Tag: ಸ್ವಾಗತ

  • ಸೇವಾ ನಿವೃತ್ತಿ ಪಡೆದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ..!

    ಸೇವಾ ನಿವೃತ್ತಿ ಪಡೆದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ..!

    ಹುಬ್ಬಳ್ಳಿ: ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ನಂತರ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಯೋಧ ಮೆಹಬೂಬಸಾಬ್ ಬೆಲವಂತರವರು ಆಗಸ್ಟ್ 1ರಂದು ಸೇವಾ ನಿವೃತ್ತಿಯಾಗಿದ್ದು, ಬುಧವಾರ ಸೈನಿಕ ಮೆಹಬೂಬಸಾಬ್ ಸ್ವಗ್ರಾಮಕ್ಕೆ ಆಗಮಿಸಿದರು. ಯೋಧ ಗ್ರಾಮಕ್ಕೆ ಆಗಮಿಸುತ್ತಿರುವ ಮಾಹಿತಿ ತಿಳಿದ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿತ್ತು. ಗ್ರಾಮದ ಮಾಜಿ ಸೈನಿಕರು ಮೆಹಬೂಬಸಾಬ್ ಅವರಿಗೆ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದರು. ನಂತರ ಗ್ರಾಮಸ್ಥರು, ಮಾಜಿ ಸೈನಿಕರು ಡೊಳ್ಳಿನ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಿ ಆತ್ಮೀಯವಾಗಿ ಸ್ವಾಗತ ಮಾಡಿದರು.

    ನಿವೃತ್ತ ಯೋಧ ಮೆಹಬೂಬ್ ಸಾಬ್ ಬೆಲವಂತರ ಮಾತನಾಡಿ, ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ 2004 ರಿಂದ ರಾಂಚಿ, ಜಮ್ಮು ಕಾಶ್ಮಿರ, ರಾಜಸ್ಥಾನ, ತಬಾಂಗ್ ಸೇರಿದಂತೆ ವಿವಿಧೆಡೆ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದರು. ನಿವೃತ್ತಿ ನಂತರ ಊರಿಗೆ ಆಗಮಿಸಿದಾಗ ದೇಶಭಕ್ತರು ಸ್ವಾಗತ ನೀಡಿದ್ದು ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯತೆ ಭಾವ ಮೂಡಿಸಿದೆ ಎಂದರು.

    ನಂತರ ಯೋಧನ ಮನೆಯ ಮುಂದೆ ಸ್ವಾಗತ ಕಾರ್ಯಕ್ರಮ ಆಯೋಜಿಸಿ ಮಾಜಿ ಸೈನಿಕರು, ಗ್ರಾಮ ಪಂಚಾಯತಿ ಸದಸ್ಯರು, ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ದೇಶಾಭಿಮಾನಿಗಳು ಯೋಧ ಮೆಹಬೂಬಸಾಬ್ ಅವರನ್ನು ಸನ್ಮಾನಿಸಿದರು.

  • ಊರಿಗೆ ಮರಳಿದ ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಊರಿಗೆ ಮರಳಿದ ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಹಾವೇರಿ: ಹದಿನೇಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ ನಿವೃತ್ತ ಯೋಧನಿಗೆ ಗ್ರಾಮದ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಹಾವೇರಿ ತಾಲೂಕು ಚಿಕ್ಕಲಿಂಗದಹಳ್ಳಿ ಗ್ರಾಮದ ಉಳಿವೆಪ್ಪ ಕಿವುಡೇರ ಹದಿನೇಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶ ಸೇವೆ ಮಾಡಿದ್ದಾರೆ. ಜಮ್ಮು ಕಾಶ್ಮೀರ, ಪಂಜಾಬ್ ಹರಿಯಾಣ ಸೇರಿದಂತೆ ವಿವಿಧ ಕಡೆ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯಾಗಿ ಇಂದು ಊರಿಗೆ ಮರಳಿದ್ದಾರೆ.

    ಚಿಕ್ಕಲಿಂಗದಹಳ್ಳಿ ಗ್ರಾಮದ ಜನರು ತೆರೆದ ವಾಹನದಲ್ಲಿ ನಿವೃತ್ತ ಯೋಧನನ್ನ ಮೆರವಣಿಗೆ ಮಾಡಿದರು. ಹಾವೇರಿ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಯೋಧನಿಗೆ ಮಾಲಾರ್ಪಣೆ ಮಾಡಿದರು. ಗ್ರಾಮದ ಯುವಕರು ಹಾಗೂ ಜನರು ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ತೆರೆದ ವಾಹನದ ಮೂಲಕ ಮೆರವಣಿಗೆ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು. ಡೊಳ್ಳು ಭಾರಿಸುತ್ತಾ ಪಟಾಕಿ ಸಿಡಿಸಿ ದೇಶ ಸೇವೆ ಮಾಡಿದ ಯೋಧ ಉಳಿವೆಪ್ಪನ್ನ ಅದ್ಧೂರಿಯಾಗಿ ಸ್ವಾಗತಿಸಿದರು.

  • ಅಂಗೈ ಮೇಲೆ ವೀರ ಯೋಧನನ್ನ ಬರಮಾಡ್ಕೊಂಡ ಗ್ರಾಮಸ್ಥರು

    ಅಂಗೈ ಮೇಲೆ ವೀರ ಯೋಧನನ್ನ ಬರಮಾಡ್ಕೊಂಡ ಗ್ರಾಮಸ್ಥರು

    – ಸೈನಿಕನಿಗೆ ಅದ್ಧೂರಿ ಸ್ವಾಗತ

    ಭೋಪಾಲ್: ನಿವೃತ್ತಿಹೊಂದಿ ಊರಿಗೆ ವಾಪಸ್ ಬಂದಿರುವ ವೀರ ಯೋಧರ ಪಾದ ಮಣ್ಣಿಗೆ ತಾಗದಂತೆ ಅಂಗೈ ನೆಲಕ್ಕೂರಿ ಮಧ್ಯಪ್ರದೇಶ ಜಿರಾನ್ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ನಿವೃತ್ತ ಯೋಧರಾದ ನಾಯಕ್ ವಿಜಯ್ ಬಿ ಸಿಂಗ್ ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆಸಲ್ಲಿಸಿದ್ದಾರೆ. ನೀವೃತ್ತಿ ಹೊಂದಿ ತನ್ನ ತವರಿಗೆ ಮರಳಿದಾಗ ಊರಿನ ಗ್ರಾಮಸ್ಥರು ಅತ್ಯಂತ ಪ್ರೀತಿಯ ಮತ್ತು ಭವ್ಯವಾದ ಸ್ವಾಗತವನ್ನು ಕೋರಿದ್ದಾರೆ.

    ವಿಜಯ್ ಬಿ ಸಿಂಗ್ ಬರುತ್ತಾರೆ ಎಂಬ ವಿಚಾರವನ್ನು ತಿಳಿದ ಗ್ರಾಮಸ್ಥರು ಸ್ವಾಗತಕ್ಕೆ ಭಾರೀ ಸಿದ್ಧತೆ ಮಾಡಿಕೊಂಡಿದ್ದರು. ಮನೆಗೆ ಯೋಧ ಬರುತ್ತಿದ್ದಂತೆ ಅವರ ಕಾಲುಗಳನ್ನು ನೆಲಕ್ಕೆ ತಾಗದಂತೆ ಗ್ರಾಮಸ್ಥರು ತಮ್ಮ ಅಂಗೈಯನ್ನು ನೆಲಕ್ಕೆ ಊರಿ ಅದರ ಮೇಲೆ ಅವರ ಪಾದಗಳನ್ನು ಇಟ್ಟು ಗೌರವಪೂರ್ವಕವಾಗಿ ಸಂತೋಷದಿಂದ ಸ್ವಾಗತಿಸಿದ್ದಾರೆ.

    ನಿಜಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ. ನನಗೆ ಹೆಮ್ಮೆಯ ವಿಚಾರವಾಗಿದೆ. ಭಾರತೀಯ ಸೇನೆಯಲ್ಲಿ 17 ವರ್ಷ 26 ದಿನ ಸೇವೆಯನ್ನು ಸಲ್ಲಿಸಿದ್ದೇನೆ. ನಾನು ಬಂದಾಗಲೆಲ್ಲ ನನ್ನ ಹೊತ್ತೊಯ್ದು ದೇವಸ್ಥಾನದಲ್ಲಿ ಆಶೀರ್ವದಿಸುತ್ತಾರೆ. ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಯೋಧರಾದ ನಾಯಕ್ ವಿಜಯ್ ಹೇಳಿದ್ದಾರೆ.

     

  • 2 ತಿಂಗ್ಳ ನಂತರ ಮನೆಗೆ ಬಂದ ನರ್ಸಿಂಗ್ ಆಫೀಸರ್- ಜನರಿಂದ ಹೃದಯ ಸ್ಪರ್ಶಿ ಸ್ವಾಗತ

    2 ತಿಂಗ್ಳ ನಂತರ ಮನೆಗೆ ಬಂದ ನರ್ಸಿಂಗ್ ಆಫೀಸರ್- ಜನರಿಂದ ಹೃದಯ ಸ್ಪರ್ಶಿ ಸ್ವಾಗತ

    – ಕೊರೊನಾ ಐಸೊಲೇಷನ್ ವಾರ್ಡಿನಲ್ಲಿ ಕೆಲಸ

    ಧಾರವಾಡ: ಕೊರೊನಾ ಐಸೊಲೇಷನ್ ವಾರ್ಡಿನಲ್ಲಿ ಕಳೆದ ಎರಡು ತಿಂಗಳಿಂದ ಕೆಲಸ ನಿರ್ವಹಣೆ ಮಾಡಿದ ವಾಪಸ್ ಬಂದಿರುವ ನರ್ಸಿಂಗ್ ಆಫೀಸರ್ ಒಬ್ಬರಿಗೆ ಜನರು ಹೃದಯ ಸ್ಪರ್ಶಿ ಸ್ವಾಗತ ಕೋರಿದ್ದಾರೆ.

    ಹೌದು. ಧಾರವಾಡ ನಗರದ ಜೆಎಸ್‍ಎಸ್ ಕಾಲೇಜು ಎದುರಿನ ಮಧು ಅಪಾರ್ಟ್‍ಮೆಂಟ್ ನಿವಾಸಿ ಜ್ಯೋತಿ ಕಲ್ಲೂರಮಠ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸಿ ವಾಪಸ್ ಬಂದಿದ್ದಾರೆ. ಇವರು ಬರುತ್ತಿದ್ದಂತೆಯೇ ಅಪಾರ್ಟ್‍ಮೆಂಟ್ ನಿವಾಸಿಗಳು ತಬ್ಬಿಕೊಂಡು ಇವರನ್ನು ಸ್ವಾಗತಿಸಿದರು. ಅಲ್ಲದೇ ಹಿರಿಯ ಅಜ್ಜಿಯರು ಜ್ಯೋತಿ ಅವರಿಗೆ ಉಡಿ ತುಂಬುವ ಮೂಲಕ ಸ್ವಾಗತಿಸಿಕೊಂಡಿದ್ದಾರೆ.

    ಜ್ಯೋತಿ ಅವರ ಮಗ ಅಭಯ್ ಕೂಡ ತಾಯಿಗೆ ಹೂವು ಕೊಟ್ಟು ಮನೆಗೆ ಸ್ವಾಗತ ಕೋರಿದ್ದಾನೆ. ಈ ವೇಳೆ ತಮ್ಮ ಮಗನಿಂದ ದೂರ ಇದ್ದ ಜ್ಯೋತಿ ಮಗ ಹೂವು ಕೊಟ್ಟು ಸ್ವಾಗತಿಸುತ್ತಿದ್ದಂತೆಯೇ ಕಣ್ಣೀರು ಹಾಕಿದ್ದಾರೆ. ಕಳೆದ ಎರಡು ತಿಂಗಳಿಂದ ಮಗನ ಮುಖ ನೋಡಿರಲಿಲ್ಲ. ಮನೆಯಲ್ಲಿ ವಯಸ್ಸಾದ ಅತ್ತೆ ಕೂಡ ಇದ್ದಾರೆ. ಮಗನ ವಯಸ್ಸು ಚಿಕ್ಕದು ಹಾಗೂ ಅತ್ತೆಗೂ ವಯಸ್ಸು ಆಗಿದ್ದರಿಂದ ಹೇಗೆ ಇವರು ಮನೆಯಲ್ಲಿ ಎಲ್ಲ ಕೆಲಸಗಳನ್ನು ನಿರ್ವಹಣೆ ಮಾಡಿಕೊಳ್ಳತ್ತಾರೆ ಎಂಬ ಚಿಂತೆ ಆಗಿತ್ತು ಎಂದು ಜ್ಯೋತಿ ಹೇಳಿದ್ದಾರೆ.

    ಪತಿ ಕೂಡ ಮಗನ ಜೊತೆ ಇದ್ದರೂ ತಾಯಿಯಂತೆ ಆಗಲ್ಲ. ಹೀಗಾಗಿ ಇದನ್ನೆಲ್ಲ ನೆನೆದು ಕಣ್ಣೀರು ಹಾಕಿದ ಜ್ಯೋತಿ, ತನಗೆ ಸ್ವಾಗತ ಕೋರಿದ ಎಲ್ಲ ಜನರಿಗೆ ಧನ್ಯವಾದ ಅರ್ಪಣೆ ಮಾಡಿದ್ದರು. ಅಪಾರ್ಟ್‍ಮೆಂಟ್ ಜನರು ಜ್ಯೋತಿಗೆ ಹೂವಿನ ಜೊತೆಗೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಮಾಡಿಕೊಂಡಿದ್ದಾರೆ.

  • 18 ವರ್ಷ ದೇಶಸೇವೆ – ನಿವೃತ್ತಿ ನಂತ್ರ ವಾಪಸ್ ಊರಿಗೆ ಮರಳಿದ ಯೋಧರಿಗೆ ಸನ್ಮಾನ

    18 ವರ್ಷ ದೇಶಸೇವೆ – ನಿವೃತ್ತಿ ನಂತ್ರ ವಾಪಸ್ ಊರಿಗೆ ಮರಳಿದ ಯೋಧರಿಗೆ ಸನ್ಮಾನ

    ಹುಬ್ಬಳ್ಳಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಊರಿಗೆ ಆಗಮಿಸಿದ ಯೋಧರಿಗೆ ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಅವರನ್ನು ಸನ್ಮಾನಿಸಲಾಯಿತು.

    ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಮಾರುತಿ ಬಂಡಿವಡ್ಡರ್ ಮತ್ತು ಯಲ್ಲಾಪುರ ತಾಲೂಕಿನ ಮುಂಡಗೋಡದ ಸೋಮಶೇಖರ್ ಅಗಡಿ 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ದೇಶದ ಜಮ್ಮು ಕಾಶ್ಮೀರ, ಸಿಯಾಚಿನ್, ಕೇರಳ, ಅಸ್ಸಾಂ ಮತ್ತು ದೇಶದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು.

    ಕರ್ತವ್ಯವನ್ನು ಮುಗಿಸಿ ನಿವೃತ್ತರಾಗಿ ತಮ್ಮ ತವರಿಗೆ ಬಂದಿದ್ದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮತ್ತು ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ರಾಜು ಜರತಾರಘರ್ ಇವರ ನೇತೃತ್ವದಲ್ಲಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ದೀಪಕ್ ಜಿತೂರಿ, ರಾಘು ಹಬೀಬ್, ಅಕ್ಷಯ ಬದ್ದಿ, ಬಸವರಾಜ ಇಚ್ಚಂಗಿ, ಹಿತೇಶ್ ಜೈನ್, ರಾಮಚಂದ್ರ ಕುಲಕರ್ಣಿ, ನೀಲಕಂಠಯ್ಯ ತಡಸದಮಠ, ಷಣ್ಮುಖಯ್ಯ ಪಂಚಾಂಗಮಠ, ಪ್ರಿನ್ಸ್ ಶರ್ಮಾ, ಜಗನ್ನಾಥ್ ಪವಾರ್, ಅಕ್ಷಯ್ ಖೋಡೆ, ಸುನೀತಾ ಜರತಾರಘರ್, ಸುರಜ ಮೆಹರವಾಡೆ, ದೀಪಕ್ ಭೋಚಗೇರಿ, ವಿನಾಯಕ ಅಥಣಿ, ವಿನಾಯಕ ಕಬಾಡೆ, ನಾರಾಯಣ ಬುರೆ ಮತ್ತು ಸೈನಿಕ ಕುಟುಂಬದ ಎಲ್ಲ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.

  • ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧರು- ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧರು- ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಹಾವೇರಿ: ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಸೈನಿಕರಿಗೆ ಹಾವೇರಿಯಲ್ಲಿ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

    ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಜಗದೀಶ್, ಅಗಡಿ ಗ್ರಾಮದ ನಜೀರ್ ಅಹಮ್ಮದ್ ಮತ್ತು ಲಕ್ಷ್ಮಣ ಅವರನ್ನು ಅದ್ಧೂರಿ ಸ್ವಾಗತದ ಮೂಲಕ ಬರಮಾಡಿಕೊಂಡರು. ಜಮ್ಮು ಕಾಶ್ಮೀರ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರು ಇಂದು ಊರಿಗೆ ಮರಳಿದ್ದಾರೆ. ಕಾರು ಇಳಿಯುತ್ತಿದ್ದಂತೆ ನಿವೃತ್ತ ಸೈನಿಕರಿಗೆ ಮಕ್ಕಳು ಪುಷ್ಪಗುಚ್ಛ ನೀಡಿದರು. ಇದೇ ವೇಳೆ ಕುಟುಂಬಸ್ಥರು ಸಹ ಸ್ವಾಗತಿಸಿದರು.

    ನಂತರ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ತೆರೆದ ವಾಹನದಲ್ಲಿ ದೇಶಭಕ್ತಿ ಗೀತೆಗಳ ಮೂಲಕ ನಿವೃತ್ತ ಸೈನಿಕರ ಮೆರವಣಿಗೆ ಮಾಡಲಾಯ್ತು. ಹಾವೇರಿಯಿಂದ ಸೈನಿಕರ ಸ್ವಗ್ರಾಮ ಅಗಡಿವರೆಗೆ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ಮೂಲಕ ದೇಶಾಭಿಮಾನ ಮೆರೆದರು.

  • ನಿವೃತ್ತಿಯಾಗಿ ಕೋಲಾರಕ್ಕೆ ಆಗಮಿಸಿದ 14 ಯೋಧರಿಗೆ ಅದ್ಧೂರಿ ಸ್ವಾಗತ

    ನಿವೃತ್ತಿಯಾಗಿ ಕೋಲಾರಕ್ಕೆ ಆಗಮಿಸಿದ 14 ಯೋಧರಿಗೆ ಅದ್ಧೂರಿ ಸ್ವಾಗತ

    – ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಸ್ವಾಗತ

    ಕೋಲಾರ: ನಿವೃತ್ತಿಯಾಗಿ ಕೋಲಾರಕ್ಕೆ ಆಗಮಿಸಿದ 14 ಯೋಧರನ್ನು ಜನತೆ ತೆರೆದ ವಾಹನದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಸ್ವಾಗತ ಮಾಡಿದ್ದಾರೆ.

    ಕಳೆದ 17 ವರ್ಷಗಳ ಕಾಲ ದೇಶದ ವಿವಿಧ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ 14 ಜನ ಕೋಲಾರದ ಯೋಧರನ್ನು ಜಿಲ್ಲೆಯ ಜನ ಅದ್ಧೂರಿಯಾಗಿ ಬರಮಾಡಿಕೊಂಡರು. 2003ರ ಜನವರಿಯಲ್ಲಿ ಆಯ್ಕೆಯಾದ ಒಂದೇ ಬ್ಯಾಚ್‍ನ ವಿವಿಧ ರೆಜಿಮೆಂಟ್​ಗಳಲ್ಲಿ ಕೆಲಸ ಮಾಡಿರುವ 14 ಯೋಧರು ಇಂದು ನಿವೃತ್ತಿಯಾಗಿ ಕೋಲಾರಕ್ಕೆ ಆಗಮಿಸಿದರು.

    ಈ ಸಂದರ್ಭದಲ್ಲಿ ಅವರನ್ನು ಕೋಲಾರ ಜಿಲ್ಲಾ ಮಾಜಿ ಯೋಧರ ಸಂಘ, ಟೀಂ ಯೋಧ ನಮನ, ಶ್ರೀರಾಮ ಸೇನೆ ಹಾಗೂ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದರು. ಕೋಲಾರದ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ ಯೋಧರು ಮೊದಲಿಗೆ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಯೋಧರಿಗೆ ತಿಲಕವನ್ನಿಡುವ ಮೂಲಕ ಆರತಿಯೆತ್ತಿ ಜಯ ಘೋಷಣೆಗಳನ್ನು ಕೂಗಿದರು. ಬಳಿಕ ತೆರೆದ ವಾಹನದಲ್ಲಿ ಯೋಧರನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಭಾರತಾಂಬೆಯ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.

    14 ನಿವೃತ್ತ ಯೋಧರ ಆಗಮನ ಕೋಲಾರದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು. ಮೆರವಣಿಗೆ ನಂತರ ಕಾಲೇಜು ವೃತ್ತದಲ್ಲಿರುವ ವೇದಿಕೆಗೆ ಆಗಮಿಸಿದ ಸಿಪಾಯಿಗಳನ್ನು ನೂರಾರು ವಿಧ್ಯಾರ್ಥಿಗಳ ಸಮ್ಮುಖದಲ್ಲಿ ಯೋಧರು ಹಾಗೂ ಅವರ ಕುಟುಂಬಗಳನ್ನು ಸನ್ಮಾನ ಮಾಡಲಾಯಿತು. ನೆರೆದಿದ್ದ ವಿದ್ಯಾರ್ಥಿಗಳಂತೂ ಯೋಧರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಕಾಲು ಮುಟ್ಟಿ ನಮಸ್ಕಾರ ಮಾಡಿದರು.

    ಇದೇ ವೇಳೆ ಯುವಕರು ಹೆಚ್ಚಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ನಿವೃತ್ತ ಯೋಧರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಲ್ಲದೆ ಗಡಿಯಲ್ಲಾದ ಅನುಭವ ಹಾಗೂ ತಾಯಿ ಸೇವೆಯನ್ನು ಸ್ಮರಿಸಿಕೊಂಡು ಯುವಕರನ್ನು ವೀರ ಯೋಧರು ಹುರಿದುಂಬಿಸಿದರು. ಯೋಧರ ಪ್ರತಿಯೊಂದು ಮಾತಿಗೂ ಶಿಳ್ಳೆ ಚಪ್ಪಾಳೆ ಜೋರಾಗಿತ್ತು. ಅಲ್ಲದೆ ನಿವೃತ್ತ ಯೋಧರನ್ನು ಜಿಲ್ಲಾಡಳಿತ ಹಾಗೂ ಸರ್ಕಾರಗಳು ಆತ್ಮೀಯವಾಗಿ ಸ್ವಾಗತ ಮಾಡುವ ಪ್ರವೃತ್ತಿ ಬೆಳೆಯಬೇಕೆಂಬುದು ದೇಶ ಭಕ್ತರು ಸಲಹೆಯಾಗಿತ್ತು.

  • ಸ್ವಗ್ರಾಮಕ್ಕೆ ಆಗಮಿಸಿದ ಯೋಧರಿಗೆ ಅದ್ಧೂರಿ ಸ್ವಾಗತ

    ಸ್ವಗ್ರಾಮಕ್ಕೆ ಆಗಮಿಸಿದ ಯೋಧರಿಗೆ ಅದ್ಧೂರಿ ಸ್ವಾಗತ

    ಹಾವೇರಿ: ಬರೋಬ್ಬರಿ 17 ವರ್ಷಗಳ ಕಾಲ ಭಾರತ ಸೇನೆಯಲ್ಲಿ ದೇಶ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ ಮಾಜಿ ಯೋಧರಿಗೆ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಸ್ವಾಗತ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

    ಹಾವೇರಿ ತಾಲೂಕಿನ ಅಗಡಿ ಗ್ರಾಮದ ಇಬ್ಬರು ಯೋಧರಾದ ಇಮ್ತಿಯಾಜ್ ಹಾವನೂರು ಮತ್ತು ಮಹೇಶ್ ಕುಂಬಾರ ಊರಿಗೆ ಮರಳಿದ ಮಾಜಿ ಯೋಧರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇಂದು ಇಬ್ಬರು ಯೋಧರು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಹದಿನೇಳು ವರ್ಷ ಭಾರತೀಯ ಸೇನೆಯಲ್ಲಿ ಜಮ್ಮು-ಕಾಶ್ಮೀರ, ಶ್ರೀನಗರ, ಮಣಿಪ್ಪುರ, ನಾಗಾಲ್ಯಾಂಡ್ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ.

    ಇವತ್ತು ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಯೋಧರನ್ನ ಗ್ರಾಮಸ್ಥರು ಹಾಗೂ ಸ್ಥಳೀಯ ಮಾಜಿ ಯೋಧರು ಸ್ವಾಗತಿಸಿದರು. ಅಲ್ಲದೆ ತೆರೆದ ವಾಹನದಲ್ಲಿ ಯೋಧರನ್ನ ಮೆರವಣಿಗೆ ಮೂಲಕ ಊರಿಗೆ ಗ್ರಾಮಸ್ಥರು ಕರೆದುಕೊಂಡು ಹೋಗಿದ್ದಾರೆ. ಸ್ಥಳೀಯ ಶಾಸಕ ನೆಹರು ಓಲೇಕಾರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿ ಅದ್ಧೂರಿಯಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

  • ದೇಶ ಸೇವೆ ಮಾಡಿ ನಿವೃತ್ತಿಯಾದ ಯೋಧರಿಗೆ ಬೆಣ್ಣೆನಗರಿಯಲ್ಲಿ ಅದ್ಧೂರಿ ಸ್ವಾಗತ

    ದೇಶ ಸೇವೆ ಮಾಡಿ ನಿವೃತ್ತಿಯಾದ ಯೋಧರಿಗೆ ಬೆಣ್ಣೆನಗರಿಯಲ್ಲಿ ಅದ್ಧೂರಿ ಸ್ವಾಗತ

    ದಾವಣಗೆರೆ: ಕಳೆದ 20 ವರ್ಷಗಳಿಂದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ನಿವೃತ್ತ ಯೋಧರ ಸಂಘ ಹಾಗೂ ಹಿಂದೂ ಜಾಗರಣ ವೇದಿಕೆಯಿಂದ ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತಕೋರಲಾಯಿತು.

    ಸಾಸಲು ಗ್ರಾಮದ ಜಯಣ್ಣ, ಕೆಟಿಜೆ ನಗರದ ಸುಶೀಲ್ ಕುಮಾರ್, ತುರ್ಚುಘಟ್ಟದ ಶ್ರೀನಿವಾಸ್ ನಿವೃತ್ತಿ ಯೋಧರು. ಇಪ್ಪತ್ತುವರೆ ವರ್ಷಗಳ ಕಾಲ ಜಮ್ಮು-ಕಾಶ್ಮೀರ, ಹಿಮಾಚಲಪ್ರದೇಶ, ಹರ್ಯಾಣ, ಮೇಘಾಲಯ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸಿದ್ದ ಯೋಧರು ಇಂದು ನಿವೃತ್ತಿಯಾಗಿ ತವರಿಗೆ ಆಗಮಿಸಿದರು.

    ನಿವೃತ್ತಿಯಾಗಿ ತವರೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಯೋಧರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಆರತಿ ಎತ್ತಿ ತಿಲಕವಿಟ್ಟು ಸಿಹಿ ಹಂಚಿದರು. ಅಲ್ಲದೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಮಟೆ ಬಾರಿಸಿಕೊಂಡು ಅದ್ಧೂರಿಯಾಗಿ ಸ್ವಾಗತ ಕೋರಿ ಹೂವಿನ ಹಾರ ಹಾಕಿ, ಮೆರವಣಿಗೆ ಮಾಡಿದರು.

    ದೇಶಕ್ಕಾಗಿ ಕೆಲಸ ಮಾಡಿದ್ದು ನಮಗೆ ತುಂಬಾ ಹೆಮ್ಮೆಯಿದೆ. ಚಿಕ್ಕ ವಯಸ್ಸಿನಿಂದಲೂ ಸಾಕಷ್ಟು ಆಸೆಯನ್ನು ಇಟ್ಟುಕೊಂಡಿದ್ದೆವು. ಶಾಲೆಯಲ್ಲಿ ಶಿಕ್ಷಕರು ದೇಶಾಭಿಮಾನವನ್ನು ತುಂಬಿದ್ದಕ್ಕೆ ನಾವು ಇಂದು ಯೋಧರಾಗಿದ್ದೇವೆ. ಅವಕಾಶ ಸಿಕ್ಕರೆ ಮತ್ತೆ ದೇಶ ಸೇವೆಗೆ ಹೋಗುತ್ತೇವೆ. ಅಲ್ಲದೆ ಯುವಕರನ್ನು ದೇಶ ಸೇವೆ ಮಾಡಲು ತರಬೇತಿ ನೀಡುತ್ತೇವೆ ಎಂದು ಹೆಮ್ಮೆಯಿಂದ ನಿವೃತ್ತ ಯೋಧರು ಹೇಳಿಕೊಂಡರು.

  • ಟಿಬೇಟಿಯನ್ ಧರ್ಮಗುರು ದಲೈಲಾಮಾಗೆ ಹುಬ್ಬಳ್ಳಿಯಲ್ಲಿ ಅದ್ದೂರಿ ಸ್ವಾಗತ

    ಟಿಬೇಟಿಯನ್ ಧರ್ಮಗುರು ದಲೈಲಾಮಾಗೆ ಹುಬ್ಬಳ್ಳಿಯಲ್ಲಿ ಅದ್ದೂರಿ ಸ್ವಾಗತ

    ಹುಬ್ಬಳ್ಳಿ: ಗೋವಾದಿಂದ ಖಾಸಗಿ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ಧಾರವಾಡ ಜಿಲ್ಲಾಡಳಿತದಿಂದ ಸ್ವಾಗತ ಕೋರಿ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಕ್ಕೆ ಬೀಳ್ಕೊಡಲಾಯಿತು.

    ಇಂದಿನಿಂದ ಡಿ. 24ರವರೆಗೆ ಮಂಡಗೋಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಲೈಲಾಮಾ ಅವರು ತಮ್ಮ 12 ಜನ ಧಾರ್ಮಿಕ ಅನುಚರರೊಂದಿಗೆ ಭಾಗವಹಿಸಲಿದ್ದಾರೆ. ಆದ್ದರಿಂದ ಇಂದು ಗೋವಾದಿಂದ ಖಾಸಗಿ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಿದ್ದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್, ಉಪವಿಭಾಗಾಧಿಕಾರಿ ಮಹಮದ್ ಜುಬೇರ್, ಡಿಸಿಪಿ ನಾಗೇಶ್.ಡಿ.ಎಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಧರ್ಮಗುರುಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.