Tag: ಸ್ವಚ್ಛ ಭಾರತ್

  • ಸ್ವಚ್ಛ ಭಾರತ್ ಮಿಷನ್ ಯೋಜನೆ – ಕೋಲಾರ ನಗರಸಭೆಯಲ್ಲಿ ಭಾರಿ ಗೋಲ್‌ಮಾಲ್!

    ಸ್ವಚ್ಛ ಭಾರತ್ ಮಿಷನ್ ಯೋಜನೆ – ಕೋಲಾರ ನಗರಸಭೆಯಲ್ಲಿ ಭಾರಿ ಗೋಲ್‌ಮಾಲ್!

    ಕೋಲಾರ: ಸ್ವಚ್ಛ ಭಾರತ್ ಮಿಷನ್ (Swachh Bharat Mission) ಯೋಜನೆಯಡಿ ನಗರದ ತ್ಯಾಜ್ಯ ನಿರ್ವಹಣೆಗೆ 8 ಎಲೆಕ್ಟ್ರಿಕ್‌ ವಾಹನಗಳನ್ನು (Electric Vehicle) ಖರೀದಿಸಿದ್ದು, ಇದರಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ. 16 ಸಾವಿರದ ರೂ ಚಾರ್ಜಿಂಗ್ ಪಿನ್‌ಗೆ 5 ಲಕ್ಷ ರೂ. ಬಿಲ್ ತೋರಿಸಿರುವ ಭಾರೀ ಗೋಲ್‌ಮಾಲ್ ನಡೆದಿದೆ.

    ನಾಲ್ಕೈದು ತಿಂಗಳು ಕಳೆದರೂ ನಿಂತಲ್ಲೇ ನಿಂತಿರುವ ಕಸ ಎತ್ತುವ ವಾಹನಗಳು, ಮತ್ತೊಂದೆಡೆ ಚಾರ್ಜಿಂಗ್ ಪಾಯಿಂಟ್‌ನಲ್ಲಿ (Charging Point) ಆಗಿರುವ ಗೋಲ್ ಮಾಲ್ ಕುರಿತು ನಗರಸಭೆಯಲ್ಲಿ ಸದಸ್ಯರು ಆರೋಪಿಸಿದ್ದಾರೆ. ಘನ ತ್ಯಾಜ್ಯ ವಿಲೇವಾರಿಗಾಗಿ ಸುಮಾರು 8 ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಿದ್ದಾರೆ. ಇದರ ಜೊತೆಗೆ ವಾಹನಗಳ ಚಾರ್ಜಿಂಗ್‌ಗಾಗಿ ಖರೀದಿ ಮಾಡಿರುವ ಚಾರ್ಜಿಂಗ್ ಪಾಯಿಂಟ್‌ನ ಮೊತ್ತದ ಬಗ್ಗೆ ಅವ್ಯವಹಾರದ ಶಂಕೆಯನ್ನು ವ್ಯಕ್ತಪಡಿಸಿದ್ದು, ಜೊತೆಗೆ ತನಿಖೆಗೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: Bilkis Bano case | ಕಟು ಟೀಕೆಯನ್ನು ಆದೇಶದಿಂದ ತೆಗೆಯುವಂತೆ ಗುಜರಾತ್ ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

    ನಗರಸಭೆ ಅಧಿಕಾರಿಗಳು 2023ರ ಡಿಸೆಂಬರ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ 1 ಯೋಜನೆಯಡಿ, ಘನತ್ಯಾಜ್ಯ ವಸ್ತು ನಿರ್ವಹಣೆ ಸಂಬಂಧ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್ ಪಾಯಿಂಟ್ ಖರೀದಿಗಾಗಿ ಜಿಲ್ಲಾಧಿಕಾರಿಗಳಿಗೆ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಲಿಸಿದ್ದರು. ಅದರಲ್ಲಿ ಎರಡು ಉಪಕರಣ ಖರೀದಿಗೆ ಬರೋಬ್ಬರಿ 8 ಲಕ್ಷ ರೂ. ಆಗಬಹುದೆಂದು ಅಂದಾಜು ಮೊತ್ತವನ್ನು ನಗರಸಭೆ ನಮೂದಿಸಿತ್ತು.

    ಜಿಲ್ಲಾಧಿಕಾರಿಯು ಕೆಲ ಷರತ್ತುಗಳೊಂದಿಗೆ ಜ.1ರಂದು ಕ್ರಿಯಾಯೋಜನೆಗೆ ಅನುಮೋದನೆಯನ್ನು ನೀಡಿದ್ದರು. ಎರಡು ಉಪಕರಣಗಳಿಗೆ ಬಿಲ್ 6.77 ಲಕ್ಷ ರೂ. ಹಾಗೂ ಜಿಎಸ್‌ಟಿ 1.22 ಲಕ್ಷ ಸೇರಿ ಒಟ್ಟು 8 ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದಾರೆ. ಆದರೆ ಇದೇ ಉಪಕರಣಕ್ಕೆ ಕಂಪನಿಯ ವೆಬ್‌ಸೈಟ್‌ನಲ್ಲಿರುವ ಮೌಲ್ಯ ಒಂದಕ್ಕೆ 16,500 ರೂ. ಆಗಿರುವುದರಿಂದ ಸದಸ್ಯರು ಇದರಲ್ಲಿ ದೊಡ್ಡಮಟ್ಟದ ಗೋಲ್ ಮಾಲ್ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

    ನಗರಸಭೆ ಖರೀದಿ ಮಾಡಿರುವ ಜಾರ್ಜಿಂಗ್ ಪಾಯಿಂಟ್ ಒಂದಕ್ಕೆ 3.38 ಲಕ್ಷ ರೂ.ನಂತೆ ಖರೀದಿಸಲಾಗಿದೆ. ಎರಡಕ್ಕೂ ಜಿಎಸ್‌ಟಿ ಸೇರಿ ಬರೋಬ್ಬರಿ 7.99 ಲಕ್ಷ ರೂ. ಬಿಲ್ ಆಗಿದೆ. ಖರೀದಿ ಮಾಡಿರುವ ಬೋಲ್ಟ್ ಅರ್ತ್ ಕಂಪನಿಯ ಈ ಜಾರ್ಜಿಂಗ್ ಪಾಯಿಂಟ್‌ನ ಮಾರುಕಟ್ಟೆ ಮೌಲ್ಯ ಒಂದಕ್ಕೆ ಕೇವಲ 16,500 ರೂ. ಇದೆ. ಬೋಲ್ಟ್ ಅರ್ತ್ ಕಂಪನಿಯ ವೆಬ್‌ಸೈಟ್ ಪರಿಶೀಲಿಸಿದಾಗಲೂ ಇದೇ ಮಾಹಿತಿ ಲಭ್ಯವಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಶಾಸಕ ಕೊತ್ತೂರು ಮಂಜುನಾಥ್, ಈ ಉಪಕರಣಗಳನ್ನು ನಗರಸಭೆ ಹೆಸರಿನಲ್ಲಿ ಬೆಂಗಳೂರಿನ ಇನ್‌ಫ್ಯಾಂಟ್ರಿ ರಸ್ತೆ ಬಳಿಯ ಅಲ್ಫಾ ಟೆಕ್ನಾಲಾಜಿಸ್‌ನಿಂದ ಜುಲೈ 19ರಂದು ಖರೀದಿಸಿರುವ ಬಗ್ಗೆ ಮಾಹಿತಿಯಿದ್ದು, ಜಾರ್ಜಿಂಗ್ ಪಾಯಿಂಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಒಂದು ಚಾರ್ಜಿಂಗ್ ಪಾಯಿಂಟ್ ಉಪಕರಣವನ್ನು ಕೋಲಾರ ನಗರಸಭೆ ಕಚೇರಿಯ ಆವರಣದಲ್ಲಿ ಅಳವಡಿಸಲಾಗಿದೆ. ಮತ್ತೊಂದು ಉಪಕರಣವನ್ನು ಕೆಂದಟ್ಟಿಯ ಎಸ್‌ಟಿಪಿ ಘಟಕದಲ್ಲಿ ಅಳವಡಿಸಲಾಗಿದೆ. ಇನ್ನು ಜಾರ್ಜಿಂಗ್ ಪಾಯಿಂಟ್‌ನಲ್ಲಿ ಯಾವುದೇ ರೀತಿಯ ಗೋಲ್ ಮಾಲ್ ನಡೆದಿಲ್ಲ, ಥರ್ಢ್ ಪಾರ್ಟಿ ಪರಿಶೀಲನೆ ಸಹ ನಡೆಸಲಾಗಿದೆ. ಪ್ಯಾಕೇಜ್ ಸಿಸ್ಟಮ್‌ನಲ್ಲಿ ಖರೀದಿ ಮಾಡಲಾಗಿದ್ದು, ಇದರಲ್ಲಿ ಯಾವುದೇ ಲೋಪವಾಗಿಲ್ಲ. ಇನ್ನು ನೊಂದಣಿಯಾಗದೆ ನಿಂತಿರುವ ವಾಹನವನ್ನು ಕೂಡಲೇ ನೋಂದಣಿ ಮಾಡಿಸಿ ವಾಹನಗಳನ್ನು ನಗರದ ಸ್ವಚ್ಛತೆಗೆ ಕಳುಹಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್‌ನಲ್ಲಿ ಖರೀದಿ ಮಾಡಿರುವ ಜಾರ್ಜಿಂಗ್ ಪಾಯಿಂಟ್ ಬಗ್ಗೆ ಹಾಗೂ ಗೋಲ್ ಮಾಲ್ ಕುರಿತು ನಗರ ಸಭೆ ಸದಸ್ಯರೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಶೀಲನೆ ಮಾಡಿ ಸತ್ಯಾಸತ್ಯೆಯನ್ನು ಹೊರತರಬೇಕು ಎಂಬುದು ಜನರ ಆಶಯವಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ಸಿಬಿಐ ಡೈರೆಕ್ಟ್ ಎಂಟ್ರಿಗೆ ಬ್ರೇಕ್ – ʻರಕ್ಷಣಾತ್ಮಕʼ ಆಟಕ್ಕಿಳಿದ ಸಿದ್ದರಾಮಯ್ಯ ಸರ್ಕಾರ!

  • ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಮಡಿಕೇರಿಯಲ್ಲಿ ಸೈಕಲ್ ಜಾಥಾ

    ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಮಡಿಕೇರಿಯಲ್ಲಿ ಸೈಕಲ್ ಜಾಥಾ

    ಮಡಿಕೇರಿ: ಸ್ವಚ್ಛ ಭಾರತ್ ಅಭಿಯಾನದ ಜಾಗೃತಿಗಾಗಿ ಮಡಿಕೇರಿಯಲ್ಲಿ ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು.

    ಮಡಿಕೇರಿ ನಗರಸಭೆ, ಗ್ರೀನ್ ಸಿಟಿ ಫೋರಂ ಮತ್ತು ಕೃಷಿ ತಂತ್ರ ಸಂಯುಕ್ತ ಆಶ್ರಯದಲ್ಲಿ ಇಂದು ಮುಂಜಾನೆ ಮಡಿಕೇರಿಯ ಸುದರ್ಶನ ವೃತ್ತದಲ್ಲಿ ಸೈಕಲ್ ಜಾಥಾಗೆ ಚಾಲನೆ ನೀಡಲಾಯಿತು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಸೈಕಲ್ ರೈಡ್ ನಲ್ಲಿ ಭಾಗವಹಿಸಿದ್ದರು.

    ಸುದರ್ಶನ್ ಸರ್ಕಲ್‍ನಿಂದ ಹೊರಟ ಸೈಕಲ್ ಜಾಥಾ ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ, ಕಾಲೇಜು ರಸ್ತೆ ಮಾರ್ಗದಲ್ಲಿ ಸಾಗಿ ಇಂದಿರಾ ಕ್ಯಾಂಟೀನ್ ಮೂಲಕ ನಗರದ ರಾಜಾಸೀಟಿನಲ್ಲಿ ಕೊನೆಗೊಂಡಿತು. ಸ್ವಚ್ಛ ಸರ್ವೇಕ್ಷಣೆ 2021ರ ಅಂಗವಾಗಿ ನಗರವನ್ನ ಸ್ವಚ್ಛವಾಗಿಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

    ಕೊಡಗಿಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಸ್ವಚ್ಛತೆಯ ಬಗ್ಗೆ ಅರಿವು ನೀಡುವುದು ಮತ್ತು ಪ್ಲಾಸ್ಟಿಕ್‍ನಿಂದ ಪ್ರಕೃತಿಯ ಮೇಲೆ ಆಗುವ ಪರಿಣಾಮದ ಕುರಿತು ಜಾಗೃತಿ ಮೂಡಿಸುವುದು ಜಾಥಾದ ಪ್ರಮುಖ ಉದ್ದೇಶವಾಗಿದೆ.

  • ಪಾಳುಬಿದ್ದ ತಾ.ಪಂಚಾಯತ್ ಆವರಣ ಈಗ ಸ್ವಚ್ಛ, ಸುಂದರ ವನ

    ಪಾಳುಬಿದ್ದ ತಾ.ಪಂಚಾಯತ್ ಆವರಣ ಈಗ ಸ್ವಚ್ಛ, ಸುಂದರ ವನ

    ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅನುಷ್ಠಾನಗೊಳಿಸಿರುವ ಸ್ವಚ್ಛ ಭಾರತ ಯೋಜನೆ ಇಂದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರ ಮನ ಪರಿವರ್ತನೆಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಕ್ರೀಯಾಶೀಲ ಅಧಿಕಾರಿಗಳಿದ್ದಲ್ಲಿ ಆಯಾ ಇಲಾಖೆಯ ಕೆಲಸ ಕಾರ್ಯಗಳು ಸ್ವಚ್ಛತೆಯೆಡೆಗೆ ಹೆಜ್ಜೆ ಹಾಕುತ್ತದೆ. ಇದಕ್ಕೆ ಪ್ರಮುಖ ಉದಾರಹಣೆ ಕ್ರೀಯಾಶೀಲ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಮೋಹನ್ ಪರಿಕಲ್ಪನೆಯಿಂದ ಹತ್ತಾರು ವರ್ಷಗಳಿಂದ ಪಾಳು ಬಿದ್ದಿದ್ದ ತಾಲೂಕು ಪಂಚಾಯತ್ ಆವರಣ ಈಗ ಸ್ವಚ್ಛ ಮತ್ತು ಸುಂದರ ವನವಾಗುತ್ತಿದೆ.

    4 ತಿಂಗಳ ಹಿಂದೆ ಪುನಃ ಕೊಪ್ಪಳದ ಗಂಗಾವತಿ ತಾ.ಪಂಗೆ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ವರ್ಗವಾಗಿ ಬಂದಿರುವ ಡಾ. ಮೋಹನ್ ಅವರು ತಾ.ಪಂ ಕಚೇರಿ ಸುತ್ತಲೂ ಇರುವ ಸಿಬ್ಬಂದಿ ವಸತಿ ಗೃಹ ಮತ್ತು ಇನ್ನಿತರ ಕಟ್ಟಡಗಳ ಸುತ್ತಲು ಸ್ವಚ್ಚತೆ ಮಾಡಿ ಸುಂದರ ವನವನ್ನಾಗಿಸುವಲ್ಲಿ ಕಳೆದ ಒಂದು ತಿಂಗಳಿಂದ ಕ್ರೀಯಾಶೀಲರಾಗಿ ಕೆಲಸ ಮಾಡಿಸುತ್ತಿದ್ದಾರೆ. ಮತ್ತು ಸ್ವತಃ ಇಓ ಡಾ. ಮೋಹನ್ ಬೆಳ್ಳಂಬೆಳಗ್ಗೆ ಸ್ವಚ್ಛತೆಯಲ್ಲಿ ನಿರತರಾಗುತ್ತಾರೆ. ತಮ್ಮ ಮೇಲಾಧಿಕಾರಿಯ ಕ್ರೀಯಾಶೀಲತೆಗೆ ಮನಸೋತ ತಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾ.ಪಂ ಪಿಡಿಓಗಳು, ಇನ್ನಿತರ ಸಿಬ್ಬಂದಿ ಪ್ರತಿ ನಿತ್ಯ ಒಂದು ಗಂಟೆ ಇಲ್ಲಿಗೆ ಬಂದು ಸ್ವಚ್ಛತೆಯ ಕಾಯಕ ಕೈಗೊಂಡು ಇಓ ಕ್ರೀಯಾಶೀಲತೆಗೆ ಕೈ ಜೋಡಿಸಿದ್ದಾರೆ.

    ಸುಂದರ ವನ: ಗಂಗಾವತಿ ಹೃದಯ ಭಾಗ ಮತ್ತು ಬಸ್ ನಿಲ್ದಾಣದ ಎದುರಿಗೆ ಪಂಚಾಯತ್ ರಾಜ್ ಇಲಾಖೆಯ ತಾ.ಪಂ ಕಚೇರಿ ಇದೆ. ಸುಮಾರು ಹತ್ತು ಎಕರೆ ವಿಸ್ತೀರ್ಣ ಹೊಂದಿರುವ ಈ ಕಚೇರಿ ಆವರಣದಲ್ಲಿ ಸಿಬ್ಬಂದಿ ವಸತಿ ಗೃಹಗಳು, ಸುಸಜ್ಜಿತ ಮಂಥನ ಸಭಾಂಗಣ, ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ, ಸಾರ್ವಜನಿಕ ಗ್ರಂಥಾಲಯ, ಪಂಚಾಯತ್ ರಾಜ್ ಇಲಾಖೆ ನೌಕರ ಸಂಘದ ಕಚೇರಿ ಕಟ್ಟಡ, ಸಾಹಿತ್ಯ ಭವನ, ಶ್ರೀಕೃಷ್ಣದೇವರಾಯ ಸಮುದಾಯ ಭವನ, ತರಬೇತಿ ಕೇಂದ್ರ ಹೀಗೆ ಹತ್ತಾರು ಕಟ್ಟಡಗಳು ಇಲ್ಲಿ ತಲೆ ಎತ್ತಿ ನಿಂತಿವೆ. ಆದರೆ ಈ ಕಟ್ಟಡ ಸುತ್ತಲೂ ಅನೈರ್ಮಲ್ಯದಿಂದಾಗಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ತಮ್ಮ ಇಲಾಖೆಯಿಂದ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛ ಭಾರತ ಯೋಜನೆ ಕೈಗೊಂಡಿದ್ದರೂ ಇಲಾಖೆಯ ಕಚೇರಿ ಬುಡದಲ್ಲಿ ಮಾತ್ರ ಸ್ವಚ್ಛತೆ ಕೊರತೆ ಇರುವುದು ಪಂಚಾಯತ್ ರಾಜ್ ಇಲಾಖೆಗೆ ಕಪ್ಪು ಚುಕ್ಕೆ ಎಂಬುದನ್ನು ಮನಗಂಡು ಈಗ ತಾಪಂ ಆವರಣ ಸಂಪೂರ್ಣ ಸುತ್ತಲೂ ಸ್ವಚ್ಛತೆಗೆ ಮುಂದಾಗಿದ್ದಾರೆ.

    ಅತ್ಯುತ್ತಮ ಕಾರ್ಯ: ತಾ.ಪಂ ಆವರಣದಲ್ಲಿ ಸಾಕಷ್ಟು ಸ್ಥಳವಿದ್ದರೂ ಕೇವಲ ಮರಗಳು ಬಿಟ್ಟರೆ ಇಲ್ಲಿ ಸ್ವಚ್ಛತೆಗೆ ಗಮನ ಕೊಡುವ ಮನಸ್ಸು ಯಾರು ಮಾಡಿದ್ದಿಲ್ಲ. ರಾತ್ರಿಯಾದರೆ ಆವರಣ ಪುಂಡ-ಪೊಕರಿಗಳ ತಾಣವಾಗಿ, ಕುಡಕರ ಅಡ್ಡೆಯಾಗಿ ಹಂದಿಗಳ ವಿಶ್ರಾಂತಿ ತಾಣವಾಗುತ್ತಿತ್ತು. ಆದರೆ ಈಗ ಡಾ. ಮೋಹನ್ ಅವರ ಪರಿಕಲ್ಪನೆಯಿಂದಾಗಿ ಆವರಣ ಸಂಪೂರ್ಣ ಬದಲಾಗುತ್ತಿದೆ. ತಾಪಂ ಕಚೇರಿ ಹಿಂದೆ ಸಿಬ್ಬಂದಿ ಕುಟುಂಬಸ್ಥರಿಗೆ ವಿಶ್ರಾಂತಿ ಪಡೆಯುವುದಕ್ಕಾಗಿ ಸುಂದರವಾದ ಚಿಕ್ಕ ಮತ್ತು ಚೊಕ್ಕದಾದ ಪಾರ್ಕ್ ಆಗುತ್ತಿದೆ. ಜೊತೆಗೆ ಸಭಾಂಗಣ, ಪತ್ರಿಕಾ ಭವನ ಸೇರಿದಂತೆ ಸುತ್ತಲೂ ಎಲ್ಲಾ ಕಸ, ಮುಳ್ಳು, ಕಂಟಿಗಳನ್ನು ತೆಗೆದು ಮಣ್ಣು ಹಾಕಿ ಸ್ವಚ್ಚತೆ ಮಾಡಲಾಗಿದೆ. ಇದರಿಂದ ಈಗ ಸಿಬ್ಬಂದಿಯಲ್ಲಿ ತಮ್ಮ ಮೇಲಾಧಿಕಾರಿಗಳ ಕ್ರೀಯಾಶೀಲತೆಯಿಂದಾಗಿ ಮತ್ತಷ್ಟು ವಿಶ್ವಾಸ ಮೂಡಿದೆ. ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಇಂದು ತಾ.ಪಂ ಆವರಣ ಗಮನಿಸಿದ ಪ್ರತಿಯೊಬ್ಬ ನಾಗರಿಕರನ ಮನಸ್ಸಿನಲ್ಲಿ ಈ ಭಾವನೆ ಮೂಡುತ್ತದೆ. ಕ್ರೀಯಾಶೀಲ ಅಧಿಕಾರಿಗಳಿಗೆ ಪಿಡಿಓ ಮತ್ತು ಸಿಬ್ಬಂದಿ ಸಾಥ್ ನೀಡಿದ್ದು, ಸ್ವಚ್ಛತೆಯ ಕಡೆ ಹೆಜ್ಜೆ ಹಾಕಿರುವ ತಾ.ಪಂ ಆವರಣಕ್ಕೆ ಬರುವ ಸಾರ್ವಜನಿಕರು ಕೂಡ ನೈರ್ಮಲ್ಯ ಕಾಪಾಡುವಲ್ಲಿ ಮುಂದಾಗಬೇಕೆಂಬುದು ಆಶಯವಾಗಿದೆ.

  • ಶೌಚಾಲಯ ನಿರ್ಮಿಸಿಕೊಳ್ಳದ ಸರ್ಕಾರಿ ನೌಕರರ ಸಂಬಳ ತಡೆಗೆ ಆದೇಶ

    ಶೌಚಾಲಯ ನಿರ್ಮಿಸಿಕೊಳ್ಳದ ಸರ್ಕಾರಿ ನೌಕರರ ಸಂಬಳ ತಡೆಗೆ ಆದೇಶ

    ಶ್ರೀನಗರ: ಬಹಿರ್ದೆಸೆಯ ವಿರುದ್ಧ ಸಮರ ಸಾರಿರುವ ಜಮ್ಮು ಕಾಶ್ಮೀರ ಸರ್ಕಾರ ಕಿಶ್ತ್ವಾರ್ ಜಿಲ್ಲೆಯ ಸುಮಾರು 600 ಸರ್ಕಾರಿ ನೌಕರರು ಮನೆಯಲ್ಲಿ ಶೌಚಾಲಯವನ್ನು ಕಟ್ಟಿಸಿಕೊಂಡಿಲ್ಲ ಎಂದು ಎಲ್ಲರ ಸಂಬಳವನ್ನು ತಡೆಹಿಡಿಯಲಾಗಿದೆ.

    ಸಹಾಯಕ ಕಮಿಷನರ್ ಅನಿಲ್ ಕುಮಾರ್ ಚಂದೈಲ್ ಅವರ ವರದಿಯಾನುಸಾರ ಪಡ್ಡರ್ ಬ್ಲಾಕ್ ನ 616 ಸರ್ಕಾರಿ ನೌಕರರ ಮನೆಯಲ್ಲಿ ಶೌಚಾಲಯವಿಲ್ಲ. ವರದಿಯಾನುಸಾರ ಜಿಲ್ಲಾ ಅಭಿವೃದ್ಧಿ ಆಯುಕ್ತರಾದ ಅಂಗ್ರೇಜ್ ಸಿಂಗ್ ರಾಣಾ ಅವರು ಸಂಬಳವನ್ನು ತಡೆಯುವಂತೆ ಆದೇಶವನ್ನು ನೀಡಿದ್ದಾರೆ.

    ಚಂದೈಲ್ ಅವರ ವರದಿ ಬಳಿಕ ಬಹಳ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಸ್ವಚ್ಚ ಭಾರತ ಯೋಜನೆ ಅಡಿಯಲ್ಲಿ ರಾಜ್ಯದ 71.95% ರಷ್ಟು ಮನೆಗಳಲ್ಲಿ ಶೌಚಾಲಯಗಳಿವೆ ಎಂದು ರಾಣಾ ತಿಳಿಸಿದರು.

     

    ಕಿಶ್ತ್ವಾರ್ ಜಿಲ್ಲೆಯಲ್ಲಿ 57.23%, ಲದಾಖ್ ನ ಲೇಹ್ ಮತ್ತು ಕಾರ್ಗಿಲ್ ಜಿಲ್ಲೆ, ದಕ್ಷಿಣ ಕಾಶ್ಮೀರದ ಶೋಪಿಯನ್ ಮತ್ತು ಶ್ರೀನಗರವನ್ನು ಬಯಲು ಮುಕ್ತ ನಗರಗಳಾಗಿ ಘೋಷಿಸಲಾಗಿದೆ. ಆದರೆ ದಕ್ಷಿಣ ಕಾಶ್ಮೀರದಲ್ಲಿ ಅನಂತ್ ನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳನ್ನು ಏಪ್ರಿಲ್ ಅಂತ್ಯದ ವೇಳೆಗೆ ಬಯಲು ಮುಕ್ತ ನಗರಗಳಾಗಿ ಘೋಷಿಸುವ ಸಾಧ್ಯತೆಗಳಿವೆ.

    ಶೌಚಾಲಯ ನಿರ್ಮಾಣದಲ್ಲಿ ಪುಲ್ವಾಮಾ 98.64%, ಅನಂತ್ ನಾಗ್ 98.43%, ಕುಪ್ವಾರಾ 91.92%, ರಾಜೌರಿ 84.53% ಮತ್ತು 72.95% ಕುಲ್ಗಮ್, ದೋಡಾ 68.26%, ಬರಾಮುಲ್ಲಾ 67.59%, ಬಂಡಿಪೊರಾ 67.44%, ರಂಬನ್ 66.74%, ಸಾಂಬಾ 64.21%, ಜಮ್ಮು 63.93%, ಬಡ್ಗಮ್ 62.99%, ಗಂಡರ್ಬಲ್ 62.20%, ಪೂಂಚ್ 61.45%, ರಿಯಾಸಿ 56.09%, ಉಧಮ್ಪುರ್ 48.41%, ಕಥುವಾ ಜಿಲ್ಲೆಯಲ್ಲಿ 45.69% ರಷ್ಟು ಗುರಿ ಸಾಧಿಸಲಾಗಿದೆ ಎಂದು ಹೇಳಿದ್ದಾರೆ.

  • ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

    ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

    ಜೈಪುರ: ರಾಜಸ್ಥಾನದ ರಾಜಧಾನಿ ಗುಲಾಬಿ ನಗರದಲ್ಲಿ ಬಿಜೆಪಿ ಸಚಿವರೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಸ್ಥಾನ ಸರ್ಕಾರದ ಆರೋಗ್ಯ ಸಚಿವರಾಗಿರುವ ಕಾಲಿಚಂದ್ರನ್ ಸರಾಫ್ ರಸ್ತೆ ಬದಿಯಲ್ಲಿ ಮೂತ್ರ ಮಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸಚಿವರನ್ನು ಪ್ರಶ್ನಿದ್ರೆ ಅದೇನು ದೊಡ್ಡ ವಿಷಯವಲ್ಲ ಅಂತಾ ಹೇಳಿದ್ದಾರೆ.

    ಜೈಪುರ ಮುನ್ಸಿಪಲ್ ಕಾರ್ಪೋರೇಷನ್ ನಗರವನ್ನು ಸ್ವಚ್ಛ ಭಾರತ ಯೋಜನಡಿಯ ಪಟ್ಟಿಯಲ್ಲಿ ಮೇಲೆ ತರಲು ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ. ಆದ್ರೆ ರಾಜ್ಯ ಸಚಿವರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಸಾಮಾನ್ಯವಾಗಿ ಸಾರ್ವಜನಿಕರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವ ವ್ಯಕ್ತಿಗಳಿಗೆ 200 ರೂ. ದಂಡ ವಿಧಿಸಲಾಗುತ್ತದೆ. ಫೋಟೋ ವೈರಲ್ ಆಗುತ್ತಿದ್ದಂತೆ ಸಚಿವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಮಾತನಾಡುವುದಕ್ಕೆ ಅದೇನು ಅಂತಹ ದೊಡ್ಡ ವಿಷಯವಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

    ನಾಚಿಕೆಯ ಕೆಲಸ: ಸ್ವಚ್ಛ ಭಾರತ್ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಹಣವನ್ನು ವ್ಯಯ ಮಾಡುತ್ತಿದೆ. ಬಿಜೆಪಿಯ ಇಂತಹ ನಾಯಕರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಚಿವರು ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದೊಂದು ನಾಚಿಕೆಗೇಡಿನ ಕೆಲಸ ಎಂದು ರಾಜಸ್ಥಾನದ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಅರ್ಚನಾ ಶರ್ಮಾ ಗುಡುಗಿದ್ದಾರೆ.

    ಬಿಜೆಪಿ ವಿರೋಧಿಗಳು ಸ್ವಚ್ಛ ಭಾರತಕ್ಕೆ ಕಾಲಿಚಂದ್ರನ್ ಸರಾಫ್ ಉಡುಗೊರೆ ನೀಡಿದ್ದಾರೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿ ಟೀಕಿಸುತ್ತಿದ್ದಾರೆ.

    ಈ ಹಿಂದೆ ಧೋಲ್‍ಪುರ ಉಪ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಸಚಿವರಾದ ಕಾಲಿಚಂದ್ರನ್ ಸರಾಫ್ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ನಾನು ಚುನಾವಣಾ ಪ್ರಚಾರದ ಒತ್ತಡದಲ್ಲಿ ಇದ್ದಿದರಿಂದ ಅಂದು ನನಗೆ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ ಅಂತಾ ಅರ್ಚನಾ ಶರ್ಮಾ ತಿಳಿಸಿದ್ದಾರೆ.

    ಕೋಟಾ ಕ್ಷೇತ್ರದ ಬಿಜೆಪಿ ನಾಯಕ ಅಶೋಕ್ ಚೌಧರಿ ರಾಜಸ್ಥಾನದಲ್ಲಿ ಸಿಎಂ ವಸುಂಧರಾ ರಾಜೆ ಅವರ ಆಡಳಿಯ ವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಬಿಜೆಪಿ ರಾಷ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬೇಕೆಂದು ಎಂದು ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಮಾತನಾಡಿರುವ ಆಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ರಾಜಸ್ಥಾನದಲ್ಲಿ ನಡೆದ ಮೂರು ಕ್ಷೇತ್ರಗಳ (ಎರಡು ಲೋಕಸಭಾ, ಒಂದು ವಿಧಾನಸಭಾ ಕ್ಷೇತ್ರ)ಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಇತ್ತೀಚಿನ ಕೆಲವು ದಿನಗಳಿಂದ ಆಡಳಿತ ಸರ್ಕಾರ ಅನಗತ್ಯ ವಿಷಯಗಳಿಗಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

  • ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಯುವಕ-ಯುವತಿ

    ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಯುವಕ-ಯುವತಿ

    ರಾಯ್ಪುರ: ಯುವ ಜೋಡಿಯೊಂದು ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿರುವ ಘಟನೆ ಛತ್ತೀಸ್‍ಘಢ ರಾಜ್ಯದ ಬಿಸಲಾಪುರದಲ್ಲಿ ನಡೆದಿದೆ. ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗುವ ಮೂಲಕ ಪ್ರತಿಯೊಬ್ಬರು ತಮ್ಮ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂಬ ಸಂದೇಶವನ್ನು ನವಜೋಡಿ ನೀಡಿದೆ.

    ಶಬಾ ನವಾಜ್ ಮತ್ತು ಸರಫರಾಜ್ ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಜೋಡಿ. 2017 ಮಾರ್ಚ್ ನಲ್ಲಿ ಶಬಾ ಮತ್ತು ಸರಫರಾಜ್ ಮದುವೆ ನಿರ್ಣಯವಾಗಿತ್ತು. ಆದ್ರೆ ಶಬಾ ಪತಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದ್ರೆ ಮಾತ್ರ ಮದುವೆ ಆಗುತ್ತೇನೆ ಎಂದು ಷರತ್ತು ವಿಧಿಸಿದ್ದರು.

    ಸರಫರಾಜ್ 2017 ಮೇ ನಲ್ಲಿ ಸರ್ಕಾರಕ್ಕೆ ಶೌಚಾಲಯ ನಿರ್ಮಾಣಕ್ಕಾಗಿ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಸರ್ಕಾರದ ಸಹಾಯ ಧನದಿಂದ ಸರಫರಾಜ್ ಜೂನ್‍ನಲ್ಲಿಯೇ ಶೌಚಾಲಯ ನಿರ್ಮಿಸಿದ್ದರು.

    ಸರಫರಾಜ್ ಬಾವಿ ಪತ್ನಿಗಾಗಿ ಶೌಚಾಲಯ ನಿರ್ಮಿಸಿದ ವಿಷಯ ಶಬಾ ಪೋಷಕರಿಗೆ ತಿಳಿದಿದೆ. ಎರಡು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇಬ್ಬರೂ ಜನವರಿ 21 ರಂದು ಮದುವೆ ಆಗಿದ್ದಾರೆ. ಜನವರಿ 24ರಂದು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಶಬಾ ಮತ್ತು ಸರಫರಾಜ್ ಇಬ್ರೂ ಮತೊಮ್ಮೆ ನಗರದ ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿದ್ದಾರೆ. ಪ್ರತಿ ಮನೆಯಲ್ಲಿ ಶೌಚಾಲಯವಿದ್ದರೆ ಯಾವುದೇ ರೋಗಗಳು ಬರುವುದಿಲ್ಲ. ಶೌಚಾಲಯ ನಿರ್ಮಾಣ ಮಾಡುವುದರಿಂದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗಲಿವೆ ಎಂದು ನವದಂಪತಿ ಹೇಳಿದ್ದಾರೆ.

  • ಪತಿ ಬೈದಿದ್ದಕ್ಕೆ ಮಾಂಗಲ್ಯ ಸರವನ್ನೇ ಮಾರಿ ಶೌಚಾಲಯ ಕಟ್ಟಿಸಿದ ಮಹಿಳೆ

    ಪತಿ ಬೈದಿದ್ದಕ್ಕೆ ಮಾಂಗಲ್ಯ ಸರವನ್ನೇ ಮಾರಿ ಶೌಚಾಲಯ ಕಟ್ಟಿಸಿದ ಮಹಿಳೆ

    ಪಾಟ್ನಾ: ಸುಮಾರು 15 ಕೋಟಿ ರೂಪಾಯಿಯ ಶೌಚಾಲಯದ ಹಗರಣವು ಬಿಹಾರ ರಾಜ್ಯದ ರಾಜಕಾರಣವನ್ನು ತಲೆತಗ್ಗಿಸುವಂತೆ ಮಾಡಿದೆ. ಆದರೆ ಇದಕ್ಕೆ ಸವಾಲು ಎಂಬಂತೆ ಪಾಟ್ನಾ ಸಮೀಪದ ಗ್ರಾಮವೊಂದರಲ್ಲಿ ದಲಿತ ಮಹಿಳೆಯೊಬ್ಬರು ತಮ್ಮ ಮಂಗಳ ಸೂತ್ರವನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣದಿಂದ ಒಂದು ಶೌಚಾಲಯವನ್ನು ನಿರ್ಮಿಸಿದ್ದಾರೆ.

    ಮೂಲತಃ ಫತುಹಾ ಬ್ಲಾಕ್ ನ ವರುನಾ ಗ್ರಾಮದ ನಿವಾಸಿ ರುಂಕಿ ದೇವಿ ಅವರು ತಮ್ಮ ಪತಿ ಪರಶುರಾಮ್ ಪಾಸ್ವಾನ್ ಬಳಿ ಮನೆಯಲ್ಲಿ ಶೌಚಾಲಯ ಕಟ್ಟಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ಪರುಶುರಾಮ್ ಮಾತ್ರ ಪತ್ನಿಯ ಮಾತಿಗೆ ತಲೆಕೆಡಿಸಿಕೊಳ್ಳದೆ ಬದಲಾಗಿ ಬೈದು ಕಳುಹಿಸಿದ್ದಾರೆ.

    ಸರ್ಕಾರ ಪ್ರತಿ ಗ್ರಾಮವನ್ನು ಬಯಲು ಮುಕ್ತ ಶೌಚಾಲಯ ಮಾಡಬೇಕೆನ್ನುವ ಕಾರ್ಯಕ್ಕೆ ಪತಿ ಆಸಕ್ತಿವನ್ನು ತೋರಿಲ್ಲ. ಇದರಿಂದ ಅವರು ಮಾಂಗಲ್ಯ ಸರವನ್ನು ಮಾರಾಟ ಮಾಡಿದ್ದಾರೆ. ಮಾರಾಟದಿಂದ ಬಂದಿದ್ದು ಕೇವಲ 9 ಸಾವಿರ ರೂ. ಮಾತ್ರ. ಈ ಹಣದಿಂದ ಶೌಚಾಲಯ ನಿರ್ಮಿಸಲು ಸಾಧ್ಯವಿಲ್ಲ ಎಂದು ತಿಳಿದು ಬಳಿಕ ತಮ್ಮ ಕಿವಿಯೋಲೆಗಳನ್ನೂ ಸಹ ಮಾರಿದ್ದಾರೆ. ಅದರಿಂದ ಬಂದ 4 ಸಾವಿರವನ್ನೂ ಒಟ್ಟಾಗಿ ಸೇರಿಸಿ ಶೌಚಾಲಯವನ್ನು ನಿರ್ಮಿಸಿದ್ದಾರೆ.

    “ನಾನು ಮನೆಗೆ ಇಟ್ಟಿಗೆ, ಸಿಮೆಂಟ್ ಅನ್ನು ತಂದಾಗ ನನ್ನ ಪತಿ ಗೊಂದಲಕ್ಕೀಡಾದರು. ಮೊದಲು ನಾನು ಮಾಂಗಲ್ಯವನ್ನು ಮಾರಿ ಶೌಚಾಲಯ ಕಟ್ಟಿಸುತ್ತೇನೆ ಎಂದಾಗ ಅವರು ಕೋಪ ಮಾಡಿಕೊಂಡಿದ್ದರು. ಬಳಿಕ ಅವರೇ ನನ್ನ ಕೆಲಸಕ್ಕೆ ಸಹಾಯ ಮಾಡಿದರು” ಎಂದು ಫತುಹಾ ಹೇಳಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಸಹ ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಗ್ರಾಮೀಣ ಮಹಿಳೆಯಿಂದ ಇಂದೊಂದು ಆದರ್ಶವಾದ ಕಾರ್ಯವಾಗಿದೆ. ಇದು ಸಮಾಜಕ್ಕೆ ಒಂದು ಧನಾತ್ಮಕ ಸಂದೇಶವನ್ನು ಸಾರುತ್ತದೆ ಎಂದು ಬಿ.ಡಿ.ಒ ರಾಕೇಶ್ ಕುಮಾರ್ ಅವರು ಹೇಳಿದರು. ಮಾಂಗಲ್ಯ ಸರ, ಕಿವಿಯೋಲೆ ಮಾರಾಟ ಮಾಡಿ ಶೌಚಾಲಯ ನಿರ್ಮಿಸಿದ ಮಹಿಳೆ ಸ್ಥಳೀಯ ನಿವಾಸಿಗಳಿಗೆ ಈಗ ಮಾದರಿಯಾಗಿದ್ದಾರೆ.

  • ಹೊಸದಾಗಿ ಕಟ್ಟಿಸಿದ್ದ ಶೌಚಾಲಯಕ್ಕೆ ಪೂಜೆ ಸಲ್ಲಿಸಿದ ಮಹಿಳೆಯರು

    ಹೊಸದಾಗಿ ಕಟ್ಟಿಸಿದ್ದ ಶೌಚಾಲಯಕ್ಕೆ ಪೂಜೆ ಸಲ್ಲಿಸಿದ ಮಹಿಳೆಯರು

    ಪಾಟ್ನಾ: ಬಿಹಾರದ ಗೋಪಾಲಗಂಜ್ ಜಿಲ್ಲೆಯ ಕರ್ಣಾಪುರ ಪಂಚಾಯ್ತಿ ವ್ಯಾಪ್ತಿಯ ಗ್ರಾಮದ ಮಹಿಳೆಯರು ತಮ್ಮ ಮನೆಗಳಲ್ಲಿ ಹೊಸದಾಗಿ ಕಟ್ಟಿಸಿರುವ ಶೌಚಾಲಯಕ್ಕೆ ಪೂಜೆ ಸಲ್ಲಿಸಿದ್ದಾರೆ.

    ಹೊಸ ಶೌಚಾಲಯದ ಮುಂದೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇಲ್ಲಿನ ಮಹಿಳೆಯರು ಶೌಚಾಲಯವನ್ನು `ಇಜ್ಜತ್ ಘರ್’ (ಮರ್ಯಾದಾ ಗೃಹ) ಎಂದು ಕರೆದಿದ್ದು, ಮಹಿಳೆಯರಿಗೆ ಘನತೆ ಮತ್ತು ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆ ಎಂದಿದ್ದಾರೆ.

    ಕೆಲವು ದಿನಗಳ ಹಿಂದಷ್ಟೇ ಪಟ್ನಾದಿಂದ 35 ಕಿ,ಮೀ ದೂರದಲ್ಲಿರೋ ಬಲಿಯಾವನ್ ಗ್ರಾಮದಲ್ಲಿ ಮಹಿಳೆಯೊಬ್ಬರು ಬಹಿರ್ದೆಸೆಗೆ ಹೋಗಿದ್ದಾಗ ಅವರ ಮೇಲೆ ಅತ್ಯಾಚಾರ ನಡೆದಿತ್ತು.

    ಗೋಪಾಲಗಂಜ್ ಜಿಲ್ಲೆಯ ಜಿಲ್ಲಾಧಿಕಾರಿ ಸೈಕಲ್‍ನಲ್ಲಿ ಗ್ರಾಮದತ್ತ ಬಂದಾಗ ರಸ್ತೆಯ ಎರಡು ಬದಿಗಳಲ್ಲಿ ಮಹಿಳೆಯರು ಕೈಯಲ್ಲಿ ದೀಪ ಹಿಡಿದು ನಿಂತಿದ್ದರು. ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಶೌಚಾಲಯ ನಿರ್ಮಾಣ ಪೂರ್ಣಗೊಳ್ಳಬೇಕೆಂದು ಕಷ್ಟಪಟ್ಟು ದುಡಿದ ಮಹಿಳೆಯರ ಶ್ರಮವನ್ನ ಶ್ಲಾಘಿಸಿದ್ರು.

    ಗ್ರಾಮದ ಮಹಿಳೆಯೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಎರಡಂತಸ್ತಿನ ದೊಡ್ಡ ಮನೆಯಲ್ಲಿ ವಾಸವಾಗಿದ್ರೂ ತನ್ನ ಮನೆಯಲ್ಲಿ ಶೌಚಾಲಯವಿರಲಿಲ್ಲ ಎಂದಿದ್ದಾರೆ.

    ನನ್ನ ಪತಿ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮದುವೆಗೆ ಮುಂಚೆ ನಾನು ಇವರ ಮನೆಯಲ್ಲಿ ಶೌಚಾಲಯ ಇರುತ್ತದೆ ಎಂದುಕೊಂಡಿದ್ದೆ. ಯಾಕಂದ್ರೆ ಈ ಮನೆ ಕಟ್ಟಲು ತುಂಬಾ ಹಣ ಖರ್ಚು ಮಾಡಿದ್ದರು. ಆದ್ರೆ ಮೊದಲ ದಿನ ಮನೆಗೆ ಬಂದಾಗ ಮನೆಯಲ್ಲಿ ಶೌಚಾಲಯವೇ ಇಲ್ಲದಿರುವುದು ನೋಡಿ ನನಗೆ ಆಶ್ಚರ್ಯವಾಗಿತ್ತು ಅಂತ ಹೇಳಿದ್ರು.

     

  • ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

    ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

    ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಈಗ ಕೇಂದ್ರ ಸಚಿವರೊಬ್ಬರು ಸಾರ್ವಜನಿಕವಾಗಿ ಮೂತ್ರ ಮಾಡುವ ಮೂಲಕ ಅವಮಾನ ಮಾಡಿದ್ದಾರೆ.

    ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ಈಗ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

    ರಾಧಾ ಮೋಹನ್ ಸಿಂಗ್ ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಪ್ರದೇಶದ ಮೋತಿಹಾರಿ ಎಂಬ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಚಿವರು ಅಂಗರಕ್ಷಕರ ಕಾವಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿರುವ ಗೋಡೆಯೊಂದರ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ.

    ಸಚಿವರು ಮೂತ್ರ ವಿಸರ್ಜನೆ ಮಾಡಿರುವ ಫೋಟೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ್ದು ಸಾಮಾಜಿಕ ಜಾಲತಾಣದಲ್ಲಿ ಜನರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    https://twitter.com/OneTipOneHand_/status/880299681036750848

  • ಮಾಂಗಲ್ಯ ಮಾರಿ ಟಾಯ್ಲೆಟ್ ಕಟ್ಟಿಸಿದ್ದ ಕಲಬುರಗಿಯ ಪಬ್ಲಿಕ್ ಹೀರೋ ಅಕ್ಕಮ್ಮಗೆ ಮೋದಿಯಿಂದ ಪುರಸ್ಕಾರ

    ಮಾಂಗಲ್ಯ ಮಾರಿ ಟಾಯ್ಲೆಟ್ ಕಟ್ಟಿಸಿದ್ದ ಕಲಬುರಗಿಯ ಪಬ್ಲಿಕ್ ಹೀರೋ ಅಕ್ಕಮ್ಮಗೆ ಮೋದಿಯಿಂದ ಪುರಸ್ಕಾರ

    ಕಲಬುರಗಿ: ಹಳ್ಳಿಯಲ್ಲಿ ಟಾಯ್ಲೆಟ್ ಕಟ್ಟಲು ಮಾಂಗಲ್ಯ ಮಾರಿ ಗಮನ ಸೆಳೆದಿದ್ದ, ಕಲಬುರಗಿಯ ಪಬ್ಲಿಕ್ ಹೀರೋ ಅಕ್ಕಮ್ಮ ಅವರಿಗೆ ಪ್ರಧಾನಿ ಮೋದಿ ಮಹಿಳಾ ಚಾಂಪಿಯನ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ.

    ಸ್ವಚ್ಛ ಭಾರತ ಮಿಷನ್ ಅಡಿ ಅಕ್ಕಮ್ಮ ಮಾಂಗಲ್ಯ ಸೂತ್ರ ಮಾರಿ ಹರವಾಳ ಗ್ರಾಮದಲ್ಲಿನ ಮನೆಗಳಿಗೆ ಟಾಯ್ಲೆಟ್ ನಿರ್ಮಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿಯ ಬಿಗ್ ಬುಲೆಟನ್ ನಲ್ಲಿ ಅಕ್ಕಮ್ಮ ಅವರನ್ನ ಪಬ್ಲಿಕ್ ಹೀರೋ ಅಂತಾ ವಿಸ್ಕøತ ವರದಿ ಪ್ರಸಾರ ಮಾಡಿತ್ತು. ಇದನ್ನು ಕಂಡ ರಾಜ್ಯ ಸರ್ಕಾರ ರಾಜ್ಯದಿಂದ ಮಹಿಳಾ ಚಾಂಪಿಯನ್ ಪುರಸ್ಕಾರಕ್ಕೆ ಅಕ್ಕಮ್ಮ ಅವರನ್ನು ಆಯ್ಕೆ ಮಾಡಿತ್ತು .

    ಗುಜರಾತ್‍ನ ಗಾಂಧಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಖುದ್ದು ಅಕ್ಕಮ್ಮ ಅವರಿಗೆ ಸನ್ಮಾನ ಮಾಡಿ ಗೌರವಿಸಿದ್ದಾರೆ.

    https://www.youtube.com/watch?v=EKG8lI91xBE