Tag: ಸ್ಯಾಂಡಲ್ ವುಡಗ

  • ವಿನಯ್ ಗುರೂಜಿ ಬೆಂಬಲಿಗರ ಗೂಂಡಾಗಿರಿ- ಕಿಚ್ಚನ ಅಭಿಮಾನಿ ಮೇಲೆ ಹಲ್ಲೆ

    ವಿನಯ್ ಗುರೂಜಿ ಬೆಂಬಲಿಗರ ಗೂಂಡಾಗಿರಿ- ಕಿಚ್ಚನ ಅಭಿಮಾನಿ ಮೇಲೆ ಹಲ್ಲೆ

    ಉಡುಪಿ: ನಟ ಸುದೀಪ್ ಅಭಿಮಾನಿ ಮೇಲೆ ಯುವಕರ ಗುಂಪೊಂದು ಕಬ್ಬಿಣದ ರಾಡ್‍ನಿಂದ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

    ರತ್ನಾಕರ ಪೂಜಾರಿ ಮೇಲೆ 10 ಮಂದಿ ಹಲ್ಲೆ ಮಾಡಿದ್ದು, ಪ್ರಕರಣ ಸಂಬಂಧ ಕುಂದಾಪುರ ನಿವಾಸಿ ಗುರುರಾಜ್ ಪುತ್ರನ್(28), ಸಂತೋಷ್ (30), ಪ್ರದೀಪ್(29), ರವಿರಾಜ್ ಈ ನಾಲ್ವರನ್ನು ಬಂಧಿಸಲಾಗಿದೆ.

    ನಡೆದಿದ್ದೇನು?
    ನಟ ಸುದೀಪ್ ಬಗ್ಗೆ ಅವಧೂತ ವಿನಯ್ ಗುರೂಜಿ ಹೇಳಿದ್ದ ಮಾತು ಸುದೀಪ್ ಅಭಿಮಾನಿಗಳನ್ನು ಕೆರಳಿಸಿತ್ತು. ಅದಕ್ಕೆ ಗುರೂಜಿ ಸ್ಪಷ್ಟನೆ ಕೂಡ ಕೊಟ್ಟಿದ್ದರು. ಆದರೆ ಅಭಿಮಾನಿಗಳು ಹಾಗೂ ಗುರೂಜಿ ಬೆಂಬಲಿಗರ ಘರ್ಷಣೆ ಮಾತ್ರ ನಿಂತಿಲ್ಲ.

    ಬ್ರಹ್ಮಾವರ, ಕೋಟತಟ್ಟು ಬಾರಿಕೆರೆ ನಿವಾಸಿ ರತ್ನಾಕರ ಪೂಜಾರಿ ಅವರು ನಟ ಸುದೀಪ್ ಅಭಿಮಾನಿಯಾಗಿದ್ದಾರೆ. ಈ ಹಿಂದೆ ವಿನಯ್ ಗುರೂಜಿ ಅವರು ನಟನ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶವನ್ನು ರತ್ನಾಕರ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು.

    ಇದರಿಂದ ಕೋಪಗೊಂಡಿದ್ದ 8-10 ಮಂದಿ ಆರೋಪಿಗಳು ಕುಂದಾಪುರ ಸಂಗಮ್ ಶಾಲೆ ಬಳಿ ರತ್ನಾಕರ್ ಅವರಿಗೆ, ಗುರೂಜಿ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನ ಮಾಡುತ್ತಿಯಾ? ಎಂದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ್ದಾರೆ.

    ಪ್ರಕರಣ ಸಂಬಂಧ ತಲೆ ಮರೆಸಿಕೊಂಡ ಆರೋಪಿಗಳ ಬಂಧನಕ್ಕೆ 2 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣವನ್ನು ಜವಾಬ್ದಾರಿಯುತವಾಗಿ ಬಳಸಿ ಎಂದು ಪೊಲೀಸರು ತಾಕೀತು ಮಾಡಿದ್ದಾರೆ.