Tag: ಸ್ವೀಟ್ ಕಾರ್ನ್

  • ಕಾರ್ನ್‌ನಿಂದ ಮಾಡಿ ಕ್ರಿಸ್ಪಿ ಪಕೋಡಾ

    ಕಾರ್ನ್‌ನಿಂದ ಮಾಡಿ ಕ್ರಿಸ್ಪಿ ಪಕೋಡಾ

    ಸ್ವೀಟ್‌ ಕಾರ್ನ್‌ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಕರಿಗೂ ಇಷ್ಟವಾಗುತ್ತೆ. ಬೇಯಿಸಿಕೊಂಡು, ಸುಟ್ಟುಕೊಂಡು ತಿನ್ನೋದು ಅಂದ್ರೇನೆ ಮಜಾ. ಆದ್ರೆ ಯಾವಾಗಲೂ ಒಂದೇ ರೀತಿ ತಿಂದು ಬೇಜಾರಾಗಿದ್ಯಾ? ಅದಕ್ಕೆ ಹೊಸದಾಗಿ ಮಾಡಿ ಕಾರ್ನ್‌ ಪಕೋಡಾ….

    ಬೇಕಾಗುವ ಸಾಮಗ್ರಿಗಳು;
    ಕಾರ್ನ್‌
    ಬೆಳ್ಳುಳ್ಳಿ
    ಮೆಣಸಿನಕಾಯಿ
    ಕರಿಬೇವು
    ಅರಿಶಿಣ
    ಕೆಂಪು ಖಾರದ ಪುಡಿ
    ಧನಿಯಾ ಪುಡಿ
    ಇಂಗು
    ಗರಂ ಮಸಾಲಾ
    ರುಚಿಗೆ ತಕ್ಕಷ್ಟು ಉಪ್ಪು
    ಕಡಲೆ ಹಿಟ್ಟು/ಬಜ್ಜಿ ಹಿಟ್ಟು
    ಅಕ್ಕಿ ಹಿಟ್ಟು
    ಎಣ್ಣೆ

    ಮಾಡುವ ವಿಧಾನ:
    ಮೊದಲಿಗೆ ಕಾರ್ನ್‌ನನ್ನು ಚೆನ್ನಾಗಿ ಬೇಯಿಸಿ. ಬೇಯಿಸಿದ ಕಾರ್ನ್‌ ಆರಿದ ನಂತರ ಒಂದು ಬೌಲ್‌ಗೆ ಹಾಕಿಕೊಳ್ಳಿ. ಅದಕ್ಕೆ ಉದ್ದವಾಗಿ ಕತ್ತರಿಸಿದ ಈರುಳ್ಳಿ, ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ, ಮೆಣಸಿನಕಾಯಿ, ಕರಿಬೇವು, ಅರಿಶಿಣ, ಕೆಂಪು ಖಾರದ ಪುಡಿ, ಧನಿಯಾ ಪುಡಿ, ಸ್ವಲ್ಪ ಇಂಗು, ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.

    ಆನಂತರ ಅದಕ್ಕೆ ಕಡಲೆ ಹಿಟ್ಟು ಅಥವಾ ಬಜ್ಜಿ ಹಿಟ್ಟು ಹಾಕಿ ಕಲಸಿಕೊಳ್ಳಿ. ಕೊನೆಗೆ ಅಗತ್ಯಕ್ಕನುಸಾರವಾಗಿ ನೀರು ಹಾಕಿಕೊಂಡು ಬಜ್ಜಿ ಮಾಡುವ ಹದಕ್ಕೆ ಮಿಶ್ರಣಮಾಡಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಬಳಿಕ ಎಣ್ಣೆಯಲ್ಲಿ ಚೆನ್ನಾಗಿ ಕರಿದರೆ ಕಾರ್ನ್‌ ಪಕೋಡಾ ತಯಾರಾಗುತ್ತದೆ.

    ಇದನ್ನೂ ಸಾಸ್‌, ಚಟ್ನಿಯೊಂದಿಗೆ ಸವಿಯಬಹುದು!

  • ದೇಸಿ ಮಸಾಲಾ ಸ್ವೀಟ್ ಕಾರ್ನ್ ಮನೆಯಲ್ಲೇ ಮಾಡಿ ನೋಡಿ

    ದೇಸಿ ಮಸಾಲಾ ಸ್ವೀಟ್ ಕಾರ್ನ್ ಮನೆಯಲ್ಲೇ ಮಾಡಿ ನೋಡಿ

    ವಿವಿಧ ರೀತಿಯ ಮಸಾಲೆಯೊಂದಿಗೆ ಸಿಗುವ ಸ್ವೀಟ್ ಕಾರ್ನ್ ಪ್ರೇಮಿಗಳೇ ನಮ್ಮಲ್ಲಿ ಹಲವರಿದ್ದಾರೆ. ಸ್ಟ್ರೀಟ್ ಫುಡ್ ಆಗಿ ಸಿಗುವ ಸ್ವೀಟ್ ಕಾರ್ನ್‌ನಲ್ಲೂ ಒಬ್ಬೊಬ್ಬರಿಗೆ ಒಂದೊಂದು ಫ್ಲೇವರ್ ಇಷ್ಟ. ನಾವಿಂದು ದೇಸಿ ಮಸಾಲಾ ಸ್ವೀಟ್ ಕಾರ್ನ್ (Desi Masala Sweet Corn) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಸ್ವೀಟ್ ಕಾರ್ನ್ ಸವಿಯಲು ಪ್ರತಿ ಬಾರಿ ಹೊರಗಡೆ ಹೋಗಬೇಕೆಂದೇನಿಲ್ಲ. ನೀವು ಇದನ್ನು ಮನೆಯಲ್ಲಿಯೇ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಲು:
    ಸ್ವೀಟ್ ಕಾರ್ನ್ – 1 ಕಪ್
    ನೀರು – ಕುದಿಸಲು
    ಉಪ್ಪು – ಕಾಲು ಟೀಸ್ಪೂನ್
    ಇತರ ಪದಾರ್ಥಗಳು:
    ಬೆಣ್ಣೆ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಚಾಟ್ ಮಸಾಲಾ – ಅರ್ಧ ಟೀಸ್ಪೂನ್
    ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಟೊಮೆಟೊ – 2 ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್
    ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮಸಾಲೆಯುಕ್ತ ಕುಶ್ಕಾ ರೈಸ್ ಮಾಡುವ ಸರಳ ವಿಧಾನ

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ, ಉಪ್ಪು ಸೇರಿಸಿ ಕುದಿಯಲು ಬಿಡಿ.
    * ಕುದಿ ಬಂದ ನಂತರ ಸ್ವೀಟ್ ಕಾರ್ನ್ ಹಾಕಿ, 1 ನಿಮಿಷ ಕುದಿಸಿ. ಕಾರ್ನ್ ಬೆಂದಿಲ್ಲವೆಂದರೆ ಇನ್ನಷ್ಟು ಕುದಿಸಿ.
    * ಈಗ ಕಾರ್ನ್ ಅನ್ನು ನೀರಿನಿಂದ ಬಸಿದು ಪಕ್ಕಕ್ಕಿಡಿ.
    * ಈಗ ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ, ಬೇಯಿಸಿದ ಕಾರ್ನ್ ಸೇರಿಸಿ, 1 ನಿಮಿಷ ಫ್ರೈ ಮಾಡಿ.
    * ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ, ಕರಿಮೆಣಸಿನ ಪುಡಿ, ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಪ್ಯಾನ್ ಅನ್ನು ಒಲೆಯಿಂದ ಕೆಳಗಿಳಿಸಿ, ಅದಕ್ಕೆ ಈರುಳ್ಳಿ, ಟೊಮೆಟೊ ಹಾಕಿ. (ಈರುಳ್ಳಿ ಹಾಗೂ ಟೊಮೆಟೊ ಬೇಯಿಸುವುದು ಬೇಡ)
    * ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಶ್ರಣ ಮಾಡಿ.
    * ಇದೀಗ ದೇಸಿ ಮಸಾಲಾ ಸ್ವೀಟ್ ಕಾರ್ನ್ ತಯಾರಾಗಿದ್ದು, ಬಿಸಿ ಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಊಟದೊಂದಿಗೆ ಸಖತ್ ಟೇಸ್ಟ್‌ ನೀಡುವ ಬೆಳ್ಳುಳ್ಳಿ ಚಟ್ನಿ ಮಾಡಿ

    Live Tv
    [brid partner=56869869 player=32851 video=960834 autoplay=true]

  • ರೈತನ ಬಾಳಿಗೆ ಸಿಹಿಯಾದ ಸ್ವೀಟ್ ಕಾರ್ನ್-ಖರ್ಚಿಗಿಂತ ಆರುಪಟ್ಟು ಲಾಭ

    ರೈತನ ಬಾಳಿಗೆ ಸಿಹಿಯಾದ ಸ್ವೀಟ್ ಕಾರ್ನ್-ಖರ್ಚಿಗಿಂತ ಆರುಪಟ್ಟು ಲಾಭ

    ಹಾವೇರಿ: ಪದೇ ಪದೇ ನಷ್ಟಕ್ಕೆ ಒಳಗಾಗುತ್ತಿದ್ದ ರೈತನ ಬಾಳಿಗೆ ಸ್ವೀಟ್ ಕಾರ್ನ್ ಭರಪೂರ ಸಿಹಿಯನ್ನ ನೀಡಿದೆ. ಕೃಷಿ ಜೀವನವೇ ಸಾಕು ಅಂತ ನಿರ್ಧಾರಕ್ಕೆ ಬಂದಿದ್ದ ರೈತನ ಜೀವನಕ್ಕೆ ಸ್ವೀಟ್ ಕಾರ್ನ್ ಹೊಸ ಚೈತನ್ಯವನ್ನ ನೀಡಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ರೈತ ಪರಮೇಶ್ವರಪ್ಪ ಮಠದ ಸ್ವೀಟ್ ಕಾರ್ನ್ ಬೆಳೆದು ಲಾಭದ ಸಂಭ್ರಮದಲ್ಲಿದ್ದಾರೆ.

    ಪರಮೇಶ್ವರಪ್ಪ ಕುಟುಂಬಕ್ಕೆ ಅಂತಾ ಒಟ್ಟು ಇಪ್ಪತ್ತು ಎಕರೆ ಜಮೀನಿದೆ. ಪ್ರತಿವರ್ಷ ಹತ್ತಿ, ಗೋವಿನ ಜೋಳವನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆತಿದ್ದರು. ಕಳೆದ ಕೆಲವು ವರ್ಷಗಳಿಂದ ಹತ್ತಿ ಬೆಳೆ ಪದೇ ಪದೇ ಹಾನಿಗೆ ಒಳಗಾಗುತ್ತಿತ್ತು. ಹತ್ತಿ ಬೆಳೆ ಬೆಳೆಯಲು ಮಾಡಿದ ಖರ್ಚು ಬರದ ಸ್ಥಿತಿ ಎದುರಾಗಿತ್ತು. ಇದರಿಂದ ಕಂಗಾಲಾಗಿದ್ದ ರೈತ ಪರಮೇಶ್ವರಪ್ಪ ಸಾಕಷ್ಟು ಜಮೀನಿದ್ರೂ ಕೃಷಿ ಜೀವನವೆ ಸಾಕು ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಆಗ ಕೃಷಿ ವಿಜ್ಞಾನಿ ಅಶೋಕ್ ಎಂಬವರು ಸಿಹಿ ಮೆಕ್ಕಜೋಳ ಬೆಳೆಯುವಂತೆ ಸಲಹೆ ನೀಡಿದ್ದರು. ಅದರಂತೆ ಕೇವಲ ಇಪ್ಪತ್ತು ಗುಂಟೆಯಲ್ಲಿ ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ ಸ್ವೀಟ್ ಕಾರ್ನ್ ಬೆಳೆದ ಪರಮೇಶ್ವರಪ್ಪ ಈಗ ಖರ್ಚಿಗಿಂತ ಆರು ಪಟ್ಟು ಲಾಭದ ಖುಷಿಯಲ್ಲಿದ್ದಾರೆ.

    ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯ ಸಲಹೆ ಮೇರೆಗೆ ರೈತ ಪರಮೇಶ್ವರಪ್ಪ, ಥೈಲ್ಯಾಂಡ್ ನಿಂದ ಸಿಹಿ ಮೆಕ್ಕೆಜೋಳದ ಬೀಜ ತರಿಸಿ ಬಿತ್ತನೆ ಮಾಡಿದ್ದಾರೆ. ಕೇವಲ ಅರವತ್ತೈದು ದಿನಗಳಲ್ಲಿ ಫಸಲು ಬರೋ ಸ್ವೀಟ್ ಕಾರ್ನ್ ಬಿತ್ತನೆ ಮಾಡಿ ಬಂಪರ್ ಬೆಳೆ ತೆಗೆದಿದ್ದಾರೆ. ಬೆಂಗಳೂರಿಗೆ ಖಾಸಗಿ ಮಳಿಗೆಯೊಂದಕ್ಕೆ ಒಪ್ಪಂದ ಮಾಡ್ಕೊಂಡು ಈಗಾಗಲೇ ಸ್ವೀಟ್ ಕಾರ್ನ್ ಮಾರಾಟಕ್ಕೆ ಸಿದ್ಧವಾಗಿದೆ. ಏಳು ರುಪಾಯಿಗೊಂದು ತೆನೆಯಂತೆ ಖರೀದಿಗೆ ಮೆಕ್ಕೆಜೋಳ ರೆಡಿಯಾಗಿದೆ.

    ಸುಮಾರು ಅರವತ್ತೈದು ಸಾವಿರ ರುಪಾಯಿ ಆದಾಯ ಬರ್ತಿದೆ. ಅದರಲ್ಲಿ ಹತ್ತು ಸಾವಿರ ರೂಪಾಯಿ ಖರ್ಚು ತೆಗೆದ್ರೆ ಆರು ಪಟ್ಟು ಹೆಚ್ಚಿನ ಆದಾಯ ಬರ್ತಿದೆ. ಪ್ರತಿ ವರ್ಷ ಹತ್ತಿ ಬೆಳೆ ಬೆಳೆದು ಬೆಳೆ ಹಾನಿ ಅನುಭವಿಸಿ, ಮಾಡಿದ ಖರ್ಚು ಬಾರದ ಸ್ಥಿತಿಗೆ ತಲುಪುತ್ತಿದ್ದ ರೈತ ಪರಮೇಶ್ವರಪ್ಪ ಕೇವಲ ಇಪ್ಪತ್ತು ಗುಂಟೆಯಲ್ಲಿ ಮಾಡಿದ ಖರ್ಚಿಗಿಂತ ಆರು ಪಟ್ಟು ಆದಾಯ ಪಡಿತಿರೋದು ರೈತನ ಕುಟುಂಬಕ್ಕೆ ಸಂತಸ ಮೂಡಿಸಿದೆ.