Tag: ಸ್ಮೃತಿ ಮಂಧಾನ. ಶಾರ್ಜಾ

  • ಕೊನೆಯ ಬಾಲ್‍ನಲ್ಲಿ ರೋಚಕವಾಗಿ ಗೆದ್ದ ಕೌರ್ ಪಡೆ

    ಕೊನೆಯ ಬಾಲ್‍ನಲ್ಲಿ ರೋಚಕವಾಗಿ ಗೆದ್ದ ಕೌರ್ ಪಡೆ

    – ಗೆಲುವಿನ ಸನಿಹದಲ್ಲಿ ಮುಗ್ಗರಿಸಿದ ಸ್ಮೃತಿ ಮಂಧಾನ ತಂಡ

    ಶಾರ್ಜಾ: ಇಂದು ನಡೆದ ಮಹಿಳಾ ಐಪಿಎಲ್-2020ಯ ಮೂರನೇ ಪಂದ್ಯದಲ್ಲಿ ಹರ್ಮನ್‍ಪ್ರೀತ್ ಕೌರ್ ನೇತೃತ್ವದ ಸೂಪರ್ನೋವಾಸ್ ತಂಡ ಎರಡು ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ. ಗೆಲುವಿನ ಸನಿಹದಲ್ಲಿದ್ದ ಸ್ಮೃತಿ ಮಂಧಾನ ನೇತೃತ್ವದ ತಂಡ ಸೋತಿದೆ.

    ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೂಪರ್ನೋವಾಸ್ ತಂಡ ಆರಂಭಿಕ ಆಟಗಾರ್ತಿ ಚಮರಿ ಅಟಪಟ್ಟು ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ 146 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಟ್ರೈಲ್‍ಬ್ಲೇಜರ್ಸ್ ತಂಡ ತೀವ್ರ ಪೈಪೋಟಿ ನೀಡಿದರೂ ಕೊನೆ ಓವರಿನಲ್ಲಿ ಬೇಕಾದ 10 ರನ್ ಹೊಡೆಯಲಾಗದೇ ಕೇವಲ ಎರಡು ರನ್‍ಗಳಿಂದ ಸೋತಿತು.

    ಸೂಪರ್ನೋವಾಸ್ ನೀಡಿದ 147ರನ್‍ಗಳನ್ನು ಬೆನ್ನಟ್ಟಿದ ಟ್ರೈಲ್‍ಬ್ಲೇಜರ್ಸ್ ತಂಡಕ್ಕೆ ಆರಂಭಿಕ ಆಟಗಾರ್ತಿಯರಾದ ದಿಯಾಂಡ್ರಾ ಡೊಟಿನ್ ಮತ್ತು ಸ್ಮೃತಿ ಮಂಧಾನ ಆರಂಭ ನೀಡಿದರು. ಈ ಮೂಲಕ ಟ್ರೈಲ್‍ಬ್ಲೇಜರ್ಸ್ ಪವರ್ ಪ್ಲೇ ಮುಕ್ತಾಯದ ವೇಳೆಗೆ ಒಂದು ವಿಕೆಟ್ ಕಳೆದುಕೊಳ್ಳದೇ 43 ರನ್ ಪೇರಿಸಿತು. ಆದರೆ ಆರನೇ ಓವರ್ ಮೂರನೇ ಬಾಲಿನಲ್ಲಿ 15 ಬಾಲಿಗೆ 27 ರನ್ ಸಿಡಿಸಿ ಸ್ಫೋಟಕವಾಗಿ ಆಡುತ್ತಿದ್ದ ದಿಯಾಂಡ್ರಾ ಡೊಟಿನ್ ಅವರು ಶಕೇರಾ ಸೆಲ್ಮನ್ ಅವರಿಗೆ ಔಟ್ ಆದರು.

    ನಂತರ ಬಂದ ರಿಚಾ ಘೋಷ್ ಒಂದು ಬೌಂಡರಿ ಬಾರಿಸಿ ಅಬ್ಬರಿಸುವ ಸೂಚನೆ ನೀಡಿದರು. ಆದರೆ ನಂತರದ ಬಾಲಿನಲ್ಲೇ ಶಕೇರಾ ಸೆಲ್ಮನ್‍ಗೆ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ನಂತರ ಜೊತೆಯಾದ ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ 34 ಬಾಲಿಗೆ 35 ರನ್‍ಗಳ ಜೊತೆಯಾಟವಾಡಿದರು. ಆದರೆ 12ನೇ ಓವರ್ ಮೂರನೇ ಬಾಲಿನಲ್ಲಿ 40 ಬಾಲಿಗೆ 33 ರನ್ ಸಿಡಿಸಿದ್ದ ನಾಯಕಿ ಸ್ಮೃತಿ ಮಂಧಾನ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.

    4 ರನ್ ಗಳಸಿ ದಯಾಲನ್ ಹೇಮಲತಾ ಅವರು ಕೀಪರ್ ಕ್ಯಾಚ್ ಕೊಟ್ಟು ಔಟ್ ಆದರು. ಇದಾದ ನಂತರ ಒಂದಾದ ದೀಪ್ತಿ ಶರ್ಮಾ ಮತ್ತು ಹರ್ಲೀನ್ ಡಿಯೋಲ್ ಸ್ಫೋಟಕ ಬ್ಯಾಟಿಂಗ್ ಮುಂದಾದರು. ಜೊತೆಗೆ 19ನೇ ಓವರಿನಲ್ಲಿ 14 ರನ್ ಸಿಡಿಸಿ ಟ್ರೈಲ್‍ಬ್ಲೇಜರ್ಸ್ ತಂಡಕ್ಕೆ ಗೆಲುವಿನ ಆಸೆ ತಂದಿತ್ತರು. ಆದರೆ 2 ಬಾಲಿಗೆ ನಾಲ್ಕು ರನ್ ಬೇಕಿದ್ದಾಗ 27 ರನ್ ಗಳಿಸಿದ್ದ ಡಿಯೋಲ್ ಅವರು ಔಟ್ ಆದರು. ಈ ಮೂಲಕ ಗೆಲುವಿನ ಸನಿಹಕ್ಕೆ ಬಂದು ಟ್ರೈಲ್‍ಬ್ಲೇಜರ್ಸ್ ತಂಡ ಎರಡು ರನ್‍ಗಳ ಅಂತರದಲ್ಲಿ ಸೋತಿತು.