Tag: ಸ್ವಿಗ್ಗಿ

  • ಫುಡ್ ಡೆಲಿವರಿ ನೆಪದಲ್ಲಿ ಕಳ್ಳತನ – ಇಬ್ಬರು ಆರೋಪಿಗಳ ಬಂಧನ

    ಫುಡ್ ಡೆಲಿವರಿ ನೆಪದಲ್ಲಿ ಕಳ್ಳತನ – ಇಬ್ಬರು ಆರೋಪಿಗಳ ಬಂಧನ

    ಲಕ್ನೋ: ಮನೆಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್ಸ್‍ನನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಆರೋಪಿಗಳನ್ನು ಮೊಹಮ್ಮದ್ ಕಫೀಲ್ ಮತ್ತು ರವಿಶಂಕರ್ ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ಉತ್ತರ ಪ್ರದೇಶದ ಪಕ್ಕದ ಬುಲಂದರ್‍ಶಹರ್ ಜಿಲ್ಲೆಯ ನೋಯ್ಡಾದ ನಿವಾಸಿಗಳು. ಇಬ್ಬರು ಎರಡು ವರ್ಷದ ಒಪ್ಪಂದದ ಮೇಲೆ ಸ್ವಿಗ್ಗಿ ಡೆಲಿವರಿ ಬಾಯ್ಸ್ ಆಗಿ ಕೆಲಸಕ್ಕೆ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ನೋಯ್ಡಾದ ಹೆಚ್ಚುವರಿ ಜಿಲ್ಲಾಧಿಕಾರಿ ರಣವಿಜಯ್ ಸಿಂಗ್, ಆರೋಪಿಗಳಿಬ್ಬರು ಗಾಲ್ಫ್ ಕೋರ್ಸ್ ಪ್ರದೇಶದ ಸುತ್ತಮುತ್ತಲಿರುವ ಮನೆಗಳಿಗೆ ಫುಡ್ ಡೆಲಿವರಿ ಮಾಡಲು ಹೋಗುತ್ತಿದ್ದರು. ಈ ವೇಳೆ ಖಾಲಿ ಇರುವ ಮನೆ ಮತ್ತು ಭದ್ರತೆ ಹೊಂದಿರದ ಮನೆಗಳ ಕುರಿತಂತೆ ಮಾಹಿತಿ ಸಂಗ್ರಹಿಸಿಸುತ್ತಿದ್ದರು. ಬಳಿಕ ಅಂತಹ ಮನೆಗಳಿಗೆ ರಾತ್ರಿ ವೇಳೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಮತ್ತು ನಗದು ದರೋಡೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

    ಇದೀಗ ಆರೋಪಿಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಭಾರತೀಯ ದಂಡ ಸಂಹಿತೆಯ ಕೆಲವು ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಗಳ ಬಳಿ ಇದ್ದ 32 ಇಂಚಿನ ಎಲ್‍ಇಡಿ ಟಿವಿ, ಎರಡು ಟ್ರ್ಯಾಕ್ ಸೂಟ್, ಒಂದು ವಾಚ್, ಮೋಟಾರ್ ಬೈಸಿಕಲ್, ಸ್ವಿಗ್ಗಿ ಬ್ಯಾಗ್ ಮತ್ತು ಕಳ್ಳತನ ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

  • ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಫೀಲ್ಡಿಗಿಳಿದ ಅಮೆಜಾನ್ ಫುಡ್

    ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಫೀಲ್ಡಿಗಿಳಿದ ಅಮೆಜಾನ್ ಫುಡ್

    – ಬೆಂಗಳೂರಿನಿಂದಲೇ ಸೇವೆ ಆರಂಭ
    – ಮದ್ಯ ಡೆಲಿವರಿ ಸೇವೆ ಆರಂಭಿಸಿದ ಸ್ವಿಗ್ಗಿ, ಝೊಮ್ಯಾಟೊ

    ನವದೆಹಲಿ: ಇ-ಕಾಮರ್ಸ್ ಫೇಮಸ್ ಕಂಪನಿ ಅಮೆಜಾನ್ ಇದೀಗ ಫುಡ್ ಡೆಲಿವರಿಗೂ ಲಗ್ಗೆ ಇಟ್ಟಿದ್ದು, ಝೊಮ್ಯಾಟೊ, ಸ್ವಿಗ್ಗಿಯಂತೆ ಹೊಸ ಅಮೆಜಾನ್ ಫುಡ್ ಎಂಬ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದಲೇ ತನ್ನ ಸೇವೆಯನ್ನು ಪ್ರಾರಂಭ ಮಾಡಿದ್ದು, ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಸಜ್ಜಾಗಿದೆ.

    ನಮ್ಮ ಗ್ರಾಹಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸುರಕ್ಷತೆಯ ಉನ್ನತ ಮಾನದಂಡಗಳಿಗೆ ಬದ್ಧರಾಗಿದ್ದೇವೆ. ಶುಚಿತ್ವದ ಖಾತ್ರಿಯಿರುವ ರೆಸ್ಟೊರೆಂಟ್‍ಗಳಿಂದ ಯಾರ ಸಂಪರ್ಕಕ್ಕೂ ಬಾರದಂತೆ ಸುರಕ್ಷಿತವಾಗಿ ಆರ್ಡರ್ ಮಾಡಿದ ಆಹಾರವನ್ನು, ಬೆಂಗಳೂರಿನ ಆಯ್ದ ಪಿನ್‍ಕೋಡ್‍ಗಳಲ್ಲಿ ನಾವು ಅಮೆಜಾನ್ ಫುಡ್ ಸೇವೆಯನ್ನು ಪ್ರಾರಂಭಿಸುತ್ತಿದ್ದೇವೆ. ಸ್ಥಳೀಯ ರೆಸ್ಟೋರೆಂಟ್‍ಗಳಿಂದ ಮತ್ತು ನಮ್ಮ ಉನ್ನತ ನೈರ್ಮಲ್ಯ ಪ್ರಮಾಣೀಕರಣವನ್ನು ದೃಢೀಕರಿಸಿದ ಕ್ಲೌಡ್ ಅಡುಗೆ ಮನೆಗಳಿಂದ ಗ್ರಾಹಕರಿಗೆ ಆಹಾರವನ್ನು ಆರ್ಡರ್ ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಅಮೆಜಾನ್ ತನ್ನ ಆ್ಯಪ್‍ನಲ್ಲಿ ಪ್ರಕಟಿಸಿದೆ.

    ಕಳೆದ ಫೆಬ್ರವರಿಯಲ್ಲಿಯೇ ಆರಂಭಿಸಬೇಕಾಗಿದ್ದ ಅಮೆಜಾನ್ ಫುಡ್ ಸೇವೆಯನ್ನು ಕೊರೊನಾ ವೈರಸ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಸಾಂಕ್ರಾಮಿಕ ರೋಗದ ಹಿನ್ನೆಲೆ ಆನ್‍ಲೈನ್ ಡೆಲಿವರಿ ಆ್ಯಪ್‍ಗಳಾದ ಸ್ವಿಗ್ಗಿ, ಝೊಮ್ಯಾಟೊ, ಬಿಗ್ ಬಾಸ್ಕೆಟ್ ಮತ್ತು ಗ್ರೋಫರ್ಸ್ ನಂತಹ ಇತರ ಸೇವೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಡೆಲಿವರಿಯಲ್ಲಿ ಬ್ಯುಸಿಯಾಗಿವೆ. ಅಲ್ಲದೇ ಸ್ವಿಗ್ಗಿ ಮತ್ತು ಝೊಮ್ಯಾಟೊ ಜಾರ್ಖಂಡ್ ರಾಜಧಾನಿ ರಾಂಚಿನಲ್ಲಿ ಮದ್ಯ ಮತ್ತು ಮದ್ಯಯುಕ್ತ ಪಾನೀಯಗಳ ಸೇವೆಗಳ ಡೆಲಿವರಿ ಆರಂಭಿಸಿದೆ.

    ಮದ್ಯ ಆರ್ಡರ್ ಮಾಡುವ ಗ್ರಾಹಕರು ತಮ್ಮ ವಯಸ್ಸು, ಸರ್ಕಾರ ವಿತರಿಸಿರುವ ಗುರುತಿನ ಪತ್ರ ಮತ್ತು ಸೆಲ್ಫಿಯೊಂದಿಗೆ ದೃಢೀಕರಿಸಬೇಕು. ಸ್ವಿಗ್ಗಿಯಲ್ಲಿ ‘ವೈನ್ ಶಾಪ್ಸ್’ ಎಂಬ ಹೊಸ ಆಪ್ಷನ್ ಅನ್ನು ಹೊಂದಿದ್ದು, ಗ್ರಾಹಕರು ಮನೆಯಿಂದಲೇ ಮದ್ಯವನ್ನು ಆರ್ಡರ್ ಮಾಡಿದರೆ ಡೆಲಿವರಿಯನ್ನು ಮನೆ ಬಾಗಲಿದೆ ತಲುಪಿಸಲಾಗುತ್ತದೆ.

    ಸದ್ಯ ಬೆಂಗಳೂರಿನ ಬೆಳ್ಳಂದೂರು, ಹರಳೂರು, ಮಾರತ್‍ಹಳ್ಳಿ ಮತ್ತು ವೈಟ್‍ಫೀಲ್ಡ್ ನ ಕೆಲವು ಭಾಗಗಳಲ್ಲಿ ಈ ಸೇವೆಯನ್ನು ಅಮೆಜಾನ್ ಫುಡ್ ಶುರು ಮಾಡಿದೆ. ಕಂಪನಿಯು ತನ್ನ ಆಹಾರ ಸೇವೆಗಳನ್ನು ನಗರದ ಉಳಿದ ಭಾಗಗಳಲ್ಲಿ ವಿಸ್ತರಿಸುವುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟೀಕರಣ ಸಿಕ್ಕಿಲ್ಲ.

  • ‘ಕಂಬಿ ಹಿಂದೆ ಹೋಗಬೇಕಾಗುತ್ತೆ’ – ಸ್ವಿಗ್ಗಿ ಮ್ಯಾನೇಜ್‍ಮೆಂಟ್‍ಗೆ ಬೆಂಗಳೂರು ಕಮೀಷನರ್ ಕ್ಲಾಸ್

    ‘ಕಂಬಿ ಹಿಂದೆ ಹೋಗಬೇಕಾಗುತ್ತೆ’ – ಸ್ವಿಗ್ಗಿ ಮ್ಯಾನೇಜ್‍ಮೆಂಟ್‍ಗೆ ಬೆಂಗಳೂರು ಕಮೀಷನರ್ ಕ್ಲಾಸ್

    ಬೆಂಗಳೂರು: ಆನ್‍ಲೈನ್ ಫುಡ್ ಡೆಲಿವರಿಯಲ್ಲಿ ಕೆಲ ಕಂಪನಿಗಳು 30 ನಿಮಿಷದೊಳಗೆ ಪಿಜ್ಜಾ ಡೆಲಿವರಿ ಮಾಡ್ತೀವಿ ಇಲ್ಲದೇ ಇದ್ರೆ, ಪಿಜ್ಜಾ ಫ್ರೀ ಎನ್ನುವ ಆಫರ್ ಕೊಡುತ್ತಿವೆ. ಇದರಿಂದ ಪ್ರಾಣದ ಹಂಗು ತೊರೆದು ಪಿಜ್ಜಾ ಡೆಲಿವರಿ ಬಾಯ್‍ಗಳು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಡ್ರೈವಿಂಗ್ ಮಾಡುತ್ತಿದ್ದಾರೆ.

    ಇದಕ್ಕೆ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಟ್ವೀಟ್ ಮೂಲಕ ಈ ಸಮಯವನ್ನು 40 ನಿಮಿಷಕ್ಕೆ ಏರಿಸಿ, ಪ್ರಾಣ ಪಣಕ್ಕಿಟ್ಟು ಡೆಲಿವರಿ ಬಾಯ್‍ಗಳು ಒದ್ದಾಡುತ್ತಾರೆ. ಟ್ರಾಫಿಕ್ ಜಾಮ್‍ನಲ್ಲಿ ಹೇಗೆ ತಾನೇ 30 ನಿಮಿಷಕ್ಕೆ ತಲುಪಿಸುತ್ತಾನೆ ಎಂದು ಕಮೀಷನರ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಭಾಸ್ಕರ್ ರಾವ್ ಅವರ ಟ್ವೀಟ್‍ಗೆ ಸ್ವಿಗ್ಗಿ ಪ್ರತಿಕ್ರಿಯಿಸಿ, ಹಾಗೇನಿಲ್ಲ ಸರ್. ನಾವು ಸಂಚಾರಿ ನಿಯಮವನ್ನು ಪಾಲಿಸುತ್ತೇವೆ. ಯಾರಾದರೂ ಡೆಲಿವರಿ ಬಾಯ್‍ಗಳು ಪಾಲನೆ ಮಾಡದಿದ್ದರೆ ನಮ್ಮ ಸಹಾಯವಾಣಿಗೆ ದೂರು ಕೊಡಿ ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ನಿಂದ ಸಿಟ್ಟಿಗೆದ್ದ ಭಾಸ್ಕರ್ ರಾವ್, ನಿಮ್ಮ ಕಿರಿಕ್‍ನಿಂದಾಗಿ ಡೆಲಿವರಿ ಬಾಯ್‍ಗಳು ನಿಯಮವನ್ನು ಉಲ್ಲಂಘಿಸಿ ಟ್ರಾಫಿಕ್ ಪೊಲೀಸರ ಕೈ-ಕಾಲು ಹಿಡಿದುಕೊಂಡು ಬಿಟ್ಟು ಬಿಡಿ ಸರ್, ಇಲ್ಲದಿದ್ದರೆ ನಮಗೆ ತೊಂದರೆಯಾಗುತ್ತೆ. ಇನ್ ಟೈಂಗೆ ಡೆಲಿವರಿ ಮಾಡಬೇಕು ಎಂದು ಬೇಡಿಕೊಳ್ತಾರೆ. ಸಿಕ್ಕಾಪಟ್ಟೆ ರೂಲ್ಸ್ ಬ್ರೇಕ್ ಮಾಡುವುದು ನಿಮ್ಮ ಡೆಲಿವರಿ ಬಾಯ್ ಗಳೇ, ಯಾರಾದರೂ ಡೆಲಿವರಿ ಬಾಯ್‍ಗೆ ಆಕ್ಸಿಡೆಂಟ್ ಆಗಿ ಸಮಸ್ಯೆಯಾಗಬೇಕು. ಆಗ ನಿಮ್ಮ ಸ್ವಿಗ್ಗಿ ಮ್ಯಾನೇಜ್ ಮೆಂಟ್ ನವರು ಕಂಬಿ ಹಿಂದೆ ಇರಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಸಾರ್ವಜನಿಕರೂ ಕೂಡ ಸ್ವಿಗ್ಗಿ ಕಂಪನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

  • ವೇದವ್ಯಾಸ್ ಕಾಮತ್ ಐಡಿಯಾಕ್ಕೆ ಸ್ವಿಗ್ಗಿ ಮೆಚ್ಚುಗೆ

    ವೇದವ್ಯಾಸ್ ಕಾಮತ್ ಐಡಿಯಾಕ್ಕೆ ಸ್ವಿಗ್ಗಿ ಮೆಚ್ಚುಗೆ

    ಮಂಗಳೂರು: ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಕುರಿತು ಹಲವು ವರ್ಷಗಳಿಂದಲೇ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಸ್ಟ್ 15ರಂದು ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇವರ ಹೊಸ ಐಡಿಯಾಕ್ಕೆ ಸ್ವಿಗ್ಗಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

    ಹೌದು. ವೇದವ್ಯಾಸ್ ಕಾಮತ್ ಅವರು ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಆನ್ ಲೈನ್ ಆಹಾರ ಪೂರೈಸುವ ಕಂಪನಿಗಳಿಗೆ ಒಂದೊಳ್ಳೆ ಉಪಾಯವನ್ನು ನೀಡಿದ್ದಾರೆ. ಆಹಾರ ಪೂರೈಕೆ ಮಾಡಲು ಪ್ಲಾಸ್ಟಿಕ್ ಬದಲು ಅಡಿಕೆ ಮರದ ಹಾಳೆಯನ್ನು ಬಾಕ್ಸ್ ಮಾಡಿ ಬಳಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಈ ಕುರಿತು ಕಾಮತ್ ಅವರು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಫೊಟೋ ಸಮೇತ ಹಾಕಿ ಬರೆದುಕೊಂಡು ಸ್ವಿಗ್ಗಿ, ಝೋಮ್ಯಾಟೋ ಹಾಗೂ ಉಬರ್ ಈಟ್ಸ್ ಗೆ ಪಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

    ಕಾಮತ್ ಅವರು ಈ ಪೋಸ್ಟ್ ಹಾಕುತ್ತಿದ್ದಂತೆಯೇ ಆನ್ ಲೈನ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಪ್ರತಿಕ್ರಿಯಿಸಿದ್ದು, ತಕ್ಷಣದಿಂದಲೇ ಈ ಹೊಸ ಐಡಿಯಾವನ್ನು ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದೆ. ಸ್ವಗ್ಗಿ ಅವರ ಈ ಪ್ರತಿಕ್ರಿಯೆಗೆ ರಿಫ್ಲೈ ಮಾಡಿದ ಕಾಮತ್, ಅಡಿಕೆ ಹಾಳೆಗಳು ಲಭ್ಯವಾಗುವ ವಿವರಗಳನ್ನು ಶೀಘ್ರವೇ ತಿಳಿಸುವುದಾಗಿ ಹೇಳಿದ್ದು, ಇದಕ್ಕೆ ಸ್ವಿಗ್ಗಿ ಧನ್ಯವಾದ ಹೇಳಿದೆ.

    ವೇದವ್ಯಾಸ್ ಕಾಮತ್ ಅವರು ಈ ಹಿಂದೆಯೂ ಮಂಗಳೂರಿನ ಆಹಾರ ಪೂರೈಕೆ ಸಂಸ್ಥೆಗಳಿಗೆ ಪ್ಲಾಸ್ಟಿಕ್ ನಲ್ಲಿ ಆಹಾರ ಕಟ್ಟಿಕೊಡದಂತೆ ಹೇಳಿದ್ದರು. ಅಲ್ಲದೆ ಪ್ಲಾಸ್ಟಿಕ್ ಬದಲು ಬಾಳೆ ಎಲೆಯಲ್ಲಿ ಆಹಾರ ಪ್ಯಾಕ್ ಮಾಡಿ ಎಂದಿದ್ದರು.

  • ಊಟ ಕೊಡಲು ಹೋದ ಡೆಲಿವರಿ ಹುಡ್ಗನಿಂದ ಸೆಕ್ಸ್‌ಗೆ ಒತ್ತಾಯ

    ಊಟ ಕೊಡಲು ಹೋದ ಡೆಲಿವರಿ ಹುಡ್ಗನಿಂದ ಸೆಕ್ಸ್‌ಗೆ ಒತ್ತಾಯ

    ಬೆಂಗಳೂರು: ಸ್ವಿಗ್ಗಿ ಡೆಲಿವರಿ ಹುಡಗನೊಬ್ಬ ಊಟ ಆರ್ಡರ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

    ಈ ಕುರಿತು ಡೆಲಿವರಿ ಹುಡುಗನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವತಿ ಒತ್ತಾಯಿಸಿದ್ದಾರೆ. ಆದರೆ ಕೇವಲ ಕ್ಷಮೆಯಾಚಿಸುವ ಮೂಲಕ ಈ ಪ್ರಕರಣವನ್ನು ಮುಕ್ತಾಯ ಮಾಡಲು ಸ್ವಿಗ್ಗಿ ಸಂಸ್ಥೆ ಮುಂದಾಗಿದೆ. ಡೆಲಿವರಿ ಹುಡುಗ ಸೆಕ್ಸ್ ಗೆ ಒತ್ತಾಯಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

    ಏನಿದು ಪ್ರಕರಣ?
    ನೇಹಾ (ಹೆಸರು ಬದಲಾಯಿಸಲಾಗಿದೆ) ಎಂಬವರು ಮೊಬೈಲ್‍ನಲ್ಲಿ ಸ್ವಿಗಿ ಆಪ್‍ ಮೂಲಕ ಊಟ ಆರ್ಡರ್ ಮಾಡಿದ್ದಾರೆ. ಈ ಆರ್ಡರ್ ಬಂದ ಬಳಿಕ ಸ್ವಿಗ್ಗಿ ಡೆಲಿವರಿ ಹುಡುಗ ಆಹಾರವನ್ನು ಪಾರ್ಸಲ್ ತೆಗೆದುಕೊಂಡು ಯುವತಿಯ ಮನೆಗೆ ಹೋಗಿದ್ದು, ಬಾಗಿಲು ಬಡಿದಿದ್ದಾನೆ.

    ಆಗ ಯುವತಿ ಬಂದು ಬಾಗಿಲು ತೆರೆದಿದ್ದಾರೆ. ಈ ವೇಳೆ ಡೆಲಿವರಿ ಹುಡುಗ ಪಾರ್ಸಲ್ ಕೊಡುವಾಗ ಯುವತಿಗೆ ಕೇಳಿಸದ ರೀತಿಯಲ್ಲಿ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದು ಯುವತಿಗೆ ಕೇಳಿಸಲಿಲ್ಲ. ಹೀಗಾಗಿ ಯುವತಿ ಮತ್ತೆ ಆತನನ್ನು ಏನು ಎಂದು ಕೇಳಿದ್ದಾರೆ. ಆಗ ಹುಡುಗ ಮತ್ತೆ ಯುವತಿಗೆ ಕೇಳಿಸುವಂತೆ ನನ್ನ ಜೊತೆಗೆ ಸೆಕ್ಸ್ ಮಾಡಿ ಎಂದು ಒತ್ತಾಯಿಸಿದ್ದಾನೆ.

    ಈ ಬಗ್ಗೆ ಯುವತಿ ತನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. “ಡೆಲಿವರಿ ಬಾಯ್ ತನ್ನ ಜೊತೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದನು. ಆದರೆ ನಾನು ಆತನಿಂದ ಫುಡ್ ಪ್ಯಾಕೇಟ್ ಕಿತ್ತುಕೊಂಡು ಏನೂ ಮಾತನಾಡದೇ ಬಾಗಿಲು ಮುಚ್ಚಿದೆ. ಆತನ ವರ್ತನೆ ನನಗೆ ಅಸಹ್ಯ ಎನಿಸಿತು. ಬಳಿಕ ನಾನು ಆರ್ಡರ್ ಮಾಡಿದ್ದ ಊಟವನ್ನು ತಿನ್ನಲು ಮನಸ್ಸಾಗಲಿಲ್ಲ. ಅದರಲ್ಲೂ ಪ್ಯಾಕೇಟ್ ಮುಟ್ಟಲು ಕೂಡ ಇಷ್ಟವಾಗಿಲ್ಲ. ನಿಮ್ಮ ಡೆಲಿವರಿ ಹುಡುಗ ನನ್ನ ಜೊತೆ ವರ್ತಿಸಿದ್ದ ರೀತಿ ಅಸಭ್ಯವಾಗಿತ್ತು” ಎಂದು ಸ್ವಿಗ್ಗಿ ಕಂಪನಿಗೆ ದೂರು ನೀಡಿದ್ದಾರೆ.

    ಯುವತಿಯ ದೂರಿಗೆ ಪ್ರತಿಕ್ರಿಯಿಸಿದ ಕಂಪನಿ, ನಾವು ಡೆಲಿವರಿ ಹುಡಗನ ಬಗ್ಗೆ ವಿಚಾರಣೆ ಮಾಡುತ್ತೇವೆ ಎಂದು ತಿಳಿಸಿದೆ. ಜೊತೆಗೆ ಯುವತಿಯ ಬಳಿ ಕ್ಷಮೆಯಾಚಿಸುವ ಮೂಲಕ 200 ರೂಪಾಯಿ ಕೂಪನ್ ಕಾರ್ಡ್ ಕಳುಹಿಸಿದೆ.

  • ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆ!

    ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆ!

    ಚೆನ್ನೈ: ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಉಪಯೋಗಿಸಿದ ರಕ್ತದ ಕಲೆಗಳು ಇರುವ ಬ್ಯಾಂಡೇಜ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ತಪ್ಪು ಮಾಡಿರುವ ರೆಸ್ಟೋರೆಂಟ್ ಹೆಸರನ್ನು ತನ್ನ ಆ್ಯಪ್‍ನಿಂದ ಅಮಾನತು ಮಾಡಿದೆ.

    ಭಾನುವಾರದಂದು ಚೆನ್ನೈ ಮೂಲದ ಗ್ರಾಹಕ ಬಾಲಮುರುಘನ್ ಸ್ವಿಗ್ಗಿ ಆಪ್ ಮೂಲಕ ರೆಸ್ಟೋರೆಂಟ್‍ವೊಂದರಿಂದ ನೂಡಲ್ಸ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಕೊಟ್ಟ ನೂಡಲ್ಸ್ ನಲ್ಲಿ ರಕ್ತದ ಕಲೆಗಳು ಇದ್ದ ಬಳಕೆಯಾದ ಬ್ಯಾಂಡೇಜ್ ಪತ್ತೆಯಾಗಿತ್ತು. ಈ ವೇಳೆ ಕೋಪಗೊಂಡ ಗ್ರಾಹಕ ಆರ್ಡರ್ ಮಾಡಿದ್ದ ನೂಡಲ್ಸ್ ಫೋಟೋ ತೆಗೆದು ಸ್ವಿಗ್ಗಿ ಗ್ರಾಹಕರ ಸೇವೆಗೆ ದೂರು ನೀಡಿದ್ದಾರೆ.

    ಆರ್ಡರ್ ಮಾಡಿದ್ದ ನೂಡಲ್ಸ್ ನಲ್ಲಿ ಗ್ರಾಹಕ ಅರ್ಧ ತಿಂದು ಮುಗಿಸಿ ಇನ್ನರ್ಧ ತಿನ್ನುವಾಗ ಅದರಲ್ಲಿ ಬ್ಯಾಂಡೇಜ್ ಪತ್ತೆಯಾಗಿತ್ತು. ಆಗ ಗ್ರಾಹಕ ಈ ಕುರಿತು ಸ್ವಿಗ್ಗಿ ಗ್ರಾಹಕರ ಸೇವೆಗೆ ಹಲವು ಬಾರಿ ಮೆಸೆಜ್ ಕಳುಹಿಸಿದ್ದರು. ಆದರೆ ಮೊದಲು ಈ ದೂರಿಗೆ ಸ್ವಿಗ್ಗಿ ಕಡೆಯಿಂದ ಯಾವ ಪ್ರತಿಕ್ರಿಯೆ ದೊರಕಿರಲಿಲ್ಲ. ಬಳಿಕ ನೂಡಲ್ಸ್ ನಲ್ಲಿ ಪತ್ತೆಯಾದ ಬ್ಯಾಂಡೆಜ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕ ಶೇರ್ ಮಾಡಿದ ಬಳಿಕ ಎಚ್ಚೆತ್ತುಕೊಂಡ ಸ್ವಿಗ್ಗಿ ಕಂಪನಿ ಗ್ರಾಹಕ ಶೇರ್ ಮಾಡಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದೆ.

    ಬಾಲಮುರುಘನ್ ಅವರ ದೂರಿಗೆ ಪ್ರತಿಕ್ರಿಯಿಸಿದ ಸ್ವಿಗ್ಗಿ ಕಂಪನಿ ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಅದರಂತೆ ಬೇಜವಾಬ್ದಾರಿಯಿಂದ ಗ್ರಾಹಕರಿಗೆ ಆಹಾರ ಕಳುಹಿಸಿರುವ ರೆಸ್ಟೋರೆಂಟ್ ಮೇಲೆ ಸ್ವಿಗ್ಗಿ ಕ್ರಮ ತೆಗೆದುಕೊಂಡಿದೆ. ತನ್ನ ರೆಸ್ಟೋರೆಂಟ್ ಪಟ್ಟಿಯಿಂದ ಬೇಜವಾಬ್ದಾರಿ ತೋರಿದ ಆ ರೆಸ್ಟೋರೆಂಟ್ ಅನ್ನು ಅಮಾನತು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಿಗ್ಗಿ-ಎಂಪೈರ್ ಸಿಬ್ಬಂದಿ ಗಲಾಟೆ – ರಾತ್ರೋರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ದಾಂಧಲೆ

    ಸ್ವಿಗ್ಗಿ-ಎಂಪೈರ್ ಸಿಬ್ಬಂದಿ ಗಲಾಟೆ – ರಾತ್ರೋರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ದಾಂಧಲೆ

    ಬೆಂಗಳೂರು: ಸ್ವಿಗ್ಗಿ ಹುಡುಗರು ಎಂಪೈರ್ ಹೋಟೆಲ್‍ನ್ನ ಚಿಂದಿ ಉಡಾಯಿಸಿರುವ ಘಟನೆ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ತಡರಾತ್ರಿ ಸ್ವಿಗ್ಗಿ ಡೆಲಿವರಿ ಬಾಯ್ ಹಾಗೂ ಮ್ಯಾನೇಜರ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗಿದೆ. ಈ ವೇಳೆ ಸ್ವಿಗ್ಗಿ ಹುಡುಗ ಹರೀಶ್ ಮೇಲೆ ಹಲ್ಲೆಯಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಮೈಕೋ ಲೇಔಟ್ ಪೊಲೀಸರು ಇಬ್ಬರನ್ನ ಠಾಣೆಗೆ ಕರೆಸಿ ವಿಚಾರಣೆ ಮಾಡಿ ಬಿಟ್ಟಿ ಕಳಿಸಿದ್ರು.

    ಠಾಣೆಯಿಂದ ಹೊರ ಬರುತ್ತಿದ್ದಂತೆ ಸ್ವಿಗ್ಗಿ ಹುಡುಗರು ಕನ್ನಡಿಗರ ಮೇಲೆ ನಾರ್ಥ್ ಇಂಡಿಯನ್ಸ್ ದಬ್ಬಾಳಿಕೆ ಮಾಡಿದ್ದಾರೆಂದು ಕನ್ನಡ ಪರ ಸಂಘಟನೆಯವರನ್ನ ಕರೆಸಿ ಗಲಾಟೆ ಮಾಡಿದ್ದಾರೆ. ಮತ್ತೆ ಪೊಲೀಸರು ಸಮಾಧಾನ ಮಾಡಿ ಕಳುಹಿಸಿದ್ರು. ಇಷ್ಟಾದ್ರೂ ಸುಮ್ಮನಾಗದ ಸ್ವಿಗ್ಗಿ ಬಾಯ್ಸ್ 30 ರಿಂದ 40 ಜನರ ಗ್ಯಾಂಗ್ ಕಟ್ಟಿಕೊಂಡು ಬಂದು ಎಂಪೈರ್ ಹೋಟೆಲ್‍ಗೆ ಕಲ್ಲು ಹೊಡೆದು ಪರಾರಿಯಾಗಿದ್ದಾರೆ.

    ಈ ಸಂಬಂಧ ಮೈಕೊಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಎಸಿಪಿ ಕರಿಬಸವಯ್ಯ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv