Tag: ಸ್ಮೃತಿ ಇರಾನಿ ಆಪ್ತ

  • ಸ್ಮೃತಿ ಇರಾನಿ ಆಪ್ತನ ಕೊಲೆ ಪ್ರಕರಣ- ಮೂವರ ಬಂಧನ, ಇಬ್ಬರು ನಾಪತ್ತೆ

    ಸ್ಮೃತಿ ಇರಾನಿ ಆಪ್ತನ ಕೊಲೆ ಪ್ರಕರಣ- ಮೂವರ ಬಂಧನ, ಇಬ್ಬರು ನಾಪತ್ತೆ

    ಲಕ್ನೋ: ಅಮೇಠಿಯ ನೂತನ ಸಂಸದೆ ಸ್ಮೃತಿ ಇರಾನಿ ಅವರ ಆಪ್ತ ಸುರೇಂದ್ರ ಸಿಂಗ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದು, ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    ರಾಜಕೀಯ ದ್ವೇಷದ ಹಿನ್ನೆಲೆ ಐವರು ದುಷ್ಕರ್ಮಿಗಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಸುರೇಂದ್ರ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈಗಾಗಲೇ ಘಟನೆಯಲ್ಲಿ ಶಾಮಿಲಾಗಿದ್ದ 3 ಮಂದಿಯನ್ನು ಬಂಧಿಸಲಾಗಿದೆ. ಉಳಿದ 2 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನೂ ಕೂಡ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ರಾತ್ರಿ ಸುರೇಂದ್ರ ಸಿಂಗ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಆದರೆ ಭಾನುವಾರದಂದು ಈ ಘಟನೆ ಸಂಬಂಧ ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಹತ್ಯೆ ಮಾಡಲು ಕಾರಣ ಏನು ಎನ್ನುವುದು ತಿಳಿದು ಬಂದಿರಲಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದರು.

    ಅಮೇಠಿಯಲ್ಲಿ ಪ್ರಚಾರ ಹಾಗೂ ಚುನಾವಣೆ ವೇಳೆ ತಮ್ಮೊಂದಿಗೆ ಇದ್ದು ಉತ್ತಮವಾಗಿ ಸಹಕರಿಸಿದ್ದ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಸ್ಮೃತಿ ಇರಾನಿ ಹೆಗಲು ಕೊಟ್ಟಿದ್ದರು. ಅಂತ್ಯಸಂಸ್ಕಾರದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಬೇಕಾದರೆ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸುಪ್ರೀಂ ಕೋರ್ಟ್‍ಗೆ ಹೋಗಲು ನಾನು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.