Tag: ಸ್ವದೇಶಿ

  • ಚೀನಾಗೆ ಮತ್ತೆ ಹೊಡೆತ – ಮಾರುಕಟ್ಟೆಗೆ ಬರಲಿದೆ 33 ಕೋಟಿ ಸ್ವದೇಶಿ ಹಣತೆ

    ಚೀನಾಗೆ ಮತ್ತೆ ಹೊಡೆತ – ಮಾರುಕಟ್ಟೆಗೆ ಬರಲಿದೆ 33 ಕೋಟಿ ಸ್ವದೇಶಿ ಹಣತೆ

    ನವದೆಹಲಿ: ರಕ್ಷಾ ಬಂಧನದ ಸಮಯದಲ್ಲಿ ಚೀನಾಗೆ ತಿರುಗೇಟು ನೀಡಿದ್ದ ಭಾರತ ಈಗ ದೀಪಾವಳಿ ಸಮಯದಲ್ಲೂ ಆರ್ಥಿಕವಾಗಿ ಹೊಡೆತ ನೀಡಲು ಮುಂದಾಗುತ್ತಿದೆ.

    ಈ ವರ್ಷದ ದೀಪಾವಳಿಗೆ 33 ಕೋಟಿ ಪರಿಸರ ಸ್ನೇಹಿ ಹಣತೆ ಮಾರುಕಟ್ಟೆಗೆ ಬರಲಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಈ ವಿಚಾರವನ್ನು ತಿಳಿಸಿದ್ದು, ಮುಂದಿನ ತಿಂಗಳು 33 ಕೋಟಿ ಪರಿಸರ ಸ್ನೇಹಿ ಹಣತೆಗಳು ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದ್ದಾರೆ.

    ಸ್ವದೇಶಿ ಉತ್ಪನ್ನಗಳ ರಕ್ಷಣೆ ಮತ್ತು ಉತ್ತೇಜನಕ್ಕೆ ಈ ಆಯೋಗವನ್ನು 2019ರಲ್ಲಿ ಸ್ಥಾಪನೆ ಮಾಡಲಾಗಿದೆ. ಈಗ ದೇಶದೆಲ್ಲೆಡೆ ಸಗಣಿಯಿಂದ ತಯಾರಾದ ಉತ್ಪನ್ನಗಳನ್ನು ಉತ್ತೇಜಿಸಲು ಆಯೋಗ ಮುಂದಾಗುತ್ತಿದೆ.

    ಚೀನಾದಲ್ಲಿ ತಯಾರಾದ ಹಣತೆಯನ್ನು ಈ ಬಾರಿ ತಿರಸ್ಕರಿಸಿ ಮೇಕ್‌ ಇನ್‌ ಇಂಡಿಯಾ ಅಭಿಯಾನದಲ್ಲಿ ತಯಾರಾಗಿರುವ ಹಣತೆಯನ್ನು ಬಳಸಬೇಕು. ಈ ಮೂಲಕ ದೇಶದ ಗ್ರಾಮೀಣ ಜನರ ಕೆಲಸವನ್ನು ಪ್ರೋತ್ಸಾಹಿಸಬೇಕು ಎಂದು ಜನರಲ್ಲಿ ಆಯೋಗ ಕೇಳಿಕೊಂಡಿದೆ. ಇದನ್ನೂ ಓದಿ: ಈ ವರ್ಷ ಮೇಡ್‌ ಇನ್‌ ಇಂಡಿಯಾ ರಾಖಿ – ಚೀನಾಗೆ 4 ಸಾವಿರ ಕೋಟಿ ನಷ್ಟ

     

    ಈಗಾಗಲೇ 15 ರಾಜ್ಯಗಳು ಹಣತೆ ತಯಾರಿಸಲು ಒಪ್ಪಿಕೊಂಡಿವೆ. ಆಯೋಗವೇ ನೇರವಾಗಿ ಹಣತೆಯನ್ನು ತಯಾರು ಮಾಡುವುದಿಲ್ಲ. ಬದಲಾಗಿ ಸ್ವಸಹಾಯ ಗುಂಪುಗಳಿಗೆ ಹಣತೆ ತಯಾರಿಸಲು ತರಬೇತಿ ನೀಡುವ ಕೆಲಸ ಮಾಡುತ್ತಿದೆ.

    ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೃಷಿಕರು, ಹೈನುಗಾರರು ಮತ್ತು ಉದ್ಯಮಿಗಳಿಗೆ ಸರಣಿ ವೆಬಿನಾರ್‌ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗ ತಿಳಿಸಿದೆ.

    ಗಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆಯ ಬಳಿಕ ಭಾರತ ಒಂದೊಂದೆ ನಿರ್ಧಾರದ ಕೈಗೊಳ್ಳುವ ಮೂಲಕ ಚೀನಾಗೆ ಶಾಕ್‌ ನೀಡುತ್ತಿದ್ದು, ಈ ಬಾರಿ ಭಾರೀ ಪ್ರಮಾಣದಲ್ಲಿ ಸ್ಬದೇಶಿ ರಾಖಿಗಳು ತಯಾರಾಗಿತ್ತು.

    ಪ್ರತಿ ವರ್ಷ ವರ್ತಕರು ರಕ್ಷಾ ಬಂಧನದಂದು ಚೀನಾದಿಂದ ಆಮದು ಮಾಡಿಕೊಡ ರಾಖಿಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಜೂ.10 ರಂದು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ರಾಖಿ ಹಬ್ಬವನ್ನು ಹಿಂದೂಸ್ಥಾನಿ ರಾಖಿ ಎಂದು ಆಚರಣೆ ಮಾಡಬೇಕೆಂದು ಕರೆ ನೀಡಿತ್ತು.

    ಸಿಎಐಟಿಯ ರಾಷ್ಟ್ರೀಯ ಅಧ್ಯಕ್ಷ ಬಿಸಿ ಭಾರ್ತಿಯಾ ಪ್ರತಿಕ್ರಿಯಿಸಿ, ಈ ವರ್ಷ ಒಂದೇ ಒಂದು ರಾಖಿಯನ್ನೂ ಚೀನಾದಿಂದ ಈ ಬಾರಿ ಆಮದು ಮಾಡಿಕೊಂಡಿಲ್ಲ. ಪ್ರತಿ ವರ್ಷ 6 ಸಾವಿರ ಕೋಟಿ ರೂ. ಮೌಲ್ಯದ 50 ಕೋಟಿ ರಾಖಿಗಳು ಮಾರಾಟವಾಗುತ್ತಿತ್ತು. ಇವುಗಳ ಪೈಕಿ 4 ಸಾವಿರ ಕೋಟಿ ಮೌಲ್ಯದ ಚೀನಾ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದರು.

     

  • ‘ಗ್ಲೋಕಲ್‌ ಇಂಡಿಯಾ’ ವೆಬ್‌ಸೈಟ್ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಿ ‌

    ‘ಗ್ಲೋಕಲ್‌ ಇಂಡಿಯಾ’ ವೆಬ್‌ಸೈಟ್ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಿ ‌

    ಬೆಂಗಳೂರು: ಇಲ್ಲಿಯವರೆಗೆ ಸ್ಥಳೀಯವಾಗಿ ಸಿಗಬಹುದಾದ ವಸ್ತುಗಳನ್ನು ಸ್ಥಳಕ್ಕೆ ಹೋಗಿ ಖರೀದಿಸಬೇಕಿತ್ತು. ಆದರೆ ಇನ್ನು ಮುಂದೆ ನೀವು ಕುಳಿತ ಸ್ಥಳದಲ್ಲೇ ಸ್ಥಳೀಯ ಉತ್ಪನ್ನಗಳನ್ನ ತಯಾರಿಸುವ ತಯಾರಕರ ಜೊತೆ ಮಾತನಾಡಿ ಉತ್ಪನ್ನಗಳನ್ನು ಬುಕ್ ಮಾಡಬಹುದು.

    ಹೌದು. ಕೊರೊನಾ ವಿರುದ್ಧ ಭಾರತ ಸಮರ ಮಾಡುವುದರ ಜೊತೆ ಈಗ ದೇಶವ್ಯಾಪಿ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಸಿಗಬೇಕೆಂಬ ಪ್ರಬಲವಾದ ಧ್ವನಿ ಎದ್ದಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಸ್ತುಗಳು ತಯಾರಾಗುತ್ತಿದ್ದರೂ ಪ್ರಚಾರ ಮತ್ತು ಸಂವಹನಕ್ಕೆ ಸರಿಯಾದ ವೇದಿಕೆ ಇಲ್ಲದ ಕಾರಣ ಇವುಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಯುತ್ತಿರಲಿಲ್ಲ. ಈಗ ಇವುಗಳಿಗೆ ಒಂದು ಅತ್ಯುತ್ತಮ ವೇದಿಕೆಯಾಗಲು ಯುವಾ ಬ್ರಿಗೇಡ್‌ Glocal India ಹೆಸರಿನ ಸಂಸ್ಥೆಯನ್ನು ಆರಂಭಿಸಿದೆ.

    ಸದ್ಯ ಇರುವ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ನಂತೆ ಈ www.glocalindia.org ಕಾರ್ಯ ನಿರ್ವಹಿಸುವುದಿಲ್ಲ. ನೇರವಾಗಿ ಈ ವೆಬ್‌ಸೈಟ್‌ ಮೂಲಕ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ. ಇದು ಗ್ರಾಹಕರು ಮತ್ತು ತಯಾರಕರ ಮಧ್ಯೆ ಸಂವಹನ ಕಲ್ಪಿಸುವ ವೇದಿಕೆಯಾಗಿ ಕೆಲಸ ಮಾಡುತ್ತದೆ.

    ಪ್ರತಿಯೊಂದು ಉತ್ಪನ್ನದ ಬಗ್ಗೆ ಇದರಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ತಯಾರಕರ ಸಂಪರ್ಕದ ವಿಳಾಸವನ್ನು ನೀಡಲಾಗಿದೆ. ಇದು ಸ್ಥಳೀಯ ಉತ್ಪನ್ನಗಳಿಗೆ ಮಾತ್ರ ವೇದಿಕೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಪ್ರಮುಖವಾಗಿ ಮನೆ, ಪೀಠೋಪಕರಣ, ಆಹಾರ, ಫ್ಯಾಶನ್‌, ಆಟಿಕೆ, ಸೇವೆ, ಎಲೆಕ್ಟ್ರಿಕಲ್‌, ಆರೋಗ್ಯ ಮತ್ತು ಇತರೇ ವಿಭಾಗಗಳಿವೆ.

    ಸಂಸ್ಥೆ ಹೇಳಿದ್ದು ಏನು?
    ಪ್ರಧಾನಮಂತ್ರಿ ನರೇಂದ್ರಮೋದಿಯವರ ಆತ್ಮನಿರ್ಭರ ಭಾರತ ಕನಸಿನೊಂದಿಗೆ ಯುವಾಬ್ರಿಗೇಡ್ ಹುಟ್ಟುಹಾಕಿದ ಸಂಸ್ಥೆ Glocal India. ಇದು Global ಮಟ್ಟಕ್ಕೇರಬಲ್ಲ Local ವಸ್ತುಗಳಿಗೆ Vocal ಆಗುವ ಪ್ರಯತ್ನ. ಇಲ್ಲಿ ಜಿಲ್ಲಾಶಹ ಸ್ಥಳೀಯ ಉತ್ಪನ್ನಗಳನ್ನು ಪಟ್ಟಿಮಾಡಿ ಅವುಗಳು ಸಿಗುವ ಸ್ಥಳಗಳನ್ನು ತಿಳಿಸಲು ವೇದಿಕೆ ರೂಪಿಸಿಕೊಡಲಾಗಿದೆ.

    ಆಯಾ ಸ್ಥಳೀಯ ಕಂಪೆನಿಗಳು ತಾವು Global ಆಗುವ ಅರ್ಹತೆ ಇದೆಯೋ ಇಲ್ಲವೋ ಎಂಬುದನ್ನು ಕೂಡ ತಜ್ಞರ ಸಮಿತಿ ನಿರ್ಧರಿಸಿ ಅವರಿಗೆ ಗುಣಮಟ್ಟ ಪತ್ರವನ್ನು ಕೊಡಲಾಗುತ್ತದೆ. ಮತ್ತು ಈ ವೆಬ್‌ಸೈಟ್‌ನಲ್ಲಿ ಅಂತಹ ಉತ್ತಮ ಗುಣಮಟ್ಟದ ವಸ್ತುಗಳನ್ನು ಪ್ರತ್ಯೇಕವಾಗಿ ಬಿಂಬಿಸಲಾಗುತ್ತದೆ. ಇದು ಸ್ಥಳೀಯ ವಸ್ತುಗಳಿಗೆ ವೇದಿಕೆ ಮಾತ್ರ ಆಗಿದ್ದು ಇದರ ಮೂಲಕ ಮಾರಾಟ ನಡೆಯುವುದಿಲ್ಲ. ಬದಲಿಗೆ ಉತ್ಪಾದಕರ ನೇರ ಸಂಪರ್ಕವನ್ನು ಗ್ರಾಹಕರಿಗೆ ಈ ಮೂಲಕ ಕಲ್ಪಿಸಿಕೊಡಲಾಗುತ್ತದೆ.

  • ಬೆಂಗ್ಳೂರಿನ ಕಂಪನಿಯಿಂದ ಸ್ವದೇಶಿ ಸ್ನೈಪರ್ಸ್ ರೈಫಲ್ ಅಭಿವೃದ್ಧಿ

    ಬೆಂಗ್ಳೂರಿನ ಕಂಪನಿಯಿಂದ ಸ್ವದೇಶಿ ಸ್ನೈಪರ್ಸ್ ರೈಫಲ್ ಅಭಿವೃದ್ಧಿ

    ಬೆಂಗಳೂರು: ಭಾರತ ಮಿಲಿಟರಿಗೆ ಸಂಬಂಧಿಸಿದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಹೆಚ್ಚು. ಆದರೆ ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಈಗ ದೇಶದಲ್ಲಿ ರಕ್ಷಣಾ ಉತ್ಪಾದನೆ ಮಾಡುವ ಖಾಸಗಿ ಫ್ಯಾಕ್ಟರಿಗಳು ಆರಂಭಗೊಂಡಿದ್ದು ಆದರಲ್ಲೂ ಬೆಂಗಳೂರಿನ ಕಂಪನಿಯೊಂದು ಎರಡು ಸ್ನೈಪರ್ಸ್ ಗನ್ ಗಳನ್ನು ಅಭಿವೃದ್ಧಿ ಪಡಿಸಿದೆ.

    ಬೆಂಗಳೂರಿನ ಕೋರಮಂಗಲ ಮೂಲದ ಎಸ್‍ಎಸ್‍ಎಸ್ ಡಿಫೆನ್ಸ್ ಕಂಪನಿ ಸ್ವದೇಶಿ ಎರಡು ಸ್ನೈಪರ್ ರೈಫಲ್ ಗಳನ್ನು ಅಭಿವೃದ್ಧಿ ಪಡಿಸಿದೆ. ಶೀಘ್ರವೇ ಈ ಕಂಪನಿ ರೈಫಲ್ ಗಳು ಸೇನೆ ಪ್ರಾಯೋಗಿಕವಾಗಿ ಬಳಸಿಕೊಳ್ಳಲಿದೆ.

    ಜಿಗಣಿಯಲ್ಲಿ 80 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಜಾಗದಲ್ಲಿ ಕಂಪನಿ ಫ್ಯಾಕ್ಟರಿ ತೆರೆದಿದೆ. ಭಾರತೀಯ ಸೇನೆಯ ಜೊತೆ ವಿದೇಶಕ್ಕೂ ರೈಫಲ್ ಗಳನ್ನು ರಫ್ತು ಮಾಡಲು ಈಗ ಕಂಪನಿ ಮುಂದಾಗಿದೆ.

    ಈ ಸಂಬಂಧ ಖಾಸಗಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್‍ಎಸ್‍ಎಸ್ ಡಿಫೆನ್ಸ್ ಕಂಪನಿಯ ಸಿಇಒ ವಿವೇಕ್ ಕೃಷ್ಣನ್, ಭಾರತದಲ್ಲಿ ಮೊದಲ ಬಾರಿಗೆ ನಾವು ಸ್ವದೇಶಿ ಸ್ನೈಪರ್ಸ್ ರೈಫಲ್ಸ್ ಗಳನ್ನು ಅಭಿವೃದ್ಧಿ ಪಡಿಸಿದ್ದೇವೆ. ವಿದೇಶದಿಂದ ತಂತ್ರಜ್ಞಾನವನ್ನು ಆಮದು ಮಾಡಿ ನಾವು ಇಲ್ಲಿ ಜೋಡಣೆ ಮಾಡಿಲ್ಲ. ಮದ್ದುಗುಂಡುಗಳು ಜೊತೆ ರೈಫಲ್ಸ್ ಗೆ ಬೇಕಾದ ಎಲ್ಲ ಸಾಮಾಗ್ರಿಗಳನ್ನು ನಾವೇ ಅಭಿವೃದ್ಧಿ ಪಡಿಸಿದ್ದೇವೆ. ಇಲ್ಲಿಯವರೆಗೆ ನಮ್ಮ ಸೇನೆ ಈ ಸಾಮಾಗ್ರಿಗಳನ್ನು ವಿವಿಧ ಕಂಪನಿಗಳಿಂದ ಖರೀದಿಸುತಿತ್ತು ಎಂದು ತಿಳಿಸಿದ್ದಾರೆ. ಇದನ್ನು ಓದಿ: ಭಾರತದಲ್ಲಿ ತಯಾರಾಗಲಿದೆ ಎಕೆ-203 ರೈಫಲ್? ವಿಶೇಷತೆ ಏನು? ಅಗತ್ಯ ಏನು? – ಇಲ್ಲಿದೆ ಪೂರ್ಣ ಮಾಹಿತಿ

    2014ರಲ್ಲಿ ಮೋದಿ ಸರ್ಕಾರ ಬಂದ ನಂತರ ಭಾರತದಲ್ಲಿ ಮೊದಲ ಬಾರಿಗೆ ಆಯುಧ ತಯಾರಿಸುವ ಕಂಪನಿಗಳು ಆರಂಭಗೊಂಡಿತು. ಈಗಾಗಲೇ ಕೆಲವು ಕಂಪನಿಗಳು ವಿದೇಶಿ ಕಂಪನಿಗಳ ಜೊತೆ ಮಾತುಕತೆ ನಡೆಸಿ ಹಕ್ಕುಗಳನ್ನು ಪಡೆದು ಆಯುಧಗಳನ್ನು ನಿರ್ಮಿಸುತ್ತಿದೆ. ಆದರೆ ಇಲ್ಲಿಯವರೆಗೆ ಸ್ನೈಪರ್ಸ್ ರೈಫಲ್ ತಯಾರಿಸಿದ ಬಗ್ಗೆ ಯಾವುದೇ ಕಂಪನಿ ಘೋಷಣೆ ಮಾಡಿಲ್ಲ.

    ಭಾರತೀಯ ಸೇನೆ ಸ್ನೈಪರ್ ರೈಫಲ್ ಗಳನ್ನು ಖರೀದಿಸಲು ಮುಂದಾಗುತ್ತಿದೆ. ಕಳೆದ ಬಾರಿ 20 ಕಂಪನಿಗಳು ಟೆಂಡರ್ ನಲ್ಲಿ ಭಾಗವಹಿಸಿತ್ತು. ಆದರೆ ಯಾವೊಂದು ಕಂಪನಿಗಳು ಗನ್ ಜೊತೆ ಬೇಕಾದ ಎಲ್ಲ ಸಾಮಾಗ್ರಿಗಳನ್ನು(ಮದ್ದು ಗುಂಡುಗಳು, ಗನ್ ಪೌಡರ್) ನೀಡಲು ಒಪ್ಪದ ಪರಿಣಾಮ ಇನ್ನೂ ಸ್ನೈಪರ್ ರೈಫಲ್ ಗಳು ಭಾರತ ಸೇನೆಯ ಬತ್ತಳಿಕೆಯನ್ನು ಸೇರಿಲ್ಲ.

    ಎಸ್‍ಎಸ್‍ಎಸ್ ಡಿಫೆನ್ಸ್ ಎರಡು ರೈಫಲ್ ಗಳನ್ನು ಅಭಿವೃದ್ಧಿ ಪಡಿಸಿದೆ. ‘ವೈಪರ್’ .308/7.62*51 ಮಿ.ಮೀ ಕಾಟ್ರಿಡ್ಜ್ ಹೊಂದಿದ್ದರೆ ‘ಸಬರ್’ .338 ಲಪುವಾ ಮ್ಯಾಗ್ನಂ ಕಾಟ್ರಿಡ್ಜ್ ಹೊಂದಿದೆ.

    ವೈಪರ್ 1 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಭೇದಿಸುವ ಸಾಮರ್ಥ್ಯ ಹೊಂದಿದ್ದರೆ, ಸಬರ್ 1.5 ಕಿ.ಮೀ ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ. ರೈಫಲ್ ನಿಖರತೆಯನ್ನು ಅಳೆಯುವ ಮಿನಿಟ್ ಆಫ್ ಆಂಗಲ್ ನಲ್ಲೂ ವಿಶ್ವದರ್ಜೆಗೆ ಹೋಲಿಸಿದರೆ ನಮ್ಮದು ಶ್ರೇಷ್ಠವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

    7.6251 ಮಿ.ಮೀ ಮತ್ತು .338 ಲಾಪುವಾ ಮ್ಯಾಗ್ನಂ ಕ್ಯಾಲಿಬರ್ ರೈಫಲ್ ಗಳನ್ನು ವಿಶ್ವದ ಮಿಲಿಟರಿಯಲ್ಲಿ ಬಳಕೆ ಮಾಡುತ್ತಾರೆ ಎಂದು ಎಸ್‍ಎಸ್‍ಎ ಡಿಫೆನ್ಸ್ ಆಡಳಿತ ನಿರ್ದೇಶಕ ಸತೀಶ್. ಆರ್ ಹೇಳಿದ್ದಾರೆ.

    ಕಂಪನಿ 20 ಕೋಟಿ ರೂ. ಹೂಡಿಕೆ ಮಾಡಿ ಜಿಗಣಿಯಲ್ಲಿ 80 ಸಾವಿರ ಚದರ ಅಡಿ ಜಾಗದಲ್ಲಿ ಫ್ಯಾಕ್ಟರಿ ನಿರ್ಮಾಣಗೊಂಡಿದ್ದು ವಾರ್ಷಿಕವಾಗಿ 15 ಸಾವಿರ ಆಯುಧಗಳನ್ನು ತಯಾರಿಸಲು ಗುರಿಯನ್ನು ಹಾಕಿಕೊಳ್ಳಲಾಗಿದೆ. ಬೆಂಗಳೂರು ಅಲ್ಲದೇ ಆಂಧ್ರಪ್ರದೇಶದ ಅನಂತಪುರದಲ್ಲಿ 80 ಎಕ್ರೆ ಜಾಗವನ್ನು ಕಂಪನಿ ಖರೀದಿಸಿದೆ.

  • ಇನ್ನು ಮುಂದೆ ಆನ್‍ಲೈನಲ್ಲೂ ಪತಂಜಲಿ ಉತ್ಪನ್ನಗಳನ್ನು ಖರೀದಿಸಿ

    ಇನ್ನು ಮುಂದೆ ಆನ್‍ಲೈನಲ್ಲೂ ಪತಂಜಲಿ ಉತ್ಪನ್ನಗಳನ್ನು ಖರೀದಿಸಿ

    ನವದೆಹಲಿ: ತ್ವರಿತವಾಗಿ ಮಾರಾಟಮಾಗುವ ಗ್ರಾಹಕ ಉತ್ಪನ್ನ (ಎಫ್‍ಎಂಸಿಜಿ) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಬಾ ರಾಮ್ ದೇವ್ ಅವರ ಸ್ವದೇಶಿ ಪತಂಜಲಿ ಉತ್ಪನ್ನಗಳನ್ನು ಗ್ರಾಹಕರು ಇನ್ನು ಮುಂದೆ ಆನ್ ಲೈನ್ ಶಾಪಿಂಗ್ ತಾಣದಲ್ಲೂ ಖರೀದಿಸಬಹುದು.

    ಫ್ಲಿಪ್‍ಕಾರ್ಟ್, ಅಮೆಜಾನ್, ನೆಟ್ ಮೆಡ್ಸ್, ಶಾಪ್ ಕ್ಲೂಸ್, ಪೇಟಿಎಂ, ಗ್ರೋಫರ್ಸ್, 1ಎಂಜಿ ಸೇರಿದಂತೆ ಇತರ ಶಾಪಿಂಗ್ ತಾಣಗಳಲ್ಲೂ ಪತಂಜಲಿ ಉತ್ಪನ್ನಗಳು ಲಭ್ಯವಿರಲಿದೆ. ರೀಟೇಲ್ ಮಾರುಕಟ್ಟೆಯ ಜೊತೆಗೆ ಆನ್ ಲೈನ್‍ನಲ್ಲೂ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಪತಂಜಲಿ ಉತ್ಪನ್ನಗಳನ್ನು ಆನ್ ಲೈನಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.

    ಪತಂಜಲಿ ಕಂಪೆನಿಯ ಸಿಇಒ ಬಾಲಕೃಷ್ಣ ಮಾತನಾಡಿ, ಯಾರಿಗೆ ರಿಟೇಲ್ ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲವೋ ಅವರಿಗಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.

    ಫ್ರಾನ್ಸ್ ಕಂಪೆನಿಯಿಂದ ಹೂಡಿಕೆ: ಫ್ರಾನ್ಸ್ ಮೂಲದ ಸಂಸ್ಥೆಯೊಂದು ಪತಂಜಲಿ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡಲು ಮುಂದೆ ಬಂದಿದೆ. ಫ್ರಾನ್ಸ್ ನ ಚಿಲ್ಲರೆ ಮಾರುಕಟ್ಟೆ ದೈತ್ಯ ಸಂಸ್ಥೆ ಮೊಯೆಟ್ ಹೆನ್ನೆಸ್ಸಿ-ಲೂಯಿ ವಿಟ್ಟೊನ್ ಗ್ರೂಪ್ ಪತಂಜಲಿ ಸಂಸ್ಥೆಯಲ್ಲಿ ಸುಮಾರು 500 ಮಿಲಿಯನ್ ಅಮೆರಿಕನ್ ಡಾಲರ್ ( ಅಂದಾಜು 3250 ಕೋಟಿ ರೂ.) ಹೂಡಿಕೆ ಮಾಡಲು ಮುಂದಾಗಿದೆ.

    ವಿದೇಶಿ ತಂತ್ರಜ್ಞಾನ ಅಳವಡಿಕೆ ಮಾಡಲು ಪತಂಜಲಿ ಮುಂದಾಗಿದ್ದು ಈಗ ಈಗ ವಿದೇಶಿ ಬಂಡವಾಳವನ್ನೂ ಆಕರ್ಷಿಸಲಾಗುತ್ತಿದೆ. ವಿದೇಶಿ ಬಂಡವಾಳ ಬರುತ್ತದೆ ಎನ್ನುವ ಮಾತ್ರಕ್ಕೆ ಮಾತ್ರಕ್ಕೆ ನಮ್ಮ ಪಾಲುದಾರಿಕೆಯನ್ನು ಬಿಟ್ಟುಕೊಡುತ್ತೇವೆ ಎಂದರ್ಥವಲ್ಲ ಎಂದು ಪತಂಜಲಿಯ ವಕ್ತಾರ ಎಸ್.ಕೆ. ಗುಪ್ತಾ ತಿಜರವಾಲಾ ತಿಳಿಸಿದ್ದಾರೆ.

    ಔಷಧ ಮತ್ತು ಸುಗಂಧ ಸಸ್ಯಗಳ ಕೃಷಿಯನ್ನು ಅಸ್ಸಾಂ, ಛತ್ತೀಸ್‍ಗಢ, ನಾಗಪುರ, ಗ್ರೇಟರ್ ನೋಯ್ಡಾ ಆಂಧ್ರಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ರಾಜಸ್ಥಾನಗಳ 10,100 ಎಕರೆ ಪ್ರದೇಶದಲ್ಲಿ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ 5 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು ಎಂದು ಪತಂಜಲಿ ಕಂಪೆನಿ ತಿಳಿಸಿದೆ.