Tag: ಹತ್ತಿ

  • ತೂಕದ ಯಂತ್ರಕ್ಕೆ ಕಂಟ್ರೋಲರ್ – ಅನ್ನದಾತರ ಅನ್ನಕ್ಕೆ ಕನ್ನ

    ತೂಕದ ಯಂತ್ರಕ್ಕೆ ಕಂಟ್ರೋಲರ್ – ಅನ್ನದಾತರ ಅನ್ನಕ್ಕೆ ಕನ್ನ

    ಯಾದಗಿರಿ: ತೂಕದ ಯಂತ್ರಕ್ಕೆ ಕಂಟ್ರೋಲರ್ ಅಳವಡಿಸಿ ಅನ್ನದಾತರ ಅನ್ನಕ್ಕೆ ಕನ್ನ ಹಾಕುವ ದಂಧೆ ಯಾದಗಿರಿಯಲ್ಲಿ ಭರ್ಜರಿಯಾಗಿ ನಡೆಯುತ್ತದೆ.

    ಜಿಲ್ಲೆಯಲ್ಲಿ ಸದ್ಯ ಹತ್ತಿ ಮಾರಾಟ ಜೋರಾಗಿದ್ದು, ಹತ್ತಿ ಖರೀದಿಗಾಗಿ ರಾತ್ರೋರಾತ್ರಿ ಅನಧಿಕೃತ ದಲ್ಲಾಳಿಗಳ ಖಾಸಗಿ ಖರೀದಿ ಕೇಂದ್ರಗಳು ನಾಯಿ ಕೊಡೆಯಂತೆ ಎದ್ದಿವೆ. ವಿವಿಧ ಗ್ರಾಮಗಳ ರಸ್ತೆ ಬದಿ ಹಾಕಲಾಗಿರುವ ಈ ಅನಧಿಕೃತ ಹತ್ತಿ ಖರೀದಿ ಕೇಂದ್ರದಲ್ಲಿ, ರೈತರು ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಹತ್ತಿಯ ತೂಕದಲ್ಲಿ ಹಾಡ ಹಗಲೇ ದಲ್ಲಾಳಿಗಳು ಮಹಾ ಮೋಸ ಮಾಡುತ್ತಿದ್ದಾರೆ.

    ತೂಕದ ಯಂತ್ರದಲ್ಲಿ ಕಂಟ್ರೋಲ್ ಅಳವಡಿಸಲಾಗಿದ್ದು ಇದರಿಂದ ಒಂದು ಕ್ವಿಂಟಲ್ ಹತ್ತಿ ಕೇವಲ 40 ಕೆಜಿ ತೋರಿಸುತ್ತದೆ. ಈ ಮೋಸವನ್ನು ಸತ್ವಃ ರೈತರೆ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದ ರೈತರು, ಅನಧಿಕೃತ ದಲ್ಲಾಳಿಗಳ ಹಾಕಿರುವ ಶೆಡ್ ಗಳಲ್ಲಿ ಹತ್ತಿ ಮಾರಾಟ ಮಾಡಲು ಹೋದಾಗ ಈ ಮೊಸದ ಜಾಲ ಬೆಳಕಿಗೆ ಬಂದಿದೆ. ಈ ಬಗ್ಗೆ ದಲ್ಲಾಳಿಗಳನ್ನು ರೈತರು ತರಾಟೆ ತೆಗೆದುಕೊಂಡಾಗ ಅಲ್ಲಿಂದ ದಲ್ಲಾಳಿಗಳು ಎಸ್ಕೇಪ್ ಆಗಿದ್ದಾರೆ.

  • ದುಷ್ಕರ್ಮಿಗಳಿಂದ ಜಮೀನಿನಲ್ಲಿದ್ದ  ಹತ್ತಿ ಬೆಳೆ ನಾಶ

    ದುಷ್ಕರ್ಮಿಗಳಿಂದ ಜಮೀನಿನಲ್ಲಿದ್ದ ಹತ್ತಿ ಬೆಳೆ ನಾಶ

    ಹಾವೇರಿ: ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ದುಷ್ಕರ್ಮಿಗಳು ನಾಶ ಮಾಡಿದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಮಲ್ಲೂರು ಗ್ರಾಮದ ರುದ್ರಪ್ಪ ಹರಿಜನ ಮತ್ತು ಹನುಮಂತಪ್ಪ ಸಂಜೀವಪ್ಪ ಎಂಬವರಿಗೆ ಸೇರಿದ್ದ ಜಮೀನಿನ ಮೇಲೆ ದುಷ್ಕರ್ಮಿಗಳ ದಾಳಿ ಮಾಡಿ ಹೋಗಿದ್ದಾರೆ.

    ಇಬ್ಬರು ರೈತರು ತಮ್ಮ 3 ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆಯನ್ನು ಬೆಳೆದಿದ್ದರು. ಆದರೆ ಇಂದು ಹತ್ತಿ ಬೆಳೆಯನ್ನು ದುಷ್ಕರ್ಮಿಗಳು ಯಾರೂ ಇಲ್ಲದ ವೇಳೆ ಜಮೀನಿಗೆ ನುಗ್ಗಿ  ಬೆಳೆಯನ್ನು ನಾಶಮಾಡಿ ಹೋಗಿದ್ದಾರೆ.

    ಘಟನೆಯಿಂದ ರೈತರ ಕುಟುಂಬಗಳು ಕಂಗಲಾಗಿದ್ದು, ಕುಟುಂಬದ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಘಟನೆ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಕಸ್ಮಿಕ ಅಗ್ನಿ ಅವಘಡ: 300 ಕ್ವಿಂಟಾಲ್ ಹತ್ತಿ ಭಸ್ಮ

    ಆಕಸ್ಮಿಕ ಅಗ್ನಿ ಅವಘಡ: 300 ಕ್ವಿಂಟಾಲ್ ಹತ್ತಿ ಭಸ್ಮ

    ಹಾವೇರಿ: ನಗರದ ಹೊರವಲಯದಲ್ಲಿರುವ ಜಿನ್ನಿಂಗ್ ಫ್ಯಾಕ್ಟರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಕರಕಲಾಗಿದೆ.

    ನಗರದ ಫಕ್ಕೀರಗೌಡ ಹೊಸಗೌಡರ ಎಂಬವರಿಗೆ ಸೇರಿದ ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಫ್ಯಾಕ್ಟರಿಯಲ್ಲಿ ಶೇಖರಿಸಿಟ್ಟಿದ್ದ ಸುಮಾರು 300 ಕ್ವಿಂಟಾಲ್ ಹತ್ತಿ ಸುಟ್ಟು ಕರಕಲಾಗಿದೆ. ಸುಮಾರು ಹದಿನೈದು ಲಕ್ಷ ರೂಪಾಯಿ ಮೌಲ್ಯದ ಹತ್ತಿ ಬೆಂಕಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿರಬಹುದೆಂದು ಅಗ್ನಿಶಾಮಕ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಸ ವರ್ಷದಂದೇ ನಡುರಸ್ತೆಯಲ್ಲಿ ಹೊತ್ತಿ ಉರಿದ ಹತ್ತಿ ತುಂಬಿದ ಲಾರಿ!

    ಹೊಸ ವರ್ಷದಂದೇ ನಡುರಸ್ತೆಯಲ್ಲಿ ಹೊತ್ತಿ ಉರಿದ ಹತ್ತಿ ತುಂಬಿದ ಲಾರಿ!

    ರಾಯಚೂರು: ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ರೆ ಕೊಪ್ಪಳದ ಮುನಿರಾಬಾದ್ -ಹೊಸಪೇಟೆ ಮಧ್ಯದ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಯೊಂದು ಸುಟ್ಟು ಭಸ್ಮವಾಗಿದೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಯಚೂರಿನಿಂದ ದಾವಣಗೆರೆ ಮಾರ್ಗದಲ್ಲಿ ಹೊರಟಿದ್ದ ಹತ್ತಿ ತುಂಬಿದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಲಾರಿ ವೇಗವಾಗಿ ಚಲಿಸುತ್ತಿದ್ದರಿಂದ ಬೆಂಕಿ ಎಲ್ಲೆಡೆ ಹಬ್ಬಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

    ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು, ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಡುರಸ್ತೆಯಲ್ಲೆ ಲಾರಿ ಹೊತ್ತಿ ಉರಿದಿದ್ದರಿಂದ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿತ್ತು.