Tag: ಹಂಪಿ

  • ಕೊರೊನಾ ಭಯ ಬಿಟ್ಟು ಹಂಪಿಗೆ ಆಗಮಿಸುತ್ತಿರುವ ಪ್ರವಾಸಿಗರು

    ಕೊರೊನಾ ಭಯ ಬಿಟ್ಟು ಹಂಪಿಗೆ ಆಗಮಿಸುತ್ತಿರುವ ಪ್ರವಾಸಿಗರು

    ಬಳ್ಳಾರಿ: ಕೋವಿಡ್-19ರ ಲಾಕ್‍ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಪ್ರವಾಸಿಗರಿಗೆ ಅನುಕೂಲತೆಗಳನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನಗಳನ್ನು ಇಂದಿನಿಂದ ಆರಂಭಿಸಲಾಗಿದೆ.

    ಹಂಪಿಯ ಗೆಜ್ಜಲ ಮಂಟಪದಿಂದ ಬ್ಯಾಟರಿ ಚಾಲಿತ ವಾಹನ ಆರಂಭ ಮಾಡಲಾಗಿದೆ. ಪ್ರವಾಸಿಗರು ಬ್ಯಾಟರಿ ಚಾಲಿತ ವಾಹನಗಳಲ್ಲಿ ಕುಳಿತು ಹಂಪಿಯ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕಡ್ಡಾಯ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಮಾರಕಗಳ ಬಳಿ ಶುಚಿತ್ವ ಕಾಪಾಡುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ.

    ಹಂಪಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಹಂಪಿ ಸಂಪೂರ್ಣವಾಗಿ ಬಂದ್ ಆಗಿತ್ತು. ಹೀಗಾಗಿ ಇಲ್ಲಿನ ವ್ಯಾಪಾರಿಗಳು ಟೂರಿಸ್ಟ್ ಗಳು ಕಂಗಾಲಾಗಿ ಹೋಗಿದ್ದರು. ಆದರೆ ಈಗ ಹಂಪಿ ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳಿದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಾಗೂ ಗೈಡ್‍ಗಳ ಮುಖದಲ್ಲಿ ಮಂದಹಾಸ ಮೂಡಿದೆ.

  • ಹಂಪಿ ಕನ್ನಡ ವಿವಿಗೆ ಐದು ದಿನಗಳ ಕಾಲ ರಜೆ ಘೋಷಣೆ

    ಹಂಪಿ ಕನ್ನಡ ವಿವಿಗೆ ಐದು ದಿನಗಳ ಕಾಲ ರಜೆ ಘೋಷಣೆ

    ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸುತ್ತಮುತ್ತಲು ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಸತತ ಐದು ದಿನಗಳ ಕಾಲ ರಜೆ ಘೋಷಿಸಲಾಗಿದೆ ಎಂದು ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ತಿಳಿಸಿದ್ದಾರೆ.

    ಇಂದಿನಿಂದ ಆಗಸ್ಟ್ 7ರವರೆಗೆ ಸತತ ಐದು ದಿನಗಳ ಕಾಲ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ರಜಾ ಅವಧಿ ದಿನಗಳಲ್ಲಿ ಆಯಾ ಅಧ್ಯಯನ, ಆಡಳಿತ ವಿಭಾಗದ ಮುಖ್ಯಸ್ಥರು, ನಿರ್ದೇಶಕರು, ಸಂಯೋಜನಾಧಿಕಾರಿ, ನಿಲಯ ಪಾಲಕರು, ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೂರವಾಣಿ ಮತ್ತು ಇ-ಮೇಲ್‍ಗಳ ಮೂಲಕ ಸಂಪರ್ಕಿಸಬೇಕು ಎಂದು ತಿಳಿಸಿದರು.

    ಅಲ್ಲದೇ ಕೇಂದ್ರಸ್ಥಾನವನ್ನು ಬಿಡುವಂತಿಲ್ಲ. ಅಗತ್ಯವಿದ್ದಾಗ ವಿವಿ ಕಡ್ಡಾಯವಾಗಿ ಹಾಜರ್ ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧ್ಯಯನ ಮತ್ತು ಆಡಳಿತ ಸಿಬ್ಬಂದಿ ಮನೆಯಿಂದಲೇ ಕಾರ್ಯವನ್ನು ನಿರ್ವಹಿಸಬೇಕು. ಅಧ್ಯಯನ ಮತ್ತು ಆಡಳಿತ ಸಿಬ್ಬಂದಿಯ ಕರ್ತವ್ಯ ನಿರತ ರಜೆಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

  • ಪ್ರವಾಸಿಗರಿಗೆ ವಿಶ್ವಪ್ರಸಿದ್ಧ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

    ಪ್ರವಾಸಿಗರಿಗೆ ವಿಶ್ವಪ್ರಸಿದ್ಧ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

    ಬಳ್ಳಾರಿ: ಕಳೆದ ಮೂರು ತಿಂಗಳಿಂದಲೂ ಗಣಿ ಜಿಲ್ಲೆಯ ವಿಶ್ವಪ್ರಸಿದ್ಧ ಹಂಪಿಗೆ ಪ್ರವಾಸಿಗರನ್ನ ನಿಷೇಧಿಸಲಾಗಿತ್ತು. ಆದರೆ ಇಂದಿನಿಂದ ಪ್ರವಾಸಿಗರಿಗೆ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ ದೊರೆಯಲಿದೆ.

    ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಅದೆಷ್ಟೋ ಮಂದಿ ಪ್ರವಾಸಿಗರಿಗೆ ಕಳೆದ ಮೂರು ತಿಂಗಳಿಂದ ಹಂಪಿ ಸ್ಮಾರಕ ವೀಕ್ಷಿಸದೆ ನಿರಾಸೆಯಾಗಿತ್ತು. ಸದ್ಯ ಆ ನಿರಾಸೆ ಇಂದಿನಿಂದ ದೂರಾಗಲಿದ್ದು, ಪ್ರವಾಸಿಗರು ಹಂಪಿ ಸ್ಮಾರಕ ವೀಕ್ಷಣೆ ಮಾಡಬಹುದಾಗಿದೆ.

    ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆಯೇ ವಿನಹಃ ಕಡಿಮೆಯಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಲಾಕ್‍ಡೌನ್ ರಿಲೀಫ್‍ಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಇತ್ತೀಚೆಗೆ ಅನುಕೂಲ ಕಲ್ಪಿಸಿದೆ. ಆದರೆ ವಿಶ್ವ ಪಾರಂಪರಿಕ ತಾಣವಾದ ಹಂಪಿ ವೀಕ್ಷಿಸಲು ಅವಕಾಶವಿರಲಿಲ್ಲ. ಇದೀಗ ಹಂಪಿಯ ಸ್ಮಾರಕ ವೀಕ್ಷಿಸಲು ಜಿಲ್ಲಾಡಳಿತ ಕ್ಲಿಯರನ್ಸ್ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಅನುಮತಿ ನೀಡಿದ್ದು, ಹಂಪಿ ಲಾಕ್‍ಡೌನ್‍ನಿಂದ ಮುಕ್ತಿ ಪಡೆದಂತಾಗಿದೆ.

    ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 23 ರಂದು ಲಾಕ್‍ಡೌನ್ ಘೋಷಿಸಿದ ಬಳಿಕ ಸತತ ಮೂರು ತಿಂಗಳ ಕಾಲ ಹಂಪಿ ನೋಡಲು ಯಾರಿಗೂ ಅವಕಾಶವಿರಲಿಲ್ಲ. ಇಲ್ಲಿಗೆ ಹೆಚ್ಚಿನ ಮಟ್ಟದಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಂಪಿಯೊಳಗೆ ಯಾರನ್ನು ಬಿಡದಂತೆ ಸೂಚನೆ ನೀಡಿತ್ತು. ಅದರನ್ವಯ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಪ್ರವಾಸಿಗರಿಗೆ ಇದುವರೆಗೂ ನಿರ್ಬಂಧ ವಿಧಿಸಿತ್ತು. ಸದ್ಯ ಆ ನಿರ್ಬಂಧವನ್ನ ಸಡಿಲಗೊಳಿಸಿ ಹಂಪಿಯ ಸ್ಮಾರಕಗಳನ್ನ ನೋಡಲು ಅವಕಾಶ ಕಲ್ಪಿಸಿದೆ.

  • 22 ದಿನಗಳಿಂದ ಹೊಟೇಲಿನಲ್ಲೇ ಹಿರಿಯ ನಟಿ ಜಯಂತಿ ಲಾಕ್

    22 ದಿನಗಳಿಂದ ಹೊಟೇಲಿನಲ್ಲೇ ಹಿರಿಯ ನಟಿ ಜಯಂತಿ ಲಾಕ್

    ಬೆಂಗಳೂರು: ಲಾಕ್‍ಡೌನ್ ಶುರುವಾದಗಿನಿಂದ ಅನೇಕರು ತಮ್ಮ ಮನೆಗಳಿಗೆ ಹೋಗಲು ಸಾಧ್ಯವಾಗದೇ ಎಲ್ಲಿ ಉಳಿದುಕೊಂಡಿದ್ದರೋ ಅಲ್ಲಿಯೇ ಇದ್ದಾರೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಅವರು ಕೂಡ ಹೊಟೇಲೊಂದರಲ್ಲಿ ಸಿಲುಕಿಕೊಂಡಿದ್ದಾರೆ.

    ಲಾಕ್‍ಡೌನ್‍ನಲ್ಲಿ ಕಳೆದ 22 ದಿನಗಳಿಂದ ನಟಿ ಜಯಂತಿ ಸಿಲುಕಿಕೊಂಡಿದ್ದಾರೆ. ಕಳೆದ ಮಾರ್ಚ್ 22 ರಂದು ವಿಶ್ವ ವಿಖ್ಯಾತ ಹಂಪಿ ದೇವಸ್ಥಾನ ನೋಡಲು ಕುಟುಂಬ ಸಮೇತ ಜಯಂತಿ ಹಂಪಿಗೆ ತೆರಳಿದ್ದರು. ಆಗ ಕರ್ನಾಟಕದಲ್ಲಿ ಹೆಚ್ಚಾಗಿ ಕೊರೊನಾ ವೈರಸ್ ವ್ಯಾಪಿಸಿರಲಿಲ್ಲ.

    ಆದರೆ ಜಯಂತಿ ಕುಟುಂಬ ಪ್ರವಾಸದಲ್ಲಿದ್ದಾಗಲೇ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲು ಸರ್ಕಾರ ಆದೇಶಿಸಿತ್ತು. ಹೀಗಾಗಿ ಹೊಸಪೇಟೆಯಲ್ಲಿರುವ ಖಾಸಗಿ ಹೊಟೇಲ್‍ವೊಂದರಲ್ಲಿ ಜಯಂತಿ ಹಾಗೂ ಕುಟುಂಬ ಉಳಿದುಕೊಂಡಿದ್ದರು. ಅಲ್ಲಿಗೆ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

    ಲಾಕ್‍ಡೌನ್ ಆದ ನಂತರ ಜಯಂತಿ ಕುಟುಂಬ ಬೆಂಗಳೂರಿಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಅಂದಿನಿಂದ ಹೊಟೇಲ್‍ನಲ್ಲಿಯೇ ಇದ್ದರು. ಇಂದು 21 ದಿನದ ಲಾಕ್‍ಡೌನ್ ಮುಗಿದಿದ್ದು, ಬೆಂಗಳೂರಿಗೆ ವಾಪಸ್ ಬರಬಹುದು ಎಂದುಕೊಂಡಿದ್ದರು. ಆದರೆ ಪ್ರಧಾನಿ ಮೋದಿ ಅವರು ಇಂದು ಮತ್ತೆ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿ ಅಧಿಕೃತವಾಗಿ ಫೋಷಣೆ ಮಾಡಿದ್ದಾರೆ.

    ಹೀಗಾಗಿ ಇನ್ನೂ 19 ದಿನಗಳ ಕಾಲ ಹೊಟೇಲ್‍ನಲ್ಲೇ ಉಳಿದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಮೇ 3ರ ಬಳಿಕ  ಲಾಕ್‍ಡೌನ್ ಸಡಿಲವಾದರೆ  ಜಯಂತಿ ಕುಟುಂಬ ಬೆಂಗಳೂರಿಗೆ ಬರುವ ನಿರೀಕ್ಷೆಯಲ್ಲಿದ್ದಾರೆ.

  • ಹಂಪಿಗೆ ಬರೋ ವಿದೇಶಿಗರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣು

    ಹಂಪಿಗೆ ಬರೋ ವಿದೇಶಿಗರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣು

    ಬಳ್ಳಾರಿ: ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿದೆ. ಹೀಗಾಗಿ ಕೊರೊನಾದಿಂದ ರಕ್ಷಿಸಲು ಪ್ರವಾಸೋದ್ಯಮ ಇಲಾಖೆ ಹಂಪಿಗೆ ಭೇಟಿ ನೀಡುವ ಮೂಲಕ ಪ್ರತಿ ವಿದೇಶಿ ಪ್ರವಾಸಿಗರನ ತಪಾಸಣೆಗೆ ಮುಂದಾಗಿದೆ.

    ವಿಶ್ವ ವಿಖ್ಯಾತ ಹಂಪಿ, ವಿದೇಶಿಗರನ್ನು ಸೂಜಿಗಲ್ಲಿನ ಹಾಗೆ ತನ್ನತ್ತ ಸೆಳೆಯುತ್ತಿದೆ. ಆದರೆ ಕೊರೊನಾ ಭೀತಿಯಿಂದ ಕಳೆದೊಂದು ತಿಂಗಳಿಂದ ಹಂಪಿಗೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಈ ಮುನ್ನ 1500 ರಿಂದ 2000 ಮಂದಿ ಪ್ರತಿದಿನ ಭೇಟಿ ನೀಡುತ್ತಿದ್ದರು. ಆದರೆ ಇದೀಗ ಪ್ರವಾಸಿಗರ ಸಂಖ್ಯೆ ನೂರಕ್ಕೆ ಏರುತ್ತಿಲ್ಲ. ಇದಕ್ಕೆ ಕಾರಣ ಡೆಡ್ಲಿ ಕೊರೊನಾ ವೈರಸ್.

    ವಿದೇಶಿ ಪ್ರವಾಸಿಗರ ಮೂಲಕ ಕೊರೊನಾ ಹರಡುತ್ತೆ ಎಂಬ ಭೀತಿಯಿಂದ ಹಂಪಿಗೆ ಭೇಟಿ ನೀಡುವ ಪ್ರತೀ ವಿದೇಶಿ ಪ್ರವಾಸಿಗನ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರತಿ ವಿದೇಶಿ ಪ್ರವಾಸಿಗನಿಗೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಆನಂತರ ಹಂಪಿ ಪ್ರವೇಶಕ್ಕೆ ಅನುಮತಿ ನೀಡಲಾಗ್ತಿದೆ. ಒಂದು ವೇಳೆ ಪರೀಕ್ಷೆ ವೇಳೆ ಜ್ವರ, ಕೆಮ್ಮು, ನೆಗಡಿಯ ಲಕ್ಷಣಗಳು ಕಂಡು ಬಂದರೆ ಹಂಪಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹಂಪಿಯ ಗೈಡ್ ಸಂಜೀವ ಹೇಳಿದ್ದಾರೆ.

    ರಾಜ್ಯದಲ್ಲಿ ಕೊರೊನಾ ತಡೆಗೆ ಆರೋಗ್ಯ ಇಲಾಖೆ ಇನ್ನಿಲ್ಲದ ಸಾಹಸ ಮಾಡ್ತಿದೆ. ಆದರೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗೆ ಮುಂದುವರಿದರೆ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬೀಳುವುದಂತು ಸುಳ್ಳಲ್ಲ.

  • ಹಂಪಿ ಮೇಲೆ ಕೊರೊನಾ ಕರಿ ನೆರಳು- ವಿದೇಶಿ ಪ್ರವಾಸಿಗರ ಸಂಖ್ಯೆ ದಿಢೀರ್ ಕುಸಿತ

    ಹಂಪಿ ಮೇಲೆ ಕೊರೊನಾ ಕರಿ ನೆರಳು- ವಿದೇಶಿ ಪ್ರವಾಸಿಗರ ಸಂಖ್ಯೆ ದಿಢೀರ್ ಕುಸಿತ

    ಬಳ್ಳಾರಿ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಂಪಿಯ ಮೇಲೆ ಕೊರೊನಾ ಕರಿನೆರಳು ಬಿದಿದ್ದು, ಹಂಪಿಗೆ ಬರುವ ವಿದೇಶಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಆಗಿದೆ.

    ಪ್ರತಿನಿತ್ಯ ನೂರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಕುಸಿತ ಕಂಡಿದೆ. ಇನ್ನು ಮಾರ್ಚ್ ತಿಂಗಳಲ್ಲಿ ವಿದೇಶಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹಂಪಿಯಲ್ಲಿ ಈಗ ಬೆರಳೆಣಿಕೆ ಪ್ರವಾಸಿಗರು ಮಾತ್ರ ಕಾಣಿಸುತ್ತಿದ್ದಾರೆ.

    ಅಲ್ಲದೆ ಪ್ರತಿ ವರ್ಷ ಹೋಳಿ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರ ದಂಡು ಹಂಪಿಗೆ ಬಂದು ಬೀಡು ಬಿಡುತ್ತಿತ್ತು. ಬಣ್ಣ ಎರಚಾಡಿ ಮೋಜು ಮಸ್ತಿ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಟೂರಿಸ್ಟ್ ಗೈಡ್‍ಗಳು ಹೇಳುವ ಪ್ರಕಾರ ನಿತ್ಯ 500-1000 ವಿದೇಶಿ ಪ್ರವಾಸಿಗರು ಬರುತ್ತಿದ್ದರು. ಆದರೆ ಈಗ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಹೀಗಾಗಿ ಇಲ್ಲಿನ ಗೈಡ್‍ಗಳು ಕೆಲಸ ಇಲ್ಲದೆ ಕುಳಿತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಅಲ್ಲದೆ ಆರೋಗ್ಯ ಇಲಾಖೆ ಸಹ ಹಂಪಿಯಲ್ಲಿ ಎಚ್ಚರಿಕೆ ವಹಿಸಿದ್ದು, ಹಂಪಿಗೆ ಬಂದಿರುವ ಪ್ರತಿ ಪ್ರವಾಸಿಗರನ್ನು ಪರೀಕ್ಷೆ ಮಾಡುತಿದ್ದಾರೆ. ಪ್ರತಿ ವಿದೇಶಿ ಪ್ರಜೆಗಳು ಎನ್ 90 ಮಾಸ್ಕ್ ಧರಿಸಲು ಸೂಚನೆ ನೀಡುತಿದ್ದಾರೆ.

  • ಗುಲಾಬಿ ಹೂಗಳಿಂದ ಅರಳಿದ ಹಂಪಿ ಕಲ್ಲಿನ ರಥ

    ಗುಲಾಬಿ ಹೂಗಳಿಂದ ಅರಳಿದ ಹಂಪಿ ಕಲ್ಲಿನ ರಥ

    ಚಿಕ್ಕಬಳ್ಳಾಪುರ: ಪ್ರಪಂಚದ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿಯ ಕಲ್ಲಿನ ರಥ ಗುಲಾಬಿಗಳಲ್ಲಿ ಅರಳಿ ನಿಂತಿದ್ದು ಆಕರ್ಷಣೀಯ ಕೇಂದ್ರವಾಗಿದೆ.

    ಚಿಕ್ಕಬಳ್ಳಾಪುರ ಸರ್ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಕೃಷಿಮೇಳ 2020ರ ಅಂಗವಾಗಿ ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪಪ್ರದರ್ಶನ ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಹೂಗಳಿಂದ ಹಂಪಿಯ ಕಲ್ಲಿನ ರಥದ ಆಕೃತಿಯನ್ನು ನಿರ್ಮಾಣ ಮಾಡಲಾಗಿದೆ.

    ಬಣ್ಣ ಬಣ್ಣದ ತರಹೇವಾರಿ ಗುಲಾಬಿಗಳಿಂದ ತಲೆ ಎತ್ತಿರುವ ಹಂಪಿಯ ಹೂಗಳ ಕಲ್ಲಿನ ರಥಾದಾಕೃತಿ ನೋಡುಗರ ಮನಸೊರೆಗೊಂಡಿದೆ. ಸರಿ ಸುಮಾರು 2 ಲಕ್ಷಕ್ಕೂ ಹೆಚ್ಚು ಗುಲಾಬಿ ಹೂ ಹಾಗೂ ಇತರೆ ಹೂಗಳನ್ನು ಬಳಸಿ ಈ ಆಕೃತಿ ನಿರ್ಮಿಸಲಾಗಿದೆ.

    ತೋಟಗಾರಿಕಾ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿಗಳಿಂದ ವಿವಿಧ ಆಕೃತಿಗಳ ಕೆತ್ತನೆ, ಬೃಹಾದಾಕಾರದ ಶ್ರೀ ರಂಗನಾಥಸ್ವಾಮಿ ವಿಗ್ರಹ, ಸ್ವಾಮಿ ವಿವೇಕಾನಂದರ ಪ್ರತಿಮೆ ಹಾಗೂ ಸುಭಾಷ್ ಚಂದ್ರಬೋಸ್ ರ ಮರಳಿನಾಕೃತಿ ಎಲ್ಲರ ಗಮನ ಸೆಳೆಯುತ್ತಿವೆ. ಗುಲಾಬಿಗಳ ಹಂಪಿಯ ಕಲ್ಲಿನಾಕೃತಿಗೆ ನೋಡುಗರ ಮನಸೊರೆಗೊಂಡಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿದ್ದಾರೆ.

  • ವ್ಯಾಸರಾಯರ ವೃಂದಾವನಕ್ಕೆ ಶಾಸಕ ಆನಂದ್ ಸಿಂಗ್ ಭೇಟಿ

    ವ್ಯಾಸರಾಯರ ವೃಂದಾವನಕ್ಕೆ ಶಾಸಕ ಆನಂದ್ ಸಿಂಗ್ ಭೇಟಿ

    ಕೊಪ್ಪಳ: ಕಳೆದ ಒಂದು ವಾರದಿಂದ ಕಣ್ಮರೆಯಾಗಿದ್ದ ಅತೃಪ್ತ ಶಾಸಕ ಆನಂದ್ ಸಿಂಗ್ ಅವರು ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೂಂದಿ ಬಳಿಯಿರುವ ವ್ಯಾಸರಾಯರ ವೃಂದಾವನಕ್ಕೆ ಭೇಟಿ ನೀಡಿದ್ದಾರೆ.

    ಹಂಪಿ ನವ ವೃಂದಾವನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳು ನಾಳೆ ನಡೆಯುವ ಅಧಿವೇಶನದ ವಿಶ್ವಾಸ ಮತದಲ್ಲಿ ಭಾಗಿಯಾಗುವ ಕುರಿತು ಕೇಳಿದಾಗ ಶಾಸಕರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದ್ದು, ಯಾವುದೇ ಸ್ಪಷ್ಟತೆ ನೀಡಿಲ್ಲ. ಬದಲಾಗಿ ಕಾದು ನೋಡಿ ಏನಾಗುತ್ತೆ ಎಂದು ಹೇಳಿದ್ದಾರೆ.

    ಇಂದು ಮುಂಜಾನೆ ಭೇಟಿ ನೀಡಿದ ಶಾಸಕರು ಯತಿವರ್ಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಆರೋಪಿಗಳ ಬಂಧನದ ಬಗ್ಗೆ ಪೊಲೀಸರ ಜೊತೆಯೂ ಚರ್ಚೆ ನಡೆಸಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ನಿಧಿ ಚೋರರಿಂದ ವ್ಯಾಸರಾಯರ ವೃಂದಾವನ ಧ್ವಂಸ ಗೊಂಡಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಂಗ್, ಧ್ವಂಸ ಮಾಡಿದವರನ್ನ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಇದೇ ವೇಳೆ ಒತ್ತಾಯಿಸಿದ್ದಾರೆ.

  • 50ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ!

    50ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ!

    ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.

    ವಿದ್ಯಾರ್ಥಿನಿಯರು ಅಸ್ಮಿತಾ ಹಾಸ್ಟೆಲ್ ನಲ್ಲಿ ಸೋಮವಾರ ಮಧ್ಯಾಹ್ನದ ಊಟ ಸೇವಿಸಿದ್ದಾರೆ. ಆ ಬಳಿಕ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಆಗಿದೆ. ಅಲ್ಲದೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

    ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನು ಹತ್ತಿರದ ಕಮಲಾಪುರ ಮತ್ತು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫುಡ್ ಪಾಯ್ಸನ್ ನಿಂದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವುದೆಂದು ಹೇಳಲಾಗುತ್ತಿದ್ದು, ಫುಡ್ ಪಾಯ್ಸನ್ ಆಗಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

  • ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಬಳ್ಳಾರಿ: ಐತಿಹಾಸಿಕ ಹಂಪಿ ಶಿಲ್ಪಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಹಂಪಿ ಉತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಟ ದರ್ಶನ್, ಇನ್ನೂ ನೂರು ಶತಮಾನ ಹೋದರೂ ಹಂಪಿಯಂತಹ ಅಪೂರ್ವ ಶಿಲ್ಪಕಲೆಗಳನ್ನು ನಾವು ಕಟ್ಟುವುದಕ್ಕಾಗುವುದಿಲ್ಲ. ಆದ ಕಾರಣ ಈಗಿರುವ ಹಂಪಿಯ ಶಿಲ್ಪಕಲೆಗಳನ್ನು ಉಳಿಸಿಕೊಂಡು ಹೋಗಬೇಕು ಮತ್ತು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

    ಇಲ್ಲಿನ ಪ್ರತಿ ಶಿಲ್ಪಕಲೆಯನ್ನು ನೋಡಿದರೇ ವಿಜಯನಗರ ಸಾಮ್ರಾಜ್ಯದವರು ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣದೇವರಾಯ ಅವರು ಮಾಡಿರುವ ಸಾಧನೆಗಳು ಮತ್ತು ಪರಾಕ್ರಮಗಳು ತಿಳಿಯುತ್ತವೆ. ಅದನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಕನ್ನಡ ಸಿನಿಮಾಗಳನ್ನು ಹೆಚ್ಚೆಚ್ಚು ನೋಡಿ ಎಂದು ಮನವಿ ಮಾಡಿದರು. ಉತ್ಸವದಲ್ಲಿ ದರ್ಶನ್‍ರನ್ನು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.

    ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಶಾಸಕ ಮುನಿರತ್ನ ಅವರು ಮಾತನಾಡಿ, ಶ್ರೀಕೃಷ್ಣದೇವರಾಯ ಸಿನಿಮಾನವನ್ನು ನಿರ್ಮಾಣ ಮಾಡಿಯೇ ಸಿದ್ದ. ವಜ್ರ-ವೈಡೂರ್ಯಗಳನ್ನು ಬಳ್ಳದಲ್ಲಿ ಅಳೆಯುತ್ತಿದ್ದ ಧರ್ಮದ ನಾಡು ಇದು. ಇಲ್ಲಿ ಅನೇಕ ಕುರುಹಗಳಿದ್ದು, ಎಲ್ಲ ಭಾಷೆಗಳಿಗೂ ಆಗುವಂತ ಶ್ರೀಕೃಷ್ಣದೇವರಾಯ ಚಿತ್ರ ನಿರ್ಮಾಣ ಮಾಡಲಾಗುವುದು ಮತ್ತು ಅದರಲ್ಲಿ ದರ್ಶನ್ ಅವರ ಪಾತ್ರ ಇದ್ದೇ ಇರುತ್ತದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ತುಕಾರಾಂ, ಪಿ.ಟಿ.ಪರಮೇಶ್ವರ ನಾಯಕ್, ಸಂಸದ ಉಗ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಗೋಪಾಲಸ್ವಾಮಿ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸೋಮಶೇಖರ್ ರೆಡ್ಡಿ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಹಂಪಿ ಗ್ರಾಪಂ ಅಧ್ಯಕ್ಷೆ, ಕಮಲಾಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಳಲಿ, ಜಿಪಂ ಸಿಇಒ ನಿತೀಶ್, ಎಸ್ಪಿ ಅರುಣ ರಂಗರಾಜನ್,ಹಂಪಿ ವಿಶ್ವ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಿವ್ಯಪ್ರಭು ಮತ್ತಿತರರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv