Tag: ಸ್ವಾಮೀಜಿಗಳು

  • ರಾಜಣ್ಣ ಬೆನ್ನಿಗೆ ನಿಂತ 15ಕ್ಕೂ ಹೆಚ್ಚು ಮಠಾಧೀಶರು – ಮತ್ತೆ ಸಚಿವ ಸ್ಥಾನ ನೀಡುವಂತೆ ಒಕ್ಕೊರಲಿನ ಒತ್ತಾಯ

    ರಾಜಣ್ಣ ಬೆನ್ನಿಗೆ ನಿಂತ 15ಕ್ಕೂ ಹೆಚ್ಚು ಮಠಾಧೀಶರು – ಮತ್ತೆ ಸಚಿವ ಸ್ಥಾನ ನೀಡುವಂತೆ ಒಕ್ಕೊರಲಿನ ಒತ್ತಾಯ

    ತುಮಕೂರು: ರಾಜಣ್ಣರನ್ನು (KN Rajanna) ಸಹಕಾರಿ ಸಚಿವ ಸ್ಥಾನದಿಂದ ವಜಾ ಆದ ಬಳಿಕ ತುಮಕೂರಿನಲ್ಲಿ ಭಾರಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಜೊತೆಗೆ ಹೈಕಮಾಂಡ್‌ನ ಈ ನಿರ್ಧಾರದ ವಿರುದ್ಧ ಆಕ್ರೋಶದ ಕೂಗುಗಳ ಜೊತೆಗೆ ಮತ್ತೆ ಸಚಿವ ಸ್ಥಾನ ಕೊಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈಗ ರಾಜಣ್ಣನ ಬೆನ್ನಿಗೆ ನಿಂತ ವಿವಿಧ ಮಠಗಳ ಸ್ವಾಮೀಜಿಗಳು (Swamijis) ಸಹ ಸಚಿವ ಸ್ಥಾನ ಮತ್ತೆ ನೀಡಬೇಕೆಂದು ಧ್ವನಿ ಎತ್ತಿದ್ದಾರೆ.

    ಇಂದು ತುಮಕೂರಿನ (Tumakuru) ಕ್ಯಾತ್ಸಂದ್ರ ರಾಜಣ್ಣನ ನಿವಾಸಕ್ಕೆ ಬಂದ ಚಿತ್ರದುರ್ಗದ ಶ್ರೀ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ದಾವಣಗೆರೆಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಸ್ವಾಮೀಜಿಗಳು ರಾಜಣ್ಣನವರನ್ನು ಭೇಟಿಯಾದರು. ಸತತ ಒಂದು ಘಂಟೆಗೂ ಅಧಿಕ ಕಾಲ ರಾಜಣ್ಣನ ಜೊತೆ ಚರ್ಚೆ ನಡೆಸಿದ 15ಕ್ಕೂ ಹೆಚ್ಚು ಸ್ವಾಮಿಜಿಗಳು ಸಚಿವ ಸ್ಥಾನದಿಂದ ತೆರವು ವಿಚಾರಕ್ಕೆ ಬೇಸರ ವ್ಯಕ್ತಪಡಿಸುವುದರ ಜೊತೆಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಮಾತುಗಳನ್ನಾಡಿದರು.

    ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಣ್ಣನ ಸಚಿವ ಸ್ಥಾನದಿಂದ ಕೈ ಬಿಟ್ಟಿರೊದು ಆಘಾತಕಾರಿ ವಿಚಾರ. ಇದು ರಾಜಣ್ಣನವರಿಗೆ ಆದ ನಷ್ಟವಲ್ಲ ಬದಲಾಗಿ ರಾಜ್ಯದ ಜನತೆಗೆ ಆದ ನಷ್ಟ. ಒಬ್ಬ ಹಿಂದುಳಿದ ನಾಯಕನಿಗೆ ಸಮಯ ಕೊಡಬೇಕಿತ್ತು. ಹೈಕಂಮಾಂಡ್ ಈ ವಿಚಾರ ಗಂಭೀರವಾಗಿ ಪರಿಗಣಿಸಿ ಮತ್ತೆ ರಾಜಣ್ಣನಿಗೆ ಸಚಿವ ಸ್ಥಾನ ಕೊಡಬೇಕು. ರಾಜಣ್ಣನಿಗೆ ಪುನಃ ಸಚಿವ ಸ್ಥಾನ ನೀಡಬೇಕೆಂದು ದಲಿತ ಹಿಂದುಳಿದ ವರ್ಗಗಳ ಒಕ್ಕೂಟದ ಸ್ವಾಮೀಜಿಗಳು ಹೈಕಮಾಂಡ್ ಭೇಟಿಗೆ ನಿರ್ಧಾರ ಮಾಡಿದ್ದೇವೆ. ಒಂದು ರಾಷ್ಟ್ರೀಯ ಪಕ್ಷ ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಒಂದು ನ್ಯಾಯ ಮಾಡಬಾರದು. ದಲಿತ ಮತ ಚದುರದಂತೆ ನೋಡಿಕೊಳ್ಳಬೇಕು. ಹಾಗಾಗಿ ರಾಜಣ್ಣರಿಗೆ ಮತ್ತೆ ಸಚಿವ ಸ್ಥಾನಮಾನ ಕೊಡಬೇಕೆಂದು ಒತ್ತಾಯ ಮಾಡುತ್ತೇವೆ ಎಂದರು.

    ಇನ್ನು ಸ್ವಾಮೀಜಿಗಳ ಭೇಟಿ ಬಳಿಕ ಮಾತನಾಡಿದ ರಾಜಣ್ಣ, ಸ್ವಾಮಿಜಿಗಳು ಆಶೀರ್ವದಿಸಲು ಬಂದಿದ್ದರು. ಹೊರತುಪಡಿಸಿ ಅಧಿಕಾರ ಹೋದ ತಕ್ಷಣ ಅಸಮಾಧಾನ ಆಗಲಿ, ಚಿಂತೆ ಆಗಲಿ ಇಲ್ಲಾ. ಎಲ್ಲಾ ಜಾತಿಯ ಬಡವರ ಪರವಾದ ಧ್ವನಿಯೆತ್ತುವ ಕೆಲಸ ಮಾಡುತ್ತೇನೆ. ನಾನು ದೆಹಲಿಗೆ ಸಂಪುಟಕ್ಕೆ ಸೇರಿಸಿ ಅಂತಾ ಹೊಗಿದ್ನಾ? ನನಗೆ ಮಂತ್ರಿ ಸ್ಥಾನದ ಅಗತ್ಯತೆ ಏನು ಇಲ್ಲ. ಆದರೇ ಮತಗಳ್ಳತನ ಹೇಳಿಕೆ ಹೊರತು ಪಡಿಸಿ ಸಚಿವ ಸ್ಥಾನದಿಂದ ವಜಾ ಮಾಡಲು ಬೇರೆ ಕಾರಣ ಇತ್ತು ಎನಿಸುತ್ತದೆ. ಹನಿಟ್ರ‍್ಯಾಪ್ ಬಗ್ಗೆ ಹೇಳಿದ್ದೆ. ಡಿಸಿಎಂ ಬಗ್ಗೆ ಹೇಳಿದ್ದೆ ಇದೆಲ್ಲಾ ಕಾರಣ ಅನಿಸುತ್ತೆ. ಆದರೇ ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲಾ. ಬೇರೆ ಪಕ್ಷ ಸೇರೋ ಅಗತ್ಯವೂ ಇಲ್ಲಾ ಎಂದು ತಿಳಿಸಿದರು.

    ಸದ್ಯ ರಾಜಣ್ಣನಿಗೆ ವಾಪಾಸ್ ಸಚಿವ ಸ್ಥಾನದ ಕೂಗೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜಣ್ಣ ಬೆನ್ನಿಗೆ 15ಕ್ಕೂ ಹೆಚ್ಚು ಮಠದ ಸ್ವಾಮಿಜಿಗಳು ನಿಂತಿದ್ದು, ಮುಂದೆ ಹೈಕಮಾಂಡ್ ಇದನ್ನು ಯಾವ ರೀತಿ ಪರಿಗಣಿಸುತ್ತದೆ ಎಂದು ನೋಡಬೇಕಿದೆ. ಈ ನಡುವೆ ರಾಜಣ್ಣರ ಅಭಿಮಾನಿಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸೋನಿಯಾಗಾಂಧಿ ಮನೆ ಮುಂದೆನೂ ಧರಣಿ ಮಾಡಲು ಅಣಿಯಾಗಿದ್ದಾರೆ. ಹೈಕಮಾಂಡ್ ಈ ಎಲ್ಲಾ ಹೋರಾಟಕ್ಕೆ ಮಣೆ ಹಾಕುತ್ತಾ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.

  • ಸ್ವಾಮೀಜಿಗಳು ಭ್ರಷ್ಟಾಚಾರ ವಿರೋಧಿಸಬೇಕು, ಸಪೋರ್ಟ್ ಮಾಡೋದು ಸರಿಯಲ್ಲ- ಛಲವಾದಿ ನಾರಾಯಣಸ್ವಾಮಿ

    ಸ್ವಾಮೀಜಿಗಳು ಭ್ರಷ್ಟಾಚಾರ ವಿರೋಧಿಸಬೇಕು, ಸಪೋರ್ಟ್ ಮಾಡೋದು ಸರಿಯಲ್ಲ- ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅಕ್ರಮದ ಪರ ನಿಂತಿರುವ ಸ್ವಾಮೀಜಿಗಳು, ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅಹಿಂದಾ ಸಮುದಾಯಗಳ ಪ್ರತಿಭಟನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಿರೋಧ ವ್ಯಕ್ತಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಜಾತ್ಯಾತೀತ ಅಂತಾರೆ. ಅವರು ಎಲ್ಲಿ ಜಾತಿ ಉಳಿಸಿಕೊಂಡಿದ್ದಾರೆ ಅವರೇ ಹೇಳಬೇಕು. ಕಾವಿಧಾರಿಗಳನ್ನು ಕಂಡ್ರೆ ಆಗ್ತಿರಲಿಲ್ಲ. ಈಗ ತಮ್ಮ ಸಂಕಷ್ಟಕ್ಕೆ ಕಾವಿಧಾರಿಗಳನ್ನೂ ಬಳಸಿಕೊಳ್ತಿದ್ದಾರೆ. ನಮಗೆ ಗುರುಗಳು, ಮಠಾಧೀಶರ ಮೇಲೆ ಗೌರವ ಇದೆ. ಅವರು ರಾಜಕಾರಣ ತೊಳೆಯುವ ಕೆಲಸ ಮಾಡಬೇಕೇ ಹೊರತು ಭ್ರಷ್ಟಾಚಾರ ಮಾಡಿದವರ ಬೆಂಬಲಿಸುವುದು ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ನೀರಿನಲ್ಲಿ ಅಮಲು ಪದಾರ್ಥ ಸೇರಿಸಿ ಆಟೋ ಚಾಲಕನಿಂದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ರೇಪ್

    ಈ ಸರ್ಕಾರ ಮುಡಾದಲ್ಲಿ ಭ್ರಷ್ಟಾಚಾರ ಮಾಡಿದೆ. ವಾಲ್ಮೀಕಿ ನಿಗಮದಲ್ಲಿ ಕೂಡ ಭ್ರಷ್ಟಾಚಾರ ಆಗಿ, ತನಿಖೆ ನಡೆಯುತ್ತಿದೆ. ದಲಿತ ಸಮುದಾಯಕ್ಕೆ ಅನ್ಯಾಯ ಆದಾಗ ಜನರ ಬೆಂಬಲಕ್ಕೆ ನಿಲ್ಲಬೇಕು. ಅದು ಬಿಟ್ಟು ದಲಿತ ವರ್ಗಕ್ಕೆ ಅನ್ಯಾಯ ಮಾಡಿದವರ ಸಪೋರ್ಟ್‌ಗೆ ನಿಲ್ಲೋದು ಎಷ್ಟು ಸರಿ. ಅಂಬೇಡ್ಕರ್ ಹೆಸರೇಳಿ ದಲಿತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ದಲಿತರ ಸಮಾಧಿ ಕಟ್ಟುತ್ತಿದೆ. ಸ್ವಾಮೀಜಿಗಳು ದಲಿತರಿಗೆ ಅನ್ಯಾಯ ಮಾಡಿದ್ದೀರಿ ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡಬೇಕು. ಆದರೆ ಸರ್ಕಾರದ ಪರ ನಿಂತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

    ಅಹಿಂದಾ ಸಂಘಟನೆಗಳಿಂದ ಸಿಎಂ ಪರ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಲವು ದಲಿತ ಸಂಘಟನೆಗಳು ಸಿಎಂ ಪರವಾಗಿ ರಾಜಭವನ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ನಾಳೆ ದಲಿತ ಸಂಘಟನೆಗಳು ಸಭೆ ಕರೆದಿವೆ. ಕೆಲ ದಲಿತ ಸಂಘಟನೆಗಳು ಚಾಟಿ ಬೀಸಿವೆ. ಅಂಬೇಡ್ಕರ್ ಹೆಸರೇಳಿಕೊಂಡು ಹೋರಾಟ ಮಾಡುತ್ತಿದ್ದಾರೆ. ದಲಿತರ ಪರವಾಗಿ ನಿಲ್ಲಬೇಕೇ ಹೊರತು. ದಲಿತರಿಗೆ ಅನ್ಯಾಯ ಮಾಡಿದವರ ಪರ ನಿಲ್ಲಬಾರದು. ಅವರ ಬೆಂಬಲಕ್ಕೆ ನಿಂತಿರೋದು ಯಾಕೆ? ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ

    ಸರ್ಕಾರದ ಪರವಾಗಿ ನಿಂತರೆ ಆಮಿಷಕ್ಕೆ ನಿಂತಿದ್ದೀರಿ ಅಂತಾಗುತ್ತದೆ. ದಲಿತರ ಪರವಾಗಿ ನಿಲ್ಲೋದು ಬಿಟ್ಟು, ಸರ್ಕಾರದ ಪರ ನಿಲ್ಲೋದು ಯಾಕೆ? ಸಿಎಂ ಪರ ಆಗಲಿ, ಯಾರ ಪರ ಯಾರಾದ್ರೂ ನಿಲ್ಲಲಿ. ಸರ್ಕಾರ ದಲಿತರಿಗೆ ಸವಲತ್ತು ನೀಡದೇ ಇದ್ದಾಗ ಹೋರಾಟ ಮಾಡಲಿ. 24 ಸಾವಿರ ಕೋಟಿ ರೂ. 187 ಕೋಟಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಅದನ್ನು ವಿರೋಧ ಮಾಡುತ್ತಿಲ್ಲ. ಹೊಟ್ಟೆಪಾಡಿಗಾಗಿ ಕೆಲ ಸಂಘಟನೆಗಳು ಅವರ ಪರ ನಿಲ್ಲುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಲಿದೆ ಎಂದು ಕಿಡಿಕಾರಿದ್ದಾರೆ.

  • MUDA Scam | ರಾಜ್ಯಪಾಲರ ನಡೆಗೆ ಖಂಡನೆ – ಸಿದ್ದರಾಮಯ್ಯ ಬೆನ್ನಿಗೆ ನಿಂತ ಮಠಾಧೀಶರು

    MUDA Scam | ರಾಜ್ಯಪಾಲರ ನಡೆಗೆ ಖಂಡನೆ – ಸಿದ್ದರಾಮಯ್ಯ ಬೆನ್ನಿಗೆ ನಿಂತ ಮಠಾಧೀಶರು

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಹಲವು ಸಂಘಟನೆಗಳು, ಕಾಂಗ್ರೆಸ್‌ ಶಾಸಕರು, ಸಚಿವರು ಬೆಂಬಲ ನೀಡಿದ್ದಾರೆ. ಈ ನಡುವೆ ಹಿಂದುಳಿದ ವರ್ಗ ಮತ್ತು ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟ ಸಹ ಸಿಎಂ ಬೆನ್ನಿಗೆ ನಿಂತಿದೆ.

    ಹಿಂದುಳಿದ ವರ್ಗ ಮತ್ತು ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟದ ಸ್ವಾಮೀಜಿಗಳು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಷರತ್ ನೈತಿಕ ಬೆಂಬಲ ಘೋಷಿಸಿದ್ದಾರೆ.

    ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ 10 ಸ್ವಾಮೀಜಿಗಳನ್ನೊಳಗೊಂಡ ನಿಯೋಗ ಸಿದ್ದರಾಮಯ್ಯ ಅವರಿಗೆ ಆತ್ಮಸ್ಥೈರ್ಯ ತುಂಬಿತು. ಇದೇ ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಕ್ರಮವನ್ನು ಒಕ್ಕೂಟ ಖಂಡಿಸಿತು.

    ಸಿಎಂಗೆ ಯಾರೆಲ್ಲಾ ಬೆಂಬಲ್ಲ?
    * ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಯವರು, ಕನಕ ಪೀಠ ಕಾಗಿನೆಲೆ.
    * ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಕುಂಚಿಟಿಗ ಮಾಸಂಸ್ಥಾನ ಮಠ ಹೊಸದುರ್ಗ.
    * ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು, ಭೋವಿ ಗುರುಪೀಠ ಚಿತ್ರದುರ್ಗ.
    * ಜಗದ್ಗುರು ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿಗಳು, ಮಾದರ ಚನ್ನಯ ಗುರುಪೀಠ ಚಿತ್ರದುರ್ಗ.
    * ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಭಗಿರಥ ಪೀಠ ಮಧುರೆ.
    * ಪರಮಪೂಜ್ಯ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಕನಕ ಗುರುಪೀಠ ಹೊಸದುರ್ಗ.
    * ಶ್ರೀ ರೇಣುಕಾನಂದ ಸ್ವಾಮಿಗಳು, ನಾರಾಯಣ ಗುರುಪೀಠ ಶಿವಮೊಗ್ಗ.
    * ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಮಡಿವಾಳ ಗುರುಪೀಠ ಚಿತ್ರದುರ್ಗ.
    * ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳು, ಹಡಪದ ಅಪ್ಪಣ್ಣ ಗುರುಪೀಠ ತಂಗಡಗಿ.
    * ಶ್ರೀ ಶಾಂತಮ್ಮಯ್ಯ ಸ್ವಾಮೀಜಿಗಳು, ಸರೂರು ವಿಜಯನಗರ.
    ಈ ಎಲ್ಲಾ ಪೂಜ್ಯರು ನಿಯೋಗದ ಪರವಾಗಿ ಉಪಸ್ಥಿತರಿದ್ದು, ಕೃತಕವಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರ ಸರ್ಕಾರದ ಮತ್ತು ರಾಜಭವನದ ಷಡ್ಯಂತ್ರಗಳನ್ನು ತೀವ್ರವಾಗಿ ಖಂಡಿಸಿ, ಈ ಷಡ್ಯಂತ್ರದ ವಿರುದ್ಧ ಒಕ್ಕೋರಲಿನಿಂದ ಮುಖ್ಯಮಂತ್ರಿಗಳ ಪರವಾಗಿ ನಿಂತು ಹೋರಾಟ ನಡೆಸುವುದಾಗಿ ಘೋಷಿಸಿದರು.

    ರಾಜ ಭವನ ಚಲೋ ಕುರಿತು ಪೂರ್ವಭಾವಿ ಸಭೆ:
    ಅಲ್ಲದೇ ಮೈಸೂರಿನಲ್ಲೂ ಸಹ ಭಾನುವಾರ ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ ಇದೇ ಆಗಸ್ಟ್‌ 27ರಂದು ರಾಜ ಭವನ ಚಲೋ ಕಾರ್ಯಕ್ರಮ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಗಿದೆ. ಕರ್ನಾಟಕ ‌ಶೋಷಿತ ಸಮುದಾಯಗಳ ಮಾಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ವತಿಯಿಂದ ಇದೇ ಆಗಸ್ಟ್‌ 27ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಫ್ರೀಡಂ ಪಾರ್ಕ್‌ನಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಕನಕ ಭವನದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಲಾಗಿದೆ.

  • ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟು

    ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟು

    ಬೆಂಗಳೂರು: ಹಿಜಬ್ ಕುರಿತಾಗಿ ನಾನು ಹೇಳಿರುವುದನ್ನು ತಿರುಚಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಬಿಜೆಪಿ ಸಾಲು, ಸಾಲು ಟ್ವೀಟ್ ಮಾಡುವ ಮೂಲಕವಾಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದೆ.

    ಟ್ವೀಟ್‍ನಲ್ಲಿ ಏನಿದೆ?: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತಿದೆ ಸಿದ್ದರಾಮಯ್ಯ ಅವರ ಧೋರಣೆ. ಈ ಹಿಂದೆ ಹಲವು ಮಠಾಧೀಶರ ವಿರುದ್ಧ ಅಗೌರವಯುತವಾಗಿ ನಡೆದುಕೊಂಡಿದ್ದರು. ಸಿದ್ದರಾಮಯ್ಯ ಅವರು ಈಗ ಸ್ವಾಮೀಜಿಗಳ ಮೌನವನ್ನೂ ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

    ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ವ್ಯಂಗ್ಯವಾಡುವ ಸಿದ್ದರಾಮಯ್ಯ ಈ ಹಿಂದೆ ವೀರಶೈವ ಲಿಂಗಾಯತ ಸ್ವಾಮೀಜಿಗಳ ಹೆಸರನ್ನು ತಮ್ಮಮತ ರಾಜಕಾರಣಕ್ಕೆ ಬಳಸಿಕೊಳ್ಳುವ ವಿಫಲ ಯತ್ನ ನಡೆಸಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಸ್ವಾಮೀಜಿಗಳೇ ಮನವಿ ನೀಡಿದ್ದರು ಎಂಬ ಸುಳ್ಳು ಹೇಳಿಕೆಯನ್ನು ರಾಜ್ಯದ ಜನ ಮರೆತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ

    ಬಿಎಸ್‍ವೈ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಠಮಂದಿರಗಳಿಗೆ ಉದಾರ ನೆರವು ನೀಡಿದ್ದರು. ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂದು ವಾದಿಸುವ ಸಿದ್ದರಾಮಯ್ಯನವರಿಗೆ ಹಿಂದುಗಳನ್ನು ವಿರೋಧಿಸಲು ಯಾವ ಕಾನೂನು ಅಡ್ಡಿ ಬರುವುದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಯವರೂ ತಲೆಯ ಮೇಲೆ ಬಟ್ಟೆ ಹಾಕ್ತಾರೆ ಅದನ್ನೇಕೆ ಪ್ರಶ್ನಿಸುತ್ತೀರಾ?: ಹಿಜಬ್ ಬೆಂಬಲಿಸಿದ ಸಿದ್ದು

    ಹೈಕೋರ್ಟ್ ತೀರ್ಪಿನ ಬಳಿಕ ಹಿಜಬ್ ವಿವಾದ ತಣ್ಣಗಾಗಿತ್ತು. ಆದರೆ ಹಿಜಬ್ ಧರಿಸಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಈಗ ಏಕಪಾತ್ರಾಭಿನಯ ಆರಂಭಿಸಿದ್ದಾರೆ. ಕೋಮು ಸೌಹಾರ್ದ ಎಂಬುದು ಈ ದೇಶದಲ್ಲಿ ಕನಸಾಗಿ ಉಳಿದಿರುವುದಕ್ಕೆ ಸಿದ್ದರಾಮಯ್ಯ ಅವರಂಥಹ ಅವಕಾಶವಾದಿ ರಾಜಕಾರಣಿಗಳೇ ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂಬರುವ ಚುನಾವಣೆಯೇ ನನ್ನ ಕೊನೆಯ ಎಲೆಕ್ಷನ್: ಸಿದ್ದರಾಮಯ್ಯ

  • ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ನಡುವೆ ಒಡಕು!

    ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ನಡುವೆ ಒಡಕು!

    ಬೆಂಗಳೂರು: ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಲ್ಲಿ ಮತ್ತೆ ಒಡಕು ಕಾಣಿಸಿಕೊಂಡಿದೆ. ಈಗಾಗಲೇ ಸಮುದಾಯದ ಎರಡು ಗುರುಪೀಠಗಳು ಇದ್ದರೂ, ಈಗ ಮೂರನೇ ಪೀಠ ರಚನೆಗೆ ಸಮುದಾಯದ ಇತರೆ ಸ್ವಾಮೀಜಿಗಳ ಬಣ ಕೈಹಾಕಿದೆ.

    ಮುಂದಿನ ದಿನಗಳಲ್ಲಿ ಮೂರನೇ ಪೀಠ ರಚನೆ ಆಗಬಹುದು ಎಂದು ಬಬಲೇಶ್ವರ ಬೃಹನ್ಮಠ ಮತ್ತು ಮನಗೊಳಿ ಹಿರೇಮಠದ ಸ್ವಾಮೀಜಿಗಳು ಸುಳಿವು ನೀಡಿದ್ದಾರೆ. ಸದ್ಯ ಇರುವ ಎರಡು ಪೀಠಗಳನ್ನು ದೂರವಿಟ್ಟು ಮೀಸಲಾತಿಗಾಗಿ ಇತರೆ ಪಂಚಮಸಾಲಿ ಸ್ವಾಮೀಜಿಗಳು ಸಿಎಂ ಬಳಿಗೆ ಹೋಗಲು ತೀರ್ಮಾನಿಸಿದ್ದಾರೆ. ಆದರೆ ಈ ಬಗ್ಗೆ ತಮಗೇನು ಗೊತ್ತಿಲ್ಲ.ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಈ ಸಮುದಾಯದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಲ್ಲಾ ಕಡೆ ಆಗುತ್ತಿದೆ. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಮೀಸಲಾತಿ ಹೋರಾಟವನ್ನು ಯಾರು ಎಷ್ಟೇ ಒಡೆಯಲು ಪ್ರಯತ್ನ ಮಾಡಿದರೂ, ವಿರೋಧಿಗಳು ಸಹ ನಮ್ಮವರೇ ಎಂದು ಭಾವಿಸಿ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ

  • ಸ್ವಾಮೀಜಿಗಳು ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು: ಈಶ್ವರಪ್ಪ

    ಸ್ವಾಮೀಜಿಗಳು ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು: ಈಶ್ವರಪ್ಪ

    ವಿಜಯಪುರ: ಮಠಾಧೀಶರು ಅವರ ಶೀಷ್ಯಂದಿರ ಬಗ್ಗೆ ಪ್ರೀತಿಯಿಂದ ಅಭಿಪ್ರಾಯ ಹೇಳೋದು ತಪ್ಪಲ್ಲ. ಆದರೆ ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಾ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡ್ಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಬಿಜೆಪಿ ಸರ್ವನಾಶ ಆಗುತ್ತೆ ಎಂದು ಹೇಳಿದರು. ಕೆಲ ಮಠಾಧಿಪತಿಗಳು ಇದನ್ನು ಒಪ್ಪಿಲ್ಲ. ಆ ಸಭೆ ಮುಗಿಯುತ್ತಿದ್ದಂತೆ ಶ್ರೀ ದಿಂಗಾಲೇಶ್ವರ ಸ್ವಾಮಿಜಿ ನಮ್ಮ ಮನೆಗೆ ಬಂದಿದ್ದರು. ಇದು ಯಾವ ಸಿಸ್ಟ್‍ಂ ಎಂದು ಅವರನ್ನು ಕೇಳಿದೆ. ನೀವು ಯಾವುದೋ ಒಬ್ಬ ವ್ಯಕ್ತಿ ಮೇಲೆ ಪ್ರೀತಿ ಇಟ್ಟುಕೊಂಡು. ಆ ವ್ಯಕ್ತಿಯನ್ನು ಇಳಿಸಿದರೆ ಪಕ್ಷ ಸರ್ವನಾಶ ಆಗುತ್ತೆ ಎಂದು ನಿಮ್ಮ ಬಾಯಲ್ಲಿ ಬಂದರೆ, ಯಾರಿಗೆ ನಾವು ಗೌರವ ಕೊಡೋಣ ಎಂದು ಕೇಳಿದೆ ಎಂದರು.

    ಭಾರತೀಯ ಸಂಸ್ಕ್ರತಿಯನ್ನು ಉಳಿಸುತ್ತಿರುವ ಪಕ್ಷ ಬಿಜೆಪಿ ಒಂದೇ. ಪಕ್ಷಕ್ಕೆ ಶಾಪ ಹಾಕುವ ನಿಟ್ಟಿನಲ್ಲಿ ದಯವಿಟ್ಟು ಮಾತನಾಡಬೇಡಿ ಎಂದು ಕಾಲಿಗೆ ಬಿದ್ದು ಪ್ರರ್ಥನೆ ಮಡ್ತೆನೆ. ಯಾವ ಸ್ವಾಮಿಗಳೂ ಯಾವುದೇ ಪಾಠ ಕಲಿಸಲು ಆಗುವುದಿಲ್ಲ, ಬಿಜೆಪಿ ಸುಸಂಘಟಿತವಾಗಿದೆ. ಪ್ರೀತಿಯಿಂದ ನೀವು ಏನು ಬೇಕಾದರೂ ಹೇಳಿ. ನಿಮ್ಮ ಬೆದರಿಕೆಗಳಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಯತ್ನಾಳ್‍ಗೆ ಕಿವಿಮಾತು:
    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಾನೊಬ್ಬ ಸ್ನೇಹಿತನಾಗಿ ಬುದ್ಧಿ ಹೇಳುತ್ತೇನೆ. ಬೇರೆ ಜಿಲ್ಲೆಯವರಿಗೆ ಸ್ವಲ್ಪ ಬುದ್ಧಿ ಇದೆ. ಯತ್ನಾಳ್‍ಗೆ ಬುದ್ಧಿ ಇಲ್ಲ ಎಂದು ನಾನು ಹೇಳಲ್ಲ. ಆದರೆ ಬಹಿರಂಗವಾಗಿ ಹೇಳಿಕೆ ಕೊಟ್ಟು ಅವರೇ ಹಾಳಾಗ್ತಾರೆ. ಬಿಜೆಪಿಯ ಹಿರಿಯ ನಾಯಕರು ಬರುತ್ತಾರೆ. ನಿಮ್ಮದೇನಾದರೂ ಇದ್ದರೆ ಅಲ್ಲಿ ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಳ್ಳಿ. ಬಹಿರಂಗವಾಗಿ ಹೇಳಿಕೆ ಕೊಟ್ಟು ದೊಡ್ಡ ಮನುಷ್ಯನಾಗಲು ಹೊರಟರೆ ಒಳ್ಳೆಯದಲ್ಲ ಎಂದು ಈ ಹಿಂದೆಯೇ ಅವರಿಗೆ ಹೇಳಿದ್ದೆ ಎಂದಿದ್ದಾರೆ.

    ಅವರು ನನ್ನ ಆತ್ಮೀಯ ಸ್ನೇಹಿತ, ಹಿಂದುತ್ವವಾದಿ, ನನಗೆ ತುಂಬಾ ಖುಷಿ ಅವರು ಹಿಂದುತ್ವದ ಪರ ಮಾತನಾಡುತ್ತಾರೆ. ಆದರೆ ಬಹಿರಂಗವಾಗಿ ಹೇಳಿಕೆ ಕೊಟ್ಟರೆ ಹೇಗೆ? ಸದ್ಯ ಎಲ್ಲ ಸಮಸ್ಯೆಗಳು ಬಗಿಹರಿದಿವೆ. ಇವರು ಹೇಳಿಕೆ ಕೊಡುವುದರಿಂದ ಮತ್ತೆ ಗೊಂದಲ ಆಗುತ್ತದೆ ಎಂದು ಅನಿಸುತ್ತಿಲ್ಲ. ಅವರ ಜೊತೆ ನಾನು ಮಾತನಾಡುತ್ತೇನೆ ಎಂದರು.

    ರಾಯಣ್ಣ ಬ್ರಿಗೇಡ್‍ನ್ನು ನಿಲ್ಲಿಸಬೇಕು ಎಂದು ಅಮಿತ್ ಶಾ ಅವರು ದೆಹಲಿಗೆ ಕರೆದು ಹೇಳಿದರು. ಎಲ್ಲರೂ ಸೇರಿ ಕ್ಲೋಸ್ ಅಂದ್ರು, ಅವತ್ತೆ ಮುಗಿಸಾಯ್ತು, ನನ್ನ ಜೀವನದಲ್ಲಿ ಮತ್ತೆ ಆ ಕಡೆ ತಿರುಗಿ ನೋಡಲ್ಲ ಎಂದರು.

    ಸಿದ್ದರಾಮಯ್ಯನವರ ಅಪ್ಪ ಯಾರು?
    ಕಾಂಗ್ರೆಸ್ ನ ಮೂಲ ಕಾರ್ಯಕರ್ತರಿಂದ ಪಕ್ಷದಲ್ಲಿ ಗೊಂದಲ ಇಲ್ಲ. ಹೊರಗಿನಿಂದ ಬಂದವರು ಗೊಂದಲ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಈ ಮೂಲಕ ನೇರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಹೌದು ನಾನು ಹೊರಗಿನಿಂದ ಬಂದೆ, ಕಾಂಗ್ರೆಸ್ ಸೊಸೆಯಾಗಿ ನಾನು ಬೀಗ ಹಿಡಿದುಕೊಂಡೆ ಎಂದು ಹೇಳಿದರು. ಚಾಮುಂಡೇಶ್ವರಿಯಲ್ಲಿ ಸೋತಾಗ ಕಾಂಗ್ರೆಸ್‍ನ ಮಗ ನಾನು ಎಂದು ಹೇಳಿದ್ದರು. ಬಾದಾಮಿಗೆ ಬರುತ್ತಿದ್ದಂತೆ ಮತ್ತೆ ಇಲ್ಲಿಯ ಮಗ ಎಂದರು. ಚಾಮರಾಜಪೇಟೆಗೆ ಹೋದಾಗ ಮತ್ತೆ ಅಲ್ಲಿನ ಮಗ ಎಂದರು. ಯಾವ ಪಕ್ಷದಲ್ಲಿದ್ದೀರಿ ನೀವು ಎಂದು ಈಶ್ವರಪ್ಪ ಪ್ರಶ್ನಿಸಿದರು.

    ಮಗ ಅಂತಾರೆ ಒಪ್ಪಿಕೊಳ್ಳೋಣ, ಈಗ ಕಾಂಗ್ರೆಸ್ ನಲ್ಲಿದ್ದೀರಿ, ಹಿಂದೆ ಜೆಡಿಎಸ್, ಎಬಿಪಿಜೆಡಿ ನಲ್ಲಿದ್ದಿರಿ. ಮೂರು ಪಾರ್ಟಿಯ ಮಗನಾ ನೀವು? ಹಾಗಾದ್ರೆ ನಿಮ್ಮ ಅಪ್ಪ ಯಾರು ಎಂದು ಸಿದ್ದರಾಮಯ್ಯನವರ ವಿರುದ್ಧ ವ್ಯಂಗ್ಯವಾಡಿದರು.

  • ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ಕೊಡುವ ಹಕ್ಕಿದೆ: ಸಚಿವ ಕೋಟ

    ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ಕೊಡುವ ಹಕ್ಕಿದೆ: ಸಚಿವ ಕೋಟ

    ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ, ಹೇಳಿಕೆ ಕೊಡುವಂತಹ ಹಕ್ಕು, ಅವಕಾಶಗಳಿವೆ. ಅದರಂತೆ ಸ್ವಾಮೀಜಿಗಳು, ಹಿರಿಯರು ತಮ್ಮ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೆ, ಅದನ್ನು ಗೌರವಿಸಬೇಕಾದ್ದು ಅನಿವಾರ್ಯ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀನಿವಾಸ ಪೂಜಾರಿ ಅವರು, ಭಾರತೀಯ ಜನತಾ ಪಾರ್ಟಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ನಮ್ಮನ್ನು ಬೆಳೆಸಿದ ಪಾರ್ಟಿ, ಪಾರ್ಟಿಯನ್ನು ಕಟ್ಟಿ ಬೆಳೆಸಿದ ಹಿರಿಯರು ನಮಗೆ ಅವರ ಅನುಭವದ ಮಾರ್ಗದರ್ಶನ ಮಾಡಿ, ನಮ್ಮ ಕೆಲಸಗಳಿಗೆ ಪ್ರೇರಣೆ ನೀಡಿ, ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಬಹುದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಂತ ಹಂತವಾಗಿ ತುಳು, ಬ್ಯಾರಿ, ಕೊಂಕಣಿ ಭವನಗಳ ನಿರ್ಮಾಣ: ಕೋಟ

    ನಾನು ಮತ್ತು ನನ್ನಂಥವರು, ನಮ್ಮ ಹಿರಿಯರು, ನಮ್ಮ ಹೈಕಮಾಂಡ್, ನಮ್ಮ ಪಕ್ಷ, ನಮ್ಮ ರಾಜ್ಯಾಧ್ಯಕ್ಷರು, ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಮಾತ್ರ ನಾವು ಬದ್ಧ. ಯಾರ್ಯಾರು ಏನೇನು ಹೇಳಿಕೆ ನೀಡುತ್ತಾರೋ ಅದನ್ನು ಗೌರವಿಸೋಣ. ಅವರಿಗೂ ಕೂಡ ಹೇಳಿಕೆ ನೀಡುವ ಹಕ್ಕಿದೆ ಎಂದು ಸಮರ್ಥಿಸಿಕೊಂಡರು.

  • ಅಯೋಧ್ಯೆ ಭೂಮಿ ಪೂಜೆಗೆ ರಾಜ್ಯದ 8 ಮಂದಿಗೆ ಆಹ್ವಾನ

    ಅಯೋಧ್ಯೆ ಭೂಮಿ ಪೂಜೆಗೆ ರಾಜ್ಯದ 8 ಮಂದಿಗೆ ಆಹ್ವಾನ

    ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರ್ಜರಿಯಾಗಿ ನಡೆಯುತ್ತಿವೆ. ಆಯೋಧ್ಯೆಯ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕರ್ನಾಟಕದ ಎಂಟು ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ರಾಮ ಮಂದಿರ ಶಂಕುಸ್ಥಾಪನೆ- ಭರ್ಜರಿಯಾಗಿ ಅಲಂಕೃತಗೊಂಡಿದೆ ಅಯೋಧ್ಯೆ

    ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಕರ್ನಾಟಕಕ್ಕೆ ಎಂಟು ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಈ ಶುಭ ಸಂದರ್ಭಕ್ಕೆ ಅಯೋಧ್ಯೆ ಸಿಂಗಾರಗೊಂಡಿದೆ. ಕೊರೊನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಮೋದಿ ಬಗ್ಗೆ ಆತಂಕವಾಗ್ತಿದೆ- ಭೂಮಿ ಪೂಜೆಯಿಂದ ದೂರ ಉಳಿದ ಉಮಾಭಾರತಿ

    ವಿಶೇಷ ಆಹ್ವಾನಿತರು:
    1. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
    2. ಇಸ್ಕಾನ್ ನ ಮಧುಪಂಡಿತ ದಾಸ್
    3. ಶೃಂಗೇರಿ ಮಠದ ವಿಧುಶೇಖರ ಭಾರತೀ ಸ್ವಾಮೀಜಿ
    4. ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ
    5. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
    6. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ
    7. ಸುತ್ತೂರು ಮಠದ ಶ್ರೀಗಳು
    8. ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ

    ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಯ ಐತಿಹಾಸಿಕ ಕ್ಷಣಕ್ಕಾಗಿ ರಾಮ ಮಂದಿರ ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಪುರುಷೋತ್ತಮ ರಾಮನ ಮಂದಿರಕ್ಕಾಗಿ ಅಯೋಧ್ಯೆ ಭರ್ಜರಿಯಾಗಿ ಅಲಂಕೃತಗೊಂಡಿದೆ. ಭಾರೀ ಭದ್ರತೆಯನ್ನು ಸಹ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

  • ಗ್ರಹಣ ಮೋಕ್ಷ- ಮಧ್ವ ಸರೋವರದಲ್ಲಿ ಸ್ವಾಮೀಜಿಗಳು, ಭಕ್ತರು ತೀರ್ಥಸ್ನಾನ

    ಗ್ರಹಣ ಮೋಕ್ಷ- ಮಧ್ವ ಸರೋವರದಲ್ಲಿ ಸ್ವಾಮೀಜಿಗಳು, ಭಕ್ತರು ತೀರ್ಥಸ್ನಾನ

    ಉಡುಪಿ: ಸೂರ್ಯಗ್ರಹಣ ನಿವಾರಣೆ ಆಗುತ್ತಿದ್ದಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರು ಮತ್ತು ಸ್ವಾಮೀಜಿಗಳು ಪುಣ್ಯ ಸ್ನಾನ ಮಾಡಿದ್ದಾರೆ. ಮಧ್ವ ಸರೋವರದಲ್ಲಿ ಹತ್ತಾರು ಭಕ್ತರು ಮಿಂದು ಪುನೀತರಾದರು.

    ಬೆಳಗ್ಗಿನಿಂದ ಉಡುಪಿ ಕೃಷ್ಣ ಮಠದ ಒಳಗೆ ಆರು ಮಂದಿ ಮಠಾಧೀಶರು, ಭಕ್ತರು ಜಪ ತಪದಲ್ಲಿ ತೊಡಗಿದ್ದರು. 1.30ಕ್ಕೆ ಗ್ರಹಣ ಮೋಕ್ಷವಾಗುತ್ತಿದ್ದಂತೆ ಸ್ವಾಮೀಜಿಗಳು ಮಧ್ವ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿದರು. ಸ್ವಾಮೀಜಿಗಳ ಜೊತೆ ಹತ್ತಾರು ಭಕ್ತರು ಕೂಡ ಮಧ್ವ ಸರೋವರದಲ್ಲಿ ಮಿಂದು ಪುನೀತರಾದರು.

    ಪರ್ಯಾಯ ಅದಮಾರು ಈಶ ಪ್ರಿಯತೀರ್ಥ ಶ್ರೀಪಾದರು ಗ್ರಹಣ ಮುಗಿದ ನಂತರ ಶ್ರೀಕೃಷ್ಣನಿಗೆ ನೈರ್ಮಲ್ಯ ವಿಸರ್ಜನೆ ಪೂಜೆಯನ್ನು ನಡೆಸಿದರು. ಶ್ರೀಕೃಷ್ಣನಿಗೆ ಎಂದಿನಂತೆ ಮಧ್ಯಾಹ್ನ 2 ಗಂಟೆಗೆ ಅಲಂಕಾರವನ್ನು ಸ್ವಾಮೀಜಿ ಆರಂಭಿಸಿದರು.

    ಸಂಜೆ 5 ಗಂಟೆ ವರೆಗೂ ಶ್ರೀಕೃಷ್ಣನಿಗೆ ಮಹಾಪೂಜೆಯನ್ನು ನೆರವೇರಿಸಲಾಗುವುದು ಎಂದು ಮಠ ಹೇಳಿದೆ. ಪಂಚಾಮೃತ, ತೀರ್ಥ, ಪೂಜೆ ಸೇರಿದಂತೆ ಮಹಾ ಪೂಜೆಗಳು ಅಲಂಕಾರಗಳು ಶ್ರೀಕೃಷ್ಣನಿಗೆ ನಡೆದಿದೆ.

    ಕೊರೊನಾ ಲಾಕ್‍ಡೌನ್ ನಂತರ ಉಡುಪಿ ಶ್ರೀಕೃಷ್ಣ ಮಠವನ್ನು ಭಕ್ತರಿಗೋಸ್ಕರ ಇನ್ನೂ ತೆರೆದಿಲ್ಲ. ಹಾಗಾಗಿ ರಥ ಬೀದಿಯಲ್ಲಿರುವ ಕನಕನ ಕಿಂಡಿಯ ಮೂಲಕವೇ ಶ್ರೀಕೃಷ್ಣನ ದರ್ಶನವನ್ನು ಭಕ್ತರು ಮಾಡಿದರು. ಪೂರ್ತಿ ಉಪವಾಸವಿದ್ದ ಅಷ್ಟ ಮಠದ ಸ್ವಾಮೀಜಿಗಳು ಮತ್ತು ಭಕ್ತರು ಸೂರ್ಯಗ್ರಹಣ ನಿವಾರಣೆಯಾದ ನಂತರ ಪ್ರಸಾದ ಸ್ವೀಕರಿಸಿದರು.

  • ಕಂಕಣ ಸೂರ್ಯಗ್ರಹಣ- ಉಡುಪಿ ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಜಪ ತಪ ಧ್ಯಾನ

    ಕಂಕಣ ಸೂರ್ಯಗ್ರಹಣ- ಉಡುಪಿ ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಜಪ ತಪ ಧ್ಯಾನ

    ಉಡುಪಿ: ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದ್ದಂತೆ ಉಡುಪಿಯಲ್ಲಿ ಕೃಷ್ಣ ಮಠದ ಸ್ವಾಮೀಜಿಗಳು ಜಪ ಧ್ಯಾನದಲ್ಲಿ ತೊಡಗಿಕೊಂಡರು. ಕೊರೊನಾ ಲಾಕ್‍ಡೌನ್ ಸಡಿಲಿಕೆ ಆದರೂ ಉಡುಪಿ ಕೃಷ್ಣ ಮಠ ಇನ್ನು ತೆರೆದಿಲ್ಲ. ಇಂದು ಕೂಡ ಶ್ರೀಕೃಷ್ಣ ಮಠ ಮುಚ್ಚಿತ್ತು.

    ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಆರು ಮಂದಿ ಮಠಾಧೀಶರುಗಳು ಕೃಷ್ಣ ಮಠದ ಗರ್ಭಗುಡಿಯ ಹೊರಭಾಗದಲ್ಲಿ ಜಪ ತಪ ಧ್ಯಾನದಲ್ಲಿ ತಲ್ಲೀನರಾದರು. ಸೂರ್ಯ ಗ್ರಹಣ ಆರಂಭವಾಗುತ್ತಿದ್ದಂತೆ ಎಲ್ಲ ಸ್ವಾಮೀಜಿಗಳು ಕೃಷ್ಣಮಠಕ್ಕೆ ಆಗಮಿಸಿ ಧ್ಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

    ಪ್ರತಿದಿನ ಉಡುಪಿ ಕೃಷ್ಣಮಠದಲ್ಲಿ 11:30ರ ಸುಮಾರಿಗೆ ಮಹಾಪೂಜೆ ಶ್ರೀ ಕೃಷ್ಣನಿಗೆ ಸಲ್ಲುತ್ತದೆ. ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಪರ್ಯಾಯ ಅದಮಾರು ಸ್ವಾಮೀಜಿಯವರು ಶನಿವಾರ ಮಾಡಿದ ಶ್ರೀಕೃಷ್ಣನ ಅಲಂಕಾರವನ್ನು ತೆಗೆದು ಕೇವಲ ತುಳಸಿಯ ಹಾರವನ್ನು ಕೃಷ್ಣ ಪರಮಾತ್ಮನ ಬಿಂಬಕ್ಕೆ ಅರ್ಪಿಸಿದರು. ಸೂರ್ಯ ಗ್ರಹಣ ಮೋಕ್ಷವಾದ ಮೇಲೆ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಿ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಗ್ರಹಣ ಮುಗಿಯುವ ತನಕ ಮಠದ ಸ್ವಾಮೀಜಿಗಳು ಉಪವಾಸ ಇರುತ್ತಾರೆ.

    ಪಲಿಮಾರು ಮಠದ ಹಿರಿಯ ಮತ್ತು ಕಿರಿಯ ಶ್ರೀಗಳು ಸೋದೆ ಮಠಾಧೀಶರು ಕೃಷ್ಣಾಪುರ ಮತ್ತು ಕಾಣಿಯೂರು ಸ್ವಾಮೀಜಿಯವರು ಧ್ಯಾನದಲ್ಲಿ ಪಾಲ್ಗೊಂಡರು. ಅದಮಾರು ಹಿರಿಯ ಶ್ರೀಗಳು ಸೇರಿದಂತೆ ಇತರೆ ಮಠಾಧೀಶರು ತಮ್ಮ ತಮ್ಮ ಮಠಗಳಲ್ಲಿ ಜಪ ನಡೆಸಿದರು. ಕೃಷ್ಣ ಮಠದ ಸಿಬ್ಬಂದಿ ಮತ್ತು ಅರ್ಚಕರು ಮಠದ ಒಳಗೆ ಇದ್ದು ಜಪ ತಪದಲ್ಲಿ ತಲ್ಲೀನರಾದರು.