Tag: ಹಂಪಸಾಗರ

  • ಮರ್ಯಾದಾ ಹತ್ಯೆ ಪ್ರಕರಣ: ಕೊಲೆಯಾದ ಪ್ರೇಯಸಿಯ ಶವ ಹೊರತಗೆದು ಪರಿಶೀಲನೆ!

    ಮರ್ಯಾದಾ ಹತ್ಯೆ ಪ್ರಕರಣ: ಕೊಲೆಯಾದ ಪ್ರೇಯಸಿಯ ಶವ ಹೊರತಗೆದು ಪರಿಶೀಲನೆ!

    ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಹತ್ಯೆಗೀಡಾಗಿದ್ದ ರೇಷ್ಮಾಬಾನು ಶವವನ್ನು ಖಬರಸ್ಥಾನದಿಂದ ಹೊರತೆಗೆದಿದ್ದಾರೆ. ಶವವನ್ನು ಹೊರ ತಗೆದ ಬಳಿಕ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಶವಪರೀಕ್ಷೆಗೆ ಒಳಪಡಿಸಿದ್ದಾರೆ.

    ನಡೆದಿದ್ದೇನು?: ಮಾ.24ರಂದು ಚಿತ್ರದುರ್ಗ ಜಿಲ್ಲೆಯ ನಾಗರಾಜ ಎಂಬ ಯುವಕನೊಂದಿಗಿನ ಪ್ರೇಮಪ್ರಕರಣದ ಹಿನ್ನಲೆಯಲ್ಲಿ ರೇಷ್ಮಾಭಾನು ಎಂಬವರನ್ನು ಸ್ವತಃ ತಂದೆ ಮತ್ತು ಅಣ್ಣಂದಿರೇ ಕೊಲೆ ಮಾಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು 26 ದಿನಗಳ ಬಳಿಕ ರೇಷ್ಮಾಬಾನು ಶವವನ್ನು ಹಂಪಸಾಗರದ ಗ್ರಾಮದ ಖಬರಸ್ಥಾನದಲ್ಲಿ ಹೂತಿಟ್ಟ ಗೋರಿಯಿಂದ ಹೊರತೆಗೆದು ಪರೀಕ್ಷೆಗೆ ಒಳಪಡಿಸಿದ್ದಾರೆ.

    ಕೊಲೆ ಆರೋಪದಲ್ಲಿ ಈಗಾಗಲೇ ಬಂಧಿತರಾಗಿರುವ ರೇಷ್ಮಭಾನು ತಂದೆ ಮತ್ತು ಸಹೋದರರು ಗುರುತಿಸಿದ ಪ್ರದೇಶದಿಂದ ರೇಷ್ಮಾಬಾನು ಶವವನ್ನು ಹೊರತೆಗೆಯಲಾಯಿತು. ಸ್ಥಳದಲ್ಲೇ ಇದ್ದ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞ ಡಾ.ಗುರುರಾಜ್ ಮತ್ತು ಸಿಬ್ಬಂದಿ ಶವದ ವಿವಿಧ ಅಂಗಾಂಗಳ ತಪಾಸಣೆ ನಡೆಸಿದರು.

    ಶವಪರೀಕ್ಷೆ ಸಂದರ್ಭದಲ್ಲಿ ಖಬರಸ್ಥಾನದ ಬಳಿ ಗ್ರಾಮದ ನೂರಾರು ಜನ ಕುತೂಹಲದಿಂದ ವೀಕ್ಷಿಸಿದರು. ಶವವನ್ನು ಹೊರತೆಗೆಯುತ್ತಿದ್ದಂತಯೇ ರೇಷ್ಮಾಬಾನು ತಾಯಿಯ ರೋದನೆ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಕೊಲೆಯಾದ ಚಿತ್ರದುರ್ಗ ಜಿಲ್ಲೆಯ ನಾಗರಾಜನ ಪಾಲಕರು ಭೇಟಿ ನೀಡಿದ್ದು ಅಚ್ಚರಿ ಮೂಡಿಸಿದರು.

    ಕೊಲೆಯ ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಉದ್ದೇಶದಿಂದ ಶವಪರೀಕ್ಷೆ ನಡೆಸಲಾಗಿದೆ. ಕೊಲೆ ಆರೋಪಿಗಳು ಶವ ಹೂತಿಟ್ಟ ಸ್ಥಳ ಗುರುತಿಸಿದ್ದಾರೆ ಎಂದು ತನಿಖಾಧಿಕಾರಿ ಡಿವೈಎಸ್ಪಿ ಓಂಕಾರ ನಾಯ್ಕ ಹೇಳಿದರು. ಈ ಸಂದರ್ಭದಲ್ಲಿ 22ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಕಂದಾಯ ನಿರೀಕ್ಷಕ ಕೊಟ್ರೇಶ್, ಗ್ರಾಮಲೆಕ್ಕಾಧಿಕಾರಿ ಚೇತನ್ ಇತರರಿದ್ದರು.

     

  • ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಪ್ರೇಯಸಿಯ ಕಣ್ಮುಂದೆಯೇ ಪ್ರೇಮಿಯ ಕೊಲೆ!

    ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಪ್ರೇಯಸಿಯ ಕಣ್ಮುಂದೆಯೇ ಪ್ರೇಮಿಯ ಕೊಲೆ!

    ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯುವಕನ ದೇಹ ಪತ್ತೆ ಬಳಿಕ ಘಟನೆ ಬೆಳಕಿಗೆ ಬಂದ್ರೂ ಪ್ರೇಮಿ ನಾಗರಾಜ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದ ಅನ್ಯ ಕೋಮಿನ 20 ವರ್ಷದ ಯುವತಿ ಹಾಗೂ ಚಿತ್ರದುರ್ಗ ಮೂಲದ 25 ವರ್ಷದ ಯುವಕ ನಾಗರಾಜ ಕೊಲೆಯಾದ ಪ್ರೇಮಿಗಳಾಗಿದ್ದಾರೆ. ಕಳೆದ ಮಾರ್ಚ್ 24 ರಂದು ಪ್ರೇಮಿಗಳು ಮನೆ ಬಿಟ್ಟು ಓಡಿಹೋಗುವ ವೇಳೆ ಸಿಕ್ಕಿಬಿದ್ದಿದ್ದರು. ಆಗ ಪ್ರಿಯತಮೆ ಮುಂದೆಯೇ ಪ್ರೇಮಿ ನಾಗರಾಜ ಮೇಲೆ ಆಕೆ ತಂದೆ ಹಾಗೂ ಸಹೋದರ ಹಲ್ಲೆ ನಡೆಸಿದ್ದಾರೆ. ನಾಗರಾಜನನ್ನು ಹೊಡೆದು ಆತ ಸಾವನ್ನಪ್ಪಿದ್ದಾನೆ ಎಂದುಕೊಂಡು ಗೋಣಿಚೀಲದಲ್ಲಿ ಬಿಸಾಕಿ ಹೋಗಿದ್ದಾರೆ. ಆದರೆ ಇನ್ನೂ ಜೀವಂತವಿದ್ದ ನಾಗರಾಜನ ದೇಹವನ್ನ ಜಿ.ಕೋಡಿಹಳ್ಳಿ ಕ್ರಾಸ್ ಬಳಿ ಸ್ಥಳೀಯರು ನೋಡಿದ್ದಾರೆ. ಪ್ರಜ್ಞೆ ತಪ್ಪಿದ್ದ ನಾಗರಾಜನನ್ನು ದಾವಣಗೆರೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕ್ಸಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಿ ನಾಗರಾಜ ಸಾವನ್ನಪ್ಪಿದ್ದಾರೆ.

    ಕೊಲೆಯಾದ ನಾಗರಾಜ ಹಾಗೂ ಯುವತಿ ಕಳೆದ ಹಲವಾರು ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ಯುವತಿಯ ಮನೆಯವರಿಗೂ ಸಹ ತಿಳಿದಿತ್ತು. ನಾಗರಾಜನ ಕೊಲೆಯನ್ನು ನೋಡಿದ ಮಗಳು ಎಲ್ಲಿ ಬಾಯಿ ಬಿಡುತ್ತಾಳೋ ಅಂತಾ ಹೆದರಿ ಯುವತಿಯನ್ನು ಸಹ ಹೊಡೆದು ಕೊಲೆ ಮಾಡಿದ್ದರು. ನಂತರ ಹೃದಯಾಘಾತದ ಕಥೆ ಕಟ್ಟಿ ಅಂತ್ಯಸಂಸ್ಕಾರ ಮಾಡಿದ್ದರು.

    ಪ್ರೇಮಿ ನಾಗರಾಜ ಕೊಲೆಯಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸುತ್ತಿದ್ದರು. ಯುವತಿಯ ಸಂಬಂಧಿಕರನ್ನು ಕರೆದು ವಿಚಾರಣೆ ಮಾಡುತ್ತಿದ್ದಂತೆ ಯುವತಿಯ ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್‍ಪಿ ಆರ್.ಚೇತನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.