Tag: ಸ್ವರ್ಣಾ ನದಿ

  • ತುಂಬಿ ಹರಿಯುತ್ತಿರೋ ಸ್ವರ್ಣಾ ನದಿ- 35 ಮಂದಿ ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್

    ತುಂಬಿ ಹರಿಯುತ್ತಿರೋ ಸ್ವರ್ಣಾ ನದಿ- 35 ಮಂದಿ ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್

    ಉಡುಪಿ: ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಉಡುಪಿ ಜಿಲ್ಲೆಯ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ತಟದ 35 ನಿವಾಸಿಗಳನ್ನು ಶಿಫ್ಟ್ ಮಾಡಲಾಗಿದೆ.

    ಸ್ವರ್ಣಾ ನದಿ ಬದಿಯಲ್ಲಿ ಬರುವ ಬಲ್ಲೆಕುದ್ರು, ಪಾಸ್ಕುದ್ರು, ಕೊಡಿಪಟ್ಲ, ಮೆಲ್ ಕೊಡಿಪಟ್ಲದಲ್ಲಿ ನಡುಗಡ್ಡೆಯ ವಾತಾವರಣ ಸೃಷ್ಟಿಯಾಗಿದೆ. ಕೆಲ ಮನೆಗಳಿಗೆ ನೀರು ನುಗ್ಗಿದೆ. ಸುವರ್ಣ ತಟದಲ್ಲಿ ಸ್ಥಳಗಳಲ್ಲಿ ಸಿಲುಕಿದ್ದ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು. ಆತಂಕದಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೊಟ್ ಮುಖಾಂತರ ರಕ್ಷಿಸಿ ದಡಕ್ಕೆ ತರಲಾಗಿದೆ.

    ಉಡುಪಿಯ ತಹಶೀಲ್ದಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಬಲೇಕುದ್ರು ಎಂಬಲ್ಲಿ ಒಂದೇ ಕುಟುಂಬದ ಎಂಟು ಮಂದಿಯನ್ನು ರಕ್ಷಣೆ ಮಾಡಲಾಯಿತು. 80 ವರ್ಷದ ಅಜ್ಜಿ 8 ತಿಂಗಳ ಹಸುಗೂಸು ಸೇರಿದಂತೆ ಎತ್ತರ ಪ್ರದೇಶಕ್ಕೆ ಕುಟುಂಬವನ್ನು ಅಗ್ನಿಶಾಮಕ ಇಲಾಖಾ ಸಿಬ್ಬಂದಿ ಮೂಲಕ ಶಿಫ್ಟ್ ಮಾಡಲಾಗಿದೆ.

    ಚಿಕ್ಕಮಗಳೂರು ಶಿವಮೊಗ್ಗದ ಗಡಿಭಾಗದಲ್ಲಿ, ಪಶ್ಚಿಮಘಟ್ಟದ ತಪ್ಪಲಿನಲ್ಲಿ ಭಾರೀ ಮಳೆ ಬಿದ್ದಿದ್ದರಿಂದ ನೀರಿನ ಮಟ್ಟ ಉಡುಪಿ ಜಿಲ್ಲೆಯ ನದಿಗಳಲ್ಲಿ ಏರಿಕೆಯಾಗಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ.

  • ತುಂಬಿದ ಉಡುಪಿಯ ಸ್ವರ್ಣ ನದಿ – ನಗರಕ್ಕೆ 24 ಗಂಟೆ ವಾಟರ್ ಸಪ್ಲೈ

    ತುಂಬಿದ ಉಡುಪಿಯ ಸ್ವರ್ಣ ನದಿ – ನಗರಕ್ಕೆ 24 ಗಂಟೆ ವಾಟರ್ ಸಪ್ಲೈ

    ಉಡುಪಿ: ಜೂನ್ ತಿಂಗಳಲ್ಲಿ ಮುಂಗಾರು ಮಳೆ ಅಬ್ಬರ ಕಡಿಮೆಯಾದರೂ ಉಡುಪಿಯ ಸ್ವರ್ಣ ನದಿ ತುಂಬಿಕೊಂಡಿದೆ.

    ಮೇ ತಿಂಗಳಲ್ಲಿ ಉಡುಪಿ ನಗರವಾಸಿಗಳ ಕುಡಿಯುವ ನೀರಿನ ಆಸರೆಯಾಗಿದ್ದ ಸ್ವರ್ಣ ನದಿ ಸಂಪೂರ್ಣ ಬತ್ತಿತ್ತು. ಈ ಹಿನ್ನೆಲೆಯಲ್ಲಿ 10 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿತ್ತು. ಅಲ್ಲದೆ ಟ್ಯಾಂಕರ್ ಮೂಲಕ ಜನರಿಗೆ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಆದರೆ ಇದೀಗ ಮುಂಗಾರು ದುರ್ಬಲವಾದರೂ ಸ್ವರ್ಣ ನದಿ ತುಂಬಿಕೊಂಡಿದೆ.

    ಡ್ಯಾಂ ಕಡೆ ನಿರಂತರ ಹರಿವು ಇರುವುದರಿಂದ ನಗರಕ್ಕೆ 24 ಗಂಟೆ ನೀರು ಕೊಡಲು ನಗರಸಭೆ ನಿರ್ಧರಿಸಿದೆ. ಕಾರ್ಕಳ ತಾಲೂಕು ಮತ್ತು ಹೆಬ್ರಿ ತಾಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿರುವುದರಿಂದ ಸ್ವರ್ಣ ನದಿಗೆ ಎಲ್ಲಾ ಭಾಗದಿಂದ ನೀರು ಹರಿದುಬರುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಅರ್ಧದಷ್ಟೂ ಮಳೆ ಬಿದ್ದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

    ಉಡುಪಿನಲ್ಲಿ ಭಾಗೀರಥಿ ಜಯಂತಿ ದಿನದಂದು ಮಠದಲ್ಲಿ ಗಂಗಾರತಿ ಆಗುತ್ತಿದ್ದಂತೆ ಪವಾಡ ಎಂಬಂತೆ ಧೋ ಎಂದು ಮಳೆ ಸುರಿದಿತ್ತು. ಭಾಗೀರಥಿ ಜಯಂತಿ ಹಿನ್ನೆಲೆಯಲ್ಲಿ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಗಂಗೆಗೆ ಆರತಿಯೆತ್ತಿ, ವಿಶೇಷ ಪೂಜೆ ಸಲ್ಲಿಸಿದ್ದರು. ಬರ ನೀಗಿ- ವರ್ಷಧಾರೆಯಾಗಿ ರೈತರರು ಬೆಳೆದ ಬೆಳೆಗಳು ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದ್ದರು. ಅಷ್ಟಾಗುತ್ತಲೇ ಉಡುಪಿಯಲ್ಲಿ ಧೋ ಅಂತ ಮಳೆ ಸುರಿದಿತ್ತು.

  • ಶೀಘ್ರವೇ ಮಳೆಯಾಗಿ, ಬತ್ತಿದ ಸ್ವರ್ಣೆ ತುಂಬಿ ಹರಿಯಲಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ನಮಾಜ್

    ಶೀಘ್ರವೇ ಮಳೆಯಾಗಿ, ಬತ್ತಿದ ಸ್ವರ್ಣೆ ತುಂಬಿ ಹರಿಯಲಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ನಮಾಜ್

    ಉಡುಪಿ: ಈ ಬಾರಿ ರಾಜ್ಯ ಬರದಿಂದ ತತ್ತರಿಸಿ ಹೋಗಿದೆ. ಅತೀ ಹೆಚ್ಚು ಮಳೆ ಬೀಳುವ ಉಡುಪಿ ಜಿಲ್ಲೆಯೂ ಬರ ಪೀಡಿತ ಅಂತ ಘೋಷಣೆಯಾಗಿದೆ. ಕಳೆದೊಂದು ತಿಂಗಳಿಂದ ಸ್ವರ್ಣಾ ನದಿ ಬತ್ತಿ ಹೋಗಿದ್ದು, ಉಡುಪಿ ನಗರವಾಸಿಗಳಿಗೆ ಕುಡಿಯಲು ನೀರಿಲ್ಲ. ಪರಮಾತ್ಮ ಕರುಣೆ ತೋರು ಅಂತ ಉಡುಪಿಯ ಬ್ರಹ್ಮಗಿರಿ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಲಾಯ್ತು.

    ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತ ಮಳೆಗಾಗಿ ಕಾದು ಕಾದು ಸುಸ್ತಾದ ಜನ ದೇವರ ಮೊರೆ ಹೋಗಿದ್ದಾರೆ. ಉಡುಪಿಯ ಬ್ರಹ್ಮಗಿರಿಯಲ್ಲಿರುವ ಹಾಶೀಮಾ ಮಸೀದಿಯಲ್ಲಿ ಭಕ್ತರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 15 ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿರುತ್ತದೆ. ಆದ್ರೆ ಗಾಳಿ ಮೋಡವನ್ನೆಲ್ಲಾ ಹೊತ್ತುಕೊಂಡು ಸಾಗುತ್ತಿದೆ.

    ಈ ಸಂದರ್ಭದಲ್ಲಿ ಮಸೀದಿಯ ಮೌಲ್ವಿ ಹಶೀಂ ಉಮ್ರಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ದೇವರು ಮಳೆಯನ್ನು ಹಿಡಿದಿಟ್ಟುಕೊಂಡಿದ್ದಾನೆ. ಭೂಮಿ ಮೇಲಿರುವ ಜನಗಳು ಮಾಡಿರುವ ಪಾಪದಿಂದ ಈ ಸಮಸ್ಯೆಯಾಗಿದೆ. ಪಾಪ ಪರಿಹರಿಸಿ ಮಳೆ ಅನುಗ್ರಹಿಸಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಅಲ್ಲಾಹ್ ಕರುಣೆ ತೋರುತ್ತಾನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

    ನಮಾಜ್ ಹಾಲ್‍ನಲ್ಲಿ ಜಮಾಯಿಸಿ ಅಲ್ಲಾಹ್‍ನಲ್ಲಿ ಕಷ್ಟ ಪರಿಹರಿಸು ಅಂತ ಬೇಡಿಕೊಂಡರು. ಬರದ ಪರಿಸ್ಥಿತಿಯಲ್ಲಿ ಮಹಮ್ಮದ್ ಪೈಗಂಬರ್ ಅಂದು ಮಾಡಿದ ಪ್ರಾರ್ಥನಾ ಸಾಲುಗಳು ಖುರಾನ್‍ನಲ್ಲಿ ಉಲ್ಲೇಖವಾಗಿತ್ತು. ಅದೇ ಸಾಲುಗಳನ್ನು ಮಸೀದಿಯಲ್ಲಿ ಪಠಿಸಲಾಯ್ತು. ಉಡುಪಿಯ ಜೀವನದಿ ಸ್ವರ್ಣಾ ಹರಿವು ನಿಲ್ಲಿಸಿ ತಿಂಗಳು ಕಳೆದಿದೆ. ಹಳ್ಳಕೊಳ್ಳಗಳ ನೀರನ್ನು ಪಂಪ್ ಮಾಡಿ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತಿದೆ. ಭಗವಂತ ಕರುಣೆ ತೋರಿದ್ರೆ ಸಮಸ್ಯೆಯೆಲ್ಲಾ ಪರಿಹಾರವಾಗುತ್ತದೆ. ಪರಿಸರದ ಬಗ್ಗೆ ಜನರು ಕಾಳಜಿಯನ್ನು ಕಳೆದುಕೊಂಡಿದ್ದಾರೆ. ಮರ ಕಡಿಯಲಾಗುತ್ತಿದ್ದು, ಕಾಡು ನಾಶವಾಗಿದೆ. ಈಗಿನಿಂದಲೇ ಎಚ್ಚೆತ್ತುಕೊಳ್ಳದಿದ್ದರೆ ಈ ಸಮಸ್ಯೆ ದ್ವಿಗುಣವಾಗಲಿದೆ ಎಂದು ನಮಾಜ್ ಸಲ್ಲಿಸಿದ ಇಕ್ಬಾಲ್ ನಾಯರ್‍ಕೆರೆ ಆತಂಕ ವ್ಯಕ್ತಪಡಿಸಿದರು.