Tag: ಸ್ವಗ್ರಾಮ

  • 21 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

    21 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

    ಹುಬ್ಬಳ್ಳಿ: ಸತತ 21 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸೇನಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧನನ್ನು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

    ಗ್ರಾಮದ ಸುರೇಶ್ ಬಸಪ್ಪ ನೇಗಿನಾಳ ಅವರು ಸೇನಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದರು. ಇವರು ಬಿಎಸ್‍ಎಫ್ ಯೋಧರಾಗಿ ಪಶ್ಚಿಮ ಬಂಗಾಳ, ಪಂಜಾಬ್, ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆದಿದ್ದಾರೆ. ಪ್ರಸ್ತುತ ಅವರು ಸ್ವಗ್ರಾಮಕ್ಕೆ ಮರಳಿದ್ದು, ಅವರ ಬರುವಿಕೆಯನ್ನು ಇಡೀ ಗ್ರಾಮದ ಜನರು ಹಬ್ಬದ ರೀತಿ ಮಾಡಿದ್ದಾರೆ. ಇದನ್ನೂ ಓದಿ: RX100 ಬೈಕಿನ ಹುಟ್ಟುಹಬ್ಬ – ಗೆಳೆಯರಿಗೆ ಬಿಂದಾಸ್ ಪಾರ್ಟಿ ಕೊಟ್ಟ 

    ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮೆರವಣಿಗೆ ನಡೆಸಿ ಜಯಘೋಷ ಹಾಕಿ, ಆರತಿ ಬೆಳಗಿ, ಕೇಕ್ ಕಟ್ ಮಾಡಿ, ಪುಷ್ಪಾರ್ಚನೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು.

    ಯೋಧನನ್ನು ತೆರೆದ ವಾಹನದಲ್ಲಿ ದೇವನೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸುರೇಶ್ ಬಸಪ್ಪ ನೇಗಿನಾಳ ತಮ್ಮ ಸೇನಾ ದಿನಗಳ ನೆನಪು ಮಾಡಿಕೊಂಡರು. ಇದನ್ನೂ ಓದಿ:  ಮೂಢನಂಬಿಕೆಗೆ ಮಗಳು ಬಲಿ – ಹೊಡೆದು ಕೊಂದ ಪೋಷಕರು ಈಗ ಅಂದರ್‌ 

    Live Tv
    [brid partner=56869869 player=32851 video=960834 autoplay=true]

  • ಸೇವಾ ನಿವೃತ್ತಿ ಪಡೆದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ..!

    ಸೇವಾ ನಿವೃತ್ತಿ ಪಡೆದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ..!

    ಹುಬ್ಬಳ್ಳಿ: ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ನಂತರ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಯೋಧ ಮೆಹಬೂಬಸಾಬ್ ಬೆಲವಂತರವರು ಆಗಸ್ಟ್ 1ರಂದು ಸೇವಾ ನಿವೃತ್ತಿಯಾಗಿದ್ದು, ಬುಧವಾರ ಸೈನಿಕ ಮೆಹಬೂಬಸಾಬ್ ಸ್ವಗ್ರಾಮಕ್ಕೆ ಆಗಮಿಸಿದರು. ಯೋಧ ಗ್ರಾಮಕ್ಕೆ ಆಗಮಿಸುತ್ತಿರುವ ಮಾಹಿತಿ ತಿಳಿದ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿತ್ತು. ಗ್ರಾಮದ ಮಾಜಿ ಸೈನಿಕರು ಮೆಹಬೂಬಸಾಬ್ ಅವರಿಗೆ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದರು. ನಂತರ ಗ್ರಾಮಸ್ಥರು, ಮಾಜಿ ಸೈನಿಕರು ಡೊಳ್ಳಿನ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಿ ಆತ್ಮೀಯವಾಗಿ ಸ್ವಾಗತ ಮಾಡಿದರು.

    ನಿವೃತ್ತ ಯೋಧ ಮೆಹಬೂಬ್ ಸಾಬ್ ಬೆಲವಂತರ ಮಾತನಾಡಿ, ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ 2004 ರಿಂದ ರಾಂಚಿ, ಜಮ್ಮು ಕಾಶ್ಮಿರ, ರಾಜಸ್ಥಾನ, ತಬಾಂಗ್ ಸೇರಿದಂತೆ ವಿವಿಧೆಡೆ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದರು. ನಿವೃತ್ತಿ ನಂತರ ಊರಿಗೆ ಆಗಮಿಸಿದಾಗ ದೇಶಭಕ್ತರು ಸ್ವಾಗತ ನೀಡಿದ್ದು ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯತೆ ಭಾವ ಮೂಡಿಸಿದೆ ಎಂದರು.

    ನಂತರ ಯೋಧನ ಮನೆಯ ಮುಂದೆ ಸ್ವಾಗತ ಕಾರ್ಯಕ್ರಮ ಆಯೋಜಿಸಿ ಮಾಜಿ ಸೈನಿಕರು, ಗ್ರಾಮ ಪಂಚಾಯತಿ ಸದಸ್ಯರು, ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ದೇಶಾಭಿಮಾನಿಗಳು ಯೋಧ ಮೆಹಬೂಬಸಾಬ್ ಅವರನ್ನು ಸನ್ಮಾನಿಸಿದರು.

  • ಊರು ಸೇರಲು ಊಟವಿಲ್ಲದೇ 135 ಕಿ.ಮೀ ನಡೆದ ಕೂಲಿ ಕಾರ್ಮಿಕ

    ಊರು ಸೇರಲು ಊಟವಿಲ್ಲದೇ 135 ಕಿ.ಮೀ ನಡೆದ ಕೂಲಿ ಕಾರ್ಮಿಕ

    – ಕಾರ್ಮಿಕನಿಗಾಗಿ ಮನೆಯಿಂದ ಊಟ ತರಿಸಿಕೊಟ್ಟ ಪೊಲೀಸ್

    ಮುಂಬೈ: ಕೊರೊನಾ ವೈರಸ್ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಕೂಲಿ ಕಾರ್ಮಿಕನೋರ್ವ ಊಟವಿಲ್ಲದೇ 135 ಕೀ.ಮೀ ನಡೆದು ತನ್ನ ಊರು ಸೇರಿದ್ದಾನೆ.

    ಕೊರೊನಾ ವೈರಸ್ ಭೀತಿಯಿಂದ ಊರು ಬಿಟ್ಟು ಬೇರೆ ಕಡೆ ಕೂಲಿ ಮಾಡುತ್ತಿದ್ದವರೆಲ್ಲ, ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುತ್ತಿದ್ದಾರೆ. ಪ್ರಧಾನಿ ಅವರ ಆದೇಶದ ಮೇರೆಗೆ ಪೂರ್ತಿ ಇಂಡಿಯಾ ಲಾಕ್‍ಡೌನ್ ಆಗಿದೆ. ಆದರೂ ಕೆಲವರು ನಡೆದುಕೊಂಡು ಸಿಕ್ಕ ಸಿಕ್ಕ ವಾಹನ ಏರಿ ತಮ್ಮ ಊರಿಗೆ ಬರುತ್ತಿದ್ದಾರೆ. ಹಾಗೇಯೆ 26 ವರ್ಷದ ದಿನಗೂಲಿ ಕೆಸಲಗಾರ ನರೇಂದ್ರ ಶೆಲ್ಕೆ ಮಹಾರಾಷ್ಟ್ರದ ನಾಗ್ಪುರದಿಂದ ಆಹಾರವಿಲ್ಲದೆ 135 ಕಿ.ಮೀ.ಗೆ ನಡೆದು ಚಂದ್ರಪುರದ ತನ್ನ ಮನೆ ಸೇರಿದ್ದಾನೆ.

    ಕೊರೊನಾ ವೈರಸ್ ನಿಂದ ಎಲ್ಲರೂ ಸಿಟಿ ಬಿಟ್ಟು ತಮ್ಮ ಹಳ್ಳಿ ಸೇರುತ್ತಿದ್ದಾರೆ. ಆದ್ದರಿಂದ ಪುಣೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನರೇಂದ್ರ ಶೆಲ್ಕೆ ಕೂಡ ಚಂದ್ರಪುರ ಜಿಲ್ಲೆಯ ಸಾಲಿ ತಹಸಿಲ್‍ನಲ್ಲಿರುವ ತಮ್ಮ ಜಂಭ ಗ್ರಾಮಕ್ಕೆ ಹಿಂತಿರುಗಲು ನಿರ್ಧರಿಸಿದ್ದ. ಆದರೆ ಅಷ್ಟೊತ್ತಿಗೆ ದೇಶ ಲಾಕ್‍ಡೌನ್ ಆದ ಕಾರಣ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾನೆ.

    ಎಷ್ಟೇ ಕಾದರು ಊರಿಗೆ ಹೋಗಲು ಯಾವುದೇ ವಾಹನ ಸಿಗದ ಕಾರಣ ನಡೆದುಕೊಂಡು ಊರಿಗೆ ಹೋಗಲು ನಿರ್ಧರಮಾಡಿದ್ದಾನೆ. ಹಾಗಾಗಿ ಮಂಗಳವಾರ ನಾಗ್ಪುರ-ನಾಗ್‍ಬಿದ್ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದಾನೆ. ಲಾಕ್‍ಡೌನ್ ಆದ ಕಾರಣ ಮಧ್ಯದಲ್ಲಿ ಯಾವುದೇ ಹೋಟೆಲ್ ಅಥವಾ ಊಟ ಸಿಗದ ಕಾರಣ ಕೇವಲ ನೀರನ್ನು ಕುಡಿದುಕೊಂಡು ಎರಡು ದಿನಗಳ ಕಾಲ ನಡೆದುಕೊಂಡು ಬಂದಿದ್ದಾನೆ.

    ಈ ವೇಳೆ ಬುಧವಾರ ರಾತ್ರಿ ನಾಗ್ಪುರದಿಂದ 135 ಕಿ.ಮೀ ದೂರದಲ್ಲಿರುವ ಸಿಂಡೆವಾಹಿ ತಹಸಿಲ್ನ ಶಿವಾಜಿ ಚೌಕದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಫ್ರ್ಯೂ ವೇಳೆಯಲ್ಲಿ ಯಾಕೆ ಹೊರಗೆ ಬಂದೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗ ಶೆಲ್ಕೆ ನಡೆದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಊಟವಿಲ್ಲದೇ ಎರಡು ದಿನಗಳಿಂದ ಊರಿಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.

    ಶೆಲ್ಕೆ ಕಥೆ ಕೇಳಿ ಮರುಗಿದ ಪೊಲೀಸರು, ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಅಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ನಂತರ ಊಟವಿಲ್ಲದೇ ಬಳಲುತ್ತಿದ್ದ ಆತನಿಗೆ ಸಿಂಡೆವಾಹಿ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ತಮ್ಮ ಮನೆಯಿಂದ ಊಟ ತರಿಸಿ ತಿನ್ನಲು ನೀಡಿದ್ದಾರೆ. ಬಳಿಕ ಆತನ ಊರಿಗೆ ಹೋಗಲು ವಾಹನವನ್ನು ವ್ಯವಸ್ಥೆ ಮಾಡಿ 14 ದಿನ ಮನೆಯಲ್ಲೇ ಪ್ರತ್ಯೇಕವಾಗಿ ಇರಲು ತಿಳಿಸಿ ಕಳುಹಿಸಿಕೊಟ್ಟಿದ್ದಾರೆ.

  • ಮುಂದೊಂದು ದಿನ ರಾಜನಂತೆ ಬಾಳ್ತಾನೆ – ಬಿಎಸ್‍ವೈಗೆ ಬಾಲ್ಯದಲ್ಲೇ  ಶ್ರೀಗಳ ಆಶೀರ್ವಾದ

    ಮುಂದೊಂದು ದಿನ ರಾಜನಂತೆ ಬಾಳ್ತಾನೆ – ಬಿಎಸ್‍ವೈಗೆ ಬಾಲ್ಯದಲ್ಲೇ ಶ್ರೀಗಳ ಆಶೀರ್ವಾದ

    ಮಂಡ್ಯ: ಮುಂದೊಂದು ದಿನ ಈತ ರಾಜನಂತೆ ಬಾಳುತ್ತಾನೆ ಎಂದು ಯಡಿಯೂರಪ್ಪನವರಿಗೆ ಬಾಲ್ಯದಲ್ಲೇ ಸ್ವಾಮೀಜಿಗಳು ಆಶೀರ್ವಾದ ಸಿಕ್ಕಿತ್ತು.

    ಯಡಿಯೂರಪ್ಪ ಚಿಕ್ಕಂದಿನಲ್ಲೇ ರಾಜನ ರೀತಿ ಇದ್ದವರು. ಅವರನ್ನು ನೋಡಿ ಬೇಬಿ ಮಠದ ಸ್ವಾಮಿ ಇವನು ಮುಂದೊಂದು ದಿನ ರಾಜನಂತೆ ಬಾಳುತ್ತಾನೆ ಎಂದು ಆಶೀರ್ವಾದ ಮಾಡಿದ್ದರು ಎಂದು ಬಿಎಸ್‍ವೈ ಅತ್ತಿಗೆ ಶಾರದಮ್ಮ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.

    ಯಡಿಯೂರಪ್ಪ ಸ್ವಗ್ರಾಮ ಮಂಡ್ಯ ಜಿಲ್ಲೆ, ಕೆಆರ್ ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾರದಮ್ಮ, ಯಡಿಯೂರಪ್ಪ ಇದೇ ಮನೆಯಲ್ಲಿ ಹುಟ್ಟಿ ಬೆಳೆದಿದ್ದು. ಹಿಂದೆ ಈ ಜಾಗದಲ್ಲಿ ಹಳೇ ಮನೆಯಿತ್ತು. ಈಗ ಹೊಸ ಮನೆ ಕಟ್ಟಲಾಗಿದೆ ಎಂದು ಹೇಳಿದರು.

    ಮೈದುನ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದು ತಡವಾಗುತ್ತಿದೆಯಲ್ಲ ಎಂದು ಎರಡು ದಿನದಿಂದ ಸರಿಯಾಗಿ ಊಟ ಕೂಡ ಸೇರುತ್ತಿರಲಿಲ್ಲ. ಇದೀಗ ಅವರು ಮುಖ್ಯಮಂತ್ರಿ ಆಗುತ್ತಿರುವುದು ನಮಗೆ ಅತೀವ ಖುಷಿಯಾಗಿದೆ ಎಂದು ಬಿಎಸ್‍ವೈ ಅತ್ತಿಗೆ ಶಾರದಮ್ಮ ಸಂಭ್ರಮ ವ್ಯಕ್ತಪಡಿಸಿದರು.

  • ಮಂಡ್ಯದಲ್ಲಿರುವ ಬಿಎಸ್‍ವೈ ಸ್ವಗ್ರಾಮದಲ್ಲಿ ವಿಶೇಷ ಪೂಜೆ – ಮುಗಿಲು ಮುಟ್ಟಿದ ಸಂಭ್ರಮಾಚರಣೆ

    ಮಂಡ್ಯದಲ್ಲಿರುವ ಬಿಎಸ್‍ವೈ ಸ್ವಗ್ರಾಮದಲ್ಲಿ ವಿಶೇಷ ಪೂಜೆ – ಮುಗಿಲು ಮುಟ್ಟಿದ ಸಂಭ್ರಮಾಚರಣೆ

    ಮಂಡ್ಯ: ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಬಿಎಸ್‍ವೈ ಹುಟ್ಟೂರು ಬೂಕನಕೆರೆಯಲ್ಲಿಯೂ ಸಹ ಸಂಭ್ರಮ ಮುಗಿಲು ಮುಟ್ಟಿದೆ.

    ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಇಂದು ಸಂಜೆ ಬಿಎಸ್‍ವೈ ಪ್ರಮಾಣ ವಚನ ಸ್ವೀಕಾರದ ವೇಳೆ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಗ್ರಾಮದ ಗೋಗಾಲಮ್ಮ, ಈಶ್ವರ-ಪಾರ್ವತಿ ದೇವಾಲಯ, ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ, ಅಭಿಷೇಕ ಸೇರಿದಂತೆ ವಿಶೇಷ ಪೂಜೆಯನ್ನು ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಸಂಜೆ 5 ಗಂಟೆಯಿಂದ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಇದೇ ವೇಳೆ ಸಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ. ಬಿಎಸ್‍ವೈ ಮನೆ ದೇವರಿಗೂ ಸಹ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

    ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗವಿ ಮಠದ ಸ್ವತಂತ್ರ ಸಿದ್ದಲಿಂಗೇಶ್ವರ ಬಿ.ಎಸ್.ಯಡಿಯೂರಪ್ಪನವರ ಮನೆ ದೇವರಾಗಿದ್ದು, ಗವಿ ಮಠದ ಪೀಠಾಧ್ಯಕ್ಷ ಸ್ವತಂತ್ರ ಚೆನ್ನವೀರಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂಜೆ 5 ಗಂಟೆಯಿಂದ ವಿಶೇಷ ಪೂಜೆ ಆರಂಭವಾಗಲಿದೆ. ಯಾವುದೇ ಅಡೆ ತಡೆಗಳಿಲ್ಲದೇ ಅಧಿಕಾರ ನಿರ್ವಹಿಸುವ ಶಕ್ತಿಯನ್ನು ಬಿ.ಎಸ್.ಯಡಿಯೂರಪ್ಪನವರಿಗೆ ನೀಡಲೆಂದು ಪ್ರಾರ್ಥಿಸಿ ಗ್ರಾಮಸ್ಥರು ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

  • ಸ್ವಗ್ರಾಮದ ಪ್ರತಿ ಕುಟುಂಬಕ್ಕೂ 10 ಲಕ್ಷ ರೂ. ಘೋಷಿಸಿದ ಕೆಸಿಆರ್

    ಸ್ವಗ್ರಾಮದ ಪ್ರತಿ ಕುಟುಂಬಕ್ಕೂ 10 ಲಕ್ಷ ರೂ. ಘೋಷಿಸಿದ ಕೆಸಿಆರ್

    ಹೈದರಾಬಾದ್: ತಮ್ಮ ಸ್ವಗ್ರಾಮ ಚಿಂತಾಮಡಕ ಗ್ರಾಮದಲ್ಲಿ ನೆಲೆಸಿರುವ ಪ್ರತಿ ಕುಟುಂಬಕ್ಕೂ 10 ಲಕ್ಷ ರೂಪಾಯಿ ಹಣ ನೀಡುವುದಾಗಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ಘೋಷಿಸಿದ್ದಾರೆ.

    ಚಿಂತಾಮಡಕದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿಂತಾಮಡಕ ಗ್ರಾಮದಲ್ಲಿ ಇರುವ ಪ್ರತಿ ಕುಟುಂಬಕ್ಕೂ 10 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಹಣದಿಂದ ಕೃಷಿಗೆ ಬೇಕಾದ ಅಗತ್ಯ ಉಪಕರಣಗಳನ್ನು ಖರೀದಿಸಿ. ಉತ್ತಮ ಸೌಕರ್ಯವಿರುವ ಮನೆಗಳನ್ನು ಕಟ್ಟಿಸಿಕೊಳ್ಳಿ. ಆಧುನಿಕ ಸೋಲಾರ್ ಶಕ್ತಿಯ ಉಪಕರಣ ಬಳಸಿ, ಈ ಹಣವನ್ನು ಸದುಪಯೋಗ ಮಾಡಿಕೊಳ್ಳಿ ಎಂದಿದ್ದಾರೆ.

    ಅಷ್ಟೇ ಅಲ್ಲದೆ ಗ್ರಾಮದಲ್ಲಿ ರಸ್ತೆ, ದೇಗುಲ ಹಾಗೂ ಇತರೇ ಸೌಕರ್ಯವನ್ನು ಕಲ್ಪಿಸುವ ಉದ್ದೇಶದಿಂದ ಅಭಿವೃದ್ಧಿಗಾಗಿ ಅನುದಾನವನ್ನು ಕೂಡ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತಿದೆ.

    ಇದು ನನ್ನ ಕರ್ತವ್ಯ. ನಿಮಗೆ ಅನುಕೂಲವಾಗಬೇಕು, ಪ್ರತಿಯೊಬ್ಬ ವ್ಯಕ್ತಿ ಕೂಡ ಆರೋಗ್ಯವಾಗಿರಬೇಕು, ಸಿರಿವಂತನಾಗಬೇಕು ಎಂದು ಚಿಂತಾಮಡಕವನ್ನು ಒಂದು ಮಾದರಿ ಗ್ರಾಮವನ್ನಾಗಿಸಬೇಕೆಂಬ ಆಸೆಯನ್ನು ಕೆಸಿಆರ್ ವ್ಯಕ್ತಪಡಿಸಿದರು. ಅಲ್ಲದೆ ಚಿಂತಾಮಡಕದ ಜನರ ಆಶೀರ್ವಾದವೇ ಈ ಯಶಸ್ಸಿಗೆ ಕಾರಣ. ರಾಜಕೀಯಕ್ಕೆ ಬರಲು ತೆಲಂಗಾಣ ಚಳುವಳಿ ನಡೆಯಲು ಸಿದ್ಧಿಪೇಟೆ ಪ್ರೇರಣೆ ಎಂದು ಜನರನ್ನು ಕೆಸಿಆರ್ ಅಭಿನಂದಿಸಿದರು.

    ಸಿದ್ಧಿಪೇಟೆ ಅಭಿವೃದ್ಧಿಗೆ 25 ಕೋಟಿ, ರಂಗನಾಯಕ ಸಾಗರ ಕೆರೆ ಅಭಿವೃದ್ಧಿಗೆ 5 ಕೋಟಿ ಮತ್ತು ಸಿದ್ಧಿಪೇಟೆ ವಿಧಾನಸಭೆ ವ್ಯಾಪ್ತಿಗೆ ಬರುವ ಪ್ರತಿ ಪಂಚಾಯ್ತಿಗೂ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಜೊತೆ ಮುಸ್ತಾಬಾದ್ ಮತ್ತು ಗುಡೂರ್ ಗ್ರಾಮಕ್ಕೆ ತಲಾ 1 ಕೋಟಿ ಹಾಗೂ ಡಬ್ಬಾಕ್ ಗ್ರಾಮಕ್ಕೆ 10 ಕೋಟಿ ರೂ. ಅನುದಾನ ನೀಡುವುದಾಗಿ ಜನರಿಗೆ ಮಾತು ಕೊಟ್ಟಿದ್ದಾರೆ.

    ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನೂ ಕೂಡ ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕೆಸಿಆರ್ ಸೂಚಿಸಿದ್ದು, ಮತ್ತೆ ನವೆಂಬರ್ ನಲ್ಲಿ ಗ್ರಾಮಗಳಿಗೆ ಭೇಟಿ ನೀಡುವುದಾಗಿ ಅವರು ತಿಳಿಸಿದ್ದಾರೆ.

  • ವೀರಯೋಧನ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ

    ವೀರಯೋಧನ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ

    ಬೆಳಗಾವಿ: ಜಮ್ಮುವಿನಲ್ಲಿ ಸೋಮವಾರ ವೀರಮರಣ ಹೊಂದಿದ್ದ ಯೋಧ ಪ್ರಕಾಶ್ ಜಾಧವ್ ಅವರ ಪಾರ್ಥಿವ ಶರೀರ ಇಂದು ಅವರ ಸ್ವಗ್ರಾಮ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೂಧಿಹಾಳ ಗ್ರಾಮಕ್ಕೆ ತಲುಪಲಿದೆ.

    ಯೋಧ ಪ್ರಕಾಶ್ ಜಾಧವ್ ಜಮ್ಮುವಿನಲ್ಲಿ ಉಗ್ರರ ಜತೆ ಸೆಣಸಾಡಿ ವೀರಮರಣ ಹೊಂದಿದ್ದರು. ಇಂದು ಪ್ರಕಾಶ್ ಪಾರ್ಥಿವ ಶರೀರ ದೆಹಲಿ, ಪುಣೆ, ಬೆಳಗಾವಿ ಮಾರ್ಗವಾಗಿ ಸ್ವಗ್ರಾಮ ಬೂಧಿಹಾಳಕ್ಕೆ ಸೇನಾ ಸಿಬ್ಬಂದಿ ತರಲಿದ್ದಾರೆ. ವೀರ ಮರಣ ಹೊಂದಿರುವ ಪ್ರಕಾಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ನಡೆಯಲಿದೆ.

    ಪ್ರಕಾಶ್ ಅವರಿಗೆ ಕಳೆದ ವರ್ಷ ಮದುವೆಯಾಗಿತ್ತು. ಮೂರು ತಿಂಗಳ ಮಗು ಕೂಡ ಇತ್ತು. ಇದೀಗ ಯೋಧ ತನ್ನ ಮಡದಿ, ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ವೀರಯೋಧನ ಸಾವಿನಿಂದ ಅವರ ಸ್ವಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv