Tag: ಸ್ವಾತಂತ್ರ್ಯ

  • ಮಾಜಿ ಸಚಿವ ಎಂ.ವಿ. ಕೃಷ್ಣಪ್ಪ ಪತ್ನಿ ಪ್ರಮೀಳಮ್ಮ ನಿಧನ

    ಮಾಜಿ ಸಚಿವ ಎಂ.ವಿ. ಕೃಷ್ಣಪ್ಪ ಪತ್ನಿ ಪ್ರಮೀಳಮ್ಮ ನಿಧನ

    ಕೋಲಾರ: ಕೇಂದ್ರ ಮಾಜಿ ಸಚಿವ ಹಾಗೂ ಕರ್ನಾಟಕ ಹೈನೋದ್ಯಮದ ಪಿತಾಮಹ ಎಂದೇ ಖ್ಯಾತಿ ಪಡೆದ ದಿವಂಗತ ಎಂ.ವಿ. ಕೃಷ್ಣಪ್ಪ ಅವರ ಪತ್ನಿ ಪ್ರಮೀಳಮ್ಮ ಕೃಷ್ಣಪ್ಪ (95) ನಿಧನರಾಗಿದ್ದಾರೆ.

    ಅಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಇಂದು ಸಂಜೆ 4 ಗಂಟೆಗೆ ಕೆಜಿಎಫ್ ತಾಲೂಕಿನ ಬಂಗಾರತಿರುಪತಿ (ಗುಟ್ಟಹಳ್ಳಿ) ಬಳಿಯ ಸ್ವಂತ ತೋಟದ ಭೂಮಿಯಲ್ಲಿರುವ ಪತಿ, ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಸಮಾಧಿ ಬಳಿಯಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರರಾದ ಅಶೋಕ್ ಕೃಷ್ಣಪ್ಪ ಮತ್ತು ಜಯಸಿಂಹ ಕೃಷ್ಣಪ್ಪ ಹೇಳಿದ್ದಾರೆ. ಇದನ್ನೂ ಓದಿ: ಬೇಟೆಯಾಡಲು ಹೋದವನೇ ಬೇಟೆಯಾದ ?

    ಕೃಷ್ಣಪ್ಪ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಕೋಲಾರ ಜಿಲ್ಲೆಗೆ ಅಪಾರ ಕೊಡುಗೆಗಳನ್ನು ನೀಡಿದ್ದರು. ಅವರ ಸಾಧನೆಯಲ್ಲಿ ಮೃತ ಪತ್ನಿ ಪ್ರಮೀಳಮ್ಮರವರ ಪಾತ್ರವೂ ಇತ್ತು. ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಕೃಷ್ಣಪ್ಪ ಅವರ ಜೊತೆ ಭಾಗಿಯಾಗಿದ್ದ ಪ್ರಮೀಳಮ್ಮ ಹಲವು ಬಾರಿ ಜೈಲಿಗೂ ಹೋಗಿದ್ದರು.

  • ವಿದುರಾಶ್ವತ್ಥದಲ್ಲಿ ಮೊಳಗಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಹಳೆ

    ವಿದುರಾಶ್ವತ್ಥದಲ್ಲಿ ಮೊಳಗಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಹಳೆ

    ಚಿಕ್ಕಬಳ್ಳಾಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು 2022 ಆಗಸ್ಟ್ 15ಕ್ಕೆ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ, ಸ್ವಾತಂತ್ರ್ಯ ಸಂಗ್ರಾಮದ ಸ್ಥಳಗಳಲ್ಲಿ, 75 ವಾರಗಳ ವರೆಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಪಾಲ ವಿ.ಆರ್.ವಾಲಾ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಇಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ರಾಜ್ಯದಲ್ಲಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥಕ್ಕೆ ಸಿಎಂ ಹಾಗೂ ರಾಜ್ಯಪಾಲರು ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯ ಹೋರಾಟಗಾರರು, ದೇಶ ಭಕ್ತಿಯ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ 75 ಸ್ವಾತಂತ್ರ್ಯ ಸಂಗ್ರಾಮ ಸ್ಥಳಗಳಲ್ಲಿ ಏಕಕಾಲಕ್ಕೆ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲು ಚಾಲನೆ ನೀಡಿದೆ.

    ವಿದುರಾಶ್ವತ್ಥಕ್ಕೆ ಆಗಮಿಸಿ ಹುತಾತ್ಮ ಸ್ವಾತಂತ್ರ್ಯ ಸೇನಾನಿಗಳ ಸ್ಮಾರಕ ಸ್ಥೂಪಗಳಿಗೆ ಪುಷ್ಪನಮನ ಸಲ್ಲಿಸಿ, ಗೌರವ ವಂದನೆ ಸಲ್ಲಿಸಿದರು. ಇದೇ ವೇಳೆ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ಮೋದಿಯವರ ಆಶಯದಂತೆ ಶಾಲಾಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

    ರಾಜ್ಯಪಾಲ ವಿ.ಆರ್.ವಾಲಾ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ, ಶ್ರಮದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಈಗ ನಮ್ಮ ಸೈನಿಕರು ಹಿಮ ಪ್ರದೇಶದಲ್ಲಿ ದೇಶದ ರಕ್ಷಣೆ ಮಾಡುತ್ತಿದ್ದಾರೆ. ನಾವು ಎಸಿ ರೂಮ್ ಗಳಲ್ಲಿ ಹಾಯಾಗಿ ಕೆಲಸ ಮಾಡುತ್ತಿದ್ದೇವೆ. ಇಂದಿನ ಯುವ ಸಮುದಾಯಕ್ಕೆ, ಸಾಕಷ್ಟು ಅವಕಾಶಗಳಿವೆ ದೇಶ ಸೇವೆಗಾಗಿ ಜೀವನ ಮುಡುಪಾಗಿಡಬೇಕೆಂದು ಕರೆ ನೀಡಿದರು.

    ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಪಾಲರು ವಿಧುರಾಶ್ವತ್ಥಕ್ಕೆ ಆಗಮಿಸುತ್ತಿದ್ದಂತೆ ಆಶ್ವತ್ಥ ನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇಂದಿನಿಂದ ಮುಂದಿನ 75 ವಾರಗಳ ಕಾಲ ದೇಶದ ವಿವಿಧ ಸ್ಥಳಗಳಲ್ಲಿ ವಾರಕ್ಕೊಮ್ಮೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

  • ದಂಡಿಯಲ್ಲಿ ಪ್ರಧಾನಿ ಮೋದಿ, ವಿದುರಾಶ್ವತ್ಥದಲ್ಲಿ ಸಿಎಂ ಯಡಿಯೂರಪ್ಪ

    ದಂಡಿಯಲ್ಲಿ ಪ್ರಧಾನಿ ಮೋದಿ, ವಿದುರಾಶ್ವತ್ಥದಲ್ಲಿ ಸಿಎಂ ಯಡಿಯೂರಪ್ಪ

    – ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆರಂಭಕ್ಕೆ ಕ್ಷಣಗಣನೆ

    ಚಿಕ್ಕಬಳ್ಳಾಪುರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದಂಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅದೇ ರೀತಿ ರಾಜ್ಯದಲ್ಲಿ ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

    ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ನಾಳೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಎಸ್‍ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಬೆಳಗ್ಗೆ 11 ಗಂಟೆಗೆ ವಿದುರಾಶ್ವತ್ಥಕ್ಕೆ ಸಿಎಂ, ರಾಜ್ಯಪಾಲರು ಸೇರಿದಂತೆ ಸಚಿವರು ಆಗಮಿಸಲಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಸೇನಾನಿಗಳ ಸವಿನೆನಪಿನ ಸ್ಮಾರಕ ಸ್ಥೂಪಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ನಂತರ ಸ್ವಾತಂತ್ರ್ಯ ಸಂಗ್ರಾಮದ ಪೋಟೋ ಗ್ಯಾಲರಿ ವೀಕ್ಷಣೆ ಮಾಡಿಲಿದ್ದು, ಕೊನೆಗೆ ಮೆಮೋರಿಯಲ್ ಹಾಲ್ ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.

    ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದಂಡಿಯಲ್ಲಿ ಚಾಲನೆ ನೀಡಲಿರುವ ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಆಗಸ್ಟ್ 15, 2022ಕ್ಕೆ 75 ವರ್ಷಗಳಾಗಲಿವೆ. ಹೀಗಾಗಿ ನಾಳೆಯಿಂದ ಆಗಸ್ಟ್ 15, 2022 ರವರೆಗೆ 75 ವಾರಗಳ ಕಾಲ ದೇಶದ ವಿವಿಧ ಸ್ವಾತಂತ್ರ್ಯ ಸಂಗ್ರಾಮದ ಸವಿನೆನೆಪಿನ ತಾಣಗಳಲ್ಲಿ ಈ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಪ್ರತಿ ವಾರ ನಡೆಸಲಾಗುತ್ತದೆ. ನಾಳೆ ಮೊದಲ ವಾರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

  • ಕಡಿಮೆ ಕೆಲಸ ಮಾಡಿ ಹೆಚ್ಚು ಪ್ರಚಾರ ತೆಗೆದುಕೊಳ್ಳುವ ನವವಧುವಿನಂತೆ ಮೋದಿ: ಸಿಧು

    ಕಡಿಮೆ ಕೆಲಸ ಮಾಡಿ ಹೆಚ್ಚು ಪ್ರಚಾರ ತೆಗೆದುಕೊಳ್ಳುವ ನವವಧುವಿನಂತೆ ಮೋದಿ: ಸಿಧು

    ಇಂಧೋರ್: ಪ್ರಧಾನಿ ಮೋದಿ ಕಡಿಮೆ ಕೆಲಸ ಮಾಡಿ ಹೆಚ್ಚು ಕೆಲಸ ಮಾಡಿದಂತೆ ನಟಿಸುವ ವಧುವಿನಂತೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.

    ಮದುವೆಯಾಗಿ ಪತಿ ಮನೆಗೆ ಬಂದ ವಧು ಕಡಿಮೆ ರೊಟ್ಟಿ ಮಾಡಿದರೂ, ನೆರೆಹೊರೆಯವರು ಹೆಚ್ಚು ಕೆಲಸ ಮಾಡುತ್ತಿದ್ದಾಳೆ ಎಂದುಕೊಳ್ಳಲಿ ಎಂದು ಬಳೆಗಳಿಂದ ಶಬ್ಧ ಮಾಡುತ್ತಾಳೆ. ಇದೇ ರೀತಿಯಲ್ಲಿ ಮೋದಿ ಸರ್ಕಾರವು ಏನೂ ಕೆಲಸ ಮಾಡದಿದ್ದರೂ, ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ವ್ಯಂಗ್ಯ ಮಾಡಿದರು.

    ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಮೋದಿ ಫೋಟೋ ಹಾಕಿ ‘ಭಾರತದ ವಿಭಜಕದ ಮುಖ್ಯಸ್ಥ’ ಎಂದು ಬರೆದುಕೊಂಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸಿಧು, ಹೌದು ಮೋದಿ ಸುಳ್ಳು ಹೇಳುವುದರ ಮುಖ್ಯಸ್ಥ, ವಿಭಾಗ ಮಾಡುವುದರ ಮುಖ್ಯಸ್ಥ ಮತ್ತು ಅಂಬಾನಿ ಮತ್ತು ಅದಾನಿ ಸಂಸ್ಥೆಯ ಮುಖ್ಯಸ್ಥ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮೌಲಾನಾ ಅಜಾದ್ ಮತ್ತು ಮಹಾತ್ಮ ಗಾಂಧಿ ಅವರ ಪಕ್ಷ. ಕಾಂಗ್ರೆಸ್ ಪಕ್ಷ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದೆ. ಪ್ರಧಾನಿ ಮೋದಿ ಅವರು ಮುಕ್ತವಾಗಿ ಚರ್ಚೆಗೆ ಬರಲಿ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ. ಮೋದಿ ಅವರು ಜಿಎಸ್‍ಟಿ ಮತ್ತು ಕಪ್ಪು ಹಣ, ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗ ಈ ವಿಷಯಗಳ ಬಗ್ಗೆ ಅವರು ನನ್ನ ಬಳಿ ಚರ್ಚೆ ಮಾಡಲಿ. ನಾನು ಆ ಚರ್ಚೆಯಲ್ಲಿ ಸೋತರೆ ನಾನು ಶಾಶ್ವತ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

  • ಸ್ವಾತಂತ್ರ್ಯ ಬಂದು 70 ವರ್ಷವಾದ್ರೂ ಹಿಂದುಳಿದ ವರ್ಗ, ಮುಸ್ಲಿಮರು, ದಲಿತರು ಇಂದಿಗೂ ತುಳಿತಕ್ಕೊಳಗಾಗಿದ್ದಾರೆ: ಪಿಎಫ್‍ಐ

    ಸ್ವಾತಂತ್ರ್ಯ ಬಂದು 70 ವರ್ಷವಾದ್ರೂ ಹಿಂದುಳಿದ ವರ್ಗ, ಮುಸ್ಲಿಮರು, ದಲಿತರು ಇಂದಿಗೂ ತುಳಿತಕ್ಕೊಳಗಾಗಿದ್ದಾರೆ: ಪಿಎಫ್‍ಐ

    ಮಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಹಿಂದುಳಿದ ವರ್ಗದವರು, ಮುಸ್ಲಿಮರು ಮತ್ತು ದಲಿತರು ಇಂದಿಗೂ ತುಳಿತಕ್ಕೊಳಗಾಗಿದ್ದಾರೆ. ಅವರ ಏಳಿಗೆಗಾಗಿ ಮತ್ತು ಸಮಾನ ಹಕ್ಕಿಗಾಗಿ ಪಿಎಫ್‍ಐ ಹೊಸ ಚಳುವಳಿಯನ್ನೇ ರೂಪಿಸಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ.ಶರೀಫ್ ಹೇಳಿದ್ದಾರೆ.

    ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಸುಳ್ಯದಲ್ಲಿ ನಡೆದ ಯುನಿಟಿ ಮಾರ್ಚ್ ಬಳಿಕ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತ ತತ್ವಗಳ ಉಳಿವಿಗೆ ಮತ್ತು ದಮನಿತರ ಧ್ವನಿಯಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಾಚರಿಸುತ್ತಿದೆ. ಅಧಿಕಾರಶಾಹಿಗಳ ದಮನಕಾರಿ ನೀತಿ ಮತ್ತು ತಾರತಮ್ಯ ನೀತಿಯಿಂದಾಗಿ ಸಮಾಜದಲ್ಲಿ ಶೋಷಣೆಗೊಳಗಾಗಿರುವ ಜನರಲ್ಲಿ ಆತ್ಮವಿಶ್ವಾಸ ಮತ್ತು ಭದ್ರತೆಯನ್ನು ತುಂಬುವುದೇ ನಮ್ಮ ಧ್ಯೇಯ. ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಅದರ ವಿರುದ್ಧ ಜನಪರವಾದ ಹೋರಾಟ ನಡೆಸುವ ಕಾರಣ ಪಿಎಫ್‍ಐ ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಅವರು ಹೇಳಿದರು.

    ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕೇರಳ ರಾಜ್ಯ ಕಾರ್ಯದರ್ಶಿ ಶಫೀಕ್ ಅಲ್ ಖಾಸಿಮಿ ಮಾತನಾಡಿ, ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವನ್ನಾಗಿ ಭಾರತವನ್ನು ಕಟ್ಟುವುದೇ ಪಿಎಫ್‍ಐ ಉದ್ದೇಶ. ಸರ್ಕಾರಗಳ ಯಾವುದೇ ದಮನಕಾರಿ ನೀತಿ ವಿರುದ್ಧ ಎದೆಯೊಡ್ಡಿ ಹೋರಾಟ ನಡೆಸುವ ಕಾರಣ ಪಿಎಫ್‍ಐ ಅಂದ ಕೂಡಲೇ ಆಡಳಿತ ಶಾಹಿಗಳಿಗೆ ಭಯ ಉಂಟಾಗುತ್ತಿದೆ ಎಂದು ಹೇಳಿದ್ರು.

    ಪಿಎಫ್‍ಐ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮೈಸೂರು, ಅಬ್ದುಲ್ ಲತೀಫ್ ಪುತ್ತೂರು, ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ಕೋಶಾಧಿಕಾರಿ ಫಾರೂಖ್ ರಹ್ಮಾನ್ ಮೈಸೂರು, ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ನಸೀಮಾ ಫಾತಿಮಾ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ದಲಿತ ಮುಖಂಡ ಆನಂದ ಮಿತ್ತಬೈಲು, ಸುಳ್ಯ ನ.ಪಂ.ಸದಸ್ಯ ಕೆ.ಎಸ್.ಉಮ್ಮರ್, ಪಿಎಫ್‍ಐ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ಪುತ್ತೂರು, ಅನ್ವರ್ ಸಾದತ್, ರಾಜ್ಯ ಕಾಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ, ಪ್ರಮುಖರಾದ ಮಹಮ್ಮದ್ ವಳವೂರು, ಅತಾವುಲ್ಲಾ ಜೋಕಟ್ಟೆ, ಮಮ್ಮಾಲಿ ಹಾಜಿ, ರಫೀಕ್ ದಾರಿಮಿ, ಅಬ್ದುಲ್ ಕಲಾಂ ಸುಳ್ಯ, ಶಿಹಾಬ್, ರಿಯಾಸ್ ಫರಂಗಿಪೇಟೆ, ಮಹಮ್ಮದ್ ತಫ್ಸೀರ್, ಅಮೀನ್ ಮೋಸಿಂ, ಅಮೀನ್ ಸೇಠ್, ಅಫ್ಸರ್ ಕೊಡ್ಲಿಪೇಟೆ, ಜಾಫರ್ ಸಾಧಿಕ್ ಫೈಝಿ ಉಪಸ್ಥಿತರಿದ್ದರು.

    ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಅಧ್ಯಕ್ಷ ಅಬೂಬಕ್ಕರ್ ರಿಝ್ವಾನ್ ಸ್ವಾಗತಿಸಿ, ಸಂಶುದ್ದೀನ್ ವಂದಿಸಿದ್ದು, ಎ. ಕೆ.ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.