Tag: ಸ್ವಚ್ಛತೆ

  • ಮನೆಯ ಮುಂದಿನ ರಸ್ತೆಯಲ್ಲಿ ಕಸ ಗುಡಿಸಿದ ಸಚಿವ ಸುರೇಶ್ ಕುಮಾರ್

    ಮನೆಯ ಮುಂದಿನ ರಸ್ತೆಯಲ್ಲಿ ಕಸ ಗುಡಿಸಿದ ಸಚಿವ ಸುರೇಶ್ ಕುಮಾರ್

    ಬೆಂಗಳೂರು: ಪೌರ ಕಾರ್ಮಿಕರ ಅನುಪಸ್ಥಿತಿಯಲ್ಲಿ ಸಚಿವ ಸುರೇಶ್ ಕುಮಾರ್ ತಮ್ಮ ಮನೆಯ ಮಂದಿನ ರಸ್ತೆಯ ಕಸವನ್ನು ಗುಡಿಸಿದ್ದಾರೆ.

    ತಮ್ಮ ಮನೆಯ ಮುಂದಿನ ರಸ್ತೆಯ ಕಸ ಗುಡಿಸುವ ಲಿಂಗಮ್ಮ ಅವರ ಕಾಲಿಗೆ ಪಟ್ಟಾಗಿತ್ತು. ಹೀಗಾಗಿ ಇಂದು ಗಂಗಮ್ಮನವರು ಕೆಲಸಕ್ಕೆ ಗೈರಾಗಿದ್ದರು. ರಸ್ತೆಯಲ್ಲಿ ಕಸ ಇರೋದನ್ನು ಗಮನಿಸಿದ ಸಚಿವರು ಪತ್ನಿ ಜೊತೆ ಸೇರಿ ಕಸವನ್ನು ಗುಡಿಸಿದ್ದಾರೆ.

    ಈ ಕುರಿತು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಸಚಿವರು, ಇಂದು ಬೆಳಗ್ಗೆ ವಾಕಿಂಗ್ ಕಡಿಮೆ ಮಾಡಿ ನಮ್ಮ ಮನೆಯ ಮುಂದಿನ ಅರ್ಧ ರಸ್ತೆಯನ್ನು ನನ್ನ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಎರಡರ ಲಾಭವೂ ಆಯಿತು. ನಮ್ಮ ರಸ್ತೆಯ ಪೌರ ಕಾರ್ಮಿಕಿ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದೆ. ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಕಸ ಗುಡಿಸಿದೆ. ನಾವೆಲ್ಲರೂ ಆಗಾಗ ಈ ಕೆಲಸ ಮಾಡಬಹುದಲ್ಲವೇ? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ ಎಂದಿದ್ದಾರೆ.

  • ಪೌರ ಕಾರ್ಮಿಕರಿಗೆ ಹಣದ ಹಾರ ಹಾಕಿ ಸನ್ಮಾನ

    ಪೌರ ಕಾರ್ಮಿಕರಿಗೆ ಹಣದ ಹಾರ ಹಾಕಿ ಸನ್ಮಾನ

    ಬೆಂಗಳೂರು: ಕೊರೊನಾನಿಂದ ಜನರ ಜೀವವನ್ನು ಕಾಪಾಡಲು ವೈದ್ಯರು, ನರ್ಸ್ ಮತ್ತು ಪೊಲೀಸರು ಮಾತ್ರ ಹೋರಾಡುತ್ತಿಲ್ಲ. ಇವರ ಜೊತೆಗೆ ಪೌರ ಕಾರ್ಮಿಕರು ಕೂಡ ಹೋರಾಡುತ್ತಿದ್ದಾರೆ. ಹೀಗಾಗಿ ರಿಯಲ್ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಗಿದೆ. ಇದನ್ನೂ ಓದಿ: ಗದಗನ ಪೌರಕಾರ್ಮಿಕರಿಗೆ ಮುತ್ತಿನ ಹಾರದ ಸನ್ಮಾನ

    ಬೆಂಗಳೂರಿನ ಶ್ರೀರಾಂಪುರದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಗಿದೆ. ಪೌರ ಕಾರ್ಮಿಕರು ಪ್ರತಿ ಮನೆ, ರಸ್ತೆಗೂ ಹೋಗಿ ಕಸವನ್ನು ತೆಗೆದುಕೊಂಡು ಸ್ವಚ್ಛತೆ ಮಾಡುತ್ತಾರೆ. ಯಾರ ಮನೆಯವರಿಗೆ ಕೊರೊನಾ ಇರುತ್ತದೆಯೋ ಗೊತ್ತಿಲ್ಲ. ಆದರೂ ಇವರು ಪ್ರತಿ ರಸ್ತೆಯ ಸ್ವಚ್ಛತೆಯ ಕಾರ್ಯಯನ್ನು ಮಾಡುತ್ತಾರೆ. ಹೀಗಾಗಿ ಶ್ರೀರಾಂಪುರದಲ್ಲಿ ರಿಯಲ್ ಕೊರೊನಾ ವಾರಿಯರ್ಸ್‌ಗೆ ಹಣದ ಹಾರ ಹಾಕಿ ಸನ್ಮಾನ ಮಾಡಲಾಗಿದೆ.

    ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಹಣದ ಹಾರ, ಶಾಲು ಹೊದಿಸಿ ಸ್ಥಳೀಯರು ಸನ್ಮಾನ ಮಾಡಿದ್ದಾರೆ. ಈ ವೇಳೆ ಅಲ್ಲಿನ ಜನರು ಮನೆಯೊಳಗೆ ನಿಂತುಕೊಂಡು ಕಾರ್ಮಿಕರಿಗಾಗಿ ಚಪ್ಪಾಳೆ ತಟ್ಟಿದ್ದಾರೆ. ಸ್ಥಳದಲ್ಲಿದ್ದವರು ಇದನ್ನು ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

  • ಮನೆಯಿಂದ ಹೊರಬಂದವರಿಗೆ ಕಸಗುಡಿಸೋ ಶಿಕ್ಷೆ

    ಮನೆಯಿಂದ ಹೊರಬಂದವರಿಗೆ ಕಸಗುಡಿಸೋ ಶಿಕ್ಷೆ

    ಕಲಬುರಗಿ: ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದರೂ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಅಂತವರಿಗೆ ಪೊಲೀಸರು ಕೂಡ ಬಸ್ಕಿ ಹೊಡಿಸುವ ಮೂಲಕ ಶಿಕ್ಷೆ ಕೊಟ್ಟಿದ್ದರು. ಇದೀಗ ಜಿಲ್ಲೆಯಲ್ಲಿ ಮನೆಯಿಂದ ಹೊರಬಂದವರಿಗೆ ಕಸಗುಡಿಸುವ ಶಿಕ್ಷೆ ಕೊಟ್ಟಿದ್ದಾರೆ.

    ಕೊರೊನಾ ಭೀತಿಯಿಂದ ಲಾಕ್‍ಡೌನ್ ಮಧ್ಯೆಯೂ ಕಲಬುರಗಿಯಲ್ಲಿ ನಿಯಮವನ್ನು ಬ್ರೇಕ್ ಮಾಡಿ ವಾಹನ ಸವಾರರು ಓಡಾಡುತ್ತಿದ್ದರು. ಅಂತವರಿಗೆ ಖಾಕಿ ಪಡೆ ಸಖತ್ ಟ್ರೀಟ್ ಮೆಂಟ್ ಕೊಟ್ಟಿದೆ. ಮನೆಯಿಂದ ಹೊರ ಬಂದ ಬೈಕ್ ಸವಾರರಿಗೆ ರಸ್ತೆ ಕುಸಗುಡಿಸಿ ಶಿಕ್ಷೆಯನ್ನು ಪೊಲೀಸರು ನೀಡಿದ್ದಾರೆ.

    ನಗರದ ಪ್ರಕಾಶ್ ಏಶಿಯನ್ ಮಾಲ್ ವೃತ್ತದಲ್ಲಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ. ಜೊತೆಗೆ ವಿವಿಧ ಬಡಾವಣೆಗಳಲ್ಲಿ ಪುಂಡಪೋಕರಿಗಳನ್ನು ಕರೆದುಕೊಂಡು ಹೋಗಿ ಸ್ವಚ್ಛತೆ ಇಲ್ಲದಿರುವ ಏರಿಯಾಗಳಲ್ಲಿ ಕಸ ಗುಡಿಸಿದ್ದಾರೆ.

    ಕಲಬುರಗಿಯ ಚೌಕ್ ಠಾಣಾ ಸಿಪಿಐ ಶಕೀಲ್ ಚೌಧರಿ ಅವರು ಈ ರೀತಿಯ ಕಸಗುಡಿಸುವ ಶಿಕ್ಷೆಯನ್ನು ನೀಡಿದ್ದರು. ಅಲ್ಲದೇ ಮತ್ತೆ ಮನೆಯಿಂದ ಹೊರ ಬಂದರೆ ಕ್ರಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷೆ ನೀಡಿ ಎಚ್ಚರಿಗೆ ನೀಡಿದ್ದಾರೆ.

  • ಇಂದೋರ್ ಮಾದರಿಗಿಂತ ಉನ್ನತ ಮಟ್ಟದಲ್ಲಿ ಬೆಂಗ್ಳೂರು ಸ್ವಚ್ಛತೆ: ಡಾ. ಅಶ್ವತ್ಥನಾರಾಯಣ

    ಇಂದೋರ್ ಮಾದರಿಗಿಂತ ಉನ್ನತ ಮಟ್ಟದಲ್ಲಿ ಬೆಂಗ್ಳೂರು ಸ್ವಚ್ಛತೆ: ಡಾ. ಅಶ್ವತ್ಥನಾರಾಯಣ

    ಬೆಂಗಳೂರು: ಇಂದೋರ್ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಬೆಂಗಳೂರಿನ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಮಾದರಿ ಯೋಜನಡೆಯಡಿ ಪ್ರಾಯೋಗಿಕವಾಗಿ ಮತ್ತಿಕೆರೆ ವಾರ್ಡಿನಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಡಾ. ಅಶ್ವತ್ಥನಾರಾಯಣ ಮಾತನಾಡಿದರು. ಸ್ವಚ್ಛತೆಯ ದೃಷ್ಟಿಯಿಂದ ಪ್ರಮುಖ ಕಾರ್ಯಕ್ರಮವಾದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದು ಸಾರ್ವಜನಿಕರು ಸೇರುವ ಕಾರ್ಯಕ್ರಮವಲ್ಲ ಎಂದು ಮೊದಲೇ ಸೂಚನೆ ನೀಡಲಾಗಿತ್ತು ಎಂದರು.

    “ಮುಖ್ಯವಾಗಿ ಸ್ವಚ್ಛತೆ ಗುಣಮಟ್ಟ ಹೆಚ್ಚಿಸುವುದು ನಮ್ಮ ಉದ್ದೇಶ. ಇದಕ್ಕೆ ಪೂರಕವಾಗಿ ಇಂದೋರ್ ನ ಕನ್ಸಲ್ಟೆಂಟ್ ಸಂಸ್ಥೆ ಪ್ರಾಯೋಗಿಕವಾಗಿ ತ್ಯಾಜ್ಯ ನಿರ್ವಹಣೆ ಕಾರ್ಯಕ್ಕೆ ಮುಂದಾಗಿದೆ. ಈ ಮಾದರಿಗೆ ತಾಂತ್ರಿಕ ಸ್ಪರ್ಶ ನೀಡಿ, ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆರೋಗ್ಯ ಸಮಿತಿ ಅಧ್ಯಕ್ಷರು ಹಾಗೂ ಮಹಾಪೌರರು ನಿರ್ಧರಿಸಿದ್ದಾರೆ” ಎಂದು ಅವರು ತಿಳಿಸಿದರು.

    “ಇಡೀ ಭಾರತದಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದು, ಸ್ವಚ್ಛತೆಗೆ ಬೆಂಗಳೂರು ಹೆಸರು ಮಾಡಿತ್ತು. ಈಗ ಕಸ ನಿರ್ವಹಣೆಯಲ್ಲಿ ಇಂದೋರ್ ನಂಬರ್ 1 ಸ್ಥಾನದ್ದಲ್ಲಿದ್ದು, ಎಲ್ಲರಿಗೂ ಮಾದರಿಯಾಗಿದೆ. ಅದೇ ಮಾದರಿಯನ್ನು ನಮ್ಮ ಭಾಗದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ. ಸ್ವಚ್ಛತೆ ನಿರ್ವಹಣೆಯಲ್ಲಿ ಕಸ ಸಂಗ್ರಹಣೆ ಒಂದು ಭಾಗವಾದರೆ, ಅದರ ವಿಂಗಡಣೆ ಅದಕ್ಕಿಂತಲೂ ಮುಖ್ಯವಾದ ಭಾಗ. ಹಸಿ, ಒಣ ಹಾಗೂ ಅಪಾಯಕಾರಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ವಿಲೇವಾರಿ ಮಾಡಲು ತಂತ್ರಜ್ಞಾನದ ನೆರವು ಪಡೆಯುವ ಚಿಂತನೆ ಇದೆ. ಈ ಮೂಲಕ ಬೆಂಗಳೂರು ಮಾದರಿ ಆಗಲಿದೆ. ಇದಕ್ಕೆ ನಾಗರಿಕರ ಸಹಕಾರ ಅತ್ಯಗತ್ಯ” ಎಂದು ಹೇಳಿದರು.

    ಕೊರೊನಾ ಜಾಗೃತಿ
    “ಕೊರೊನಾ ಬರದಂತೆ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ. ಸ್ವಚ್ಛತೆ ಕಾಪಾಡುವ ಮೂಲಕ ನಾಗರಿಕರು ಸಮಾಜದ ಆರೋಗ್ಯ ರಕ್ಷಣೆ ಮಾಡಬಹುದು. ಮುಖ್ಯವಾಗಿ 60 ವರ್ಷ ಮೇಲ್ಪಟ್ಟವರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಹೊರಗೆ ಬರದಿರುವುದು ಒಳಿತು. ಮನೆ ಮನೆಗೆ ತೆರಳಿ ವೃದ್ಧರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ನಮ್ಮ ಆರೋಗ್ಯ ಸೇವಾ ಸಿಬ್ಬಂದಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್ ಜೈನ್, ಪಾಲಿಕೆಯ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ ರಾಜು ಹಾಗೂ ನಗರಸಭೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

    ಇಂದೋರ್ ಮಾದರಿ ಹೇಗೆ?
    * ವಾರ್ಡ್‍ನ ಎಲ್ಲ ಮನೆಗಳಿಂದ ಹಾಗೂ ವಾಣಿಜ್ಯ ಮಳಿಗೆಗಳಿಂದ ಮೂಲದಲ್ಲೇ ಶೇ. 100 ರಷ್ಟು ವಿಂಗಡಿಸಿದ ತ್ಯಾಜ್ಯ ಸಂಗ್ರಹಣೆ ಮಾಡಿ, ಅದನ್ನು ತೆರೆದ ಆಟೋ ಟಿಪ್ಪರ್ ಬದಲು ಮುಚ್ಚಿದ ಕಂಪಾರ್ಟ್‍ಮೆಂಟ್ ಇರುವ ಆಟೋ ಟಿಪ್ಪರ್ ಗಳಲ್ಲಿ ಸಾಗಿಸಲಾಗುವುದು.
    * ಕಸ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ನಿಂರಂತರ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು.
    * ಮನೆಗಳಿಂದ ಬೆಳಗ್ಗೆ ಪಾಳಿಯಲ್ಲಿ ಹಾಗೂ ವಾಣಿಜ್ಯ ಮಳಿಗೆಗಳಿಂದ ರಾತ್ರಿ ಪಾಳಿಯಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡಲಾಗುವುದು ಮತ್ತು ವಾಣಿಜ್ಯ ಪ್ರದೇಶಗಳ ರಸ್ತೆ ಸ್ವಚ್ಛತೆ ಕಾರ್ಯ ಮಾಡಲಾಗುವುದು.
    * ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಮೊದಲು ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು, ನಂತರದ ದಿನಗಳಲ್ಲಿ ದಂಡ ವಿಧಿಸಲಾಗುವುದು.
    * ಸಾರ್ವಜನಿಕ ಸ್ಥಳಗಳಲ್ಲಿ ಕಸ ತೆರವುಗೊಳಿಸಿ ಸುಂದರಗೊಳಿಸಲಾಗುವುದು.
    * ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲೀಕರಿಂದ ತೆರಿಗೆ ಜತೆ ದಂಡ ವಸೂಲಿ ಮಾಡಲಾಗುವುದು.

  • ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    – ಊರಿನ ಜಾತ್ರೆಗೂ ಬರ್ತಾರೆ

    ಬೆಂಗಳೂರು: ಮದುವೆ ಮನೆಗೆ ಅತಿಥಿಗಳು ಬರುವುದು ಸಾಮಾನ್ಯ. ಆದರೆ ಇನ್ಮುಂದೆ ಮದುವೆ ಮನೆಗೆ ಆರೋಗ್ಯಾಧಿಕಾರಿಗಳು ಬರುತ್ತಾರೆ. ಯಾಕೆಂದರೆ ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಸಮಾರಂಭಗಳಿಗೂ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ಭೇಟಿ  ಕೊಡುತ್ತಾರೆ.

    ಹೌದು..ಬೇಸಿಗೆ ಕಾಲ ಹತ್ತಿರ ಬರುತ್ತಿದೆ. ರಾಜ್ಯದಲ್ಲೀಗ ಸಾಂಕ್ರಾಮಿಕ ರೋಗದ ಹಾವಳಿ. ಇದಕ್ಕಾಗಿಯೇ ಈಗ ರಾಜ್ಯ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಅದರಲ್ಲೂ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಹಾಗೂ ನೀರು ಶುದ್ಧವಾಗಿಲ್ಲದೆ ಇರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಇದಕ್ಕಾಗಿಯೇ ಈಗ ಮದುವೆ ಮಂಟಪಗಳಿಗೆ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ವಿಸಿಟ್ ಮಾಡಬೇಕು.

    ಆಶಾ ಕಾರ್ಯಕರ್ತೆಯರು ಕೂಡ ಮದುವೆಯಲ್ಲಿ ಹಂಚುವ ಆಹಾರ ಹಾಗೂ ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಿ ಅದರ ಕ್ವಾಲಿಟಿ ಚೆಕ್ ಮಾಡಬೇಕು ಅಂತ ಆರೋಗ್ಯಾಧಿಕಾರಿಗಳು ಆದೇಶ ಕೊಟ್ಟಿದ್ದಾರೆ. ಮುಂದೆ ಊಟದಲ್ಲಿ ಸ್ವಚ್ಛತೆ ಕಾಪಾಡದೆ ಇದ್ದರೆ ಊಟ ಸಪ್ಲೈ ಮಾಡುವ ಕ್ಯಾಟರಿಂಗ್‍ನವರ ಮೇಲೆ ದೂರು ದಾಖಲಾಗುತ್ತೆ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕರಾದ ಶರೀಫ್ ಹೇಳಿದ್ದಾರೆ.

    ಕೇವಲ ಮದುವೆ ಮಾತ್ರವಲ್ಲದೇ ಊರಿನ ಜಾತ್ರೆಗೂ ಕೂಡ ಆರೋಗ್ಯಾಧಿಕಾರಿಗಳು ಭೇಟಿ ಕೊಡಲಿದ್ದಾರೆ. ಊರಿನ ಜಾತ್ರೆಯಲ್ಲಿ ವಿತರಿಸುವ ಪ್ರಸಾದ, ಅಲ್ಲಿನ ಆಹಾರದ ಶಾಪ್‍ಗಳ ಸ್ವಚ್ಛತೆಯ ಮೇಲೂ ಗಮನಹರಿಸಲಿದ್ದಾರೆ. ಏನಾದರೂ ತೊಂದರೆಯಾದರೆ ಊರಿನ ಜಾತ್ರೆಯ ಮುಖಂಡತ್ವ ವಹಿಸಿರುವವರೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮದುವೆ, ಜಾತ್ರೆ ಇಂತಹ ಸಮಾರಂಭದಲ್ಲಿ ಜನ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಈ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಲು ನಾನಾ ಪ್ಲ್ಯಾನ್ ಮಾಡಿದೆ.

  • ಸ್ವಚ್ಛತೆ ಕಾಪಾಡದಿದ್ರೆ ಒದ್ದು ಬಿಹಾರಕ್ಕೆ ಕಳಿಸ್ತೀನಿ: ಉಮೇಶ್ ಕತ್ತಿ

    ಸ್ವಚ್ಛತೆ ಕಾಪಾಡದಿದ್ರೆ ಒದ್ದು ಬಿಹಾರಕ್ಕೆ ಕಳಿಸ್ತೀನಿ: ಉಮೇಶ್ ಕತ್ತಿ

    ಚಿಕ್ಕೋಡಿ: ಸ್ವಚ್ಛತೆ ಕಾಪಾಡದಿದ್ದರೆ ಒದ್ದು ಬಿಹಾರಕ್ಕೆ ಓಡಿಸುತ್ತೇನೆ ಎಂದು ಸ್ವಚ್ಛತಾ ನೌಕರರನ್ನು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತರಾಟೆಗೆ ತೆಗೆದುಕೊಂಡಿದ್ದರು.

    ಬೆಳಗಾವಿ ಜಿಲ್ಲೆ ಹುಕ್ಕೇರಿ ಬಸ್ ನಿಲ್ದಾಣಕ್ಕೆ ಶಾಸಕ ಉಮೇಶ್ ಕತ್ತಿ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದ ವ್ಯವಸ್ಥೆ ನೋಡಿ ಗರಂ ಆದ ಶಾಸಕ ಕತ್ತಿ ಅಧಿಕಾರಿಗಳನ್ನ ಹಾಗೂ ಸ್ವಚ್ಛತೆ ಮಾಡುತ್ತಿದ್ದ ಕಾರ್ಮಿಕರನ್ನ ತರಾಟೆಗೆ ತೆಗೆದುಕೊಂಡರು.

    ಸ್ವಚ್ಛತೆ ಕಾಪಾಡದಿದ್ದರೆ ಒದ್ದು ಬಿಹಾರಕ್ಕೆ ಓಡಿಸುತ್ತೇನೆ ಎಂದು ಸ್ವಚ್ಛತಾ ನೌಕರನನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೇ ಬಸ್ ನಿಲ್ದಾಣದ ಅಸ್ವಚ್ಛತೆ ಕಂಡು ಸ್ವಚ್ಛತೆ ಕಾಪಾಡದ ಬಿಹಾರ ಮೂಲದ ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಲು ಸೂಚನೆ ನೀಡಿದರು. ಜೊತೆಗೆ ಸ್ಥಳೀಯರಿಗೆ ಸ್ವಚ್ಛತೆಯ ಗುತ್ತಿಗೆ ನೀಡುವಂತೆ ಒತ್ತಾಯಿಸಿದರು.

    ಬಸ್ ನಿಲ್ದಾಣದಲ್ಲಿ ವೃದ್ಧರು ಹಾಗೂ ಹಿರಿಯರಿಗೆ ಅನುಕೂಲವಾಗುವ ಆಸನಗಳ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಂಕೇಶ್ವರ ಡಿಪೋ ಮ್ಯಾನೇಜರ್ ನಾಡಗೌಡ, ಬಿಜೆಪಿ ಮುಖಂಡರಾದ ಗುರು ಕುಲಕರ್ಣಿ, ಸದಾ ಮರಬಸ್ಸನವರ, ರಾಜು ಮುನ್ನೋಳಿ, ಶೇಖರ್ ತರೀಕರ ಸೇರಿದಂತೆ ಹಲವರು ಹಾಜರಿದ್ದರು.

  • ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಕಾರ್ಯ

    ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಕಾರ್ಯ

    – 6 ಲಾರಿ ಬಟ್ಟೆ, 8 ಲಾರಿ ತ್ಯಾಜ್ಯ ನದಿಯಿಂದ ಹೊರಕ್ಕೆ

    ಮಂಗಳೂರು: ಉಜಿರೆಯ ಶ್ರೀ ಜನಾರ್ದನ ಸೇವಾ ಸಮಿತಿಯು ಕಳೆದ ಕೆಲ ತಿಂಗಳ ಹಿಂದೆ ಆರಂಭಗೊಂಡಿದ್ದು, ಇದರ ಪ್ರಥಮ ಸೇವೆಯಾಗಿ ಧರ್ಮಸ್ಥಳದಲ್ಲಿ ಜೀವನದಿ ನೇತ್ರಾವತಿಯ ಸ್ವಚ್ಛತಾ ಕಾರ್ಯವನ್ನು 500 ಮಂದಿ ಸ್ವಯಂ ಸೇವಕರ ತಂಡದವರು ಸೇವೆಯಾಗಿ ಮಾಡಿದರು.

    ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಚ್ಛತೆ ನಡೆಸಿ 6 ಲಾರಿ ಲೋಡ್ ಬಟ್ಟೆ ತ್ಯಾಜ್ಯ 2 ಲೋಡ್ ಕಟ್ಟಿಗೆ ಹಾಗೂ 8 ಲೋಡ್ ತ್ಯಾಜ್ಯವನ್ನು ನದಿಯಿಂದ ತೆಗೆದು ಸ್ವಚ್ಛಗೊಳಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ ಭೇಟಿ ನೀಡಿ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಉಜಿರೆಯ ಹಿರಿಯ ಸಮಾಜ ಸೇವಾಕರ್ತ ರಾಮಚಂದ್ರ ಶೆಟ್ಟಿ ಸ್ವಚ್ಛತಾ ಕಾರ್ಯವನ್ನು ಉದ್ಘಾಟಿಸಿದರು. ಶರತ್‍ಕೃಷ್ಣ ಪಡ್ವೆಟ್ನಾಯ, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್, ಉಜಿರೆಯ ಉದ್ಯಮಿ ರಾಜೇಶ್ ಪೈ ಹಾಗೂ ಮೋಹನ ಕುಮಾರ್ ನೇತೃತ್ವದಲ್ಲಿ ಸ್ವಚ್ಛತಾ ಸೇವೆ ನಡೆಯಿತು.

    ಆರು ನೂರು ಮಂದಿ ಸಕ್ರಿಯ ಸ್ವಯಂ ಸೇವಕರ ತಂಡ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಉಜಿರೆಯಲ್ಲಿ ಕಳೆದ ಜನವರಿ 21 ರಂದು ಉಜಿರೆ ಜಾತ್ರೆ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆಗೊಂಡಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಮುಂಡಾಜೆ, ಚಾರ್ಮಾಡಿ ಪರಿಸರದಲ್ಲಿ ನೆರೆ ಪೀಡಿತರಿಗೆ ಸಂಕಷ್ಟದ ಸಂದರ್ಭ ಅಭಯಹಸ್ತ ನೀಡಿ ಸಹಕರಿಸಿತ್ತು. ಪ್ರಾಕೃತಿಕ ವಿಕೋಪಗಳು ಮುಂದೆ ಸಂಭವಿಸಿದಾಗ ನೆರವು ನೀಡಲು ಹಾಗೂ ಸೇವೆ ನೀಡಲು 600 ಜನರ ವ್ಯವಸ್ಥಿತ ಸ್ವಯಂ ಸೇವಕರ ತಂಡವನ್ನು ರಚಿಸಿದೆ.

    ಈ ತಂಡ ಇನ್ನೂ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಲು ತಯಾರಿ ನಡೆಸಿದ್ದು, ಈಗಾಗಲೇ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

  • ಬ್ರಾಂಡೆಡ್ ಹೆಸರಿನ ಕೊಳಕು ಎಣ್ಣೆಯ ಪಾನಿಪೂರಿ – ಚಪ್ಪರಿಸಿ ತಿನ್ನೋರಿಗೆ ಕಾಯಿಲೆ ಗ್ಯಾರೆಂಟಿ

    ಬ್ರಾಂಡೆಡ್ ಹೆಸರಿನ ಕೊಳಕು ಎಣ್ಣೆಯ ಪಾನಿಪೂರಿ – ಚಪ್ಪರಿಸಿ ತಿನ್ನೋರಿಗೆ ಕಾಯಿಲೆ ಗ್ಯಾರೆಂಟಿ

    ಬೆಂಗಳೂರು: ಚಪ್ಪರಿಸಿ ತಿನ್ನುವ ಗೋಲ್ಗಪ್ಪ, ಕಲರ್‌ಫುಲ್ ಆಗಿ ಕಾಣುವ ಮಸಾಲೆ ಪಾನಿಪೂರಿ, ನೋಡಿದ ತಕ್ಷಣ ಬಾಯಲ್ಲಿ ನೀರು ತರಿಸೋ ಸಮೋಸ ತಿನ್ನೋಕು ಮುಂಚೆ ಹುಷಾರಾಗಿರಿ. ನೀವು ಚಪ್ಪರಿಸಿ ತಿನ್ನುವ ಪಾನಿಪೂರಿ ಅಸಲಿಯತ್ತನ್ನ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಬಟಾಬಯಲು ಮಾಡಿದೆ.

    ಬೇಸಿಗೆ ಶುರು ಆಯ್ತು ಬಾಯಿ ಸುಮ್ಮನಿರಲ್ಲ ಹಣ್ಣು, ಹಂಪಲು ತಿನ್ನಲು ಹೋದರೆ ಸ್ವಲ್ಪ ದುಬಾರಿ. ಅದಕ್ಕೆ ಸಂಜೆ ಆದ ಕೂಡಲೇ ಸ್ನಾಕ್ಸ್ ನೆನಪಿಗೆ ಬರತ್ತೆ. ಆಗ ತಿಂಡಿ ಪ್ರಿಯರು ಗೋಲ್ಗಪ್ಪ, ಪಾನಿಪುರಿ, ಸಮೋಸಾ ಅಂತ ಹುಡುಕಿಕೊಂಡು ಹೋಗುತ್ತಾರೆ. ಆದರೆ ಗೋಲ್ಗಪ್ಪ ಅದೇ ಮಡಿಕೆ ಪಾನಿ, ವಿಧವಿಧವಾಗಿ ಎಣ್ಣೆಯಲ್ಲಿ ಕರಿದ ಪೂರಿ ಜೊತೆಗೆ ನೋಡೋಕು ಸಖತ್ ಕಲರ್‌ಫುಲ್ ಆಗಿರುತ್ತೆ. ಆದರೆ ಅದೆಲ್ಲಿ ತಯಾರಾಗುತ್ತೆ? ಹೇಗೆ ತಯಾರಾಗುತ್ತೆ? ಯಾರು ತಯಾರು ಮಾಡ್ತಾರೆ? ಎನ್ನೋದನ್ನ ನೋಡಿದರೆ ಮತ್ತೆ ಬೇಡಪ್ಪ ಎನ್ನುತ್ತಿರ.

    ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಪಾನಿಪೂರಿಗೆ ಬಳಸುವ ಪೂರಿ ಎಲ್ಲಿ ತಯಾರು ಮಾಡುತ್ತಾರೆ? ಹೇಗೆ ಮಾಡುತ್ತಾರೆ ಅನ್ನೋದನ್ನ ಬಿಚ್ಚಿಟ್ಟಿದೆ. ಪಬ್ಲಿಕ್ ಟಿವಿ ತಂಡ ಪೂರಿ ತಯಾರು ಮಾಡುವ ವ್ಯಾಪಾರಿ ಬಳಿ ಹೋಗಿ ಇದನ್ನು ಎಲ್ಲಿ ತಯಾರಿಸುತ್ತೀರಾ? ಯಾವ ಎಣ್ಣೆ ಹಾಕುತ್ತೀರಾ? ಬಿಳಿ ಪೂರಿಗಳು ಬೇಕಿತ್ತು ಎಂದು ಗ್ರಾಹಕರ ಸೋಗಿನಲ್ಲಿ ಹೋಗಿ ವಿಚಾರಿಸಿದರು. ಈ ವೇಳೆ ವ್ಯಾಪಾರಿ ನಾವು ಇಲ್ಲಿಯೇ ಪೂರಿ ತಯಾರಿಸುತ್ತೇವೆ. ಒಳ್ಳೆ ಎಣ್ಣೆ ಹಾಕಿ ಪೂರಿ ತಯಾರಿಸಲಾಗುತ್ತೆ ಎಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಾವು ತಿನ್ನುವ ಪೂರಿಯನ್ನು ಕರಿಯುವ ಎಣ್ಣೆ ಮತ್ತು ಎಣ್ಣೆ ತುಂಬಿಸೋ ಡ್ರಮ್‍ಗಳು, ಆ ಪೂರಿ ತುಂಬಿರೊ ಬ್ಯಾಗ್‍ಗಳನ್ನು ನೋಡಿದರೆ ಇನ್ನೊಂದು ಸಲ ತಿನ್ನಬೇಕು ಅನಿಸಲ್ಲ. ಆದರೆ ವ್ಯಾಪಾರಿ ಮಾತ್ರ ಇದು ಬ್ರಾಂಡೆಡ್ ಎಣ್ಣೆ ಎಂದು ವಾದಿಸುತ್ತಾನೆ. ಆ ಪೂರಿಯನ್ನ ಲಟ್ಟಿಸಿ ರೋಲ್ ಮಾಡೋ ಮಷಿನ್‍ಗೆ ಎಣ್ಣೆ ಸುರಿಯೋದನ್ನ ನೋಡಿಬಿಟ್ಟರೆ ಅಯ್ಯೋ ಶಿವನೆ ಇದನ್ನ ಇಷ್ಟು ದಿನ ತಿನ್ನುತ್ತಿದ್ದಿದ್ದು ಅನ್ನಿಸಿಬಿಡುತ್ತೆ.

    ಅಯ್ಯೋ ಅದು ಬಿಡಿ ನಮಗೆ ಕೊಡ್ಬೇಕಾದ್ರೆ ಸ್ವಚ್ಛ ಜಾಗದಲ್ಲಿ, ಸ್ಚಚ್ಛ ಕೈ ಇದ್ದರೆ ಸಾಕು ಅನ್ನೋರು ಮಡಿಕೆ ಪಾನಿ ಮಾರಾಟ ಮಾಡೋ ಜಾಗ ನೋಡಿದರೆ ಸುಸ್ತಾಗುತ್ತೀರಿ.

    ಬೆಂಗಳೂರಿನ ಹೃದಯಭಾಗ ಅಂತ ಕರೆಸಿಕೊಳ್ಳೊ ಮೆಜೆಸ್ಟಿಕ್‍ನಲ್ಲಿ ಈ ತರದ ಸ್ನಾಕ್ಸ್ ಮಾರುವವರೂ ಕಡಿಮೆ ಇಲ್ಲ, ತಿನ್ನೋರಿಗೂ ಬರ ಇಲ್ಲ. ಏನ್ರೀ ಇಷ್ಟೊಂದು ಕೊಳಕು ಅಂತ ಪ್ರಶ್ನಿಸಿದರೆ ವ್ಯಾಪಾರಿ ಸುಳ್ಳಿನ ಕಂತೆಯನ್ನೆ ಕಟ್ಟುತ್ತಾರೆ. ತಿಂಡಿ ಪ್ಲೇಟ್‍ಗಳನ್ನು ತೊಳೆಯಲು ಬೇರೆ ಕಡೆ ವ್ಯವಸ್ಥೆ ಇದೆ. ನಾವು ಗ್ರಾಹಕರಿಗೆ ಕುಡಿಯಲು ಬಿಸ್ಲೆರಿ ನೀರು ಕೊಡ್ತೀವಿ. ಕುಡಿಯೋ ನೀರಲ್ಲಿ ಪ್ಲೇಟ್ ತೊಳೆಯೊಲ್ಲ. ಹಾಗೆ ಮಾಡಿದರೆ ಬರುವವರು ಬರಲ್ಲ. ನಮ್ಮ ಅಂಗಡಿ ಇದೆ ಅಲ್ಲೇ ನಾವು ಪ್ಲೇಟ್ ತೊಳೆಯುತ್ತೇವೆ, ಒಮ್ಮೊಮ್ಮೆ ಪ್ಲೇಟ್ ತೊಳಿಯೋಕೆ ಮಿನರಲ್‍ವಾಟರ್ ಬಳಸ್ತೀವಿ ಎಂದು ಕಥೆ ಬಿಡುತ್ತಾರೆ.

    ಇತ್ತ ಮಲ್ಲೇಶ್ವರಂ ಹೈಟೆಕ್ ಏರಿಯಾ, ಆದರೆ ಅಲ್ಲಿಯೂ ಅಷ್ಟೇ ಕೈಗೆ ಗ್ಲೌಸ್ ಹಾಕಲ್ಲ, ಅಂಗಡಿ ಹಾಕಿರುವ ಸ್ಥಳ ಸ್ವಚ್ಛ ಇರಲ್ಲ. ಪಾನಿಗೆ ಕೈ ಹಾಕಿ ಹಾಕಿ ಕೊಳೆಯಾಗಿಯೇ ಕಾಯಿಲೆ ತರೋ ಪೂರಿ ಕೊಡ್ತಾರೆ. ಕಸದ ರಾಶಿ ಪಕ್ಕನೇ ಪಾನಿಪೂರಿಯನ್ನ ಗ್ರಾಹಕರಿ ಸವಿಯಬೇಕಿದೆ.

    ಪಾನಿ ಮೊದಲೇ ಬಿಸಿ ಇರಲ್ಲ. ಹಾಗಾಗಿ ರೋಗಾಣುಗಳು ಬೇಗ ಸೇರಿಕೊಂಡು ಬಿಡುತ್ತವೆ. ಅಲ್ಲದೇ ಗೋಲ್ಗಪ್ಪ ತಿನ್ನುವಾಗ ಗಮನಿಸಿ, ಸರಿಯಾಗಿ ಪೂರಿಗಳನ್ನ ಮುಚ್ಚಿರಲ್ಲ, ಪಾನಿ ಡಬ್ಬ ಓಪನ್ ಆಗಿ ಧೂಳು ಬಂದು ಸೇರಿ ಬಿಟ್ಟಿರುತ್ತದೆ. ಸ್ವಚ್ಛತೆ ಇಲ್ಲದಿದ್ದರೂ ಇದನ್ನ ತಿನ್ನೊರ ಸಂಖ್ಯೆಯನ್ನು ಕಡಿಮೆ ಆಗಿಲ್ಲ. ಇನ್ನೂ ನಾವೇ ತಿಂದಿರೋ ಸ್ನಾಕ್ಸ್ ಪ್ಲೇಟನ್ನು ಎಲ್ಲಿ ತೊಳೆಯುತ್ತಾರೆ ಅನ್ನೋದನ್ನ ನೋಡಿದರೆ ಬೆಚ್ಚಿ ಬೀಳ್ತೀರಿ. ಒಂದು ಬಕೆಟ್‍ನಲ್ಲಿ ನೀರಿಟ್ಟು ಅದರಲ್ಲೇ ಮತ್ತೆ ಮತ್ತೆ ಪ್ಲೇಟ್‍ಗಳನ್ನು ತೊಳೆಯುತ್ತಾರೆ.

    ನೀರು, ಸ್ವಚ್ಛತೆ ಕೊರತೆಯೇ ಮನುಷ್ಯರ ಕಾಯಿಲೆಗಳಿಗೆ ಕಾರಣವಾಗಿದೆ. ಈ ರೀತಿ ಸ್ವಚ್ಛವಿಲ್ಲದ ಪೂರಿ ರುಚಿ ನಿಮಗೆ ಹಲವು ಕಾಯಿಲೆಗಳನ್ನ ತರುತ್ತೆ ಎಂದು ವೈದ್ಯರು ಹೇಳಿದ್ದಾರೆ. ಜಾಂಡೀಸ್, ಟೈಫಾಯ್ಡ್, ಕಾಲರಾ, ಹೊಟ್ಟೆ ನೋವು, ಗ್ಯಾಸ್‍ಸ್ಟ್ರಿಕ್ ಸಮಸ್ಯೆ, ಅಲರ್ಜಿ, ಸೋಂಕುಗಳು ಬೇಗ ಹರಡುತ್ತೆ. ವಾಂತಿ, ಬೇಧಿ, ದೊಡ್ಡ – ಸಣ್ಣ ಕರುಳು ತೊಂದರೆ ಉಂಟಾಗುತ್ತೆ.

  • 400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

    400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

    ಬೆಂಗಳೂರು: ನಗರಗಳ ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟೋ ಪುರಾತನ ಕಟ್ಟಡಗಳು, ಕೆರೆಗಳು, ಕಲ್ಯಾಣಿಗಳು ಮಣ್ಣಲ್ಲಿ ಮಣ್ಣಾಗಿ ಇತಿಹಾಸಗಳೇ ಮುಚ್ಚಿ ಹೋಗಿವೆ. ಅಳಿವಿನಂಚಿನ ಕಲ್ಯಾಣಿಯನ್ನು ಕಂಡ ನ್ಯಾಯಾಧೀಶರು ತಮ್ಮ ತಂಡವನ್ನು ಕಟ್ಟಿಕೊಂಡು ಸ್ವಚ್ಛತೆಗೆ ಮುಂದಾಗಿ ಮತ್ತೆ ಪುನರ್ಜಿವ ನೀಡಿದ್ದಾರೆ.

    ಬೆಂಗಳೂರು ಹೊರವಲಯದ ಆನೇಕಲ್‍ನ ಸಿಡಿಹೊಸಕೋಟೆ ರಸ್ತೆಯಲ್ಲಿರುವು ಪುಷ್ಕರಾಣಿ ಕಲ್ಯಾಣಿಯಲ್ಲಿ ಬೆಳೆದಿರುವ ಗಿಡಗಳನ್ನು ಕಿತ್ತು ಸ್ವಚ್ಛತೆಗೆ ಮುಂದಾಗಿದ್ದಾರೆ. ಈ ಪುಷ್ಕರಾಣಿ ಕಲ್ಯಾಣಿಗೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ಆನೇಕಲ್ ತಾಲೂಕಿಗೆ ಪ್ರಸಿದ್ಧಿಯಾಗಿತ್ತು. ಪಾಳೇಗಾರರು ಆಳ್ವಿಕೆ ಮಾಡುವ ಕಾಲದಲ್ಲಿ ಆನೇಕಲ್ ನ ದೊಡ್ಡಕೆರೆ ಹಾಗೂ ಈ ಕಲ್ಯಾಣಿಯನ್ನು ನಿರ್ಮಿಸಿದ್ದರು. ಕಲ್ಯಾಣಿಯಲ್ಲಿ ಜನ ನೀರು ಕುಡಿಯುವುದು ಬಟ್ಟೆ ತೊಳೆಯುವುದು ಹಾಗೂ ಜನ ಈಜಲು ಬಳಸುತ್ತಿದ್ದರು.

    ಕಳೆದ 20 ವರ್ಷಗಳಿಂದ ಈ ಕಲ್ಯಾಣಿಯಲ್ಲಿ ಮಣ್ಣು ತುಂಬಿಕೊಂಡು ನೀರು ಸಹ ಇಂಗಿ ಹೋಗಿದ್ದು ಆಳಿವಿನಂಚಿಗೆ ತಲುಪಿತ್ತು. ಇದನ್ನು ಕಂಡ ಆನೇಕಲ್ ನ ನ್ಯಾಯಾಧೀಶರು ತಂಡ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಇಂದು ಮಣ್ಣನ್ನು ತೆಗೆಯುತ್ತಿದ್ದು, ಇನ್ನೆರಡು ವಾರಗಳಲ್ಲಿ ಸಂಪೂರ್ಣವಾಗಿ ಸ್ವಚ್ಛಗೊಳ್ಳಲಿದೆ.

    ಆನೇಕಲ್ ನ ಜೆಎಂಎಪ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗೋಕುಲ್ ಮತ್ತು ಪ್ರಶಾಂತ್ ಆನೇಕಲ್ ನಿಂದ ಸಿಡಿಹೊಸಕೋಟೆಯ ರಸ್ತೆಯಲ್ಲಿ ವಾಯುವಿಹರಕೆಂದು ಹೋಗುವ ವೇಳೆ ಈ ಕಲ್ಯಾಣಿಯನ್ನು ಕಂಡಿದ್ದಾರೆ. ನಂತರ ಆನೇಕಲ್ ನ ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಈ ಪುಷ್ಕರಾಣಿ ಕಲ್ಯಾಣಿಯ ಸ್ವಚ್ಛತೆಯನ್ನು ಪ್ರತಿ ಭಾನುವಾರ ಮಾಡಲು ಮುಂದಾಗಿದ್ದಾರೆ.

    ಕಲ್ಯಾಣಿ ಇನ್ನೊಂದು ವಾರಗಳಲ್ಲಿ ಕೊನೆಯ ಹಂತಕ್ಕೆ ಬರಲಿದೆ. ಈ ಸ್ವಚ್ಛತೆಯ ಕೆಲಸದಲ್ಲಿ ನ್ಯಾಯಾಲಯದಲ್ಲಿನ ಎಲ್ಲ ಸಿಬ್ಬಂದಿ ವಕೀಲರು ಭಾಗವಹಿಸಿದ್ದು, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಶಾಲಾ ಮಕ್ಕಳು ನ್ಯಾಯಾಧೀಶರೊಂದಿಗೆ ಯಾವುದೇ ಬೇಧವಿಲ್ಲದೆ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಧೀಶರು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

  • ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

    ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

    ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯದು ಯಾವಾಗಲೂ ಬ್ಯುಸಿ ಶೆಡ್ಯೂಲ್. ಹೀಗಾಗಿ ಸ್ಟ್ರೀಟ್ ಫುಡ್‍ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರ ಹಾರ್ಟ್ ಫೇವರೆಟ್ ಈ ಸ್ಟ್ರೀಟ್ ಫುಡ್‍ಗಳ ಆರ್ಭಟ ನಗರದ ಗಲ್ಲಿಗಲ್ಲಿಯಲ್ಲೂ ಜೋರಾಗಿದೆ. ಅಗ್ಗದ ದರ, ಟೇಸ್ಟಿ ಸ್ಟ್ರೀಟ್ ಫುಡ್‍ಗಳು ಇದೀಗ ಕಿಲ್ಲರ್ ಫುಡ್ ಆಗಿ ಕೆಲವೆಡೆ ಬದಲಾಗುತ್ತಿದೆ. ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಈ ಡರ್ಟಿ ಸ್ಟ್ರೀಟ್ ಫುಡ್ ಸೀಕ್ರೆಟ್ ಬಟಾಬಯಲು ಮಾಡಿದೆ.

    ಸಂಜೆ ಹೊತ್ತಲ್ಲಿ ಸ್ಟ್ರೀಟ್‍ನಲ್ಲಿ ನಿಂತ್ಕೊಂಡು ಗೋಬಿ ಮಂಚೂರಿನೋ, ಸ್ಪೈಸಿ ತಿಂಡಿ ಮೆಲ್ಲೋಣ ಎಂದು ಹೋಗುವವರು ಹೆಚ್ಚು. ಇತ್ತ ಗರಿ ಗರಿ ದೋಸೆ, ಇಡ್ಲಿ, ಬೊಂಡಾ ಇದಕ್ಕೆಲ್ಲಾ ಕಾಂಬಿನೇಷನ್ ಆಗಿ ಚಿಕನ್, ಮಟನ್ ಇದ್ದರೆ ಸಂಜೆ ಹೋದವರು ಅದನ್ನೆಲ್ಲಾ ತಿಂದು ಬರುವಷ್ಟರಲ್ಲಿ ಕತ್ತಲಾಗಿರುತ್ತೆ. ಆ ರೇಂಜ್‍ಗೆ ಸ್ಟ್ರೀಟ್ ಫುಡ್ ನಮ್ಮನ್ನು ಆಕರ್ಷಿಸುತ್ತೆ. ಈ ತಿಂಡಿಗಳು ಅಗ್ಗದ ದರದಲ್ಲೂ ಸಿಗುತ್ತೆ. ಜೊತೆಗೆ ಟೇಸ್ಟ್ ಕೂಡ ಸಖತ್ ಆಗಿರುತ್ತೆ ಎಂದು ಜನ ಸ್ಟ್ರೀಟ್ ಫುಡ್‍ಗಳ ಸೆಂಟರ್ ಮುಂದೆ ಕ್ಯೂ ನಿಲ್ತಾರೆ. ಆದರೆ ಈ ಸ್ಟ್ರೀಟ್‍ಫುಡ್ ಜನರ ಪಾಲಿಗೆ ಕಿಲ್ಲರ್ ಫುಡ್ ಆಗಿದೆ. ಇದೆಲ್ಲಾ ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಗರದ ಜೆಸಿ ರಸ್ತೆ, ಲಾಲ್‍ಬಾಗ್- ನ್ಯಾಷನಲ್ ಕಾಲೇಜು ಸಮೀಪದ ವಿವಿ ಪುರಂ ಫುಡ್ ಸ್ಟ್ರೀಟ್ ಇಡೀ ಬೆಂಗಳೂರಲ್ಲಿ ತುಂಬಾನೇ ಫೇಮಸ್. ಬೆಳಗ್ಗೆ, ಮಧ್ಯಾಹ್ನ ತಡರಾತ್ರಿಯಾದರೂ ಇಲ್ಲಿ ಫುಡ್ ಸಿಗುತ್ತೆ. ಸಂಜೆಯಂತೂ ಇಲ್ಲಿ ಕಾಲಿಡೋಕು ಜಾಗ ಇರಲ್ಲ. ಆದರೆ ಈ ಏರಿಯಾದಲ್ಲಿ ಸಿಗುವ ಕೆಲ ಹೋಟೆಲ್‍ನ ಡರ್ಟಿ ಸೀನ್ ನೋಡಿದರೆ ವಾಕರಿಕೆ ಬರತ್ತೆ.

    ದೋಸೆ ಹೊಯ್ಯುವ ಹೆಂಚು ತೊಳೆದು ಎಷ್ಟು ಕಾಲವಾಗಿದ್ಯೋ ಏನೋ? ಇಡ್ಲಿ ಬೇಯಿಸುವ ಪಾತ್ರೆ ನೋಡಿದರೆ ಜನ್ಮದಲ್ಲಿ ಇಡ್ಲಿ ತಿನ್ನೋದೆ ಬೇಡ ಅನಿಸಿಬಿಡುತ್ತೆ. ಇಡ್ಲಿಗೆ ನೊಣ ಫ್ರೀ ಎನ್ನುವಂತೆ ಬೇಯಿಸಿಟ್ಟ ಇಡ್ಲಿ ಪಕ್ಕ ಕಸದ ಬುಟ್ಟಿಯ ಮುಂದೆ ನೊಣಗಳು ಹಾರಾಡುತ್ತಿರುತ್ತೆ. ಇಲ್ಲಿ ಸ್ವಚ್ಛತೆಗೆ ಮೂರುಕಾಸಿನ ಬೆಲೆ ಇಲ್ಲ. ಅಲ್ಲದೆ ನೀವು ತಿಂದ ಪಾತ್ರೆಗಳನ್ನ ಅವರು ತೊಳೆಯೋದು ನೋಡಿದ್ರೆ ಸುಸ್ತಾಗಿ ಹೋಗ್ತಿರಾ. ನೆಟ್ಟಗೆ ಲೋಟ ತಟ್ಟೆಯನ್ನು ತೊಳೆಯದೇ ಹಾಗೆಯೇ ತಿಂಡಿಗಳನ್ನು ಬಡಿಸಿ ಕೊಡ್ತಾರೆ.

    ಇತ್ತ ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣದ ಫುಡ್ ಸ್ಟಾಲ್ ಕಥೆಯಂತೂ ಕೇಳೋದೇ ಬೇಡ. ರೋಡ್‍ನಲ್ಲೇ ಕಿಚನ್, ಡರ್ಟಿ ಫುಡ್‍ನ ದುನಿಯಾ ಇದು. ರಸ್ತೆಯಲ್ಲೆ ತಿಂಡಿ ಲಟ್ಟಿಸುತ್ತಾರೆ, ಬಾಣಲೆ ಇಟ್ಟು ಬೇಯಿಸ್ತಾರೆ. ಕಡೆಗೆ ಧೂಳು ಮುತ್ತಿದ್ದ ಮೇಲೆ ತಿಂಡಿಗಳನ್ನು ಮಾರುತ್ತಾರೆ. ತಿಂಡಿ ಮೇಲೆ ನೋಣವೆಲ್ಲ ಕೂರುತ್ತಿದೆ ಎಂದು ಪ್ರಶ್ನಿಸಿದರೆ ವ್ಯಾಪಾರಿಗಳು ಮಾತ್ರ ಏನೂ ಪ್ರತಿಕ್ರಿಯೆ ಕೊಡದೆ ಬಾಯಿ ಮುಚ್ಚಿ ಇರುತ್ತಾರೆ.

    ಹಾಗೆಯೇ ವಿಜಯನಗರ ಸ್ಟ್ರೀಟ್ ಫುಡ್ ಬಳಿ ಸಣ್ಣ ಚರಂಡಿ ಇದೆ. ಅಲ್ಲೇ ಇಡ್ಲಿ ಇಟ್ಟು, ಇಡ್ಲಿ ತೆಗೆಯುವುದಕ್ಕೆ ಬಳಸೋ ನೀರು ನೋಡಿದರೆ ಅಸಹ್ಯ ಎನಿಸುತ್ತೆ. ಕುಡಿಯುವ ನೀರಿನ ಜಾಗ ಹಾಗೂ ಕೈತೊಳೆಯೊ ಜಾಗಕ್ಕೆ ಏನೂ ವ್ಯತ್ಯಾಸವಿಲ್ಲ. ಹೀಗಿರುವ ಸ್ಥಳದಲ್ಲಿ ತಿಂಡಿ ತಿಂದರೆ ಕಾಯಿಲೆ ಗ್ಯಾರೆಂಟಿ.

    ನಾನ್‍ವೆಜ್ ತಿಂಡಿಗಳಿಗೆ ಫೇಮಸ್ ಆಗಿರುವ ಶಿವಾಜಿನಗರದಲ್ಲಿ ಸ್ವಚ್ಛತೆ ನೋಡಿದರೆ ದಂಗಾಗುತ್ತೀರ. ನೇತು ಹಾಕಿರೋ ಪ್ರಾಣಿಗಳ ದೇಹದಂತೆ ಇಲ್ಲಿ ಊಟದ ಸ್ವಚ್ಛತೆಯೂ ಜೋತು ಬಿದ್ದಿದೆ.

    ಈ ಸ್ಟ್ರೀಟ್ ಫುಡ್ ತಯಾರಕರು ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಬೇಕು. ಇಲ್ಲವಾದರೆ ಉಗುರಿನಲ್ಲಿರೋ ಫಂಗಸ್ ದೇಹ ಸೇರಿ ಕರುಳುಬೇನೆ ಶುರುವಾಗುತ್ತದೆ. ಜೊತೆಗೆ ಪದೇ ಪದೇ ಕಾಯಿಲೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಛತೆಯ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತೆ. ಹೀಗಾಗಿ ಕಡಿಮೆ ಬೆಲೆಗೆ, ಬಿಸಿ ಬಿಸಿ ಸಿಗುತ್ತೆ ಎಂದು ಸ್ಟ್ರೀಟ್ ಫುಡ್ ಮೊರೆ ಹೋಗೋ ಮುನ್ನ ಎಚ್ಚರದಿಂದಿರಿ. ಸ್ವಚ್ಛತೆ ಇಲ್ಲದ ಕಡೆ ಆಹಾರ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ.