Tag: ಸ್ವಚ್ಛತೆ

  • ಪ್ರಧಾನಿ ಮೋದಿಗೆ ಪತ್ರ ಬರೆಯಲು ಮುಂದಾದ 8ನೇ ತರಗತಿಯ ವಿದ್ಯಾರ್ಥಿನಿ

    ಪ್ರಧಾನಿ ಮೋದಿಗೆ ಪತ್ರ ಬರೆಯಲು ಮುಂದಾದ 8ನೇ ತರಗತಿಯ ವಿದ್ಯಾರ್ಥಿನಿ

    ಯಾದಗಿರಿ: ಜಿಲ್ಲೆಯ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆಯಲು ಮುಂದಾಗಿದ್ದಾಳೆ.

    8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಕೃತಿಕಾ ಪತ್ರ ಬರೆಯಲು ಮುಂದಾಗಿದ್ದು, ತನ್ನ ಮನೆ ಎದುರು ಇರುವ ಪಾರ್ಕ್ ಸ್ವಚ್ಛಗೊಳಿಸಿಲ್ಲ ಎಂದು ಪ್ರಧಾನಿ ಮೋದಿಗೆ ದೂರಲು ನಿರ್ಧರಿಸಿದ್ದಾಳೆ. ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಯೋಜನೆಗೆ ಮಹತ್ವ ಕೊಟ್ಟಿದ್ದಾರೆ. ಆದರೆ ಯಾದಗಿರಿಯಲ್ಲಿ ನಗರಸಭೆ ಅಧಿಕಾರಿಗಳು ಸ್ವಚ್ಛ ಭಾರತ ಯೋಜನೆ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ಸ್ವಚ್ಛಗೊಳಿಸುವಂತೆ ಹಿಂದೆ ಪತ್ರ ಬರೆದಿದ್ದೆ. ಆದರೆ ಅವರು ನಿಗಾ ವಹಿಸಿಲ್ಲ. ಅವರು ನನ್ನ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ನಾನು ಉದ್ಯಾನವನ ರಕ್ಷಿಸಿಕೊಳ್ಳಲು ಪ್ರಧಾನಿ ಮೋದಿಗೆ ಪತ್ರ ಬರೆಯುವೆ ಎಂದು ಕೃತಿಕಾ ಹೇಳುತ್ತಿದ್ದಾಳೆ.

    ಯಾದಗಿರಿಯ ವಾರ್ಡ್ ನಂ 31ರ ಚಿರಂಜೀವಿ ನಗರದ ನಮ್ಮ ಮನೆ ಎದುರು ಇರುವ ಉದ್ಯಾನವನವು ಯಾದಗಿರಿ ನಗರಸಭೆ ವ್ಯಾಪ್ತಿಗೆ ಬರುತ್ತದೆ. ನಗರಸಭೆಯು ಲಕ್ಷಾಂತರ ರೂ ವೆಚ್ಚ ಮಾಡಿ ಉದ್ಯಾನವನ ನಿರ್ಮಿಸಿದೆ. ಆದರೆ ಸ್ವಚ್ಛತೆ ಕಡೆ ಗಮನ ಹರಿಸಿದ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದಿದ್ದಾಳೆ.

    ಅಕ್ಟೋಬರ್ ತಿಂಗಳಲ್ಲಿ ಯಾದಗಿರಿ ನಗರಸಭೆ ಪೌರಾಯುಕ್ತ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನ್ಯಾಯಾಧೀಶರಿಗೆ ಪತ್ರ ಬರೆದು ಕೊರಿಯರ್ ಮೂಲಕ ಕಳುಹಿಸಿದ್ದೇನೆ. ಆದರೆ ಈ ವರಗೂ ಯಾವುದೇ ಅಧಿಕಾರಿಗಳಿಂದ ಉತ್ತರ ಸಿಕ್ಕಿಲ್ಲ. ಪತ್ರ ಮುಟ್ಟಿದ ಮೇಲೆ ಅಧಿಕಾರಿಗಳು ಭೇಟಿ ನೀಡಿ ಉದ್ಯಾನವನ ಸ್ವಚ್ಛಗೊಳಿಸಿ ಸಮಸ್ಯೆಗೆ ಮುಕ್ತಿ ಕಾಣುವ ಕೆಲಸ ಮಾಡಿಲ್ಲ. ಇದರಿಂದ ಮತ್ತೆ ನಾನು ಗುರುವಾರ ಜ್ಞಾಪನ ಪತ್ರವನ್ನು ಅಧಿಕಾರಿಗಳಿಗೆ ಕೋರಿಯರ್ ಮೂಲಕ ಕಳುಹಿಸಿದ್ದೇನೆ ಎಂದು ಕೃತಿಕಾ ಹೇಳಿದ್ದಾಳೆ.

  • ಚರಂಡಿ ಸ್ವಚ್ಛಗೊಳಿಸಲು ಖುದ್ದು ತಾನೇ ಚರಂಡಿಗೆ ಇಳಿದ 13ರ ಬಾಲಕಿ

    ಚರಂಡಿ ಸ್ವಚ್ಛಗೊಳಿಸಲು ಖುದ್ದು ತಾನೇ ಚರಂಡಿಗೆ ಇಳಿದ 13ರ ಬಾಲಕಿ

    ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯ್ತಿ ವತಿಯಿಂದ ದಲಿತ ಕಾಲೋನಿಯಲ್ಲಿ ಚರಂಡಿ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ, 13 ವರ್ಷದ ದಲಿತ ಬಾಲಕಿಯೊಬ್ಬಳು ಖುದ್ದು ತಾನೇ ಚರಂಡಿಗಿಳಿದು ಸ್ವಚ್ಛಗೊಳಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ದಲಿತ ಕಾಲೋನಿಯ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ 13 ವರ್ಷದ ರಂಜಿತಾ ಚರಂಡಿ ಸ್ವಚ್ಛಗೊಳಿಸಿದ ಬಾಲಕಿ. ಗ್ರಾಮ ಪಂಚಾಯ್ತಿ ವತಿಯಿಂದ ದಲಿತ ಕಾಲೋನಿಯಲ್ಲಿ ಚರಂಡಿಗಳನ್ನ ಸ್ವಚ್ಛಗೊಳಿಸದೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದಲಿತ ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ.

    ಇನ್ನೂ ದಲಿತ ಕಾಲೋನಿಯಲ್ಲಿ ಚರಂಡಿಗಳ ಸ್ವಚ್ಛತೆ ಮಾಡದ ಹಿನ್ನೆಲೆಯಲ್ಲಿ ಸರಿಸುಮಾರು 140ಕ್ಕೂ ಹೆಚ್ಚು ಮನೆಗಳುಳ್ಳ ಕಾಲೋನಿಯಲ್ಲಿ ಹಲವು ಮಂದಿ ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಇದನ್ನು ಗಮನಿಸಿದ ರಂಜಿತಾ ತನ್ನ ಮನೆ ಮುಂದೆ ತಾನೇ ಚರಂಡಿ ಸ್ವಚ್ಛಗೊಳಿಸಿಕೊಳ್ಳಲು ಮುಂದಾಗಿದ್ದಾಳೆ.

    ರಂಜಿತಾ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿದ್ದು ಇತರರಿಗೂ ಮಾದರಿಯಾಗಿ, ಇದನ್ನ ಕಂಡ ಇತರೆ ದಲಿತ ಕಾಲೋನಿ ನಿವಾಸಿಗಳು ತಮ್ಮ ತಮ್ಮ ಮನೆಗಳ ಮುಂದಿನ ಚರಂಡಿ ತಾವೇ ಸ್ವಚ್ಛ ಮಾಡಿಕೊಳ್ಳೋಕೆ ಮುಂದಾಗಿದ್ದಾರೆ.

    ಆದರೆ ಗ್ರಾಮ ಪಂಚಾಯ್ತಿ ಆಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಲಿತ ಕಾಲೋನಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ವರದಿ ಮಾಡಲು ಹೋದ ಮಾಧ್ಯಮದವರ ಮೇಲೂ ಕೆಲ ಗ್ರಾಮಸ್ಥರನ್ನ ಎತ್ತಿ ಕಟ್ಟಿ ಗಲಾಟೆ ಮಾಡಿಸೋಕೆ ಮುಂದಾಗಿದ್ದಾರೆ.

  • ಜನರು ರಸ್ತೆಯಲ್ಲಿ ಕಸ ಹಾಕೋದನ್ನ ತಡೆಯಲು ಪಾಲಿಕೆ ಸದಸ್ಯ ಗಾಂಧಿಗಿರಿ ಶುರು ಮಾಡಿದ್ರು!

    ಜನರು ರಸ್ತೆಯಲ್ಲಿ ಕಸ ಹಾಕೋದನ್ನ ತಡೆಯಲು ಪಾಲಿಕೆ ಸದಸ್ಯ ಗಾಂಧಿಗಿರಿ ಶುರು ಮಾಡಿದ್ರು!

    ಮೈಸೂರು: ಜನರು ರಸ್ತೆಗಳಲ್ಲಿ ಕಸ ಹಾಕುವುದನ್ನು ತಡೆಯುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಗಾಂಧಿಗಿರಿ ಶುರು ಮಾಡಿದ್ದಾರೆ.

    ವಾರ್ಡ್ ನಂಬರ್ 10ರ ಪಾಲಿಕೆ ಸದಸ್ಯ ಸುನೀಲ್ ಎಂಬವರು ಜನರು ಹೆಚ್ಚಾಗಿ ಕಸ ಹಾಕುವ ಪ್ರದೇಶದಲ್ಲಿ ರಾತ್ರಿ-ಹಗಲು ಕುಳಿತು ಗಾಂಧಿಗಿರಿಯನ್ನು ಆರಂಭಿಸಿದ್ದಾರೆ. ಚೆನ್ನಾಗಿರುವ ಸ್ಥಳವನ್ನೇ ಕಸ ಹಾಕುವ ಜಾಗ ಮಾಡಿಕೊಂಡಿದ್ದ ಸ್ಥಳೀಯರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕಸ ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಇದರಿಂದ ಗಾಂಧಿಗಿರಿ ಶುರು ಮಾಡಿದೆ ಎಂದು ಪಾಲಿಕೆ ಸದಸ್ಯ ಸುನೀಲ್ ಅವರು ಹೇಳಿದ್ದಾರೆ.

    ನಗರದ ವಿದ್ಯಾರಣ್ಯಪುರಂನಲ್ಲಿ ಸಿಕ್ಕ-ಸಿಕ್ಕಲ್ಲಿ ಕಸ ಹಾಕುವ ಸ್ಥಳವನ್ನು ಸದಸ್ಯರೇ ಸಂಪೂರ್ಣವಾಗಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸಿದ್ದಾರೆ. ನಂತರ ಅದೇ ಸ್ಥಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಕುಳಿತಿದ್ದಾರೆ. ಸುನೀಲ್ ಅವರಿಗೂ ಕೆಲವು ಸ್ಥಳೀಯರು ಸಾಥ್ ನೀಡಿ ಜೊತೆಗೆ ಕುಳಿತಿದ್ದಾರೆ. ಬೆಳಗ್ಗೆಯಿಂದ ಅದೇ ಸ್ಥಳದಲ್ಲಿ ಕುಳಿತು ಜನರು ಕಸ ಹಾಕುವುದನ್ನು ತಪ್ಪಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ಪ್ರಯತ್ನ ಮಧ್ಯರಾತ್ರಿವರೆಗೂ ಮುಂದುವರಿಯಲಿದೆ.

    ಇದನ್ನು ಓದಿ: ಮೈಸೂರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಸು ಮಾಡಿದವರಿಗೆ ಸನ್ಮಾನ – ಕ್ಲೀನ್ ಸಿಟಿ ಹೆಸರುಳಿಸಲು ಅಭಿಯಾನ

  • 21ನೇ ಶತಮಾನ ಭಾರತ, ಚೀನಾಗೆ ಸೇರಿದ್ದು: ಪ್ರಧಾನಿ ಮೋದಿ

    21ನೇ ಶತಮಾನ ಭಾರತ, ಚೀನಾಗೆ ಸೇರಿದ್ದು: ಪ್ರಧಾನಿ ಮೋದಿ

    ನವದೆಹಲಿ: 21ನೇ ಶತಮಾನ ಏಷ್ಯಾಗೆ ಸೇರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಸ್ವಾಮಿ ವಿವೇಕಾನಂದ ಅವರ ಚಿಕಾಗೋ ಭಾಷಣಕ್ಕೆ 125 ವರ್ಷ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರ 100 ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಮೋದಿ ಭಾಷಣ ಮಾಡಿದರು.

    ಒಂದೇ ಏಷ್ಯಾ ಎಂದು ವಿವೇಕಾನಂದರು ಪ್ರಥಮ ಬಾರಿಗೆ ಹೇಳಿದ್ದರು. ಆದರೆ ಈಗ ಏಷ್ಯಾ ಎಷ್ಟು ಎತ್ತರಕ್ಕೆ ಬೆಳೆಯುತ್ತಿದೆ ಎನ್ನುವುದು ಪ್ರಪಂಚಕ್ಕೆ ತಿಳಿಯುತ್ತಿದೆ. ಅದು ಭಾರತವೇ ಆಗಿರಲಿ ಅಥವಾ ಚೀನಾವೇ ಆಗಿರಲಿ ಎಂದರು.

    9/11 ದಿನ ಇಂದು ಬಹಳ ಪ್ರಸಿದ್ಧವಾಗಿದೆ. ಆದರೆ ಹೆಚ್ಚು ಪ್ರಚಾರದಕ್ಕೆ ಬಂದಿದ್ದು 2001ರ 9/11 ಘಟನೆಯಿಂದ. ಆದರೆ 1983 9/11ರಂದು ಸ್ವಾಮಿ ವಿವೇಕಾನಂದರ ಮಾಡಿರುವ ಭಾಷಣವನ್ನು ನಾವು ಈಗಲೂ ನೆನಪಿನಲ್ಲಿಟ್ಟುಕೊಂಡಿದ್ದೇವೆ. ಅಮೆರಿಕನ್ನರು 1983ರ 9/11ನ್ನು ಮರೆತ ಕಾರಣ 2001ರ 9/11 ಘಟನೆ ನಡೆಯಿತು ಎಂದು ಹೇಳಿದರು.

    ಕಾಲೇಜುಗಳಲ್ಲಿ ರೋಸ್ ದಿನ ಆಚರಣೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ನಾನು ವಿರೋಧಿಸುವುದಿಲ್ಲ. ಆದರೆ ರೋಸ್ ದಿನ ಬದಲು ಆ ರಾಜ್ಯದ ಸಂಪ್ರದಾಯದಂತೆ ಕೇರಳ ದಿನ, ಸಿಕ್ ದಿನ, ಪಂಜಾಬ್ ದಿನ ಅಂತ ಆಚರಿಸಿ ಎಂದು ಪ್ರಧಾನಿ ಸಲಹೆ ನೀಡಿದರು.

    ನಂತರ ಸ್ವಚ್ಛತೆ ಬಗ್ಗೆ ಮಾತನಾಡಿದ ಮೋದಿ, ಮೊದಲು ಶೌಚಾಲಯ ನಿರ್ಮಿಸಿ ನಂತರ ದೇವಾಲಯವನ್ನು ನಿರ್ಮಿಸಬೇಕು. ನಾನು ನನ್ನ ಆರೋಗ್ಯವನ್ನು ಸ್ವಚ್ಛತ ಕಾರ್ಮಿಕರಿಗೆ ಅರ್ಪಿಸುತ್ತೇನೆ ಹೊರತು ದುಬಾರಿ ಡಾಕ್ಟರ್ ಗಳಿಗೆ ಅಲ್ಲ ಎಂದರು.

    ಸೋಲು ಇಲ್ಲದೇ ಗೆಲುವಿಲ್ಲ. ಆದರೆ ನಾವು ಸೋಲಿನಿಂದ ಭಯಪಡಬಾರದು. ಸ್ವಾಮಿ ವಿವೇಕಾನಂದರ ಪ್ರಕಾರ ಜ್ಞಾನ ಮತ್ತು ಕೌಶಲ್ಯಗಳೆರಡಕ್ಕೂ ಸಮವಾಗಿ ಮಹತ್ವವಿದೆ. ಜನರು ಯಾವಾಗಲೂ ಮಹಿಳೆಯರೇ ಮತ್ತು ಮಹನಿಯರೇ ಎಂದು ಸಂಬೋಧಿಸಿ ಭಾಷಣ ಮಾಡುತ್ತಾರೆ. ಆದರೆ ವಿವೇಕಾನಂದರು ಸಹೋದರ, ಸಹೋದರಿ ಎಂದು ಹೇಳಿ ತಮ್ಮ ಭಾಷಣವನ್ನು ಆರಂಭಿಸಿದ್ದರು. ಮಹಿಳೆಯರನ್ನೂ ಗೌರವಿಸೋರಿಗೆ ನನ್ನ ವಂದನೆಗಳು ಎಂದು ಹೇಳಿದರು.

     

  • 10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆಯುತ್ತಿದೆ ಈ ನಾಯಿ!

    10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆಯುತ್ತಿದೆ ಈ ನಾಯಿ!

    ಬೀಜಿಂಗ್: ಪರಿಸರ ಸಂರಕ್ಷಣೆಗಾಗಿ, ಸ್ವಚ್ಛತೆಗಾಗಿ ದುಡಿಯುವ ಅನೇಕ ಪರಿಸರಪ್ರೇಮಿಗಳ ಬಗ್ಗೆ ಕೇಳಿರ್ತೀರ. ಹಾಗೇ ಇಲ್ಲೊಬ್ಬ ಪರಿಸರಪ್ರೇಮಿ ಬಗ್ಗೆ ನೀವು ಕೇಳಲೇಬೇಕು. ಅದು ಬೇರೆ ಯಾರೂ ಅಲ್ಲ, ಕಳೆದ 10 ವರ್ಷಗಳಿಂದ ನದಿಯೊಂದರ ತ್ಯಾಜ್ಯವನ್ನು ಸ್ವಚ್ಛ ಮಾಡ್ತಿರೋ ಈ ಗೋಲ್ಡನ್ ರಿಟ್ರೀವರ್ ನಾಯಿ.

    ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನಲ್ಲಿರುವ ನದಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನ ಹೆಕ್ಕಿ ತಂದು ಸ್ವಚ್ಛತೆ ಕಾಪಾಡುತ್ತಿದೆ ಈ ನಾಯಿ. ಈ ಬಗ್ಗೆ ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದ್ದು, ಈ ನಾಯಿ ಕಳೆದ 10 ವರ್ಷಗಳಲ್ಲಿ ನದಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆದಿದೆ ಎಂದು ಹೇಳಿದೆ. ಕೆಲವೊಮ್ಮೆ ದಿನಕ್ಕೆ 20 ರಿಂದ 30 ಬಾಟಲಿಗಳನ್ನ ಹೊರತೆಗೆದಿದೆ. ಇದಕ್ಕಾಗಿ ಈ ನಾಯಿಗೆ ಇದರ ಮಾಲೀಕ ತರಬೇತಿ ನೀಡಿದ್ದಾರೆ.

    ತನ್ನ ನಿಸ್ವಾರ್ಥ ಸೇವೆಯಿಂದ ಈ ನಾಯಿ ಸ್ಥಳೀಯರಿಗೆ ಸೆಲೆಬ್ರಿಟಿಯಾಗಿದೆ. ಟ್ವಿಟ್ಟರ್‍ನಲ್ಲಿ ಅನೇಕ ಮಂದಿ ಈ ನಾಯಿಯ ಸೇವೆಯನ್ನ ಶ್ಲಾಘಿಸಿದ್ದಾರೆ.

  • ಅಂಚೆ ಉದ್ಯೋಗಿಯೊಬ್ಬರ 1 ಎಫ್‍ಬಿ ಪೋಸ್ಟ್ ನಿಂದ 200 ಎಕ್ರೆಯ ಕೊಟ್ಟೂರು ಕೆರೆ ಕ್ಲೀನ್!

    ಅಂಚೆ ಉದ್ಯೋಗಿಯೊಬ್ಬರ 1 ಎಫ್‍ಬಿ ಪೋಸ್ಟ್ ನಿಂದ 200 ಎಕ್ರೆಯ ಕೊಟ್ಟೂರು ಕೆರೆ ಕ್ಲೀನ್!

    – ಸಾಮಾಜಿಕ ಜಾಲತಾಣದಿಂದ ಶುರುವಾಯ್ತು `ನಮ್ಮ ಕೆರೆ ನಮ್ಮ ಹಕ್ಕು’ ಆಂದೋಲನ

    ಬಳ್ಳಾರಿ: ಫೇಸ್‍ಬುಕ್ ದುರ್ಬಳಕೆ ಆಗ್ತಿದೆ, ಜನರ ಆಮೂಲ್ಯ ಸಮಯ ಹಾಳಾಗ್ತಿದೆ ಎಂದು ಆರೋಪಿಸುವ ಮಂದಿಯೇ ಅಧಿಕ. ಆದರೆ ಜಿಲ್ಲೆಯಲ್ಲಿ ಅಂಚೆ ನೌಕರರೊಬ್ಬರ ಪೋಸ್ಟ್ ನಿಂದಾಗಿ ಇದೀಗ ದೊಡ್ಡದೊಂದು ಆಂದೋಲನ ಶುರುವಾಗಿದೆ.

    ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಕೊಟ್ರೇಶ್ ಎಂಬವರು ಹಾಕಿದ ಪೋಸ್ಟ್ ಗೆ ಇಂದು ಸಾವಿರಾರು ಯುವಕರಿಗೆ ಪ್ರೇರಣೆಯಾಗಿದೆ. ಕೊಟ್ರೇಶ್ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಪಟ್ಟಣದ ನಿವಾಸಿ. ಕೊಟ್ಟೂರಿನ ಪುರಾತನ ಕಾಲದ 700 ಎಕರೆ ಕೆರೆಯಲ್ಲಿ ತುಂಬಿದ್ದ ಜಾಲಿ ಮುಳ್ಳುಗಳ ತೆರವು ಮಾಡಲು ಇವರು ಒಬ್ಬರೇ ಮುಂದಾಗಿದ್ದರು. ಕಳೆದ 5 ವಾರಗಳ ಹಿಂದೆ ರವಿವಾರ ದಿನ ಇವರು ಒಬ್ಬರೇ ಕರೆಯಲ್ಲಿನ ಜಾಲಿ ಮುಳ್ಳುಗಳ ತೆರವು ಮಾಡುವ ಕೆಲಸ ಆರಂಭಿಸಿದ್ದರು. ಕೆರೆ ಕ್ಲೀನ್ ಮಾಡೋ ಫೋಟೋವೊಂದನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ `ನಮ್ಮ ಕೆರೆ ನಮ್ಮ ಹಕ್ಕು’ ಕೆರೆ ಕ್ಲೀನ್ ಮಾಡೋಕೆ ಬನ್ನಿ ಅಂತಾ ಕರೆ ನೀಡಿದ್ದರು.

    ನಮ್ಮ ಕೆರೆ ನಮ್ಮ ಹಕ್ಕು ಪೋಸ್ಟ್:
    ಕೊಟ್ರೇಶ್ ಅವರು ಮಾಡಿದ ನಮ್ಮ ಕೆರೆ ನಮ್ಮ ಹಕ್ಕು ಪೋಸ್ಟ್ ನ್ನು ಗಮನಿಸಿದ ಸ್ಥಳೀಯರು ಇದೀಗ ಗುಂಪು ಗುಂಪಾಗಿ ಪ್ರತಿ ಭಾನುವಾರ ಕೆರೆ ಕ್ಲೀನ್ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂಚೆ ಕೋಟ್ರೇಶರ ಕೆರೆ ಕ್ಲೀನ್ ಮಾಡೋ ಉದ್ದೇಶ ಮನಗಂಡ ಸ್ಥಳೀಯರು ಕೆರೆಯಲ್ಲಿನ ಜಾಲಿಮುಳ್ಳುಗಳ ತೆರವಿಗೆ ತಮ್ಮ ಕೈಲಾದಷ್ಟೂ ಹಣ ನೀಡಿ ಸಹಾಯ ಮಾಡಿದ್ದಾರೆ. ಇನ್ನೂ ಕೆಲವರು ಸ್ವಪ್ರೇರಿತರಾಗಿ ಜೆಸಿಬಿ ಯಂತ್ರಗಳ ಬಾಡಿಗೆಯನ್ನು ಸಹ ನೀಡುವ ಮೂಲಕ ಕೆರೆಯಲ್ಲಿನ ಮುಳ್ಳುಗಳನ್ನು ತೆರವು ಮಾಡುತ್ತಿದ್ದಾರೆ.

    ಅಂಚೆ ಕ್ರೋಟ್ರೇಶರೊಂದಿಗೆ ಇದೀಗ ಕೊಟ್ಟೂರಿನ ಸುಮಾರು 150ಕ್ಕೂ ಹೆಚ್ಚು ಯುವಕರು ಪ್ರತಿ ಭಾನುವಾರು ಕೆರೆ ಕ್ಲೀನ್ ಮಾಡುವ ಮೂಲಕ ಇದೂವರೆಗೂ ಬರೋಬ್ಬರಿ 200 ಎಕರೆಯಲ್ಲಿನ ಮುಳ್ಳುಗಳನ್ನು ತೆರವು ಮಾಡಲಾಗಿದೆ.

    ಪುರಾತನ ಕಾಲದ ಈ ಕೊಟ್ಟೂರು ಕೆರೆ ಬರೋಬ್ಬರಿ 700 ಎಕರೆ ವಿಸ್ತಾರ ಹೊಂದಿದೆ. ಈಗಾಗಲೇ ಸ್ಥಳೀಯ ಯುವಕರು ಸ್ವಪ್ರೇರಣೆಯಿಂದ 200 ಎಕರೆ ವಿಸ್ತಾರದಲ್ಲಿನ ಜಾಲಿಮುಳ್ಳುಗಳನ್ನು ಕ್ಲೀನ್ ಮಾಡಿದ್ದಾರೆ. ಅಲ್ಲದೇ ಪ್ರತಿ ಭಾನುವಾರದಿಂದ ಭಾನುವಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸ್ವಪ್ರೇರಣೆಯಿಂದ ಆಗಮಿಸಿ ಕೆರೆ ಕ್ಲೀನ್ ಮಾಡುವ ಮೂಲಕ ಸರ್ಕಾರ ಜಿಲ್ಲಾಡಳಿತ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ.

    ಕೆರೆಗೆ ಬರೋ ನೀರಿನ ಮಾರ್ಗಗಳನ್ನು ಜಿಲ್ಲಾಡಳಿತ ಸರಿಪಡಿಸಿ ಮುಂದಿನ ದಿನಗಳಲ್ಲಿ ಕೆರೆಗೆ ನೀರು ಬರುವಂತೆ ಮಾಡಬೇಕಾಗಿದೆ. ಒಟ್ಟಾರೆ ಅಂಚೆ ಕೋಟ್ರೇಶರು ಫೇಸ್‍ಬುಕ್‍ನಲ್ಲಿ ಮಾಡಿದ ಪೊಸ್ಟ್ ಇದೀಗ ನೂರಾರು ಎಕರೆ ವಿಸ್ತಾರದ ಕೆರೆ ಕ್ಲೀನ್ ಮಾಡಲು ಪ್ರೇರಣೆಯಾಗಿದೆ.

     

     

  • ಸರ್ಕಾರಿ ಕಟ್ಟಡ ಸ್ವಚ್ಛ ಮಾಡ್ತಾರೆ: ಸಸಿ ನೆಟ್ಟು ಪೋಷಿಸ್ತಿದ್ದಾರೆ

    ಸರ್ಕಾರಿ ಕಟ್ಟಡ ಸ್ವಚ್ಛ ಮಾಡ್ತಾರೆ: ಸಸಿ ನೆಟ್ಟು ಪೋಷಿಸ್ತಿದ್ದಾರೆ

    ಶಿವಮೊಗ್ಗ: ಸರ್ಕಾರಿ ಕೆಲ್ಸ ದೇವರ ಕೆಲಸ ಅಂತ ಬಹುತೇಕರು ಕಚೇರಿಯ ನೈರ್ಮಲ್ಯೀಕರಣಕ್ಕೆ ಆದ್ಯತೆ ಕೊಡಲ್ಲ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಿವಮೊಗ್ಗದ ಬಸವಲಿಂಗಪ್ಪ ಅವರು ಸರ್ಕಾರಿ ಕಚೇರಿಗಳನ್ನ ಹುಡುಕಿ- ಹುಡುಕಿ ಸ್ವಚ್ಛಗೊಳಿಸ್ತಿದ್ದಾರೆ. ಈ ಮೂಲಕ ಅಧಿಕಾರಿಗಳನ್ನೂ ನಾಚಿಸುವಂತೆ ಮಾಡಿದ್ದಾರೆ.

    ಬಸವಲಿಂಗಪ್ಪ ಅವರು ಸರ್ಕಾರಿ ಕಚೇರಿಗಳಿಗೆ, ವಕೀಲರಿಗೆ ಇನ್ನಿತರರಿಗೆ ಸ್ಟಾಂಪ್‍ಪೇಪರ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವಿಶ್ರಾಂತಿ ಪಡೆಯದೆ ಬೆಳಗಿನ ಜಾವ 5.30ಕ್ಕೆ ಶಿವಮೊಗ್ಗದ ಡಿಸಿ ಕಾಂಪ್ಲೆಕ್ಸ್‍ಗೆ ಬಂದು 9.30ರವರೆಗೂ ಕೋರ್ಟ್ ಕಾಂಪ್ಲೆಕ್ಸ್, ಜಯನಗರ ಪೊಲೀಸ್ ಠಾಣೆ, ಆರ್‍ಟಿಓ ಕಚೇರಿ ಸೇರಿ ಹಲವಾರು ಸರ್ಕಾರಿ ಕಚೇರಿಗಳ ಆವರಣ ಸ್ವಚ್ಛ ಮಾಡುತ್ತಾರೆ.

    ನಾನಿರುವ ಸ್ಥಳ ಸ್ವಚ್ಛವಾಗಿರಬೇಕು ಅಂತ ಬಯಸೋ ಬಸವಲಿಂಗಪ್ಪ ಅವರು ಕಳೆದ 3 ವರ್ಷಗಳಿಂದ ಈ ಕಾರ್ಯವನ್ನ ಮಾಡ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ಈ ಪ್ರದೇಶದಲ್ಲಿ 72 ವಿಶೇಷ ತಳಿಯ ಮಾವಿನ ಸಸಿಗಳನ್ನು ನೆಟ್ಟು, ಖಾಲಿ ಬಾಟಲಿಗಳಲ್ಲಿ ನೀರುಣಿಸಿ ಪೋಷಿಸುತ್ತಿದ್ದಾರೆ.

    ಬಸಲಿಂಗಪ್ಪರ ಪುತ್ರಿ ಅಮೆರಿಕದಲ್ಲಿದ್ರೆ, ಮಗ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ತಾವು ಬಾಡಿಗೆ ಮನೆಯಲ್ಲಿದ್ದರೂ ತಮ್ಮ ಕಾರ್ಯಕ್ಕೆ ಹಿನ್ನಡೆಯಾಗಿಲ್ಲ ಎಂದು ಬಸಲಿಂಗಪ್ಪ ಹೇಳುತ್ತಾರೆ.

    https://www.youtube.com/watch?v=DDx6g5NJFYY