Tag: ಹಕ್ಕಿ ಜ್ವರ

  • ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಚಾಮರಾಜನಗರ: ನೆರೆಯ ರಾಜ್ಯ ಕೇರಳದಲ್ಲಿ (Kerala) ಹಕ್ಕಿ ಜ್ವರದ (Bird flu) ಆತಂಕದ ಹಿನ್ನೆಲೆಯಲ್ಲಿ ಚಾಮರಾಜನಗರ ಗಡಿಯಲ್ಲಿ (Chamarajanagar Border) ಕಟ್ಟೆಚ್ಚರ ವಹಿಸಲಾಗಿದೆ.

    ಬಂಡೀಪುರ ಅಭಯಾರಣ್ಯದ ಕೇರಳ ಕರ್ನಾಟಕ ಗಡಿ ಮೂಳೆ ಹೊಳೆಯಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಭಯಾರಣ್ಯದ ಬಳಿ ಹಕ್ಕಿ ಜ್ವರ ಭೀತಿಗೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕೇರಳದಿಂದ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವ ಸರಕು, ಕೋಳಿ ತುಂಬಿದ್ದ ವಾಹನಗಳಿಗೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಮೋದಿ ಭೇಟಿ – ಬೀದರ್‌ನಲ್ಲಿ ಬಸ್ ಇಲ್ಲದೇ ಪ್ರಯಾಣಿಕರು ಪರದಾಟ

    ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿ ನಾಟಿ ಕೋಳಿ ಸಾವನ್ನಪ್ಪಿದ್ದವು. ಇದರಿಂದ ಹಕ್ಕಿ ಜ್ವರದ ಆತಂಕವಿತ್ತು. ಇದೀಗ ಆ ಕೋಳಿಯ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ರವಾನಿಸಲಾಗಿದೆ.

    ಸದ್ಯ ಯಾವುದೇ ಭಯಪಡುವ ಅಗತ್ಯವಿಲ್ಲ, ವರದಿ ಬಂದ ನಂತರ ಮತ್ತಷ್ಟು ಸೂಕ್ತ ಕ್ರಮ ವಹಿಸುತ್ತೇವೆ ಎಂದು ಚಾಮರಾಜನಗರದ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಶಿವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೇರಳದಲ್ಲಿ ಹಕ್ಕಿ ಜ್ವರದ ಭೀತಿ – 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

    ಕೇರಳದಲ್ಲಿ ಹಕ್ಕಿ ಜ್ವರದ ಭೀತಿ – 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

    ತಿರುವನಂತಪುರಂ: ಕೇರಳದ (Kerala) ಕೊಟ್ಟಾಯಂ (Kottayam) ಜಿಲ್ಲೆಯ 3 ಪಂಚಾಯಿತಿಗಳಲ್ಲಿ ಏಕಾಏಕಿ ಹಕ್ಕಿ ಜ್ವರ (Bird Flu) ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ 6,000ಕ್ಕೂ ಅಧಿಕ ಪಕ್ಷಿಗಳನ್ನು (Birds) ಹತ್ಯೆ ಮಾಡಲಾಗಿದೆ.

    ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಭೀತಿ ಆವರಿಸಿದ್ದು, ಈ ಮಧ್ಯೆ ದೇಶದಲ್ಲಿ ಹಕ್ಕಿ ಜ್ವರ ಸದ್ದು ಮಾಡುತ್ತಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ವೇಚೂರು, ನಿಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ 6,017 ಪಕ್ಷಿಗಳನ್ನು ಸಂಹರಿಸಲಾಗಿದೆ. ಅದರಲ್ಲೂ ಹೆಚ್ಚಾಗಿ ಬಾತುಕೋಳಿಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    Bird flu

    ಕೇರಳದ ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನಿಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳನ್ನು ಕೊಲ್ಲಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?

    ಈ ಹಕ್ಕಿ ಜ್ವರದ ಭೀತಿಯಿಂದಾಗಿ ಇಂದು ಮುಂಜಾನೆ ಕೇರಳದ ರೈತರು ಬಾತುಕೋಳಿಗಳನ್ನು ಹಿಡಿದು ಅವುಗಳನ್ನು ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಕೇರಳದಲ್ಲಿ ಹಕ್ಕಿಜ್ವರದ ಹರಡುತ್ತಿರುವುದರ ಬಗ್ಗೆ ವರದಿಯಾದ ಬೆನ್ನಲ್ಲೇ ಲಕ್ಷದ್ವೀಪಗಳಿಗೆ ಕೋಳಿಯನ್ನು ಸಾಗಿಸುವುದನ್ನು ನಿಷೇಧಿಸಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ. ಇದನ್ನೂ ಓದಿ: ರಾಜಕೀಯ ಜಂಜಾಟದ ನಡುವೆ ಯುವಕರೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರದ ಥಾಣೆಯಲ್ಲಿ ಹಕ್ಕಿ ಜ್ವರ ಭೀತಿ – 25,000 ಕೋಳಿಗಳನ್ನು ಕೊಲ್ಲಲು ಆದೇಶ

    ಮಹಾರಾಷ್ಟ್ರದ ಥಾಣೆಯಲ್ಲಿ ಹಕ್ಕಿ ಜ್ವರ ಭೀತಿ – 25,000 ಕೋಳಿಗಳನ್ನು ಕೊಲ್ಲಲು ಆದೇಶ

    ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಪೀಡಿತ ಕೋಳಿ ಫಾರ್ಮ್‍ನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಸುಮಾರು 25,000 ಕೋಳಿಗಳನ್ನು ಮುಂದಿನ ಕೆಲವು ದಿನಗಳಲ್ಲಿ ಕೊಲ್ಲಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಶ್ ಜೆ. ನಾರ್ವೇಕರ್ ಹೇಳಿದ್ದಾರೆ.

    Bird flu

    ಜಿಲ್ಲೆಯ ಪಶುಸಂಗೋಪನಾ ಇಲಾಖೆಯು ಇತರ ಪಕ್ಷಿಗಳಿಗೆ ಸೋಂಕು ಹರಡದಂತೆ ಕ್ರಮಗಳನ್ನು ಕೈಗೊಳ್ಳಲಿದೆ. ಹಕ್ಕಿ ಜ್ವರ ಕಾಣಿಸಿಕೊಂಡಿರುವ ಕೋಳಿಯ ಮಾದರಿಗಳನ್ನು ಪುಣೆಯ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ನಾರ್ವೇಕರ್ ತಿಳಿದ್ದಾರೆ. ಇದನ್ನೂ ಓದಿ: ಹಿಜಬ್ ಬಳಿಕ ಸಿಂಧೂರ ವಿವಾದ – ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ

    ಶಹಾಪುರದ ಕೋಳಿ ಫಾರಂನಲ್ಲಿ ಸುಮಾರು 100 ಕೋಳಿಗಳು ಸಾವನ್ನಪ್ಪಿದ ಬಳಿಕ ಥಾಣೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಶಹಾಪುರ ತಾಲೂಕಿನ ವೆಹ್ಲೋಳಿ ಗ್ರಾಮದ ಕೋಳಿ ಫಾರಂನಲ್ಲಿ ಇತ್ತೀಚೆಗೆ ಸುಮಾರು 100 ಕೋಳಿಗಳು ಸಾವನ್ನಪ್ಪಿದ್ದು, ಅದರ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಫಲಿತಾಂಶಗಳು ಎಚ್5ಎನ್1 ಏವಿಯನ್ ಇನ್ಫ್ಲುಯೆನ್ಸದಿಂದ ಸಾವನ್ನಪ್ಪಿವೆ ಎಂದು ದೃಢಪಡಿಸಿದೆ ಎಂದು ಥಾಣೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಭೌಸಾಹೇಬ್ ಡಾಂಗ್ಡೆ ಹೇಳಿದ್ದಾರೆ. ಜೊತೆಗೆ ಥಾಣೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಇವ್ರರನ್ನು ಅರೆಸ್ಟ್ ಮಾಡ್ರಿ – ವಿದ್ಯಾರ್ಥಿನಿಯರ ವಿರುದ್ಧ ಮಡಿಕೇರಿ ಪ್ರಿನ್ಸಿ ಕೆಂಡಾಮಂಡಲ

  • ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ತಿರುವನಂತಪುರಂ: ಕೇರಳದ ಆಲಪ್ಪುಳದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ವಾರ ಆಲಪ್ಪುಳ ಜಿಲ್ಲೆಯ ಕೋಟ್ಟನಾಡ್‍ನಲ್ಲಿ ರೈತರೊಬ್ಬರು ಸಾಕಿದ್ದ ಸಾವಿರಾರು ಬಾತುಕೋಳಿಗಳು ಮತ್ತು ಸ್ಥಳೀಯ ಹಕ್ಕಿಗಳು ಸತ್ತ ಹಿನ್ನೆಲೆ ಅಧಿಕಾರಿಗಳು ಭೋಪಾಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ಗೆ ಮಾದರಿಗಳನ್ನು ಕಳುಹಿಸಿದ್ದರು. ಇದೀಗ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿದೆ.

    ಹೀಗಾಗಿ ಹಕ್ಕಿ ಜ್ವರ ಹರಡದಂತೆ ರೋಗ ಪೀಡಿತ ಪ್ರದೇಶದಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲು ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಇದೀಗ ಪ್ರಕರಣ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು ಮತ್ತು ಇತರ ಪಕ್ಷಿಗಳನ್ನು ನಾಶಗೊಳಿಸಲು ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಸೋಂಕು ಹರಡುವುದನ್ನು ತಡೆಗಟ್ಟಲು 12 ಕಿ.ಮೀ. ದೂರದಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು, ಗೊಬ್ಬರ ಮತ್ತು ಇತರ ಹಕ್ಕಿಗಳ ಚಲನೆಯ ಮೇಲೆ ನಿರ್ಬಂಧ ಹೇರಲಾಗಿದೆ. ಈ ವರ್ಷ ಕೇರಳದಲ್ಲಿ ಎರಡನೇ ಬಾರಿಗೆ ಹಕ್ಕಿ ಜ್ವರ ದೃಢಪಟ್ಟಿದೆ. ಇದನ್ನೂ ಓದಿ: ರಾವತ್, ಸೇನಾಧಿಕಾರಿಗಳ ಮರಣ ಸಂಭ್ರಮಿಸಿದ ಕಿಡಿಗೇಡಿಗಳ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ

  • ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ- 48 ಕಾಗೆಗಳ ಸಾವು!

    ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ- 48 ಕಾಗೆಗಳ ಸಾವು!

    ಭೋಪಾಲ್: ಮಧ್ಯಪ್ರದೇಶದ ಅಗರ್‌ ಮಲ್ವಾ ಜಿಲ್ಲೆಯಲ್ಲಿ ಹಕ್ಕಿ ಜ್ವರದಿಂದಾಗಿ ಕಳದ ನಾಲ್ಕು ದಿನಗಳ ಅವಧಿಯಲ್ಲಿ 48 ಕಾಗೆಗಳು ಮೃತಪಟ್ಟಿರುವ ಘಟನೆ ನಡೆದಿದೆ.

    ಮೃತ ಕಾಗೆಗಳ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕಾಗೆಗಳು ಹಕ್ಕಿ ಜ್ವರದಿಂದ ಮೃತಪಟ್ಟಿವೆ (ಎಚ್‌5ಎನ್‌8) ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಅಗರ್‌ ಮಾಲ್ವಾ ಡಿಸಿ ಅವಧೇಶ್‌ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

    ಹಕ್ಕಿ ಜ್ವರ ಹರಡುವುದನ್ನು ನಿಯಂತ್ರಿಸಲು ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ಮಟನ್‌ ಅಂಗಡಿಗಳನ್ನು ಬಂದ್‌ ಮಾಡಿಸುವ ಸಂಬಂಧ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

    ಜಿಲ್ಲೆಯಲ್ಲಿ ಹಾಗೂ ಗಡಿ ಭಾಗಗಳಲ್ಲಿ ಪರಿಸ್ಥಿತಿ ಅವಲೋಕಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಪಕ್ಷಿಗಳ ಅಸಹಜ ಸಾವಿನ ಕುರಿತು ಮಾಹಿತಿ ಸಿಕ್ಕ ಕೂಡಲೇ ಪ್ರಕರಣ ದಾಖಲಿಸುವಂತೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಎನ್.ಕಾನ್ಸೋಟಿಯಾ ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

    ಚಳಿಗಾಲದ ಸಂದರ್ಭದಲ್ಲಿ ಹಕ್ಕಿ ಜ್ವರ ಹರಡುವಲ್ಲಿ ವಲಸೆ ಹಕ್ಕಿಗಳು ಮುಖ್ಯ ಕಾರಣವಾಗುತ್ತವೆ. ವಲಸೆ ಹಕ್ಕಿಗಳ ಬಗ್ಗೆ ನಿಗಾವಹಿಸಬೇಕು. ವಲಸೆ ಹಕ್ಕಿಗಳು ಹಾಗೂ ಕೋಳಿ ಮಾರುಕಟ್ಟೆಗಳಲ್ಲಿ ಸ್ಯಾಂಪಲ್ಸ್‌ ಪಡೆದು ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ಸೂಚನೆ ನೀಡಿದ್ದಾರೆ.

  • ಈ ವರ್ಷದಲ್ಲಿ ದೇಶದಲ್ಲೇ ಮೊದಲು- ಹಕ್ಕಿ ಜ್ವರಕ್ಕೆ 12ರ ಬಾಲಕ ಬಲಿ

    ಈ ವರ್ಷದಲ್ಲಿ ದೇಶದಲ್ಲೇ ಮೊದಲು- ಹಕ್ಕಿ ಜ್ವರಕ್ಕೆ 12ರ ಬಾಲಕ ಬಲಿ

    ದೆಹಲಿ: 12ವರ್ಷದ ಬಾಲಕನೊಬ್ಬ ದೆಹಲಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)ನಲ್ಲಿ ಹಕ್ಕಿಜ್ವರ (Bird Flu)ದಿಂದ ಮೃತಪಟ್ಟಿದ್ದಾನೆ.

    ಹಕ್ಕಿ ಜ್ವರದಿಂದ ಪ್ರಾಣ ಬಿಟ್ಟ ಮೊದಲ ಪ್ರಕರಣ ಇದಾಗಿದ್ದು, ಆತಂಕ ಮೂಡಿಸಿದೆ. ಏಮ್ಸ್​​ನ ಮಕ್ಕಳ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ H5N1 (ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ. ಈ ವರ್ಷದಲ್ಲಿ ದೇಶದಲ್ಲೇ ಮೊದಲು ಹಕ್ಕಿ ಜ್ವರಕ್ಕೆ ಬಲಿಯಾಗುತ್ತಿರುವ ಮೊದಲ ಪ್ರಕರಣವಾಗಿದೆ.

    ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್​​ನ  ಎಲ್ಲ ಸಿಬ್ಬಂದಿಯೂ ಐಸೋಲೇಟ್‍ಗೆ ಒಳಗಾಗಿದ್ದಾರೆ. ಈ ಬಗ್ಗೆ  ಮಾತನಾಡಿದ ಏಮ್ಸ್ ವೈದ್ಯರೊಬ್ಬರು, ಈ ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು. ಆತನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದೂ ತಿಳಿಸಿದ್ದಾರೆ. ಬಾಲಕನ ಸಂಪರ್ಕಕ್ಕೆ ಬಂದ ವೈದ್ಯರು, ದಾದಿಯರು ಸೇರಿ ಎಲ್ಲರೂ ತಮ್ಮನ್ನು ತಾವು ಐಸೋಲೇಟ್‍ಗೆ ಒಳಪಡಿಸಿಕೊಂಡಿದ್ದಾರೆ. ಇನ್ನೇನಾದರೂ ಅವರಲ್ಲಿ ಹಕ್ಕಿಜ್ವರದ ಯಾವುದಾದರೂ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ಅವರಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಹಕ್ಕಿ ಜ್ವರಕ್ಕೆ  H5N1  ಎಂದೂ ಕರೆಯುತ್ತಾರೆ. ಈ ವೈರಸ್ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮನುಷ್ಯರಿಗೂ ತಗುಲುತ್ತದೆ. ಹಾಗೇ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇನ್ನು ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪ. ಆದರೆ ಹಾಗೊಮ್ಮೆ ಕಾಣಿಸಿಕೊಂಡರೆ ಸಾವಿನ ಸಾಧ್ಯತೆ ಶೇ. 60ರಷ್ಟು ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.

    ದೇಶಾದ್ಯಂತ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ದೆಹಲಿ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಹರಿಯಾಣಗಳಲ್ಲಿ ಹಕ್ಕಿ ಜ್ವರದಿಂದ ಅನೇಕ ಪಕ್ಷಿಗಳು ಸಾವನ್ನಪ್ಪಿದ್ದವು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಇದು ಮನುಷ್ಯನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ.

  • ಹಕ್ಕಿಗೆ ಕಾಳು ನೀಡಿದ ಧವನ್ – ಮಾಡದ ತಪ್ಪಿಗೆ ದಂಡ ಪಾವತಿಸಿದ ನಾವಿಕ

    ಹಕ್ಕಿಗೆ ಕಾಳು ನೀಡಿದ ಧವನ್ – ಮಾಡದ ತಪ್ಪಿಗೆ ದಂಡ ಪಾವತಿಸಿದ ನಾವಿಕ

    ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಾರಾಣಸಿ ಪ್ರವಾಸದಲ್ಲಿದ್ದಾರೆ. ಶಿಖರ್ ಧವನ್ ಮಾಡಿದ ತಪ್ಪಿಗೆ ನಾವಿಕ ಶಿಕ್ಷೆ ಅನುಭವಿಸುವಂತಾಗಿದೆ.

    ಗಂಗಾ ನದಿಯಲ್ಲಿ ದೋಣಿ ವಿಹಾರದ ವೇಳೆ ಶಿಖರ್ ಧವನ್ ಸೈಬಿರಿಯನ್ ಹಕ್ಕಿಗಳಿಗೆ ಆಹಾರ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶಿಖರ್ ಧವನ್ ಶೇರ್ ಸಹ ಮಾಡಿಕೊಂಡಿದ್ದರು. ಹಕ್ಕಿ ಜ್ವರದ ನಿಯಂತ್ರಣಕ್ಕಾಗಿ ಸರ್ಕಾರ ಪಕ್ಷಿಗಳಿಗೆ ಆಹಾರ ನೀಡದ ಕುರಿತು ಕೆಲ ಮಾರ್ಗಸೂಚಿಗಳನ್ನ ತಂದಿದೆ. ಆದ್ರೆ ಶಿಖರ್ ಧವನ್ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆ ನಾವಿಕ ಸೋನು ಸಹಾನಿ ಮತ್ತು ಬೋಟ್ ಮಾಲೀಕ ಪ್ರದೀಪ್ ಸಾಹಾನಿ ದಂಡ ಪಾವತಿಸಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಸೇರಿದಂತೆ ಹಲವು ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಿದೆ. ಹಾಗಾಗಿ ವಾರಾಣಸಿ ನದಿ ದಡದಲ್ಲಿರುವ ಪಕ್ಷಿಗಳಿಗೆ ಆಹಾರ ನೀಡದಂತೆ ಸ್ಥಳೀಯ ಆಡಳಿತ ಮಂಡಳಿ ಕೆಲ ನಿಯಮಗಳನ್ನ ರೂಪಿಸಿತ್ತು.

    ವಾರಾಣಸಿಗೆ ಆಗಮಿಸಿದ್ದ ಧವನ್, ಕಾಲಭೈರವ ಮಂದಿರಕ್ಕೆ ತೆರಳಿ ದರ್ಶನ ಪಡೆದು, ಸಂಜೆ ಗಂಗಾ ಆರತಿಯಲ್ಲಿಯೂ ಭಾಗಿಯಾಗಿದ್ದರು. ಗಂಗಾ ನದಿಯಲ್ಲಿ ಬೋಟಿಂಗ್ ವೇಳೆ ಹಕ್ಕಿಗಳಿಗೆ ಕಾಳು ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಫೋಟೋ ವೈರಲ್ ಬಳಿಕ ವಾರಾಣಸಿ ಕಲೆಕ್ಟರ್ ನಾವಿಕರಿಗೆ ದಂಡ ವಿಧಿಸುವಂತೆ ಆದೇಶಿಸಿದ್ದರು

  • ಮೃತಪಟ್ಟ ಕಾಗೆಗಳನ್ನು ತಿಂದು 6 ಶ್ವಾನಗಳು ಸಾವು

    ಮೃತಪಟ್ಟ ಕಾಗೆಗಳನ್ನು ತಿಂದು 6 ಶ್ವಾನಗಳು ಸಾವು

    – ಆತಂಕಕ್ಕೀಡಾದ ಗ್ರಾಮದ ಜನ

    ಲಕ್ನೋ: ಹಕ್ಕಿಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ತಿಂದು ಸುಮಾರು 6 ಬೀದಿ ಶ್ವಾನಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಪುರಾನ್ಪುರ್ ಪ್ರದೇಶದಲ್ಲಿ ನಡೆದಿದೆ. ಗುರುವಾರ 12ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರದಿಂದ ಶೇಷಪುರ್ ರಸ್ತೆಯಲ್ಲಿ ಮೃತಪಟ್ಟಿದ್ದವು. ಈ ಘಟನೆ ಇದೀಗ ಪುರಾನ್ಪುರ್ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದೆ.

    ಜಿಲ್ಲೆಯಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಅಮಿದ್ ಅವರು ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಶೇರ್ ಪುರ್‍ನಲ್ಲಿ ಹಕ್ಕಿಜ್ವರದಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಒಂದು ವಾರದ ಹಿಂದೆ ಪುರಾನ್ಪುರ್ ಪೊಲೀಸ್ ಠಾಣೆಗೆ ವರದಿ ಸಲ್ಲಿಸಲಾಗಿತ್ತು.

    ಬೀದಿ ಶ್ವಾನಗಳು ರಸ್ತೆಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿದ ಸ್ಥಳೀಯರು, ಶ್ವಾನಗಳು ಹಕ್ಕಿ ಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ಸೇವಿಸಿ ಸಾವನ್ನಪ್ಪಿವೆ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಹಿರಿಯ ಪಶು ವೈದ್ಯಕೀಯ ಅಧಿಕಾರಿಗಳು ಗುರುವಾರ ಬಾರ್ಖೇರಾ ನಗರದ ಪಂಚಾಯತ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಕೋಳಿ ಮಾಂಸದ ಮಾದರಿಯನ್ನು ಪರೀಕ್ಷಿಸಲು ತೆಗೆದುಕೊಂಡಿದ್ದಾರೆ.

    ಇದೇ ರೀತಿ ಬುಧವಾರ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 50 ಕಾಗೆಗಳು ಹಕ್ಕಿಜ್ವರದಿಂದ ಮೃತಪಟ್ಟಿದ್ದವು. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮತ್ತು ಉತ್ತರಾಖಂಡದಲ್ಲಿ ಹಕ್ಕಿಜ್ವರ ಇರುವುದನ್ನು ದೃಢಪಡಿಸಲಾಗಿದೆ.

  • ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ – 48 ಗಂಟೆಯೊಳಗೆ 800 ಕೋಳಿ ಬಲಿ

    ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ – 48 ಗಂಟೆಯೊಳಗೆ 800 ಕೋಳಿ ಬಲಿ

    ಮುಂಬೈ: ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಹರಡಿರುವುದಾಗಿ ದೃಢಪಡಿಸಲಾಗಿದೆ. ಮುರುಂಬಾ ಎಂಬ ಗ್ರಾಮದಲ್ಲಿ ಇಲ್ಲಿಯವರೆಗೂ ಸುಮಾರು 800 ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿದೆ. ಅಲ್ಲಿನ ಜಿಲ್ಲಾಡಳಿತ ಸತ್ತ ಕೋಳಿಯ ರಕ್ತದ ಮಾದರಿಯನ್ನು ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ವರದಿಯಲ್ಲಿ ಕೋಳಿಗಳು ಹಕ್ಕಿ ಜ್ವರದಿಂದ ಮೃತಪಟ್ಟಿರುವುದು ಖಚಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭಾನ್ ತಿಳಿಸಿದ್ದಾರೆ.

    ಸುದ್ದಿ ಮಾಧ್ಯಮದಲ್ಲಿ ಮಾತನಾಡಿದ ಮುಲ್ಜಿಕರ್ ಹಕ್ಕಿ ಜ್ವರದಿಂದ ಮಾನಷ್ಯರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಜನರನ್ನು ನಾವು ಈಗಾಗಲೇ ಪರೀಕ್ಷೆಗೆ ಒಳಪಡಿಸಿದ್ದೇವೆ. ಹಾಗಾಗಿ ಹಕ್ಕಿ ಜ್ವರ ಮನುಷ್ಯರಿಗೆ ಹರಡುತ್ತದೆ ಎಂದು ಯಾರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

    ಈ ಮುನ್ನ ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹಕ್ಕಿಜ್ವರ ಹರಡಿರುವದನ್ನು ದೃಢಪಡಿಸಿತ್ತು. ಈಗಾಗಲೇ ರೋಗ ಪೀಡಿತ ಪ್ರದೇಶಗಳಲ್ಲಿ ಹಕ್ಕಿ ಜ್ವರ ತಡೆಗಟ್ಟಲು ಎಲ್ಲ ರೀತಿಯ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.

    ಹಕ್ಕಿ ಜ್ವರ ಹರಡಿರುವ ಪ್ರದೇಶಗಳ ಕುರಿತಂತೆ ವಿಚಾರಣೆ ನಡೆಸಲು ಕೇಂದ್ರ ತಂಡಗಳನ್ನು ದೇಶದಲ್ಲಿ ರಚಿಸಲಾಗಿದ್ದು, ತಂಡಗಳು ಇದೀಗ ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿವೆ. ಕೇಂದ್ರ ತಂಡವೊಂದು ಜನವರಿ 9 ರಂದು ಕೇರಳ ರಾಜ್ಯಕ್ಕೆ ತಲುಪಿದ್ದು ಪ್ರಸ್ತುತ ಅಲ್ಲಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಂಕ್ರಾಮಿಕ ರೋಗ ಕುರಿತಾಗಿ ತನಿಖೆ ನಡೆಸಲು ಆರಂಭಿಸಿದೆ. ಮತ್ತೊಂದು ತಂಡ ಜನವರಿ 10 ರಂದು ಹಿಮಾಚಲ ಪ್ರದೇಶಕ್ಕೆ ತಲುಪಿದ್ದು ಅಲ್ಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದೆ.

    ಹಕ್ಕಿ ವಿಚಾರವಾಗಿ ತಪ್ಪು ಮಾಹಿತಿ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹಾಗೂ ರೋಗ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

  • ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ: ಸಚಿವ ಪ್ರಭು ಚವ್ಹಾಣ್

    ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ: ಸಚಿವ ಪ್ರಭು ಚವ್ಹಾಣ್

    – ಹಕ್ಕಿ ಜ್ವರ ನಿಯಂತ್ರಣಕ್ಕೆ ರಾಜ್ಯಮಟ್ಟದ ಉನ್ನತ ಸಮಿತಿ

    ಬೆಂಗಳೂರು: ಹಕ್ಕಿ ಜ್ವರದ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ರಾಜ್ಯದಲ್ಲಿ ಕೋಳಿ ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.

    ಇಂದು ಆನ್‍ಲೈನ್ ಮೂಲಕ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಕ್ಕಿ ಜ್ವರದ ಬಗ್ಗೆ ತೀವ್ರ ನಿಗಾವಹಿಸುವಂತೆ ಸಚಿವರು ಸೂಚಿಸಿದ್ದಾರೆ.

    ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಹಕ್ಕಿಜ್ವರ ಪ್ರಕರಣ ಕಂಡುಬಂದಿಲ್ಲ. ಆದರೂ ಇಲಾಖೆಯ ಅಧಿಕಾರಿಗಳು ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಆತಂಕ ಪಡದೆ ಮೊಟ್ಟೆ ಮತ್ತು ಮಾಂಸವನ್ನು ಸೇವಿಸಬಹುದಾಗಿದೆ. ಕೇರಳ ಹೊರತುಪಡಿಸಿ ಇತರೇ ರಾಜ್ಯಗಳಿಗೆ ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇಲ್ಲ. ಕೇರಳದಿಂದ ಬರುವ ಕೋಳಿ, ಕುಕ್ಕುಟ, ಕೋಳಿ ಉತ್ಪನ್ನಗಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

    ಗಡಿ ಭಾಗದಲ್ಲಿ ಹೈ ಅಲರ್ಟ್
    ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳು ಹಾಗೂ ಇತರೇ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಕ್ಕಿ ಜ್ವರ ತಡೆಗಟ್ಟಲು ರೋಗ ನಿಯಂತ್ರಣ ಸಮಿತಿ ಸಭೆಗಳನ್ನು ನಡೆಸಿ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಜೊತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ತಿಳಿಸಲಾಗಿದೆ. ಎಲ್ಲ ಕೋಳಿ ಫಾರಂಗಳಲ್ಲಿ ಮುಂಜಾಗೃತಾ ಕ್ರಮವಾಗಿ ರೋಗ ನಿಯಂತ್ರಣ ಔಷಧಿಗಳಿಂದ ಸ್ವಚ್ಛಗೊಳಿಸುವುದು ಮತ್ತು ಕನಿಷ್ಟ ಜೈವಿಕ ರಕ್ಷಣಾ ಪದ್ಧತಿ ಅಳವಡಿಕೊಳ್ಳುವಂತೆ ತೀರ್ಮಾನಿಸಿ ಕ್ರಮವಹಿಸುವಂತೆ ತಿಳಿಸಲಾಗಿದೆ ಎಂದರು.

    ಕೇರಳದ ಗಡಿ ಭಾಗದ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಕಾಡು ಹಕ್ಕಿಗಳು, ನೀರು ಹಕ್ಕಿಗಳು, ವಲಸೆ ಹಕ್ಕಿಗಳು ಬಾತುಕೋಳಿಗಳು, ಗೀಜಗದ ಹಕ್ಕಿಗಳು ಇತ್ಯಾದಿ ವಿವಿಧ ಪ್ರಭೇದದ ಹಕ್ಕಿಗಳ ಅಸಹಜ ಸಾವು ಅಥವಾ ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಗಮನಹರಿಸಿ ಕ್ರಮಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಮುಂಜಾಗ್ರತಾ ಕ್ರಮವಾಗಿ ಅವಶ್ಯವಿರುವ ಪರಿಕರಗಳು ಮತ್ತು ರೋಗ ನಿಯಂತ್ರಕ ರಾಸಾಯನಿಕಗಳನ್ನು ಕ್ರೂಢೀಕರಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಲು ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಪರಿಷ್ಕರಿಸಿ ಹೊರಡಿಸಿರುವ 2021ರ ಹಕ್ಕಿಜ್ವರದ ನಿಯಂತ್ರಣ ಹಾಗೂ ನಿರ್ವಹಣೆ ಮಾರ್ಗಸೂಚಿಗಳ ಪ್ರಕಾರ ಸರ್ವೇಕ್ಷಣೆ, ಕಣ್ಗಾವಲು ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

    ನಗರ ಸಭೆ, ಪುರಸಭೆ ವ್ಯಾಪ್ತಿಯ ಪ್ರದೇಶದಲ್ಲಿ ಹಕ್ಕಿಗಳು, ಕೋಳಿಗಳ ಮರಣ ಸಂಭವಿಸಿದಲ್ಲಿ ಅದರ ಸಮೀಪ ಸಾರ್ವಜನಿಕರು ಹೊಗದಂತೆ ಮತ್ತು ಮುಟ್ಟದಂತೆ ತಿಳುವಳಿಕೆ ನೀಡಬೇಕು. ವೈಯಕ್ತಿಕ ಸುರಕ್ಷತೆಯನ್ನು ಅನುಸರಿಸಿ, ಜೈವಿಕ ಸುರಕ್ಷತಾ ಕ್ರಮಗಳೊಂದಿಗೆ ವಿಲೇವಾರಿ ಮಾಡಲು ಪಶುಸಂಗೋಪನೆ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.

    ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಕ್ಷೇತ್ರಗಳ್ಲಿ ವಿಶೇಷವಾಗಿ, ಪಕ್ಷಿಧಾಮ, ಪ್ರಾಣಿ ಸಂಗ್ರಹಾಲಯ ಹಾಗೂ ನೀರು ಸಂಗ್ರಣ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು. ಕೋಳಿಗಳು, ಹಿತ್ತಲ ಕೋಳಿಗಳು, ಹಕ್ಕಿಗಳು, ಕಾಡು ಹಕ್ಕಿಗಳು, ವಲಸೆ ಹಕ್ಕಿಗಳ ಯಾವುದೇ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ. ಕೋಳಿ ಶೀತ ಜ್ವರದ ಸಂಭವನೀಯತೆಯನ್ನು ಪರಿಗಣಿಸಿ, ಸಂಬಂಧಪಟ್ಟ ಪ್ರಯೋಗಾಲಯಕ್ಕೆ ವರದಿ ಮಾಡಿ, ರೋಗ ವಿಶ್ಲೇಷಣೆ ನಡೆಸುವ ಬಗ್ಗೆ ಕ್ರಮ ವಹಿಸಿ ಹಾಗೂ ಜೈವಿಕ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವರು ಸೂಚಿಸಿದ್ದಾರೆ.

    ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶೀ ರಾಜೇಂದ್ರಕುಮಾರ್ ಕಠಾರಿಯಾ, ಅಯುಕ್ತ ಹೆಚ್.ಬಸವರಾಜೇಂದ್ರ, ನಿರ್ದೇಶಕ ಡಾ.ಬಿ.ಎಸ್.ಶಿವಾರಾಮ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅರಣ್ಯ, ನಗರಾಭಿದ್ಧಿ, ಸಾರಿಗೆ, ಗೃಹ ಇಲಾಖೆ, ಕಂದಾಯ ಇಲಾಖೆ, ಹಣಕಾಸು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.