾನ್ಯ ಮೋದಿಯವರೇ ಅನಾರೋಗ್ಯಕ್ಕೀಡಾದವರಿಗೆ ಹಾರೈಸುವುದು ಉತ್ತಮ ಸಂಪ್ರದಾಯ. ಟ್ರಂಪ್ ಆರೋಗ್ಯಕ್ಕಾಗಿ ಪ್ರಾರ್ಥಿಸಿ ನಿಮ್ಮ ನಡೆಗೆ ಸ್ವಾಗತ. ಆದರೆ ದೂರದ ಟ್ರಂಪ್‍ಗಾಗಿ ಮಿಡಿದ ನಿಮ್ಮ ಹೃದಯ, ಹತ್ರಾಸ್ ಬಾಲಕಿಯ ಗ್ಯಾಂಗ್‍ರೇಪ್ ವಿಚಾರದಲ್ಲಿ ಮಿಡಿಯಲೇ ಇಲ್ಲ ಯಾಕೆ? ಬಾಯಿ ಬಿಟ್ಟರೆ ನಿಮ್ಮ ಶಿಷ್ಯ ಯೋಗಿ ಸರ್ಕಾರದ ಬಂಡವಾಳ ಬಯಲಾಗುತ್ತೆ ಎಂಬ ಭಯವೇ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

    ಇಂದು ಬೆಳಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರು ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಮೋದಿಯವರು, ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

  • ಹತ್ರಾಸ್ ಪ್ರಕರಣ – ಎಸ್‍ಪಿ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಮಾನತು

    ಹತ್ರಾಸ್ ಪ್ರಕರಣ – ಎಸ್‍ಪಿ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಮಾನತು

    – ಅಮಾನತುಗೊಳಿಸಿ ಆದೇಶ ಹೊರಡಿಸಿದ ಯೋಗಿ ಸರ್ಕಾರ
    – ಸುಳ್ಳು ಪತ್ತೆ, ಮಂಪರು ಪರೀಕ್ಷೆ ಆದೇಶ

    ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆ, ವಿರೋಧ ಪಕ್ಷಗಳ ಆಕ್ರೋಶದ ಬಳಿಕ ಉತ್ತರ ಪ್ರದೇಶ ಸರ್ಕಾರ ಎಸ್‍ಪಿ, ಡಿಎಸ್‍ಪಿ, ಇನ್ಸ್ ಪೆಕ್ಟರ್ ಹಾಗೂ ಇತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

    ಟ್ವೀಟ್ ಮಾಡಿದ ಕೆಲವೇ ಗಂಟೆಗಳ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನಿರ್ಧಾರ ಕೈಗೊಂಡಿದ್ದಾರೆ. ಎಸ್‍ಪಿ ವಿಕ್ರಾಂತ್ ವೀರ್, ಡಿಎಸ್‍ಪಿ ರಾಮ್ ಶಬ್ದ್, ಇನ್ಸ್‍ಪೆಕ್ಟರ್ ದಿನೇಶ್ ವರ್ಮಾ, ಸಬ್ ಇನ್‍ಸ್ಪೆಕ್ಟರ್ ಜಗ್ವೀದ್ ಸಿಂಗ್ ಹಾಗೂ ಹೆಡ್ ಕಾನ್‍ಸ್ಟೇಬಲ್ ಮಹೇಶ್ ಪಾಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಮ್ಲಿ ಎಸ್‍ಪಿ ವಿನೀತ್ ಜೈಸ್ವಾಲ್ ಅವರಿಗೆ ಹತ್ರಾಸ್ ಚಾರ್ಜ್ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಅಮಾನತು ಆದೇಶದ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ಮೇಲೆ ಸುಳ್ಳು ಪತ್ತೆ ಮತ್ತು ಮಂಪರು ಪರೀಕ್ಷೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.

    ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟರ್‍ನ್ನು ಸಹ ಅಮಾನತುಗೊಳಿಸಬೇಕು ಎಂಬ ಒತ್ತಾಯ ಸಹ ಕೇಳಿ ಬರುತ್ತಿದೆ. ಆದರೆ ಸದ್ಯಕ್ಕೆ ಅವರನ್ನು ಅಮಾನತು ಮಾಡಲಾಗಿಲ್ಲ.

    ಕೆಲವೇ ಗಂಟೆಗಳ ಮುಂಚೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ ಉತ್ತರ ಪ್ರದೇಶದ ತಾಯಂದಿರು ಹಾಗೂ ಸಹೋದರಿಯರ ಗೌರವಕ್ಕೆ ಧಕ್ಕೆ ತರುವವರನ್ನು ಬಿಡುವುದಿಲ್ಲ. ಅವರು ಸರ್ವ ನಾಶವಾಗುತ್ತಾರೆ, ಕಠೋರ ಶಿಕ್ಷೆ ವಿಧಿಸಲಾಗುವುದು. ಅಲ್ಲದೆ ಭವಿಷ್ಯದಲ್ಲಿ ಮಾದರಿಯಾಗವ ರೀತಿ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಏನಿದು ಪ್ರಕರಣ?
    ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಎರಡು ವಾರಗಳ ಅಂದರೆ ಮಂಗಳವಾರ ದೆಹಲಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ 20 ವರ್ಷದ ಯುವತಿಯ ಅಂತ್ಯಸಂಸ್ಕಾರವನ್ನು ಕಳೆದ ರಾತ್ರಿ ಪೊಲೀಸರೇ ನೆರವೇರಿಸಿದ್ದರು. ಈ ವೇಳೆ ಮೃತ ಯುವತಿಯ ಕುಟುಂಬ ಮತ್ತು ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಲು ಬಿಡಿ ಎಂದು ಎಷ್ಟೇ ಕೂಗಾಡಿದರೂ ಅವರನ್ನು ಮನೆಯಲ್ಲೇ ಕೂಡಿಹಾಕಿ ಪೊಲೀಸರೇ ರಾತ್ರಿ 2.30ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

    ಈ ವೇಳೆ ಯುವತಿ ಕುಟುಂಬ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ತಮ್ಮ ಮಗಳ ಮುಖವನ್ನು ನೋಡಲು ಬಿಡದಿದ್ದರಿಂದ ಉದ್ರಿಕ್ತರಾದ ಕುಟುಂಬಸ್ಥರು, ಅಂಬುಲೆನ್ಸ್ ಮೇಲೆ ಮರದ ತುಂಡುಗಳನ್ನು ಎಸೆಯುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೂ ಪೊಲೀಸರು ಮಾತ್ರ ಕ್ಯಾರೇ ಎನ್ನದೇ ಮೃತದೇಹವನ್ನು ತೆಗೆದುಕೊಂಡು ಹೋಗಿ ತಾವೇ ಅಂತ್ಯಸಂಸ್ಕಾರ ಮಾಡಿದ್ದರು. ಇದರಿಂದ ಯುವತಿಯ ಕುಟುಂಬಸ್ಥರು ಅಸಹಾಯಕರಾಗಿ ಕಣ್ಣೀರಿಟ್ಟಿದ್ದರು.

    ಘಟನೆ ಬಳಿಕ ವಿಡಿಯೋ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ, ಪ್ರತಿಭಟನೆಗಳು ಜೋರಾಗಿವೆ. ಅಲ್ಲದೆ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹತ್ರಾಸ್‍ಗೆ ತೆರಳಲು ಯತ್ನಿಸಿದ್ದರು. ಆದರೆ ಪೊಲೀಸರು ಅವರನ್ನು ತಡೆದು ಮರಳಿ ದೆಹಲಿಗೆ ಕಳುಹಿಸಿದ್ದರು. ಬಳಿಕ ಇಂದು ಸಹ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

  • ಅತ್ಯಾಚಾರಿಗಳಿಗೆ ಕಠೋರ ಶಿಕ್ಷೆ- ಯೋಗಿ ಆದಿತ್ಯನಾಥ್ ಭರವಸೆ

    ಅತ್ಯಾಚಾರಿಗಳಿಗೆ ಕಠೋರ ಶಿಕ್ಷೆ- ಯೋಗಿ ಆದಿತ್ಯನಾಥ್ ಭರವಸೆ

    ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖೇದ ವ್ಯಕ್ತಪಡಿಸಿದ್ದು, ಅತ್ಯಾಚಾರಿಗಳಿಗೆ  ಕಠೋರ ಶಿಕ್ಷೆ ನೀಡಲಾಗುವುದು. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದಲ್ಲಿ ತಾಯಿ ಹಾಗೂ ಸಹೋದರಿಯರ ಘನತೆಗೆ ಧಕ್ಕೆಯುಂಟು ಮಾಡುವರನ್ನು ನಾಶ ಮಾಡಲಾಗುವುದು ಹಾಗೂ ಅಂತಹವರಿಗೆ ಅನುಕರಣೀಯ ರೀತಿ ಶಿಕ್ಷೆ ವಿಧಿಸಲಾಗುವುದು. ಅಲ್ಲದೆ ನಮ್ಮ ತಾಯಂದಿರು ಹಾಗೂ ಸಹೋದರಿಯರ ಗೌರವಕ್ಕೆ ಧಕ್ಕೆ ತರುವವರನ್ನು ಸರ್ವನಾಶ ಮಾಡಲಾಗುವುದು. ಭವಿಷ್ಯದಲ್ಲಿ ಮಾದರಿಯಾಗುವ ರೀತಿಯ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ನಿಮ್ಮ ಯುಪಿ ಸರ್ಕಾರ ಪ್ರತಿಯೊಬ್ಬ ತಾಯಿ ಹಾಗೂ ಸಹೋದರಿಯರ ಸುರಕ್ಷತೆ ಮತ್ತು ಭದ್ರತೆಗೆ ಬದ್ಧವಾಗಿದೆ. ಇದು ನಮ್ಮ ಭರವಸೆ ಹಾಗೂ ದೃಢ ಸಂಕಲ್ಪವಾಗಿದೆ ಎಂದು ಯೋಗಿ ಆದಿತ್ಯನಾಥ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಯುಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಗುರುವಾರ ಹತ್ರಾಸ್‍ಗೆ ತೆರಳಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ಮರಳಿ ದೆಹಲಿಗೆ ಕರೆ ತಂದಿದ್ದರು. ಯುಪಿ ಅತ್ಯಾಚಾರ ಪ್ರಕರಣದ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಹೇಳಿಕೆ ನೀಡಿದ್ದಾರೆ.

    ಗುರುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಈ ಕುರಿತು ಆಕ್ರೋಶ ವ್ಯಕ್ತಪಡಿಸಿ, ಯೋಗಿಯ ಯುಪಿಯಲ್ಲಿ ದಲಿತರು, ಅಲ್ಪಸಂಖ್ಯಾತರಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಕಿಡಿ ಕಾರಿದ್ದರು. ಹೀಗೆ ದೇಶಾದ್ಯಂತ ವಿವಿಧ ನಾಯಕರು ಹತ್ರಾಸ್ ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.

  • ಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ

    ಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ

    ನವದೆಹಲಿ: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಯುವತಿಯ ಮೇಲೆ ಕಾಮುಕರ ಅಟ್ಟಹಾಸ ಮೆರೆದು ಸಾವಿಗೆ ಕಾರಣವಾಗಿರುವ ಕುರಿತು ದೇಶಾದ್ಯಂತ ಆಕ್ರೋಶ ಹೊರಹಾಕುತ್ತಿರುವ ಬೆನ್ನಲ್ಲೇ, ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಆಲಿಘಢ ಐಜಿ ಪಿಯೂಷ್ ಮೊರ್ಡಿಯಾ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

    ನಾಲ್ವರು ವ್ಯಕ್ತಿಗಳು ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲ್ಪಟ್ಟ ಹತ್ರಾಸ್ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ. ಸಾಮೂಹಿಕ ಅತ್ಯಾಚಾರವಾಗಿದೆ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಉಲ್ಲೇಖವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ – ಸಂತ್ರಸ್ತೆ ಕುಟುಂಬ ಹೊರಗಿಟ್ಟು 2.30ಕ್ಕೆ ಪೊಲೀಸರಿಂದ್ಲೇ ಅಂತ್ಯಕ್ರಿಯೆ!

    ಸೆಪ್ಟೆಂಬರ್ 22ರಂದು ಯುವತಿ ಮೂವರನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾಳೆ. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರವಾಗಿರುವುದು ದೃಢಪಟ್ಟಿಲ್ಲ. ಕೆಲವೊಂದು ಸ್ಯಾಂಪಲ್ಸ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ಘಟನೆ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಐಜಿ ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

    ಇದೇ ತಿಂಗಳ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದಾರೆ. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ನಿನ್ನೆ ಮೃತಪಟ್ಟಿದ್ದಳು. ಇದನ್ನೂ ಓದಿ: ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ

    ಯುವತಿ ಸಾವನ್ನಪ್ಪಿದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ಮಧ್ಯೆ ಉತ್ತರಪ್ರದೇಶದ ಪೊಲೀಸರು ಯುವತಿಯ ಕುಟುಂಬಕ್ಕೆ ತಿಳಿಯದಂತೆ ಮೃತದೇಹವನ್ನು ಅಸ್ಪತ್ರೆಯಿಂದ ಶಿಫ್ಟ್ ಮಾಡಿದ್ದಾರೆ ಎಂದು ಸಹೋದರ ಗಂಭೀರವಾಗಿ ಆರೋಪ ಮಾಡಿದ್ದಾರೆ. ಯುವತಿಯ ತಂದೆ ಹಾಗೂ ಸಹೋದರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಮಗೆ ಗೊತ್ತಾಗಂದೆ ಪೊಲೀಸರು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಸಾಗಿಸಿದ್ದಾರೆ ಎಂದು ಕೂಡ ಸಹೋದರ ದೂರಿದ್ದರು. ಇದನ್ನೂ ಓದಿ: ಗ್ಯಾಂಗ್‍ರೇಪ್, ಸಾವು ಪ್ರಕರಣ – ಅಪರಾಧಿಗಳನ್ನ ಗಲ್ಲಿಗೇರಿಸಿಯೆಂದ ಅಕ್ಷಯ್‍ಗೆ ರಮ್ಯಾ ತಿರುಗೇಟು

    ಹಿಂದೂ ಸಂಪ್ರದಾಯದಂತೆ ಆಕೆಯ ಅಂತ್ಯಸಂಸ್ಕಾರ ಮಾಡಬೇಕು ಎಂದು ಬಯಸಿದ್ದೆವು. ಇತ್ತ ನಾವು ಪ್ರತಿಭಟನೆಯಲ್ಲಿ ತೊಡಗಿದ್ದಾಗ, ಅತ್ತ ಸಹೋದರಿಯ ಅಂತ್ಯಸಂಸ್ಕಾರವನ್ನು ಪೊಲೀಸರು ಮುಗಿಸಿಯೇ ಬಿಟ್ಟಿದ್ದಾರೆ. ಅವರು ಒತ್ತಾಯಪೂರ್ವಕವಾಗಿ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಅಲ್ಲದೆ ಕೊನೆಯ ಬಾರಿಗೆ ಮಗಳ ಮುಖವನ್ನು ನೋಡಲು ಕೂಡ ಬಿಟ್ಟಿಲ್ಲ ಅಂತ ಯುವತಿಯ ತಂದೆ ಕಣ್ಣೀರು ಹಾಕಿದ್ದರು. ಇದನ್ನೂ ಓದಿ: ಮತ್ತೊಮ್ಮೆ ಭಾರತದ ಮಗಳು ಭೀಕರವಾಗಿ ಹಿಂಸೆಗೊಳಗಾಗಿದ್ದಾಳೆ: ಯುವರಾಜ್