Tag: ಹತ್ತಿ

  • ಅಮೆರಿಕದ ಟ್ಯಾರಿಫ್‌ ವಾರ್‌ ಬೆನ್ನಲ್ಲೇ ಹತ್ತಿ ಆಮದು ಸುಂಕ ವಿನಾಯಿತಿ ಡಿ.31ರವರೆಗೆ ವಿಸ್ತರಣೆ

    ಅಮೆರಿಕದ ಟ್ಯಾರಿಫ್‌ ವಾರ್‌ ಬೆನ್ನಲ್ಲೇ ಹತ್ತಿ ಆಮದು ಸುಂಕ ವಿನಾಯಿತಿ ಡಿ.31ರವರೆಗೆ ವಿಸ್ತರಣೆ

    ನವದೆಹಲಿ: ಅಮೆರಿಕ (USA) 50% ಸುಂಕ ಸಮರ ಆರಂಭಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಹತ್ತಿ (Cotton) ಆಮದು ಸುಂಕ ವಿನಾಯಿತಿ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

    ವಿಶ್ವದ ಎರಡನೇ ಅತಿದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರವಾಗಿರುವ ಭಾರತವು ಸೆಪ್ಟೆಂಬರ್ ಅಂತ್ಯದವರೆಗೆ ಹತ್ತಿ ಆಮದಿನ ಮೇಲೆ 11% ಸುಂಕದಿಂದ ವಿನಾಯಿತಿ ನೀಡುವುದಾಗಿ ಘೋಷಿಸಿತ್ತು. ಈಗ ವಿನಾಯಿತಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ.

    ರಫ್ತುದಾರರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಸಂಬಂಧ ಕೇಂದ್ರ ಸರ್ಕಾರವು ಸೆ.30 ರಿಂದ ಡಿ.31 ರವರಗೆ ಹತ್ತಿಯ ಮೇಲಿನ ಆಮದು ಸುಂಕ ವಿನಾಯಿತಿಯನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಹೇಳಿದೆ.

    ವ್ಯಾಪಾರ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಟ್ರಂಪ್‌ ಮೊದಲು 25% ತೆರಿಗೆ ವಿಧಿಸಿದ್ದರು. ಇದರ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ ಟ್ರಂಪ್‌ 25% ತೆರಿಗೆ ಹಾಕಿದ್ದಾರೆ. ಈ ಪರಿಣಾಮ ಭಾರತದಿಂದ ರಫ್ತಾಗುವ ಕೆಲ ವಸ್ತುಗಳ ಮೇಲೆ 50% ತೆರಿಗೆ ಹಾಕಲಾಗಿದೆ.

    ಟ್ರಂಪ್‌ ಎರಡನೇ ಆದೇಶ ಸೆ.27 ರಿಂದ ಜಾರಿಗೆ ಬಂದಿದ್ದು ಉಡುಪುಗಳು ಮತ್ತು ಆಭರಣಗಳಿಗೆ 50% ತೆರಿಗೆ ವಿಧಿಸಲಾಗಿದೆ. ಇದನ್ನೂ ಓದಿ: ಉಕ್ರೇನ್ ರಷ್ಯಾ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದ ಅಮೆರಿಕ

    2024 ರಲ್ಲಿ ಸುಮಾರು 22 ಬಿಲಿಯನ್ ಡಾಲರ್‌ ಮೌಲ್ಯದ ಉಡುಪುಗಳು ಮತ್ತು ಆಭರಣಗಳು ಅಮೆರಿಕ್ಕೆ ಭಾರತದಿಂದ ರಫ್ತಾಗಿತ್ತು. ಚೀನಾ, ವಿಯೆಟ್ನಾಂ ಮತ್ತು ಬಾಂಗ್ಲಾದೇಶದ ನಂತರ ಭಾರತವು ಅಮೆರಿಕದ ಉಡುಪು ಮಾರುಕಟ್ಟೆಯಲ್ಲಿ 5.8% ಪಾಲನ್ನು ಹೊಂದಿದೆ.

    ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ, ಬ್ರೆಜಿಲ್, ಅಮೆರಿಕ ಮತ್ತು ಆಫ್ರಿಕಾದಿಂದ ಹತ್ತಿಯನ್ನು ಭಾರತ ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ. ವರ್ಷಾಂತ್ಯದವರೆಗೆ ಸುಂಕ ವಿನಾಯಿತಿ ನೀಡುವುದರಿಂದ ಭಾರತೀಯ ಜವಳಿ ಕಂಪನಿಗಳು ಅಗ್ಗದ ಬೆಲೆಯಲ್ಲಿ ಹತ್ತಿಯನ್ನು ಆಮದು ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ಇದು ಅಮೆರಿಕದ ಬೇಡಿಕೆ ಕುಸಿತದಿಂದ ಆಗಿರುವ ಒತ್ತಡವನ್ನು ಕಡಿಮೆ ಮಾಡಲಿದೆ.

    ಆಮದು ಮಾಡಿಕೊಂಡ ಹತ್ತಿಯ ವೆಚ್ಚವು ಸ್ಥಳೀಯ ಸರಬರಾಜುಗಳಿಗಿಂತ ಸುಮಾರು 5% ರಿಂದ 7% ರಷ್ಟು ಕಡಿಮೆ ಇರಲಿದೆ ಮತ್ತು ಮತ್ತು ಗುಣಮಟ್ಟವೂ ಉತ್ತಮವಾಗಿದೆ ಎಂದು ಮುಂಬೈ ಮೂಲದ ವ್ಯಾಪಾರಿಯೊಬ್ಬರು ಹೇಳಿದರು.

    ಹೆಚ್ಚಿನ ಆಮದು ಡಿಸೆಂಬರ್ ತ್ರೈಮಾಸಿಕದ ಆಸುಪಾಸಿನಲ್ಲಿ ಸ್ಥಳೀಯ ಬೆಳೆ ಮಾರುಕಟ್ಟೆಗೆ ಬರುವ ಹೊತ್ತಿಗೆ ಬರುತ್ತದೆ. ಇದು ಸ್ಥಳೀಯ ಬೆಲೆಗಳನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.

  • ಯಾದಗಿರಿಯಲ್ಲಿ ಅಗ್ನಿ ಅವಘಡ – 2 ಕೋಟಿ ಮೌಲ್ಯದ ಹತ್ತಿ ಬೆಂಕಿಗೆ ಆಹುತಿ

    ಯಾದಗಿರಿಯಲ್ಲಿ ಅಗ್ನಿ ಅವಘಡ – 2 ಕೋಟಿ ಮೌಲ್ಯದ ಹತ್ತಿ ಬೆಂಕಿಗೆ ಆಹುತಿ

    ಯಾದಗಿರಿ: ರೈತರಿಂದ ಖರೀದಿಸಿ ಸಂಗ್ರಹಿಸಿಟ್ಟಿದ್ದ ಸುಮಾರು 2 ಕೋಟಿ ರೂ. ಮೌಲ್ಯದ 2 ಟನ್ ಹತ್ತಿ (Cotton) ಬೆಂಕಿಗೆ ಆಹುತಿಯಾದ (Fire Accident) ಘಟನೆ ನಗರದ (Yadgir) ಹೊರವಲಯದ ಆಶನಾಳ ಕ್ರಾಸ್ ಬಳಿಯ ಕಾಟನ್ ಮಿಲ್ ಒಂದರಲ್ಲಿ ನಡೆದಿದೆ.

    ಎಂ.ಡಿ.ಉಸ್ಮಾನ್ ಎಂಬವರಿಗೆ ಸೇರಿದ್ದ ಕಾಟನ್ ಮಿಲ್‍ನಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯ ವಿವಿಧ ಭಾಗಗಳ ರೈತರಿಂದ ಖರೀದಿಸಿದ ಹತ್ತಿಯನ್ನು ಸಂಗ್ರಹಿಸಿ ಇಡಲಾಗಿತ್ತು. ಸಂಜೆ ಸುಮಾರು 4:30ರ ವೇಳೆಗೆ ಹತ್ತಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಸಂಗ್ರಹಿಸಿಟ್ಟ ಹತ್ತಿ ಸಂಪೂರ್ಣ ಭಸ್ಮವಾಗಿದೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ – ಮನೆಯಲ್ಲಿದ್ದ 2 ಲಕ್ಷ ನಗದು, ಚಿನ್ನಾಭರಣ ಭಸ್ಮ

    ಹತ್ತಿಗೆ ಬೆಂಕಿ ಹೇಗೆ ತಗುಲಿದೆ ಎಂಬ ಬಗ್ಗೆ ನಿಖರವಾಗಿ ತಿಳಿದಿಲ್ಲ. ಅಗ್ನಿ ಅವಘಡದಿಂದಾಗಿ ಕಾಟನ್ ಮಿಲ್‍ನ ಮಾಲೀಕ ಭಾರೀ ನಷ್ಟ ಅನುಭವಿಸಿದ್ದು, ಆತಂಕಕ್ಕೊಳಗಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಓಡಿಹೋಗಿ ಮದುವೆಯಾದ ಪ್ರೇಮಿಗಳು – ಯುವಕನ ಪೋಷಕರ ಮೇಲೆ ಯುವತಿ ಕಡೆಯವರಿಂದ ಹಲ್ಲೆ

  • ಆಪರೇಷನ್ ವೇಳೆ ಮಹಿಳೆಯ ಹೊಟ್ಟೆಯಲ್ಲೇ ಉಳೀತು ಹತ್ತಿ – ಶಸ್ತ್ರಚಿಕಿತ್ಸಕರ ಮೇಲೆ ಕೇಸ್

    ಆಪರೇಷನ್ ವೇಳೆ ಮಹಿಳೆಯ ಹೊಟ್ಟೆಯಲ್ಲೇ ಉಳೀತು ಹತ್ತಿ – ಶಸ್ತ್ರಚಿಕಿತ್ಸಕರ ಮೇಲೆ ಕೇಸ್

    ಚಂಡೀಗಢ: ಸಿಸೇರಿಯನ್ ಹೆರಿಗೆಯ ಬಳಿಕ ಮಹಿಳೆಯ ಹೊಟ್ಟೆಯಲ್ಲಿ ಹತ್ತಿಯ ಸ್ವ್ಯಾಬ್ ಅನ್ನು ಬಿಟ್ಟಿದ್ದಕ್ಕಾಗಿ ವೈದ್ಯಕೀಯ ನಿರ್ಲಕ್ಷ್ತದ ಆರೋಪದ ಮೇಲೆ ಇಬ್ಬರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

    ಗುರುಗ್ರಾಮದ ಶಿವಾ ಆಸ್ಪತ್ರೆಯಲ್ಲಿ 2020ರ ನವೆಂಬರ್‌ನಲ್ಲಿ ಮಹಿಳೆಯೊಬ್ಬರಿಗೆ ಸಿಸೇರಿಯನ್ ಹೆರಿಗೆ ನಡೆಸಲಾಗಿತ್ತು. ಶಸ್ತ್ರ ಚಿಕಿತ್ಸೆಯೆಲ್ಲಾ ಮುಗಿದ ಬಳಿಕ ಮಹಿಳೆಗೆ ಹೊಟ್ಟೆ ನೋವು ಹಾಗೂ ಹೊಟ್ಟೆಯಲ್ಲಿ ಊತ ಪ್ರಾರಂಭವಾಗಿತ್ತು. ಮಹಿಳೆಯ ಪತಿ ಆಕೆಯನ್ನು ಮತ್ತೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರಿಗೆ ಕೆಲವು ಔಷಧಗಳನ್ನು ಕೊಟ್ಟು ಕಳುಹಿಸಲಾಗಿತ್ತು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಶಿವಾ ಆಸ್ಪತ್ರೆಯ ವೈದ್ಯರು ನೀಡಿದ ಔಷಧಗಳು ಫಲಕಾರಿಯಾಗುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆಯ ಹೊಟ್ಟೆಯಲ್ಲಿ ಏನಾದರೂ ಇರಬಹುದು ಎಂದು ಶಂಕಿಸಿ ಇನ್ನೊಂದು ಚಿಕಿತ್ಸೆ ನೀಡಲು ಪ್ರಾರಂಭಿಸಿದರು.

    ವಿಚಾರ ತಿಳಿದ ಶಿವ ಆಸ್ಪತ್ರೆ ಮಹಿಳೆಯ ಮನೆಗೆ ಅಂಬುಲೆನ್ಸ್ ಕಳುಹಿಸಿ ಆಕೆಯನ್ನು ಬಲವಂತವಾಗಿ ಕರೆತಂದು, ಆಕೆಯ ಹೊಟ್ಟೆಯಲ್ಲಿದ್ದ ಹತ್ತಿಯ ಸ್ವ್ಯಾಬ್ ಅನ್ನು ಹೊರ ತೆಗೆದಿದ್ದಾರೆ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ. ಜೊತೆಗೆ ಪ್ರಜ್ಞಾಹೀನಳಾಗಿದ್ದ ಹೆಂಡತಿಯ ಕೈಯಲ್ಲಿ ಕೆಲವು ಖಾಲಿ ಪತ್ರಗಳಿಗೆ ಸಹಿ ಕೂಡ ಹಾಕಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಎಣ್ಣೆ ದರ ಭಾರೀ ಇಳಿಕೆ – ಮನೆಯಲ್ಲೇ ಮಿನಿಬಾರ್‌ಗೆ ಅನುಮತಿ

    ಇದೀಗ ಶಿವಾ ಆಸ್ಪತ್ರೆಯ ಇಬ್ಬರು ವೈದ್ಯರ ಮೇಲೆ ಕೇಸ್ ದಾಖಲಾಗಿದೆ.

  • ಚಲಿಸುವ ವಾಹನಗಳಿಂದ ಹತ್ತಿ ಕಳ್ಳತನ – ಪ್ರಾಣವನ್ನೇ ಪಣಕ್ಕಿಟ್ಟು ಓಡುತ್ತಿದ್ದಾರೆ ಮಕ್ಕಳು

    ಚಲಿಸುವ ವಾಹನಗಳಿಂದ ಹತ್ತಿ ಕಳ್ಳತನ – ಪ್ರಾಣವನ್ನೇ ಪಣಕ್ಕಿಟ್ಟು ಓಡುತ್ತಿದ್ದಾರೆ ಮಕ್ಕಳು

    ರಾಯಚೂರು: ಹೊಟ್ಟೆಪಾಡಿಗೆ ಜನ ಏನೆನೋ ಕೆಲಸಗಳನ್ನು ಮಾಡ್ತಾರೆ, ಕಳ್ಳತನ ಕೂಡ ಹೊಟ್ಟೆ ಪಾಡಿಗಾಗಿ ಮಾಡುವ ಜನರಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ರಾಯಚೂರಿನಲ್ಲಿ ಚಿಕ್ಕಮಕ್ಕಳು, ಮಹಿಳೆಯರು ಪ್ರಾಣವನ್ನೇ ಪಣಕ್ಕಿಟ್ಟು ರೈತರು ಮಿಲ್ ಹಾಗೂ ಮಾರುಕಟ್ಟೆಗೆ ತರುವ ಹತ್ತಿಯನ್ನ ಕಳ್ಳತನ ಮಾಡುತ್ತಿದ್ದಾರೆ.

    ನಗರದ ಹೈದರಾಬಾದ್ ರಸ್ತೆಯಲ್ಲಿ ಎಸ್.ಪಿ ಕಚೇರಿಯಿಂದ ಓಪೆಕ್ ಆಸ್ಪತ್ರೆವರೆಗೆ ರೈತರ ಹತ್ತಿ ಕದಿಯಲು ಮಕ್ಕಳು ಹರಸಾಹಸವನ್ನು ಮಾಡುತ್ತಿದ್ದಾರೆ. ಇಲ್ಲಿನ ಕಾಟನ್ ಮಿಲ್ ಗಳ ಮುಂದೆ ಓಡಾಡುವ ವಾಹನಗಳ ಹಿಂದೆ ಪ್ರಾಣಾಪಾಯವನ್ನೂ ಲೆಕ್ಕಿಸದೆ ಓಡಿ ಹತ್ತಿ ಕದಿಯುತ್ತಾರೆ. ಟಾಟಾ ಏಸ್, ಟಂಟಂ, ಟ್ರ್ಯಾಕ್ಟರ್‍ ಗಳು ಯಾವ ವಾಹನವನ್ನೂ ಬಿಡದೆ ಹಿಂದೆ ಓಡುತ್ತಾರೆ. ಆಯಾತಪ್ಪಿ ಬಿದ್ದರೆ, ಹಿಂದಿನ ವಾಹನಗಳು ಡಿಕ್ಕಿ ಹೊಡೆದರೆ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ. ಚಿಂದಿ ಆಯುವವರು, ಸ್ಲಂ ಪ್ರದೇಶದ ಮಕ್ಕಳಿಂದ ಹುಚ್ಚು ಸಾಹಸ ನಡೆಯುತ್ತಿದ್ದು, ಕದ್ದ ಹತ್ತಿಯನ್ನು ಅರ್ಧ ಬೆಲೆಗೆ ವ್ಯಾಪಾರಿಗಳಿಗೆ ಮಾರಾಟ ಮಾಡಿ ಬದುಕುತ್ತಿದ್ದಾರೆ. ಇದನ್ನೂ ಓದಿ: ನಮ್ಮ ಜಗತ್ತು.. ನಮ್ಮ ವಿಶ್ವ.. ಐ ಲವ್ ಯೂ ಕಂದ

    ಮಕ್ಕಳು, ಮಹಿಳೆಯರ ಜೊತೆ ಪುರುಷರು ಸಹ ಪ್ರಾಣ ಒತ್ತೆಯಿಟ್ಟು ಪ್ರತೀ ದಿನ ಕ್ವಿಂಟಾಲ್‍ಗಟ್ಟಲೇ ಹತ್ತಿ ಕದಿಯುತ್ತಿದ್ದಾರೆ. ಆದರೆ ಮಿಲ್‍ಗೆ ಹತ್ತಿ ತರುವ ರೈತರು ಹಿಂದೆ ಬರುವ ಮಕ್ಕಳು ಎಲ್ಲಿ ಅಪಾಯಕ್ಕೆ ಒಳಗಾಗುತ್ತಾರೋ ಎಂಬ ಭಯದಲ್ಲಿದ್ದಾರೆ. ಹೀಗಾಗಿ ಬಡ ಮಕ್ಕಳಿಗೆ ಅಧಿಕಾರಿಗಳು ಸರಿಯಾದ ವ್ಯವಸ್ಥೆ ಮಾಡಬೇಕು. ವಾಹನಗಳ ಹಿಂದೆ ಬಿದ್ದು ಹತ್ತಿ ಕದಿಯುವುದನ್ನ ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಈಗ ಹತ್ತಿ ಬೆಳೆಯನ್ನ ಮಾರಾಟ ಮಾಡುವ ಸಮಯವಾಗಿರುವುದರಿಂದ ರೈತರ ಬೆಳೆ ತುಂಬಿದ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಹೀಗಾಗಿ ಬೆಳಗ್ಗೆಯಿಂದಲೇ ಮಿಲ್ ಹತ್ತಿರ ಬರುವ ಮಕ್ಕಳು ಮಹಿಳೆಯರು ವಾಹನಗಳ ಹಿಂದೆ ಬಿದ್ದು ಹತ್ತಿ ಕದಿಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‍ಗೆ 8,500 ವರೆಗೆ ಮಾರಾಟವಾಗುವ ಹತ್ತಿಯನ್ನು 1 ಕೆ.ಜಿ ಗೆ 30 ರೂಪಾಯಿಗೆ ಯಂತೆ ಮಾರಾಟ ಮಾಡುತ್ತಾರೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ. ಇದನ್ನೂ ಓದಿ: ಭಾರತ Vs ಪಾಕಿಸ್ತಾನ ಮ್ಯಾಚ್ – 10 ಸೆಕೆಂಡ್ ಜಾಹೀರಾತಿಗೆ ಲಕ್ಷ ಲಕ್ಷ ರೇಟ್

  • ಸಕ್ಕರೆ, ಹತ್ತಿಗಾಗಿ ಭಾರತದ ಕದ ತಟ್ಟಿದ ಇಮ್ರಾನ್ ಖಾನ್

    ಸಕ್ಕರೆ, ಹತ್ತಿಗಾಗಿ ಭಾರತದ ಕದ ತಟ್ಟಿದ ಇಮ್ರಾನ್ ಖಾನ್

    ನವದೆಹಲಿ: ಪಾಕಿಸ್ತಾನ ಹತ್ತಿ ಮತ್ತು ಸಕ್ಕರೆಗಾಗಿ ಭಾರತದ ಕದ ತಟ್ಟಿದೆ. ಇಮ್ರಾನ್ ಖಾನ್ ಸರ್ಕಾರ ಭಾರತದ ಜೊತೆ ವ್ಯಾಪಾರಕ್ಕೆ ಮುಂದಾಗಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

    2021 ಜೂನ್ ವರೆಗೆ ಭಾರತದ ಹತ್ತಿ ಆಮದು ಮಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಶೀಘ್ರದಲ್ಲಿಯೇ ಸಕ್ಕರೆ ಆಮದು ಮಾಡಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಾಕ್ ಮಾಧ್ಯಮಗಳ ವರದಿ ಮಾಡಿವೆ.

    ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ತಜ್ಞರ ವರದಿ ಸಲ್ಲಿಕೆಯ ಬೆನ್ನಲ್ಲೇ ಇಮ್ರಾನ್ ಖಾನ್ ಸರ್ಕಾರ ಭಾರತದ ಜೊತೆ ವ್ಯಾಪರಕ್ಕೆ ಮುಂದಾಗಿದೆ. ಸಕ್ಕರೆ ಮತ್ತು ಹತ್ತಿಗೆ ಪಾಕಿಸ್ತಾನ ಕೊರತೆ ಅನುಭವಿಸುತ್ತಿದ್ದು. ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳೋದು ದುಬಾರಿ ಆಗಲಿದೆ. ಹಾಗಾಗಿ ತನ್ನ ಒಣಜಂಬವನ್ನ ಬದಿಗಿರಿಸಿ ಭಾರತದ ಮುಂದೆ ತಲೆ ಬಾಗಿದೆ.

    19 ತಿಂಗಳಿನಿಂದ ವ್ಯಾಪಾರ ಸ್ಥಗಿತ
    ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿರುವ ವಿಚಾರ. 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದುಗೊಳಿಸಲಾಗಿತ್ತು. ಆದ್ರೆ ಪಾಕಿಸ್ತಾನ ಈ ವಿಷಯದಲ್ಲಿ ಮೂಗಿ ತೂರಿಸಿ ವಿಶ್ವದಲ್ಲಿ ನಗೆಪಾಟಲಾಗಿತ್ತು. ಆರ್ಟಿಕಲ್ 370 ರದ್ದುಗೊಳಿಸಿದ್ದ ದಿನದಿಂದ ಪಾಕಿಸ್ತಾನ ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನ ಆಮದು ಮಾಡಿಕೊಳ್ಳೋದನ್ನ ನಿಲ್ಲಿಸಿತ್ತು.

    ಇದೀಗ ಆರ್ಥಿಕ ತಜ್ಞರ ಸಲಹೆ ಮೇರೆಗೆ ಭಾರತದ ಮುಂದೆ ಬಂದು ಪಾಕಿಸ್ತಾನ ನಿಂತಿದೆ. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ವಸ್ತುಗಳ ಮೇಲೆ ಶೇ.200ರಷ್ಟು ಆಮದು ಶುಲ್ಕ ವಿಧಿಸುತ್ತಿದೆ. ಇದರ ಜೊತೆಗೆ ಪಾಕಿಸ್ತಾನದ ಜೊತೆಗಿನ ಹಲವು ವ್ಯವಹಾರಿಕ ಸಂಬಂಧವನ್ನ ಕಡಿತಗೊಳಿಸಿಕೊಂಡಿತ್ತು.

  • ರೈತರಿಗೆ ಗಾಯದ ಮೇಲೆ ಬರೆ ಎಳೆದ ನಿವಾರ್- ಹತ್ತಿ, ಭತ್ತದ ಬೆಳೆ ನಾಶ

    ರೈತರಿಗೆ ಗಾಯದ ಮೇಲೆ ಬರೆ ಎಳೆದ ನಿವಾರ್- ಹತ್ತಿ, ಭತ್ತದ ಬೆಳೆ ನಾಶ

    ರಾಯಚೂರು: ನೆರೆಯಿಂದ ಕಂಗೆಟ್ಟಿದ್ದ ರೈತರಿಗೆ ಇದೀಗ ಮತ್ತೆ ನಿವಾರ್ ನಿಂದ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಜಿಲ್ಲೆಯ ರೈತರು ನಿವಾರ್ ಚಂಡಮಾರುತದಿಂದ ಮತ್ತೆ ಹಾನಿಗೊಳಗಾಗಿದ್ದಾರೆ.

    ಸತತವಾಗಿ ಸುರಿದ ಮಳೆಗೆ ಹತ್ತಿ, ಭತ್ತ ಬೆಳೆ ನಾಶವಾಗಿದ್ದು, ರೈತರು ಮತ್ತೆ ನಷ್ಟಕ್ಕೆ ಸಿಲುಕಿದ್ದಾರೆ. ಬಿಡಿಸಿ ತಂದಿದ್ದ ಹತ್ತಿ, ಭತ್ತದ ಬೆಳೆ ಮಳೆಗೆ ಒದ್ದೆಯಾದರೆ, ಜಮೀನಿನಲ್ಲಿದ್ದ ಹತ್ತಿ, ಭತ್ತ ಬೆಳೆ ಸಹ ಸಂಪೂರ್ಣ ನೆಲಕ್ಕಚ್ಚಿದೆ. ಸ್ವಲ್ಪ ನಿರೀಕ್ಷೆಯಲ್ಲಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸತತವಾಗಿ ಸುರಿದ ಮಳೆಗೆ ರೈತರ ಕನಸೆಲ್ಲಾ ನುಚ್ಚು ನೂರಾಗಿದ್ದು, ಅತೀವೃಷ್ಟಿಯಿಂದ ಪಾರಾಗಿ ಜಮೀನಿಗೆ ಖರ್ಚುಮಾಡಿದ ಹಣವಾದರೂ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರಾಯಚೂರಿನ ಭತ್ತ ಹಾಗೂ ಹತ್ತಿ ಬೆಳೆಗಾರರಿಗೆ ನಿವಾರ್ ನಿರಾಸೆ ಉಂಟುಮಾಡಿದೆ. ಚಂಡಮಾರುತದ ಪರಿಣಾಮ ಎರಡು ದಿನ ಸುರಿದ ಮಳೆ, ಗಾಳಿಗೆ ಜಿಲ್ಲೆಯ ಸಿರವಾರ, ಮಾನ್ವಿ, ದೇವದುರ್ಗ ಸೇರಿ ಹಲವೆಡೆ ಭತ್ತದ ಬೆಳೆ ಹಾನಿಗೀಡಾಗಿದೆ.

    ಎಕರೆಗೆ 45 ಚೀಲ ಭತ್ತ ಸಿಗುವಲ್ಲಿ ಈ ವರ್ಷ 25 ಚೀಲದ ನಿರೀಕ್ಷೆಯಿತ್ತು. ಆದರೆ ಚಂಡಮಾರುತ ಅದನ್ನೂ ಹುಸಿಗೊಳಿಸಿ ರೈತರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಭತ್ತ ಒದ್ದೆಯಾಗಿರುವುದರಿಂದ ದಲ್ಲಾಳಿಗಳು 75 ಕೆ.ಜಿ ಚೀಲದ ಭತ್ತಕ್ಕೆ 850 ರೂ. ಹೇಳುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಮಾಡಿದರೆ ಮಾತ್ರ ರೈತರು ಸಂಕಷ್ಟದಿಂದ ಪಾರಾಗಬಹುದು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಒಂದು ಎಕರೆ ಭತ್ತ ಕಟಾವು ಮಾಡಲು 7,500 ರೂ. ಖರ್ಚಾಗುತ್ತದೆ. ಗೊಬ್ಬರ, ಕೀಟನಾಶಕ, ಕೂಲಿ ಎಲ್ಲ ಸೇರಿ ಎಕರೆಗೆ 35 ಸಾವಿರ ರೂಪಾಯಿ ಖರ್ಚು ತಗಲುತ್ತೆ. ಆದರೆ ಬೆಳೆಹಾನಿ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಿರುವುದು ರೈತರನ್ನು ಕಂಗೆಡಿಸಿದೆ. ಹತ್ತಿ ಬೆಳೆದ ರೈತರ ಪರಸ್ಥಿತಿಯೂ ಬೇರೆಯಾಗಿಲ್ಲ. ಇನ್ನೇನು ಹತ್ತಿ ಬಿಡಿಸಬೇಕು ಅನ್ನೋ ಸಮಯದಲ್ಲಿ ಸುರಿದ ಮಳೆ ಬೆಳೆಯನ್ನ ಹಾಳು ಮಾಡಿದೆ. ಹತ್ತಿ ಬೆಳೆ ಒದ್ದೆಯಾಗಿರುವುದರಿಂದ ಇಳುವರಿ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಹತ್ತಿ ಹಾಗೂ ಭತ್ತ ಬೆಳೆಗಾರರು ಸರ್ಕಾರ ನಮ್ಮ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಭತ್ತ, ಹತ್ತಿ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ – ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

    ಭತ್ತ, ಹತ್ತಿ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ – ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

    ರಾಯಚೂರು: ಭತ್ತ ಹಾಗೂ ಹತ್ತಿ ಬೆಳೆಗಳ ಬೆಲೆ ಕುಸಿತವಾಗಿರುವುದರಿಂದ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ರೈತ ಸಂಘಗಳ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

    ಭತ್ತ, ಸಜ್ಜೆ, ಹತ್ತಿ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಅದಕ್ಕೆ ರಾಜ್ಯ ಸರ್ಕಾರ 300 ರೂಪಾಯಿ ಪ್ರೋತ್ಸಾಹ ಧನ ಕೊಡಬೇಕು. ಭತ್ತಕ್ಕೆ 1,850 ರೂಪಾಯಿ ಕೊಟ್ಟರೆ ರಾಜ್ಯ ಸರ್ಕಾರ 300 ರೂಪಾಯಿ ಪ್ರೋತ್ಸಾಹ ಧನ ನೀಡಿ ಆರ್ಥಿಕ ದಿವಾಳಿಯತ್ತ ಸಾಗಿರುವ ರೈತರನ್ನ ಕಾಪಾಡಬೇಕು ಅಂತ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿಗಳಿಗೆ ಖರೀದಿ ಕೇಂದ್ರ ಆರಂಭಿಸಲು ಸಾಕಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ಸಿರವಾರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಮೆರವಣಿಗೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಡಲೇ ಎಲ್ಲಾ ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಆರಂಭಿಸಬೇಕು ಅಂತ ಒತ್ತಾಯಿಸಿದ್ದಾರೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟವಧಿ ಧರಣಿ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

    ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಹಂಪಯ್ಯ ನಾಯಕ್, ತಡವಾಗಿ ಭತ್ತ ಖರೀದಿ ಕೇಂದ್ರ ಆರಂಭಿಸಿದರೆ ಶ್ರೀಮಂತ ರೈತರಿಗೆ ಅನುಕೂಲವಾಗುತ್ತೆ. ಬಡ ರೈತರು ಬೀದಿಗೆ ಬರುತ್ತಾರೆ,. ಹೀಗಾಗಿ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಅಂತ ಆಗ್ರಹಿಸಿದರು.

  • ಲಾಕ್‍ಡೌನ್ ಎಫೆಕ್ಟ್ – ಯಾದಗಿರಿಯಲ್ಲಿ 24 ಹತ್ತಿ ಕಾರ್ಖಾನೆಗಳು ಬಂದ್

    ಲಾಕ್‍ಡೌನ್ ಎಫೆಕ್ಟ್ – ಯಾದಗಿರಿಯಲ್ಲಿ 24 ಹತ್ತಿ ಕಾರ್ಖಾನೆಗಳು ಬಂದ್

    ಯಾದಗಿರಿ: ಒಂದು ಕಡೆ ಮಹಾಮಾರಿ ಕೊರೊನಾ ತನ್ನ ರೌದ್ರ ನರ್ತನದಿಂದ ಇಡೀ ವಿಶ್ವದ ಆರೋಗ್ಯವನ್ನೇ ಕಿತ್ತುಕೊಂಡಿದೆ, ಈಗ ದೇಶದ ಆರ್ಥಿಕತೆಯನ್ನು ಸಹ ಕಿತ್ತುಕೊಳ್ಳುತ್ತಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಯಾದಗಿರಿಯಲ್ಲಿ 24 ಹತ್ತಿ ಕಾರ್ಖಾನೆಗಳು ಬಂದ್ ಆಗಿವೆ.

    ಹೌದು. ಯಾದಗಿರಿಯಲ್ಲಿ ಹತ್ತಿಯನ್ನು ಅತೀ ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಹತ್ತಿಗೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯಿದೆ. ಇಲ್ಲಿ ಬೆಳೆಯುವ ಹತ್ತಿ ಚೀನಾ, ಬಾಂಗ್ಲಾದೇಶ ಸೇರಿದಂತೆ ಏಷ್ಯಾದ ಅನೇಕ ರಾಷ್ಟ್ರಗಳಿಗೆ ರಫ್ತು ಆಗುತ್ತದೆ. ಹೀಗಾಗಿ ಯಾದಗಿರಿ ಜಿಲ್ಲೆಯಲ್ಲಿ 25 ಹತ್ತಿ ಕಾರ್ಖಾನೆಗಳಿವೆ.

    ಈ ಎಲ್ಲಾ ಕಾರ್ಖಾನೆಯ ಆದಾಯ ಒಂದು ಸೀಜನ್‍ನಲ್ಲಿ ನೂರಾರು ಕೋಟಿ ಇತ್ತು. ಆದರೆ ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ಯಾದಗಿರಿಯ 25 ಹತ್ತಿ ಕಾರ್ಖಾನೆಗಳ ಪೈಕಿ 24 ಕಾರ್ಖಾನೆಗಳು ಬಂದ್ ಆಗಿವೆ. ಆದ್ದರಿಂದ ಕೇವಲ ಒಂದು ಕಾರ್ಖಾನೆ ಮಾತ್ರ ಭಾರತೀಯ ಹತ್ತಿ ನಿಗಮದ ಸಹಯೋಗದಲ್ಲಿ ರೈತರಿಂದ ಹತ್ತಿ ಖರೀದಿಸುತ್ತಿದೆ.

    ಈಗಾಗಲೇ ಕಾರ್ಖಾನೆಯಲ್ಲಿ ರಪ್ತಿಗೆ ತಯಾರಾಗಿರುವ ಕೋಟಿಗಟ್ಟಲೆ ಬೆಲೆ ಬಾಳುವ ಹತ್ತಿ, ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಿಲ್ಲದೆ ಕಾರ್ಖಾನೆಯಲ್ಲಿಯೆ ಕೊಳೆಯುತ್ತಿದೆ. ಇದರಿಂದ ಹತ್ತಿ ಕಾರ್ಖಾನೆ ಮಾಲೀಕರು, ರೈತರು ಮತ್ತು ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ಲಾಕ್‍ಡೌನ್ ಸಡಿಲಿಕೆ ಆದ್ರೂ ತಪ್ಪದ ರೈತರ ಗೋಳು

    ಲಾಕ್‍ಡೌನ್ ಸಡಿಲಿಕೆ ಆದ್ರೂ ತಪ್ಪದ ರೈತರ ಗೋಳು

    – ಹತ್ತಿ ಮಾರಾಟ ಮಾಡಲು ಪರದಾಟ

    ಯಾದಗಿರಿ: ಲಾಕ್‍ಡೌನ್ ಸಡಿಲಿಕೆ ಆದರೂ ರೈತರ ಗೋಳು ಮಾತ್ರ ತಪ್ಪಿಲ್ಲ. ಇದೀಗ ಹತ್ತಿ ಮಾರಾಟ ಮಾಡಲು ಯಾದಗಿರಿ ರೈತರು ಪರದಾಟ ನಡೆಸುತ್ತಿದ್ದಾರೆ.

    ರೈತರಿಂದ ಬೆಂಬಲ ಬೆಲೆಯೊಂದಿಗೆ ಹತ್ತಿ ಖರೀದಿ ಮಾಡಲು ಕೇಂದ್ರ ಸರ್ಕಾರ ಇಂಗಿತ ಹೊಂದಿದೆ. ಹೀಗಾಗಿ ಜಿಲ್ಲೆಯ ಶಹಾಪುರದ ಮದ್ರಿಕಿ ಹತ್ತಿರ ಖಾಸಗಿ ಕಾಟನ್ ಮೀಲ್‍ನಲ್ಲಿ ಭಾರತೀಯ ಹತ್ತಿ ನಿಗಮ ಖರೀದಿ ಕೇಂದ್ರ ಆರಂಭಿಸಿದೆ. ಹತ್ತಿ ಮಾರಾಟ ಮಾಡಲು ನೂರಾರು ರೈತರು ಮುಂದಾಗಿದ್ದಾರೆ. ಆದರೆ ಸಾಮಾಜಿಕ ಅಂತರ ಹೆಸರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಅಧಿಕಾರಿಗಳು ರೈತರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.

    ಸದ್ಯ ಜಿಲ್ಲೆಯಲ್ಲಿ 600ಕ್ಕೂ ಅಧಿಕ ರೈತರು ಭಾರತೀಯ ಹತ್ತಿ ನಿಗಮದಲ್ಲಿ ಹತ್ತಿ ಮಾರಾಟ ಮಾಡಲು ಸಿದ್ಧರಿದ್ದಾರೆ. ಹತ್ತಿ ನಿಗಮ ಸಹ ಮೇ ತಿಂಗಳು ಮುಗಿಯುವದರೊಳಗೆ ಹತ್ತಿ ಖರೀದಿ ಮಾಡಲು ರೆಡಿಯಿದೆ. ಆದರೆ APMC ಮಾತ್ರ ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ದಿನಕ್ಕೆ ಹತ್ತು ಜನರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದೆ. ಇದರಿಂದ ಬರೀ ಹತ್ತಿ ಮಾರಾಟ ಪ್ರಕ್ರಿಯೆಗೆ ಇನ್ನೂ ನಾಲ್ಕೈದು ತಿಂಗಳು ಬೇಕಾಗುತ್ತದೆ. ಇದರಿಂದ ರೈತರು ಅಸಮಾಧಾನಗೊಂಡಿದ್ದಾರೆ.

    ಮತ್ತೆ ಜೂನ್‍ನಲ್ಲಿ ಬಿತ್ತನೆ ಕಾರ್ಯ ಆರಂಭಗೊಳಲಿದೆ. ಹೀಗಾಗಿ ಬೀಜ ಖರೀದಿಗೆ, ಗೊಬ್ಬರಕ್ಕೆ ಹಣದ ಅವಶ್ಯಕತೆಯಿದೆ. ಆದರೂ ಅಧಿಕಾರಿಗಳು ರೈತರ ಬಗ್ಗೆ ಚಿಂತಿಸುತ್ತಿಲ್ಲ. ಹತ್ತಿ ನಿಗಮ ಹತ್ತಿ ಖರೀದಿ ಮಾಡಲು ಸಿದ್ಧವಿದ್ದರೂ APMC ಮಾತ್ರ ನಿರಾಶಕ್ತಿ ಹೊಂದಿದೆ.

  • ಆಂಧ್ರ, ತೆಲಂಗಾಣ ರೈತರಿಂದ ರಾಜ್ಯದ ಕೃಷಿ ಕೂಲಿ ಕಾರ್ಮಿಕರ ಹೈಜಾಕ್

    ಆಂಧ್ರ, ತೆಲಂಗಾಣ ರೈತರಿಂದ ರಾಜ್ಯದ ಕೃಷಿ ಕೂಲಿ ಕಾರ್ಮಿಕರ ಹೈಜಾಕ್

    – ರಾಯಚೂರು ರೈತರಿಗೆ ಕೂಲಿಕಾರರಿಲ್ಲದೆ ಎದುರಾಗಿದೆ ಸಂಕಷ್ಟ

    ರಾಯಚೂರು: ಪ್ರತಿ ವರ್ಷ ಅತೀವೃಷ್ಠಿ ಅನಾವೃಷ್ಠಿಗಳಿಗೆ ತುತ್ತಾಗಿ ಒದ್ದಾಡುತ್ತಿದ್ದ ಬಿಸಿಲನಾಡು ರಾಯಚೂರಿನ ರೈತರು ಈ ಬಾರಿ ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮಳೆ ಉತ್ತಮವಾಗಿರುವ ಪರಿಣಾಮ ಹತ್ತಿ ಇಳುವರಿ ಭರ್ಜರಿಯಾಗಿದೆ. ಮೆಣಸಿನಕಾಯಿ, ಜೋಳ ಕೂಡ ಉತ್ತಮವಾಗಿದೆ. ಆದರೆ ಬೆಳೆ ಕಟಾವಿಗೆ ಬಂದು ನಿಂತಿದ್ದು ಬೆಳೆಯನ್ನ ಬಿಡಿಸಿಕೊಳ್ಳಲು ರೈತರಿಗೆ ಕಷ್ಟವಾಗುತ್ತಿದೆ. ಕಾರಣ ಕೃಷಿ ಕೂಲಿಕಾರರ ಸಮಸ್ಯೆ. ಸ್ಥಳೀಯವಾಗಿ ಕೂಲಿಕಾರರು ಸಿಗದೆ ರೈತರು ಕಂಗಾಲಾಗಿದ್ದಾರೆ. ಇನ್ನೂ ಸ್ವಲ್ಪ ದಿನ ಕಳೆದರೆ ಜಮೀನಿನಲ್ಲೇ ಬೆಳೆಗಳು ಹಾಳಾಗುವ ಭೀತಿ ಎದುರಾಗಿದೆ.

    ಇಲ್ಲಿ ಹತ್ತಿ ಬಿಡಿಸಲು ಕೂಲಿಯಾಳು ಸಿಗದೆ ರೈತರು ಪರದಾಡುತ್ತಿದ್ದರೆ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ರೈತರು ಇಲ್ಲಿನ ಕೂಲಿಕಾರರನ್ನು ದುಬಾರಿ ಕೂಲಿ ಹಣ ಕೊಟ್ಟು ತಮ್ಮತ್ತ ಸೆಳೆಯುತ್ತಿದ್ದಾರೆ. ಕಡಿ ಪ್ರದೇಶದಲ್ಲಿ ದಿನಕ್ಕೆ 150 ರೂ. ಕೂಲಿ ನೀಡುತ್ತಿದ್ದರೆ ಆಂಧ್ರ, ತೆಲಂಗಾಣದಲ್ಲಿ 250 ರೂ. ನೀಡಲಾಗುತ್ತಿದೆ. ಅದರ ಜೊತೆಗೆ ಕರೆದೊಯ್ಯಲು ಪ್ರತಿ ವ್ಯಕ್ತಿಗೆ 50 ರೂ. ಆಟೋ ವೆಚ್ಚ ನೀಡಲಾಗುತ್ತಿದೆ. ಈಗ ಆಂಧ್ರ, ತೆಲಂಗಾಣದಲ್ಲಿ ಬೇಸಿಗೆ ಬೆಳೆಗೆ ನಾಟಿ ಕಾರ್ಯ ಶುರುವಾಗಿದ್ದು ಕೂಲಿಕಾರರಿಗೆ ಎಲ್ಲಿಲ್ಲದ ಬೇಡಿಕೆ ಇದೆ.

    ಜಿಲ್ಲೆಯಲ್ಲಿ 74,654 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಕೇಳಿದಷ್ಟು ಹಣ ಕೊಡುತ್ತೇವೆಂದರೂ ಹತ್ತಿ ಬಿಡಿಸಲು ಕೂಲಿಕಾರರು ಸಿಗುತ್ತಿಲ್ಲ. ಮೊದಲೆಲ್ಲ ಹತ್ತಿ ಬಿಡಿಸಲು ದಿನಕ್ಕೆ ಇಂತಿಷ್ಟು ಎಂದು ಕೂಲಿ ನೀಡಲಾಗುತ್ತಿತ್ತು. ಆದರೆ ಈಗ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಹತ್ತಿ ಬೇಕಾದರೂ ಬಿಡಿಸಲಿ. ಕೆಜಿಗೆ 8 ರೂ. ನೀಡುತ್ತಿದ್ದೇವೆ ಎನ್ನುತ್ತಾರೆ ರೈತರು. ಹೀಗಾಗಿ ಒಬ್ಬ ಮಹಿಳೆ 50-60 ಕೆಜಿ ಹತ್ತಿ ಬಿಡಿಸುತ್ತಾಳೆ. ಇದು ರೈತರಿಗೆ ಹೊರೆಯಾದರೂ ಬೇರೆ ದಾರಿ ಕಾಣದಾಗಿದೆ. 30-40 ಕಿಮೀ ದೂರದವರೆಗೂ ಹೋಗಿ ಕರೆ ತರುವ ಸ್ಥಿತಿ ಇದೆ. ಬೆಳಗ್ಗೆ ಕರೆದುಕೊಂಡು ಹೋಗಿ ಸಂಜೆ ಕರೆ ತರಬೇಕೀದೆ. ಇದಕ್ಕೆಲ್ಲಾ ಸರ್ಕಾರವೇ ಹೊಣೆ ಅಂತ ರೈತ ಮುಖಂಡ ಲಕ್ಷ್ಮಣ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಮಾರುಕಟ್ಟೆ ನಾನಾ ಭಾಗಗಳಿಂದ ಹತ್ತಿ ಲಗ್ಗೆ ಇಡುತ್ತಿದೆ. ಇದರಿಂದ 4,400ರಿಂದ 5,250 ರೂ.ವರೆಗೆ ದರ ಇದೆ. ಹತ್ತಿ ಖರೀದಿ ಕೇಂದ್ರಗಳಲ್ಲಿ 5,550 ರೂ.ಗೆ ಒಬ್ಬ ರೈತರಿಂದ 40 ಕ್ವಿಂಟಲ್ ಖರೀದಿಸಲಾಗುತ್ತಿದೆ. ಸರ್ಕಾರ ತನ್ನ ಖರೀದಿ ಮಿತಿ ಮುಗಿದ ಬಳಿಕ ಯಾವಾಗ ಬೇಕಾದರೂ ಕೇಂದ್ರ ಸ್ಥಗಿತ ಮಾಡಬಹುದು ಎಂಬ ಆತಂಕ ರೈತರನ್ನ ಕಾಡುತ್ತಿದೆ.