Tag: ಸ್ವಾಮಿ ಚಿನ್ಮಯಾನಂದ್

  • ಚಿನ್ಮಯಾನಂದ ಕೇಸ್: ಕಾಣೆಯಾಗಿದ್ದ ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆ

    ಚಿನ್ಮಯಾನಂದ ಕೇಸ್: ಕಾಣೆಯಾಗಿದ್ದ ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆ

    ಲಕ್ನೋ: ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಾಪತ್ತೆಯಾದ ವಿದ್ಯಾರ್ಥಿಯನ್ನು ರಾಜಸ್ಥಾನದಲ್ಲಿ ಪತ್ತೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಇಂದು ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಯುಪಿ ಪೊಲೀಸರು, ಶಹಜಹಾನ್ಪುರ್ ಪ್ರಕರಣಕ್ಕೆ ಸಂಬಂಧಿಸಿದ ವಿದ್ಯಾರ್ಥಿಯನ್ನು ತನ್ನ ಸ್ನೇಹಿತನೊಂದಿಗೆ ರಾಜಸ್ಥಾನದ ಶಹಜಹಾನ್ಪುರ್ ನಲ್ಲಿ ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾತನಾಡಿರುವ ಯುಪಿ ಪೊಲೀಸ್ ಮುಖ್ಯಸ್ಥರು ನಾವು ಚಿನ್ಮಯಾನಂದ್ ಆಶ್ರಮದ ಮೇಲೆ ದಾಳಿ ನಡೆಸಿದ್ದೇವೆ. ನಮ್ಮ ಪೊಲೀಸರು ಅವರ ಆಶ್ರಮದಲ್ಲಿ ಹಲವಾರು ಜನರೊಂದಿಗೆ ಮಾತನಾಡಿ ತನಿಖೆ ಮಾಡಿದ್ದಾರೆ. ನಾವು ಆಕೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳವ ಕಡೆ ಮೊದಲ ಗಮನ ನೀಡುತ್ತೇವೆ ಎಂದು ಹೇಳಿದ್ದಾರೆ.

    ವಿದ್ಯಾರ್ಥಿಯ ಬಗ್ಗೆ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶದ ಸರ್ಕಾರ, ಪೊಲೀಸ್ ತಂಡದೊಂದಿಗೆ ವಿದ್ಯಾರ್ಥಿಯನ್ನು ಶಹಜಹಾನ್ಪುರಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಮತ್ತು ಈಗ ಫತೇಪುರ್ ಸಿಕ್ರಿಯಲ್ಲಿದ್ದಾಳೆ. ನಾವು ಅಧಿಕಾರಿಗಳಿಗೆ ಆಕೆಗೆ ಭದ್ರತೆ ನೀಡುವಂತೆ ಹೇಳಿದ್ದೇವೆ. ಸ್ನೇಹಿತನ ಜೊತೆ ವಿದ್ಯಾರ್ಥಿನಿಯನ್ನು ಇಂದು ದೆಹಲಿಗೆ ಕರೆದುಕೊಂಡು ಬರಲಾಗುತ್ತದೆ ಎಂದು ತಿಳಿಸಿದೆ.

    ನಡೆದಿದ್ದೇನು?
    ಮಾಜಿ ಕೇಂದ್ರ ಸಚಿವರೊಬ್ಬರು ಕಿರುಕುಳ ನೀಡುತ್ತಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ವಿದ್ಯಾರ್ಥಿನಿ ಒಂದು ದಿನದ ನಂತರ, ಆಗಸ್ಟ್ 24 ರಿಂದ ಚಿನ್ಮಯಾನಂದ್ ಅವರ ಟ್ರಸ್ಟ್ ನಡೆಸುತ್ತಿರುವ ಕಾಲೇಜಿನಿಂದ ಕಾಣೆಯಾಗಿದ್ದಳು. ಆದರೆ ವಿಡಿಯೋದಲ್ಲಿ ಎಲ್ಲೂ ಸ್ವಾಮಿ ಚಿನ್ಮಯಾನಂದ್ ಅವರ ಹೆಸರನ್ನು ಹೇಳದ ವಿದ್ಯಾರ್ಥಿ ಕೇವಲ ಸಂತ ಸಮುದಾಯದ ಹಿರಿಯ ನಾಯಕ ಎಂದು ಮಾತ್ರ ಹೇಳಿದ್ದಳು.

    ಆದರೆ ವಿದ್ಯಾರ್ಥಿ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಂತರ ಆಕೆಯ ವಿಡಿಯೋ ಆಧರಿಸಿ, ಆಕೆಯ ತಂದೆ ಅವಳು ಅಧ್ಯಯನ ಮಾಡುತ್ತಿದ್ದ ಕಾಲೇಜಿನ ಮುಖ್ಯಸ್ಥರಾಗಿರುವ ಮಾಜಿ ಕೇಂದ್ರ ಸಚಿವರಾದ ಚಿನ್ಮಯಾನಂದ್ ಅವರ ವಿರುದ್ಧ ಆಗಸ್ಟ್ 27 ರಂದು ದೂರು ನೀಡಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತೆ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಸ್ವೀಕಾರ ಮಾಡಿದ ಸುಪ್ರೀಂ ಬಾಲಕಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಯುಪಿ ಸರ್ಕಾರಕ್ಕೆ ಆದೇಶ ನೀಡಿತ್ತು.