Tag: ಸ್ಯಾಂಕಿ ಕೆರೆ

  • ʻಕಾವೇರಿ ಆರತಿʼ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ – ಕಾವೇರಿ ಮಾತೆಗೆ ಡಿಸಿಎಂ ಡಿಕೆಶಿ ವಿಶೇಷ ಪೂಜೆ

    ʻಕಾವೇರಿ ಆರತಿʼ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ – ಕಾವೇರಿ ಮಾತೆಗೆ ಡಿಸಿಎಂ ಡಿಕೆಶಿ ವಿಶೇಷ ಪೂಜೆ

    – ದಸರಾ ವೇಳೆಗೆ ಕೆಆರ್‌ಎಸ್‌ನಲ್ಲೂ ಕಾವೇರಿ ಆರತಿ

    ಬೆಂಗಳೂರು: ವಿಶ್ವಜಲದಿನದ ಅಂಗವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಜಲಸಂಪನ್ಮೂಲ ಹಾಗೂ ನೀರಾವರಿ ಇಲಾಖೆಯಿಂದ ಮಲ್ಲೇಶ್ವರದ ಸ್ಯಾಂಕಿ ಕೆರೆ ಆವರಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ʻಕಾವೇರಿ ಆರತಿʼ (Cauvery Aarti) ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಚಾಲನೆ ನೀಡಿದರು.

    ವಾರಣಾಸಿಯ ಗಂಗಾ ಆರತಿ (Varanasi Ganga Aarti) ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಕಾವೇರಿ ಆರತಿ ನಡೀತು. ಮಲ್ಲೇಶ್ವರದ ಹೃದಯ ಭಾಗದಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಕಾವೇರಿ ತಾಯಿಗೆ ಗೌರವ ಸೂಚಿಸಲಾಯಿತು. ಭಾಗಮಂಡಲದಿಂದ ತಂದ ಕಾವೇರಿ ಜಲಕ್ಕೆ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಇದನ್ನೂ ಓದಿ: ನೆಲ, ಜಲಕ್ಕಾಗಿ ಮಾ.22ರಂದು ಅಖಂಡ ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ಗಮನಿಸಿ..

    ಇದೇ ವೇಳೆ, ಗಂಗಾ ದೇವಿಗೆ ಹೋಮ ಸಲ್ಲಿಸಲಾಯಿತು. ಬಳಿಕ 108 ಕಲಶಗಳೊಂದಿಗೆ ಮೆರವಣಿಗೆ ಮೂಲಕ ಸ್ಯಾಂಕಿ ಕೆರೆಗೆ ತರಲಾಯಿತು. ಕಾವೇರಿ ಮಾತೆಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ವಿಶ್ವ ಜಲದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಸ್ಯಾಂಕಿ ಕೆರೆಯ ತೇಲುವ ವೇದಿಕೆಯಲ್ಲಿ ವಾರಾಣಸಿಯ ಪ್ರಸಿದ್ಧ ತಂಡದಿಂದ ಕಾವೇರಿ ಆರತಿ ಮೂಲಕ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿತು. ಗಾಯಕಿ ಅನನ್ಯಾ ಭಟ್, ರಘು ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದರೆ, 3ಡಿ ಮ್ಯಾಪಿಂಗ್ ಮಾದರಿಯಲ್ಲಿ ವಿದ್ಯುತ್ ಅಲಂಕಾರ ಇತ್ತು.

    ಬಳಿಕ ಮಾತನಾಡಿದ ಡಿಕೆಶಿ, ಶನಿವಾರ ವಿಶ್ವ ಜಲದಿನ, ಕಾವೇರಿ ಆರತಿ ಮೂಲಕ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವಿದೆ. 25ಕ್ಕೂ ಹೆಚ್ಚು ಶಾಸಕರು ಆಗಮಿಸಿದ್ದಾರೆ. ಇವತ್ತು ತಲಕಾವೇರಿಯಿಂದ ನೀರು ತಂದಿದ್ದೇವೆ. ಇಲ್ಲಿ ಸುತ್ತಮುತ್ತ ಪೌರಾಣಿಕ ದೇವಾಲಯಗಳಿವೆ, ಶಕ್ತಿ ದೇವತೆಗಳು ಇವೆ. ನೀರಿಲ್ಲದೇ ಯಾರ ಬದುಕಿಲ್ಲ, ಹಾಗಾಗಿ ನೀರನ್ನು ಉಳಿಸಬೇಕಿದೆ. ದಸರಾ ವೇಳೆಗೆ ಕೆಆರ್‌ಎಸ್‌ ಡ್ಯಾಮ್‌ನ ಕೆಳಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡ್ತೇವೆ. ಎಷ್ಟೇ ಕಷ್ಟ ಬಂದ್ರೂ ಬೆಂಗಳೂರಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗಬಾರದು ಅಂತಾ ಸಂಕಲ್ಪ ಮಾಡತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಲ್ಲಿನ ಉತ್ಪನ್ನಗಳ ಮೇಲೆ ರಾಜಧನ ಹೆಚ್ಚಳ ಮಾಡಿದ ಸರ್ಕಾರ – ಟಿಪ್ಪರ್ ಮಾಲೀಕರ ಮುಷ್ಕರ

  • 6 ತಿಂಗಳಲ್ಲಿ ಸ್ಯಾಂಕಿ ಕೆರೆ ಸಮಗ್ರ ಅಭಿವೃದ್ಧಿ: ಸಚಿವ ಅಶ್ವತ್ಥನಾರಾಯಣ

    6 ತಿಂಗಳಲ್ಲಿ ಸ್ಯಾಂಕಿ ಕೆರೆ ಸಮಗ್ರ ಅಭಿವೃದ್ಧಿ: ಸಚಿವ ಅಶ್ವತ್ಥನಾರಾಯಣ

    ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯನ್ನು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಸಾರ್ವಜನಿಕರ ಸಲಹೆಗಳನ್ನು ಕೂಡ ಇದರಲ್ಲಿ ಪರಿಗಣಿಸಲಾಗಿದೆ. ಗರಿಷ್ಠ 6 ತಿಂಗಳಲ್ಲಿ ಕೆರೆಯ ಸೌಂದರ್ಯವೃದ್ಧಿ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನೂ ಮುಗಿಸಲಾಗುವುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಬುಧವಾರ ಬೆಳಿಗ್ಗೆ ಸ್ಯಾಂಕಿ ಕೆರೆಯಲ್ಲಿ ಪಾದಯಾತ್ರೆ ಮಾಡಿ, ಸ್ಯಾಂಕಿ ಕೆರೆ ನಡಿಗೆದಾರರ ಸಂಘದ ಸದಸ್ಯರೊಂದಿಗೆ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣೆ ಬಗ್ಗೆ ಅವರು ಮುಕ್ತ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಯನ್ನೂ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಕೆರೆಯ ಆವರಣದಲ್ಲಿ ಎರಡು ಓಪನ್ ಜಿಮ್ ಗಳಿವೆ. ಅದರಲ್ಲಿ ಒಂದು ಕೆಟ್ಟಿದೆ. ಅದನ್ನು ಸರಿಪಡಿಸಲಾಗುವುದು. ಅದರ ಜೊತೆಗೆ ಇನ್ನೂ ನಾಲ್ಕು ಓಪನ್ ಜಿಮ್ ಸ್ಥಾಪಿಸಲಾಗುವುದು. ಇದಕ್ಕೆ ನಡಿಗೆದಾರರ ಸಂಘದ ಸದಸ್ಯರೇ ಜಾಗವನ್ನು ಗುರುತಿಸಬೇಕು. ಸಂಘವು ಹೇಳಿದ ಜಾಗದಲ್ಲಿ ಈ ಜಿಮ್ ಸ್ಥಾಪಿಸಲಾಗುವುದು ಎಂದರು. ಇದನ್ನೂ ಓದಿ: ನಂಬಿಕೊಂಡವರನ್ನು ಯಡಿಯೂರಪ್ಪ ಎಂದಿಗೂ ಕೈಬಿಟ್ಟಿಲ್ಲ: ಶಾಸಕ ಎನ್.ಮಹೇಶ್

    ಕೆರೆಯ ಸೌಂದರ್ಯೀಕರಣಕ್ಕೆ ಒತ್ತು ಕೊಡಲಾಗಿದ್ದು, ನೀರು ಮಲಿನಗೊಳ್ಳದಂತೆ ಎಚ್ಚರ ವಹಿಸಲಾಗುವುದು. ಜೊತೆಗೆ, ಹೊರಭಾಗದ ಕೊಳಚೆ ನೀರು ಯಾವ ಕಾರಣಕ್ಕೂ ಕೆರೆಗೆ ಸೇರದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

    Ashwath Narayan

    ಕೊರೊನಾ ಹಾವಳಿ ಈಗ ಬಹುತೇಕ ಇಲ್ಲದಂತಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಹೀಗಾಗಿ, ಕೆರೆಗೆ ವಾಯುವಿಹಾರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಹಿಂದೆ ಹಣಕಾಸಿನ ತೊಂದರೆಯಾಗಿ ಕೆರೆಯಲ್ಲಿ ಹಂತಹಂತವಾಗಿ ಕಾಮಗಾರಿಗಳನ್ನು ನಡೆಸಿದ್ದರಿಂದ ಕೆಲವು ಅನನುಕೂಲಗಳಾಗಿದ್ದವು. ಆದರೆ ಈ ಬಾರಿ ಒಂದೇ ಸುತ್ತಿನಲ್ಲಿ ಸಮಗ್ರ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಹಿಂದೂ ಸಮಾಜದ ಬಹು ಕಾಲದ ನೋವು ಬೇಸರ ಸ್ಫೋಟಗೊಂಡಿದೆ- ಪೇಜಾವರ ಶ್ರೀ

    ಪಾದಯಾತ್ರೆಯಲ್ಲಿ ನಡಿಗೆದಾರರ ಸಂಘದ ಅಧ್ಯಕ್ಷ ರಂಗನಾಥ್, ಬಿಬಿಎಂಪಿ ಪಶ್ಚಿಮ ವಿಭಾಗದ ಆಯುಕ್ತ ದೀಪಕ್, ಜಂಟಿ ಆಯುಕ್ತ ಶ್ರೀನಿವಾಸ್, ಕೆರೆಗಳ ವಿಭಾಗದ ಪ್ರಧಾನ ಎಂಜಿನಿಯರ್ ವಿಜಯಕುಮಾರ್ ಮುಂತಾದವರಿದ್ದರು.

  • ಸ್ಯಾಂಕಿ ಕೆರೆ ಟ್ಯಾಂಕ್‍ಬಂಡ್ ರಸ್ತೆ ಅಗಲೀಕರಣಕ್ಕೆ ಅಶ್ವಥ್ ನಾರಾಯಣ್ ಹಸಿರು ನಿಶಾನೆ

    ಸ್ಯಾಂಕಿ ಕೆರೆ ಟ್ಯಾಂಕ್‍ಬಂಡ್ ರಸ್ತೆ ಅಗಲೀಕರಣಕ್ಕೆ ಅಶ್ವಥ್ ನಾರಾಯಣ್ ಹಸಿರು ನಿಶಾನೆ

    – ಕಾಮಗಾರಿ ಶೀಘ್ರ ಆರಂಭಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ

    ಬೆಂಗಳೂರು: ಮಲ್ಲೇಶ್ವರದ ಪ್ರಸಿದ್ಧ ಸ್ಯಾಂಕಿ ಕೆರೆಯ ಟ್ಯಾಂಕ್‍ಬಂಡ್ ರಸ್ತೆಯನ್ನು ಅಗಲೀಕರಣ ಮಾಡುವುದಕ್ಕೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ನಿವಾರಣೆಯಾಗಿದ್ದು, ಕೂಡಲೇ ಅಗಲೀಕರಣ ಕಾಮಾಗಾರಿ ಕೈಗೆತ್ತಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬೆಂಗಳೂರಿನಲ್ಲಿ ಶುಕ್ರವಾರ ಈ ಬಗ್ಗೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಅವರು, ದಿನೇದಿನೇ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಈ ರಸ್ತೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅಗಲೀಕರಣಕ್ಕೆ ಸಂಬಂಧಿಸಿ ಬಹಳ ದಿನಗಳಿಂದ ಜನರ ಬೇಡಿಕೆ ಇದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ನಿರ್ದೇಶನ ನೀಡಿದರು.

    ತಡೆಗೋಡೆ ಕಟ್ಟಿ, ಆನಂತರ ಆ ತಡೆಗೋಡೆ ಹಾಗೂ ರಸ್ತೆ ನಡುವೆ ಮಣ್ಣನ್ನು ತುಂಬಬೇಕಾಗಿದ್ದು, ಎರಡು ಮನೆಗಳ ಜಾಗವನ್ನು ಸ್ವಾದೀನ ಮಾಡಿಕೊಳ್ಳಬೇಕಿದೆ. ಈ ಪ್ರಕ್ರಿಯೆಯನ್ನು ಕೂಡಲೇ ಆರಂಭ ಮಾಡುವಂತೆ ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇದೇ ವೇಳೆ ಮೇಕ್ರಿ ವೃತ್ತದಿಂದ ಬಿಡಿಎ ಜಂಕ್ಷನ್‍ವರೆಗಿನ ಬಳ್ಳಾರಿ ರಸ್ತೆಯನ್ನು ಅಗಲ ಮಾಡುವ ಬಗ್ಗೆಯೂ ಡಿಸಿಎಂ ಚರ್ಚೆ ನಡೆಸಿದರು. ಸುಮಾರು 4 ಕಿ.ಮೀ ಉದ್ದದ ಈ ರಸ್ತೆಯನ್ನು ಅಗಲೀಕರಣ ಮಾಡುವುದರಿಂದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಅದರಿಂದ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ತಪ್ಪಿ ಸುಲಭ ಸಂಚಾರಕ್ಕೆ ಪೂರಕವಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.

    ನಿಯಮ ಉಲ್ಲಂಘಿಸಿದ ಐಐಎಸ್ಸಿ:
    ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವ ಸಂಗತಿಯನ್ನು ಪಾಲಿಕೆ ಅಧಿಕಾರಿಗಳು ಡಿಸಿಎಂ ಗಮನಕ್ಕೆ ತಂದರು.

    ಸಿಡಿಪಿ ಪ್ಲ್ಯಾನ್‍ಗೆ ಪಾಲಿಕೆಯಿಂದ ಒಪ್ಪಿಗೆ ಪಡೆಯದೇ ಸಂಸ್ಥೆಯು ಕಟ್ಟಡವನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಪಾಲಿಕೆ ನೋಟೀಸ್ ನೀಡಿದೆ, ಆದರೂ ಕಾಮಗಾರಿ ಮುಂದುವರಿದಿದೆ. ಮತ್ತೊಮ್ಮೆ ಸ್ವತಃ ತಾವೇ ನೊಟೀಸ್ ಕೊಡುವುದಾಗಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಉಪ ಮುಖ್ಯಮಂತ್ರಿಗಳಿಗೆ ತಿಳಿಸಿದರು.

    ಐದು ಲಕ್ಷ ಬೀದಿ ದೀಪ:
    ಇಡೀ ಬೆಂಗಳೂರು ನಗರದಲ್ಲಿ ಐದು ಲಕ್ಷ ಎಲ್‍ಇಡಿ ಬೀದಿ ದೀಪಗಳನ್ನು ಪಾಲಿಕೆ ವತಿಯಿಂದ ಅಳವಡಿಸಲಾಗುತ್ತಿದ್ದು, ಮುಂಬರುವ ಆರು ತಿಂಗಳಲ್ಲಿ ಒಂದು ಲಕ್ಷ ದೀಪಗಳನ್ನು ಅಳವಡಿಸಲಾಗುವುದು. ಇದು ಸಂಪೂರ್ಣವಾಗಿ ಸೆಂಟ್ರಲೈಸ್ಡ್ ವ್ಯವಸ್ಥೆ ಹೊಂದಿರುತ್ತದೆ. ಏಕಕಾಲದಲ್ಲಿ ಆಫ್ ಅಂಡ್ ಆನ್ ಮಾಡಬಹುದು. ಮಲ್ಲೇಶ್ವರದಲ್ಲೂ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಆ ಬಗ್ಗೆಯೂ ಡಿಸಿಎಂ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

    ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಡಿಸಿಎಂ ಸೂಚಿಸಿದರು. ಬೆಂಗಳೂರು ಜಲಮಂಡಳಿ ಅಧ್ಯಕ್ಷ ಜಯರಾಂ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.