Tag: ಸ್ಲಿಪ್ಪರ್ ಟೆಸ್ಟರ್

  • ತಿಂಗಳಲ್ಲಿ 24 ಗಂಟೆ ಚಪ್ಪಲಿ ಧರಿಸಿ – 4 ಲಕ್ಷ ರೂ. ಸಂಬಳ ಪಡೆಯಿರಿ

    ತಿಂಗಳಲ್ಲಿ 24 ಗಂಟೆ ಚಪ್ಪಲಿ ಧರಿಸಿ – 4 ಲಕ್ಷ ರೂ. ಸಂಬಳ ಪಡೆಯಿರಿ

    – 2 ದಿನ 12 ಗಂಟೆ ಚಪ್ಪಲಿ ಧರಿಸಿದರೆ ಸಂಬಳ

    ಲಂಡನ್: ನೀವು ಕೆಲಸ ಹುಡುಕುತ್ತಿದ್ದೀರಾ, ಇಲ್ಲಿದೆ ಅದ್ಭುತ ಅವಕಾಶ. ಫುಟ್‍ವೇರ್ ಕಂಪನಿಯೊಂದು ಕೆಲಸದ ಜಾಹೀರಾತು ಪ್ರಕಟಿಸಿದ್ದು, ತಿಂಗಳಲ್ಲಿ 24 ಗಂಟೆಗಳ ಕಾಲ ಚಪ್ಪಲಿ ಧರಿಸಿದರೆ 4 ಲಕ್ಷ ರೂ. ಸಂಬಳ ನೀಡುವುದಾಗಿ ಘೋಷಿಸಿದೆ.

    ಬ್ರಿಟನ್‍ನ ಬೆಡ್‍ರೂಮ್ ಅಥ್ಲೆಟಿಕ್ಸ್ ಸಂಸ್ಥೆ ಈ ಭರ್ಜರಿ ಕೆಲಸ ನೀಡುತ್ತಿದ್ದು, ‘ಸ್ಲಿಪ್ಪರ್ ಟೆಸ್ಟರ್’ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಆಕರ್ಷಕ ಸಂಬಳವನ್ನು ಸಹ ಘೋಷಿಸಿದೆ. ಕಂಪನಿಯ ಇತ್ತೀಚಿನ ಹೊಸ ಚಪ್ಪಲಿ ಹಾಗೂ ಶೂಗಳ ವಿನ್ಯಾಸ ಪರೀಕ್ಷಿಸಲು ಹಾಗೂ ಪರಿಶೀಲಿಸಲು ಮುಂದಾಗಿದ್ದು, ಇದಕ್ಕಾಗಿ ಸ್ಲಿಪ್ಪರ್ ಟೆಸ್ಟರ್ಸ್ ಗಳನ್ನು ಕೆಲಸಕ್ಕೆ ಆಹ್ವಾನಿಸಿದೆ.

    ಕೊರೊನಾ ಕಾರಣದಿಂದ ಕೆಲಸ ಕಳೆದುಕೊಂಡು ಮನೆಯಲ್ಲೇ ಇರುವವರಿಗೆ ಸೂಕ್ತ ಕೆಲಸವಾಗಿದ್ದು, ಅಲ್ಲದೆ ಲಾಕ್‍ಡೌನ್ ಇರುವ ಪ್ರದೇಶದ ಜನರು ಸಹ ಟ್ರೈ ಮಾಡಬಹುದಾಗಿದೆ. ಆದರೆ ಸಂಸ್ಥೆ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷನಿಗೆ ಮಾತ್ರ ಅವಕಾಶ ನೀಡುತ್ತಿದ್ದು, ಕೆಲಸಕ್ಕೆ ಆಯ್ಕೆಯಾದವರು ಕಂಪನಿ ನೀಡುವ ಚಪ್ಪಲಿಗಳನ್ನು ತಿಂಗಳಿಗೆ ಕೇವಲ ಎರಡು ದಿನ, ಪ್ರತಿ ದಿನ 12 ಗಂಟೆಗಳ ಕಾಲ ಧರಿಸಬೇಕು. ಹೀಗೆ ಒಂದು ವರ್ಷ ಕೆಲಸ ಮಾಡಬೇಕು. ಬಳಿಕ ತಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಬೇಕು. ಸಂಸ್ಥೆ ಅವರಿಗೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂ. ಸಂಬಳ ನೀಡಲಿದೆ.

    ಇದು ಉದ್ಯೋಗ ಮಾರುಕಟ್ಟೆಯ ಸಿಂಡ್ರೆಲ್ಲಾ ಎಂದು ಬೆಡ್‍ರೂಮ್ ಅಥ್ಲೆಟಿಕ್ಸ್ ಸಂಸ್ಥೆ ಹೇಳಿದೆ. ಅಲ್ಲದೆ ಲಾಕ್‍ಡೌನ್ ವೇಳೆ ಮಾಡಬಹುದಾದ ಸೂಕ್ತ ಕೆಲಸವಾಗಿದೆ. ವಿದ್ಯಾರ್ಥಿಗಳು, ಪಾರ್ಟ್‍ಟೈಮ್ ಕೆಲಸ ಮಾಡುವವರು ಅಥವಾ ಮನೆಯಲ್ಲೇ ಇರುವ ಪೋಷಕರಿಗೆ ಸರಿಯಾಗುತ್ತದೆ ಎಂದು ಬೆಡ್‍ರೂಮ್ ಅಥ್ಲೆಟಿಕ್ಸ್ ಸಂಸ್ಥಾಪಕ ಹೊವಾರ್ಡ್ ವೆಟರ್ ಹೇಳಿದ್ದಾರೆ. ಈ ಜಾಹೀರಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಆಸಕ್ತರು ಬೆಡ್‍ರೂಮ್ ಅಥ್ಲೆಟಿಕ್ಸ್ ವೆಬ್‍ಸೈಟ್‍ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ನೀವು ಈ ಕೆಲಸಕ್ಕೆ ಯಾಕೆ ಸೂಕ್ತ ವ್ಯಕ್ತಿ ಎಂಬ ಕಾರಣವನ್ನು ನೀಡಬೇಕಿದೆ. ಬಳಿಕ ಸಂಸ್ಥೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಲಿದೆ.