Tag: ಸ್ವಚ್ಛತೆ

  • ಪೊಲೀಸರ ಕೈಯಲ್ಲಿ ಲಾಠಿ ಬದಲು ಪೊರಕೆಯಿಂದ ಪರಿಸರ ಸ್ವಚ್ಛತಾ ಕಾರ್ಯ

    ಪೊಲೀಸರ ಕೈಯಲ್ಲಿ ಲಾಠಿ ಬದಲು ಪೊರಕೆಯಿಂದ ಪರಿಸರ ಸ್ವಚ್ಛತಾ ಕಾರ್ಯ

    ಯಾದಗಿರಿ: ಖಾಕಿ ಬಟ್ಟೆ ಧರಿಸಿ ಕೈಯಲ್ಲಿ ಲಾಠಿ ಹಿಡಿದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಖಾಕಿ ಪಡೆ ಇಂದು ಪೊರಕೆ ಹಿಡಿದು ಸ್ವಚ್ಛತಾ ಕಾಳಜಿ ಮೆರೆದಿದ್ದಾರೆ.

    ಹೌದು, ಯಾದಗಿರಿ ನಗರದ ವಿವಿಧೆಡೆ ಪೊಲೀಸರು ಕೈಯಲ್ಲಿ ಪೊರಕೆ ಹಿಡಿದು ಚರಂಡಿ, ರಸ್ತೆ ಮೇಲಿದ್ದ ರಾಶಿ ರಾಶಿ ಕಸವನ್ನು ತೆಗೆದು ನಗರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಅಷ್ಟೇ ಅಲ್ಲದೇ ನಗರದ ಜನರಿಗೆ, ಸ್ವಚ್ಛತೆ ಕಾಳಜಿ ಪ್ರತಿಯೊಬ್ಬರು ತೊರಬೇಕು, ಪ್ರತಿಯೊಬ್ಬರು ಸ್ವಚ್ಛತಾ ಕಾಳಜಿ ವಹಿಸಿದರೆ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವೆಂದು ಸಂದೇಶ ಸಾರಿದರು.

    ನಿತ್ಯವು ಆರೋಪಿಗಳನ್ನು ಹುಡುಕುವುದು, ಭದ್ರತೆಗೆಂದು ಲಾಠಿ ಹಿಡಿದುಕೊಂಡು ಖಾಕಿ ಪಡೆಗಳು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಇಂದು ಕರ್ತವ್ಯದ ಜಂಜಾಟ ಬಿಟ್ಟು ಪೊಲೀಸರು ಬೆಳ್ಳಂಬೆಳಗ್ಗೆ ಪೊರಕೆ ಹಿಡಿದು ಚರಂಡಿ ಸ್ವಚ್ಛತೆ ಮಾಡಿದರು. ಯಾದಗಿರಿಯ ಎಸ್‍ಪಿ ಯಡಾ ಮಾರ್ಟಿನ್ ನೇತೃತ್ವದಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

    ಯಾದಗಿರಿ ಎಸ್ಪಿ ಯಡಾ ಮಾರ್ಟಿನ್, ಡಿವೈಎಸ್ಪಿ ಪಾಂಡುರಂಗ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವೈದ್ಯರು ಕೂಡ ಖಾಕಿ ಪಡೆಗಳ ಜೊತೆ ಕೈಜೋಡಿಸಿದರು. ನಗರದ ಸುಭಾಷ್ ವೃತ್ತ, ಚಿತ್ತಾಪುರ ರಸ್ತೆ, ಹಳೆ ಬಸ್ ನಿಲ್ದಾಣ ಹಾಗೂ ಮೊದಲಾದ ಕಡೆ ಸ್ವಚ್ಛ ಮಾಡಿದರು. ಖುದ್ದು ಎಸ್ಪಿ ಯಡಾ ಮಾರ್ಟಿನ್ ಅವರು ಚರಂಡಿ ಹಾಗೂ ರಸ್ತೆ ಬದಿ ಇದ್ದ ತ್ಯಾಜ್ಯವನ್ನು ಕೈಯಿಂದ ತೆಗೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರಿಂದ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ!

    ಬೆಂಗ್ಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರಿಂದ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ!

    ಕೊಪ್ಪಳ: ಬೆಂಗಳೂರು ಮೂಲದ ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರು ಭಾನುವಾರ ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು.

    ಐಟಿ ಬಿಟಿಯಲ್ಲಿ ಕೆಲಸ ಮಾಡುವ 50 ಜನರ ತಂಡ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಪರ್ವತಕ್ಕೆ ಶನಿವಾರ ಆಗಮಿಸಿತ್ತು. ಆಂಜನೇಯನ ದರ್ಶನ ಪಡೆದು ನಂತರ ನೂರಾರು ಭಕ್ತರ ಜೊತೆ ಸಾಮೂಹಿಕ ಹನುಮಾನ್ ಚಾಲಿಸ್ ಪಾರಾಯಣ ಮಾಡಿದ್ದರು.

    ದರ್ಶನದ ಬಳಿಕ ಉತಿಷ್ಠ ಭಾರತ ತಂಡ ಮತ್ತು ಗಂಗಾವತಿಯ ಭಾರತ್ ಸೇವಾ ಟ್ರಸ್ಟ್ ಸದಸ್ಯರು ಅಂಜನಾದ್ರಿ ಪರ್ವತದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದರು. ಮಧ್ಯಾಹ್ನದವರೆಗೂ ಶ್ರಮದಾನ ಮಾಡಿದ ಕಾರ್ಯಕರ್ತರು ನಂತರ ಪಂಪಾ ಸರೋವರವನ್ನು ಸ್ವಚ್ಛಗೊಳಿಸಿದರು. ಕಳೆದ 2014ರ ಜುಲೈ 27ರಂದು ಲೋಕಾರ್ಪಣೆಗೊಂಡಿರೋ ಸಂಘಟನೆ, ಯುವಕರಲ್ಲಿ ದೇಶಭಕ್ತಿ ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.

  • ರಾಜ್ಯ ಯುವ ಬ್ರಿಗೇಡ್ ವತಿಯಿಂದ ಭೀಮಾ ನದಿ ಸ್ವಚ್ಛತಾ ಕಾರ್ಯಕ್ರಮ

    ರಾಜ್ಯ ಯುವ ಬ್ರಿಗೇಡ್ ವತಿಯಿಂದ ಭೀಮಾ ನದಿ ಸ್ವಚ್ಛತಾ ಕಾರ್ಯಕ್ರಮ

    ಕಲಬುರಗಿ: ನಿರುಪಯುಕ್ತ ವಸ್ತುಗಳಿಂದ ಕಲುಷಿತಗೊಂಡಿರುವ ಭೀಮಾ ನದಿಯನ್ನ ಸ್ವಚ್ಛ ಮಾಡಲು ರಾಜ್ಯ ಯುವ ಬ್ರಿಗೇಡ್ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

    ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯಲ್ಲಿರುವ ಭೀಮಾ ನದಿಯ ಸ್ವಚ್ಛತೆಯನ್ನು ಕೈಗೊಳ್ಳಲಾಗಿತ್ತು. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಿದರು. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ರಾಜ್ಯ ಯುವ ಬ್ರಿಗೇಡ್ ಸಂಘಟನೆಯೂ, ಈಗಾಗಲೇ ರಾಜ್ಯದ ವಿವಿಧಡೆ ಆರು ನದಿಗಳನ್ನ ಕ್ಲಿನ್ ಮಾಡಿದೆ.

    ಇದೀಗ ಸ್ವಚ್ಚತಾ ಕಾರ್ಯಕ್ರಮವನ್ನ ಮುಂದುವರೆಸಿಕೊಂಡು ಹೋಗಲು ಭೀಮಾ ನದಿಯನ್ನ ಆಯ್ಕೆ ಮಾಡಿಕೊಂಡಿದ್ದು, ನದಿ ಸಂಪೂರ್ಣ ಸ್ವಚ್ಚಗೊಳ್ಳುವರೆಗೂ ಪ್ರತಿ ಭಾನುವಾರ ಯುವ ಬ್ರಿಗೇಡ್ ಪಡೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲ್ಲಿದ್ದಾರೆ.

  • ಇಂದಿರಾ ಕ್ಯಾಂಟೀನ್ ಮೇಲಿರುವ ಆಸಕ್ತಿ ಬೆಳ್ಳಂದೂರು ಕೆರೆ ಮೇಲಿಲ್ಲ ಯಾಕೆ: ಸರ್ಕಾರಕ್ಕೆ ಹೈಕೋರ್ಟ್ ಚಾಟಿ

    ಇಂದಿರಾ ಕ್ಯಾಂಟೀನ್ ಮೇಲಿರುವ ಆಸಕ್ತಿ ಬೆಳ್ಳಂದೂರು ಕೆರೆ ಮೇಲಿಲ್ಲ ಯಾಕೆ: ಸರ್ಕಾರಕ್ಕೆ ಹೈಕೋರ್ಟ್ ಚಾಟಿ

    ಬೆಂಗಳೂರು: ನಗರದ ಬೆಳ್ಳಂದೂರು ಕೆರೆ ಸ್ವಚ್ಛತೆಯ ಕುರಿತು ಹೈಕೋರ್ಟ್ ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದೆ.

    ಬೆಳ್ಳಂದೂರು ಕೆರೆ ತ್ಯಾಜ್ಯ ನಿರ್ವಹಣೆಯ ಕುರಿತು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಯವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಇಂದು ಹೈಕೋರ್ಟ್ ನ ವಿಭಾಗೀಯ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಆಯುಕ್ತರಾದ ಮಹೇಂದ್ರ ಕುಮಾರ್ ಜೈನ್ ಹಾಗೂ ಬಿಡಿಎ ಆಯುಕ್ತರಾದ ರಾಕೇಶ್ ಸಿಂಗ್ ಹಾಜರಾಗಿದ್ದರು.

    ನ್ಯಾಯಮೂರ್ತಿಗಳಾದ ಎಚ್.ಜಿ.ರಮೇಶ್, ಬೆಳ್ಳಂದೂರು ಕೆರೆ ತ್ಯಾಜ್ಯ ನಿರ್ವಹಣೆ ಏನು ಕ್ರಮ ತೆಗೆದುಕೊಂಡಿದ್ದೀರಾ? ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ತಜ್ಞರ ನೇಮಕಕ್ಕೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದೀರಿ, ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ ಮೇಲಿರುವ ಕಾಳಜಿ ಕರೆಗಳ ಮೇಲಿಲ್ಲವೇ? ಕೆರೆ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆಗೆ ಜಾಹೀರಾತು ನೀಡಿದ್ದೀರಾ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಈ ಪ್ರಶ್ನೆಗೆ ಮಹೇಂದ್ರ ಕುಮಾರ್ ಜೈನ್ ಬೆಳ್ಳಂದೂರು ಕೆರೆ ಸ್ವಚ್ಛತೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಐಐಟಿಯ ತಜ್ಞರು, ಪ್ರೊಫೆಸರ್ ಗಳು ಸೇರಿದ್ದಾರೆ. ಸಾಕಷ್ಟು ಒತ್ತುವರಿಯನ್ನು ತೆರವುಗಳಿಸಲಾಗಿದ್ದು ತ್ಯಾಜ್ಯ ನೀರನ್ನು ತಡೆಯಲಾಗಿದೆ. ಕೆರೆಗೆ ಕಾಂಪೌಂಡ್ ಸಹ ಹಾಕಿ, ತ್ಯಾಜ್ಯ ಹಾಕದಂತೆ ತಡೆಯಲು ಗಾರ್ಡ್‍ಗಳನ್ನು ಸಹ ನೇಮಿಸಲಾಗಿದೆ. 2020 ರ ವೇಳೆ ಬೆಳ್ಳಂದೂರು ಕೆರೆ ಸಂಪೂರ್ಣವಾಗಿ ಸರಿಹೋಗುತ್ತದೆ ಎಂದು ಉತ್ತರಿಸಿದರು.

    ಈ ವೇಳೆ ಮಧ್ಯಪ್ರವೇಶಿಸಿದ ಹೈಕೋರ್ಟ್, ಬೆಂಗಳೂರು ಸಿಲಿಕಾನ್ ಸಿಟಿ ಆಫ್ ದಿ ವಲ್ರ್ಡ್ ಹಾಗೂ ಐಐಟಿ ಸೇರಿದಂತೆ ಅನೇಕ ತಂತ್ರಜ್ಞಾನ ಸಂಶೋಧನೆ ಕೇಂದ್ರಗಳಿವೆ. ಇವುಗಳನ್ನು ನೀವು ಬಳಸಿಕೊಂಡಿಲ್ಲ ಯಾಕೆ? ಬೆಂಗಳೂರು ಗ್ಲೋಬಲ್ ಲೀಡರ್ ಆಗಿದ್ದು, ಕೆಟ್ಟ ಸುದ್ದಿಗಳಿಗೆ ಸುದ್ದಿಯಾಗಿದೆ. ಕಸ ವಿಲೇವಾರಿ, ಕೆರೆಗಳಲ್ಲಿ ಬೆಂಕಿಯಿಂದ ವಿಶ್ವದೆಲ್ಲೆಡೆ ಸುದ್ದಿಯಾಗಿದೆ. ನಾರ್ವೆಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ, ಸ್ಯಾನಿಟರಿ ನೀರನ್ನು ಶುದ್ಧ ಮಾಡಿ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ. ಆದರೆ ನಮ್ಮ ಬೆಂಗಳೂರಿನಲ್ಲಿ ಕಾಲುವೆಗಳ ಬಳಿ ನಿಲ್ಲಲು ಸಾಧ್ಯವಿಲ್ಲ, ಸರ್ಕಾರ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಚಿಂತಿಸಿದೆಯೇ ಎಂದು ಹೈಕೋರ್ಟ್ ಸರ್ಕಾರವನ್ನು ಪುನಃ ಪ್ರಶ್ನಿಸಿತು.

    ಇದಕ್ಕೆ ಉತ್ತರಿಸಿದ ಆಯುಕ್ತರು ನಗರದ ನಾಲ್ಕು ಭಾಗಳಲ್ಲಿ ವಿದ್ಯುತ್ ತಯಾರಿಸಲು ಮುಂದಾಗಿದ್ದೇವೆ, ಬೆಳ್ಳಂದೂರು ಕೆರೆ ಶುದ್ದಿಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದರು.

    ವಾದವನ್ನು ಆಲಿಸಿದ ಹೈಕೋರ್ಟ್ ಬೆಳ್ಳಂದೂರು ಕೆರೆಯ ಸ್ವಚ್ಛತೆಯ ಕುರಿತು ನಿರ್ದೇಶನಗಳನ್ನು ಸರ್ಕಾರಕ್ಕೆ ನೀಡಿತು. ಇದರಲ್ಲಿ ಮೊದಲು ಸಮಿತಿ ಸಭೆಯಲ್ಲಿ ತಜ್ಞರ ಸಲಹೆ ಸೂಚನೆಗಳನ್ನು ಪರಿಗಣಿಸಿ ಕ್ರಿಯಾಯೋಜನೆ ಸಿದ್ದಪಡಿಸಬೇಕು, ಸಮನ್ವತೆಯಿಂದ ಸಮಯ ವ್ಯರ್ಥ ಮಾಡದಂತೆ ಕೆಲಸ ಮುಂದುವರಿಸಿಕೊಂಡು ಹೋಗಬೇಕು. ಕೆರೆ ಸ್ವಚ್ಛತೆಗೆ ಗುತ್ತಿಗೆ ನೀಡಬೇಕು, ಅನಗತ್ಯವಾಗಿ ಹಣ ಖರ್ಚಾಗದಂತೆ ನಿಗಾ ವಹಿಸಬೇಕು. ಮುಂದಿನ ವಿಚಾರಣೆ ದಿನದೊಳಗೆ ಕಾಮಗಾರಿ ಪ್ರಗತಿಯ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿ ಸೆಪ್ಟೆಂಬರ್ 18ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.

  • ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

    ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

    ಬೆಳಗಾವಿ:ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಯ ಸ್ಕೂಲ್ ಬ್ಯಾಗಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯ ಬ್ಯಾಗನ್ನು ಶಾಲೆ ಗೋಡೆಯ ಬಳಿ ಇಟ್ಟಿದ್ದಾನೆ. ಆದರೆ ಸ್ವಲ್ಪ ಸಮಯದ ನಂತರ ಆ ಬ್ಯಾಗಿನಿಂದ ಹಾವು ಹೊರಬಂದಿದೆ. ಹಾವು ಬ್ಯಾಗಿನಿಂದ ಹೊರಬರುತ್ತಿರುವುದನ್ನು ಕಂಡ ಇತರ ವಿದ್ಯಾರ್ಥಿಗಳ ಗಾಬರಿಗೊಂಡು ಶಿಕ್ಷಕರನ್ನು ಕರೆದು ಹಾವನ್ನು ತೋರಿಸಿದ್ದಾರೆ. ನಂತರ ಶಿಕ್ಷಕರು ಮತ್ತು ಗ್ರಾಮಸ್ಥರು ಸೇರಿ ಹಾವನ್ನು ಹೊಡೆದು ಹಾಕಿದ್ದಾರೆ.

    ಈ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದ್ದು, ಗಿಡಗಂಟಿಗಳು ಎಲ್ಲಂದರಲ್ಲಿ ಬೆಳೆದುಕೊಂಡಿವೆ. ಹೀಗಾಗಿ ಹಾವು ಮತ್ತು ಚೇಳುಗಳು ಆಗಾಗ ಶಾಲೆಗೆ ಅತಿಥಿಗಳಾಗಿ ಬಂದು ಬಂದು ಭೇಟಿ ನೀಡುತ್ತವೆ. ಹೀಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಸ್ವಚ್ಛತೆಗೆ ಒತ್ತು ಕೊಡುತ್ತಾರಾ ಕಾದು ನೋಡಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ಇಳಿವಯಸ್ಸಲ್ಲೂ ಕುಗ್ಗದ ಉತ್ಸಾಹ – ಗೋಲಗುಂಬಜ್ ಸುತ್ತ ನಿತ್ಯ ಶುಚಿತ್ವ ಮಾಡ್ತಾರೆ ವಿಜಯಪುರದ ರಮೇಶ್ ಕುಲಕರ್ಣಿ!

    ಇಳಿವಯಸ್ಸಲ್ಲೂ ಕುಗ್ಗದ ಉತ್ಸಾಹ – ಗೋಲಗುಂಬಜ್ ಸುತ್ತ ನಿತ್ಯ ಶುಚಿತ್ವ ಮಾಡ್ತಾರೆ ವಿಜಯಪುರದ ರಮೇಶ್ ಕುಲಕರ್ಣಿ!

    ವಿಜಯಪುರ: ವಿಜಯಪುರ ಎಂದು ಹೇಳುತ್ತಿದ್ದಂತೆ ನಮಗೆ ಮೊದಲು ನೆನಪಾಗುವುದು ಗೋಲ್‍ಗುಂಬಜ್ ಐತಿಹಾಸಿಕ ತಾಣ. ಇಲ್ಲಿಗೆ ನಿತ್ಯ ಸಾವಿರಾರೂ ಪ್ರವಾಸಿಗರೂ ಬಂದು ಹೋಗುತ್ತಾರೆ. ಯಾರೂ ಕೂಡ ಸ್ವಚ್ಛತೆಯ ಬಗ್ಗೆ ಗಮನ ನೀಡುವುದಿಲ್ಲ. ಆದರೆ ಇಂದು ನಮ್ಮ ಪಬ್ಲಿಕ್ ಹೀರೋ 76 ವರ್ಷದ ರಮೇಶ್ ಕುಲಕರ್ಣಿಯವರು ಇಳಿವಯಸ್ಸಿನಲ್ಲಿಯೂ ಕೂಡ ಪ್ರತಿನಿತ್ಯ ಸ್ವಚ್ಛತಾ ಕಾರ್ಯ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.

    ರಮೇಶ್ ಕುಲಕರ್ಣಿಯವರು (76) ಜಿಲ್ಲೆಯ ಸ್ಟೇಷನ್ ರಸ್ತೆಯ ಗಣೇಶ ನಗರದ ನಿವಾಸಿಯಾಗಿದ್ದಾರೆ. ಇವರು ಸೇನೆಯ ಸರ್ಜನ್ ಹಾಗೂ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿಯೂ ಕೂಡ ನಿತ್ಯ ಗೋಲ್‍ಗುಂಬಜ್ ಬರುವ ಇವರು ಕೈಯಲ್ಲಿ ಬಡಿಗೆ ಹಾಗೂ ಚಿಲ ಹಿಡಿದು ಸ್ಥಳದಲ್ಲಿರುವ ಕಸ-ಕಡ್ಡಿ, ವಾಟರ್ ಬಾಟಲ್‍ಗಳನ್ನು ಆಯ್ದು ಶುಚಿಗೊಳಿಸುತ್ತಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲು ದಿನನಿತ್ಯ ವಾಕಿಂಗ್ ಬರುತ್ತಿದ್ದೆ. ಈ ವೇಳೆ ಅನೇಕ ಪ್ರವಾಸಿಗರು ಸ್ಥಳದಲ್ಲಿ ಗಲೀಜು ಮಾಡಿ ಹೋಗುತ್ತಿದ್ದನ್ನು ಕಂಡು ಬೇಸರವಾಗುತ್ತಿತ್ತು. 2014ರ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿ ಅಂದಿನಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇನೆ. ದಿನ ನಿತ್ಯ ಇಲ್ಲಿಗೆ ಬಂದು ಸ್ವಚ್ಛಗೊಳಿಸುತ್ತೇನೆ. ಈ ಕುರಿತು ಪ್ರವಾಸಕ್ಕೆ ಬರುವ ವಿದೇಶಿಗಳು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸುತ್ತಾರೆ. ಆದರೆ ಸ್ಥಳೀಯರು ನಿಮಗೆ ಎಷ್ಟು ಹಣ ಕೊಡುತ್ತಾರೆ ಎಂದು ಕೇಳುತ್ತಾರೆ. ಇವರಿಗೆ ದೇಶಾಭಿಮಾನದ ಬಗ್ಗೆ ಕಾಳಜಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು.

    ಸ್ವಚ್ಛ ಭಾರತ್ ಎಂಬ ಬ್ಯಾನರ್ ಹಾಕಿಕೊಂಡು ಸ್ಥಳಕ್ಕೆ ಬರುವ ಪ್ರವಾಸಿಗರು, ಮಕ್ಕಳಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸುತ್ತಿದ್ದಾರೆ. ಇಲ್ಲಿಯವರೆಗೂ ಯಾರೊಬ್ಬರ ಸಹಾಯವಿಲ್ಲದೆ ಏಕಾಂಗಿಯಾಗಿ ಸ್ವಚ್ಛತಾ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದೇನೆ. ಇನ್ನು ಮುಂದೆಯೇ ನಿರ್ವಹಿಸಿಕೊಂಡು ಹೋಗುತ್ತೇನೆ. ಸ್ವಚ್ಛತೆಯ ಬಗ್ಗೆ ಎಲ್ಲರೂ ಗಮನಹರಿಸಬೇಕು, ಮೊದಲು ನಾವು ಸ್ವಚ್ಛತೆ ಕುರಿತು ಅರಿವು ಬೆಳೆಸಿಕೊಳ್ಳಬೇಕು ಆಗ ಸ್ವಚ್ಛ ಭಾರತ ನಿರ್ಮಾಣವಾಗುತ್ತದೆ ಎಂದು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ರವಿ ಬಿಸನಾಳ, ರಮೇಶ್ ಕುಲಕರ್ಣಿಯವರು ಹಲವು ದಿನಗಳಿಂದ ಈ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಇಳಿವಯಸ್ಸಿನಲ್ಲಿಯೂ ಕೂಡ ಉತ್ಸಾಹದಿಂದ ಸ್ವಚ್ಛತಾ ಕಾರ್ಯ ಮಾಡುತ್ತಾರೆ ಎಂದು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ರಮೇಶ್ ಕುಲಕರ್ಣಿಯವರು ಸ್ವಚ್ಛತಾ ಅಭಿಮಾನದ ನೈಜ ರಾಯಭಾರಿಯಾಗಿದ್ದಾರೆ. ತಮ್ಮ ಇಳಿವಯಸ್ಸಿನ ಕಾರ್ಯವು ಎಲ್ಲರಿಗೂ ಮಾದರಿಯಾಗಬೇಕಾಗಿದೆ.

    https://www.youtube.com/watch?v=kWsVau7235o

  • ಸ್ವಚ್ಛಗೊಳಿಸಲೆಂದು ಬಾವಿಗಿಳಿದ ಯುವಕನ ರಕ್ಷಣೆಗೆ ತೆರಳಿದವರು ಸೇರಿ ಮೂವರು ಜಲಸಮಾಧಿ!

    ಸ್ವಚ್ಛಗೊಳಿಸಲೆಂದು ಬಾವಿಗಿಳಿದ ಯುವಕನ ರಕ್ಷಣೆಗೆ ತೆರಳಿದವರು ಸೇರಿ ಮೂವರು ಜಲಸಮಾಧಿ!

    ಕಲಬುರಗಿ: ಬಾವಿ ಸ್ವಚ್ಛಗೊಳಿಸಲು ಹೋದ ಮೂವರು ಬಾವಿಯೊಳಗೇ ಬಿದ್ದು ಸಮಾಧಿಯಾದ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಕವಲಗಾ ಕೆ ಗ್ರಾಮದ ಬಳಿ ನಡೆದಿದೆ.

    ತಂದೆ ಚನ್ನಣ್ಣಗೌಡ (60) ಮಗ ಮಲ್ಲಣಗೌಡ (20) ಗ್ರಾಮಸ್ಥ ಮೆಹಬೂಬ್ ಮೃತ ದುರ್ದೈವಿಗಳು. ಕವಲಗಾ ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿನ ಬಾವಿಯ ನೀರು ಇಡೀ ಗ್ರಾಮಕ್ಕೆ ಜಲ ಮೂಲವಾಗಿತ್ತು. ಆದ್ರೆ ಇತ್ತಿಚೆಗೆ ಬಾವಿ ಬತ್ತಿ ಹೋಗಿದ್ದ ಕಾರಣ ಸ್ವಚ್ಛಗೊಳಿಸಲು ಮಲ್ಲಣಗೌಡ ಇಳಿದಿದ್ದರು.

    50 ಅಡಿಗೂ ಅಧಿಕ ಆಳದ ಜೊತೆ ತುಂಬಾ ಇಕ್ಕಟ್ಟಾದ ಬಾವಿಗೆ ಇಳಿದ ಕಾರಣ ಒಳಗಡೆಯಿಂದ ಯಾವುದೇ ಸುಳಿವು ಕಾಣಲಿಲ್ಲ. ಹೀಗಾಗಿ ಮಗನನ್ನು ರಕ್ಷಿಸಲು ಚನ್ನಣ್ಣಗೌಡ ಬಾವಿಗೆ ಇಳಿದಿದ್ದಾರೆ. ಇವರಿಬ್ಬರೂ ಪತ್ತೆಯಾಗದ ಕಾರಣ ಮೆಹಬೂಬ್ ಅವರು ಕಾಪಾಡಲು ಇಳಿದಿದ್ದಾರೆ. ಆದರೆ ಆಮ್ಲಜನಕದ ಕೊರತೆಯಿಂದಾಗಿ ಮೂವರೂ ಬಾವಿಯೊಳಗೆ ಸಮಾಧಿಯಾಗಿದ್ದಾರೆ.

    ಸುದ್ದಿ ತಿಳಿದು ಫರಹತಾಬಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕದಳದವರು ಗ್ರಾಮಕ್ಕೆ ಆಗಮಿಸಿದ್ದು, ಶವ ಹೊರತೆಗೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ದೇಶದ ಸ್ವಚ್ಛ ವಿಮಾನ ನಿಲ್ದಾಣ –  ಮಂಗಳೂರಿಗೆ ಪ್ರಶಸ್ತಿ

    ದೇಶದ ಸ್ವಚ್ಛ ವಿಮಾನ ನಿಲ್ದಾಣ – ಮಂಗಳೂರಿಗೆ ಪ್ರಶಸ್ತಿ

    ಮಂಗಳೂರು: ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ನೀಡುವ ದೇಶದ ಸ್ವಚ್ಛ ವಿಮಾನ ನಿಲ್ದಾಣ ಪ್ರಶಸ್ತಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.

    ನವದೆಹಲಿಯಲ್ಲಿ ನಡೆದ 23ನೇ ವಾರ್ಷಿಕ ಸಮಾರಂಭದಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿವಿ ರಾವ್ ಪ್ರಶಸ್ತಿಯನ್ನು ಸ್ವೀಕರಿಸಿದರು. ದೇಶದ 53 ವಿಮಾನ ನಿಲ್ದಾಣಗಳಲ್ಲಿ ಸಮೀಕ್ಷೆ ನಡೆಸಿ ಎಎಐ ಮಂಗಳೂರು ವಿಮಾನ ನಿಲ್ದಾಣವನ್ನು ದೇಶದ ಅತ್ಯಂತ ಸ್ವಚ್ಛ ನಿಲ್ದಾಣ ಎಂದು ತೀರ್ಮಾನಿಸಿ ಪ್ರಶಸ್ತಿ ನೀಡಿದೆ.

     

    ಮಂಗಳೂರು ವಿಮಾನ ನಿಲ್ದಾಣ ಶುಚಿತ್ವದ ಜವಾಬ್ದಾರಿಯನ್ನು ದುರ್ಗಾ ಫೆಸಿಲಿಟಿ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸೇವಾ ಸಂಸ್ಥೆಗೆ ವಹಿಸಲಾಗಿದೆ.

    ದೇಶದ್ಯಾಂತ ಸಮೀಕ್ಷೆ ನಡೆಸಿದ ಎಎಐ ಮಂಡಳಿಯ ಅಧಿಕಾರಿಗಳು ವಿಮಾನ ನಿಲ್ದಾಣದ ಟರ್ಮಿನಲ್, ಪಾರ್ಕಿಂಗ್ ಪ್ರದೇಶ, ಶೌಚಾಲಯ, ವಾಣಿಜ್ಯ ಮಳಿಗೆಗಳು ಹಾಗೂ ನಿಲ್ದಾಣದ ರಸ್ತೆ ಸೇರಿದಂತೆ ಪ್ರಯಾಣಿಕರ ಕೊಠಡಿಗಳ ಸ್ವಚ್ಛತೆಯ ಬಗ್ಗೆ ಸಮೀಕ್ಷೆ ನಡೆಸಿದ್ದರು.

  • ಕೈಗೆ ಕೋಳ ಹಾಕದೆ ಕೈದಿಗಳಿಂದ ವಸತಿ ಗೃಹದ ಸ್ವಚ್ಛತೆ

    ಕೈಗೆ ಕೋಳ ಹಾಕದೆ ಕೈದಿಗಳಿಂದ ವಸತಿ ಗೃಹದ ಸ್ವಚ್ಛತೆ

    ಮಂಗಳೂರು: ಮಂಗಳೂರಿನ ಜೈಲು ಅಪರಾಧಿಗಳ ಪಾಲಿನ ನರಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಸಾಕ್ಷಿ ಜೈಲಿನ ಎದುರುಗಡೆ ಇರುವ ಜೈಲರ್ ವಸತಿಗೃಹವನ್ನು ಕೈದಿಗಳಿಂದಲೇ ಕ್ಲೀನ್ ಮಾಡಿಸಿದ್ದಾರೆ.

    ವಿಚಾರಣಾಧೀನ ಕೈದಿಗಳಿಗೆ ಕೈಗೆ ಕೊಳ ಹಾಕದೆ ಸ್ವತಂತ್ರವಾಗಿ ಬಿಟ್ಟು ವಸತಿಗೃಹ ಕ್ಲೀನ್ ಮಾಡಿಸಿದ್ದಾರೆ. ಇದು ಜೈಲಿನ ಮತ್ತೊಂದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಸುಮಾರು 7 ರಿಂದ 8 ಕೈದಿಗಳು ಕ್ಲೀನ್ ಮಾಡುತ್ತಿದ್ದರೆ ಪೊಲೀಸರು ಮಾತ್ರ ಕೈದಿಗಳನ್ನು ದೂರದಲ್ಲೇ ಬಿಟ್ಟು ತಮ್ಮಷ್ಟಕ್ಕೆ ಹರಟೆ ಹೊಡೆಯುತ್ತಾ ಕುಳಿತಿದ್ದರು. ಈ ಮೂಲಕ ಜೈಲಿನ ಅಕ್ರಮಗಳಿಗೆ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜೈಲಿನ ಒಳಭಾಗದಲ್ಲಿ ಕೈದಿಗಳಿಂದ ಕೆಲಸ ಮಾಡಿಸುವುದು ಸಾಮಾನ್ಯವಾಗಿದೆ. ಆದರೆ ಜೈಲಿನ ಹೊರಗೆ ಸಾರ್ವಜನಿಕ ಪ್ರದೇಶದಲ್ಲೂ ಕೈದಿಗಳನ್ನು ಸ್ವತಂತ್ರವಾಗಿ ಬಿಟ್ಟು ಕೆಲಸ ಮಾಡಿಸಿರುವುದು ಮಂಗಳೂರು ಜೈಲಿನಲ್ಲಿ ಮಾತ್ರ. ಅಧಿಕಾರಿಗಳ ಸೂಚನೆಯಂತೆ ಕೆಲಸಕ್ಕೆಂದು ಹೊರಗೆ ಬಂದ ಕೈದಿಗಳು ಅಲ್ಲಿಂದಲೇ ತಪ್ಪಿಸಿಕೊಂಡು ಹೋಗಿ ಮತ್ತೊಂದು ದುಷ್ಕೃತ್ಯ ಎಸಗಿದರೆ ಯಾರು ಹೊಣೆ ಎಂಬ ಮಾತು ಸಾರ್ವಜನಿಕವಾಗಿ ವ್ಯಕ್ತವಾಗಿದೆ.

    ಈ ಹಿಂದೆ ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೈಲಿನೊಳಗೇ ಒಂದೇ ದಿನ ಇಬ್ಬರು ಪಾತಕಿಗಳ ಹತ್ಯೆ ನಡೆದಿದೆ. ಗುಂಡು ಪಾರ್ಟಿ ನಡೆಸಿರೋದು, ತಪಾಸಣೆಗೆ ತೆರಳಿದ್ದ ಸ್ಥಳೀಯ ಪೊಲೀಸರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಹಿಂದೆ ಇದೇ ರೀತಿ ಕೈದಿಗಳಿಂದ ವಸತಿಗೃಹ ಕ್ಲೀನ್ ಮಾಡಿಸಿದ್ದ ವರದಿಯನನ್ನ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಿದ ಬಳಿಕ ಅಂದಿನ ಜೈಲು ಅಧೀಕ್ಷಕರನ್ನು ಅಮಾನಾತು ಮಾಡಲಾಗಿತ್ತು.

  • ‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

    ‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

    ಚಿಕ್ಕಮಗಳೂರು: ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಇಂದು ಯುವ ಜನತೆ ಹಾಳಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ನಡುವೆ ಈ ಮಾಧ್ಯಮಗಳನ್ನು ಬಳಸಿ ಚಿಕ್ಕಮಗಳೂರಿನ ಯುವಕರು ಸಮಾಜ ಮೆಚ್ಚುವ ಕೆಲಸ ಮಾಡಿದ್ದಾರೆ.

    ಹೌದು. 4 ವರ್ಷದ ಹಿಂದೆ ನಿವಾಸಿ ದಿವಿನ್ ಎಂಬವರು ಮಾಡಿದ ನಮ್ಮುಡುಗ್ರು ಗ್ರೂಪ್ ಇಂದು ಒಂದು ಗುಡ್ಡವನ್ನೇ ಕ್ಲೀನ್ ಮಾಡಿದೆ.

    ಪ್ರವಾಸಿಗರಿಂದ ಹಾಳಾದ ಮೂಡಿಗೆರೆಯ ದೇವರಮನೆ ಗುಡ್ಡದ ಫೋಟೋವನ್ನ ಸದಸ್ಯರೊಬ್ಬರು ಗ್ರೂಪ್‍ನಲ್ಲಿ ಹಾಕಿದ್ದರು. ಈ ಫೋಟೋವನ್ನು ನೋಡಿ ಕೂಡಲೇ ಕಾರ್ಯಪ್ರವೃತರಾದ ಸದಸ್ಯರು ನಾವೇ ಕ್ಲೀನ್ ಮಾಡೋಣ ಎಂದು ನಿರ್ಧರಿಸಿ ಜನವರಿ 14ರ ಮಕರ ಸಂಕ್ರಾಂತಿ ಹಬ್ಬದ ದಿನದಂದು ಎಲ್ಲರೂ ಒಂದುಗೂಡಿ ದೇವರಮನೆ ಗುಡ್ಡವನ್ನ ಕ್ಲೀನ್ ಮಾಡಿದ್ದಾರೆ.

    ಗುಡ್ಡವನ್ನು ಕ್ಲೀನ್ ಮಾಡಿದ ಸದಸ್ಯರೇ ನಾಮಫಲಕವನ್ನು ಹಾಕಿದ್ದಾರೆ. ಇದು ನಿಮ್ಮ ಪ್ರಕೃತಿ, ಒಮ್ಮೆ ಹಾಳಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನ ಉಳಿಸಿ-ಬೆಳೆಸುವ ಮನಸ್ಥಿತಿಯವರು ಮಾತ್ರ ಬನ್ನಿ ಎಂದು ಗ್ರೂಪ್ ಅಡ್ಮಿನ್ ದಿವಿನ್ ನಾಮಫಲಕ ಹಾಕಿದ್ದಾರೆ.

    ಮತ್ತೊಂದು ವಿಷಯ ಏನೆಂದರೆ ಈ ಗ್ರೂಪಿನ ಬಹುತೇಕರು ಒಬ್ಬರಿಗೊಬ್ಬರು ಪರಿಚಯವಿಲ್ಲ. ಮುಖವನ್ನೂ ನೋಡಿಲ್ಲ. ಆದರು ಗ್ರೂಪ್‍ನಲ್ಲಿ ಬಂದ ಒಂದು ಮೇಸೆಜ್ ಹಾಗೂ ಫೋಟೋಗೆ ಎಲ್ಲರೂ ಸ್ಪಂದಿಸಿದ್ದಾರೆ. ಹಬ್ಬ ಎನ್ನುವುದನ್ನು ಮರೆತು 250ಕ್ಕೂ ಅಧಿಕ ಗ್ರೂಪಿನ ಸದಸ್ಯರು ಎಲ್ಲರೂ ಒಂದೆಡೆ ಸೇರಿ ದೇವರಮನೆ ಗುಡ್ಡವನ್ನ ಸ್ವಚ್ಛ ಮಾಡಿದ್ದಾರೆ. ಸ್ವಚ್ಛತಾ ಕಾರ್ಯದ ವೇಳೆ ಎರಡೂ ಟ್ರ್ಯಾಕ್ಟರ್ ಬಿಯರ್ ಬಾಟಲಿ, ಎರಡು ಟ್ರ್ಯಾಕ್ಟರ್ ಪ್ಲಾಸ್ಟಿಕ್ ಸಿಕ್ಕಿದೆ.

    ಎಲ್ಲ ರಾಜಕೀಯ ಪಕ್ಷದ ಸದಸ್ಯರು ಈ ಗ್ರೂಪಿನಲ್ಲಿದ್ದು ಎಲ್ಲರೂ ರಾಜಕೀಯವನ್ನು ಬಿಟ್ಟು ಈ ಒಳ್ಳೆ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ವಿಶೇಷ. ವಾಟ್ಸಪ್ ಹಾಗೂ ಫೇಸ್‍ಬುಕ್‍ಗಳು ಬರೀ ಮನೋರಂಜನೆಗಷ್ಟೆ ಇಲ್ಲ. ಇದರಿಂದಲೂ ಒಳ್ಳೆ ಕೆಲಸ ಆಗುತ್ತೆ ಅನ್ನೋದಕ್ಕೆ ಮಲೆನಾಡಿನ ಈ ಗ್ರೂಪ್ ಸಾಕ್ಷಿಯಾಗಿದೆ. ವಾಟ್ಸಪ್‍ನಿಂದ ಆರಂಭವಾದ ಒಂದು ಗ್ರೂಪ್ ಈ ಪ್ರಮಾಣದ ಕೆಲಸ-ಕಾರ್ಯ ಮಾಡಿರೋದಕ್ಕೆ ಮಲೆನಾಡಿಗರು ಶಹಬ್ಬಾಸ್ ಎಂದಿದ್ದಾರೆ.