ಕೋಲಾರ: ತನ್ನ ಕಚೇರಿಯ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಡಿ-ಗ್ರೂಪ್ ನೌಕರರಿಗೆ ಸ್ವಚ್ಛತೆಯ ಪಾಠ ಹೇಳಿಕೊಟ್ಟಿದ್ದಾರೆ.
ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸ್ವತಃ ತಮ್ಮ ಕಚೇರಿಯ ಶೌಚಾಲಯವನ್ನು ಇಂದು ಶುದ್ಧ ಮಾಡುವ ಮೂಲಕ ಸಾವಿರಾರು ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಕಚೇರಿಯ ಶೌಚಾಲಯವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.
ಶಿಕ್ಷಕರು ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸಿಕೊಳ್ಳುವುದರಿಂದ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತ ಕಲ್ಪನೆ ಪ್ರಧಾನಿ ಮೋದಿ ಅವರಿಂದ ಆರಂಭವಾಗಿದ್ದು, ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಒಂದು ವರ್ಷದ ಹಿಂದೆ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛ ಮಾಡುವ ಮೂಲಕ ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಮಾದರಿಯಾಗಿದ್ದರು. ಅದರಂತೆ ಕೋಲಾರ ಬಿಇಓ ಶೌಚಾಲಯ ಸ್ವಚ್ಛ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಬಿಇಓ ನಾಗರಾಜ್‍ಗೌಡ ಅವರ ಶೌಚಾಲಯ ಸ್ವಚ್ಛ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ್ದ ಪ್ರವಾಹ ಸದ್ಯ ತಗ್ಗಿದ್ದು, ತಮ್ಮ ಶಾಲೆಯ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಶಾಲೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಉಂಟಾಗಿದ್ದ ಭೀಕರ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಕೊಂಚ ಮಟ್ಟದಲ್ಲಿ ಪ್ರವಾಹದ ನೀರು ತಗ್ಗಿದ್ದು, ಅದರಿಂದ ಸೃಷ್ಟಿಯಾಗಿರುವ ಅವಾಂತರಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಗೆ ನೀರು ತುಂಬಿ ಕೆಸರುಮಯವಾಗಿತ್ತು. ಹೀಗಾಗಿ ನೀರು ತಗ್ಗಿರುವ ಕಾರಣಕ್ಕೆ ಈ ಶಾಲೆಯ ವಿದ್ಯಾರ್ಥಿಗಳೇ ಶಾಲೆಯ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.
ಕಲಿಕೆಯಲ್ಲಿ ಆಸಕ್ತಿ ಇರುವ ಕಾರಣಕ್ಕೆ ತಮ್ಮ ಶಾಲೆಯನ್ನು ತಾವಾಗೆ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳು ನಿರ್ಧರಿಸಿ, ಸ್ನೇಹಿತರೊಟ್ಟಿಗೆ ಸೇರಿಕೊಂಡು ಉತ್ಸಾಹದಿಂದ ಶಾಲೆಯನ್ನು ಸ್ವಚ್ಛ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿಗೆ ಮೆಚ್ಚಿದ ಶಿಕ್ಷಕರ ವರ್ಗ ಹಾಗೂ ಎಸ್‍ಡಿಎಂಸಿ ಸದಸ್ಯರು ಕೂಡ ಮಕ್ಕಳಿಗೆ ಸಾಥ್ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈಜೊಡಿಸಿದ್ದಾರೆ.
ಶಾಲಾ ಕೊಠಡಿಗಳಿಗೆ ಹಾಗೂ ಆವರಣಕ್ಕೆ ಪುಟಾಣಿ ಮಕ್ಕಳು ಪೈಪ್‍ಗಳ ಮೂಲಕ ನೀರು ಹಾಕುತ್ತಿದ್ದರೆ, ಇತರೆ ವಿದ್ಯಾರ್ಥಿಗಳು ಪೊರಕೆಯಿಂದ ಗುಡಿಸಿ ಕಸವನ್ನು, ಕೆಸರನ್ನು ಹೊರಗಡೆ ಎಸೆಯುತ್ತಿದ್ದಾರೆ. ಅಲ್ಲದೆ ಮಳೆಗೆ ಶಾಲೆಯ ಕೆಲ ಕೊಠಡಿಗಳ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಅದನ್ನು ಕೂಡ ಮಕ್ಕಳೇ ಸ್ವಚ್ಛಗೊಳಿಸುತ್ತಿದ್ದಾರೆ.
ಗದಗ: ಜಿಲ್ಲೆಯ ಸ್ವಚ್ಛತಾ ಯುವಸೇನೆ ತಂಡದ ಯುವಕರು ಪ್ರತಿ ರವಿವಾರ ಸ್ವಚ್ಛತಾ ಆಂದೋಲನಕ್ಕೆ ಮುಂದಾಗಿದ್ದಾರೆ.
ಬೇರೆ ಬೇರೆ ಕಾಲೇಜಿನ ಸ್ನೇಹಿತರೆಲ್ಲ ಸೇರಿಕೊಂಡು ಈ ಒಂದು ಟೀಮ್ ಮಾಡಿಕೊಂಡಿದ್ದಾರೆ. ಗದಗ ಬೆಟಗೇರಿ ಅವಳಿ ನಗರದ ಸ್ವಚ್ಛ ಹಾಗೂ ಸೌಂದರ್ಯಕ್ಕಾಗಿ ಈ ಯುವಪಡೆ ಸುಂದರ ಕನಸು ಕಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕೈದು ವಾರಗಳಿಂದ ನಗರದ ಪ್ರಮುಖ ಬೀದಿಗಳು, ಗಾರ್ಡ್‍ಗಳು ಮತ್ತು ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗುತ್ತಿದೆ.
ಸುಮಾರು 30 ವಿದ್ಯಾರ್ಥಿಗಳು ನಿಸರ್ಗ ಯುವಪಡೆಯಲ್ಲಿ ಇದ್ದಾರೆ. ಪ್ರತಿ ರವಿವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸ್ವಚ್ಛತೆಯ ಶ್ರಮದಾನ ಮಾಡುತ್ತಿದ್ದಾರೆ. ಸಲಿಕೆ, ಬುಟ್ಟೆ, ಗುದ್ದಲಿ ಹಾಗೂ ಇತರೆ ಸಲಕರಣೆಗಳನ್ನು ಹಿಡಿದು ಕ್ಲೀನ್ ಮಾಡುವ ಮೂಲಕ ಕಸ ವಿಲೇವಾರಿ ಬಗ್ಗೆ ಸ್ಥಳೀಯರಲ್ಲಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಜನರು ಸ್ವಚ್ಛವಾಗಿ ಆರೋಗ್ಯವಾಗಿರಬೇಕು, ರೋಗರುಜಿನಗಳಿಂದ ದೂರವಿರಬೇಕು, ನಗರ ಸೌಂದರ್ಯ ಹೆಚ್ಚಿಸಬೇಕೆಂಬ ಉದ್ದೇಶ ನಮ್ಮದಾಗಿದೆ. ನಮ್ಮ ಜೊತೆ ಸ್ಥಳೀಯರು ಕೈಜೋಡಿಸಿ ಪ್ರೋತ್ಸಾಹಿಸಬೇಕು ಎಂದು ಸ್ವಚ್ಛತಾ ಯುವಪಡೆಯ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.
ಭೋಪಾಲ್: ನಾನು ಶೌಚಾಲಯ ಹಾಗೂ ಚರಂಡಿ ಸ್ವಚ್ಛಗೊಳಿಸಲು ಸಂಸದೆಯಾಗಿ ಆಯ್ಕೆಯಾಗಿಲ್ಲ ಎಂದು ಹೇಳುವ ಮೂಲಕ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೆಹೋರೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡುವ ವೇಳೆ ಈ ರೀತಿ ಹೇಳಿದ್ದು, ನಾನು ಚರಂಡಿ ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ ಅರ್ಥ ಮಾಡಿಕೊಳ್ಳಿ. ನಾನು ಯಾವ ಕೆಲಸ ಮಾಡಲು ಚುನಾಯಿತಳಾಗಿದ್ದೇನೆ ಎನ್ನುವುದು ತಿಳಿದಿದೆ. ಆ ಕೆಲಸವನ್ನು ನಾನು ಮಾಡುತ್ತೇನೆ, ಈ ಕುರಿತು ಹಲವು ಬಾರಿ ಹೇಳಿದ್ದೇನೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಪ್ರದೇಶದಲ್ಲಿ ಹೆಚ್ಚು ನೈರ್ಮಲ್ಯವಿದ್ದು ಸ್ವಚ್ಛತೆಯ ಕೊರತೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ನಿಮ್ಮ ಶೌಚಾಲಯ, ಚರಂಡಿ ಸ್ವಚ್ಛಗೊಳಿಸುವುದು ನನ್ನ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.
ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸ್ಥಳೀಯ ಶಾಸಕರು, ಪುರಸಭೆ ಕೌನ್ಸಿಲರ್ ಗಳು ಸೇರಿದಂತೆ ಸ್ಥಳೀಯ ಸಾರ್ವಜನಿಕ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವುದು ಸಂಸತ್ ಸದಸ್ಯರ ಕರ್ತವ್ಯ. ಕ್ಷೇತ್ರದ ಜನರು ಹಾಗೂ ಕಾರ್ಯರ್ತರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದು ಪ್ರಧಾನಿ ಮೋದಿ ಅವರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಹಲವು ಬಾರಿ ಹೇಳಿದ್ದಾರೆ. ಆದರೂ ಸಹ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾರ್ಯರ್ತರ ಬಳಿ ನಿರ್ಲಕ್ಷ್ಯದಿಂದ ವರ್ತಿಸಿದ್ದು, ಸ್ಥಳಿಯ ಸಮಸ್ಯೆಗಳನ್ನು ನಿಮ್ಮ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ ಎಲ್ಲ ಸಮಸ್ಯೆಗಳನ್ನೂ ನನ್ನ ಬಳಿ ಹೇಳಿಕೊಳ್ಳಬೇಡಿ ಎಂದು ಗುಡುಗಿದ್ದಾರೆ.
ಪ್ರಜ್ಞಾ ಸಿಂಗ್ ಹೇಳಿಕೆಗೆ ಕಾಂಗ್ರೆಸ್ ನಾಯಕ ತಾರಿಖ್ ಅನ್ವರ್ ಪ್ರತಿಕ್ರಿಯಿಸಿ, ಈ ಹೇಳಿಕೆಯಿಂದ ಸ್ವಚ್ಛ ಭಾರತದ ಬಗ್ಗೆ ಅವರು ಯಾವ ರೀತಿಯ ಮನಸ್ಥಿತಿ ಹೊಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಮೋದಿ ಸ್ವಾಧ್ವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲೋಕಸಭಾ ಚುನಾವಣೆಯ ಪ್ರಚಾರ ಮಾಡುವ ಸಂದರ್ಭದಲ್ಲಿ 2008ರ ಮಲೆಗಾಂವ್ ಸ್ಫೋಟದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್, ಗಾಂಧಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ದೇಶಭಕ್ತ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ಗಾಂಧಿ ಹತ್ಯೆ ಕುರಿತು ಯಾರೇ ಹೇಳಿಕೆ ನೀಡಿದರೂ ಅವರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಕಲಬುರಗಿ: ಜಿಲ್ಲಾಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರಗೆ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳು ಹಾಗೂ ಪ್ರತಿ ವಾರ್ಡ್ ನಲ್ಲಿಯೂ ಸ್ವಚ್ಛತೆ ಜೊತೆಗೆ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ತರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಶಿವಾನಂದ್ ಪಾಟೀಲ್ ಸೂಚನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಕಲಬುರಗಿ ಜಿಲ್ಲಾಸ್ಪತ್ರೆ ಅಲ್ಲದೇ ರಾಜ್ಯ ಸೇರಿದಂತೆ ದೇಶಾದ್ಯಂತ ರೇಬಿಸ್ ಔಷಧ ಕೊರತೆಯಿದೆ. ರೇಬಿಸ್ ಔಷಧ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ವಿವರಣೆ ಕೇಳಿದೆ. ಅಲ್ಲದೇ ಅಗತ್ಯಕ್ಕೆ ತಕ್ಕಂತೆ ರೇಬಿಸ್ ಔಷಧ ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.
ಕೊಪ್ಪಳ: ಕಲ್ಲು ಮಣ್ಣಿನಿಂದ ಮುಚ್ಚಿ ಹೋಗಿದ್ದ ಹಾಲಬಾವಿಯನ್ನು ಯುವಕರು ಹೂಳೆತ್ತಿ ಸ್ವಚ್ಛಗೊಳಿಸಿದ್ದರಿಂದ ಈಗ ನೀರಿನ ಸೆಲೆ ಬಂದಿದೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಹನುಮಸಾಗರದ ಸೋಮಶಂಕರ ದೇವಸ್ಥಾನದಲ್ಲಿರುವ ಬಾವಿಯನ್ನು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದ ಯುವಕರು ಹೂಳೆತ್ತಿ ಸ್ವಚ್ಛಗೊಳಿಸಿದ್ದಾರೆ. ನೂರಾರು ವರ್ಷ ಹಳೆಯದಾದ 35 ಅಡಿ ಅಗಲವಿರುವ ಬಾವಿಗೆ ಕಲ್ಲು, ಮಣ್ಣು ಬಿದ್ದು ಮುಳ್ಳಿನ ಗಿಡಗಳು ಬೆಳೆದಿದ್ದವು. ಇದರಿಂದ ಬಾವಿ ಮುಚ್ಚಿ ಹೋಗಿತ್ತು.
ಬೆಳಗ್ಗೆ ಯುವಕರು ವಾಯುವಿಹಾರಕ್ಕೆ ಹೋಗುತ್ತಿದ್ದಾಗ ಈ ಬಾವಿ ಮುಚ್ಚಿರುವುದನ್ನು ಗಮನಿಸಿದ್ದಾರೆ. ಮುಚ್ಚಿದ ಬಾವಿಯನ್ನು ಸ್ವಚ್ಛ ಮಾಡುತ್ತಿದ್ದಾಗ ನೀರಿನ ಸೆಲೆ ಬಂದಿದೆ.
ಈಗ ಬೇಸಿಗೆಗಾಲ ಶುರುವಾಗಿದ್ದು, ಎಲ್ಲೆಲ್ಲೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಮನುಷ್ಯರಿಗೆ ಕುಡಿಯುಲು ನೀರು ಸಿಗುತ್ತಿಲ್ಲ. ಆದರೆ ಈ ಬಾವಿ ಸ್ವಚ್ಛತೆಯಿಂದ ಬೇಸಿಗೆಯಲ್ಲಿ ನೀರಿನ ಸೆಲೆ ಬಂದಿರುವುದು ಸಂತಸ ತಂದಿದೆ. ಇದರಿಂದ ಪ್ರಾಣಿ ಪಕ್ಷಿ ಸಂಕುಲಕ್ಕೆ ದಾಹ ತೀರಿದರೆ ನಮ್ಮ ಪರಿಶ್ರಮ ಸಾರ್ಥಕ ಎಂದು ಯುವಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ಸ್ವಚ್ಛ ಭಾರತ ಎಂದು ರಾಜಕಾರಣಿಗಳು ಫೋಟೋಗೆ ಪೋಸ್ ಕೊಟ್ಟು ಭಾಷಣದಲ್ಲಿ ಮಾರುದ್ಧ ಮಾತಾಡಿ ಕೈ ತೊಳೆದುಕೊಂಡಿದ್ದು ನೋಡಿದ್ದೇವೆ. ಆದ್ರೆ ಕೊಪ್ಪಳದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಸ್ವಯಂ ಸ್ವಚ್ಛತಾ ಆಂದೋಲನದ ಹವಾ ಸೃಷ್ಟಿಯಾಗಿದೆ.
ಕೊಪ್ಪಳದ ಗವಿ ಮಠದ ಶ್ರೀ ಅಭಿನವ ಗವಿ ಶ್ರಿಗಳು ಇದಕ್ಕೆ ಚಾಲನೆ ನಿಡಿದ್ದು ಇದರ ಪರಿಣಾಮವಾಗಿ ಇದೀಗ ಜಿಲ್ಲಾದ್ಯಂತ ಹಳ್ಳಕೊಳ್ಳ ಸೇರಿದಂತೆ ಎಲ್ಲೆಂದರಲ್ಲಿ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ. ಈ ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ ಸ್ಥಳೀಯರು ಪಾಲ್ಗೊಳ್ಳುತ್ತಿದ್ದಾರೆ. ಅದರಂತೆ ಇಂದು ಗಂಗಾವತಿಯ ದುರ್ಗಮ್ಮ ಹಳ್ಳದ ಸ್ವಚ್ಛತೆಗೆ ಹಾಸ್ಯ ದಿಗ್ಗಜ ಬಿಚಿ ಪ್ರಾಣೇಶ್ ನೇತೃತ್ವದಲ್ಲಿ ಗಂಗಾವತಿ ನೂರಾರು ಜನ ಪಾಲ್ಗೊಂಡು ಮೂರು ಕಿಮೀ ದೂರದವರೆಗೆ ಹಳ್ಳ ಸ್ವಚ್ಛಗೊಳಿಸಿದ್ದಾರೆ.
ದುರ್ಗಮ್ಮ ಹಳ್ಳ ಸ್ವಚ್ಛತಾ ಸೇವಾ ಸಮಿತಿ ಮೊದಲ ಹಂತದಲ್ಲಿ ಪ್ಲಾಸ್ಟಿಕ್ ಕಚ್ಚಾವಸ್ತುಗಳನ್ನು ತೆಗೆಯಲಿದ್ದು ನಂತರ ಹಳ್ಳದ ಹೂಳು ತಗೆಯುವ ಕಾರ್ಯಕ್ಕೆ ಮುಂದಾಗಲಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಈ ಸ್ವಚ್ಛತಾ ಕಾರ್ಯದ ಟೈಂ ಟೇಬಲ್ ಸಿದ್ಧಗೊಂಡಿದೆ. ಹಳ್ಳಕ್ಕೆ ಮೇ 10 ರಂದು ಕೊಪ್ಪಳ ಅಭಿನಯ ಗವಿಶ್ರೀಗಳು ಹೂಳು ತೆಗೆಯಲು ಚಾಲನೆ ನೀಡಲಿದ್ದಾರೆ.
ನಗರದ ಮಧ್ಯ ಇರುವ ಈ ಹಳ್ಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಇದನ್ನು ಒಂದು ಪ್ರವಾಸಿ ತಾಣವಾಗುವಂತೆ ಮಾಡುವುದೇ ಗುರಿಯಾಗಿದೆ. ಹಳ್ಳದ ಪಕ್ಕದಲ್ಲೇ ಇರುವ ದುರ್ಗಮ್ಮ ಗುಡಿಗೆ ಬರುವವರು ಈ ಹಳ್ಳದಲ್ಲಿ ಸ್ನಾನ ಮಾಡಿ ಬರುವಂತೆ ಆಗಬೇಕು ಎಂದು ಹಾಸ್ಯ ದಿಗ್ಗಜ ಬಿಚಿ ಪ್ರಾಣೇಶ್ ಹೇಳಿದ್ದಾರೆ.
ಅರುಣ್ ಬಡಿಗೇರ್ ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರಣಾಸಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಗುಜರಾತಿನ ವಡೋದರದಿಂದ ಸ್ಪರ್ಧಿಸಿದ್ದ ಮೋದಿ ಈ ಬಾರಿ ವಾರಣಾಸಿಯಿಂದ ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಕಳೆದ 5 ವರ್ಷದಲ್ಲಿ ಮೋದಿ ಆಡಳಿತದಲ್ಲಿ ಕಾಶಿಯಲ್ಲಿ ಏನು ಬದಲಾಗಿದೆ? ಗಂಗಾ ನದಿ ಎಷ್ಟು ಸ್ವಚ್ಛವಾಗಿದೆ ಎನ್ನುವ ಪ್ರಶ್ನೆ ಏಳುವುದು ಸಹಜ. ಈ ಪ್ರಶ್ನೆಗೆ ಬುಲೆಟ್ ರಿಪೋರ್ಟರ್ ನಲ್ಲಿ ಉತ್ತರ ಸಿಕ್ಕಿದೆ. ಜನ ಹೇಳಿದ್ದು ಏನು? ಏನು ಆಗಬೇಕಿದೆ? ಜನ ಮತ್ತೆ ಮೋದಿಗೆ ವೋಟ್ ಹಾಕ್ತಾರಾ ಈ ಎಲ್ಲ ಪ್ರಶ್ನೆಗಳಿಗೆ ಜನ ನೀಡಿದ ಉತ್ತರ ಇಲ್ಲಿದೆ.
ವಾರಣಾಸಿ ಹೆಸರು ಬಂದಿದ್ದು ಹೇಗೆ?
‘ವರುಣಾ’ ಮತ್ತು ‘ಅಸ್ಸಿ’ ನದಿಗಳ ಮಧ್ಯ ಭಾಗದಲ್ಲಿರುವುದರಿಂದ ಈ ಪ್ರದೇಶಕ್ಕೆ ವಾರಣಾಸಿ ಹೆಸರು ಬಂದಿದೆ. ಆರಂಭದಲ್ಲಿ ಇದನ್ನ ವರುಣಾಆಸಿ ಎಂದು ಕರೆಯಲಾಗುತಿತ್ತು. ಕಾಲ ಕ್ರಮೇಣ ಅದು ವಾರಣಾಸಿ ಆಗಿ ಬದಲಾಯ್ತು. ಹಾಗೆಯೇ ಬನಾರಸ್ ಹೆಸರು ಬರಲು ಹಿನ್ನೆಲೆಯಿದೆ. ‘ಬನಾ’ ಅಂದ್ರೆ ಹಿಂದಿಯಲ್ಲಿ ‘ತಯಾರಿದೆ’, ‘ರಸ’ ಅಂದ್ರೆ ‘ನವರಸ’ಗಳು. ಇಲ್ಲಿಗೆ ಬರುವವರಿಗೆ 9 ನವರಸಗಳು ಸಿದ್ಧವಾಗಿ ಸಿಗುತ್ತದೆ ಎನ್ನುವುದಕ್ಕೆ ಬನಾರಸ್ ಅಂತಾ ಕರೆಯುತ್ತಾರೆ.
ಈ ಕ್ಷೇತ್ರ ಕಾಶಿ ವಿಶ್ವನಾಥನ ಸ್ಥಳ, ಶಿವನ ನಗರಿ ಎಂದು ಕರೆಯಲಾಗುತ್ತದೆ. 3500 ವರ್ಷಗಳ ಲಿಖಿತ ದಾಖಲೆ ಹೊಂದಿರೋ ಪುರಾತನ ನಗರಿ ಎಂದೇ ಕರೆಸಿಕೊಂಡಿದೆ. ಇಲ್ಲಿಗೆ 5,000ಕ್ಕೂ ಹೆಚ್ಚು ಪ್ರವಾಸಿಗರು ಪ್ರತಿ ನಿತ್ಯ ಬಂದು ಹೋಗುತ್ತಾರೆ.
ಎಲ್ಲೆಂದರಲ್ಲಿ ಜೋತು ಬಿದ್ದ ವೈರ್‍ಗಳು, ಎಲ್ಲೆಂದರಲ್ಲಿ ಎಸೆಯುತ್ತಿದ್ದ ಪ್ಲಾಸ್ಟಿಕ್ ಚೀಲಗಳು, ಗಂಗಾ ನದಿಯ ತಟದಲ್ಲಂತೂ ನಿಲ್ಲಲು ಅಸಾಧ್ಯವಾಗುವ ರೀತಿಯಲ್ಲಿ ನೈರ್ಮಲ್ಯ, ವಾಸನೆಯಿಂದ ತುಂಬಿರುತ್ತಿತ್ತು. ಆದರೆ ಈಗ ಕಾಶಿ ಬದಲಾಗಿದೆ. ಈ ಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಮಾತುಗಳು ಕೇಳಿ ಬರುತ್ತಿವೆ.
ಘಾಟ್‍ಗಳ ಸ್ವಚ್ಛತೆ ಆಗಿದ್ಯಾ?
ಎಲ್ಲರೂ ಹೇಳುವ ಹಾಗೆ ಘಾಟ್‍ಗಳಲ್ಲಿ ಸ್ವಚ್ಛತೆ ಕಾಣಿಸುತ್ತಿದೆ. 2014ರಲ್ಲಿದ್ದ ಘಾಟ್‍ಗಳಿಗೂ ಈಗಿರುವ ಘಾಟ್‍ಗಳಿಗೂ ತುಂಬಾ ವ್ಯತ್ಯಾಸವಿದೆ. ಘಾಟ್‍ಗಳಲ್ಲಿ ಪ್ರತಿ 4 ಗಂಟೆಗಳಿಗೊಮ್ಮೆ ಕಸವನ್ನು ಗುಡಿಸಲಾಗುತ್ತದೆ. ಗಂಗಾ ನದಿಯಲ್ಲಿ ಎಸೆಯುವ ಹೂ, ತೆಂಗಿನಕಾಯಿ, ಪ್ಲಾಸ್ಟಿಕ್ ಕಸವನ್ನು ಬೋಟ್‍ನಲ್ಲಿ ಹೋಗಿ ಸ್ವಚ್ಛಗೊಳಿಸಲಾಗುತ್ತದೆ. ಇನ್ನು ಪ್ರತಿ ಘಾಟ್‍ಗಳಲ್ಲೂ ಎರಡೆರಡು ಕಸದ ಡಬ್ಬಿಗಳನ್ನ ಇಡಲಾಗಿದೆ. ಜೊತೆಗೆ ಘಾಟ್‍ನಲ್ಲಿರುವ ಅರ್ಚಕರು, ನಾವಿಕರು, ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತದೆ. ಆದರೂ ಕೆಲ ಜನರು ಸಿಕ್ಕ ಸಿಕ್ಕ ಕಡೆ ಹೂವು, ತೆಂಗಿನಕಾಯಿ, ಪ್ಲಾಸ್ಟಿಕ್ ಚೀಲ ಎಸೆದು ಹೋಗುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ.
ಗಂಗಾ ನದಿ ಸ್ವಚ್ಛವಾಗಿದ್ಯಾ?
ಘಾಟ್‍ಗಳಲ್ಲಿ ಸ್ವಚ್ಛತಾ ಕಾರ್ಯವೆಲ್ಲ ನಡೆಯುತ್ತಿದೆ. ಆದ್ರೆ, ವಾರಣಾಸಿಯಲ್ಲಿನ ಚರಂಡಿ ನೀರು ಇನ್ನೂ ಗಂಗಾ ನದಿಯನ್ನು ಸೇರುತ್ತಿದೆ. ಸುಮಾರು 175 ಕಡೆ ಇಂತಹ ಚರಂಡಿ ನೀರನ್ನು ಗಂಗಾ ನದಿಗೆ ಬಿಡುವ ಜಾಗಗಳಿವೆ. ಇದರಲ್ಲಿ ಪ್ರಮುಖ ಘಾಟ್‍ಗಳಲ್ಲಿನ ಈ ಮೋರಿ ನೀರನ್ನು ಬಿಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೆ ಆ ಎಲ್ಲ ಮೋರಿ ನೀರು ಘಾಟ್‍ಗಳನ್ನು ದಾಟಿ ಮುಂದೆ ಹೋದ ನಂತರ ಗಂಗಾ ನದಿಗೆ ದೊಡ್ಡ ಪ್ರಮಾಣದಲ್ಲಿ ಚರಂಡಿ ನೀರನ್ನು ಬಿಡಲಾಗುತ್ತದೆ. ಬಳಿಕ ಇದೇ ಗಂಗಾ ನದಿಯ ನೀರನ್ನ ಶುದ್ಧೀಕರಿಸಿ ವಾರಣಾಸಿಯ ಜನತೆ ಕುಡಿಯುವ ನೀರನ್ನಾಗಿ ಸರಬರಾಜು ಮಾಡಲಾಗುತ್ತದೆ.
ಮೋದಿ ಬಂದ ನಂತರ ಘಾಟ್‍ಗಳಿಗೆ ಬೆಳಕಿನ ಅಲಂಕಾರ ಮಾಡಿಸಿದ್ರು, ಘಾಟ್‍ಗಳ ಸ್ವಚ್ಛತೆ ಮಾಡಿಸಿದ್ರು, ಆದ್ರೆ, ಘಾಟ್‍ಗಳಲ್ಲಿ ಕುಡಿಯುವ ನೀರಿಗಾಗಿ ಮಾಡಿಸಿದ ಟ್ಯಾಂಕ್‍ಗಳನ್ನು ಹಾಗೆ ಬಿಟ್ಟರು. ಪ್ರತಿ ಟ್ಯಾಂಕ್‍ಗಳಿಗೆ 5 ಲಕ್ಷ ಖರ್ಚಾಗಿದೆ. ಇನ್ನೂ ಗಂಗಾ ನದಿಗೆ ಬಿಡುವ ಕಲ್ಮಶ ನೀರನ್ನು ಮೊದಲು ನಿಲ್ಲಿಸಿ ಎನ್ನುವ ಮಾತನ್ನು ಇಲ್ಲಿನ ಸಾರ್ವಜನಿಕರು ಹೇಳುತ್ತಾರೆ. ನೋಡಲು ಚೆನ್ನಾಗಿದ್ದರೆ ಸಾಲದು, ಗಂಗಾ ನದಿಯೂ ಸ್ವಚ್ಛವಾಗಬೇಕು ಎನ್ನುವುದು ಜನರ ಕೂಗು.
ವಿದ್ಯುತ್ ತಂತಿಗಳು
ವಾರಣಾಸಿ ಗಲ್ಲಿ ಗಲ್ಲಿಗಳಿಂದ ಕೂಡಿದ ಜಾಗ. ಇಲ್ಲಿ ಒಂದು ಗಲ್ಲಿಯೊಳಗೆ ನುಗ್ಗಿದರೆ ಸಾಕು ಅದು ಇನ್ನೊಂದು ಜಾಗಕ್ಕೆ ತುಂಬಾ ಬೇಗನೆ ಮುಟ್ಟಿಸುತ್ತೆ, ಆದ್ರೆ ಸಿಕ್ಕಾಪಟ್ಟೆ ಇಕ್ಕಟ್ಟು ಇರುತ್ತೆ. ಇಂತಹ ಜಾಗದಲ್ಲೇ ಇಲ್ಲಿನ ಜನ ಬೈಕ್‍ನಲ್ಲಿ ಸವಾರಿ ಮಾಡ್ತಾರೆ. ಇಂತಹ ಜಾಗದಲ್ಲೇ ತರಕಾರಿ ಮಾರಲು ತಳ್ಳು ಗಾಡಿಯಲ್ಲಿ ಬರ್ತಾರೆ. ಈ ಜಾಗದಲ್ಲಿ ಸಂಚರಿಸುವುದೇ ಒಂದು ರೀತಿ ಚೆಂದ. ಇಂತಹ ಜಾಗದಲ್ಲಿ ಈ ಹಿಂದೆ ವಿದ್ಯುತ್ ಸಂಪರ್ಕಿಸುವ ತಂತಿಗಳು ಎಲ್ಲೆಂದರೆಲ್ಲಿ ತೂಗಾಡುತ್ತಿದ್ದವು, ಆದ್ರೆ ಇದೆಲ್ಲ ಈಗ ಬದಲಾಗಿದೆ. ಜೊತೆಗೆ ಕಾಶಿ ವಿಶ್ವನಾಥನ ಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲೂ ಎಲ್ಲೆಂದರಲ್ಲಿ ಜೋತಾಡುತ್ತಿದ್ದ ವೈರ್‍ಗಳು ಈಗ ಭೂಮಿಯಡಿಯಲ್ಲಿ ಹೋಗಿವೆ. ಭೂಮಿಯ ಮೇಲ್ಭಾಗದಲ್ಲಿ ವಿದ್ಯುತ್ ದೀಪಗಳು ರಾರಾಜಿಸುತ್ತಿವೆ. ಇದು ಇಲ್ಲಿನ ಜನರ ಮನ ಸೆಳೆದಿದೆ. ಮಳೆಗಾಲ ಬಂದಾಗ ಯಾವಾಗ ಕೇಬಲ್‍ಗಳು ತುಂಡಾಗಿ ಬೀಳುತ್ತದೋ ಯಾವಾಗ ಶಾಕ್ ಹೊಡೆಯುತ್ತದೋ ಎನ್ನುವ ಭಯದಲ್ಲಿ ವಾಸಿಸುತ್ತಿದ್ದರಂತೆ. ಈಗ ಇದೆಲ್ಲ ಬದಲಾವಣೆ ನೋಡಿ ನಮಗೆ ತುಂಬ ಖುಷಿಯಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ವಿದ್ಯುತ್ ವ್ಯತ್ಯಯ ಇಲ್ಲ
ಇಲ್ಲಿನ ಜನರು ಮೋದಿ ಮತ್ತು ಯೋಗಿ ಆದಿತ್ಯನಾಥ ಬಗ್ಗೆ ಇಷ್ಟೊಂದು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಲು ಕಾರಣ ಏನಂದ್ರೆ, ಅದು 24 ಗಂಟೆ ವಿದ್ಯುತ್ ಪೂರೈಕೆ. ಮುಂಚೆ ಇಲ್ಲಿ ದಿನಕ್ಕೆ 8 ರಿಂದ 10 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿತ್ತು. ಆದ್ರೆ, ಈಗ ಇಲ್ಲಿ ವಿದ್ಯುತ್ ವ್ಯತ್ಯಯ ಇಲ್ಲದಿರೋದು ಜನರಿಗೆ ಮತ್ತಷ್ಟು ಮೋದಿ ಮೋದಿ ಅನ್ನುವಂತೆ ಮಾಡಿದೆ. ಆದರು ಇಲ್ಲಿ ಅಪರೂಪಕ್ಕೆ ಈಗ ದಿನಕ್ಕೆ ಒಂದೆರಡು ಗಂಟೆ ಕರೆಂಟ್ ಹೋಗುತ್ತದೆ. ಬೇಸಿಗೆಯಲ್ಲಿ ಇಲ್ಲಿನ 44-45 ಡಿಗ್ರಿ ಬಿಸಿಲನ್ನ ತಡೆದುಕೊಳ್ಳಲು ಫ್ಯಾನ್, ಕೂಲರ್, ಎಸಿ ಬೇಕಾಗುತ್ತದೆ. ಹಾಗಾಗಿ ಕರೆಂಟ್ ಇಲ್ಲದೆ ಇದ್ರೆ ಇಲ್ಲಿನ ಜನರ ಪಾಡು ಹೇಳೋ ಹಾಗೆ ಇಲ್ಲ. ಇನ್ನೂ ಅತೀ ಹೆಚ್ಚಾಗಿ ಇಲ್ಲಿ ಬಡವರ ಫ್ರಿಡ್ಜ್ ಮಡಿಕೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.
ಗುಂಡಿಗಳಿಂದ ಮುಕ್ತಿ ಕಂಡ ರಸ್ತೆಗಳು
ನರೇಂದ್ರ ಮೋದಿ ಪ್ರಧಾನಿ ಅಂತಾ ವಾರಣಾಸಿ ಜನ ಮೋದಿ ಮೋದಿ ಅಂತಾ ಘೋಷಣೆ ಹಾಕುತ್ತಿಲ್ಲ. ಬದಲಾಗಿ ವಾರಣಾಸಿಯಲ್ಲಿ ಅಭಿವೃದ್ಧಿ ಆಗುತ್ತಿರುವುದರಿಂದ ಜನ ಮೋದಿಯನ್ನ ಪ್ರೀತಿಸೋಕೆ ಶುರು ಮಾಡಿದ್ದಾರೆ. ಮುಂಚೆ ಇಲ್ಲಿ ಗುಂಡಿಗಳಿಂದಲೇ ತುಂಬಿರುತ್ತಿದ್ದ ರಸ್ತೆಗಳು ಈಗ ನಯವಾಗಿ ಓಡುಡುವಂತಾಗಿವೆ. ವಿಮಾನ ನಿಲ್ದಾಣದಿಂದ ವಾರಣಾಸಿ ತಲುಪಲು ಸುಮಾರು 1 ಗಂಟೆ 45 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಕೇವಲ 45 ನಿಮಿಷದಲ್ಲಿ ವಾರಣಾಸಿ ತಲುಪಬಹದು. ಇದಕ್ಕಾಗಿ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಇದರಿಂದ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಸೈಕಲ್ ಸವಾರರು, ಪ್ರಯಾಣಿಕರು ತುಂಬ ಸಂತಸ ವ್ಯಕ್ತಪಡಿಸುತ್ತಾರೆ.
ಶೌಚಾಲಯಗಳ ನಿರ್ಮಾಣ:
ಹಿಂದೆ ವಾರಣಾಸಿಯಲ್ಲಿ ಎಲ್ಲಿ ಬೇಕೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಅಭ್ಯಾಸವಾಗಿತ್ತು. ಇದರಿಂದ ಇಲ್ಲಿನ ಜನರು ಸೇರಿದಂತೆ ವ್ಯಾಪಾರಸ್ಥರು, ಪ್ರವಾಸಿಗರು ತುಂಬಾ ರೋಸಿ ಹೋಗಿದ್ದರು. ರಸ್ತೆ ಪಕ್ಕದಲ್ಲಿ ಓಡಾಡಬೇಕಾದರೂ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇತ್ತು. ಆದ್ರೆ ಈಗ ಪ್ರತಿ ಸರ್ಕಲ್‍ನಲ್ಲೊಂದು ಶೌಚಾಲಯಗಳನ್ನ ನಿರ್ಮಿಸಲಾಗಿದೆ. ಎಲ್ಲರಿಗೂ ಶೌಚಾಲಯ ಬಳಕೆಯ ಅರಿವು ಮೂಡಿದೆ. ಈ ಬೆಳವಣಿಗೆಯಿಂದ ಮೋದಿ ಜನರ ಮನಸ್ಸನ್ನು ಗೆದ್ದಿದ್ದಾರೆ.
ಬದಲಾಗುತ್ತಿದ್ದಾರೆ ಜನ:
ಕೇವಲ ಕಾಶಿ ಬದಲಾಗುತ್ತಿಲ್ಲ, ಕೇವಲ ವಾರಣಾಸಿ ಅಭಿವೃದ್ಧಿ ಕಾಣುತ್ತಿಲ್ಲ. ಇಲ್ಲಿನ ಜನರು ಬದಲಾಗುತ್ತಿದ್ದಾರೆ, ಅಭಿವೃದ್ಧಿ ಆಗುತ್ತಿದ್ದಾರೆ. ಮೊದಲು ಇಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದರು. ಆದ್ರೆ ಈಗ ಪ್ರತಿ ಅಂಗಡಿಯ ಮುಂಭಾಗದಲ್ಲಿ ಸ್ವತಃ ಅಂಗಡಿ ಮಾಲೀಕರೇ ಕಸದ ಡಬ್ಬಿಯನ್ನ ಇಟ್ಟಿರುತ್ತಾರೆ. ಎಲ್ಲೆಂದರಲ್ಲಿ ಬಿಸಾಕಿದರೆ ಅವರೇ ಬುದ್ಧಿ ಹೇಳುತ್ತಾರೆ. ಕಾರಿನಿಂದ ಗುಟ್ಕಾ ತಿಂದು ರ್ಯಾಪರ್ ಬಿಸಾಕುತ್ತಿದ್ದ ಚಾಲಕರು ಈಗ ಕಾರಿನಲ್ಲೇ ಗುಟಕಾ ರ್ಯಾಪರ್‍ಗಳನ್ನ ಇಟ್ಟುಕೊಳ್ಳುತ್ತಾರೆ, ಕಸದ ಡಬ್ಬಿ ಸಿಕ್ಕಾಗ ಅಲ್ಲಿ ಹಾಕುತ್ತಾರೆ. ಸ್ವಚ್ಛತೆಯನ್ನ ನೋಡಿ ಈಗ ತಾವು ಕೂಡ ಸ್ವಚ್ಛತೆ ಕಾಪಾಡೋದ್ರಲ್ಲಿ ನಿರತರಾಗಿದ್ದಾರೆ.
ಟ್ರಾಫಿಕ್ ಜಾಮ್:
ವಾರಣಾಸಿಯಲ್ಲಿನ ಟ್ರಾಫಿಕ್ ಜಾಮ್ ಬೆಂಗಳೂರನ್ನೂ ಮೀರಿಸುವಂತಿದೆ. ಬೆಂಗಳೂರಲ್ಲಿ ಕಾರುಗಳ ದರ್ಬಾರ್ ಇದ್ದರೆ ಇಲ್ಲಿ ಸೈಕಲ್ ರಿಕ್ಷಾ, ಆಟೋ, ಬ್ಯಾಟರಿ ಆಟೋ, ಬೈಕ್‍ಗಳು, ಕಾರುಗಳ ದರ್ಬಾರ್. ಇದರಲ್ಲಿ ಅತೀ ಮುಖ್ಯವಾಗಿ ಇಲ್ಲಿರುವ ಜನರಿಗೆ ಶಬ್ದಮಾಲಿನ್ಯದ ಅರಿವೇ ಇಲ್ಲದಂತಿದ್ದಾರೆ. ಒಂದು ಸಲ ರಸ್ತೆಗೆ ಹೋಗಿ ಬರುವಷ್ಟರಲ್ಲಿ ಕಿವಿ ಗುಂಯ್ ಅನ್ನೋದಂತೂ ಸತ್ಯ. ಹಾರ್ನ್ ಬಗ್ಗೆ ಇಲ್ಲಿರುವ ಜನರಿಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ.
ಚಿಕ್ಕಬಳ್ಳಾಪುರ: ಕಾರ್ಮಿಕರ ದಿನಾಚರಣೆಯಂದು ಪಾಳುಬಿದ್ದು ಕಸದ ತೊಟ್ಟಿಯಾಗಿದ್ದ ಪುರಾತನ ಕಲ್ಯಾಣಿಯನ್ನು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜೊತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸ್ವಚ್ಛತೆ ಮಾಡಿದ್ದಾರೆ.
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ನಗರದ ಬಸಪ್ಪ ಛತ್ರದಲ್ಲಿ ಡಂಪಿಂಗ್ ಯಾರ್ಡ್‍ಗೆ ಮೂಲೆಗುಂಪಾಗಿದ್ದ ಕಲ್ಯಾಣಿಯ ಸ್ವಚ್ಛತಾ ಕಾರ್ಯ ಮಾಡಿದರು.
ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರಂಗಮಂದಿರದ ಬಳಿಯೇ ಇರುವ ಈ ಪುರಾತನ ಕಲ್ಯಾಣಿ ಕಸದಿಂದ ತುಂಬಿ ತುಳುಕಿ, ಮುಳ್ಳಿನ ಗಿಡಗಂಟೆಗಳಿಂದ ಮುಚ್ಚಿ ಹೋಗಿತ್ತು. ಈ ಹಿಂದೆ ರಂಗಮಂದಿರ ಕಾಮಗಾರಿ ಪರಿಶೀಲನೆ ವೇಳೆ ಪಾಳುಬಿದ್ದಿದ್ದ ಕಲ್ಯಾಣಿ ಕಂಡಿದ್ದ ಜಿಲ್ಲಾಧಿಕಾರಿ ಕಲ್ಯಾಣಿಗೆ ಮರುಜೀವ ಕೊಡುವ ಸಂಕಲ್ಪ ಮಾಡಿದ್ದರು. ಹೀಗಾಗಿ ಕಾರ್ಮಿಕ ದಿನಾಚರಣೆಯ ದಿನವೇ ವಿದ್ಯಾರ್ಥಿಗಳು, ನಗರಸಭೆ ಸಿಬ್ಬಂದಿ, ಹಾಗೂ ಪತ್ರಕರ್ತರ ಜೊತೆಗೂಡಿ ಜಿಲ್ಲಾಧಿಕಾರಿ ಕಲ್ಯಾಣಿ ಸ್ವಚ್ಛತಾ ಕಾರ್ಯ ನಡೆಸಿದರು. ಸತತ 3 ಗಂಟೆಗೂ ಹೆಚ್ಚು ಕಲ್ಯಾಣಿಯಲ್ಲಿನ ಗಿಡಗಂಟೆಗಳು, ಕಲ್ಲು-ಮಣ್ಣು ಎತ್ತಿ ಹಾಕಿ ಸ್ವಚ್ಛತಾ ಕಾರ್ಯ ನಡೆಯಿತು.
ಜಿಲ್ಲೆಯ ಎಲ್ಲಾ ಕಲ್ಯಾಣಿ-ಪುಷ್ಕರಣಿಗಳನ್ನ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಂತ ಹಂತವಾಗಿ ಎಲ್ಲಾ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ ಮಾಡುವುದಾಗಿ ಈ ವೇಳೆ ಅನಿರುದ್ಧ್ ಶ್ರವಣ್ ತಿಳಿಸಿದರು.
ಕೊಪ್ಪಳ: ಕಳೆದ ಜಾತ್ರೆಯ ಸಮಯದಲ್ಲಿ ಚರಂಡಿಯನ್ನು ತಾವೇ ಕ್ಲೀನ್ ಮಾಡಿ ತಮ್ಮ ಸರಳತೆ ಮೆರೆದಿದ್ದ ಗವಿ ಸಿದ್ದೇಶ್ವರ ಶ್ರೀಗಳು ಇದೀಗ ಹಿರೇಹಳ್ಳದಲ್ಲಿ ತಾವೇ ಇಳಿದು ಸ್ವಚ್ಛತೆಗೆ ಮುಂದಾಗಿದ್ದಾರೆ.
ಕೊಪ್ಪಳ ತಾಲೂಕಿನ ದದೇಗಲ್ ಬಳಿ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ರಮಕ್ಕೆ ಕಳೆದ ಮಾರ್ಚ್ 1ರಂದು ಚಾಲನೆ ನೀಡಲಾಗಿದೆ. ಸುಮಾರು 25 ಕಿಲೋ ಮೀಟರ್ ಹಿರೇಹಳ್ಳವನ್ನು ಪುನಶ್ಚೇತನ ಮಾಡಲು ಶ್ರೀಗಳು ಸಂಕಲ್ಪ ಮಾಡಿದ್ದಾರೆ.
ಅದರ ನಿಮಿತ್ಯ ಹಿರೇಹಳ್ಳದ ಮುಳ್ಳು ಕಂಟಿಗಳು ಬೆಳೆದ ಜಾಗದಲ್ಲಿ ಶ್ರೀಗಳು ಜನ ಸಾಮಾನ್ಯರಂತೆ ಕೆಲಸ ಮಾಡೋದು ಮೊಬೈಲಿನಲ್ಲಿ ಸೆರೆಯಾಗಿದೆ. ಹಳ್ಳದಲ್ಲಿ ತಾವೇ ಜನರೊಂದಿಗೆ ಇಳಿದು ಕಸವನ್ನು ಕಿತ್ತು ಹಾಕಿದ್ದಾರೆ. ಗವಿ ಮಠದ ಪೀಠಾಧಿಪತಿ ಆದರೂ ನಾನು ಓರ್ವ ಸಾಮಾನ್ಯ ಎಂದುಕೊಂಡು ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಕೆಲಸ ಮಾಡಿದ್ದಾರೆ.