Tag: ಹಂಚಿಕೆ

  • ನಾವು ಯಾವುದೇ ಹಣವನ್ನು ಹಂಚಿಲ್ಲ, ಮಗಳ ಮೇಲೆ ಹಲ್ಲೆ ನಡೆಸಲಾಗಿದೆ: ಸುರೇಶ್ ಕುಮಾರ್

    ನಾವು ಯಾವುದೇ ಹಣವನ್ನು ಹಂಚಿಲ್ಲ, ಮಗಳ ಮೇಲೆ ಹಲ್ಲೆ ನಡೆಸಲಾಗಿದೆ: ಸುರೇಶ್ ಕುಮಾರ್

    ಬೆಂಗಳೂರು: ನಗರದ ರಾಜಾಜಿನಗರದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದಲ್ಲಿ ನನ್ನ ಪುತ್ರಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ಅಪ್ಪಟ ಸುಳ್ಳು ಎಂದು ಬಿಜೆಪಿ ಶಾಸಕ, ಪಕ್ಷದ ಅಭ್ಯರ್ಥಿ ಸುರೇಶ್ ಕುಮಾರ್ ಅವರು ಸ್ಪಷ್ಟ ಪಡಿಸಿದ್ದಾರೆ.

    ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್‍ನಲ್ಲಿ ಮತದಾರರಿಗೆ ಶಾಸಕ ಸುರೇಶ್ ಕುಮಾರ್ ಪುತಿ ಡಾ. ದಿಶಾ ಹಣ ಹಂಚುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಶಾಸಕ ಸುರೇಶ್ ಕುಮಾರ್ ಫೇಸ್‍ಬುಕ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ನನ್ನ ಮಗಳ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಲಾಗುತ್ತಿದೆ. ನಾವು ಅಥವಾ ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರು ಇಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ. ಮಗಳು ದಿಶಾ ಇಂದು ದೆಹಲಿಯಿಂದ ಆಗಮಿಸಿರುವ ನಮ್ಮ ಪಕ್ಷದ ಸಾಮಾಜಿಕ ಜಾಲತಾಣದ ತಂಡದ ಜೊತೆ ಚರ್ಚೆ ನಡೆಸುತ್ತಿದ್ದಾಳೆ. ಪಕ್ಷದಲ್ಲಿ ತಮ್ಮ ಮಗಳು ಸಾಮಾಜಿಕ ಮಾಧ್ಯಮಗಳದ ಜೊತೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಪಕ್ಷದ ಯುವಮೋರ್ಚಾ ಪದಾಧಿಕಾರಿ ಯಶಸ್ ರವರ ಕಚೇರಿಯಲ್ಲಿ ಇಂದು ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಏಕಾಏಕಿ ನುಗ್ಗಿ ಕೈ ಕಾರ್ಯಕರ್ತರು ಮಗಳ ಮೇಲೆ ಹಲ್ಲೆ ನಡೆಸಿ ಹಣವನ್ನು ಪ್ರದರ್ಶಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    ಮಹಾಲಕ್ಷ್ಮಿ ಲೇಔಟ್ ಪಾಲಿಕೆಯ ಕಾಂಗ್ರೆಸ್ ಸದಸ್ಯ ಕೃಷ್ಣಮೂರ್ತಿ ಉದ್ದೇಶ ಪೂರ್ವಕವಾಗಿ ಈ ಕೃತ್ಯವನ್ನು ನಡೆಸಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಣ್ಣು ಮಗಳ ಮೇಲೆ ತೇಜೋವಧೆ ಮಾಡುವುದು ಎಷ್ಟು ಸರಿ? ಘಟನೆ ನಡೆದ ಕೂಡಲೇ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಅಲ್ಲಿ ಸೇರಿದ್ದರಿಂದಲೇ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪರಮೇಶ್ವರ್, ಸಿದ್ದರಾಮಯ್ಯ ಆದಿಯಾಗಿ ಯಾರೂ ಈ ಕೃತ್ಯವನ್ನು ಒಪ್ಪಲಾರರು. ಚುನಾವಣೆ ಗೆಲ್ಲಲು ಈ ಕಾಂಗ್ರೆಸ್ ಈ ರೀತಿಯ ಕುತಂತ್ರ ಮಾಡಬಾರದು. ಕೃಷ್ಣ ಮೂರ್ತಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದೇ ಇದ್ದರೆ ಬೀದಿಗೆ ಇಳಿದು ಹೋರಾಟ ನಡೆಸುವುದಾಗಿ ಸುರೇಶ್ ಕುಮಾರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ದಿಶಾ ಸ್ಪಷ್ಟನೆ: ತಾನು ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದ ವೇಲೆ ಕೆಲ ವ್ಯಕ್ತಿಗಳು ತನ್ನ ಬಂದು ಹಣ ಹಂಚಿಕೆ ಮಾಡುತ್ತಿರುವ ಆರೋಪ ಮಾಡಿದರು. ಈ ವೇಳೆ ಅವರಿಗೆ ಉತ್ತರ ನೀಡಿದೆ. ಆದರೆ ಇದಕ್ಕೆ ಸಮಾಧಾನಗೊಳ್ಳದೇ ಅವರು ನನ್ನ ಫೋಟೋ ವಿಡಿಯೋ ತೆಗೆದುಕೊಂಡರು. ಬಳಿಕ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಆ ವೇಳೆಯೂ ಸ್ಥಳಕ್ಕೆ ಬಂದ ಕೆಲ ವ್ಯಕ್ತಿಗಳು ನನ್ನ ಜೊತೆಗೆ ಕೆಟ್ಟದಾಗಿ ನಡೆದುಕೊಂಡರು.

    ಚುನಾವಣೆಯಲ್ಲಿ ತಮ್ಮ ತಂದೆಯ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇದೂವರೆಗೆ ಹಣ ಹಂಚಿಕೆ ಮಾಡಿಲ್ಲ. ಮುಂದೆಯೂ ಹಣವನ್ನು ಹಂಚಲ್ಲ. ಕೃಷ್ಣಮೂರ್ತಿ ಬೆಂಬಲಿಗರು ನನಗೆ ಹೊಡೆಯಲು ಬಂದಿದ್ದಾರೆ. ಯಾವುದೇ ರೀತಿಯ ಹಣದ ಸಂಬಂಧ ಚಟುವಟಿಕಗಳನ್ನು ನಾವು ಮಾಡುತ್ತಿರಲಿಲ್ಲ.

    https://www.facebook.com/nimmasuresh/videos/2108056582555009/UzpfSTEyNTU2MTk2NDE1NDU0NDoxODU3OTU0NTgwOTE1MjY1/

  • ಮತದಾರರಿಗೆ ಸ್ಯಾನಿಟರಿ ಪ್ಯಾಡ್ ಹಂಚಿಕೆ- ಮುಜುಗರಕ್ಕೆ ಒಳಗಾದ ಮಹಿಳೆಯರಿಂದ ಪ್ರತಿಭಟನೆ

    ಮತದಾರರಿಗೆ ಸ್ಯಾನಿಟರಿ ಪ್ಯಾಡ್ ಹಂಚಿಕೆ- ಮುಜುಗರಕ್ಕೆ ಒಳಗಾದ ಮಹಿಳೆಯರಿಂದ ಪ್ರತಿಭಟನೆ

    ಬೆಳಗಾವಿ: ಇತ್ತೀಚೆಗೆ ಬೆಳಗಾವಿಯಲ್ಲಿ ಗ್ಯಾಸ್ ಸ್ಟೋ, ಕುಕ್ಕರ್ ಮತ್ತು ಇಸ್ತ್ರೀ ಪೆಟ್ಟಿಗೆಗಳನ್ನು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿತರಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಬಿಜೆಪಿ ಮುಖಂಡರೊಬ್ಬರು ಸ್ಲಂ ನಿವಾಸಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿ ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಬೆಳಗಾವಿ ಶ್ರೀನಗರ ಗಾರ್ಡನ್ ಬಳಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮಹಿಳೆಯರು ಸ್ಯಾನಿಟರಿ ಪ್ಯಾಡ್ ಕೈಯಲ್ಲಿ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ನೀಡಿದ ರಾಜಕಾರಣಿಗೆ ಹಿಡಿ ಶಾಪ ಹಾಕಿದ್ದಾರೆ.

    ಸ್ಲಂ ನಿವಾಸಿಗಳ 60 ಮನೆಗಳಿಗೆ ಬಿಜೆಪಿ ಮುಖಂಡರ ಬೆಂಬಲಿಗರು ಬಂದು ಸ್ಯಾನಟರಿ ಪ್ಯಾಡ್ ನೀಡಿ ಇದನ್ನು ಬಳಸುವಂತೆ ಹೇಳಿದ್ದಾರೆ. ಆದರೇ ಮೊದಲು ಈ ಬಗ್ಗೆ ಇಲ್ಲಿನ ಮಹಿಳೆಯರಿಗೆ ಗೊತ್ತಾಗಿಲ್ಲ. ನಂತರ ಮಾಹಿತಿ ತಿಳಿದು ಬಿಜೆಪಿ ಮುಖಂಡ ಅನಿಲ್ ಬೆನಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಅನಿಲ್ ಬೆನಕೆ ಅಪಮಾನ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಹ ಇಲ್ಲಿನ ಮುಖಂಡರು ಪತ್ರ ಬರೆದು ಒತ್ತಾಯಿಸಿದ್ದಾರೆ. ಬುಧವಾರ ಸ್ಲಂ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿದ್ದು ಈಗಲ್ಲ. ಬದಲಿಗೆ ಮಾರ್ಚ್ 10ರಂದು ಮಹಿಳಾ ದಿನದ ಅಂಗವಾಗಿ ವಿತರಣೆ ಮಾಡಲಾಗಿತ್ತು. ಸ್ವಯಂ ಸೇವಾ ಸಂಘವೊಂದು ನನ್ನ ಬಳಿ ಬಂದು ಸ್ಯಾನಿಟರಿ ಪ್ಯಾಡ್ ವಿತರಣೆ ಸಹಾಯ ಕೇಳಿತ್ತು. ಅದರಂತೆ ಧನ ಸಹಾಯ ಮಾಡಿದ್ದೇನೆ. ಇದರಲ್ಲಿ ನನ್ನದು ಏನು ತಪ್ಪಿಲ್ಲ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು ಅನಿಲ್ ಬೆನಕೆ ಸ್ಪಷ್ಟನೆ ನೀಡಿದ್ದಾರೆ.

    ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ರಾಜಕಾರಣಿಗಳು ಪರಸ್ಪರ ಕಾಲೆಳೆಯೋದು ಆರಂಭವಾಗಿದೆ.