Tag: ಹಣಕಾಸು ಸಚಿವಾಲಯ

  • 8 ತಿಂಗಳಲ್ಲಿ 7.41 ಲಕ್ಷ ಕೋಟಿ ರೂ. ಜಿಎಸ್‍ಟಿ ಸಂಗ್ರಹ

    8 ತಿಂಗಳಲ್ಲಿ 7.41 ಲಕ್ಷ ಕೋಟಿ ರೂ. ಜಿಎಸ್‍ಟಿ ಸಂಗ್ರಹ

    ನವದೆಹಲಿ: 2017 ಜುಲೈ ನಿಂದ 2018 ಮಾರ್ಚ್ ವರೆಗೆ 7.41 ಲಕ್ಷ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

    1.19 ಲಕ್ಷ ಕೋಟಿ ರೂ ಸಿಜಿಎಸ್‍ಟಿ, 1.72 ಲಕ್ಷ ಕೋಟಿ ರೂ ಎಸ್‍ಜಿಎಸ್‍ಟಿ, 3.66 ಲಕ್ಷ ಕೋಟಿ ರೂ ಐಜಿಎಸ್‍ಟಿ ಮತ್ತು 62,021 ಕೋಟಿ ರೂಪಾಯಿ ಸೆಸ್ ಸಂಗ್ರಹವಾಗಿದೆ ಎಂದು ತಿಳಿಸಿದೆ.

    ಹಾನಿಕಾರಕ ಹಾಗೂ ಕೆಲವು ಐಷಾರಾಮಿ ಉತ್ಪನ್ನಗಳಿಗೆ ಲೆವಿ ಇರಿಸಲಾಗಿದ್ದು, ಇದರಿಂದ ಬರುವ ಆದಾಯವನ್ನು ರಾಜ್ಯಗಳಿಗೆ ಜಿಎಸ್‍ಟಿಯಿಂದಾಗಿ ಆಗುತ್ತಿರುವ ನಷ್ಟವನ್ನು ಭರಿಸಲು ನೀಡಲಾಗುತ್ತಿದೆ. ಕಳೆದ 8 ತಿಂಗಳುಗಳಲ್ಲಿ ರಾಜ್ಯಗಳಿಗೆ 41,147 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

    ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ಮೊದಲ ವರ್ಷ ವ್ಯವಸ್ಥೆಯ ಸ್ಥಿರೀಕರಣಕ್ಕೆ ಆದ್ಯತೆ ನೀಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು. ಕಳೆದ ಎಂಟು ತಿಂಗಳಲ್ಲಿ ತಿಂಗಳ ಸರಾಸರಿ ಸಂಗ್ರಹ 89,885 ಕೋಟಿ ರೂಪಾಯಿಗಳಷ್ಟಾಗಿದೆ. ಏಪ್ರಿಲ್ 1 ರಿಂದ ಇ-ವೇ ಬಿಲ್ ಅನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ವರ್ಷ ತೆರಿಗೆ ಸಂಗ್ರಹ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

  • 1 ಸಾವಿರ ರೂ. ನೋಟು ಮತ್ತೆ ಪರಿಚಯಿಸೋ ಬಗ್ಗೆ ಪ್ರಸ್ತಾಪ ಇಲ್ಲ: ಸರ್ಕಾರ

    1 ಸಾವಿರ ರೂ. ನೋಟು ಮತ್ತೆ ಪರಿಚಯಿಸೋ ಬಗ್ಗೆ ಪ್ರಸ್ತಾಪ ಇಲ್ಲ: ಸರ್ಕಾರ

    ನವದೆಹಲಿ: ಹೊಸದಾಗಿ 1 ಸಾವಿರ ರೂ. ನೋಟುಗಳನ್ನು ಪರಿಚಯಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಗರ್ಗ್ ತಿಳಿಸಿದ್ದಾರೆ.

    500, 1 ಸಾವಿರ ರೂ. ನೋಟುಗಳು ಬ್ಯಾನ್ ಆದ ಬಳಿಕ ಹೊಸದಾಗಿ 2 ಸಾವಿರ, 500 ರೂ., 200 ರೂ., 50 ರೂ.ಗಳನ್ನು ಬಿಡುಗಡೆ ಮಾಡಿರುವ ಆರ್‍ಬಿಐ 1 ಸಾವಿರ ರೂ. ನೋಟು ಚಲಾವಣೆಗೆ ತರಲು ಮುಂದಾಗುತ್ತಿದೆ ಎನ್ನುವ ಸುದ್ದಿ ಸೋಮವಾರ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

    ಈ ಸುದ್ದಿಗಳಿಗೆ ಸುಭಾಶ್ ಗರ್ಗ್, 1 ಸಾವಿರ ರೂ. ನೋಟುಗಳನ್ನು ಮತ್ತೆ ಪರಿಚಯಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

    ಆರ್‍ಬಿಐ ಶೀಘ್ರದಲ್ಲೇ 1 ಸಾವಿರ ರೂ. ನೋಟುಗಳನ್ನು ಮುದ್ರಿಸಲಿದೆ. ಡಿಸೆಂಬರ್ ನಲ್ಲಿ ಚಲಾವಣೆಗೆ ಬರಲಿದ್ದು, ಮೈಸೂರು ಮತ್ತು ಸಾಲ್ಬೋನಿಯಲ್ಲಿ ಹೊಸ ನೋಟುಗಳು ವಿಶೇಷ ಭದ್ರತಾ ವೈಶಿಷ್ಟ್ಯಗಳೊಂದಿಗೆ ಮುದ್ರಣವಾಗಲಿದೆ ಎಂದು ವರದಿ ತಿಳಿಸಿತ್ತು.

    ಕಪ್ಪುಹಣವನ್ನು ತಡೆಗಟ್ಟಲು ನವೆಂಬರ್ 8 ರಂದು 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ತಿಳಿಸಿದ್ದರು. ಮೈಸೂರಿನ ಮೇಟಗಳ್ಳಿ, ಮಹಾರಾಷ್ಟ್ರದ ನಾಸಿಕ್, ಮಧ್ಯಪ್ರದೇಶದ ದೇವಾಸ್, ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿ ಆರ್‍ಬಿಐ ಮುದ್ರಣ ಘಟಕವನ್ನು ಹೊಂದಿದೆ.