Tag: ಸ್ವರ್ಣ ನದಿ

  • ಸ್ವರ್ಣ ನದಿಗೆ ಬಾಗಿನ ಅರ್ಪಿಸಿದ ಸುನಿಲ್ ಕುಮಾರ್

    ಸ್ವರ್ಣ ನದಿಗೆ ಬಾಗಿನ ಅರ್ಪಿಸಿದ ಸುನಿಲ್ ಕುಮಾರ್

    ಉಡುಪಿ: ನಗರದ ಜೀವನದಿ ಸ್ವರ್ಣೆಗೆ ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ದಂಪತಿ ಬಾಗಿನ ಅರ್ಪಿಸಿದರು. ಬಳಿಕ ಶೀಂಬ್ರ ಸಿದ್ಧಿವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಸಮೃದ್ಧಿಗಾಗಿ ಪ್ರಾರ್ಥಿಸಿದರು.

    ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟಿ ಉಡುಪಿ ನಗರದ ಜನರ ಜೀವನಾಡಿಯಾಗಿರುವ ಸ್ವರ್ಣ ನದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಕೆ ಮಾಡಿದರು. ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಹ ಏರ್ಪಡಿಸಲಾಗಿತ್ತು. ಸಚಿವ ಸುನಿಲ್ ಕುಮಾರ್ ಪತ್ನಿ ಪ್ರಿಯಾಂಕಾ ಜೊತೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸ್ವರ್ಣ ನದಿ ತಟದಲ್ಲಿ ಸುನಿಲ್ ಕುಮಾರ್ ದಂಪತಿ ಹಾಗೂ ಶಾಸಕ ರಘುಪತಿ ಭಟ್ ದಂಪತಿ ದೇವರಿಗೆ ಅರಶಿಣ, ಕುಂಕುಮ ಮಾಂಗಲ್ಯ ಸೀರೆ ಗಳನ್ನು ಅರ್ಪಣೆ ಮಾಡಿ ಆರತಿ ಎತ್ತಿ ಪೂಜಿಸಿದರು. ಇದನ್ನೂ ಓದಿ: ಜಾಲಿ ಮೂಡ್‍ನಲ್ಲಿ ಸಿದ್ದರಾಮಯ್ಯ- ದೆಹಲಿಯಲ್ಲಿ ಫುಲ್ ಶಾಪಿಂಗ್

    ಈ ಬಾರಿ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಜನರಿಗೆ ಕುಡಿಯುವ ನೀರಿನ ಅಭಾವ ಬರುವುದಿಲ್ಲ. ಮುಂದಿನ ವರ್ಷದೊಳಗೆ ಭಕ್ತರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಮಾಡುತ್ತದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸ್ನಾನ ಘಟ್ಟವನ್ನು ನಿರ್ಮಾಣ ಮಾಡುತ್ತೇವೆ ಎಂದರು.

    ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ಭಾರತೀಯ ಸಂಪ್ರದಾಯ. ನದಿ, ಬೆಟ್ಟ ಪ್ರಕೃತಿಯ ಬಗ್ಗೆ ನಮಗೆ ಪೂಜನೀಯ ಭಾವನೆ ಇದೆ. ನದಿಗಳು ವರ್ಷ ಪೂರ್ತಿ ಹರಿಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಕುಡಿಯಲು ಮತ್ತು ಕೃಷಿ ಚಟುವಟಿಕೆಗಳು ನಡೆಯಲು ಹಾಗೂ ಜಲಚರಗಳಿಗೆ ವರ್ಷಪೂರ್ತಿ ನದಿ ತುಂಬಿ ಹರಿಯಲಿ. ಸಮೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಡಿಸಿ ಕೂರ್ಮಾರಾವ್, ಎಸ್.ಪಿ ವಿಷ್ಣುವರ್ಧನ್, ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಸ್ವರ್ಣ ನದಿಯ ಹೂಳೆತ್ತುವ ನೆಪದಲ್ಲಿ ಕೋಟ್ಯಂತರ ಮೌಲ್ಯದ ಮರಳು ಲೂಟಿ- ಕಾಂಗ್ರೆಸ್ ಆರೋಪ

    ಸ್ವರ್ಣ ನದಿಯ ಹೂಳೆತ್ತುವ ನೆಪದಲ್ಲಿ ಕೋಟ್ಯಂತರ ಮೌಲ್ಯದ ಮರಳು ಲೂಟಿ- ಕಾಂಗ್ರೆಸ್ ಆರೋಪ

    ಉಡುಪಿ: ಹೂಳೆತ್ತುವ ಯೋಜನೆಯನ್ನು ಬಳಸಿಕೊಂಡು ಸ್ವರ್ಣ ನದಿಯಿಂದ ಕೋಟ್ಯಂತರ ಮೌಲ್ಯದ ಮರಳು ದೋಚಲಾಗಿದೆ. ಅಪರ ಜಿಲ್ಲಾಧಿಕಾರಿ ನೇತೃತ್ವದ 14 ಜನರ ಸಮಿತಿ ಅಕ್ರಮ ಮಾಡಿದೆ ಅಂತ ಉಡುಪಿ ಜಿಲ್ಲಾ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

    ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮುಖಂಡರು, ಗುತ್ತಿಗೆಯನ್ನು ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಯೋಜಕ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಹೂಳು ತೆಗೆಯುವ ಎಲ್ಲಾ ನಿಯಮ ಗಾಳಿಗೆ ತೂರಲಾಗಿದೆ. ಹಿರಿಯಡ್ಕ ವ್ಯಾಪ್ತಿಯ ಕಾಡುಗಳಲ್ಲಿ ಅಕ್ರಮ ದಾಸ್ತಾನು ಮಾಡಲಾಗಿದೆ. ಬಹುಕೋಟಿ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ರಘುಪತಿ ಭಟ್, ಮರಳು ದಾಸ್ತಾನು ಮಾಡಿದ ಏರಿಯಾದ ಶಾಸಕ ಲಾಲಾಜಿ ಮೆಂಡನ್ ಉತ್ತರಿಸಬೇಕು ಎಂದು ಒತ್ತಾಯಿಸಿದರು.

    ಶಾಮೀಲಾದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಎಸಿಬಿ, ಲೋಕಾಯುಕ್ತಕ್ಕೆ ಕಾಂಗ್ರೆಸ್ ದೂರು ನೀಡಿದೆ. ಕೊರೊನಾ ಪರಿಸ್ಥಿತಿ ಬಳಸಿ ದೇಶದ ಸಂಪತ್ತು ಕೊಳ್ಳೆ ಹೊಡೆಯಲಾಗಿದೆ ಎಂದು ಈ ಹಿಂದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವೀಟ್ ಮಾಡಿದ್ದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಮಾತನಾಡಿ, ಆರಂಭದಲ್ಲಿ ಗೋಕುಲ್ ದಾಸ್ ಶೆಟ್ಟಿ ಎಂಬವರಿಗೆ ಟೆಂಡರ್ ಆಗಿತ್ತು. ಕಾನೂನು ಬಾಹಿರವಾಗಿ ಅದನ್ನು ರದ್ದು ಮಾಡಿ ಮಂಗಳೂರಿನ ಯೋಜಕ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ನಿಯಮಾವಳಿಯಂತೆ ಸ್ಥಳದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಇದ್ದು ಸಿಸಿಟಿವಿ ಅಳವಡಿಸಿ ಭದ್ರತಾ ಸಿಬ್ಬಂದಿ ನೇಮಿಸಬೇಕಿತ್ತು. ಮಣ್ಣು ಮತ್ತು ಮರಳನ್ನು ಬೇರ್ಪಡಿಸಿ ನಂತರ ಗಣಿ ಇಲಾಖೆಯ ಮೂಲಕ ಅದನ್ನು ಮಾರಾಟ ಮಾಡಬೇಕು ಎಂಬುದು ನಿಯಮ. ಆದರೆ ನಿಯಮವನ್ನು ಗಾಳಿಗೆ ತೂರಲಾಗಿದೆ. ಹೂಳು ತುಂಬಿದ ಪ್ರದೇಶವನ್ನು ಬಿಟ್ಟು ಅಣೆಕಟ್ಟಿನಿಂದ ದೂರ ಇರುವ ಶೀರೂರು, ಮಾಣೈ ಈ ಭಾಗದಲ್ಲೂ ಮರಳು ಕಳ್ಳತನ ಮಾಡಲಾಗಿದೆ ಎಂದರು.

    ನಗರಸಭೆ ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ಕೊರೊನಾ ವೈರಸ್ ನ ಲಾಕ್ ಡೌನ್ ನ ದುರ್ಲಾಭವನ್ನು ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜಿಲ್ಲೆಯ ಎಲ್ಲ ವಿಚಾರಗಳಿಗೆ ತಕ್ಷಣ ಸ್ಪಂದಿಸುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಕ್ಷೇತ್ರದ ಸಮಸ್ಯೆಗಳನ್ನು ಕಂಡು ಓಡೋಡಿ ಬರುವ ಶಾಸಕ ರಘುಪತಿ ಭಟ್ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಎಸಿಬಿ ಲೋಕಾಯುಕ್ತ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.