Tag: ಹಂಬನ್‌ತೋಟ ಬಂದರು

  • ಶ್ರೀಲಂಕಾದತ್ತ ಸಾಗುತ್ತಿದೆ ಪತ್ತೇದಾರಿ, ಬ್ಯಾಲಿಸ್ಟಿಕ್‌ ಕ್ಷಿಪಣಿ ಹೊತ್ತ ಚೀನಿ ಹಡಗು

    ಶ್ರೀಲಂಕಾದತ್ತ ಸಾಗುತ್ತಿದೆ ಪತ್ತೇದಾರಿ, ಬ್ಯಾಲಿಸ್ಟಿಕ್‌ ಕ್ಷಿಪಣಿ ಹೊತ್ತ ಚೀನಿ ಹಡಗು

    ಕೊಲಂಬೋ: ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ ಭೇಟಿ ಬಳಿಕ ಕೆಂಡಾಮಂಡಲವಾಗಿರುವ ಚೀನಾ ಈಗ ಬ್ಯಾಲಿಸ್ಟಿಕ್‌ ಕ್ಷಿಪಣಿ ಮತ್ತು ಉಪಗ್ರಹಗಳನ್ನು ಪತ್ತೆಹಚ್ಚಲು ಸಾಧ್ಯವಾಗುವ ಹಡಗನ್ನು ಶ್ರೀಲಂಕಾಗೆ ಕಳುಹಿಸಿಕೊಟ್ಟಿದೆ.

    ಯುವಾನ್ ವಾಂಗ್ 5 ಹೆಸರಿನ ಹಡಗು ಆಗಸ್ಟ್ 11 ಅಥವಾ 12 ರಂದು ಹಂಬನ್‌ತೋಟ ಬಂದರಿಗೆ ಆಗಮಿಸುವ ಸಾಧ್ಯತೆಯಿದೆ. 400 ಸಿಬ್ಬಂದಿಯನ್ನು ಹೊಂದಿರುವ ಹಡಗಿನಲ್ಲಿ ಟ್ರ್ಯಾಕಿಂಗ್ ಆಂಟೆನಾ ಮತ್ತು ವಿವಿಧ ಸಂವೇದಕಗಳನ್ನು ಅಳವಡಿಸಲಾಗಿದೆ.

    ಹಿಂದೂ ಮಹಾಸಾಗರದ ಭಾಗದಲ್ಲಿ ಈ ಹಡಗನ್ನು ನಿಯೋಜಿಸಿದರೆ ಒಡಿಶಾದ ಕರಾವಳಿಯ ವೀಲರ್ ದ್ವೀಪದಿಂದ ಭಾರತದ ಕ್ಷಿಪಣಿ ಪರೀಕ್ಷೆಗಳನ್ನು ಟ್ರ್ಯಾಕ್‌ ಮಾಡಲು ಸಾಧ್ಯವಾಗುತ್ತದೆ. ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳನ್ನು ಪತ್ತೆಹಚ್ಚಿ, ಕ್ಷಿಪಣಿಗಳ ಕಾರ್ಯಕ್ಷಮತೆ ಮತ್ತು ಅವುಗಳ ನಿಖರ ವ್ಯಾಪ್ತಿಯ ಮಾಹಿತಿಯನ್ನು ಚೀನಾ ಸಂಗ್ರಹಿಸಬಹುದಾಗಿದೆ.

    ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಇಡಲು ಹಡಗನ್ನು ಕಳುಹಿಸುತ್ತಿದ್ದೇವೆ ಎಂದು ಚೀನಾ ನಮಗೆ ತಿಳಿಸಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ಮಾಧ್ಯಮ ವಕ್ತಾರ ಕರ್ನಲ್ ನಲಿನ್ ಹೆರಾತ್ ಹೇಳಿದ್ದಾರೆ. ಇದನ್ನೂ ಓದಿ: ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

    ಚೀನಾದಿಂದ ಪಡೆದ ಸಾಲವನ್ನು ತೀರಿಸಲು ಸಾಧ್ಯವಾಗದ ಕಾರಣ 2017ರಲ್ಲಿ ಲಂಕಾ ಸರ್ಕಾರ ಹಂಬನ್‌ತೋಟ ಬಂದರನ್ನು 99 ವರ್ಷಗಳ ಕಾಲ ಚೀನಾದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ.

    2014 ರಲ್ಲಿ ಚೀನಾದ ಜಲಾಂತರ್ಗಾಮಿ ನೌಕೆ ಹಂಬನ್‌ತೋಟ ಬಂದರಿನಲ್ಲಿ ಲಂಗರು ಹಾಕಿತ್ತು. ಇದು ಭಾರತದ ಆತಂಕಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಇಲ್ಲಿಯವರೆಗೆ ಲಂಕಾ ಬಂದರುಗಳಿಗೆ ಚೀನೀ ಜಲಾಂತರ್ಗಾಮಿ ನೌಕೆಗಳು ಲಂಗರು ಹಾಕಿಲ್ಲ.

    Live Tv
    [brid partner=56869869 player=32851 video=960834 autoplay=true]