Tag: ಹಕ್ಕಿ ಜ್ವರ

  • ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಅದರಂತೆ ರಾಜ್ಯದಲ್ಲಿಯೂ ಕೊರೊನಾ ವೈರಸ್‍ನ ಪರಿಣಾಮ ಸಾಕಷ್ಟಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಕುಕ್ಕುಟೋದ್ಯಮ ನಷ್ಟ ಅನುಭವಿಸುತ್ತಿದೆ. ಶಿವಮೊಗ್ಗದ ಸಂತೆಕಡೂರಿನಲ್ಲಿ ಶ್ರೀನಿವಾಸ್ ಕೋಳಿ ಫಾರಂನ ಮಾಲೀಕರಾದ ಶ್ರೀನಿವಾಸ್ ನಷ್ಟ ಅನುಭವಿಸಿದ್ದು, ಸುಮಾರು 4 ಸಾವಿರ ಜೀವಂತ ಕೋಳಿಮರಿಗಳನ್ನು ಗುಂಡಿ ತೆಗೆದು ಹೂತಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಜಗತ್ತಿನ ಹಲವು ದೇಶಗಳ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿದೆ. ಈ ನಡುವೆ ರಾಜ್ಯದಲ್ಲಿಯೂ ಕೊರೊನಾ ವೈರಸ್ ಭೀತಿಯ ಎಫೆಕ್ಟ್ ಬಹಳ ಜೋರಾಗಿದ್ದು, ಈಗಾಗಲೇ ರಾಜ್ಯದಲ್ಲಿ 4 ಮಂದಿಗೆ ಈ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಹಕ್ಕಿ ಜ್ವರದ ಭೀತಿ ಕೂಡ ಶುರುವಾಗಿದ್ದು, ಶಿವಮೊಗ್ಗದ ಕುಕ್ಕುಟೋದ್ಯಮದ ಮೇಲೆ ಭಾರೀ ಗಂಭೀರ ಪರಿಣಾಮ ಬೀರಿದೆ.

    ಶಿವಮೊಗ್ಗದ ಸಂತೆಕಡೂರು ಗ್ರಾಮದ ಶ್ರೀನಿವಾಸ್ ಕೋಳಿ ಫಾರಂನಲ್ಲಿದ್ದ 22 ದಿನಗಳ ಸುಮಾರು 4 ಸಾವಿರ ಕೋಳಿ ಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿದೆ. ಕಳೆದ ನಾಲ್ಕು ದಿನಗಳಿಂದ ಕೋಳಿ ಮಾಂಸ ಮಾರಾಟಗಾರರು ಕೋಳಿ ಖರೀದಿಗೆ ಹಿಂದೇಟು ಹಾಕಿದ್ದು, ಸುಮಾರು 170 ರೂ. ಇದ್ದ ಕೋಳಿ ಮಾಂಸದ ಬೆಲೆ ಕೇವಲ 70 ರೂ. ಗೆ ಇಳಿದಿದೆ. ಇದರಿಂದಾಗಿ ಭಾರೀ ನಷ್ಟವುಂಟಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಕೂಡ ನಷ್ಟದ ಹಾದಿಯಲ್ಲಿದ್ದು, ತಾವು ಫಾರಂನಲ್ಲಿ ಬೆಳೆಸಲಾಗುತ್ತಿರುವ ಕೋಳಿಗಳಿಗೆ ಬೆಲೆ ಇಲ್ಲದಂತಾಗಿ ನಷ್ಟ ಅನುಭವಿಸುವ ಬದಲು ಜೀವಂತವಾಗಿ ಹೂತರೆ ಇನ್ನಷ್ಟು ನಷ್ಟವುಂಟಾಗುವುದು ತಪ್ಪುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

    ಇಂದು ಜೆಸಿಬಿ ಮೂಲಕ 12 ಅಡಿ ಆಳದ ಗುಂಡಿ ತೆಗೆದು ಜೀವಂತವಾಗಿ ಕೋಳಿ ಮರಿಗಳನ್ನು ಹೂತು ಹಾಕಿದ್ದಾರೆ. ಶ್ರೀನಿವಾಸ್ ಅವರಿಗೆ ಒಂದು ಕೆಜಿ ಕೋಳಿಗೆ ಕೇವಲ 8 ರೂ. ಮಾತ್ರ ಸಿಗುತ್ತಿದ್ದು, ಕೋಳಿ ಸಾಕಲು 16 ರೂ. ವರೆಗೂ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡೂವರೆ ಲಕ್ಷ ಖರ್ಚಾಗಿದ್ದು, ಇದನ್ನು ಮತ್ತೆ ಸಾಕಲು ಮುಂದಾದರೆ ಮತ್ತೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತದೆ. ಹೀಗಾಗಿ ಈಗಲೇ ಹೂತು ಹಾಕಿದರೇ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿದಂತಾಗುತ್ತದೆ ಎಂಬ ನಿರ್ಧಾರಕ್ಕೆ ಶ್ರೀನಿವಾಸ್ ಬಂದಿದ್ದಾರೆ.

    ಆದ್ದರಿಂದ ಶ್ರೀನಿವಾಸ್ ಅವರು 4 ಸಾವಿರ ಕೋಳಿಗಳನ್ನು ಸಮಾಧಿ ಮಾಡುವ ತೀರ್ಮಾನಕ್ಕೆ ಬಂದಿದ್ದು, ಜೀವಂತ ಕೋಳಿಗಳನ್ನು ತಮ್ಮ ಫಾರಂನ ಆವರಣದಲ್ಲಿಯೇ ಹೂತಿದ್ದಾರೆ. ಕೊರೊನಾ ವೈರಸ್ ಭೀತಿಗೆ ಜನರು ಕೋಳಿ ಮಾಂಸ ಸೇವಿಸದೇ ಇರುವುದೇ ಈ ನಷ್ಟಕ್ಕೆ ಕಾರಣವಾಗಿದೆ. ಕೋಳಿ ಕೃಷಿ ಮಾಡುವವರು ಇದೀಗ ಬೀದಿಗೆ ಬರುವಂತಾಗಿದ್ದು, ಮಾಂಸ ಮಾರಾಟಗಾರರು ಕೂಡ ಮಾಂಸ ಮಾರಾಟ ಮಾಡಲಾಗದೇ, ಕೋಳಿಗಳನ್ನ ಖರೀದಿಸದೇ ಸುಮ್ಮನಾಗಿದ್ದಾರೆ.

    ಕೊರೊನಾ ವೈರಸ್ ಕೋಳಿಯಿಂದ ಬಾರಲ್ಲ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತೆದೆ. ಹೀಗಾಗಿ ಕೋಳಿ ತಿನ್ನುವುದರಲ್ಲಿ ಸಮಸ್ಯೆ ಇಲ್ಲ. ಕೋಳಿ ಮಾಂಸ ಖರೀದಿಸಿ, ನಮ್ಮನ್ನು ಉಳಿಸಿ ಎಂಬುದು ಕೋಳಿ ಫಾರಂ ಮಾಲೀಕರ ಅಳಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೋಳಿ ಫಾರಂ ಮಾಲೀಕರು ಮನವಿ ಮಾಡಿದ್ದಾರೆ.

    ಕೊರೊನಾ ವೈರಸ್ ಮತ್ತು ಹಕ್ಕಿ ಜ್ವರದ ಭೀತಿ ಪರಿಣಾಮದಿಂದಾಗಿ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಇದೀಗ ಜಿಲ್ಲೆಯಲ್ಲಿ ಪ್ರಥಮ ಕೋಳಿ ಫಾರಂ ಮುಚ್ಚಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಏನೇ ಆಗಲಿ ಕೊರೊನಾ ವೈರಸ್‍ನ ಭೀತಿಯಿಂದಾಗಿ ಜನರು ನಲುಗಿಹೋಗಿದ್ದು, ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

  • ತೀವ್ರಗೊಂಡ ಹಕ್ಕಿ ಜ್ವರ ಭೀತಿ – ಕಳೆದೊಂದು ವಾರದಲ್ಲಿ 12 ಕೊಕ್ಕರೆಗಳು ಸಾವು

    ತೀವ್ರಗೊಂಡ ಹಕ್ಕಿ ಜ್ವರ ಭೀತಿ – ಕಳೆದೊಂದು ವಾರದಲ್ಲಿ 12 ಕೊಕ್ಕರೆಗಳು ಸಾವು

    ಮೈಸೂರು: ಕೊರೊನಾ ವೈರಸ್ ಹಾವಳಿಯ ನಡುವೆಯೇ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ನಗರದಲ್ಲಿ ಕಳೆದ ಒಂದು ವಾರದಿಂದ ಹನ್ನೆರಡು ಕೊಕ್ಕರೆಗಳು ಸಾವನ್ನಪ್ಪಿವೆ.

    ನೆರೆಯ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಕೊಕ್ಕರೆಗಳ ಸಾವು ಮೈಸೂರಿನಲ್ಲಿ ತಲ್ಲಣ ಉಂಟು ಮಾಡಿದೆ. ಮೈಸೂರಿನ ವಾರ್ಡ್ ನಂಬರ್ 55ರ ವ್ಯಾಪ್ತಿಯಲ್ಲೇ 12 ಕೊಕ್ಕರೆಗಳು ಸಾವನ್ನಪ್ಪಿದ್ದು, ಸ್ಥಳೀಯ ನಗರಪಾಲಿಕೆ ಸದಸ್ಯ ರಾಮಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ರಾಮಪ್ರಸಾದ್ ಅವರು ಮಹಾನಗರ ಪಾಲಿಕೆಯ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಡಾ.ನಾಗರಾಜ್ ಅವರು ಮೃತ ಕೊಕ್ಕರೆಗಳ ದೇಹದ ತುಣುಕುಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಕೊಕ್ಕರೆಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

  • ಕೊರೊನಾ ಆಯ್ತು, ಈಗ ಹೆಚ್1 ಎನ್1 ಭಯ- ಹಕ್ಕಿ ಜ್ವರದ ಲಕ್ಷಣಗಳೇನು?

    ಕೊರೊನಾ ಆಯ್ತು, ಈಗ ಹೆಚ್1 ಎನ್1 ಭಯ- ಹಕ್ಕಿ ಜ್ವರದ ಲಕ್ಷಣಗಳೇನು?

    – ಕೇರಳದಲ್ಲಿ 12,931 ಕೋಳಿಗಳ ಸಂಹಾರಕ್ಕೆ ಆದೇಶ

    ಬೆಂಗಳೂರು: ಮಹಾಮಾರಿ ಕೊರೊನಾ ಆಯ್ತು, ಇದೀಗ ರಾಜ್ಯದ ಜನರಿಗೆ ಹೆಚ್1 ಎನ್1 ಭಯ ಶುರುವಾಗಿದೆ. ನೆರೆಯ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಆತಂಕಕ್ಕೀಡು ಮಾಡಿದೆ.

    ಕರ್ನಾಟಕದ ಗಡಿ ಭಾಗ ಬಂಡೀಪುರದಿಂದ 130 ಕಿ.ಮೀ. ದೂರದ ಕೋಯಿಕ್ಕೋಡ್‍ನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಸ್ಯಾಂಪಲ್‍ಗಳ ಪರೀಕ್ಷೆ ನಡೆಸಿದ ಮಧ್ಯಪ್ರದೇಶದ ಭೋಪಾಲ್‍ನಲ್ಲಿರುವ ಪ್ರಯೋಗಾಲಯ ಇಲ್ಲಿನ ಕೋಳಿಗಳಲ್ಲಿ ಹಕ್ಕಿಜ್ವರ ಇರುವುದನ್ನು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ 12,931 ಕೋಳಿಗಳ ಸಂಹಾರಕ್ಕೆ ಆದೇಶ ನೀಡಿದೆ. 1 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿಗಳ ಸಂಹಾರಕ್ಕೆ ಆದೇಶ ನೀಡಿದ್ದು, ಕರ್ನಾಟಕದ ಗಡಿಭಾಗದಲ್ಲಿ ಈಗ ಹೈಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಮೈಸೂರಿನ ಗುಂಡ್ಲುಪೇಟೆ, ಮಡಿಕೇರಿ ಭಾಗದಲ್ಲಿ ಎಚ್ಚರ ವಹಿಸಲಾಗಿದ್ದು, ಕೇರಳದಿಂದ ಕೋಳಿಗಳು ಬರದಂತೆ ನಿಗಾ ವಹಿಸಲಾಗಿದೆ.

    ಕೊಡಿಯತ್ತೂರು ಕೋಳಿ ಫಾರಂನಲ್ಲಿ 6193, ಕೋಯಿಕ್ಕೋಡ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ 3524, ಚಾತ್ತಮಂಗಲಂ ಪಂಚಾಯತ್ ವ್ಯಾಪ್ತಿಯಲ್ಲಿ 3214 ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಆದರೆ ಇದೂವರೆಗೆ ಇಲ್ಲಿನ ಸೋಂಕು ಮನುಷ್ಯರಿಗೆ ಹರಡಿಲ್ಲ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

    ಸದ್ಯ ಹಕ್ಕಿಜ್ವರ ಕಾಣಿಸಿಕೊಂಡಿರುವ ಊರಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇರಳ ಸರ್ಕಾರ ಸೂಚನೆ ನೀಡಿದೆ. ಅಲ್ಲದೆ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಶುಸಂಗೋಪನೆ, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

    ಕೇರಳದಲ್ಲಿ ಬರ್ಡ್ ಫ್ಲೂ ಕಾಣಿಸಿಕೊಂಡ ಬೆನ್ನಲ್ಲೇ ಕರ್ನಾಟಕದಲ್ಲೂ ಅಲರ್ಟ್ ಘೋಷಿಸಲಾಗಿದೆ. ರಷ್ಯಾ ಸೇರಿದಂತೆ ನಾನಾ ದೇಶದಿಂದ ಕರ್ನಾಟಕಕ್ಕೂ ಹಕ್ಕಿಗಳು ವಲಸೆ ಬರುತ್ತವೆ. ಈ ತಿಂಗಳಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ದೇಶದಿಂದ ರಂಗನತಿಟ್ಟು, ಕೊಕ್ಕರೆಬೆಳ್ಳೂರು ಸೇರಿದಂತೆ ಹಲವಾರು ಪಕ್ಷಿಧಾಮಗಳಿಗೆ ಹಕ್ಕಿಗಳು ವಲಸೆ ಬರುತ್ತವೆ. ಇವುಗಳ ಮೂಲಕ ಕೋಳಿಗಳಿಗೂ ಹಕ್ಕಿಜ್ವರ ಹಬ್ಬುವ ಭೀತಿ ಉಂಟಾಗಿದೆ. ಹೀಗಾಗಿ ಪಕ್ಷಿಧಾಮದ ಸಿಬ್ಬಂದಿಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಬರ್ಡ್ ಇನ್‍ಫ್ಲೂಯೆನ್ಝಾ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಎಚ್5ಎನ್1 ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗು ಆಗಿದೆ. ಕೋಳಿಗಳ ಗುಂಪಿನಲ್ಲಿ ಒಂದು ಕೋಳಿಗೆ ಸೋಂಕು ಅಂಟಿದರೂ ಸಾಕು 48 ಗಂಟೆಗಳ ಒಳಗೆ ಗುಂಪಿನ ಎಲ್ಲ ಕೋಳಿಗಳೂ ಸೋಂಕಿನಿಂದ ಸತ್ತು ಹೋಗುತ್ತವೆ. 2012 ರಲ್ಲಿ ಬೆಂಗಳೂರಿನ ಹೆಸರಘಟ್ಟ ಫಾರಂಗಳಲ್ಲಿ ಈ ಕಾಯಿಲೆ ಕಂಡುಬಂದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. 2016ರಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು.

    ಹಕ್ಕಿ ಜ್ವರ ಲಕ್ಷಣಗಳೇನು?
    ಹಕ್ಕಿ ಜ್ವರದ ಸೋಂಕಿಗೆ ಒಳಗಾಗುವ ವ್ಯಕ್ತಿಗಳಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಅತಿಯಾದ ಜ್ವರ, ಕೆಮ್ಮು, ತಲೆನೋವು, ಉಸಿರಾಡಲು ತೊಂದರೆಯಾಗುವುದು. ಎಕ್ಸ್ ರೇ ಪರೀಕ್ಷೆಯಿಂದ ಎದೆಯಲ್ಲಿ ಉಂಟಾಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ. ಹಕ್ಕಿ ಜ್ವರದಿಂದ ಸಾವು ಕೂಡ ಸಂಭವಿಸಬಹುದು.

    ರೋಗಿಯ ಮೂಗು ಮತ್ತು ಗಂಟಲಿನ ದ್ರವವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ರೋಗ ಅಂಟಿರುವುದನ್ನು ದೃಢಪಡಿಸಿಕೊಳ್ಳಬಹುದು. 2016ರಲ್ಲಿ ರಾಜ್ಯದ ಅನೇಕ ಭಾಗದಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ ಸದ್ಯ ಕೊರೊನಾ ಬಳಿಕ ಈ ಕಾಯಿಲೆ ಜನರನ್ನು ನಿದ್ದೆಗೆಡುವಂತೆ ಮಾಡಿದೆ.

  • ಹಕ್ಕಿ ಜ್ವರದ ಆತಂಕ- ಸೋಂಕು ಹೆಚ್ಚಾದ್ರೆ ಮೃಗಾಲಯ ಬಂದ್

    ಹಕ್ಕಿ ಜ್ವರದ ಆತಂಕ- ಸೋಂಕು ಹೆಚ್ಚಾದ್ರೆ ಮೃಗಾಲಯ ಬಂದ್

    ಮೈಸೂರು: ಮೈಸೂರು ಮೃಗಾಲಯಕ್ಕೆ ಮತ್ತೆ ಹಕ್ಕಿ ಜ್ವರದ ಆತಂಕ ಶುರುವಾಗಿದೆ. 2017ರಲ್ಲಿ ಬಂದಿದ್ದ ಹಕ್ಕಿ ಜ್ವರದಿಂದ ಮೈಸೂರು ಮೃಗಾಲಯದಲ್ಲಿ ಸಾಲು ಸಾಲು ಪಕ್ಷಿಗಳು ಸತ್ತಿದ್ದ ಕಾರಣ ಮೃಗಾಲಯವನ್ನು ಒಂದು ತಿಂಗಳು ಮುಚ್ಚಲಾಗಿತ್ತು. ಈಗ ಮೈಸೂರಿನ ಕುಕ್ಕರಹಳ್ಳಿಕೆರೆಯಲ್ಲಿ ಎರಡು ಪೆಲಿಕಾನ್ ಸಾವಿನಿಂದ ಮತ್ತೆ ಹಕ್ಕಿ ಜ್ವರ ಅಪ್ಪಳಿಸುವ ಆತಂಕ ಸೃಷ್ಟಿಯಾಗಿದೆ.

    ಅಕ್ಟೋಬರ್ 25 ಹಾಗೂ ಅಕ್ಟೋಬರ್ 28ರಂದು ಎರಡು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. 2017ರಲ್ಲೂ ಮೊದಲು ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್‍ಗಳ ಸಾವು ಸಂಭವಿಸಿತ್ತು. ನಂತರ ಮೃಗಾಲಯದಲ್ಲಿನ ಪಕ್ಷಿಗಳಿಗೆ ಹಕ್ಕಿ ಜ್ವರ ಬಂದಿತ್ತು. ಪರಿಣಾಮವಾಗಿ ಒಂದು ತಿಂಗಳು ಮೃಗಾಲಯದ ಬಾಗಿಲು ಬಂದ್ ಮಾಡಲಾಗಿತ್ತು.

    ಇದೀಗ ಮತ್ತದೆ ಆತಂಕದಲ್ಲಿ ಮೈಸೂರು ಮೃಗಾಲಯವಿದೆ. ಈಗ ಹಕ್ಕಿಗಳ ವಲಸೆ ಸಮಯ. ದೇಶ ವಿದೇಶಗಳಿಂದ ಪಕ್ಷಿಗಳು ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಹಾಗೂ ಮೃಗಾಲಯಕ್ಕೆ ವಲಸೆ ಬರುತ್ತವೆ. ಈ ವಲಸೆಯಿಂದ ಮತ್ತೆ ಹಕ್ಕಿ ಜ್ವರ ಸೊಂಕು ತಗುಲುವ ಭೀತಿ ಶುರುವಾಗಿದೆ. ಮುನ್ನಚ್ಚರಿಕಾ ಕ್ರಮವಾಗಿ ಮೃಗಾಲಯದಲ್ಲಿ ಪಕ್ಷಿ ಪ್ರಾಣಿಗಳ ಮೇಲೆ ನಿಗಾ ಇಡಲಾಗಿದೆ.

  • ಚಿಕನ್ ಪ್ರಿಯರೇ ಎಚ್ಚರ- ಸಿಲಿಕಾನ್ ಸಿಟಿಯಲ್ಲಿ ಕಾಣಿಸಿಕೊಂಡಿದೆ ಹಕ್ಕಿ ಜ್ವರ

    ಚಿಕನ್ ಪ್ರಿಯರೇ ಎಚ್ಚರ- ಸಿಲಿಕಾನ್ ಸಿಟಿಯಲ್ಲಿ ಕಾಣಿಸಿಕೊಂಡಿದೆ ಹಕ್ಕಿ ಜ್ವರ

    ಬೆಂಗಳೂರು: ಚಿಕನ್ ಪ್ರಿಯರೇ ಸ್ವಲ್ಪ ಎಚ್ಚರವಾಗಿರಿ. ಸಿಲಿಕಾನ್ ಸಿಟಿಯಲ್ಲಿ ಈಗ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಚಿಕನ್ ತಿನ್ನೋ ಮೊದಲು ಹುಷಾರಾಗಿರಿ.

    ಐಟಿ-ಬಿಟಿ ಮಂದಿ ಈಗಾಗಲೇ ಡೆಂಗ್ಯೂ, ಚಿಕೂನ್ ಗುನ್ಯ ಜ್ವರಗಳಿಂದ ಸಾವನ್ನಪ್ಪುತ್ತಿದ್ದಾರೆ. ಈ ಸಂದರ್ಭದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ದಾಸರಹಳ್ಳಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಕಳೆದ ವಾರ ತಮಿಳುನಾಡಿನ 15 ಕೋಳಿಯನ್ನ ನಗರದ ದಾಸರಹಳ್ಳಿಯ ಕೆಜಿಎನ್ ಕೋಳಿ ಅಂಗಡಿ ಮಾಲೀಕ ಖರಿದೀಸಿದ್ದರು. ಅದರಲ್ಲಿ ನಾಲ್ಕೈದು ಕೋಳಿಗಳು ಸಾವನ್ನಪಿದ್ದು, ಮೃತ ಕೋಳಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಹಕ್ಕಿ ಜ್ವರ ಇರುವುದು ಪತ್ತೆಯಾಗಿದೆ.

    ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಬಿಎಂಪಿ ಎಚ್ಚೆತ್ತುಕೊಂಡು ಹೊರರಾಜ್ಯದ ಕೋಳಿಗಳನ್ನ ಖರೀದಿಸದಂತೆ ಚಿಕನ್ ಅಸೋಸಿಯೇಷನ್‍ಗೆ ತಿಳಿಸಿದೆ. ಅಷ್ಟೇ ಅಲ್ಲದೇ ಈ ಹಕ್ಕಿ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

  • 1 ತಿಂಗಳಿಂದ ಬಂದಾಗಿದ್ದ ಮೈಸೂರು ಮೃಗಾಲಯ ಇಂದಿನಿಂದ ಓಪನ್

    ಮೈಸೂರು: ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ 1 ತಿಂಗಳಿನಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯ ಇಂದಿನಿಂದ ತೆರೆಯಲಿದೆ. ಭೋಪಾಲ್ ಲ್ಯಾಬ್ ವರದಿ ಆಧಾರದ ಮೇಲೆ ಮೃಗಾಲಯ ರೀ ಓಪನ್ ಆಗುತ್ತಿದ್ದು ಪ್ರಾಣಿಪ್ರಿಯರ ಹಾಗೂ ಮೃಗಾಲಯ ಸಮೀಪದ ವ್ಯಾಪಾರಸ್ಥರ ಸಂತಸಕ್ಕೆ ಕಾರಣವಾಗಿದೆ.

    ಭೋಪಾಲ್ ಲ್ಯಾಬ್‍ನಲ್ಲಿ ಪಕ್ಷಿಗಳ ಎರಡನೇ ಮಾದರಿಯಲ್ಲೂ ಯಾವುದೇ ಸೊಂಕಿನ ಅಂಶ ಇಲ್ಲ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಕಾರ್ಯದರ್ಶಿ ಹಾಗೂ ಸೆಂಟ್ರಲ್ ಝೂ ಅಥಾರಿಟಿ ಮೈಸೂರು ಮೃಗಾಲಯವನ್ನ ಪುನರಾರಂಭಿಸುವಂತೆ ಸೂಚನೆ ನೀಡಿದೆ. ಹಾಗಾಗಿ ಪ್ರವಾಸಿಗರು, ಸಾರ್ವಜನಿಕರು ಯಾವುದೇ ಅಳುಕಿಲ್ಲದೆ ಮೃಗಾಲಯಕ್ಕೆ ಹೋಗಿ ಬರಬಹುದು.

    ಹಕ್ಕಿ ಜ್ವರ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಸಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಐತಿಹಾಸಿಕ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ಕಾಲ ಮುಚ್ಚಲಾಗಿತ್ತು. ಮೃಗಾಲಯದ ಕೊಳ-3ರಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿದ್ದು, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್‍ಐಎಚ್‍ಎಸ್‍ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವ ಬಗ್ಗೆ ದೃಢಪಟಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 4 ರಿಂದ ಫೆಬ್ರವರಿ 2ರವರೆಗೆ ಮೃಗಾಲಯವನ್ನು ಅಲ್ಲಿನ ಆಡಳಿತ ಮಂಡಳಿ ಬಂದ್ ಮಾಡಿತ್ತು.