Tag: ಹಣಕಾಸು ವರ್ಷ

  • ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    – ಚಲಾವಣೆಯಲ್ಲಿರುವ ನೋಟಿನ ಪ್ರಮಾಣ ಇಳಿಕೆ
    – ವಾರ್ಷಿಕ ವರದಿಯಲ್ಲಿ ಆರ್‌ಬಿಐ ಮಾಹಿತಿ

    ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಒಂದೇ ಒಂದು 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಮುದ್ರಿಸಿಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಹೇಳಿದೆ.

    2019-20ರ ವಾರ್ಷಿಕ ವರದಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಚಲಾವಣೆಯ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ತಿಳಿಸಿದೆ.

    2018ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದರೆ 2019ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆ 32,910 ಲಕ್ಷಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಇದು 27,398 ಲಕ್ಷಕ್ಕೆ ಇಳಿಕೆಯಾಗಿದೆ.

    2018ರ ಮಾರ್ಚ್‌ ಅಂತ್ಯಕ್ಕೆ ಚಲಾವಣೆಯಲ್ಲಿರುವ ನೋಟುಗಳ ಪೈಕಿ 2 ಸಾವಿರ ರೂ. ನೋಟುಗಳ ಪಾಲು ಶೇ. 3.3ರಷ್ಟಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಈ ಪ್ರಮಾಣ ಶೇ.2.4ಕ್ಕೆ ಇಳಿದಿದೆ.

    ಮೌಲ್ಯದ ಆಧಾರದಲ್ಲಿ ನೋಡುವುದಾದರೆ 2018ರಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಪಾಲು ಶೇ.37.3 ರಷ್ಟಿತ್ತು. 2019ರಲ್ಲಿ ಇದು ಶೇ.31.2ಕ್ಕೆ ಇಳಿಕೆಯಾದರೆ ಮಾರ್ಚ್‌ 2020ರಲ್ಲಿ ಇದು ಶೇ.22.6ಕ್ಕೆ ಕುಸಿದಿದೆ.

    ವರದಿಯಲ್ಲಿ 200 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ ಏರುತ್ತಲೇ ಸಾಗಿದೆ ಎಂದು ಹೇಳಿದೆ. 2018-19ರಲ್ಲಿ 500 ರೂ. ಮುಖಬೆಲೆಯ 1,147 ಕೋಟಿ ನೋಟುಗಳನ್ನು ಮುದ್ರಿಸಿದ್ದರೆ 2019-20ರಲ್ಲಿ ಇದು 1,200 ಕೋಟಿಗೆ ಏರಿಕೆಯಾಗಿದೆ.

    10, 50, 200, 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. 20, 100 ಮತ್ತು 2,000 ರೂಪಾಯಿ ನಕಲಿ ನೋಟುಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

     

    ಹಿಂದೆಯೇ ಹೇಳಿತ್ತು:
    ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಕಳೆದ ವರ್ಷದ ಜನವರಿಯಲ್ಲಿ ಮಾಹಿತಿ ನೀಡಿತ್ತು.

    ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತಂದಿತ್ತು.

    ಈ ದೊಡ್ಡ ಮೊತ್ತದ ನೋಟು ಕಾಳಧನಿಕರಿಗೆ ಶತ್ರುವಾಗಿ ಪರಿಣಮಿಸುವ ಬದಲಾಗಿ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣಕ್ಕೆ ಈ ಮುಖಬೆಲೆಯ ನೋಟ್‍ಗಳನ್ನು ಸುಲಭವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಅಂತ ಕಾಳಧನಿಕರು ಉಪಾಯ ಮಾಡಿದ್ದಾರೆ. ಆದರಿಂದ ಈ ನೋಟುಗಳನ್ನು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಹಂತಹಂತವಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುತ್ತಿದೆ.

    ಮಾರ್ಚ್ 2017ರ ಅಂತ್ಯದಲ್ಲಿ 328 ಕೋಟಿ ರೂ. 2 ಸಾವಿರ ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಾಗಿತ್ತು. ಬಳಿಕ ಮಾರ್ಚ್ 2018ರ ಅಂತ್ಯದಲ್ಲಿ ಈ ಸಂಖ್ಯೆ 336 ಕೋಟಿಗೆ ಏರಿಕೆಯಾಗಿತ್ತು. ಆರಂಭದಲ್ಲಿ ಶೇ.86ರಷ್ಟು 2 ಸಾವಿರ ನೋಟುಗಳು ಚಲಾವಣೆಯಲ್ಲಿದ್ದವು.

  • ಅಪಘಾತದಲ್ಲಿ ಒಂದೂ ಸಾವಿಲ್ಲ – 166 ವರ್ಷಗಳ ಇತಿಹಾಸ ಹೊಂದಿರೋ ರೈಲ್ವೇಯಿಂದ ದಾಖಲೆ

    ಅಪಘಾತದಲ್ಲಿ ಒಂದೂ ಸಾವಿಲ್ಲ – 166 ವರ್ಷಗಳ ಇತಿಹಾಸ ಹೊಂದಿರೋ ರೈಲ್ವೇಯಿಂದ ದಾಖಲೆ

    ನವದೆಹಲಿ: ಭಾರತೀಯ ರೈಲ್ವೇಯ 166 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ಯಾವುದೇ ಪ್ರಯಾಣಿಕರು ಸಾವನ್ನಪ್ಪಿಲ್ಲ. ಈ ಹಣಕಾಸು ವರ್ಷದಲ್ಲಿ ಒಬ್ಬ ಪ್ರಯಾಣಿಕರೂ ಸಾವನ್ನಪ್ಪಿಲ್ಲ ಎಂದು ಭಾರತೀಯ ರೈಲ್ವೇ ಹೇಳಿಕೊಂಡಿದೆ.

    ಭಾರತೀಯ ರೈಲ್ವೇಯ 166 ವರ್ಷಗಳ ಇತಿಹಾಸದಲ್ಲಿ, 2019-20 ‘ಶೂನ್ಯ ಪ್ರಯಾಣಿಕರ ಸಾವಿಗೆ’ ಸಾಕ್ಷಿಯಾಗಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವಿಟ್ಟರ್ ಖಾತೆಯಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ರೈಲ್ವೇ ಸೇವೆಗಳ ಏಕೀಕರಣ, ರೈಲ್ವೇ ಸೌಲಭ್ಯಗಳು, ಇಲಾಖೆ ಕಾರ್ಯ ಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಗಮನಾರ್ಹ ಸುಧಾರಣೆ ಇದಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ವಿಶ್ವ ದರ್ಜೆಯ ರೈಲ್ವೇ ಸೇವೆಗಳನ್ನು ಒದಗಿಸುವ ನಮ್ಮ ಸಂಕಲ್ಪದ ದಿಕ್ಕಿನಲ್ಲಿ ತೆಗೆದುಕೊಂಡ ಹೆಜ್ಜೆಯಾಗಿದೆ. ದೇಶದ ಅಭಿವೃದ್ಧಿಗೆ ಇದು ಹೆಚ್ಚಿನ ಕೊಡುಗೆ ನೀಡಲಿದ್ದು ನಾವು ಹೆಚ್ಚು ಸುರಕ್ಷತೆ ಆದ್ಯತೆ ನೀಡುತ್ತಿದ್ದೇವೆ ಎಂದು ತಮ್ಮ ಎರಡನೇ ಟ್ವೀಟ್ ನಲ್ಲಿ ಗೋಯಲ್ ಹೇಳಿಕೊಂಡಿದ್ದಾರೆ.

    ಕಳೆದ ಡಿಸೆಂಬರ್ 6 ರಂದು, ದೆಹಲಿ ಹೈಕೋರ್ಟ್ ದೇಶಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಸುರಕ್ಷತೆ ಮತ್ತು ಸುರಕ್ಷತಾ ಕ್ರಮಗಳ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಕೇಂದ್ರದಿಂದ ಪ್ರತಿಕ್ರಿಯೆ ನೀಡಲು ಸೂಚಿಸಿತ್ತು.

    2018ರ ಹಣಕಾಸು ವರ್ಷದಲ್ಲಿ 73 ರೈಲ್ವೇ ಅಪಘಾತಗಳು ಸಂಭವಿಸಿದ್ದವು. 2019ರಲ್ಲಿ ಈ ಸಂಖ್ಯೆ 59ಕ್ಕೆ ಇಳಿದಿದೆ. 2013ರಿಂದ 2018ರವರೆಗೆ ಪ್ರತಿ ವರ್ಷ ಸರಾಸರಿ 110 ಅಪಘಾತಗಳು ಸಂಭವಿಸಿದ್ದು 990 ಮಂದಿ ಬಲಿಯಾಗಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ ನವೆಂಬರಿನಲ್ಲಿ ರೈಲ್ವೇ ಹಳಿಗಳನ್ನು ಸುರಕ್ಷತೆ ಸುಧಾರಿಸಲು ಆಧುನೀಕರಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ. ಹಳಿಗಳಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಅಲ್ಟ್ರಾಸೋನಿಕ್ ಫ್ಲಾ ಡಿಟೆಕ್ಷನ್(ಯುಎಸ್‍ಎಫ್‍ಡಿ) ತಂತ್ರಜ್ಞಾನ ಬಳಸಿಕೊಂಡಿದ್ದು ಸೆನ್ಸರ್  ಮೂಲಕ ಅಪಘಾತಗಳನ್ನು ತಪ್ಪಿಸಲಾಗಿದೆ. ಇವೆಲ್ಲದರ ಹೊರತಾಗಿ, ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

  • ವರ್ಷದ ಕಾರು – ಅಲ್ಟೋ ಹಿಂದಿಕ್ಕಿದ ಡಿಸೈರ್‌ಗೆ ನಂಬರ್ ಒನ್ ಪಟ್ಟ

    ವರ್ಷದ ಕಾರು – ಅಲ್ಟೋ ಹಿಂದಿಕ್ಕಿದ ಡಿಸೈರ್‌ಗೆ ನಂಬರ್ ಒನ್ ಪಟ್ಟ

    ನವದೆಹಲಿ: ಮಾರುತಿ ಕಂಪನಿಯ ಡಿಸೈರ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹಗ್ಗೆಳಿಕೆಗೆ ಪಾತ್ರವಾಗಿದೆ. ಏಪ್ರಿಲ್‍ನಿಂದ ಆರಂಭಗೊಂಡ ಈ ಹಣಕಾಸು ವರ್ಷದಲ್ಲಿ 1.2 ಲಕ್ಷ  ಡಿಸೈರ್ ಕಾರು ಮಾರಾಟಗೊಂಡಿದೆ.

    ಕಳೆದ 15 ವರ್ಷಗಳಿಂದಲೂ ಮಾರುತಿ ಕಂಪನಿಯ ಅಲ್ಟೋ ಕಾರು ಅತಿ ಹೆಚ್ಚು ಮಾರಾಟವಾಗುವ ಮೂಲಕ ದೇಶದಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿಕೊಂಡು ಬಂದಿತ್ತು. ಆದರೆ ಈ ಬಾರಿ ಈ ಪಟ್ಟ ಡಿಸೈರ್‌ಗೆ ಸಿಕ್ಕಿದೆ. ಏಪ್ರಿಲ್‍ನಿಂದ ಆರಂಭಗೊಂಡು ನವೆಂಬರ್ ಅವಧಿಯವರೆಗೆ ಒಟ್ಟು 1,28,695 ಡಿಸೈರ್ ಕಾರುಗಳು ಮಾರಾಟಗೊಂಡಿದೆ.

     

    ಸೈಜ್ ಮತ್ತು ಸ್ಟೇಟಸ್ ವಿಚಾರದಲ್ಲಿ ಈ ಕಾರು ಜನರ ಮನ ಗೆದ್ದಿದೆ. ಈ ಹಿಂದೆ ಹ್ಯಾಚ್‍ಬ್ಯಾಕ್ ಕಾರುಗಳು ಹೆಚ್ಚು ಮಾರಾಟವಾಗುತಿತ್ತು. ಈಗ ಜನರ ಚಿಂತನೆ ಬದಲಾಗಿದ್ದು ಸುರಕ್ಷತೆಯತ್ತ ಗಮನ ನೀಡುತ್ತಾರೆ. ಇದರ ಪರಿಣಾಮ ಸೆಡಾನ್ ಕಾರುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಈ ಅವಧಿಯಲ್ಲಿ ಹೋಂಡಾ ಅಮೇಝ್ 40,676 ಕಾರುಗಳು ಮಾರಾಟಗೊಂಡಿದ್ದರೆ, ಹುಂಡೈ ಕಂಪನಿ ಎಕ್ಸೆಂಟ್ 12,239 ಕಾರುಗಳು ಮಾರಾಟಗೊಂಡಿದೆ. ಫೋರ್ಡ್ ಕಂಪನಿಯ ಆಸ್ಪೈರ್ 6,765  ಕಾರುಗಳು ಮಾರಾಟಗೊಂಡಿದೆ.

    2017ಕ್ಕೆ ಮೂರನೇ ತಲೆಮಾರಿನ  ಡಿಸೈರ್ ಕಾರನ್ನು ಬಿಡುಗಡೆ ಮಾಡಲಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್, 1.3ಲೀಟರ್ ಡೀಸೆಲ್ ಎಂಜಿನ್ ನಲ್ಲಿ  ಡಿಸೈರ್ ಕಾರು ಲಭ್ಯವಿದೆ. 2,450 ಮಿ.ಮೀ ವೀಲ್ ಬೇಸ್, 3,995 ಮಿ.ಮೀ ಉದ್ದ, 1,735 ಮಿ.ಮೀ ಅಗಲ, 1,515 ಮಿ.ಮೀ ಎತ್ತರವನ್ನು ಹೊಂದಿದೆ.

    2008 ರಲ್ಲಿ ಮೊದಲ ತಲೆಮಾರಿನ ಸ್ವಿಫ್ಟ್ ಡಿಸೈರ್ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೇವಲ 19 ತಿಂಗಳಿನಲ್ಲಿ 1 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಬರೆದಿತ್ತು.

  • ಜಾಹೀರಾತು ಪ್ರಕಟಿಸದೇ ಫಸ್ಟ್ ಟೈಂ 6.84 ಕೋಟಿ ಆದಾಯಗಳಿಸಿದ ವಾಟ್ಸಪ್

    ಜಾಹೀರಾತು ಪ್ರಕಟಿಸದೇ ಫಸ್ಟ್ ಟೈಂ 6.84 ಕೋಟಿ ಆದಾಯಗಳಿಸಿದ ವಾಟ್ಸಪ್

    ನವದೆಹಲಿ: ಯಾವುದೇ ಜಾಹಿರಾತನ್ನು ಪ್ರಕಟಿಸದೇ ಮೆಸೇಂಜಿಂಗ್ ಅಪ್ಲಿಕೇಶನ್ ವಾಟ್ಸಪ್ 6.84 ಕೋಟಿ ರೂ. ಆದಾಯ ಗಳಿಸಿದೆ.

    ರಿಜಿಸ್ಟ್ರಾರ್ ಆಫ್ ಕಂಪನಿಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿ ಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. 2018ರ ಹಣಕಾಸು ವರ್ಷದಲ್ಲಿ ವಾಟ್ಸಪ್ ಯಾವುದೇ ಆದಾಯಗಳಿಸದೇ 5 ಲಕ್ಷ ರೂ. ನಷ್ಟ ಅನುಭವಿಸಿತ್ತು.

    ವಾಟ್ಸಪ್ ಒಟ್ಟು ಹಣಕಾಸು ವರ್ಷದಲ್ಲಿ ವ್ಯವಹಾರ ನಡೆಸಲು 5.99 ಕೋಟಿ ರೂ. ಖರ್ಚು ಮಾಡಿದೆ. ಇದರಲ್ಲಿ 3.43 ಕೋಟಿ ರೂ. ಹಣವನ್ನು ಉದ್ಯೋಗಿಗಳ ಸಂಬಳಕ್ಕೆ ಖರ್ಚು ಮಾಡಿದರೆ 1.3 ಕೋಟಿ ರೂ. ಹಣವನ್ನು ಪ್ರಚಾರಕ್ಕೆ ವಿನಿಯೋಗಿಸಿದೆ. ಇದನ್ನೂ ಓದಿ: ವಾಟ್ಸಪ್ ಯೂ ಟರ್ನ್ – ಇನ್ನು ಮುಂದೆ ಬರುತ್ತೆ ಜಾಹೀರಾತು!

    ಆದಾಯಗಳಿಸಿದ್ದು ಹೇಗೆ?
    ವಾಟ್ಸಪ್‍ನಲ್ಲಿ ಯಾವುದೇ ಜಾಹೀರಾತು ಪ್ರಕಟಗೊಳ್ಳುವುದಿಲ್ಲ. ಆದರೆ ಭಾರತದಲ್ಲಿ ತನ್ನ ಬಿಸಿನೆಸ್ ಆಪ್ ಮೂಲಕ ಆದಾಯಗಳಿಸಿದೆ. 15 ತಿಂಗಳ ಹಿಂದೆ ವಾಟ್ಸಪ್ ಈ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ವಿಶ್ವದಲ್ಲಿ ಒಟ್ಟು 50 ಲಕ್ಷ ಮಂದಿ ಬಿಸಿನೆಸ್ ಆ್ಯಪ್ ಬಳಸುತ್ತಿದ್ದರೆ ಭಾರತದಲ್ಲಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಮಂದಿ ಬಿಸಿನೆಸ್ ಆ್ಯಪ್ ಬಳಸುತ್ತಿದ್ದಾರೆ. ಭಾರತದಲ್ಲಿ ಒಟ್ಟು 40 ಕೋಟಿ ಜನ ವಾಟ್ಸಪ್ ಬಳಸುತ್ತಿದ್ದಾರೆ.