Tag: ಸ್ವಚ್ಛತೆ

  • ಪಾಳೇಗಾರರ ಅವಧಿಯಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಲ್ಯಾಣಿ ಪುನಶ್ಚೇತನ

    ಪಾಳೇಗಾರರ ಅವಧಿಯಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಲ್ಯಾಣಿ ಪುನಶ್ಚೇತನ

    ಬೆಂಗಳೂರು: ಪಾಳೇಗಾರರ ಆಡಳಿತ ಅವಧಿಯಲ್ಲಿ ನಿರ್ಮಿಸಿದ್ದ ಇತಿಹಾಸ ಪ್ರಸಿದ್ಧ ಕಲ್ಯಾಣಿಯೊಂದು ಗಿಡಗಂಟೆಗಳು ಬೆಳೆದುಕೊಂಡು ಸಂಪೂರ್ಣ ಕಲ್ಯಾಣಿಯು ಕಾಣದಂತೆ ಅವನತಿಯ ಅಂಚಿಗೆ ತಲುಪಿತ್ತು. ಇದೀಗ ಆ ಕಲ್ಯಾಣಿಗೆ ನ್ಯಾಯಾಧೀಶರ ತಂಡ, ವಕೀಲರ ತಂಡ, ಪೊಲೀಸ್ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಪುನಶ್ಚೇತನ ಮಾಡುವ ಮೂಲಕ ಕಲ್ಯಾಣಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಸಿಡಿಹೊಸಕೋಟೆ ಬಳಿಯಿರುವ ಪುರಾತನ ಕಾಲದ ದೊರೆಸಾನಿ ಕಲ್ಯಾಣಿಯೂ ಅವನತಿಯ ಅಂಚಿಗೆ ತಲುಪಿ ಕಲ್ಯಾಣಿ ಇನ್ನು ಮುಂದಿನ ಪೀಳಿಗೆಗೆ ಕೇವಲ ನೆನಪು ಮಾತ್ರ ಎಂದುಕೊಂಡಿದ್ದರು. ಈ ಬಗ್ಗೆ ಸರ್ಕಾರವಾಗಲಿ, ಪುರಾತತ್ವ ಇಲಾಖೆಯಾಗಲಿ, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಾಗಲಿ ಗಮನ ಹರಿಸದೆ ಕಲ್ಯಾಣಿಯನ್ನು ಉಳಿಸಿಕೊಂಡು ಹೋಗುವಲ್ಲಿ ವಿಫಲವಾಗಿದ್ದರು. ಕಲ್ಯಾಣಿಯೂ ಸಂಪೂರ್ಣ ಗಿಡಗಂಟೆಗಳಿಂದ ತುಂಬಿಕೊಂಡು ವಿಷ ಜಂತುಗಳ ಆವಾಸಸ್ಥಾನವಾಗಿತ್ತು. ಅಲ್ಲಿ ಕಲ್ಯಾಣಿ ಇತ್ತ ಎನ್ನುವಂತಹ ಪ್ರಶ್ನೆ ಮೂಡುವಂತೆ ಮಾಡಿತ್ತು.

    ಕಲ್ಯಾಣಿಯ ಅವನತಿಯ ಅಂಚಿನಲ್ಲಿರುವ ಬಗ್ಗೆ ಸಮಾಜಿಕ ಜಾಲತಾಣ ಸೇರಿದಂತೆ ಇತಿಹಾಸ ತಜ್ಞರು ಸಹ ಈ ಬಗ್ಗೆ ಗಮನ ಹರಿಸಬೇಕೆಂದು ಮಾಹಿತಿ ಹಂಚಿಕೊಂಡಿದ್ದರು. ಈ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಿದ ನ್ಯಾಯಾಧೀಶರ ತಂಡ, ವಕೀಲರ ತಂಡ, ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಕ್ಷರ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಇಡೀ ದಿನ ಕಲ್ಯಾಣಿಯಲ್ಲಿ ಬೆಳೆದುಕೊಂಡಿದ್ದ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಸ್ವಚ್ಚತಾ ಕಾರ್ಯ ನಡೆಸಿ ಕಲ್ಯಾಣಿಗೆ ಹೊಸ ರೂಪವನ್ನು ಕೊಟ್ಟಿರುವುದಕ್ಕೆ ಇಡೀ ಆನೇಕಲ್ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈಗ ನಾವು ಕಲ್ಯಾಣಿಯನ್ನು ಸ್ವಚ್ಛಗೊಳಿಸಿದೇವೆ. ಆದರೆ ಕಲ್ಯಾಣಿಗೆ ಇದ್ದ ಕಲ್ಲಿನ ಮೆಟ್ಟಿಲುಗಳು ಸಡಿಲಗೊಂಡು ಕುಸಿದಿದ್ದು ಅವುಗಳನ್ನು ಸರಿಪಡಿಸಬೇಕು ಹಾಗೆ ಮುಂದಿನ ದಿನಗಳಲ್ಲಿ ಕಲ್ಯಾಣಿಯಲ್ಲಿ ನೀರು ನಿಲ್ಲುವಂತೆ ಮಾಡಿ ಪುರಾತನ ಇತಿಹಾಸ ಸಾರುವ ಕಲ್ಯಾಣಿಯನ್ನು ಉಳಿಸಿಕೊಂಡು ಹೋಗಬೇಕೆಂದು ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಸ್ವಚ್ಛತಾ ಕಾರ್ಯ ಮಾಡಿದವರು ಒತ್ತಾಯಿಸಿದರು.

  • ದೇವಾಲಯಗಳು ಫುಲ್ -ಬ್ರಿಗೇಡ್ ರೋಡ್ ಖಾಲಿ ಖಾಲಿ

    ದೇವಾಲಯಗಳು ಫುಲ್ -ಬ್ರಿಗೇಡ್ ರೋಡ್ ಖಾಲಿ ಖಾಲಿ

    ಬೆಂಗಳೂರು: ಹೊಸ ವರ್ಷ ಇಂದು ಆರಂಭವಾಗಿದ್ದು, 2020ರ ಸ್ವಾಗತಕ್ಕೆ ನೂರಾರೂ ಸಂಖ್ಯೆಯಲ್ಲಿ ಸಾರ್ವಜನಿಕರು ಸಾಕ್ಷಿಯಾದರು. ನಗರದ ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು. ಇಂದು ಬೆಳ್ಳಂಬೆಳಗ್ಗೆ ಆಚರಣೆ ಮುಗಿದ ಬೆನ್ನಲ್ಲೇ ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ರಸ್ತೆಗಳು ಬಣಗುಡುತ್ತಿದ್ದವು.

    ಮೋಜು ಮಸ್ತಿ ಮಾಡಿ ರಸ್ತೆ ಅಂದ ಹಾಳು ಮಾಡಿದ್ದನ್ನ ಪೌರಕಾರ್ಮಿಕರು ಸ್ವಚ್ಛತೆಗೊಳಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನ ಮುಂಜಾನೆಯೇ ರಸ್ತೆ ಸ್ವಚ್ಛತೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಬಾರಿ ಹೊಸ ವರ್ಷಕ್ಕೆ ಹೊಸ ಟಾಸ್ಕ್ ತೆಗೆದುಕೊಂಡಿತ್ತು.

    ಅದೇನೆಂದರೆ ಎಂಜಿ ರೋಡ್, ಬ್ರಿಗೇಡ್ ರೋಡ್‍ನಲ್ಲಿ ಕಸ ಹುಡುಕಿದವರಿಗೆ ಬಹುಮಾನ ಎಂಬ ಸ್ಪರ್ಧೆ ಸಹ ಆಯೋಸಿತ್ತು. ಅಷ್ಟರ ಮಟ್ಟಿಗೆ ಬಿಬಿಎಂಪಿ ಪೌರಕಾರ್ಮಿಕರು ಸಂಪೂರ್ಣ ಕ್ಲೀನ್ ಮಾಡಿದ್ದಾರೆ ಎಂದು ಆತ್ಮವಿಶ್ವಾಸದಿಂದ ಸ್ಪರ್ಧೆ ಆಯೋಜಿಸಿದವರು ಹೇಳಿದ್ದಾರೆ.

    ಮತ್ತೊಂದೆಡೆ ನಗರದ ದೇವಾಲಯಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದರಿಂದ ದೇವರ ದರ್ಶನ ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

  • ತುಂಗಭದ್ರ ನದಿ ಪಾತ್ರವನ್ನು ಸ್ವಚ್ಛಗೊಳಿಸಲು ಪಣ ತೊಟ್ಟ ಹರಿಹರ ಯುವಜನತೆ

    ತುಂಗಭದ್ರ ನದಿ ಪಾತ್ರವನ್ನು ಸ್ವಚ್ಛಗೊಳಿಸಲು ಪಣ ತೊಟ್ಟ ಹರಿಹರ ಯುವಜನತೆ

    ದಾವಣಗೆರೆ: ವಾಟ್ಸಪ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಅನಾವಶ್ಯಕ ಚರ್ಚೆಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಾರೆ. ಆದರೆ ದಾವಣಗೆರೆಯ ಹರಿಹರ ತಾಲೂಕಿನ ಯುವ ಸಮೂಹ ಈ ವಾಟ್ಸಪ್ ಗ್ರೂಪ್ ನಿಂದ ತುಂಗಭದ್ರ ನದಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಪಣ ತೊಟ್ಟಿದ್ದಾರೆ.

    ತುಂಗಭದ್ರ ನದಿ ದಾವಣಗೆರೆಯ ಹಲವು ತಾಲೂಕುಗಳ ಜೀವನಾಡಿಯಾಗಿದ್ದು, ಹರಿಹರ ತಾಲೂಕಿನ ಪಕ್ಕದಲ್ಲೇ ತುಂಗಭದ್ರ ನದಿ ಹರಿಯುತ್ತಿದ್ದು, ನದಿಯ ಪಾತ್ರದಲ್ಲಿ ಸಾಕಷ್ಟು ಪ್ರವಾಸಿಗರು ಬಂದು ಎಂಜಾಯ್ ಮಾಡಿ ಹೋಗ್ತಾರೆ. ಆದರೆ ಅದರ ಸ್ವಚ್ಛತೆ ಬಗ್ಗೆ ಯಾರೂ ಕೂಡ ಕಾಳಜಿ ವಹಿಸುವುದಿಲ್ಲ.

    ಹರಿಹರದ ಪಟ್ಟಣದ ಯುವ ಸಮೂಹ ವಾಟ್ಸಪ್ ನಲ್ಲಿ ‘ನನ್ನ ಊರು ನನ್ನ ಹೊಣೆ’ ಎಂಬ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಅದರ ಉದ್ದೇಶ ಕೇವಲ ಪರಿಸರ ಜಾಗೃತಿ ಹಾಗೂ ಪರಿಸರ ಸ್ವಚ್ಛತೆ ಎಂಬ ಧ್ಯೇಯ. ತಮ್ಮ ಸ್ನೇಹಿತರನ್ನು ಆ ಗ್ರೂಪ್‍ನಲ್ಲಿ ಸೇರ್ಪಡೆ ಮಾಡಿ ವಾರಕ್ಕೆ ಒಮ್ಮೆ ನದಿಯ ಪಾತ್ರದಲ್ಲಿ ಇರುವ ಕಸವನ್ನು ಸ್ವಚ್ಛ ಮಾಡುವುದಕ್ಕೆ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.

    ಈಗ ಸಂಕ್ರಾಂತಿ ಹಬ್ಬ ಕೂಡ ಹತ್ತಿರ ಬಂದಿದೆ. ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಪುಣ್ಯಸ್ನಾನ, ಪೂಜೆ ಮಾಡುವುದು ಇಲ್ಲಿನ ವಾಡಿಕೆ. ಪ್ರತಿ ವರ್ಷ ಮಕರ ಸಂಕ್ರಾಂತಿಗೆ ಪುಣ್ಯಸ್ನಾನ ಹಾಗೂ ಪೂಜೆಗೆಂದು ಸಾವಿರಾರು ಭಕ್ತರು ಹರಿಹರದ ತುಂಗಭದ್ರಾ ದಂಡೆಯಲ್ಲಿ ಸೇರುತ್ತಾರೆ. ಆ ಸಂದರ್ಭದಲ್ಲಿ ನದಿ ಪಾತ್ರ ಸ್ವಚ್ಛವಾಗಿರಬೇಕಂಬ ಸಂಕಲ್ಪದಿಂದ ನದಿ ಪಾತ್ರ ಸ್ವಚ್ಛತೆ ಆಂದೋಲನ ಆರಂಭಿಸಿದ್ದಾರೆ. ವಾರಕ್ಕೆ ಒಮ್ಮೆ ಬೆಳಗ್ಗೆ ನದಿಪಾತ್ರ ಸ್ವಚ್ಛತೆ ಗ್ರೂಪ್‍ನಲ್ಲಿಂದ ಸದಸ್ಯರು ಮಾತ್ರವಲ್ಲದೇ, ನಗರದ ಜನಪ್ರತಿನಿಧಿಗಳು, ನಾಗರಿಕರು, ಮಹಿಳೆಯರು, ಮಕ್ಕಳು ಕೈಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

  • ಸ್ವಚ್ಛತೆಗೆ ಬಿಜಕಲ್ ಗ್ರಾಮ ದತ್ತು ಪಡೆದ ಪೊಲೀಸ್ ಇಲಾಖೆ: ಜನ ಪ್ರಶಂಸೆ

    ಸ್ವಚ್ಛತೆಗೆ ಬಿಜಕಲ್ ಗ್ರಾಮ ದತ್ತು ಪಡೆದ ಪೊಲೀಸ್ ಇಲಾಖೆ: ಜನ ಪ್ರಶಂಸೆ

    ಕೊಪ್ಪಳ: ಪೊಲೀಸರು ಕೇವಲ ಅಪರಾಧ ತಡೆಗಟ್ಟಲು ಸೀಮಿತರಾಗುತ್ತಾರೆ ಎಂಬ ಮನೋಭಾವನೆ ಎಲ್ಲರಲ್ಲಿಯೂ ಬೇರೂರಿದ್ದು, ಇದಕ್ಕೆ ಅಪವಾದ ಎಂಬುವಂತೆ ಕುಷ್ಟಗಿ ಪೋಲೀಸರು ಒಂದು ಗ್ರಾಮವನ್ನು ದತ್ತು ಪಡೆದುಕೊಂಡು ಗ್ರಾಮದ ಅಭಿವೃದ್ಧಿಗೆ ಟೊಂಕಕಟ್ಟಿಕೊಂಡು ಗ್ರಾಮವನ್ನು ಸ್ವಚ್ಛತೆ ಮಾಡುವ ಮೂಲಕ ಜನಸ್ನೇಹಿ ಪೊಲೀಸರಾಗಿ ಹೊರಹೊಮ್ಮಿದ್ದಾರೆ.

    ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಸಮಸ್ಯೆಗಳ ಜತೆಗೆ ಇಡೀ ಗ್ರಾಮ ಅನೈರ್ಮಲ್ಯದಿಂದ ಕೂಡಿದ್ದು, ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಮನೋಭಾವನೆ ಇಟ್ಟುಕೊಂಡು ಸಿಪಿಐ ಜಿ.ಚಂದ್ರಶೇಖರ ಹಾಗೂ ಪಿಎಸ್‍ಐ ಚಿತ್ತರಂಜನ್ ಅವರು ಸಿಬ್ಬಂದಿ ಸಭೆ ಕರೆದು ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳುವುದರ ಮೂಲಕ ಗ್ರಾಮವನ್ನು ಜಿಲ್ಲೆಗೆ ಮಾದರಿಯನ್ನಾಗಿ ಮಾಡಲು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿರುವುದು ಸಾರ್ವಜನಿಕರಲ್ಲಿ ಪ್ರಶಂಸೆಗೆ ವ್ಯಕ್ತವಾಗಿದೆ.

    ಕುಷ್ಟಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬೆಳ್ಳಂಬೆಳಿಗ್ಗೆ ಬಿಜಕಲ್ ಗ್ರಾಮಕ್ಕೆ ಭೇಟಿ ನೀಡಿ ಶಾಲಾ ಆವರಣ, ಪ್ರಮುಖ ರಸ್ತೆ, ಚರಂಡಿ ಕಾಲುವೆಗಳು ಸ್ವಚ್ಛತೆ ಕಾರ್ಯ ಕೈಗೊಳ್ಳುವ ಮೂಲಕ ಶ್ರಮದಾನ ಮಾಡಿದರು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಕೈಜೋಡಿಸಿರುವುದು ಮಹತ್ತರ ಕಾರ್ಯವಾಗಿದೆ. ಬಿಜಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರು ದಿನಂಪ್ರತಿ ಬೆಳಿಗ್ಗೆಯಾದರೆ ಸಾಕು ಶಾಲಾ ಆವರಣದಲ್ಲಿ ಮಲ ಮೂತ್ರ ಮಾಡುತ್ತಿದ್ದರು. ಇದನ್ನ ಮನಗಂಡ ಸಿಪಿಐ ಜಿ.ಚಂದ್ರಶೇಖರ ಅವರು ಜೆಸಿಬಿ ಮತ್ತು ಟ್ರ್ಯಾಕ್ಟರ್ ತರಿಸಿ ಸ್ವಚ್ಛತೆ ಕಾರ್ಯ ಮಾಡಿದರು. ಇನ್ಮುಂದೆ ಈ ರೀತಿ ಗಲೀಜು ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಿದರು.

    ಶಾಲಾ ತಡೆಗೋಡೆಯ ಹಿಂದೆ ಬೃಹತ್ ಆಕಾರದ ಮುಳ್ಳುಕಂಟಿ ಬೆಳೆದಿದ್ದು, ಅದನ್ನು ಸಹ ಸ್ವಚ್ಛಗೊಳಿಸಿದರು. ಪೊಲೀಸರ ಕಾರ್ಯದಿಂದ ಸಾರ್ವಜನಿಕರು ಇನ್ಮುಂದೆ ಯಾವುದೇ ರೀತಿಯಿಂದ ಅನೈರ್ಮಲ್ಯದಿಂದ ಗ್ರಾಮವನ್ನು ಇಟ್ಟುಕೊಳ್ಳದೇ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂಬ ಮನೋಭಾವನೆ ಮೂಡಿಬಂದಿರುವುದು ಶ್ಲಾಘನೀಯ ವಿಷಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

    ಗಾಂಧೀಜಿ ಕಂಡ ಗ್ರಾಮ ಸ್ವರಾಜ ಕನಸನ್ನು ನನಸು ಮಾಡಟಬೇಕಾದರೆ ಗ್ರಾಮಸ್ಥರಲ್ಲಿ ನಮ್ಮ ಗ್ರಾಮವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂಬ ಮನೋಭಾವನೆ ಬಂದಾಗ ಮಾತ್ರ ಗಾಂಧೀಜಿ ಕಂಡ ಕನಸು ನನಸಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ವತಿಯಿಂದ ಬಿಜಲ್ ಗ್ರಾಮವನ್ನು ದತ್ತು ಗ್ರಾಮವನ್ನಾಗಿ ಪಡೆದುಕೊಂಡು ಶಾಲಾ ಆವರಣ, ಶಾಲೆ ತಡೆಗೋಡೆ, ಪ್ರಮುಖ ರಸ್ತೆಗಳು, ಚರಂಡಿ ಕಾಲುವೆಗಳು ಪೊಲೀಸ್ ಸಿಬ್ಬಂದಿಗಳು ಸ್ವಯಂ ಪ್ರೇರಣೆಯಿಂದ ಸ್ವಚ್ಛತೆ ಮಾಡುವುದರ ಮೂಲಕ ಶ್ರಮಧಾನ ಮಾಡಿದ್ದಾರೆ. ನಮ್ಮ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿರುವುದು ಒಳ್ಳೆಯ ವಿಷಯವಾಗಿದೆ ಎಂದು ಸಿಪಿಐ ಜಿ.ಚಂದ್ರಶೇಖರ ಅನಿಸಿಕೆ ಹಂಚಿಕೊಂಡರು.

    ಗ್ರಾಮವನ್ನು ಇಟ್ಟುಕೊಳ್ಳಬೇಕು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲಿ ಮೂಡಿಬರಬೇಕಾಗಿದೆ. ಅಂದಾಗ ಮಾತ್ರ ಗ್ರಾಮವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಹಾಗೂ ಜನರು ಸರ್ಕಾರಕ್ಕೆ ಸೇರಿದ ಶಾಲೆ, ದೇವಸ್ಥಾನ, ಆವರಣಗಳನ್ನು ಸ್ವಚ್ಛತೆ ಮಾಡಲು ಸಮಯಾವಕಾಶವನ್ನು ಮೀಸಲಿಟ್ಟು ಗ್ರಾಮದಲ್ಲಿ ದಿನಂಪ್ರತಿ ಜನರು ಸ್ವಯಂಪ್ರೇರಣೆಯಿಂದ ಒಂದು ತಾಸು ತಮ್ಮ ಕೆಲಸವನ್ನು ಬದಿಗೆ ಒತ್ತಿ ಸ್ವಚ್ಛತೆ ಮಾಡಿದಾಗ ಮಾತ್ರ ಗ್ರಾಮ ಸ್ವಚ್ಛಂದದಿಂದ ಕಾಣುವುದರ ಜತೆಗೆ ರೋಗಮುಕ್ತ ಗ್ರಾಮವನ್ನಾಗಿ ಮಾಡಬಹುದಾಗಿದೆ ಈ ನಿಟ್ಟಿನಲ್ಲಿ ಜನರು ಕಾರ್ಯೋನ್ಮುಕವಾಗಬೇಕಾಗಿದೆ ಎಂದು ಪಿಎಸ್‍ಐ ಚಿತ್ತರಂಜನ್ ಅಭಿಪ್ರಾಯಪಟ್ಟರು.

  • ಜಂಟಿ ಅಧಿಕಾರಿಗಳ ದಾಳಿ – ಶುಚಿ, ರುಚಿ ಇಲ್ಲದ ಹೋಟೆಲ್‌ಗಳಿಗೆ ನೋಟಿಸ್

    ಜಂಟಿ ಅಧಿಕಾರಿಗಳ ದಾಳಿ – ಶುಚಿ, ರುಚಿ ಇಲ್ಲದ ಹೋಟೆಲ್‌ಗಳಿಗೆ ನೋಟಿಸ್

    ಬಾಗಲಕೋಟೆ: ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನಗರಸಭೆ ಅಧಿಕಾರಿಗಳು ಶುಚಿ, ರುಚಿ ಕಾಪಾಡದ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

    ಶುದ್ಧ ನೀರು ಕೊಡದೆ ಇರುವುದು, ತಿಂಡಿ, ತಿನಿಸುಗಳಲ್ಲಿ ಅತಿಯಾದ ಬಣ್ಣ, ಟೇಸ್ಟಿಂಗ್ ಸಾಲ್ಟ್ ಬಳಕೆ, ಸ್ವಚ್ಛತೆಗೆ ಆದ್ಯತೆ ನೀಡದ ಬಾಗಲಕೋಟೆ ನಗರದ ವಿವಿಧ ಹೋಟೆಲ್‌ಗಳ ಮೇಲೆ ಆರೋಗ್ಯ ಇಲಾಖೆ, ನಗರಸಭೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಜಂಟಿ ದಾಳಿ ನಡೆಸಿದರು.

    ನಗರದ ಹತ್ತಕ್ಕೂ ಹೆಚ್ಚು ಹೋಟೆಲ್‌, ಬೇಕರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶುಚಿ, ರುಚಿ ಕಾಪಾಡದ ನಾಲ್ಕು ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅತಿಯಾದ ಬಣ್ಣ ಬಳಕೆ ಮಾಡಿದ್ದ ಆಹಾರ ಪದಾರ್ಥ ವಶಪಡಿಸಿಕೊಂಡ ಅಧಿಕಾರಿಗಳು, ಕರಿದ ಎಣ್ಣೆ ಮರುಬಳಕೆ ಮಾಡಿದಲ್ಲಿ ಹೋಟೆಲ್‌ ಮುಚ್ಚಿಸುವ ಎಚ್ಚರಿಕೆ ನೀಡಿದ್ದಾರೆ.

    ನೋಟಿಸ್ ನೀಡಿರುವ ಹೋಟೆಲ್‌ಗಳ ವಿರುದ್ಧ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ತೀರ್ಮಾಸಿದ್ದಾರೆ.

  • ಐತಿಹಾಸಿಕ ಸ್ಥಳಗಳ ಉಳಿವಿಗಾಗಿ ಸರ್ಕಾರಿ ನೌಕರರು ಪಣ

    ಐತಿಹಾಸಿಕ ಸ್ಥಳಗಳ ಉಳಿವಿಗಾಗಿ ಸರ್ಕಾರಿ ನೌಕರರು ಪಣ

    – ಯುವ ಜನಾಂಗಕ್ಕೆ ಸ್ಥಳ ಪರಿಚಯದ ಜೊತೆಗೆ ಸ್ವಚ್ಛತೆ
    – ವಿದ್ಯಾರ್ಥಿಗಳೂ ಸಾಥ್

    ಕೊಪ್ಪಳ: ಅವರೆಲ್ಲ ಸರ್ಕಾರಿ ನೌಕರರು, ನಿತ್ಯ ಕೆಲಸ ಮುಗಿಸಿ ಮನೆಗೆ ಹೋದರೆ ಸಾಕು ಅಂದುಕೊಳ್ಳುವವರು. ಆದರೆ ಇಂದು ಆ ಸರ್ಕಾರಿ ನೌಕರರೆಲ್ಲ ಒಂದು ಐತಿಹಾಸಿಕ ಸ್ಥಳದ ಉಳಿವಿಗೆ ಮುಂದಾಗಿದ್ದಾರೆ.

    ಹೌದು. ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕುಮಾರರಾಮನ ಕುಮ್ಮಟ ದುರ್ಗ ಉಳಿಸಲು ಸರ್ಕಾರಿ ನೌಕರರು ಪಣ ತೊಟ್ಟಿದ್ದಾರೆ. ಇವರಿಗೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂಡ ಸಾಥ್ ನೀಡಿದ್ದಾರೆ.

    ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಸಮೀಪ ಇರೋ ಕುಮ್ಮಟ ದುರ್ಗವನ್ನ ಸ್ವಚ್ಛಗೊಳಿಸಿದ್ದಾರೆ. ಗಂಗಾವತಿಯ ಸರ್ಕಾರಿ ಕೆಲಸ ಮಾಡುವ ಕೆಲವರು ‘ಚಾರಣ’ ಎಂಬ ಹೆಸರಲ್ಲಿ ಗುಂಪು ಕಟ್ಟಿಕೊಂಡು ಐತಿಹಾಸಿಕ ಸ್ಥಳಗಳ ಉಳಿವಿಗೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಅಧಿಕಾರಿಗಳು ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ಕೂಡ ದೇವಸ್ಥಾನದ ಸುತ್ತಲೂ ಬೆಳೆದಿದ್ದ ಕಸವನ್ನು ಕ್ಲೀನ್ ಮಾಡಿದ್ದಾರೆ.

    ಗಂಗಾವತಿಯ ಚಾರಣ ಬಳಗವು ಕಳೆದ ನಾಲ್ಕು ತಿಂಗಳಿಂದ ಐತಿಹಾಸಿಕ ಪರಂಪರೆ ಹೊಂದಿದ ಸ್ಥಳಗಳಿಗೆ ಭೇಟಿ ನೀಡಿದೆ. ಈ ಚಾರಣ ಬಳಗವು ಯುವ ಜನಾಂಗಕ್ಕೆ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಕಾರ್ಯದ ಜೊತೆಗೆ ಸ್ವಚ್ಛತೆಗೆ ಮುಂದಾಗಿದೆ. ಈ ತಂಡ ಪ್ರತಿ ತಿಂಗಳ 2ನೇ ಭಾನುವಾರ ಚಾರಣ ಕಾರ್ಯಾಗಾರವನ್ನು ನಡೆಸುತ್ತದೆ. ಚಾರಣ ಹೋಗುವ ಸ್ಥಳ ಸೇರಿದಂತೆ ಇತರೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದೆ.

    ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಐತಿಹಾಸಿಕ ಸ್ಥಳಗಳ ಸದ್ಯದ ಸ್ಥಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಿದೆ. ಈಗಾಗಲೇ ಈ ಚಾರಣ ಬಳಗವು ಹಿರೇಬೆಣಕಲ್‍ನ ಮೋರೇರ ಸ್ಥಳ, ಅಂಜನಾದ್ರಿ ಬೆಟ್ಟ, ಗವಿ ಸ್ಥಳಗಳಿಗೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳ ಮೇಲೆ ಗಿಡ ಹಾಗೂ ಗಂಟಿ ಬೆಳೆದಿದ್ದನ್ನು ಸಂಪೂರ್ಣ ಸ್ವಚ್ಚಗೊಳಿಸಿದೆ. ಈ ಮೂಲಕ ಐತಿಹಾಸಿಕ ಸ್ಥಳಗಳಿಗೆ ಜನರು ಬರುವ ಹಾಗೆ ಮಾಡಿದ್ದಾರೆ.

    ಫೇಸ್‍ಬುಕ್‍ನಲ್ಲಿ ಚಾರಣಕ್ಕೆ ಆಗಮಿಸುವವರಿಗೆ ದಿನಾಂಕ, ಸಮಯವನ್ನು ಶೇರ್ ಮಾಡುತ್ತಾರೆ. ಎಲ್ಲರೂ ಬೆಳಗ್ಗೆ 6 ಗಂಟೆಗೆ ಚಾರಣಕ್ಕೆ ತೆರಳುತ್ತಾರೆ. ಸ್ಮಾರಕಗಳು ಹಾಳಾಗುತ್ತಿವೆ. ಬನ್ನಿ ಕೈ ಜೋಡಿಸಿ, ಕುಮ್ಮಟ ದುರ್ಗಕ್ಕೆ ಕೊಡಲಿ, ಕುಡುಗೋಲು ಇದ್ದರೆ ತೆಗೆದುಕೊಂಡು ಬನ್ನಿ. ಐತಿಹಾಸಿಕ ಸ್ಥಳದ ದೇವಸ್ಥಾನದ ಮೇಲೆ ಬೆಳೆ ಗಿಡ, ಗಂಟಿಗಳನ್ನು ತೆಗೆದು ಹಾಕಬೇಕಾಗಿದೆ. ಅಲ್ಲದೆ ಸ್ವಚ್ಛತೆ ಮಾಡುವುದು ಅವಶ್ಯವಿದೆ ಎಂಬ ಸಂದೇಶವನ್ನು ಕೂಡ ಈ ತಂಡ ರವಾನಿಸುತ್ತದೆ. ಹಾಗೆಯೇ ಚಾರಣಕ್ಕೆ ಆಗಮಿಸುವವರು ಸ್ವಚ್ಛತೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ.

    ಒಟ್ಟಾರೆ ಈ ಚಾರಣ ಬಳಗವು ಯುವ ಜನಾಂಗಕ್ಕೆ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಕಾರ್ಯದ ಜೊತೆಗೆ ಸ್ವಚ್ಛತೆಗೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ, ಎಸ್‍ಪಿಯಿಂದ ಕೆರೆ ಸ್ವಚ್ಛತೆ

    ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ, ಎಸ್‍ಪಿಯಿಂದ ಕೆರೆ ಸ್ವಚ್ಛತೆ

    ದಾವಣಗೆರೆ: ಇಂದು ಬೆಳ್ಳಂಬೆಳಗ್ಗೆ ಜಿಲ್ಲಾಡಳಿತದ ವತಿಯಿಂದ ದಾವಣಗೆರೆಯ ಕುಂದುವಾಡ ಕೆರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

    ನಮ್ಮ ಕೆರೆ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಸಿದ್ದು, ಬೆಳಗ್ಗೆ 6 ಗಂಟೆಯಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್‍ಪಿ ಹನುಮಂತರಾಯ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಿಸಿದ್ದು, ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಿದ್ದಾರೆ.

    ಜಿಲ್ಲಾಧಿಕಾರಿಗಳು ಹಾಗೂ ಎಸ್.ಪಿ ಹನುಮಂತರಾಯ ಕೂಡ ಸ್ವತಃ ಕೆರೆಯ ಏರಿ ಮೇಲಿರುವ ಕಳೆಯನ್ನು ತೆಗೆದು ಸ್ವಚ್ಚಗೊಳಿಸಿದರು. ಪ್ರತಿನಿತ್ಯ ಸಾರ್ವಜನಿಕರು ಕೆರೆಯ ವಾತವರಣದಲ್ಲಿ ವಾಕಿಂಗ್ ಮಾಡುವಾಗ ಕೆಲ ಕಾಲ ಸ್ವಚ್ಛತೆ ಮಾಡಿದರೆ ಇಡೀ ನಗರವನ್ನೇ ಶುಚಿಯಾಗಿಡಬಹುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

  • ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ

    ಗಂಗೆ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿರುವ ಮೀನುಗಾರ

    ಡೆಹ್ರಾಡೂನ್: ಗಂಗಾ ನದಿ ಮಲೀನವಾಗಬಾರದೆಂದು ಮೀನುಗಾರ ಪ್ರತಿದಿನ ಕಸ ಎತ್ತುತ್ತಿದ್ದಾರೆ.

    48 ವರ್ಷದ ಕಾಳಿಪದ ದಾಸ್ ಪ್ರತಿದಿನ ಗಂಗಾ ನದಿಯಲ್ಲಿ ಕಸವನ್ನು ಎತ್ತುತ್ತಿದ್ದಾರೆ. ಮೂಲತಃ ಪಶ್ಚಿಮ ಬಂಗಳಾದವರಾಗಿರುವ ಕಾಳಿಪದ ಮೀನುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 3 ವರ್ಷಗಳಿಂದ ಇವರು ಮೀನು ಹಿಡಿಯುವ ಕೆಲಸವನ್ನು ಬಿಟ್ಟು ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ಎತ್ತುವ ಕೆಲಸವನ್ನು ಮಾಡುತ್ತಿದ್ದಾರೆ.

    ಗಂಗಾ ನದಿಯಲ್ಲಿ ಸ್ವಚ್ಛವಾಗಿಡಲು ಕೇಂದ್ರ ಸರ್ಕಾರ ‘ನಮಾಮಿ ಗಂಗೆ’ ಎಂಬ ಯೋಜನೆಯನ್ನು ಶುರು ಮಾಡಿತ್ತು. ಆದರೆ ಕಾಳಿಪದ ಅವರು ಈ ಯೋಜನೆಯ ಹೆಸರು ಕೂಡ ಕೇಳಿಲ್ಲ. ಆದರು ಸಹ ಅವರು ಗಂಗಾ ಮಲೀನವಾಗಬಾರದೆಂದು ಪ್ರತಿದಿನ ಕಸ ಎತ್ತುತ್ತಿದ್ದಾರೆ.

    ಕಾಳಿಪದ ಬೆಲ್ಡಂಗಾದ ಕಲಾಬೇರಿಯಾದಿಂದ ಕೆಲಸ ಶುರು ಮಾಡುತ್ತಾರೆ. ಅವರು ತಮ್ಮ ದೋಣಿಯಿಂದ ಅನೇಕ ಘಾಟ್‍ಗಳಿಗೆ ಹೋಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎತ್ತುತ್ತಿದ್ದಾರೆ. ಅವರ ಕೆಲಸ ಭಗೀರಥ ಸೇತುವೆ ಅಥವಾ ಬೆಹ್ರಾಂಪೋರ್‍ನ ಫರ್ಶ್‍ದಂಗಾ ಘಾಟ್‍ನಲ್ಲಿ ಕೊನೆ ಆಗುತ್ತೆ.

    ನಾನು ಈಗ ಮೀನು ಹಿಡಿಯುವುದನ್ನು ಬಿಟ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಗಂಗಾ ನದಿಯಿಂದ ಎತ್ತುತ್ತಿದ್ದೇನೆ. ನನಗೆ ನಾನು ಮಾಡುವ ಕೆಲಸದ ಮೇಲೆ ಹೆಮ್ಮೆ ಇದೆ. ಸರ್ಕಾರ ಅಥವಾ ಯಾವುದೇ ಸರ್ಕಾರೇತರ ಸಂಸ್ಥೆ ಗಂಗಾ ನದಿ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹಾಗಾಗಿ ನಾನು ಅನೇಕ ಘಾಟ್‍ಗಳಿಂದ ಕಸ ಎತ್ತುತ್ತಿದ್ದೇನೆ ಎಂದು ಕಾಳಪದ ತಿಳಿಸಿದ್ದಾರೆ.

    ನಾನು ಇತರೆ ಮೀನುಗಾರರಿಂದಿಗೆ ದೋಣಿಯಲ್ಲಿ ಹೋಗುತ್ತೇನೆ. ಬಳಿಕ ನಾನು ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತುತ್ತೇನೆ. ಪ್ರತಿದಿನ 5ರಿಂದ 6 ಗಂಟೆ ಕೆಲಸ ಮಾಡಿ 2 ಕ್ವಿಂಟಲ್ ಪ್ಲಾಸ್ಟಿಕ್ ಹೆಕ್ಕುತ್ತೇನೆ. ಬಳಿಕ ಇದನ್ನು ರಿಸೈಕಲ್‍ಗೆ ಕೊಟ್ಟು 2,400 ರೂ.ರಿಂದ 2,600 ರೂ.ವರಗೂ ಸಂಪಾದಿಸುತ್ತೇನೆ. ನಾನು ವಿದ್ಯಾಭ್ಯಾಸ ಮಾಡಿಲ್ಲ. ಆದರೆ ವಿದ್ಯಾಭ್ಯಾಸ ಮಾಡಿರುವ ಜನರನ್ನು ನಾನು ನೋಡುತ್ತೇನೆ. ಅವರು ಪ್ಲಾಸ್ಟಿಕ್ ಬಳಸಿ ಅದನ್ನು ಎಸೆಯುತ್ತಾರೆ ಎಂದು ಕಾಳಿಪದ ಹೇಳಿದ್ದಾರೆ.

  • ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಾದರಿಯಾದ ಮಕ್ಕಳು

    ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಾದರಿಯಾದ ಮಕ್ಕಳು

    ಕಾರವಾರ: ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಕ್ಕಳು ಮಾದರಿಯಾಗಿದ್ದಾರೆ.

    ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಹೆಗ್ಗಾರ ಗ್ರಾಮದ ಚಿಕ್ಕ ಮಕ್ಕಳು ದೇಶವೇ ಮೆಚ್ಚುವಂತ ಸಮಾಜ ಸ್ವಚ್ಛತಾ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡು ದೊಡ್ಡವರಿಗೆ ಮಾದರಿಯಾಗಿದ್ದಾರೆ. ಶಾಲೆಯ ಪುಟ್ಟ ಹುಡುಗರು ತಮ್ಮ ಊರಿನಲ್ಲಿ ಬಿದ್ದ ಕಸ ಹೆಕ್ಕಿ ಊರಿನ ಜನರಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ.

    ಹೆಗ್ಗಾರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿ ತೇಜಸ್ವಿ ಗಾಂವ್ಕರ, ತನ್ನ ಸಹಪಾಠಿ ಸಂಕೇತ ಪಟಗಾರ, ದರ್ಶನ ಸಿದ್ದಿ, ವಿನಯ್ ಭಟ್ ಮಾದರಿಯಾದ ಮಕ್ಕಳು. ಗಂಗಾವಳಿ ನದಿ ಪ್ರವಾಹದಿಂದ ತೊಂದರೆಗೊಳಗಾಗಿದ್ದ ಈ ಗ್ರಾಮದಲ್ಲಿ ಬಿದ್ದ ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಬೀದಿಗಳಲ್ಲಿ ಹೆಕ್ಕಿ ಸ್ವಚ್ಛಗೊಳಿಸಿದ್ದಾರೆ. ಬೀದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತಾವು ಮನೆಯಿಂದ ತಂದ ಚೀಲಗಳಲ್ಲಿ ತುಂಬಿದ್ದಾರೆ. ಸಹಪಾಠಿ ದರ್ಶನ್ ಸಿದ್ದಿಯ ಸೈಕಲ್ ನಲ್ಲಿ ಕಸದ ಬ್ಯಾಗ್ ಹೇರಿಕೊಂಡು ಬೀದಿಯ ಕೊನೆಯಲ್ಲಿ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಚೊಕ್ಕಗೊಳಿಸಿದ್ದಾರೆ.

    ಇದನ್ನು ಕಂಡ ಊರಿನವರು ಆಶ್ಚರ್ಯಚಕಿತರಾಗಿ ಶಿಕ್ಷಕರೇನಾದರೂ ಈ ರೀತಿ ಅಸೈನ್ಮೆಂಟ್ ಕೊಟ್ಟಿರಬಹುದೇ? ಎಂದು ಪ್ರಶ್ನಿಸಿದರು. ಅದೇನೂ ಇಲ್ಲ, ನಾವು ಪ್ರಧಾನ ಮಂತ್ರಿಗಳ ಮಾತಿನಂತೆ ನಡೆಯುತ್ತಿದ್ದೇವೆ. ಸುಮಾರು ಎರಡು ಕಿಲೊ ಮೀಟರ್ ವ್ಯಾಪ್ತಿಯ ಬೀದಿ ಬದಿಯ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಿದ್ದೇವೆ ಎಂದು ಸ್ವಚ್ಛತೆ ಮಾಡುತಿದ್ದವರ ಗುಂಪಿನಲ್ಲಿದ್ದ ಬಾಲಕ ತೇಜಸ್ವಿ ನುಡಿದಾಗ ಊರಿನ ಜನರು ಬೇರಗಾಗಿದ್ದಾರೆ.

    ಮನೆಯಲ್ಲಿರುವ ಕಸವನ್ನು ಪ್ರತಿ ದಿನ ಮನೆಯ ಮುಂದೆ ನಗರಸಭೆ ಕಸದ ವಾಹನಕ್ಕೆ ಹಾಕಲ್ಲ. ಬೀದಿಯ ಮೂಲೆಯಲ್ಲಿ ಕಸ ಎಸೆದು ಬರುವ ಇಂದಿನ ದಿನದಲ್ಲಿ ನಮ್ಮ ಮನೆಮಾತ್ರ ಸ್ವಚ್ಛವಾಗಿದರೆ ಸಾಕು ಎಂದು ಅಂದುಕೊಳ್ಳುವವರೇ ಹೆಚ್ಚು. ಅಂತಹವರ ನಡುವೆ ಈ ಪುಟ್ಟ ಮಕ್ಕಳು ಮಾದರಿಯಾಗಿದ್ದಾರೆ.

  • ಗ್ರಾಮಕ್ಕೆ ನೀರು ನುಗ್ಗಿದ್ರು ಮೊಹರಂ ಆಚರಣೆ- ಮುಸ್ಲಿಮರೊಂದಿಗೆ ದರ್ಗಾ ಸ್ವಚ್ಛಗೊಳಿಸಿದ ಹಿಂದೂ ಯುವಕರು

    ಗ್ರಾಮಕ್ಕೆ ನೀರು ನುಗ್ಗಿದ್ರು ಮೊಹರಂ ಆಚರಣೆ- ಮುಸ್ಲಿಮರೊಂದಿಗೆ ದರ್ಗಾ ಸ್ವಚ್ಛಗೊಳಿಸಿದ ಹಿಂದೂ ಯುವಕರು

    ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಹಂಪಿಹೊಳಿ ಗ್ರಾಮ ಮಲಪ್ರಭಾ ನದಿ ನೀರಿನಿಂದ ಜಲಾವೃತಗೊಂಡಿದೆ. ಆದರೆ ಈ ನಡುವೆಯೇ ಹಿಂದೂ ಯುವಕರು ಸೇರಿಕೊಂಡು ದರ್ಗಾ ಸ್ವಚ್ಛಗೊಳಿಸಿ, ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸಲು ಸಹಕರಿಸಿದ್ದಾರೆ.

    ಮಲಪ್ರಭಾ ನದಿಯ ನೀರು ಹಿರೇಹಂಪಿಹೊಳಿ ಗ್ರಾಮಕ್ಕೆ ನುಗ್ಗಿದ ಪರಿಣಾಮ ಗ್ರಾಮದ ದರ್ಗಾದ ಬಳಿಯೂ ನೀರು ನಿಂತಿತ್ತು. ಆದರೆ ಮೊಹರಂ ಹಬ್ಬದ ಹಿನ್ನೆಲೆ ದರ್ಗಾ ಸ್ವಚ್ಛಗೊಳಿಸಲು ಗ್ರಾಮಸ್ಥರು ನಿರ್ಧರಿಸಿದ್ದು, ಮುಸ್ಲಿಂ ಬಾಂಧವರ ಜೊತೆ ಹಿಂದೂ ಯುವಕರು ಕೂಡ ಕೈಜೋಡಿಸಿ ದರ್ಗಾವನ್ನು ಸ್ವಚ್ಛಗೊಳಿಸಿದ್ದಾರೆ.

    ಸ್ವಚ್ಛತಾ ಕಾರ್ಯ ಮುಗಿದ ಬಳಿಕ ದರ್ಗಾದಲ್ಲಿ ಲಾಲಸಾಬ್, ಮಾಬುಸುಬಾನಿ ದೇವರನ್ನ ಗ್ರಾಮಸ್ಥರು ಕೂರಿಸಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಹಿರೇಹಂಪಿಹೊಳಿ ಗ್ರಾಮದಲ್ಲಿ ಕೇವಲ ಮುಸ್ಲಿಮರು ಮಾತ್ರ ಮೊಹರಂ ಹಬ್ಬವನ್ನು ಆಚರಿಸದೇ ಅವರೊಂದಿಗೆ ಹಿಂದೂಗಳು ಕೂಡ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಧರ್ಮಭೇದ ಮರೆತು ಒಬ್ಬರಿಗೊಬ್ಬರು ಸಹಕರಿಸಿಕೊಂಡು ಹಿರೇಹಂಪಿಹೊಳಿ ಗ್ರಾಮಸ್ಥರು ಹಬ್ಬ ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.