Tag: ಹಜ್ ಭವನ

  • ಹಜ್ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿ; ಎಲ್ಲಾ ಧರ್ಮದವರೂ ಒಂದು ತಾಯಿಯ ಮಕ್ಕಳಂತೆ ಇರಬೇಕು: ಸಿಎಂ

    ಹಜ್ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿ; ಎಲ್ಲಾ ಧರ್ಮದವರೂ ಒಂದು ತಾಯಿಯ ಮಕ್ಕಳಂತೆ ಇರಬೇಕು: ಸಿಎಂ

    ಬೆಂಗಳೂರು: ಎಲ್ಲಾ ಧರ್ಮದವರೂ ಒಂದು ತಾಯಿಯ ಮಕ್ಕಳಂತೆ ಇರಲು ಎಲ್ಲಾ ಧರ್ಮದವರಲ್ಲೂ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಬೆಂಗಳೂರಿನ (Bengaluru) ಹೆಗಡೆ ನಗರದಲ್ಲಿರುವ ಹಜ್ ಭವನದಲ್ಲಿ (Haj Bhavan) ಆಯೋಜಿಸಲಾಗಿದ್ದ ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಕೆಫೆ ಸ್ಫೋಟ – ಬೆಂಗಳೂರು ಟೆಕ್ಕಿಯ ಖಾತೆಗೆ ದಿಢೀರ್‌ ಭಾರೀ ಹಣ ಜಮೆ

    10,168 ಹಜ್ ಯಾತ್ರಿಗಳ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಕೋರಿದ್ದೇನೆ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ನೆಲಸಲಿ ಎಂದು ಪ್ರಾರ್ಥಿಸುವಂತೆ ತಿಳಿಸಿದ್ದೇನೆ. ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದಂತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಧರ್ಮದವರೆಲ್ಲಾ ಒಂದು ತಾಯಿಯ ಮಕ್ಕಳಂತೆ ಇರಬೇಕು. ಅಂಥ ವಾತಾವರಣ ನಿರ್ಮಾಣವಾಗಬೇಕಾದರೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ಬಂದು ಎಲ್ಲರೂ ಸಬಲರಾಗಬೇಕು. ಅದಕ್ಕೆ ಹಜ್ ಯಾತ್ರಿಗಳು ಪ್ರಾರ್ಥಿಸಲಿ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬೆಳೆ ಬರಲಿ. ನಾಡು ಸಮೃದ್ಧವಾಗಲಿ ಎಂದು ಪ್ರಾರ್ಥಿಸುವಂತೆ ಎಲ್ಲಾ ಯಾತ್ರಾರ್ಥಿಗಳಲ್ಲಿ ಮನವಿ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ – ಪಿಜ್ಜಾ, ಬಿರಿಯಾನಿ ತಿನ್ನಿಸಿದ್ದ ಪೊಲೀಸರ ವಿರುದ್ಧ ಆಕ್ರೋಶ

    ಹಜ್ ಭವನ ನಿರ್ಮಾಣಕ್ಕಾಗಿ ಅನುದಾನ:
    ಮಂಗಳೂರು ಮತ್ತು ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗಿದೆ. ಕಲಬುರಗಿಯಲ್ಲಿ ಸ್ಥಳ ಸಿಗದೇ ವಿಳಂಬವಾಗಿದೆ. ಮಂಗಳೂರಿನಲ್ಲಿ ಸ್ಥಳ ಗುರುತಿಸಲಾಗಿದೆ ಎಂದರು. ನೀತಿ ಸಂಹಿತೆ ಮುಗಿದ ಮೇಲೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು. ಅಲ್ಲದೇ ಪ್ರತಿ ದಿನ ಹಜ್‌ಗೆ ತೆರಳುವವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸಚಿವ ಜಮೀರ್ ಅಹ್ಮದ್ ಅವರನ್ನು ಶ್ಲಾಘಿಸಿದರು. ಇದನ್ನೂ ಓದಿ: ಅಂಜನಾದ್ರಿ ಹುಂಡಿಗೆ ಪಾಕಿಸ್ತಾನದ ನಾಣ್ಯ

  • ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ

    ಬೆಂಗ್ಳೂರು ಹಜ್ ಭವನ ಕಾಮಗಾರಿಗೆ 5 ಕೋಟಿ ರೂ. ಘೋಷಿಸಿದ ಸಿಎಂ

    ಬೆಂಗಳೂರು: ಸದ್ಯ ನಮ್ಮ ರಾಜ್ಯವೂ ಸೇರಿದಂತೆ ದೇಶದೆಲ್ಲೆಡೆ ಪೌರತ್ವ ಕಾಯ್ದೆ(ಸಿಎಎ) ಪರ – ವಿರೋಧ ಸಂಘರ್ಷ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನ ಹಜ್ ಭವನಕ್ಕೆ 5 ಕೋಟಿ ರೂ ಅನುದಾನ ಘೋಷಿಸುವ ಮೂಲಕ ರಾಜ್ಯದ ಮುಸ್ಲಿಮರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ.

    ಬೆಂಗಳೂರಿನ ಹೆಗ್ಡೆನಗರದಲ್ಲಿರುವ ಹಜ್ ಭವನದಲ್ಲಿ ಇಂದು ಹಜ್ ಯಾತ್ರೆ-2020ಕ್ಕೆ ಆನ್ ಲೈನ್ ಮೂಲಕ ಯಾತ್ರಿಕರನ್ನು ಆಯ್ಕೆ ಮಾಡುವ ಕಾರ್ಯಕ್ರಮ ಇತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ ಹಜ್ ಭವನದ ಕನ್ವೆನ್ಷನ್ ಸೆಂಟರ್ ಕಾಮಗಾರಿಗೆ ಸ್ಥಳದಲ್ಲೇ 5 ಕೋಟಿ ರೂ. ಅನುದಾನ ಕೊಡುವುದಾಗಿ ಘೋಷಿಸಿದರು.

    ಅಷ್ಟೇ ಅಲ್ಲ ರಾಜ್ಯದ ಯಾತ್ರಿಕರು ಕಲಬುರಗಿ ವಿಮಾನ ನಿಲ್ದಾಣದಿಂದಲೇ ನೇರವಾಗಿ ಮೆಕ್ಕಾಗೆ ತೆರಳುವ ವ್ಯವಸ್ಥೆ ಜಾರಿ ಕುರಿತು ಕೇಂದ್ರದ ವಿಮಾನಯಾನ ಸಚಿವಾಲಯದ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ಕೊಟ್ಟರು. ಸದ್ಯ ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೊಟೆಯ ಹಜ್ ಯಾತ್ರಿಕರು ಮೊದಲು ಹೈದರಾಬಾದ್‍ಗೆ ಹೋಗಿ ಅಲ್ಲಿಂದ ಮೆಕ್ಕಾಗೆ ಹೋಗುತ್ತಿದ್ದು, ಮೂರ್ನಾಲ್ಕು ಗಂಟೆ ತಡವಾಗುತ್ತಿದೆ. ಈ ಎರಡೂ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯಕ್ರಮದಲ್ಲಿದ್ದ ಅನರ್ಹ ಶಾಸಕ ಆರ್.ರೋಷನ್ ಬೇಗ್ ಸಿಎಂ ಬಳಿ ಮನವಿ ಮಾಡಿಕೊಂಡರು.

    ಇದೇ ಸಂದರ್ಭದಲ್ಲಿ ಸಿಎಎ ಕಾಯ್ದೆ ಬಗ್ಗೆಯೂ ನೆರೆದಿದ್ದ ಮುಸ್ಲಿಮರಿಗೆ ಸಿಎಂ ಮನವರಿಕೆ ಮಾಡಿಕೊಟ್ಟರು. ಸಿಎಎ ಕಾಯ್ದೆಯಿಂದ ರಾಜ್ಯದ ಮುಸಲ್ಮಾನರಿಗೆ ಸಮಸ್ಯೆ ಆಗಲ್ಲ. ಹಾಗೊಂದು ವೇಳೆ ಕಾಯ್ದೆಯಿಂದ ಯಾವೊಬ್ಬ ಮುಸ್ಲಿಮನಿಗೆ ಸಮಸ್ಯೆ ಆದರೆ ಅದಕ್ಕೆ ತಾವೇ ಜವಾಬ್ದಾರರು. ಸಿಎಎ ಕಾಯ್ದೆ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು.

  • ಏರ್‍ಪೋರ್ಟ್ ಗೆ ಕೆಂಪೇಗೌಡ್ರ ಹೆಸ್ರು, ರೈಲ್ವೇ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸ್ರಿಟ್ಟಾಗ ಮುಸ್ಲಿಮರು ಗಲಾಟೆ ಮಾಡಿದ್ರಾ: ಮುಸ್ಲಿಂ ಕೌನ್ಸಿಲ್ ಬೋರ್ಡ್

    ಏರ್‍ಪೋರ್ಟ್ ಗೆ ಕೆಂಪೇಗೌಡ್ರ ಹೆಸ್ರು, ರೈಲ್ವೇ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸ್ರಿಟ್ಟಾಗ ಮುಸ್ಲಿಮರು ಗಲಾಟೆ ಮಾಡಿದ್ರಾ: ಮುಸ್ಲಿಂ ಕೌನ್ಸಿಲ್ ಬೋರ್ಡ್

    ಬೆಂಗಳೂರು: ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಮತ್ತು ರೈಲ್ವೇ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಾಗ ಮುಸ್ಲಿಮರು ಗಲಾಟೆ ಮಾಡಿದ್ದಾರಾ ಎಂದು ಮುಸ್ಲಿಮ್ ಕೌನ್ಸಿಲ್ ಬೋರ್ಡ್ ಅಧ್ಯಕ್ಷ ಮುಸ್ತಾಫ್ ಪ್ರಶ್ನೆ ಮಾಡಿದ್ದಾರೆ.

    ಹಜ್ ಭವನ ಮುಸ್ಲಿಮರಿಗೆ ಸೇರಿದ್ದು, ಅದಕ್ಕೆ ನಮ್ಮ ನಾಯಕರ ಹೆಸರಿಡೋದು ನಮ್ಮಿಷ್ಟ. ನಾವು ಕೆಂಪೇಗೌಡ, ಸಂಗೊಳ್ಳಿ ರಾಯಣ್ಣ, ದೀನದಯಾಳ್ ಉಪಾಧ್ಯಾಯ ಹೆಸರಿಡೋವಾಗ ಏನಾದ್ರೂ ವಿರೋಧ ಮಾಡಿದ್ವಾ? ಮುಸ್ಲಿಮರ ಭವನಕ್ಕೆ ಟಿಪ್ಪು ಹೆಸರಿಟ್ರೆ ಗಲಾಟೆ ಯಾಕೆ? ಈ ಹಿಂದೆ ದೇವನಹಳ್ಳಿ ಏರ್‍ಪೋರ್ಟ್ ಗೆ ಟಿಪ್ಪು ಹೆಸರಿಡಬೇಕು ಎನ್ನುವಾಗ ದೊಡ್ಡ ಗಲಾಟೆ ಮಾಡಿದ್ರು. ನಮ್ಮ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡೋಕೆ ಯಾಕೆ ತಕರಾರು ಎಂದು ಮುಸ್ತಾಫ್ ಪ್ರಶ್ನೆ ಮಾಡಿದರು.

    ಮೌಲ್ವಿಗಳು ಮತ್ತು ಮುಸ್ಲಿಂ ಬೋರ್ಡ್ ಸದಸ್ಯರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಹಜ್ ಭವನಕ್ಕೆ ಟಿಪ್ಪು ಹೆಸರು ಬೇಕೆ ಬೇಕು ಎಂದು ಒತ್ತಾಯಿಸಿದರು.

    ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್, ಮುಸ್ಲಿಂ ಧರ್ಮಗುರುಗಳು ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಮನವಿ ಸಲ್ಲಿಸಿದ್ದು, ಸಿಎಂ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

     

  • ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಟ್ಟರೆ ಹಿಂದೂಗಳು ದಂಗೆ ಏಳ್ತಾರೆ: ಸೊಗಡು ಶಿವಣ್ಣ

    ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಟ್ಟರೆ ಹಿಂದೂಗಳು ದಂಗೆ ಏಳ್ತಾರೆ: ಸೊಗಡು ಶಿವಣ್ಣ

    ತುಮಕೂರು: ಮೊಘಲರ ದೌಲತ್ತನ್ನು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಈಗ ಮತ್ತೆ ತೋರಿಸುವುದಕ್ಕೆ ಮುಂದಾಗುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿ ಕಾರಿದ್ದಾರೆ.

    ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಏಕವಚನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಮೀರ್‍ನನ್ನು ಹೀಗೆಬಿಟ್ಟರೆ ಮುಂದೊಂದು ದಿನ ಹಜ್ ಭನಕ್ಕೆ ಅಷ್ಟೇ ಅಲ್ಲ, ವಿಧಾನಸೌಧಕ್ಕೂ ಟಿಪ್ಪು ಹೆಸರು ಇಡುತ್ತಾನೆ. ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಟ್ಟಿದ್ದೇ ಆದರೆ ಹಿಂದೂಗಳು ದಂಗೆ ಏಳುವುದು ಖಚಿತ ಎಂದು ಹೇಳಿದರು.

    ನಾವು ಮೊಘಲರ ದಾಳಿ ಸಹಿಸಿಕೊಂಡಿದ್ದೇವೆ. ಬ್ರಿಟಿಷ್ ಹಿಂಸೆ ಸಹಿಸಿಕೊಂಡಿದ್ದೇವೆ. ಇನ್ನು ಮುಂದೆ ನಮ್ಮ ಮೇಲಾಗುವ ಹಿಂಸೆಯನ್ನು ಸಹಿಸಿಕೊಳ್ಳಲ್ಲ. ಕಂಪ್ಯೂಟರ್ ಯುಗದಲ್ಲಿ ಮೊಘಲ್ ಆಳ್ವಿಕೆಯನ್ನು ತೋರಿಸಲು ಜಮೀರ್ ಮುಂದಾಗುತ್ತಿದ್ದಾರೆ. ಇದನ್ನು ಹಿಂದೂಗಳು ಸಹಿಸುವುದಿಲ್ಲ. ಇದು ಕಾಶ್ಮೀರವಲ್ಲ ಜಮೀರ್ ಅವರೇ ಕರ್ನಾಟಕ ಎಂದು ಹೇಳಿ ವಾಗ್ದಾಳಿ ನಡೆಸಿದರು.

    ಅದೃಷ್ಟವಶಾತ್ ಜಮೀರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸರ್ಕಾರ ಜಮ್ಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಇಂತಹ ಹೇಳಿಕೆ ಮೂಲಕ ಜಮೀರ್ ಅವರು ಕೋಮು ಗಲಭೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಜಮೀರ್ ಅವರು ತಮ್ಮ ಉದ್ಧಟತನವನ್ನು ಹೀಗೆ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

  • ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡೋದರಲ್ಲಿ ತಪ್ಪೇನಿಲ್ಲ: ಜಮೀರ್ ಅಹ್ಮದ್ ಸಮರ್ಥನೆ

    ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡೋದರಲ್ಲಿ ತಪ್ಪೇನಿಲ್ಲ: ಜಮೀರ್ ಅಹ್ಮದ್ ಸಮರ್ಥನೆ

    ಬೆಂಗಳೂರು: ನಮ್ಮ ಮುಸ್ಲಿಂ ಧರ್ಮ ಗುರುಗಳು ಹಜ್ ಭವನಕ್ಕೆ ಹಜರತ್ ಟಿಪ್ಪು ಸುಲ್ತಾನ್ ಹೆಸರು ಇಡೋದಕ್ಕೆ ಮನವಿಗಳನ್ನು ಸಲ್ಲಿಸಿದ್ದಾರೆ. ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡೋದರಲ್ಲಿ ತಪ್ಪೇನಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗು ವಕ್ಫ್ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

    ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಜ್ ಭವನವನ್ನು ಉದ್ಘಾಟನೆ ಮಾಡಿದ್ದರು. ಆದ್ರೆ ಮುಸ್ಲಿಂ ಧರ್ಮಗುರುಗಳು ಭವನದ ಹೆಸರು ಬದಲಿಸಬೇಕೆಂದು ಹೇಳುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಹಜ್ ಭವನ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಅದು ಸರ್ಕಾರಿ ಕಟ್ಟಡ ಅಲ್ಲ. ಅದೊಂದು ಧಾರ್ಮಿಕ ಕಟ್ಟಡವಾಗಿದ್ದು, ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ರು.

    ಹಲವು ಕಾರಣಗಳಿಂದ ಟಿಪ್ಪು ಜಯಂತಿ ಆಚರಣೆ ವಿವಾದವಾಗಿತ್ತು. ಆದರೆ ಹಜ್ ಭವನಕ್ಕೆ ಟಿಪ್ಪು ಸುಲ್ತಾನರ ಹೆಸರಿಟ್ಟರೆ ಯಾರೂ ವಿರೋಧ ಮಾಡಲ್ಲ. ಕಾರಣ ಅದೊಂದು ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರತ್ಯೇಕ ಕಟ್ಟಡವಾಗಿದೆ. ಒಂದು ವೇಳೆ ಸಾರ್ವಜನಿಕ ಸ್ಥಳಗಳಿಗೆ ಹೆಸರು ಇಡಲು ಮುಂದಾದ್ರೆ ವಿವಾದ ಆಗುತ್ತೆ ಎಂದು ಹೇಳಿದ್ರು.

    https://www.youtube.com/watch?v=HbpNeA9QQak

  • ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಜಮೀರ್ ಅಹ್ಮದ್ ಆಸಕ್ತಿ

    ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಜಮೀರ್ ಅಹ್ಮದ್ ಆಸಕ್ತಿ

    ಬೆಂಗಳೂರು: ನಗರದ ನಾಗವಾರ ಬಳಿಯ ಹಜ್ ಭವನಕ್ಕೆ ಟಿಪ್ಪು ಸುಲ್ತಾನ ಹೆಸರಿಡಲು ಸಚಿವ ಜಮೀರ್ ಅಹ್ಮದ್ ಆಸಕ್ತಿ ತೋರಿದ್ದಾರೆ.

    ಮುಸ್ಲಿಂ ಧರ್ಮಗುರುಗಳು ಹಜ್ ಭವನಕ್ಕೆ ಟಿಪ್ಪು ಸುಲ್ತಾನ ಹೆಸರಿಡಲು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಹಜ್ ಖಾತೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಮಾತನಾಡಿರುವ ವೀಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ವಿಡಿಯೋದಲ್ಲಿ ಏನಿದೆ?: ಬೆಂಗಳೂರಿನ ಹಜ್ ಭವನಕ್ಕೆ ಹಜರತ್ ಟಿಪ್ಪು ಸುಲ್ತಾನರ ಹೆಸರು ನಾಮಕರಣ ಮಾಡುವಂತೆ ಮುಸ್ಲಿಂ ಧರ್ಮಗುರುಗಳು ನನ್ನನ್ನು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇನೆ ಅಂತಾ ತಿಳಿಸಿದ್ದಾರೆ.

    ಈ ಹಿಂದೆ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸಿತ್ತು. ಆದ್ರೆ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದವು. ಇದೀಗ ಸಿಎಂ ಕುಮಾರಸ್ವಾಮಿ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.