Tag: ಸ್ವಚ್ಛ ಭಾರತ ಅಭಿಯಾನ

  • ಮೋದಿಗೆ ‘ಗ್ಲೋಬಲ್ ಗೋಲ್‍ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದ ಬಿಲ್‍ಗೇಟ್ಸ್

    ಮೋದಿಗೆ ‘ಗ್ಲೋಬಲ್ ಗೋಲ್‍ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದ ಬಿಲ್‍ಗೇಟ್ಸ್

    – ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವಮನ್ನಣೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸಿನ ಕೂಸು ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವಮನ್ನಣೆ ದೊರಕಿದ್ದು, ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರಿಗೆ ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ‘ಗ್ಲೋಬಲ್ ಗೋಲ್‍ಕೀಪರ್’ ಪ್ರಶಸ್ತಿ (ಜಾಗತಿಕ ಗುರಿ ಸಾಧಕ ಪ್ರಶಸ್ತಿ) ಪ್ರದಾನ ಮಾಡಿ ಗೌರವಿಸಿದೆ.

    ನ್ಯೂಯಾರ್ಕ್‌ನಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮೋದಿ ಅವರಿಗೆ ಗ್ಲೋಬಲ್ ಗೋಲ್‍ಕೀಪರ್ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ರೂವಾರಿಯಾದ ಪ್ರಧಾನಿಗೆ ಪ್ರತಿಷ್ಠಿತ ಗ್ಲೋಬಲ್ ಗೋಲ್‍ಕೀಪರ್ ಪ್ರಶಸ್ತಿ ಒಲಿದಿದೆ.

    ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಈ ಅಭಿಯಾನದಿಂದ 3 ಲಕ್ಷಕ್ಕೂ ಅಧಿಕ ಮಂದಿ ಕಾಯಿಲೆಗಳಿಂದ ದೂರ ಉಳಿದಿದ್ದಾರೆ. ಹಿಂದೆಂದೂ ಈ ರೀತಿ ಅಭಿಯಾನ ನಡೆದಿರಲಿಲ್ಲ ಎಂದಿದೆ. ಗಾಂಧೀಜಿ ಅವರ 150ನೇ ಜನ್ಮದಿನೋತ್ಸವದ ಸಂದರ್ಭದಲ್ಲೇ ಗೇಟ್ಸ್ ಫೌಂಡೇಶನ್ ನನಗೆ ಗ್ಲೋಬಲ್ ಗೋಲ್‍ಕೀಪರ್ ಪ್ರಶಸ್ತಿ ನೀಡಿದೆ. 130 ಕೋಟಿ ಜನರು ಪ್ರತಿಜ್ಞೆ ಮಾಡಿದಾಗ, ಯಾವುದೇ ಸವಾಲನ್ನೂ ಕೂಡ ಎದುರಿಸಬಹುದು ಎಂದು ಮೋದಿ ಟ್ವೀಟ್ ಮಾಡಿ ಖುಷಿಯನ್ನ ಹಂಚಿಕೊಂಡಿದ್ದಾರೆ.

    ಗೇಟ್ಸ್ ಫೌಂಡೇಷನ್‍ನಿಂದ ನನಗೆ ನೀಡಿರುವ ಗ್ಲೋಬಲ್ ಗೋಲ್‍ಕೀಪರ್ ಪ್ರಶಸ್ತಿಯನ್ನು ನಾನು ದೇಶದ 130 ಕೋಟಿ ಜನತೆಗೆ ಅರ್ಪಿಸುತ್ತಿದ್ದೇನೆ. ದೇಶದ ಜನತೆ ಒಗ್ಗಟ್ಟಿನಿಂದ ಸ್ವಚ್ಛ ಭಾರತ ಅಭಿಯಾನದಡಿ ಕೆಲಸ ಮಾಡಿ ಭಾರತವನ್ನು ಸ್ವಚ್ಛಗೊಳಿಸಲು ಸಹಕರಿಸಿದ್ದಾರೆ. ನೈರ್ಮಲ್ಯ ದೂರ ಮಾಡುವಲ್ಲಿ ಇಂದು ಭಾರತ ಯಶಸ್ವಿಯಾಗಿದೆ. ಇದರಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಹಾಯವಾಗಿದೆ ಎನ್ನುವುದು ನನಗೆ ತುಂಬ ಸಂತೋಷ ತಂದಿದೆ ಎಂದು ಮೋದಿ ಹೇಳಿದ್ದಾರೆ.

    2014ರಲ್ಲಿ ಮೋದಿ ಅವರು ಗಾಂಧೀಜಿ ಹುಟ್ಟಿದ ದಿನವಾದ ಅಕ್ಟೋಬರ್ 2 ರಂದು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಗೊಳಿಸಿದ್ದರು. ಈ ಅಭಿಯಾನಕ್ಕೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ವತಃ ನರೇಂದ್ರ ಮೋದಿ ಅವರೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಜಾಗೃತಿ ಮೂಡಿಸಿ, ದೇಶದ ಜನತೆಯ ಗಮನ ಸೆಳೆದಿದ್ದರು. ಇದೀಗ ಈ ಸ್ವಚ್ಛ ಭಾರತ ಅಭಿಯಾನ ಕೇವಲ ಭಾರತವಷ್ಟೇ ಅಲ್ಲದೆ ವಿಶ್ವದ ಗಮನ ಸೆಳೆದಿದೆ. ದೇಶವನ್ನು ಸ್ವಚ್ಛಗೊಳಿಸಲು ಆರಂಭವಾದ ಅಭಿಯಾನಕ್ಕೆ ಈಗ ವಿಶ್ವ ಮನ್ನಣೆ ದೊರಕಿರುವುದು ದೇಶಕ್ಕೆ ಹೆಮ್ಮೆ ತಂದಿದೆ.

  • ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ಮೋದಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ

    ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ಮೋದಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ

    ನವದೆಹಲಿ: ವಿಭಿನ್ನ ಯೋಜನೆಗಳು ಹಾಗೂ ಪರಿಶ್ರಮದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದು, ಇದೀಗ ಮತ್ತೊಂದು ಗೌರವವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ‘ಸ್ವಚ್ಛ ಭಾರತದ’ ಅಭಿಯಾನಕ್ಕಾಗಿ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸೋಮವಾರ ಪ್ರಶಸ್ತಿಯನ್ನು ಘೋಷಿಸಿದೆ.

    ಈ ಕುರಿತು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಇಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಈ ತಿಂಗಳ ಕೊನೆಯಲ್ಲಿ ಮೋದಿ ಅಮೆರಿಕಾಗೆ ಭೇಟಿ ನೀಡಲಿದ್ದು, ಅಂದು ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ನವೀನ ಕಾರ್ಯಕ್ರಮಗಳಿಗೆ ವಿಶ್ವದಾದ್ಯಂತ ಪ್ರಶಸ್ತಿಗಳು ಲಭಿಸುತ್ತಿದ್ದು, ಇದೀಗ ಈ ಪಟ್ಟಿಗೆ ಮತ್ತೊಂದು ಪ್ರಶಸ್ತಿ ಸೇರ್ಪಡೆಯಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಮತ್ತೊಂದು ಕ್ಷಣವಾಗಿದೆ. ಅಮೆರಿಕಾಗೆ ತೆರಳಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ತಮ್ಮ ಮೊದಲ ಅವಧಿಯಲ್ಲಿ ಪ್ರಾರಂಭಿಸಿದ ಮೊದಲ ಕೆಲವು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಸ್ವಚ್ಛ ಭಾರತ ಅಭಿಯಾನವೂ ಒಂದಾಗಿದೆ. ಅಕ್ಟೋಬರ್ 2ರಂದು ಮಹಾತ್ಮಾ ಗಾಂಧಿ ಅವರ ಜನ್ಮದಿನಾಚರಣೆಯಂದು ಈ ಅಭಿಯಾನವನ್ನು ಪ್ರಧಾನಿ ಮೋದಿ ಪ್ರಾರಂಭಿಸಿದ್ದರು.

    ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಒಂದು ಖಾಸಗಿ ಪ್ರತಿಷ್ಠಾನವಾಗಿದ್ದು, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ ಗೇಟ್ಸ್ ಅವರದ್ದಾಗಿದೆ.

    ಈ ವರ್ಷದ ಆರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ ಮೆಗಾ ಆರೋಗ್ಯ ಯೋಜನೆ, 10 ಕೋಟಿಗೂ ಅಧಿಕ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷಿಯ ‘ಆಯುಷ್ಮಾನ್ ಭಾರತ್’ ಯೋಜನೆಗೆ ಮೋದಿಯನ್ನು ಬಿಲ್ ಗೇಟ್ಸ್ ಶ್ಲಾಘಿಸಿದ್ದರು. ಮೇ 2018ರಂದು ಆಧಾರ್ ತಂತ್ರಜ್ಞಾನವು ಯಾವುದೇ ಗೌಪ್ಯತೆಗೆ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂದು ಹೇಳುವ ಮೂಲಕ ಯೋಜನೆಯನ್ನು ಬೆಂಬಲಿಸಿದ್ದರು.

  • ಸ್ವಚ್ಛ ಭಾರತ್ ಶೌಚಾಲಯದ ಟೈಲ್ಸ್ ಮೇಲೆ ಮಹಾತ್ಮ ಗಾಂಧಿ, ಅಶೋಕ ಚಕ್ರ

    ಸ್ವಚ್ಛ ಭಾರತ್ ಶೌಚಾಲಯದ ಟೈಲ್ಸ್ ಮೇಲೆ ಮಹಾತ್ಮ ಗಾಂಧಿ, ಅಶೋಕ ಚಕ್ರ

    ನವದೆಹಲಿ: ಗಾಂಧಿ ಜಯಂತಿಯಂದು ಆರಂಭಗೊಂಡಿದ್ದ ಸ್ವಚ್ಛಭಾರತ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಶೌಚಾಲಯದಲ್ಲಿ ಗಾಂಧೀಜಿ ಮತ್ತು ಅಶೋಕ ಚಕ್ರದ ಚಿತ್ರಗಳುಳ್ಳ ಟೈಲ್ಸ್ ಗಳನ್ನು ಬಳಸಿ ಅವಮಾನ ಮಾಡಲಾಗಿದೆ.

    ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆಯ ಅಭಿಯಾನದ ಅಡಿ ನಿರ್ಮಿಸಲಾದ ಶೌಚಾಲಯದ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಪೂಜ್ಯ ಗಾಂಧೀಜಿ ಅವರ ಭಾವಚಿತ್ರವುಳ್ಳ ಟೈಲ್ಸ್ ಗಳನ್ನು ಬಳಸಿ ಶೌಚಾಲಯ ನಿರ್ಮಿಸಿರುವುದು ತಪ್ಪು. ಈ ರೀತಿ ಮಾಡಿ ರಾಷ್ಟ್ರಪಿತ ಹಾಗೂ ಆಶೋಕ ಚಕ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ.

    ಸದ್ಯ ಈ ಶೌಚಾಲಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಈ ಬಗ್ಗೆ ಎಲ್ಲೆಡೆ ಬಾರೀ ವಿರೋಧ ವ್ಯಕ್ತವಾಗುತ್ತಿದೆ.

    ದಿಬಾಯ್ ತಹಸೀಲ್‍ನ ಇಚ್ಚವರಿ ಗ್ರಾಮದಲ್ಲಿ `ಸ್ವಚ್ಛ ಭಾರತ’ ಅಭಿಯಾನದಡಿ ಸುಮಾರು 508 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 13 ಶೌಚಾಲಯಗಳಲ್ಲಿ ಗಾಂಧೀಜಿ ಹಾಗೂ ಅಶೋಕ ಚಕ್ರ ಚಿತ್ರವಿರುವ ಟೈಲ್ಸ್ ಗಳನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಈಗಾಗಲೇ ಇದಕ್ಕೆ ಕಾರಣರಾದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಗ್ರಾಮದ ಸರಪಂಚ್ ವಿರುದ್ಧವೂ ಕ್ರಮಕೈಗೊಂಡಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿ ಅಮರ್ಜಿತ್ ಸಿಂಗ್ ಹೇಳಿದ್ದಾರೆ.

    ವಾರದ ಹಿಂದೆಯೇ ಶೌಚಾಲಯಗಳನ್ನು ನಿರ್ಮಿಸಲು ಈ ಟೈಲ್ಸ್ ಗಳನ್ನು ಬಳಸಲಾಗಿದೆ. ಹಾಗೆಯೇ ಇದನ್ನು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸಲಾಗಿತ್ತು. ಆದರೆ ಈ ಬಗ್ಗೆ ನಮಗೆ ತಿಳಿಯುತ್ತಿದ್ದಂತೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಏಪ್ರಿಲ್‍ನಲ್ಲಿ ಜಟ್ವಾಡ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಜನರು ಮತ್ತೆ ಶೌಚಕ್ಕಾಗಿ ಬಯಲುಗಳಿಗೆ ಹೋಗಲು ಶುರುಮಾಡಿದ್ದಾರೆ.

    ಈ ಪ್ರದೇಶಗಳಲ್ಲಿ ವಾಸಿಸುವವರು ದಿನ ಕೂಲಿ ಕಾರ್ಮಿಕರು. ಹೀಗಾಗಿ ಪ್ರತಿನಿತ್ಯ ಈ ಶೌಚಾಲಯಗಳಿಗೆ ಹಣ ನೀಡಿ ಹೋಗಲು ನಮಗೆ ಸಾಧ್ಯವಿಲ್ಲ, ಅದಕ್ಕೆ ಬಯಲುಗಳಿಗೆ ಹೋಗುತ್ತೇವೆ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಗುಜರಾತ್ ಚುನಾವಣೆ ಹೊತ್ತಲ್ಲೇ ಬಿಡುಗಡೆಯಾಗಲಿದೆ ಮೋದಿ ಸಿನಿಮಾ

    ಗುಜರಾತ್ ಚುನಾವಣೆ ಹೊತ್ತಲ್ಲೇ ಬಿಡುಗಡೆಯಾಗಲಿದೆ ಮೋದಿ ಸಿನಿಮಾ

    ಅಹಮದಾಬಾದ್: ಗುಜರಾತ್ ಚುನಾವಣೆ ಹೊತ್ತಲ್ಲೇ ಮೋದಿ ಕುರಿತ ಸಿನಿಮಾ ರಿಲೀಸ್ ಆಗುತ್ತಿದೆ. ಮೋದಿ ಕಾ ಗಾಂವ್ ಅಂದ್ರೆ ಮೋದಿಯ ಹಳ್ಳಿ ಎನ್ನುವ ಹೆಸರಿನ ಸಿನಿಮಾ ಬಿಡುಗಡೆಯಾಗಲಿದೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಕುರಿತು ಸಿನಿಮಾ ಆಗಿದ್ದು, ಸೆನ್ಸಾರ್ ಬೋರ್ಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಲು 9 ತಿಂಗಳು ತೆಗೆದುಕೊಂಡಿತ್ತು. ಈ ಸಿನಿಮಾ ಈಗ ಡಿಸೆಂಬರ್ ಮೊದಲ ವಾರ ಅಥವಾ ಎರಡನೇ ವಾರ ತೆರೆ ಕಾಣಲಿದೆ. ಡಿಸೆಂಬರ್ 9ರಂದು ಗುಜರಾತ್‍ ನಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ ಎಂದು ವರದಿಯಾಗಿದೆ.

    ಚಿತ್ರದ ನಿರ್ಮಾಪಕ ಸುರೇಶ್ ಜಾ, 9 ತಿಂಗಳು ಸಿನಿಮಾಕ್ಕಾಗಿ ಅಲೆದು ಈಗ ನೆಮ್ಮದಿಯಾಗಿದ್ದಾರೆ. ಈಗ ನಾನು ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡುತ್ತೇನೆ. ಡಿಸೆಂಬರ್ ಮೊದಲ ವಾರ ಅಥವಾ ಎರಡನೇ ವಾರ ಈ ಸಿನಿಮಾವನ್ನು ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ. ಗುಜರಾತ್ ನ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುವ ತಯಾರಿ ನಡೆಸುತ್ತಿದ್ದೇವೆ. ಅಷ್ಟೇ ಅಲ್ಲದೇ ದೇಶದ ವಿವಿಧ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಸುರೇಶ್ ಜಾ ತಿಳಿಸಿದ್ದಾರೆ.

    ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರಕ್ಕೆ ನಾಗೇಂದ್ರ ಎಂದು ಹೆಸರಿಡಲಾಗಿದೆ. ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಅಭಿನಯಿಸಿದ್ದ ಥೇಠ್ ಮೋದಿಯಂತೆ ಕಾಣುವ ವಿಕಾಸ್ ಮಾಹಂತೆ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಡಿಜಿಟಲ್ ಇಂಡಿಯಾ, ಸರ್ಜಿಕಲ್ ಸ್ಟ್ರೈಕ್, ಸ್ವಚ್ಛ ಭಾರತ ಅಭಿಯಾನ, ನೋಟು ನಿಷೇಧದಂತಹ ಮೋದಿ ಕೈಗೊಂಡ ದಿಟ್ಟ ನಿರ್ಧಾರಗಳ ಬಗ್ಗೆ ಸಿನಿಮಾದಲ್ಲಿ ಚಿತ್ರಿಸಲಾಗಿದೆ.

  • ಬಿಹಾರದಲ್ಲಿ ಮಹಿಳೆಯರಿಂದ ಕಸದಬುಟ್ಟಿಗೆ ಪೂಜೆ! ವಿಡಿಯೋ ನೋಡಿ

    ಬಿಹಾರದಲ್ಲಿ ಮಹಿಳೆಯರಿಂದ ಕಸದಬುಟ್ಟಿಗೆ ಪೂಜೆ! ವಿಡಿಯೋ ನೋಡಿ

    ಪಾಟ್ನಾ: ದೇವಸ್ಥಾನದಲ್ಲಿ ಇಟ್ಟಿದ್ದ ಕಾಂಗರೂ ಆಕೃತಿಯ ಕಸದಬುಟ್ಟಿಗೆ ಪೂಜೆ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚಿಗೆ ಬಿಹಾರದಲ್ಲಿ ನಡೆದ ಚಾತ್‍ಪೂಜಾ ಕಾರ್ಯಕ್ರಮದಲ್ಲಿ ಮಹಿಳೆಯರು ಕಾಂಗರೂ ಆಕೃತಿಯ ಕಸದಬುಟ್ಟಿಗೆ ಪೂಜೆಮಾಡಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

    ವಿಡಿಯೋದಲ್ಲೇನಿದೆ: ದೇವಸ್ಥಾನದ ಹೊರಗಡೆ ಇಟ್ಟಿದ್ದ ಕಾಂಗರೂ ಕಸದಬುಟ್ಟಿಯ ಮೇಲೆ ಮೂರು ಜನ ಮಹಿಳೆಯರು ಮೊದಲು ಚೊಂಬಿನಿಂದ ನೀರನ್ನು ಹಾಕಿ, ನಂತರದಲ್ಲಿ ಅವರಲ್ಲಿನ ಒಬ್ಬ ಮಹಿಳೆ ಶಿರಬಾಗಿ ಹೂವುಗಳನ್ನು ಹಾಕಿ ಪ್ರಾರ್ಥಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ನೋಡಿದವರು ಕಸದಬುಟ್ಟಿ ಹಾಳಾಗದಂತೆ ಕಾಪಾಡಲು ಈ ರೀತಿಯಲ್ಲಿ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ದೇವರಿಗೆ ಮತ್ತು ಕಸದಬುಟ್ಟಿಗೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮುರ್ಖರು, ಅಜ್ಞಾನಿಗಳು ದೇವರ ಮೂರ್ತಿಯನ್ನು ಬಿಟ್ಟು ಕಸದಬುಟ್ಟಿಗೆ ಪೂಜೆ ಸಲ್ಲಿಸಿದ್ದಾರೆಂದು ಗೇಲಿ ಮಾಡಿದ್ದಾರೆ.

    https://twitter.com/Sassy_Soul_/status/924223258789949440?ref_src=twsrc%5Etfw&ref_url=http%3A%2F%2Fwww.india.com%2Fbuzz%2Fvideo-of-women-offering-prayers-to-dustbin-god-in-a-bihar-temple-goes-viral-jai-ho-swachh-bharat-abhiyaan-2577450%2F

    https://twitter.com/priyathomas/status/924247233226092544?ref_src=twsrc%5Etfw&ref_url=http%3A%2F%2Fwww.india.com%2Fbuzz%2Fvideo-of-women-offering-prayers-to-dustbin-god-in-a-bihar-temple-goes-viral-jai-ho-swachh-bharat-abhiyaan-2577450%2F

     

  • ಶೌಚಾಲಯ ಕಟ್ಟದಿದ್ರೆ, ನಿಮ್ಮ ಹೆಂಡ್ತಿಯರನ್ನ ಮಾರ್ಕೊಳ್ಳಿ: ಜಿಲ್ಲಾ ಮ್ಯಾಜಿಸ್ಟ್ರೇಟ್

    ಶೌಚಾಲಯ ಕಟ್ಟದಿದ್ರೆ, ನಿಮ್ಮ ಹೆಂಡ್ತಿಯರನ್ನ ಮಾರ್ಕೊಳ್ಳಿ: ಜಿಲ್ಲಾ ಮ್ಯಾಜಿಸ್ಟ್ರೇಟ್

    ಔರಾಂಗಬಾದ್: ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯದ ಔರಂಗಾಬಾದ್ ಜೆಲ್ಲೆಯ ಮ್ಯಾಜಿಸ್ಟ್ರೇಟ್ ಕನ್ವಾಲ್ ತನುಜ್ ತಮ್ಮ ಭಾಷಣದಲ್ಲಿ ಆವೇಶಭರಿತರಾಗಿ ಶೌಚಾಲಯ ಕಟ್ಟಿಸಿಕೊಳ್ಳದವರು ನಿಮ್ಮ ಪತ್ನಿಯರನ್ನು ಮಾರಿಕೊಳ್ಳಿ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಜಿಲ್ಲೆಯ ಜಾಮ್‍ಹೋರ್ ಎಂಬ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಕನ್ವಾಲ್ ತನುಜ್ ಭಾಗಿಯಾಗಿದ್ದರು. ಈ ವೇಳೆ ಮನೆಗಳಲ್ಲಿ ಶೌಚಾಲಯಗಳ ಕೊರತೆಯಿಂದಾಗಿ ಮಹಿಳೆಯರು ಬಹಿರ್ದಸೆಗಾಗಿ ಹೊರ ಹೋಗಬೇಕಾಗಿದೆ. ಇದ್ರಿಂದಾಗಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಸೇರಿದಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಕನ್ವಾಲ್ ತನುಜ್ ಆಕ್ರೋಶ ವ್ಯಕ್ತಪಡಿಸಿದ್ರು.

    ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರತಿಯೊಂದು ಮನೆಗೆ 12 ಸಾವಿರ ರೂ. ಧನ ಸಹಾಯ ಕೊಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಶೌಚಾಲಯ ನಿರ್ಮಿಸಿಕೊಳ್ಳಿ. ಮನೆಯ ಹೆಣ್ಣು ಮಕ್ಕಳ ಮರ್ಯಾದೆಗಿಂತ 12 ಸಾವಿರ ರೂ. ಹೆಚ್ಚಿನದಲ್ಲ. ಭಾರತದಲ್ಲಿ 12 ಸಾವಿರ ರೂ. ಕಷ್ಟಪಡುವರು ಇಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗದಿದ್ರೆ, ನಿಮ್ಮ ಪತ್ನಿಯರನ್ನು ಮಾರಿಕೊಳ್ಳಿ ಎಂದು ಕನ್ವಾಲ್ ತನುಜ್ ಹೇಳಿದ್ದಾರೆ.

    ಇನ್ನೂ ಕನ್ವಾಲ್ ತನುಜ್ ಭಾಷಣದ ವೇಳೆಯಲ್ಲಿ ಗ್ರಾಮದ ವ್ಯಕ್ತಿಯೊಬ್ಬ ನನಗೆ ಶೌಚಾಲಯ ನಿರ್ಮಿಸಿಕೊಳ್ಳಲು 12 ಸಾವಿರ ರೂ. ಹಣವಿಲ್ಲ ಎಂದು ಕೇಳಿದಾಗ, ನಾನು ನಿನ್ನ ಹತ್ರ ನಂತರ ಮಾತನಾಡುತ್ತೇನೆ ಎಂದು ಕನ್ವಾಲ್ ತನುಜ್ ಉತ್ತರಿಸಿದ್ದಾರೆ.

    ಸರ್ಕಾರ ನೀಡುವ ಹಣವನ್ನು ನಿಮ್ಮ ಸ್ವಂತ ಖರ್ಚಿಗಾಗಿ ಬಳಸಿಕೊಳ್ಳಬೇಡಿ ಎಂದು ಅದರ ಸದುಪಯೋಗ ತೆಗೆದುಕೊಳ್ಳಬೇಕು ಎಂದು ಕನ್ವಾಲ್ ತನುಜ್ ಗ್ರಾಮಸ್ಥರಿಗೆ ತಿಳಿ ಹೇಳಿದರು. ಸದ್ಯ ತನ್ವಾಲ್ ತನುಜಾರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.